ಈ ಎಲ್ಲಾ ವಸ್ತುಗಳನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಎಲ್ಲರ ಹಿರಿಯರ ಕನಸೂ ಒಂದೇ ಆಗಿರುತ್ತದೆ, ಮನೆ! ಅದರಲ್ಲಿ ವ್ಯತ್ಯಾಸ ಅಂದರೆ ಚಿಕ್ಕ ಅಥವಾ ದೊಡ್ಡ ಮನೆ. ಈ ಬ್ರ್ಯಾಂಡಿನ ಕಾರ್ ಅಥವಾ ಆ ಬ್ರ್ಯಾಂಡಿನ ಕಾರ್ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಎಷ್ಟು ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಬಹುದು ಎಂಬುದು.
ಹಾಗೆ ನೋಡಿದರೆ ಎಷ್ಟೇ ಅವಶ್ಯಕತೆ ಇರಲಿ, ಜನ ತಮ್ಮ ಪ್ರಾಪರ್ಟಿಯನ್ನು ಅಡವಿರಿಸಿ ಹಣ ಪಡೆಯುವ ಯೋಚನೆ ಮಾಡುವುದೇ ಇಲ್ಲ. ಇದರರ್ಥ ಇದು ನಮ್ಮ ಮನೆಯ ಬಗ್ಗೆ ಇರುವ ಭಾವನಾತ್ಮಕ ಬೆಸುಗೆಯೇ? ಅದು ಹಾಗಲ್ಲ, ಇದರ ಹಿಂದೆ ಒಂದು ದೊಡ್ಡ ಭಯ ಇದ್ದೇ ಇರುತ್ತದೆ, ಅದುವೇ ತಮ್ಮ ಸಂಪತ್ತನ್ನು ಕಳೆದುಕೊಳ್ಳುವ ಭಯ. ಎಷ್ಟೋ ಹಂತದವರೆಗೆ ಈ ಭಯ ನಿಜಕ್ಕೂ ನ್ಯಾಯವಾದುದೇ ಅನಿಸುತ್ತವೆ. ಏಕೆಂದರೆ ಪ್ರಾಪರ್ಟಿ ಅಡವಿರಿಸುವ ಬಗ್ಗೆ ಎಷ್ಟೋ ಜನರಿಗೆ ಅದರ ಕಟ್ಟುಪಾಡುಗಳೇನು ಇತ್ಯಾದಿ ಸೂಚನೆಗಳ ಅರಿವೇ ಇರುವುದಿಲ್ಲ. ಇದರ ಕುರಿತಾಗಿ ಹೆಚ್ಚಿನ ಮಾಹಿತಿ ದೊರೆತಾಗ ಮಾತ್ರ ಈ ಸ್ಥಿತಿ ಸುಧಾರಿಸಬಹುದು. ಒಂದು ಪ್ರಾಪರ್ಟಿ ನಿಮಗೆ ಹಣ ದೊರಕಿಸಿಕೊಡುವ ಸಾಧನವಾಗಬಹುದು, ಇದರಿಂದ ನಿಮ್ಮ ತುರ್ತು ಅಗತ್ಯಗಳನ್ನು ಪೂರೈಸಬಹುದು. ಆದರೆ ಇದು ಯಾವಾಗ ಸಾಧ್ಯ? ಈ ಪ್ರಕ್ರಿಯೆಯಿಂದ ಹೇಗೆ ಹೆಚ್ಚು ಹೆಚ್ಚು ಹಣ ಪಡೆಯಲು ಸಾಧ್ಯ ಮತ್ತು ನಮ್ಮ ಪ್ರಾಪರ್ಟಿ ಕಳೆದುಕೊಳ್ಳದೆ ಇರುವುದು ಹೇಗೆಂದು ತಿಳಿದಾಗ ಮಾತ್ರ.
ಸಂಪತ್ತಿನ ಮಾಲೀಕನಾದ ಒಬ್ಬ ವ್ಯಕ್ತಿ ಮನೆಯಲ್ಲಿನ ಮದುವೆ, ಬಿಸ್‌ನೆಸ್ ಇನ್‌ವೆಸ್ಟ್ಮೆಂಟ್, ಮಕ್ಕಳ ಉನ್ನತ ಶಿಕ್ಷಣ ಅಥವಾ ಇನ್ನಿತರ ಕಾರಣಗಳಿಗಾಗಿ ತನ್ನ ಸಂಪತ್ತನ್ನು ಅಡವಿರಿಸಿ ಹಣ ಪಡೆಯಬಹುದು. ಆದರೆ…. ಸಂಪತ್ತನ್ನು ಗಿರವಿ ಇಡುವ ಮುನ್ನ ಕೆಲವು ಮಾತುಗಳನ್ನು ಅಗತ್ಯವಾಗಿ ನೆನಪಿಡಬೇಕು.
ಆಸ್ತಿಯ ಲೋನ್ ನಡೆಯುತ್ತಿದೆ, ಆಗ ಗಿರವಿ ಇಡಬಹುದೇ? : ಯಾವುದೇ ಪ್ರಾಪರ್ಟಿ ಈಗಾಗಲೇ ಸಾಲದಡಿ ಸಿಲುಕಿದ್ದರೆ, ಆ ಕಾರಣದಿಂದಾಗಿ ಆ ಮನೆಯನ್ನು ಅಡವಿಡಲಾಗದು. ಆದರೂ ಸಹ ಕೆಲವು ವಿಶೇಷ ಸಂದರ್ಭಗಳಲ್ಲಿ (ಲೋನ್ ಮೊತ್ತ ಅನುಸರಿಸಿ) ಸಾಲ ನೀಡಿದರ ಅನುಮತಿ ಮೇರೆಗೆ, ಈ ಸಂಪತ್ತನ್ನು ಮತ್ತೊಮ್ಮೆ ಗಿರವಿ (ಪ್ಲೆಡ್ಜ್) ಇಡಬಹುದು.
ಸಂಪತ್ತನ್ನು ಗಿರವಿಗೆ ತೆಗೆದುಕೊಂಡು ಸಾಲ ನೀಡಿದರು, ಸಾಲಗಾರ ಯಾವ ರೀತಿ ಕಂತುಗಳನ್ನು ತೀರಿಸಬೇಕೆಂದು ತಿಳಿಸಿ ತನ್ನ ಹಣದ ಕುರಿತಾಗಿ ನಿಶ್ಚಿಂತನಾಗುತ್ತಾನೆ. ಅದೇ ಸಮಯದಲ್ಲಿ ಸಾಲ ಪಡೆದ ಗ್ರಾಹಕ, ತನ್ನ ಅಗತ್ಯಕ್ಕೆ ತಕ್ಕಂತೆ ಆರ್ಥಿಕ ಸಹಾಯ ಪಡೆದುಕೊಳ್ಳುತ್ತಾನೆ. ಯಾವ ವ್ಯಕ್ತಿಯೇ ಆಗಲಿ, ಏನನ್ನೂ ಅಡವಿಡದೆಯೂ ಸಾಲ ಪಡೆಯಬಹುದು, ಆದರೆ ಯಾವುದೇ ಸಂಪತ್ತಿನ ಬದಲಿಗೆ ಸಾಲ ಪಡೆದರೆ, ಅದರ ಬಡ್ಡಿ ದರ ಎಷ್ಟೋ ಕಡಿಮೆ ಆಗುತ್ತದೆ.
ಸಾಲ ತೀರಿಸಲಾಗದ ಅಸಹಾಯಕತೆ : ಒಂದು ವೇಳೆ ಸಾಲಗಾರ ತಾನು ಪಡೆದ ಸಾಲ ತೀರಿಸಲು ಅಸಮರ್ಥನಾದರೆ, ಆಗವನು ಸಾಲ ಕೊಟ್ಟ ಸಂಸ್ಥೆಯ ನಿಯಮಗಳ ಅನುಸಾರ, ಅವರು ಹೇಳಿದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಇಡೀ ಆಸ್ತಿ ಕೈ ತಪ್ಪುತ್ತದೆ. ಆ ಸಂಸ್ಥೆ ತನ್ನ ಷರತ್ತಿನಂತೆ ಬಲವಂತವಾಗಿ ಹಣ ವಸೂಲು ಮಾಡುತ್ತದೆ. ಹಾಗೆ ಮಾಡಲು ಸಂಸ್ಥೆ ನಿಯಮಾನುಸಾರ ಕೋರ್ಟ್‌ನಲ್ಲಿ ಕೇಸ್ ಫೈಲ್ ಮಾಡಬೇಕು ಹಾಗೂ ಅಲ್ಲಿನ ಆದೇಶಗಳ ಪ್ರಕಾರ, ಗಿರವಿ ಇರಿಸಿದ್ದನ್ನು ಮಾರಿ ತಮ್ಮ ಹಣ ವಸೂಲಿ ಮಾಡಿಕೊಳ್ಳುತ್ತಾರೆ. ಡಿಫಾಲ್ಟರ್ ಆದಕಾರಣ ಇತರ ಕ್ರಮಗಳನ್ನೂ ಕೈಗೊಳ್ಳಬಹುದು. ಅಂದರೆ, ಮೋಸಗಾರಿಕೆಯ ಪ್ರಕರಣವಿದ್ದರೆ ಸಾಲಗಾರನ ವಿರುದ್ಧ, ಅಪರಾಧಿ ಕೇಸ್‌ನ್ನೂ ದಾಖಲೆ ಮಾಡಬಹುದು. ಸಾಲ ತೀರಿಸುವಲ್ಲಿ ಬಹಳ ತಡ ಆದರೆ, ಕೆಲವು ಆರ್ಥಿಕ ದಂಡಗಳನ್ನೂ ವಿಧಿಸಬಹುದು. ಸಾಲಗಾರ ಮೂಲಧನ ಹಾಗೂ ಅದರ ಬಡ್ಡಿ ಜೊತೆಗೆ ಈ ಎಕ್ಸ್ ಟ್ರಾ ಫೈನಲ್ ಸಹ ಕಟ್ಟಲೇಬೇಕು.
ಸಂಪತ್ತನ್ನು ಗಿರವಿ ಇರಿಸಿದಾಗ ಬಡ್ಡಿ ದರ : ಸಂಪತ್ತನ್ನು ಗಿರವಿ ಇಟ್ಟು ಪಡೆದ ಸಾಲ ಚುಕ್ತಾ ಮಾಡಲು ಮಾಸಿಕ ಪೇಮೆಂಟ್ ರೂಪದಲ್ಲಿ ಮಾಡಬೇಕು. ಈ ಪೇಮೆಂಟ್ 10%, 15% ಅಥವಾ ಅದಕ್ಕಿಂತಲೂ ಹೆಚ್ಚಿರಬಹುದು. ಇದು ಲೋನ್‌ಪ್ರಕಾರ, ಸಾಲ ಕೊಡುವ ಸಂಸ್ಥೆಯ ನಿಯಮ ಹಾಗೂ ಸಾಲ ಪಡೆಯುವವರ ಸಾಮರ್ಥ್ಯದ ಮೇಲೆ ಅವಲಂಬಿತ. ಸಾಮಾನ್ಯವಾಗಿ ಮನೆ ಖರೀದಿಸಲು ಕೊಂಡ ಸಾಲ, ಸಂಪತ್ತನ್ನು ಅಡವಿಟ್ಟುಕೊಂಡ ಸಾಲಕ್ಕಿಂತ ಅಗ್ಗ ಆಗಬಹುದು. ಹೀಗಿರುವಾಗ ಅನ್ಯ ಕಾರ್ಯಗಳಾದ ವ್ಯಾಪಾರ, ಪ್ರವಾಸ ಇತ್ಯಾದಿಗಳಿಗಾಗಿ ಹಳೆಯ ಸಂಪತ್ತಿಗೆ ಬದಲು ಸಾಲ ಪಡೆಯಬೇಕು.
ಯಾರ ಬಳಿಯಾದರೂ ಅಧಿಕ ನಗದು ಅಂದರೆ ಸರ್‌ಪ್ಲಸ್ ಫಂಡ್ ಇದ್ದರೆ, ಅಂಥವರು ಇಡೀ ಸಾಲವನ್ನು ಒಂದೇ ಸಲ ತೀರಿಸಬಹುದು. ಸಾಮಾನ್ಯವಾಗಿ ಸಾಲ ಪಡೆದ 6 ತಿಂಗಳ ನಂತರ ಹೀಗೆ ಮಾಡಬಹುದಾಗಿದೆ. ನೀವು ನಿಧಾನವಾಗಿಯೇ ಸಾಲ ತೀರಿಸಬೇಕು ಅಂತೇನಿಲ್ಲ. ಮಾರುಕಟ್ಟೆಯಿಂದ ಪಡೆದ ಎಷ್ಟೋ ಸಾಲಗಳು ಹೀಗೆ ತಮ್ಮ ಅವಧಿಗೆ ಮೊದಲೇ ತೀರಿಸಲ್ಪಡುತ್ತವೆ.
ಡಿಫಾಲ್ಟ್ ಆದಾಗ ಸಂಪತ್ತನ್ನು ತೆರವುಗೊಳಿಸುವಿಕೆ : ಎಂದಾದರೂ 1-2 ತಿಂಗಳ ಪೇಮೆಂಟ್ ತೀರಿಸುವಲ್ಲಿ ತಡವಾದಾಗ, ಸಾಲಗಾರನನ್ನು ಓಡಿಹೋಗುವ ಮೋಸಗಾರ ಎಂದೇನೂ ಭಾವಿಸುವುದಿಲ್ಲ. ಆದರೆ ಈ ತಡ ಹಲವು ತಿಂಗಳಾದರೂ ಸರಿಹೋಗದಿದ್ದರೆ, ಅಂದರೆ 4-5 ತಿಂಗಳನ್ನೂ ಮೀರಿದರೆ ಹಾಗೂ ಸಾಲಗಾರನಿಂದ ಈ ಕುರಿತು ಯಾವ ಸೂಚನೆಯೂ ಸಿಗದಿದ್ದರೆ ಅಥವಾ ನೇರ ಬಂದು ಮಾತುಕಥೆಯೂ ಆಡದಿದ್ದರೆ, ಆಗ ಸಾಲ ಕೊಟ್ಟ ಸಂಸ್ಥೆ ಸಾಲಗಾರನ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬಹುದು. ಕಾನೂನಿನ ಪ್ರಕ್ರಿಯೆ ಶುರುವಾದ ಮೇಲೆ ಸಾಲಗಾರ ಒಪ್ಪಿಕೊಂಡ ಕಾನೂನಿನ ಷರತ್ತುಗಳ ಪ್ರಕಾರ, ಸಾಲಗಾರನ ಸಂಪತ್ತನ್ನು ಖಾಲಿಗೊಳಿಸಲು 6-18 ತಿಂಗಳ ಕಾಲಾವಕಾಶ ಬೇಕಾಗುತ್ತದೆ.
ಗಿರವಿ ಇರಿಸಿದ ಸಂಪತ್ತನ್ನು ಮಾರುವಿಕೆ : ಗಿರವಿ ಇರಿಸಲಾದ ಸಂಪತ್ತನ್ನು ಲೋನ್ ಕೊಟ್ಟರ ಒಪ್ಪಿಗೆಯಿಲ್ಲದೆ ಸಾಲಗಾರ ಮಾರಾಟ ಮಾಡುವಂತಿಲ್ಲ. ಅದರಲ್ಲೂ ಮುಖ್ಯವಾಗಿ ಸಾಲದ ಹಣ ವಸೂಲಾಗದೆ ನಿಂತಿರುವಾಗ, ಸಾಲದ ಚುಕ್ತಾ ಸಮಯಕ್ಕೆ ಸರಿಯಾಗಿ ಆಗುತ್ತಿದ್ದರೆ, ಆಗ ಸಾಲ ನೀಡುವ ಸಂಸ್ಥೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಂಪತ್ತನ್ನು ಮಾರಿ, ಸಾಲದ ಬಾಕಿ ಹಣವನ್ನು ಮುರೆಹಾಕಿಕೊಂಡು, ಹೊಸ ಮಾಲೀಕರಿಗೆ ಅದನ್ನು ಹಸ್ತಾಂತರ ಮಾಡಬಹುದಾಗಿದೆ.
– ಬಿ. ಪ್ರಮೀಳಾ