ರಾಜಸ್ಥಾನದ ದೌಸಾ ಜಿಲ್ಲೆಯ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ವೇಯಲ್ಲಿ ಬುಧವಾರ ಮುಂಜಾನೆ ಖಾಸಗಿ ಬಸ್ವೊಂದು ಟ್ರಕ್ಗೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸುಮಾರು 37 ಪ್ರಯಾಣಿಕರನ್ನು ಹೊತ್ತ ಬಸ್ ಉತ್ತರಾಖಂಡದ ಋಷಿಕೇಶದಿಂದ ಮಧ್ಯಪ್ರದೇಶದ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾಗ ಬೆಳಗಿನ ಜಾವ 3:30 ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಮುಂದೆ ಚಲಿಸುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆಯುವ ಮೊದಲು ಚಾಲಕ ಬಸ್‌ನ ನಿಯಂತ್ರಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ವಾಹನ ಆವರಿಸಿ, ಹಲವಾರು ಪ್ರಯಾಣಿಕರು ಒಳಗೆ ಸಿಲುಕಿಕೊಂಡರು. ಆ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು ಮತ್ತು ಬಸ್ಸಿನ ಹಿಂಭಾಗಕ್ಕೆ ಮೊದಲು ಬೆಂಕಿ ಹೊತ್ತಿಕೊಂಡಿತು, ಇದು ಭಯ ಮತ್ತು ಅವ್ಯವಸ್ಥೆಗೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಸ್ ಅನ್ನು ಇಂದೋರ್‌ನ ಹ್ಯಾನ್ಸ್ ಟ್ರಾವೆಲ್ಸ್ ನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಎಂಟು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಸುಮಾರು 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ ಗಂಭೀರವಾಗಿ ಗಾಯಗೊಂಡ ಒಬ್ಬ ಪ್ರಯಾಣಿಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕಳುಹಿಸಲಾಗಿದೆ.
ಅಪಘಾತದಲ್ಲಿ ಆರು ಮಂದಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದರೆ, ಇನ್ನಿಬ್ಬರು ತಲೆಗೆ ಗಾಯಗಳಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೌಸಾ ಎಸ್ಪಿ ಪಿಯೂಷ್ ದೀಕ್ಷಿತ್ ಮತ್ತು ಜಿಲ್ಲಾಧಿಕಾರಿ ಸೌಮ್ಯ ಝಾ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿದ್ದಾರೆ.
ಅಧಿಕಾರಿಗಳು ಪ್ರಯಾಣಿಕರ ಸಂಬಂಧಿಕರಿಗೆ ಸಹಾಯವಾಣಿಯನ್ನು ನೀಡಿದ್ದು, ಮೃತರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚಿನ ಪ್ರಯಾಣಿಕರು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದವರು ಎಂದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಸಂಸದ ಮುರಾರಿ ಲಾಲ್ ಮೀನಾ ಹೇಳಿದ್ದಾರೆ.





