ಊಟ ಮುಗಿಸಿ ಮಧ್ಯಾಹ್ನದ ವಿಶ್ರಾಂತಿಗಾಗಿ ಆಗ ತಾನೇ ನಿರ್ಮಲಾ ಹಾಸಿಗೆ ಮೇಲೆ ಅಡ್ಡಾಗಿದ್ದಳು. ಅಷ್ಟರಲ್ಲಿ ಅವಳ ಆಪ್ತಗೆಳತಿ ಮಧುಮಿತಾ ಫೋನ್ ಮಾಡಿದಳು.
``ಓಹೋ... ದೇವಿಯವರು ಹನೀಮೂನ್ ಮುಗಿಸಿಕೊಂಡು ಬಂದ್ರು ಅಂತ ಕಾಣ್ಸುತ್ತೆ. ಇಷ್ಟು ಸುದೀರ್ಘ ದಿನಗಳಲ್ಲಿ ಒಂದು ಸಲವಾದರೂ ಈ ಬಡಪಾಯಿ ಫ್ರೆಂಡ್ ನೆನಪಾಗಲಿಲ್ಲವೇ?'' ನಿರ್ಮಲಾ ಬೇಕೆಂದೇ ಗೆಳತಿಯನ್ನು ಛೇಡಿಸಿದಳು.
``ಅಯ್ಯೋ ನಿಮ್ಮಿ..... ಕೋಪ ಮಾಡಿಕೋಬೇಡವೇ.... ಕಳೆದ ಹಲವು ದಿನಗಳು ಎಷ್ಟು ಹೆಕ್ಟಿಕ್ ಆಗಿಹೋಗಿತ್ತು ಅಂದ್ರೆ, ಕೇಳಲೇಬೇಡ. ಒಂದು ಬದಲಾವಣೆ ಇರಲಿ ಅಂತ, ಉ.ಭಾರತದ ಪುಷ್ಕರ್ ತೀರ್ಥಯಾತ್ರಾ ಸ್ಥಳವನ್ನು ನಮ್ಮ ಹನೀಮೂನ್ ಸ್ಪಾಟ್ ಅಂತ ಆವರಿಸಿಕೊಂಡಿದ್ದೆ. ಅಲ್ಲೆಲ್ಲ ಅಲೆದಾಡಿ ಸಾಕಾಗಿ ಹೋಯ್ತಮ್ಮ. ಹನೀಮೂನ್ ಗಾಗಿ ಇಂಥ ಸ್ಥಳವೇ ಅಂತ ವಿಜಯ್ ಸಿಡಿ ಸಿಡಿ ಅಂತಿದ್ದ.
``ಹೀಗಾಗಿ ಅಲ್ಲಿದ್ದಷ್ಟು ದಿನ ನೀನೇನು ಹನೀಮೂನ್ ಗೆ ಅಂತ ಇಲ್ಲಿಗೆ ಬಂದೆಯಾ..... ತೀರ್ಥಯಾತ್ರೆಗಾ ಅಂತ ರೇಗಾಡುತ್ತಲೇ ಇದ್ದ. ಯಾಕೋ.... ಹನೀಮೂನ್ ಗಾಗಿ ನಾನು ಪುಷ್ಕರ್ ಜಾಗ ಆರಿಸಿದ್ದು ಸರಿ ಹೋಗಲೇ ಇಲ್ಲ. ಅಲ್ಲಿ ಎಲ್ಲಾ ಕಡೆ ದೇವಾಲಯ, ಸಣ್ಣಪುಟ್ಟ ಮಂದಿರ, ಪಂಡಿತರು, ಪೂಜಾರಿ, ಮಂತ್ರಗಳು, ಘಂಟೆಯ ಸದ್ದು, ಪೂಜೆ ಪುನಸ್ಕಾರಗಳೇ ಆಗಿಹೋಯ್ತು.....''
``ವಿಜಯ್ ಗೆ ರೇಗಲು ಬೇರೆ ನೆಪವೇ ಬೇಕಾಗಲಿಲ್ಲ. ಎಲ್ಲಿ ನೋಡಿದರೂ ಈ ವೈರಾಗ್ಯ ಮೂರ್ತಿಗಳೇ ತುಂಬಿರುವ ಇಂಥ ಜಾಗ ನಮಗೆ ಈಗ ಬೇಕಿತ್ತಾ? ಒಂದಿಷ್ಟು ರೊಮ್ಯಾಂಟಿಕ್ ಮೂಡ್ ಬಂತು ಅಂತ ಅಂದುಕೊಳ್ಳುವಷ್ಟರಲ್ಲಿ ಈ ಮಂದಿರಗಳ ಘಂಟಾಘೋಷದಿಂದ ಇದ್ದಬದ್ದ ಮೂಡ್ ಎಲ್ಲಾ ಆಫ್ ಆಗಿ ಹೋಗುತ್ತದೆ! ಹೀಗೆ.... ಅವನ ಮಾತು ಮುಗಿಯುತ್ತಿರಲಿಲ್ಲ.''
ಮಧುಮಿತಾಳ ಮಾತು ಕೇಳುತ್ತಿದ್ದಂತೆ ನಿರ್ಮಲಾ ಜೋರಾಗಿ ನಗತೊಡಗಿದಳು.
``ಅಯ್ಯೋ ಹುಚ್ಚು ಹುಡುಗಿ.... ಪುಷ್ಕರ್ ನಂಥ ಯಾತ್ರಾಸ್ಥಳಕ್ಕೆ ಈಗ ಹೋಗುವ ಅಗತ್ಯ ಏನಿತ್ತು? ಇದನ್ನು ಮಧುಚಂದ್ರದ ಡೆಸ್ಟಿನೇಶನ್ ಅಂತ ಯಾಕೆ ಆರಿಸಿದೆ? ಹೊರಟಿದ್ದು ರಾಜಸ್ಥಾನಕ್ಕೆ.... ಜೈಪುರ್, ಜೈಸಲ್ಮೇರ್ ನಂಥ ರೊಮ್ಯಾಂಟಿಕ್ ಸಿಟಿಗಳು ನೆನಪಾಗಲಿಲ್ಲವೇ? ಚಿತ್ತೋರ್, ಉದಯ್ ಪುರ್, ಬೂಂದಿ.... ಇನ್ನೂ ಬೇಕಾದಷ್ಟು ಸ್ಥಳಗಳಿವೆ. ಅದೆಲ್ಲ ಬಿಟ್ಟು ನಿನ್ನ ಕಣ್ಣೇಕೆ ಪುಷ್ಕರದಲ್ಲಿ ನೆಟ್ಟಿತು?''
``ಹಾಗಲ್ವೇ ನಿಮ್ಮಿ.... ಈ ಸಣ್ಣಪುಟ್ಟ ತೊರೆ, ನದಿ, ಝರಿಗಳು ನನಗೆಷ್ಟು ಇಷ್ಟ ಅಂತ ನಿನಗೆ ಗೊತ್ತಿಲ್ಲವೇ? ಅಂಥ ಪ್ರಕೃತಿ ದೃಶ್ಯಗಳ ಮುಂದೆ ಬೇರೇನೂ ಬೇಡ ಅನಿಸುತ್ತೆ. 2 ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ನಾನು ಪುಷ್ಕರಕ್ಕೆ ಫ್ರೆಂಡ್ಸ್ ಜೊತೆ ಹೋಗಿದ್ದೆ. ಆಗ ಅಲ್ಲಿನ ಗುಲಾಬೋ ಬಗೀಚಾ (ರೋಸ್ ಗಾರ್ಡನ್), ಸುಂದರ ಝರಿ ತೊರೆ ನೋಡಿ ಮುಂದೆ ಹನೀಮೂನ್ ಗೆ ಇಲ್ಲಿಗೆ ಬರಬೇಕು ಅಂತ ಡಿಸೈಡ್ ಮಾಡಿದ್ದೆ.
``ಆದರೆ ನಾವು ಮಧುಚಂದ್ರದ ನೆಪದಲ್ಲಿ ಈ ಸೀಸನ್ನಿನಲ್ಲಿ ಬಂದಾಗ, ಇಲ್ಲಿ ಗುಲಾಬಿ ಅರಳಿರುತ್ತದೋ ಇಲ್ಲವೋ.... ಗೂಗಲ್ ಮಾಡಿಯೂ ತಿಳಿದುಕೊಳ್ಳಲಿಲ್ಲ. ನೀನು ಇದನ್ನೆಲ್ಲ ಗಮನಿಸದೆ ಯಾಕೆ ಇಂಥ ಜಾಗ ಫಿಕ್ಸ್ಸ ಮಾಡಿದೆ ಅಂತ ವಿಜಯ್ ಟೂರಿಂಗ್ ಪೂರ್ತಿ ಗೊಣಗಿದ್ದೇ ಬಂತು!'' ಮಧು ಬಹಳ ಬೇಸರದಲ್ಲಿ ಹೇಳಿಕೊಂಡಳು.





