ಮಹಿಳಾ ಡ್ರೈವರ್ ಗಳೆಂದರೆ ಈ ಪುರುಷಪ್ರಧಾನ ಸಮಾಜ ಸದಾ ಮೂಗು ಸಿಂಡರಿಸುತ್ತದೆ. ಆದರೆ ಈಗ ಕಾಲ ಎಷ್ಟೋ ಬದಲಾಗಿದೆ, ಇಂಥ ಮೂಢನಂಬಿಕೆಗಳಿಂದ ಜನ ಹೊರಬಂದು ಮಹಿಳಾ ಪ್ರಗತಿ ಬಗ್ಗೆ ಗಮನಿಸಬೇಕಿದೆ.....
ಆಫೀಸ್ ನಲ್ಲಿ ಕುಳಿತಿದ್ದ ನಾಲ್ವರು ಗಂಡಸರು, ಹೆಂಗಸರು ಗಾಡಿ ಓಡಿಸುವುದರ ಕುರಿತು ಕೆಟ್ಟದಾಗಿ ಟೀಕೆ ಮಾಡುತ್ತಾ ಆಡಿಕೊಳ್ಳುತ್ತಿದ್ದರು. ಸುಂದರ್ ಹೇಳುತ್ತಿದ್ದ, ``ಈ ಹೆಂಗಸರು ಎಷ್ಟೋ ಸಲ ಇಂಡಿಕೇಟರ್ ಹಾಕದೆಯೇ ದಾರಿ ಮಧ್ಯೆ ಲೇನ್‌ಬದಲಾಯಿಸಿ ಬಿಡ್ತಾರೆ!''
ಇದಕ್ಕೆ ಉತ್ತರವಾಗಿ ಉಮೇಶ್, ``ನಿಜ ನಿಜ..... ಆದರೆ ಈ ಹೆಂಗಸರು ತಮಗೆ ಸರಿಯಾಗಿ ಗಾಡಿ ಓಡಿಸಲು ಬರೋದಿಲ್ಲ ಅಂತ ಒಪ್ಪಿಕೊಂಡರೆ ತಾನೇ? ಪಾರ್ಕಿಂಗ್ ಕುರಿತಾಗಿ ಸ್ವಲ್ಪ ಸೆನ್ಸ್ ಇರೋಲ್ಲ ಇವರಿಗೆ. ಗಾಡಿಯನ್ನು ಎಲ್ಲಿ ಅಂದ್ರೆ ಅಲ್ಲಿ ಹೇಗೋ ಪಾರ್ಕ್‌ಮಾಡಿಬಿಟ್ಟರೆ ಆಯ್ತು.''
ಇದಕ್ಕೆ ಸತೀಶ್ ವ್ಯಂಗ್ಯವಾಗಿ ಇವರಿಗೆ ಜೊತೆ ನೀಡುತ್ತಾ, ``ನಾನು ಡ್ರೈವ್ ಮಾಡುತ್ತಾ ಸಡನ್ನಾಗಿ ಬ್ರೇಕ್ ಹಾಕಿದಾಗೆಲ್ಲ.... ಗ್ಯಾರಂಟಿ ನನ್ನ ಮುಂದೆ ಒಬ್ಬ ಹೆಂಗಸು ಗಾಡಿ ಓಡಿಸುತ್ತಿರುತ್ತಾಳೆ, ಇದು ಅವಳದೇ ತಪ್ಪು ಎನ್ನಬಹುದು.''
ಆಗ ಮಹೇಶ್ ಸುಮ್ಮನಿರದೆ, ``ಆದ್ದರಿಂದಲೇ ನಾನು ಈ ಹೆಂಗಸರು ಗಾಡಿ ಓಡಿಸುವುದನ್ನು ನೋಡಿ ಬಲು ಅಲರ್ಟ್‌ಆಗ್ತೀನಪ್ಪ.... ಅವರದೇನು ಗ್ಯಾರಂಟಿ ಹೇಳು.... ಎಲ್ಲಿಂದಲೋ ಬಂದು ಗುದ್ದಿದರೆ ಸಾಯೋರು ನಾವು ತಾನೇ?'' ಇದಕ್ಕೆ ಎಲ್ಲರೂ ಸೂರು ಹಾರುವಂತೆ ನಗತೊಡಗಿದರು.
ಸರಿತಾ ಹೇಳುತ್ತಾಳೆ, ತಲೆಗೆ ಹೆಲ್ಮೆಟ್, ಕೈಗೆ ಗ್ಲವ್ಸ್ ಧರಿಸಿ ತಾನು ಬುಲೆಟ್ ಸ್ಟಾರ್ಟ್ ಮಾಡುವುದನ್ನು ನೋಡಿದರೆ, ಜನ ಬೇಕೆಂದೇ ಮುಖ ಕಿವುಚುತ್ತಾರೆ. ಪ್ರತಿದಿನ ಈಕೆ ಗಾಡಿ ಓಡಿಸುವಾಗ ಜನ ಬೇಕೆಂದೇ ಹುಬ್ಬೇರಿಸುತ್ತಾರೆ. ಒಂದು ದಿನ ಇವಳು ತನ್ನ ಗೆಳತಿ ನಿತಾ ಜೊತೆ ಗಾಡಿಯಲ್ಲಿ ಹೊರಟಿದ್ದಾಗ, ಎದುರಿಗೆ ಟ್ರಾಫಿಕ್ ಸಿಗ್ನಲ್ ಕಂಡು ನಿಲ್ಲಿಸಿದಳಂತೆ. ಆಗ ಪಕ್ಕದಲ್ಲಿ ಮಾರುತಿ ವ್ಯಾನ್ ನಲ್ಲಿ ಕುಳಿತಿದ್ದ ಗಂಡಸರು ಇವಳ ಕಡೆ ತಿರುಗಿ, ``ಓಹೋ.... ಡಬ್ಬಲ್ ರೈಡಿಂಗ್ ಬೇರೆ ಬರುತ್ತೋ....'' ಎಂದು ವ್ಯಂಗ್ಯವಾಗಿ ಆಡಿಕೊಂಡರಂತೆ.
ಬೈಕ್ ನಡೆಸುತ್ತಿರುವವಳು ಹೆಣ್ಣು, ಹಿಂದೆ ಕುಳಿತಿರುವವಳೂ ಹೆಣ್ಣು ಎಂದು ತಿಳಿದಾಗ ಜನರಿಗೆ ಹೀಗಾಡಲು ನಾಲಿಗೆ ಉದ್ದವಾಗುತ್ತದೆ. ನಂತರ ಇತರೇ ಗಾಡಿಯ ಗಂಡಸರು ಇವರತ್ತ ವಿಚಿತ್ರವಾಗಿ ದಿಟ್ಟಿಸಿದರಂತೆ. ಟೂ ವೀಲರ್ ಮೇಲೆ ಹೆಣ್ಣನ್ನು ಕಂಡರೆ ಜನ ಸುಮ್ಮನಿರು ಬದಲು ತಿರಸ್ಕಾರ ವ್ಯಕ್ತಪಡಿಸುತ್ತಾರೆ. ಒಬ್ಬ ಯುವಕ ಬೇಕೆಂದೇ ಅಡ್ಡ ಬಂದು ಇವರಿಗೆ ಡಿಕ್ಕಿ ಹೊಡೆಯಲು ಯತ್ನಿಸುತ್ತಿದ್ದ.
ಬದಲಾಗದ ಮನೋಭಾವ ಈ ಪುರುಷಪ್ರಧಾನ ಸಮಾಜಕ್ಕೆ ಅರ್ಥವಾಗದ ಒಂದು ವಿಷಯ ಎಂದರೆ, ಗಾಡಿಯಲ್ಲಿ ಹಿಂಬದಿ ಕೂರಬೇಕಾದ ಹೆಣ್ಣು, ಅದು ಹೇಗೆ ಮುಂದೆ ಕುಳಿತು ಇಷ್ಟು ಚೆನ್ನಾಗಿ ಡ್ರೈವಿಂಗ್ ಮ್ಯಾನೇಜ್ ಮಾಡಬಲ್ಲಳು ಅಂತ....? ಹಿಂದೆಲ್ಲ ದೇಶವಿಡೀ ಹೆಣ್ಣು ಮನೆ, ಮಕ್ಕಳನ್ನು ಸುಧಾರಿಸುತ್ತಾ ಹಿಂದುಳಿಯುತ್ತಿದ್ದರೆ, ಗಂಡಸು ಸ್ಟೇರಿಂಗ್ ಹಿಡಿದು ಗಾಡಿ ಓಡಿಸುತ್ತಾ, ತನ್ನ ಸಮಾನರಿಲ್ಲ ಎಂದು ಮೆರೆಯುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ! ಹೆಂಗಸರು ಡ್ರೈವಿಂಗ್ ಮಾಡುವುದನ್ನು ನೋಡಿದರೆ ಗಂಡಸರಿಗೆ, ಇವರಿಗೇಕೆ ಇಷ್ಟು ಸ್ವಾತಂತ್ರ್ಯ ಎಂದು ಸಿಡುಕುವಂತಾಗುತ್ತದೆ. ಹೀಗಾಗಿ ಗಾಡಿ ಚಲಾಯಿಸು ಹೆಣ್ಣನ್ನು ಕಂಡು ಈ ಗಂಡಸರು ಏನಾದರೊಂದು ಕಟಕಿ ಮಾತು, ವ್ಯಂಗ್ಯ ಆಡದೇ ಇರಲು ಸಾಧ್ಯವೇ ಇಲ್ಲ.





