ಸಂಸ್ಕೃತದ ಶ್ಲೋಕವೊಂದರಲ್ಲಿ ವೈದ್ಯೋ ನಾರಾಯಣೋ ಹರಿಃ ಎನ್ನುವ ಸಾಲು ಬರುತ್ತದೆ. ಅದಕ್ಕೆ ಹಲವರು ರೋಗದಿಂದ ಬಳಲುತ್ತಿದ್ದವರನ್ನು ವೈದ್ಯರುಗಳು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿ ರಕ್ಷಿಸುವ ಕಾರಣ ಅವರನ್ನು ಸಾಕ್ಷಾತ್ ನಾರಾಯಣನ ಅಪರಾವತಾರ ಎಂದು ಅರ್ಧೈಸುತ್ತಾರೆ. ಆದರೆ ವಾಸ್ತವವಾಗಿ ಇಂದಿನ ಕಾಲದಲ್ಲಿ ಅಂತಹ ವೈದ್ಯರು ಸಿಗುವುದು ಬಹಳ ಕಷ್ಟ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ಅದರಲ್ಲೂ ಸರ್ಕಾರೀ ವೈದ್ಯರೆಂದರೆ, ಅವರ ಮೇಲೆ ಜನರ ನಂಬಿಕೆಗಳು ಅಷ್ಟಕ್ಕಷ್ಟೇ.

ಆದರೆ ಅಪರೂಪಕ್ಕೆ ಜನ ಸೇವೆಯೇ ಜನಾರ್ಧನ ಸೇವೆ ಎಂದು ರೋಗಿಗಳ ಸೇವೆಗಾಗಿಯೇ ತಮ್ಮ ಸಂಪೂರ್ಣವಾಗಿ ಮುಡಿಪಾಗಿಟ್ಟು ಸರ್ಕಾರಿ ಸೇವೆಯಿಂದ ನಿವೃತ್ತರಾದರೂ, ಸಮಾಜಸೇವೆಯಲ್ಲೇ ನಿರತರಾಗಿರುವ ಅಪರೂಪ ಮತ್ತು ಅನುರೂಪದ ವೈದ್ಯಲೋಕದ ದೈತ್ಯ ಮತ್ತು ಮಾನವೀಯ ಪ್ರತಿಮೆಯಾಗಿರುವ ಹಿರಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರ ಸಂಪೂರ್ಣ ಮಾಹಿತಿಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ವಿಜಯಲಕ್ಷ್ಮೀ ಅವರು ಮೂಲತಃ ಗುಲ್ಬರ್ಗಾದ ಕೊಳೆಗೇರಿಯಲ್ಲಿ ಹಳೆಯ ಚಪ್ಪಲಿಯನ್ನು ಹೊಲಿಯುವ ಕಾರ್ಯವನ್ನು ಮಾಡುತ್ತಿದ್ದ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದ ಶ್ರೀ ಬಾಬುರಾವ್ ದೇಶಮಾನೆ ಮತ್ತು ಯಜಮಾನರ ಆದಾಯದಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿರಲಿಲ್ಲವಾದ ಕಾರಣ, ರಸ್ತೆ ಬದಿಯಲ್ಲಿ ಬಿಸಿಲು ಮಳೆ ಎಂಬುದನ್ನು ಲೆಖ್ಕಿಸದೇ ತರಕಾರಿಯನ್ನು ಮಾರುತ್ತಿದ್ದ ಶ್ರೀಮತಿ ರತ್ನಮ್ಮ ಅವರ ಎಂಟು ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ, ಔಪಚಾರಿಕವಾಗಿ ಯಾವುದೇ ಶಿಕ್ಷಣವನ್ನು ಪಡೆಯದಿದ್ದರೂ, ಬಾಬೂರಾವ್ ಅವರು ತಮ್ಮ ಜಾತಿ ಮತ್ತು ವೃತ್ತಿಪರತೆಯ ತಡೆಗೋಡೆಗಳನ್ನು ಮುರಿದು ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬದುಕಬೇಕೆಂಬ ಆಸೆಯಿಂದಾಗಿ, ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಬೇಕು ಎನ್ನುವುದು ಸ್ವಾತ್ರಂತ್ರ್ಯ ಹೋರಾಟಗಾರರಾಗಿದ್ದ ಬಾಬೂರಾವ್ ಅವರ ಆಸೆಯಾಗಿತ್ತು. ಅದರಲ್ಲೂ ತಮ್ಮ ಹಿರಿಯ ಮಗಳನ್ನು ನಾನು ಸರ್ಜನ್ ಮಾಡಿಸಬೇಕೆಂಬ ಆಸೆ ಹಾಗಾಗಿ ಅಂದಿನ ಕಾಲದಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಬೂರಾವ್ ತಮ್ಮ ಏಳು ಹೆಣ್ಣ ಮಕ್ಕಳು ಮತ್ತು ಒಬ್ಬನೇ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿ ಓದಲು ಅನುವು ಮಾಡಿಕೊಟ್ಟರು.ವಿಜಯಲಕ್ಷ್ಮಿ ಅವರು ತಮ್ಮ ಶಾಲೆ ಮುಗಿಸಿದ ಕೂಡಲೇ, ನೇರವಾಗಿ ತಮ್ಮ ತಾಯಿಯವರ ಅಂಗಡಿಗೆ ಹೋಗಿ ಅಲ್ಲಿ ಅಮ್ಮನ ಕೊತೆ ತರಕಾರಿ ಮಾರಲು ಸಹಾಯ ಮಾಡುತ್ತಿದ್ದದ್ದಲ್ಲದೇ, ಅಲ್ಲೇ ಬಿಡುವು ಮಾಡಿಕೊಂಡು ಅಂಗಡಿಯಲ್ಲೇ ಓದುತ್ತಿದ್ದರು. ಅವರಮ್ಮಾ ತುಂಬಾ ಧೈರ್ಯವಂತೆ ಮತ್ತು ಗಟ್ಟಿಗಿತ್ತಿಯೂ ಕೂಡ ಆಗಿದ್ದ ಕಾರಣ, ಆಕೆ ದುಡಿದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮೀಸಲಿಟ್ಟಿದ್ದರು.

ಮಕ್ಕಳೂ ಸಹಾ ತಮ್ಮ ತಂದೆತಾಯಿಯರ ಆಸೆಗೆ ತಣ್ಣೀರು ಎರಚದೇ, ತಮಗೆ ಸಿಗುತ್ತಿದ್ದ ಸಕಲ ಸರ್ಕಾರೀ ಅನುಕೂಲಗಳನ್ನು ಸೂಕ್ತವಾಗಿ ಬಳಸಿಕೊಂಡು ಕಷ್ಟಪಟ್ಟು ಓದ ತೊಡತಿದರು. ಅದರಲ್ಲೂ ವಿಜಯಲಕ್ಷ್ಮಿ ಅವರು ಎಂಬಿಬಿಎಸ್ಗೆ ಪ್ರವೇಶ ಪಡೆಯುವ ವೇಳೆಯಲ್ಲಿ ಗುಲ್ಬರ್ಗದಲ್ಲಿ ತೀವ್ರವಾದ ಬರಗಾಲವಿದ್ದ ಕಾರಣ, ಆಕೆಯ ಕಾಲೇಜು ಪ್ರವೇಶಕ್ಕೆ ಹಣ ಹೊಂಚಲು ಆಗದೇ ಹೋದ ಸಂಧರ್ಭದಲ್ಲಿ, ಆಕೆಯ ತಾಯಿಯವರು ತಮ್ಮ ಮಂಗಳಸೂತ್ರವನ್ನೇ ಮಾರಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದರು. ಅಷ್ಟೆಲ್ಲಾ ಕಷ್ಟ ಪಟ್ಟು ಹಣವನ್ನು ಹೊಂಚಿಕೊಂಡು ಎಂಬಿಬಿಎಸ್ ಸಂದರ್ಶನಕ್ಕಾಗಿ ಬೆಂಗಳೂರಿಗೆ ತಂದೆ ಮಗಳು ಬಂದಿದ್ದಂತಹ ಅ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಸಂದರ್ಶನವನ್ನು ಮುಂದೂಡಿದಾಗ, ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಹೋದಾಗ, ಅವರ ತಂದೆ ಅಲ್ಲಿಯೇ ಹೊಸಾ ಕಟ್ಟದ ನಿರ್ಮಾಣ ಮಾಡುತ್ತಿದ್ದ ಕೂಲೀ ಕಾರ್ಮಿಕರ ಬಳಿ ತಮ್ಮ ಆಳಲನ್ನು ತೋಡಿಕೊಂಡು ಅವವರ ಪುಟ್ಟ ಮನೆಯಲ್ಲೇ ವಿಜಯಲಕ್ಷ್ಮಿಯವರನ್ನು ಮಲಗಿಸಿ ಅವರ ತಂದೆಯವರು ಚಳಿ ಮಳೆ ಮತ್ತು ಗಾಳಿಯನ್ನೂ ಲೆಖ್ಖಿಸದೇ, ಇಡೀ ರಾತ್ರಿ ನಿದ್ರಿಸದೇ ಮನೆಯ ಹೊರಗೇ ಕಾದಿದ್ದದ್ದು ವಿಜಯಲಕ್ಷ್ಮಿ ಆವರ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವಂತೆ.





