ಕೆಲವು ತಿಂಗಳ ಹಿಂದೆ 34 ವರ್ಷದ ಚೈತ್ರಾ ಹಾಗೂ 36 ವರ್ಷದ ರಾಜೇಶ್‌ದಂಪತಿಗಳು ಬಂಜೆತನ ನಿವಾರಣಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದರು. ಮದುವೆಯಾಗಿ 5 ವರ್ಷವಾದರೂ ಮಗು ಆಗದೇ ಇರುವುದು ಅವರಿಗೆ ಚಿಂತೆಯನ್ನು ಉಂಟು ಮಾಡಿತ್ತು.
ದಂಪತಿಗಳ ಜೊತೆ ಮಾತುಕತೆ ನಡೆಸಿದಾಗ, ಅವರು ಐಟಿ ಪ್ರೊಫೆಶನಿಸ್ಟ್ ಆಗಿದ್ದು, ತಮ್ಮ ವ್ಯಸ್ತ ದಿನಚರಿಯಿಂದಾಗಿ ಸಮರ್ಪಕ ಸಮಾಗಮ ಏರ್ಪಡದೇ ಇದ್ದುದರಿಂದ ಅವರು ಮಗುವಿನ ಸುಖದಿಂದ ವಂಚಿತರಾಗಿದ್ದರು. ವೈದ್ಯರು ಇನ್ನು ತಡಮಾಡುವುದು ಬೇಡವೆಂದು ಅವರಿಗೆ ಪರ್ಯಾಯ ಮಾರ್ಗದಲ್ಲಿ ಮಗುವನ್ನು ಪಡೆಯುವ ಬಗ್ಗೆ ವಿವರಿಸಿದರು.
ಕೃತಕ ಗರ್ಭಧಾರಣೆಯಿಂದ ಮಗು ಪಡೆಯಲು ದಂಪತಿಗಳು ಒಪ್ಪಿಗೆ ಸೂಚಿಸಿದರು. ವೈದ್ಯರು ಆಧುನಿಕ ತಂತ್ರಜ್ಞಾನದ ಮೂಲಕ ಆಕೆ ಗರ್ಭ ಧರಿಸುವಂತೆ ಮಾಡಿದರು. 3ನೇ ಋತುಚಕ್ರದಲ್ಲೇ ಆಕೆ ಗರ್ಭ ಧರಿಸಿದಳು. ಈಗ ಆಕೆ ಒಂದು ವರ್ಷದ ಆರೋಗ್ಯವಂತ ಮಗುವಿನ ತಾಯಿ.
ವಿಳಂಬ ವಿವಾಹ
ಚೈತ್ರಾಳಂತಹ ಅನೇಕ ಮಹಿಳೆಯರು ಮಗುವಿಗಾಗಿ ಪರಿತಪಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, 10ರಲ್ಲಿ 1 ಜೋಡಿ ಗರ್ಭಧಾರಣೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಾನಗರಗಳಲ್ಲಿ ಈ ಸಮಸ್ಯೆ ಗಂಭೀರ ರೂಪ ಪಡೆದುಕೊಳ್ಳುತ್ತ ಹೊರಟಿದೆ. ಇಬ್ಬರೂ ಉದ್ಯೋಗಸ್ಥರಾಗಿದ್ದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು.
ಈ ಸಮಸ್ಯೆಗೆ ಬೇರೆ ಬೇರೆ ಕಾರಣಗಳಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಹಿಳೆಯರು ಉದ್ಯೋಗದ ಬಗ್ಗೆ ಅತಿಯಾದ ಕಾಳಜಿ ಹೊಂದಿದವರಾಗಿದ್ದಾರೆ. ತಮ್ಮನ್ನು ತಾವು ಉದ್ಯೋಗದಲ್ಲಿ ತೊಡಗಿಸಿಕೊಂಡು, ಒಂದು ಹಂತಕ್ಕೆ ತಲುಪಿದ ಬಳಿಕವೇ ಮದುವೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾರೆ. ಈ ಕಾರಣದಿಂದ ಅವರ ಮದುವೆ ತಡವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಮಹಿಳೆಯರು ಮದುವೆ ಮಾಡಿಕೊಳ್ಳುವ ಹೊತ್ತಿಗೆ 30 ತಲುಪಿರುತ್ತಾರೆ.
ಮಹಿಳೆಯರ ದೇಹ ಯಾವ ರೀತಿ ರೂಪುಗೊಂಡಿರುತ್ತದೆ ಎಂದರೆ, ಸಂತಾನೋತ್ಪತ್ತಿಗೆ ಅರ್ಹ ಅಂಡಾಣುಗಳ ಸಾಮರ್ಥ್ಯ 30ರ ಬಳಿಕ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಲು ಮುಖ್ಯ ಕಾರಣವೇನೆಂದರೆ, ಆರಂಭಿಕ ಹಂತದಲ್ಲಿ ಮಹಿಳೆಯ ದೇಹದಲ್ಲಿ 3 ರಿಂದ 5 ಲಕ್ಷದವರೆಗೆ ಅಂಡಾಣುಗಳಿರುತ್ತವೆ. ಮುಟ್ಟಂತ್ಯ ತಲುಪುವಷ್ಟರ ಹೊತ್ತಿಗೆ ಎಲ್ಲ ಅಂಡಾಣುಗಳು ಕ್ರಮೇಣ ನಾಶವಾಗುತ್ತವೆ. 35ನೇ ವಯಸ್ಸಿನ ಹೊತ್ತಿಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಭಾರಿ ವೇಗದಲ್ಲಿ ಕುಸಿಯುತ್ತದೆ. ಇಂತಹ ಸ್ಥಿತಿಯಲ್ಲಿ ಅಂಡಾಣುಗಳ ಗುಣಮಟ್ಟ ಕುಸಿಯುವುದರಿಂದ ಬಹಳಷ್ಟು ಮಹಿಳೆಯರ ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಜೀವನಶೈಲಿಯಲ್ಲಿ ಬದಲಾವಣೆ
ಈ ಶ್ರೇಣಿಯಲ್ಲಿ ಬರುವ ಹೆಚ್ಚಿನ ಜೋಡಿಗಳು `ಟೈಪ್‌ಎ’ ವ್ಯಕ್ತಿತ್ವದವರಾಗಿರುತ್ತಾರೆ. ಅವರಲ್ಲಿ ಕೆಲವು ಮಹತ್ವದ ವಿಶೇಷತೆಗಳನ್ನು ಕಾಣಬಹುದಾಗಿದೆ. ಅಂತಹ ಕೆಲವು ವಿಶೇಷತೆಗಳೆಂದರೆ, ಅವರು ವರ್ಕೋಹಾಲಿಕ್‌ಆಗಿರುತ್ತಾರೆ. ಅತಿಯಾದ ಮಹತ್ವಾಕಾಂಕ್ಷೆ ಉಳ್ಳವರಾಗಿರುತ್ತಾರೆ. ಅವರು ಅಷ್ಟೇ ಬೇಗನೆ ದಿಗಿಲುಗೊಳ್ಳುತ್ತಾರೆ, ಒತ್ತಡಕ್ಕೊಳಗಾಗುತ್ತಾರೆ. ಯಶಸ್ವಿ ಗರ್ಭಧಾರಣೆಗಾಗಿ ದಂಪತಿಗಳು ಒತ್ತಡಮುಕ್ತರಾಗಿರುವುದು ಹಾಗೂ ನಿಯಮಿತವಾಗಿ ದೈಹಿಕ ಸಂಬಂಧ ಹೊಂದುವುದು ಅತ್ಯವಶ್ಯಕ.
ನಿಮ್ಮ ಕೆಲಸಕ್ಕೆ ಸಂಬಂಧಪಟ್ಟ ಜವಾಬ್ದಾರಿಗಳು ಮತ್ತು ಒತ್ತಡದ ಕಾರಣದಿಂದಾಗಿ ಇದು ಬಹುಶಃ ಸಾಧ್ಯವಾಗುವುದಿಲ್ಲ. ಇಂತಹ ಒತ್ತಡಮಯ ಜೀವನಶೈಲಿ ಬಹಳಷ್ಟು ಜನರನ್ನು ಧೂಮಪಾನ ಹಾಗೂ ಆಲ್ಕೋಹಾಲ್‌ನಂತಹ ಚಟಗಳಿಗೆ ತುತ್ತಾಗಿಸುತ್ತವೆ. ಇವು ಅವರ ವೀರ್ಯಾಣು ಮತ್ತು ಅಂಡಾಣುಗಳ ಗುಣಮಟ್ಟದಲ್ಲಿ ಕುಸಿತವನ್ನುಂಟು ಮಾಡಿ, ಸಂತಾನೋತ್ಪತ್ತಿಯನ್ನು ಇನ್ನೂ ಕಠಿಣಗೊಳಿಸುತ್ತವೆ.
ಕೆಲಸದ ಒತ್ತಡ ಮತ್ತು ಜೀವನದ ಇತರೆ ಹೊಣೆಗಾರಿಕೆಗಳ ಜೊತೆಗೆ ಹೊಂದಾಣಿಕೆ ಸಾಧಿಸುವ ಪ್ರಯತ್ನ ಮಾಡುವುದರ ಜೊತೆಜೊತೆಗೆ, ದಂಪತಿಗಳ ಆಹಾರದ ಅಭ್ಯಾಸಗಳು ಕೂಡ ಬದಲಾಗಿವೆ. ಅವರು ಹೆಚ್ಚಾಗಿ ಸ್ನ್ಯಾಕ್ಸ್ ಮೇಲೆ ಅವಲಂಬಿತರಾಗಿದ್ದಾರೆ. ಅದರಲ್ಲಿ ಫಾಸ್ಟ್ ಫುಡ್‌ನ ಪ್ರಮಾಣ ಅಧಿಕವಾಗಿದೆ. ಒಂದು ರೀತಿಯಲ್ಲಿ ಅವರು ಧಾವಂತದ ಜೀವನಶೈಲಿ ನಡೆಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ವ್ಯಾಯಾಮಕ್ಕೆ ಅವಕಾಶವೇ ಸಿಗುವುದಿಲ್ಲ. ಈ ಅಸ್ವಸ್ಥ ಜೀವನಶೈಲಿ ಅವರನ್ನು ಬೊಜ್ಜು, ಮಧುಮೇಹದ ಕಪಿಮುಷ್ಟಿಗೆ ಸಿಲುಕಿಸುತ್ತಿದೆ.
ಇದು ಗರ್ಭಧಾರಣೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಹಾಗೊಮ್ಮೆ ಗರ್ಭಧಾರಣೆ ಆದರೂ ಅದು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಇಲ್ಲದಿದ್ದರೆ ಕೂಸು ಹುಟ್ಟುತ್ತಲೇ ಅನೇಕ ತೊಂದರೆಗಳನ್ನು ಪಡೆದುಕೊಂಡು ಹುಟ್ಟುವ ಸಾಧ್ಯತೆ ಇರುತ್ತದೆ.
ಕುಟುಂಬ ಕೆರಿಯರ್‌ನಲ್ಲಿ ಹೊಂದಾಣಿಕೆ
ಈ ಎಲ್ಲ ಸಮಸ್ಯೆಗಳಿಗೆ ಒಂದು ಪರಿಹಾರವಿದೆ. ನಿಸರ್ಗದ ಕಡೆ ವಾಪಸ್ಸಾಗುವುದು. ಒಬ್ಬ ಮಹಿಳೆಯ ದೈಹಿಕ ರಚನೆ ಜಗತ್ತಿನ ಎಲ್ಲಕ್ಕೂ ಮಹತ್ವಪೂರ್ಣ ಹಾಗೂ ಗೌರವಾಸ್ಪದ ಕಾರ್ಯಕ್ಕೆ ಪೂರಕವಾಗಿರುತ್ತದೆ. ಈ ನಿಸರ್ಗದತ್ತ ವಿಶೇಷತೆಯ ಲಾಭ ಪಡೆದುಕೊಳ್ಳಲು, ಕುಟುಂಬ ರೂಪಿಸಿಕೊಳ್ಳುವುದನ್ನು 23-24ನೇ ವಯಸ್ಸಿನಲ್ಲಿಯೇ ಆರಂಭಿಸಿದರೆ ಒಳ್ಳೆಯದು. ಒಂದುವೇಳೆ ತಡವಾದರೆ 30ಕ್ಕೂ ಮುಂಚೆಯಾದರೂ ಆರಂಭಿಸುವುದು ಸೂಕ್ತ. ಬಹಳಷ್ಟು ಮಹಿಳೆಯರು ಹೀಗೆ ಮಾಡಿದ್ದಾರೆ. ಇದರ ಒಂದು ವಿಶೇಷತೆಯೆಂದರೆ, ಅವರು ಕುಟುಂಬ ಹಾಗೂ ಉದ್ಯೋಗದ ನಡುವೆ ಸಮತೋಲನ ಕಾಯ್ದುಕೊಳ್ಳುವುದರ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ.
ಮಾತೃತ್ವ ಹಾಗೂ ತಮ್ಮ ಜೀವನಕ್ಕೆ ಸಂಬಂಧಪಟ್ಟಂತೆ ಇತರೆ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಈ ಪಯಣದಲ್ಲಿ ಗಂಡ ಹಾಗೂ ಗಂಡನ ಮನೆಯವರ ಸಹಕಾರ ಮುಖ್ಯವಾಗಿರುತ್ತದೆ.
ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ
ನಿಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿ.
ಸಮಾಗಮದ ಸಮಯದಲ್ಲಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ.
ದೇಹದಲ್ಲಿ ಹಾರ್ಮೋನುಗಳ ಮಟ್ಟ ಸಮರ್ಪಕವಾಗಿಟ್ಟುಕೊಳ್ಳಲು ಹಾಗೂ ಅದರ ಮಟ್ಟ ಹೆಚ್ಚಿಸಲು ಆಹಾರದಲ್ಲಿ ಕ್ಯಾಲ್ಶಿಯಂ, ವಿಟಮಿನ್`ಡಿ’, ಝಿಂಕ್, ವಿಟಮಿನ್`ಸಿ’ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಸೇರ್ಪಡೆ ಮಾಡಿಕೊಳ್ಳಿ.
ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದಲ್ಲಿ, ಕೆಫಿನ್‌ಮತ್ತು ಮದ್ಯಪಾನದ ಚಟ ಇದ್ದಲ್ಲಿ ಅದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಿ.
ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಕೂಡ ಒಳ್ಳೆಯದಲ್ಲ. ಕಡಿಮೆ ಪರಿಣಾಮಕಾರಿ ಏರೋಬಿಕ್ಸ್ ವ್ಯಾಯಾಮ ಮಾಡಿ. ಸೈಕಲ್ ತುಳಿಯುವುದು, ನಡೆಯುವುದು, ಈಜು ಮುಂತಾದ.ಸರಿಯಾದ ವಾತಾವರಣ ಯಾವುದೇ ತೊಂದರೆ ಇಲ್ಲದೆ ಹಾಗೂ ಬೇಗ ಗರ್ಭಧಾರಣೆಯಾಗಲು ದಂಪತಿಗಳಿಗೆ ಒಳ್ಳೆಯ ವಾತಾವರಣ ಅತ್ಯನಶ್ಯಕ. ಇದಕ್ಕಾಗಿ ಅವರು ಒತ್ತಡರಹಿತ ಹಾಗೂ ನೆಮ್ಮದಿದಾಯಕ ಜೀವನ ನಡೆಸಬೇಕು. ಇಂತಹ ದಂಪತಿಗಳಿಗೆ ರಿಲ್ಯಾಕ್ಸೇಶನ್‌ಥೆರಪಿ ಉಪಯುಕ್ತವಾಗಿ ಪರಿಣಮಿಸಬಹುದು. ಏಕೆಂದರೆ ಇದರಿಂದ ಒತ್ತಡ ಕಡಿಮೆಯಾಗುತ್ತದೆ. ದಂಪತಿಗಳು ಆಲ್ಕೋಹಾಲ್ ಹಾಗೂ ಧೂಮಪಾನದಿಂದಲೂ ದೂರ ಇರಬೇಕು. ಅವರು ಸಮತೋಲನದಿಂದ ಕೂಡಿದ ಜೀವನ ನಡೆಸಬೇಕು. ಅದರಲ್ಲಿ ಸಕ್ಕರೆ, ಉಪ್ಪು, ಫ್ಯಾಟ್‌ಕಡಿಮೆ ಇರುವ ಆಹಾರ ಸೇರ್ಪಡೆ ಮಾಡಿಕೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ದಿನವಿಡೀ 2 ಲೀಟರ್‌ಗಿಂತ ಹೆಚ್ಚು ನೀರು ಅವಶ್ಯ ಸೇವಿಸಬೇಕು. ವ್ಯಾಯಾಮವನ್ನು ದಿನಚರಿಯ ಒಂದು ಭಾಗವಾಗಿ ಮಾಡಿಕೊಳ್ಳಬೇಕು. ಶಾಂತ, ಒತ್ತಡಮುಕ್ತ ಹಾಗೂ ಆರೋಗ್ಯಕರ ಜೀವನಶೈಲಿ ಅನುಸರಿಸುವುದರ ಮೂಲಕ ದಂಪತಿಗಳು ಆರೋಗ್ಯವಂತ ಮಗುವಿನ ತಮ್ಮ ಇಚ್ಛೆಯನ್ನು ಸುಲಭವಾಗಿ ಈಡೇರಿಸಿಕೊಳ್ಳಬಹುದು.
– ಡಾ. ಜಮುನಾ ರಾವ್
ಅಂಧ ಮಾತೆ ಮಗುವನ್ನು ನೋಡಿದಳು!
ಅಮ್ಮ ತನ್ನ ಕಂದನನ್ನು ಮನಸ್ಸೆಂಬ ಕನ್ನಡಿಯಿಂದ ನೋಡಬಹುದು ಎಂದು ಹೇಳಲಾಗುತ್ತದೆ. ಆದರೆ ಅಂಧ ಮಾತೆಯೊಬ್ಬಳು ಹೊಸ ತಂತ್ರಜ್ಞಾನದ ಸಹಾಯದಿಂದ ತನ್ನ ಕಂದನನ್ನು ನೋಡಿದಳು.
ಅಂದಹಾಗೆ ಆ್ಯಂಟೆರಿಯಾ ನಿವಾಸಿಯಾಗಿರುವ 29 ವರ್ಷದ ಕ್ಯಾಥಿ ಬ್ಯಾಟೂಜ್‌ರ ಕಣ್ಣಿನ ದೃಷ್ಟಿ ಹಲವು ವರ್ಷಗಳ ಹಿಂದೆಯೇ ಹೊರಟುಹೋಗಿತ್ತು. ಆಕೆ ಕಂಪ್ಯೂಟರೀಕೃತ ಇಗ್ಲಾಸ್‌ನೆರವಿನಿಂದ ತನ್ನ ಹುಟ್ಟಿದ ಮಗುವನ್ನು ನೋಡಿ ಖುಷಿಯಿಂದ ಕುಣಿದು ಕುಪ್ಪಳಿಸಿದಳು. ಮಗುವಿನ ಕೈಕಾಲುಗಳು ನನ್ನಂತೆಯೇ ಇವೆ ಎಂದು ಹೇಳಿದಳು.
ಇ-ಗ್ಲಾಸ್‌ನ್ನು ಉತ್ತರ ಅಮೆರಿಕದ 1500ಕ್ಕೂ ಹೆಚ್ಚು ಜನರು ಯಶಸ್ವಿಯಾಗಿ ಬಳಸಿದ್ದಾರೆ. ಈ ಇ-ಗ್ಲಾಸ್‌ನಲ್ಲಿರುವ ಒಂದು ವಿಡಿಯೋ ಕ್ಯಾಮೆರಾ ಮತ್ತು ಸೆನ್ಸರ್‌ನೆರವಿನಿಂದ ಎದುರಿಗಿನ ವಸ್ತು ಅಥವಾ ವ್ಯಕ್ತಿಯ ಚಿತ್ರಗಳ ಮಾಹಿತಿಯನ್ನು ಮೆದುಳಿನ ದೃಶ್ಯ ಕೇಂದ್ರಕ್ಕೆ ರವಾನಿಸುತ್ತದೆ. ಅದು ಕೆಲವೇ ಸೆಕೆಂಡುಗಳಲ್ಲಿ ಚಿತ್ರದ ರೂಪ ಪಡೆದುಕೊಳ್ಳುತ್ತದೆ. ಕ್ಯಾಥಿಯ ಕಿರಿಯ ಸೋದರಿ ಈ ಘಟನೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದಳು. ಅದನ್ನು ಲಕ್ಷಾಂತರ ಜನ ವೀಕ್ಷಿಸಿದರು.