ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಅಬ್ಬರಿಸಿದ ಮಳೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.
ಇಲ್ಲಿನ ಹಳೆಯ ಗೋಡೆಗೆ ದೊಡ್ಡದಾದ ಟಾರ್ಪಲ್ ಹಾಕಿ ವ್ಯಾಪಾರ ಮಾಡುತ್ತಿದ್ದರು. ಮಳೆಯಿಂದ ರಕ್ಷಣೆ ಪಡೆಯಲು ಟಾರ್ಪಲ್ ಅಡಿ ನಿಂತಿದ್ದರು. ಸಂಜೆ ಸರಿಯಾಗಿ ಆರು ಘಂಟೆ ವೇಳೆಗೆ ಆಸ್ಪತ್ರೆಯ ಗೋಡೆ ಕುಸಿದು ಬಿದ್ದಿದ್ದು, ಫುಟ್ ಪಾತ್ ಮೇಲಿದ್ದ ವ್ಯಾಪಾರಸ್ಥರು, ಗ್ರಾಹಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಗೋಡೆಗೆ ಹೊಂದಿಕೊಂಡಂತೆ ದೊಡ್ಡದಾದ ಟಾರ್ಪಲ್ ಹಾಕಿ ವ್ಯಾಪಾರಸ್ಥರು ಜೀವನ ಸಾಗಿಸುತ್ತಿದ್ದರು. ಮಳೆ ಜೋರಾದಾಗ ಫುಟ್‌ಪಾತ್ ಮೇಲಿದ್ದ ವ್ಯಾಪಾರಸ್ಥರು ಮತ್ತು ದಾರಿಹೋಕರು ಮಳೆಯಿಂದ ರಕ್ಷಣೆ ಪಡೆಯಲು ಅದರ ಅಡಿಯಲ್ಲಿ ನಿಂತುಕೊಂಡಿದ್ದರು. ಆದರೆ ಹಳೆಯ ಗೋಡೆ ಮಳೆಯ ಒತ್ತಡಕ್ಕೆ ಸಿಲುಕಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಕೇವಲ ಕೆಲವೇ ಕ್ಷಣಗಳಲ್ಲಿ ಗೋಡೆಯ ಅವಶೇಷಗಳ ಅಡಿ ಸಿಲುಕಿ ಎಲ್ಲರೂ ಪ್ರಾಣ ಬಿಟ್ಟಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಅಜಾಗರೂಕತೆ ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ, ಅಗತ್ಯವಿದ್ದರೆ ಅಮಾನತುಗೊಳಿಸುವುದಾಗಿಯೂ ಸಿಎಂ ತಿಳಿಸಿದ್ದಾರೆ.





