ಅದೊಂದು ಸಂಜೆ ರೀ.. ಹಾಲು ಮೊಸರು ಮುಗಿದು ಹೋಗಿದೆ, ಸ್ವಲ್ಪ ತರ್ತೀರಾ ಎಂದಾಗ, ಮೋಬೈಲಿನಲ್ಲಿ ಕ್ರಿಕೆಟ್ ನೋಡುತ್ತಿದ್ದ ನಾನು ಬೇಸರಿಸಿಕೊಂಡೇ, ಚೀಲದಲ್ಲಿ ಹಾಲು ಮೊಸರು ಕೂಪನ್ನುಗಳನ್ನು ಹಾಕಿಕೊಂಡು ಹಾಲಂಗಡಿಗೆ ಹೋದೆ. ಸಾಧಾರಣವಾಗಿ ನಾನು ಎಲ್ಲಿಗೇ ಹೋಗಲಿ, ಸುಮ್ಮನೆ ನಾನಾಯಿತು ನನ್ನ ಕೆಲಸ ಆಯಿತು ಎನ್ನುವ ಆಸಾಮಿಯೇ ಅಲ್ಲಾ. ದಾರಿಯಲ್ಲಿ ಪರಿಚಯವಿರುವ ಎಲ್ಲರನ್ನೂ ಮಾತನಾಡಿಸಿಕೊಂಡೇ ಹೋಗುವ ಪರಿಪಾಠ. ಅಂದೂ ಸಹಾ ಹಾಲಿನಂಗಡಿಯವರ ಉಭಯ ಕುಶಲೋಪರಿಯನ್ನು ವಿಚಾರಿಸುವಷ್ಟರಲ್ಲೇ 5-10 ನಿಮಿಷ ಕಳೆದು, ನಂತರ ಮನೆಗೆ ಹಿಂದಿರುಗುವಾಗ, ಬಹಳ ದಿನಗಳ ನಂತರ ಬಾಲ್ಯದ ಗೆಳೆಯರಿಬ್ಬರು ಮುಖಃತಃ ಭೇಟಿಯಾಗುತ್ತಿದ್ದಂತೆಯೇ ರಸ್ತೆಯ ಬದಿಯಲ್ಲೇ ಮಾತಿಗೆ ಇಳಿದೆವು. ಇತ್ತ ಹಾಲು ತರಲು ಹೋದವರು ಅರ್ಧ ಗಂಟೆಯಾದರೂ ಬರಲಿಲ್ಲವಲ್ಲಾ ಎಂದು ಗಾಭರಿಯಿಂದ ಮಡದಿ ಕರೆ ಮಾಡಿ, ರೀ… ಎಲ್ಲಿದ್ದೀರಾ?… ಹಾಲು ತರೋದಿಕ್ಕೆ ಅರ್ಧ ಗಂಟೆ ಬೇಕಾ?…. ಎಂದು ಆತಂಕದಿಂದ ಮೇಲಿಂದ ಮೇಲೆ ಪ್ರಶ್ನೆಗಳ ಮಳೆ ಸುರಿಸಿದಾಗ, ಅಷ್ಟೇ ತಾಳ್ಮೆ ಇಂದಲೇ, ಇಲ್ಲಮ್ಮಾ ಇಲ್ಲೇ ಗೆಳೆಯರು ಸಿಕ್ಕಿದ್ದಾರೆ ಅವರೊಂದಿಗೆ ಮಾತನಾಡುತ್ತಿದ್ದೇನೆ. ಸ್ವಲ್ಪ್ಸ ಸಮಯದ ನಂತರ ಬರ್ತೀನಿ ಅಂತಾ ಹೇಳಿ, ಸುಮಾರು ಹೊತ್ತಿನವರೆಗೂ ಗೆಳೆಯರೊಡನೆ ಬಾಲ್ಯದ ಆಟ ಪಾಠ, ನಮ್ಮ ಸಹಪಾಠಿಗಳೆಲ್ಲ ಯೋಗ ಕ್ಷೇಮವನ್ನು ವಿಚಾರಿಸಿ ಮನೆಗೆ ಹೋದೆ.

ಮಳೆ ನಿಂತು ಹೋದರೂ, ಮರದಿಂದ ಹನಿಯು ಬೀಳುತ್ತದೆ ಎನ್ನುವಂತೆ ನಿಮ್ಮಪ್ಪನಿಗೆ ಮಾತಿಗೆ ಯಾರಾದರೂ ಸಿಕ್ಕರೆ ಸಾಕು ಅಷ್ಟೇ!! ಹೆಂಡತಿ ಮಕ್ಕಳು ಎಲ್ಲರನ್ನೂ ಮರೆತು ಬಿಡ್ತಾರೆ ಎಂದು ಮಡದಿ ಅಡುಗೆ ಮನೆಯಿಂದಲೇ ಮೊದಲ ಬಾಣ ಪ್ರಯೋಗಿಸುತ್ತಿದ್ದಂತೆಯೇ, ಅವರವರ ರೂಮಿನಲ್ಲಿದ್ದ ಮಕ್ಕಳೂ ಆಸಾಮಿ ಹಳ್ಳಕ್ಕೆ ಬಿದ್ದರೇ, ಆಳಿಗೊಂದು ಕಲ್ಲು ಎನ್ನುವಂತೆ ಹೌದೌದು. ಈ ನಡುವೆ ಅಪ್ಪಾ ಬರೀ ಮೊಬೈಲ್, ಬ್ಲಾಗ್ ಯೂಟೂಬ್ ವೀಡೀಯೋ ಅಂತಾನೇ ಇರ್ತಾರೆ, ಇಲ್ಲಾಂದ್ರೇ ಎಲ್ಲೋ ಬೈಠಕ್ಕಿಗೋ, ಭಾಷಣಕ್ಕೋ ಹೋಗ್ತಾರೆ. ನಮ್ಮ ಜೊತೆ ಮುಂಚಿನ ರೀತಿಯಲ್ಲಿ ಇಲ್ಲಾ ಎಂದು ಹೇಳುತ್ತಿದ್ದಂತೆಯೇ, ಈ ಬಡಪಾಯಿ ಅಮಾಯಕನ ಪರಿಸ್ಥಿತಿ ಹೇಗಾಗಿರಬೇಕು ಎಂದು ವರ್ಣಿಸುವುದೇ ಬೇಡ ಅಲ್ವೇ?
ಇಷ್ಟೆಲ್ಲಾ ಪೀಠಿಕೆ ಏಕಪ್ಪಾ ಅಂದ್ರೇ, ಈ ಆಧುನಿಕ ಜಗತ್ತಿನಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಕ್ಷಣಾರ್ಧದಲ್ಲಿ ಸಂಪರ್ಕಿಸಿ ಸೌಹಾರ್ಧತೆಯನ್ನು ಬೆಳಸಿಕೊಳ್ಳುವಂತಹ ಸೌಲಭ್ಯಗಳು ಇದ್ದರೂ, ಇತ್ತೀಚಿನ ದಿನಗಳಲ್ಲಿ ಸಂಪರ್ಕ ಮತ್ತು ಸೌಹಾರ್ಧತೆಯ ಕೊರತೆಯೇ ಬಹಳವಾಗಿ ಕಾಡುತ್ತಿರುವುದು ನಿಜಕ್ಕೂ ವಿಷಾಧನೀಯವಾದ ಆಘಾತಕಾರಿ ಸಂಗತಿಯಾಗಿದೆ. ಹೊರಗಿನವರೊಂದಿಗಿನ ಸಂಪರ್ಕ ಬಿಡಿ, ಕುಟುಂಬದಲ್ಲೇ ಸೌಹಾರ್ಧತೆ ಮಾಯವಾಗಿದೆ. ಹಿಂದೆಲ್ಲಾ ಎಷ್ಟೇ ಬಡತನವಿದ್ದರೂ, ಮಕ್ಕಳಿರಲವ್ವಾ ಮನೆ ತುಂಬಾ ಎನ್ನುವಂತೆ ಮನೆಯ ಪೂರಾ ಮಕ್ಕಳದ್ದೇ ಕಲರವ ಇದ್ದರೂ, ಸಹಾ ಎಲ್ಲರೂ ಒಟ್ಟಾಗಿ ಊಟ ಮತ್ತು ತಿಂಡಿಯನ್ನು ಮಾಡುತ್ತಿದ್ದದ್ದಲ್ಲದೇ, ಸಂಜೆ ನಿಗಧಿತ ಸಮಯದಲ್ಲಿ ಪೂಜೆ, ಭಜನೆ ಇಲ್ಲವೇ ಪರಸ್ಪರ ಸಂಭಾಷಣೆಯ ಮೂಲಕ ಒಟ್ಟಿಗಿರುತ್ತಿದ್ದದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ

ಆದರೆ ಇಂದು ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ. ಅದೂ ಇಲ್ಲವೇ ಹೆಣ್ಣಾಗಲೀ ಗಂಡಾಗಲೀ ಮಗುವೊಂದೇ ಇರಲೀ ಎನ್ನುವಂತಹ ಸಣ್ಣ ಕುಟುಂಬವಾಗಿದ್ದರೂ ಗಂಡ ಹೆಂಡತಿ ಮಕ್ಕಳೇ ಒಟ್ಟಿಗೆ ಕುಳಿತು ಊಟ ಮಾಡುವುದೇ ಇಲ್ಲಾ. ಇನ್ನೂ ಅಚ್ಚರಿಯ ಸಂಗತಿಯಂದರೆ ಊಟ ಮಾಡಲು ಮಕ್ಕಳನ್ನು ಕರೆಯಲೂ ಸಹಾ WhatsAppನಲ್ಲಿ message ಮಾಡುವುದೋ ಇಲ್ಲವೇ ಮೊಬೈಲ್ ಕರೆ ಮಾಡುವಂತಹ ಪರಿಸ್ಥಿತಿ ಉಂಟಾಗಿರುವುದು ನಿಜಕ್ಕೂ ಶೋಚನೀಯವಾಗಿದೆ.





