ಎಣ್ಣೆಗೆಂಪಿನ ಅಪ್ಪಟ ಚೆಲುವೆ, ಕಲಾವಲ್ಲಭೆ ಶ್ವೇತಾರ ಸಿನಿಮಾರಂಗದ ಸಾಧನೆಯ ರೋಚಕ ಹೆಜ್ಜೆಗಳ ಕುರಿತು ವಿವರವಾಗಿ ತಿಳಿಯೋಣವೇ.....?
ಕಲೆ ಯಾರ ಸ್ವತ್ತಲ್ಲ. ಬೆಲೆ ಕೊಟ್ಟು ಕಲೆ ಕೊಳ್ಳಲು ಸಾಧ್ಯವೇ ಇಲ್ಲ. ಕಲೆ ಒಲಿಯಬೇಕಾದರೆ ಶ್ರದ್ಧೆ ಬೇಕು, ಭಕ್ತಿ ಇರಬೇಕು. ವಿದ್ಯಾದೇವತೆ ಒಲಿಯದ ಅದೆಷ್ಟೋ ಮಂದಿಗೆ ಕಲಾ ದೇವತೆ ಒಲಿಯುತ್ತಾಳೆ. ಕಲಾ ದೇವತೆ ಒಲಿಯದ ಹಲವರಿಗೆ ವಿದ್ಯಾ ದೇವತೆ ಅನುಗ್ರಹ ಆಗ್ತಾಳೆ. ಕಲೆಗಾಗಿ ಜೀವನವನ್ನೇ ಮೀಸಲಿಡುವ ಕಲಾವಿದರನ್ನು ಕಲಾದೇವತೆಯ ಮಕ್ಕಳೆಂದು ಕರೆಯಲಾಗುತ್ತದೆ. ಇಂತಹ ಅತ್ಯಂತ ಶ್ರೇಷ್ಠ ಕಲಾಯಾಗಿರು ಬಣ್ಣದ ಬದುಕಲ್ಲೇ ನವೋಲ್ಲಾಸ ಕಾಣುತ್ತಿರುವ ಕಲಾವಿದೆ ಶ್ವೇತಾ ಶ್ರೀನಿವಾಸ್.
ದುಡ್ಡು ಮಾಡ್ತೀನಿ ಅಂತ ಹೊರಟರೆ ಕೇವಲ ದುಡ್ಡು ಮಾಡ್ತಾರೆ, ಹೆಸರು ಮಾಡ್ತೀನಿ ಅಂತ ಹೊರಟರೆ ಕೇವಲ ಹೆಸರು ಮಾಡ್ತಾರೆ. ಆದರೆ ಮನಸ್ಸು ಕೊಟ್ಟು, ಕೆಲಸ ಮಾಡ್ತೀನಿ ಅಂತ ಹೊರಟರೆ ಆಗ ದುಡ್ಡು, ಹೆಸರು ಎಲ್ಲವೂ ಹುಡುಕಿಕೊಂಡು ಬರುತ್ತದೆ. ಹಾಗೆಯೇ ರಂಗಭೂಮಿ ಕಲಾವಿದೆ ಮತ್ತು ನಟಿಯೂ ಆಗಿರುವ ಶ್ವೇತಾ ಶ್ರೀನಿವಾಸ್ ಯಾವತ್ತೂ ಕೂಡ ದುಡ್ಡಿನ ಹಿಂದೆ ಬಿದ್ದವರಲ್ಲ, ಹೆಸರಿನ ಬೆನ್ನಟ್ಟಿದವರಲ್ಲ. ಇವರಿಗೆ ಗೊತ್ತಿರುವುದು ಒಂದೇ, ಕಲಾ ಕೃಷಿ! ಈ ಎಣ್ಣೆಗೆಂಪಿನ ಅಪ್ಪಟ ಚೆಲುವೆ ಎಲ್ಲಾ ಪಾತ್ರಕ್ಕೂ ಸೈ.
ಮೂಲತಃ ಬೆಂಗಳೂರಿನವರೇ ಆಗಿರುವ ಶ್ವೇತಾಗೆ ನಟನೆಯೇ ಉಸಿರು. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಸಕ್ರಿಯರಾಗಿ ರಾಜ್ಯವಷ್ಟೇ ಅಲ್ಲ, ರಾಷ್ಟ್ರಮಟ್ಟದ ಒಬ್ಬ ಶ್ರೇಷ್ಠ ಕಲಾವಿದೆಯಾಗಿ ಬೆಳೆದಿದ್ದಾರೆ. ನೀನಾಸಂನಲ್ಲಿ ಪದವಿ ಪಡೆದ ಬಳಿಕ ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ. ಈವರೆಗೆ 60ಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರತಿ ನಾಟಕದಲ್ಲೂ ಆ ಪಾತ್ರಕ್ಕೆ ಪರಕಾಯ ಪ್ರವ್ಶ ಮಾಡಿರುತ್ತಾರೆ. ಇವರ ನಟನೆಗೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ಹೀಗಿ ಕಲಾಸಕ್ತರು ಮೆಚ್ಚಿಕೊಂಡಿರು ಶ್ವೇತಾ ನೀವಂದುಕೊಂಡಂತೆ ದಿಢೀರ್ ಎಂದು ಬೆಳೆದವರಲ್ಲ, ಇವರ ಸಾಧನೆಯ ಹಿಂದೆ ಶ್ರಮವಿದೆ, ಬೆವರೂ ಇದೆ.

ಬಾಲ್ಯದಲ್ಲೇ ನಟನೆಯ ಬೆಸುಗೆ
ಶ್ವೇತಾ ಆಗಿನ್ನೂ 7ನೇ ತರಗತಿ ವಿದ್ಯಾರ್ಥಿನಿ. ತನ್ನದೇ ಶಾಲೆಯಲ್ಲಿ ಓದುತ್ತಿದ್ದ ತಂಗಿ ಮಾಡುತ್ತಿದ್ದ ನಾಟಕವೊಂದನ್ನು ನೋಡಿ ವಾಪಸ್ಸಾಗುತ್ತಿದ್ದರು. ಆಗ ಅಲ್ಲೇ ಎದುರಾದ ರಂಗಕಹಳೆಯ ಸಿ. ಲಕ್ಷ್ಮಣ್, `ನಿನಗೂ ನಟನೆ ಮಾಡಬೇಕೆಂಬ ಇಷ್ಟ ಇದೆಯಾ....? ಚಪ್ಪಾಳೆ ಗಿಟ್ಟಿಸುವ ಆಸೆ ಇದೆಯಾ....' ಎಂದು ಕೇಳಿ, ನಾಳೆಯಿಂದ ಆರ್.ವಿ. ಕಾಲೇಜಿನಲ್ಲಿ ತರಬೇತಿಗೆ ಬರುವಂತೆ ಹೇಳಿದ್ದರು.
ನಟನೆ ಇಷ್ಟವಿಲ್ಲದಿದ್ದರೂ ಕುತೂಹಲಕ್ಕಾಗಿ ಮಾರನೇ ದಿನವೇ ತರಬೇತಿ ಶಿಬಿರಕ್ಕೆ ಹೊರಟರು. ಹೀಗೆ ಲಕ್ಷ್ಮಣ್ ರ ನಟನಾ ಗರಡಿಯಲ್ಲಿ 5 ವರ್ಷ ಪಳಗಿದ ಶ್ವೇತಾ, ಕಾಲೇಜು ಸೇರಿದ ಬಳಿಕ ಸಿಜಿಕೆರವರ ಥಿಯೇಟರ್ ವರ್ಕ್ ಶಾಪ್ ಸೇರಿಕೊಂಡರು. ತಿಂಗಳ ಬಳಿಕ ಹಂಪಿ ನಾಟಕೋತ್ಸವ ಸೇರಿದಂತೆ ಹಲವು ಕಡೆ ಸಿಟಿಕೆರವರ ನಾಟಕಗಳನ್ನು ಪ್ರದರ್ಶಿಸಿದರು.
ನಂತರ ಧರ್ಮೇಂದ್ರ ಅರಸು ಮತ್ತು ಇಕ್ಬಾಲ್ ಅಹಮದ್ ಸಲಹೆ ಮೇರೆಗೆ ನೀನಾಸಂಗೆ ಹೋದರೂ, ನಟಿ ಆಗುತ್ತೇನೆಂಬ ಭರವಸೆ ಖುದ್ದು ಶ್ವೇತಾಗೇ ಇರಲಿಲ್ಲ. ಏಕೆಂದರೆ ನೀನಾಸಂ ಹಿನ್ನೆಲೆ ಶ್ವೇತಾಗೆ ತಿಳಿದಿರಲಿಲ್ಲ. ಹೀಗಿರುವಾಗ ಒಂದು ವರ್ಷ ಸ್ಕೂಲಿಂಗ್, ಮತ್ತೊಂದು ವರ್ಷ ತಿರುಗಾಟ ಮಾಡಿದ ಮೇಲೆ ಥಿಯೇಟರ್ ಅಂದ್ರೆ ನಿಜವಾಗ್ಲೂ ಏನು ಅನ್ನೋದು ಅರಿವಿಗೆ ಬಂತು.





