ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಕೇಬಲ್ಗಳು ಸುಟ್ಟು ಬೂದಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಬ್ಯಾಂಕ್ ಸರ್ಕಲ್ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ಘಟನೆ ನಡೆದಿದೆ. ಅಡ್ವಾನ್ಸ್ ಟೆಕ್ನಾಲಜೀಸ್ ಯುನಿಟ್ 2 ಕಂಪನಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಇದು ಕೇಬಲ್ ತಯಾರಿಕಾ ಕಂಪನಿಯಾಗಿದ್ದು, ಮೊದಲಿಗೆ ಕಂಪನಿಯಲ್ಲಿರುವ ಮರದ ತುಂಡುಗಳಿಗೆ ಹೊತ್ತಿಕೊಂಡ ಬೆಂಕಿ ಇಡೀ ಕಂಪನಿಗೆ ಆವರಿಸಿದೆ. ನಂತರ ಕೇಬಲ್ಗಳಿಗೂ ವ್ಯಾಪಿಸಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ, ನೋಡನೋಡುತ್ತಿದ್ದಂತೆಯೇ ಇಡೀ ಫ್ಯಾಕ್ಟರಿಯನ್ನು ಆವರಿಸಿಕೊಂಡಿದೆ. ಸುಮಾರು ಒಂದು ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು, ಆಕಾಶದೆತ್ತರಕ್ಕೆ ಚಿಮ್ಮುತ್ತಿರುವ ದಟ್ಟ ಹೊಗೆಯ ಕಾರ್ಮೋಡ ಕಿಲೋಮೀಟರ್ ದೂರದವರೆಗೂ ಕಾಣಿಸುತ್ತಿತ್ತು.
ಕಾರ್ಖಾನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಹೊರಓಡಿ ಬಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆದರೆ, ಕೇಬಲ್ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್, ರಬ್ಬರ್ ಮತ್ತು ಕೆಮಿಕಲ್ ಸೇರಿದಂತೆ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಜ್ವಾಲೆ ನಿಯಂತ್ರಣಕ್ಕೆ ಬಂದಿಲ್ರುಲ. 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಮತ್ತು 100ಕ್ಕೂ ಹೆಚ್ಚು ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಕಿ ನಂದಿಸಲು ನೀರಿನ ಅಭಾವದ ಹಿನ್ನೆಲೆಯಲ್ಲಿ, ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳೀಯ ರೈತರ ತೋಟಗಳ ಪಂಪ್‌ಸೆಟ್‌ಗಳಿಂದ ನೀರನ್ನು ತರಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಬೆಂಕಿ ಪಕ್ಕದ ಇತರ ಕೈಗಾರಿಕೆಗಳಿಗೆ ಹರಡದಂತೆ ತಡೆಯಲು ‘ಫೈರ್ ಬ್ರೇಕ್’ ತಂತ್ರಜ್ಞಾನ ಬಳಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಖಾನೆಯ ಸುತ್ತಮುತ್ತಲಿನ ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ದೊಡ್ಡಬಳ್ಳಾಪುರ ತಹಶಿಲ್ದಾರ್ ಮಲ್ಲಪ್ಪ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ಎಸ್‌ಡಿಆರ್‌ಎಫ್ (SDRF) ತಂಡವೂ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಸಹಾಯ ಮಾಡಿದೆ.
ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎನ್ನಲಾಗಿದೆ.





