ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಗುರುತಿಸಿಕೊಳ್ಳುವುದು ಸಹ ಇಂದಿನ ದಿನಮಾನದಲ್ಲಿ ಬಹಳ ಕ್ಲಿಷ್ಟಕರ ಸಂಗತಿ. ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಕಾಣಬೇಕಾದರೆ ಅವರು ಬಹಳ ದೊಡ್ಡ ಪ್ರಮಾಣದಲ್ಲಿ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿಯೂ ಎಲ್ಲರನ್ನೂ ಹಿಂದಿಕ್ಕಿ ಒಂದಲ್ಲ ಎರಡೆರಡು ಕ್ಷೇತ್ರಗಳಲ್ಲಿ ಸಾಧನೆಗೈದ ಸೋದರಿಯರಿಬ್ಬರ ಕಥೆ ಇದು. ಸಾಧಿಸುವ ಛಲ, ಉತ್ತಮ ಬೆಂಬಲ ಸಿಕ್ಕರೆ ಯಶಸ್ಸು ಗಳಿಸುವುದು ಎಷ್ಟು ಮಾತ್ರಕ್ಕೂ ಕಷ್ಟವಲ್ಲ ಎನ್ನುವುದು ತಿಳಿಯಬೇಕಾದರೆ ಈ ಸೋದರಿಯರ ಬಗ್ಗೆ ತಿಳಿಯಬೇಕು. ಅವರೇ ನಮಿತಾ ರಾವ್ ಹಾಗೂ ನಮ್ರತಾ ರಾವ್.
ಮೂಲತಃ ಮಂಗಳೂರಿನವರಾದ ಇವರು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಇಂದು ಈ ಇಬ್ಬರು ಸೋದರಿಯರು ಆ್ಯಕ್ಸೆಂಚರ್ ಹಾಗೂ ಇನ್ಛೋಸಿಸ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೃತ್ಯ ಹಾಗೂ ಸ್ಕೇಟಿಂಗ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ.
ಕುಮಾರನ್ಸ್ ಸ್ಕೂಲ್ ಹಾಗೂ ಕಾರ್ಮೆಲ್ಸ್ ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದ ಇವರು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಎಂಜಿನಿಯರಿಂಗ್ ಪದವಿ ಶಿಕ್ಷಣ ಮುಗಿಸುತ್ತಿದ್ದಂತೆಯೇ ಇಬ್ಬರಿಗೂ ಕ್ಯಾಂಪಸ್ ಆಯ್ಕೆಯಲ್ಲಿಯೇ ಪ್ರಖ್ಯಾತ ಸಂಸ್ಥೆಗಳಲ್ಲಿ ಕೆಲಸ ದೊರಕಿತು.
ನಮಿತಾ ರಾವ್
ನಮಿತಾ ಏಳು ವರ್ಷದವರಾಗಿದ್ದಾಗಲೇ ನೃತ್ಯಾಭ್ಯಾಸಕ್ಕೆ ತೊಡಗಿದ್ದರು. ಸುಂದರಿ ಸಂತಾನಂ ಇವರ ನೃತ್ಯ ಗುರುಗಳು. ಸುಂದರಿಯರು ಪ್ರಖ್ಯಾತ ನೃತ್ಯಗಾರ್ತಿಯಾದ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆಯಾಗಿದ್ದರು. ನಮಿತಾ 2003ರಲ್ಲಿ ಭರತನಾಟ್ಯ ಜೂನಿಯರ್ ಹಾಗೂ 2006ರಲ್ಲಿ ಸೀನಿಯರ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. 2003ರಲ್ಲಿ ದೂರದರ್ಶನದಲ್ಲಿ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ನಮಿತಾ, ಇದುವರೆಗೂ ಸರಿಸುಮಾರು 50ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ.
ಅವುಗಳಲ್ಲಿ ಪ್ರಮುಖವಾದ ಸತ್ಯ ಸಾಯಿಬಾಬಾರ 70ನೇ ವರ್ಷದ ಜನ್ಮದಿನಕ್ಕಾಗಿ ಪುಟ್ಟಪರ್ತಿಯಲ್ಲಿ ನಡೆದ ನೃತ್ಯ ಪ್ರದರ್ಶನ, 2002ರಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂರ ಸಮ್ಮುಖ ತಮಿಳುನಾಡಿನ ನಾಗಾ ಪಟ್ಟಣಂನಲ್ಲಿ ನಡೆದ ನೃತ್ಯ ಕಾರ್ಯಕ್ರಮ, 2003ರಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂರ ನೃತ್ಯ ಶಾಲೆಯ ಸ್ವರ್ಣ ಮಹೋತ್ಸವ ಸಮಯದಲ್ಲಿ ಚೆನ್ನೈನಲ್ಲಿ ನಡೆಸಿಕೊಟ್ಟ ನೃತ್ಯ ಪ್ರದರ್ಶನ, ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಅವರ 70ನೇ ವರ್ಷದ ಜನ್ಮದಿನದ ಕಾರ್ಯಕ್ರಮ, ಲಂಡನ್‌ನಲ್ಲಿ ಬ್ರಿಟನ್ ರಾಣಿ ಎಲಿಜಬೆತ್‌ರ ಬೆಳ್ಳಿ ಹಬ್ಬ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಇವರು ರಾಣಿಯ ಸಮ್ಮುಖದಲ್ಲಿ ನೃತ್ಯ ರೂಪಕವನ್ನು ಅಭಿನಯಿಸಿ ಭೇಷ್ ಎನಿಸಿಕೊಂಡರು.
ಇದಲ್ಲದೆ ಇವರು ನವರಾತ್ರಿ ವಿಶೇಷ ಕಾರ್ಯಕ್ರಮಗಳಲ್ಲಿ ಮಂಗಳೂರು ಮಂಗಳಾದೇವಿ ದೇವಾಲಯ, ಕಟೀಲಿನ ದುರ್ಗಾ ಪರಮೇಶ್ವರಿ ದೇವಾಲಯಗಳಲ್ಲಿ ತಮ್ಮ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಧರ್ಮಸ್ಥಳದಲ್ಲಿನ ಸರ್ವಧರ್ಮ ಸಮ್ಮೇಳನದಲ್ಲಿಯೂ ಇವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಅಲ್ಲಿ ನೆರೆದ ದೇಶ ವಿದೇಶದ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು.
ನಮಿತಾ ನೃತ್ಯದಲ್ಲಷ್ಟೇ ಅಲ್ಲದೆ, ರೋಲರ್ ಸ್ಕೇಟಿಂಗ್‌ನಲ್ಲಿಯೂ ಸಾಕಷ್ಟು ಉನ್ನತ ದರ್ಜೆಯ ಸಾಧನೆ ಮಾಡಿದ್ದಾರೆ. ತಮ್ಮ ಏಳನೇ ವಯಸ್ಸಿನಲ್ಲಿ ಬೆಂಗಳೂರಿನ ಗಾರ್ಡನ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಸ್ಕೇಟಿಂಗ್ ಅಭ್ಯಾಸದಲ್ಲಿ ತೊಡಗಿದ ಇವರು, ರಾಷ್ಟ್ರಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಹಲವಾರು ಪದಕಗಳನ್ನು ಜಯಿಸಿದ್ದಾರೆ.
ನಮಿತಾರಿಗೆ ಸಂದ ಪ್ರಶಸ್ತಿ, ಗೌರವಗಳು ಎಂದರೆ, ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸುವ ಯುವ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಮಿತಾ ಪ್ರಥಮ ಸ್ಥಾನ, 2000ನೇ ವರ್ಷದಲ್ಲಿ ಎಡಿಸ್‌ಬರ್ಗ್‌ನ ಡ್ಯೂಕ್ಲೆ ಎನ್ನುವಲ್ಲಿ ನೀಡುವ `ಇಂಟರ್ ನ್ಯಾಷನಲ್ ಅವಾರ್ಡ್ ಫಾರ್ ಯಂಗ್ ಪೀಪಲ್’ ಗೌರವ, ಆರ್ಯಭಟ ಸಾಂಸ್ಕೃತಿಕ ಸಂಘ ಕೊಡ ಮಾಡುವ `ಕಲಾ ಕುಸುಮ’ ಪುರಸ್ಕಾರ, 2001ರಲ್ಲಿ ನಮಿತಾಗೆ ಒಲಿದು ಬಂದಿತ್ತು. ಕಂಟ್ರಿ ಕ್ಲಬ್, ಬೆಂಗಳೂರು ಆಯೋಜಿಸಿದ್ದ `ಬೂಗಿ ಊಗಿ’ ನೃತ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ನೃತ್ಯ ಕಲಾವಿದೆಯಾಗಿ ಆಯ್ಕೆಗೊಂಡಿದ್ದರು. ಕರ್ನಾಟಕ ನೃತ್ಯ ಕಲಾ ಪರಿಷತ್ತು ನಡೆಸಿದ್ದ `ಯಂಗ್‌ಡ್ಯಾನ್ಸ್ ಫೆಸ್ಟಿವ್’ನಲ್ಲಿ ಸಹ ನಮಿತಾರಿಗೆ ಪ್ರಶಂಸನಾ ಪತ್ರ ಸಿಕ್ಕಿತ್ತು.
ನಮಿತಾ ಕೇವಲ ನೃತ್ಯ ಹಾಗೂ ಸ್ಕೇಟಿಂಗ್‌ಗಳಲ್ಲಷ್ಟೇ ಅಲ್ಲದೆ, ಟ್ಯಾಟೂ ಸ್ಕೆಚಿಂಗ್ಸ್ ಮತ್ತು ಮಾಡೆಲಿಂಗ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಇವರು ಬಿಡುವಾದಾಗಲೆಲ್ಲಾ ಸ್ಕೆಚಿಂಗ್ಸ್ ನಲ್ಲಿ ತೊಡಗಿಸಿಕೊಳ್ಳುತ್ತಾರೆ. ನಮಿತಾ ತಾವು ಭವಿಷ್ಯದಲ್ಲಿ ಟ್ಯಾಟೂಯಿಂಗ್‌ನಲ್ಲಿ ಹೆಚ್ಚೆಚ್ಚು ಮುಂದುವರಿಯಬೇಕೆನ್ನುವ ಆಸಕ್ತಿ ಹೊಂದಿದ್ದಾರೆ.
ನಮ್ರತಾ ರಾವ್
ನಮ್ರತಾ ರಾವ್ ಸಹ ತನ್ನ ಸಹೋದರಿಯಂತೆಯೇ ಸ್ಕೇಟಿಂಗ್ ಹಾಗೂ ನೃತ್ಯ ಎರಡೂ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ತಮ್ಮ ಅಣ್ಣಂದಿರು, ಸೋದರ ಸಂಬಂಧಿಗಳ, ಸ್ಕೇಟಿಂಗ್ ಪ್ರತಿಭೆಯಿಂದ ಸ್ಛೂರ್ತಿ ಹೊಂದಿದ ಇವರು ತಮ್ಮ 5ನೇ ವಯಸ್ಸಿನಲ್ಲಿ ಸ್ಕೇಟಿಂಗ್ ಅಭ್ಯಾಸ ಪ್ರಾರಂಭಿಸಿದರು. ಇವರಿಗೆ ಆರ್ಟಿಸ್ಟಿಕ್ ಸ್ಕೇಟಿಂಗ್‌ಗಿಂತಲೂ ಸ್ಪೀಡ್ ಸ್ಕೇಟಿಂಗ್‌ನಲ್ಲಿ ಹೆಚ್ಚು ಆಸಕ್ತಿ ಇತ್ತು. ಬೆಳಗಿನ ವೇಳೆ ಹಾಗೂ ಸಂಜೆ ಪ್ರತಿದಿನ ಸತತ ಅಭ್ಯಾಸ ನಡೆಸಿದ ಫಲವಾಗಿ ಇವರು ರೋಲರ್ ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದವರೆಗೂ ತಲುಪಲು ಸಾಧ್ಯವಾಯಿತು.
2003ರಲ್ಲಿ ಇಟಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು 2008ರಲ್ಲಿ ಸ್ಪೇನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದರು. ಸ್ಕೇಟಿಂಗ್‌ನಲ್ಲಿ ಇದುವರೆಗೂ ಸುಮಾರು 60 ಪದಕಗಳನ್ನು ಗಳಿಸಿರುವ ನಮ್ರತಾ ತಮ್ಮ ಅಕ್ಕನ ದಾರಿಯಲ್ಲೇ ನಡೆದು ಮಾದರಿಯಾಗಿದ್ದಾರೆ.
ಶಾಲಾ ದಿನಗಳಲ್ಲಿ ಹಿಂದೆ ಚಲಚಿತ್ರ ಗೀತೆಗಳಿಗೆ ಅಭಿನಯಿಸುತ್ತಿದ್ದ ನಮ್ರತಾ ಎಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ನೃತ್ಯವನ್ನು ಗಂಭೀರವಾಗಿ ಅಭ್ಯಸಿಸಲು ಮೊದಲು ಮಾಡಿದರು. ಇದೀಗ ಶಾಸ್ತ್ರೀಯ ನೃತ್ಯ ಹಾಗೂ ಪಾಶ್ಚಾತ್ಯ ನೃತ್ಯ ಶೈಲಿಗಳೆರಡರಲ್ಲಿಯೂ ಸೈ ಎನಿಸಿಕೊಂಡಿರು ಇವರು ಇದುವರೆಗೂ ಸಾಕಷ್ಟು ಸಂಖ್ಯೆಯಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಲಂಡನ್‌ನಲ್ಲಿ ರಾಣಿ ಎಲಿಜಬೆತ್‌ರ ಸಮ್ಮುಖದಲ್ಲಿ ನಡೆದ ನೃತ್ಯ ಕಾರ್ಯಕ್ರಮ ಹಾಗೂ ಅಮಿತಾಬ್ ಬಚ್ಚನ್‌ರ 70ನೇ ಜನ್ಮದಿನದ ಕಾರ್ಯಕ್ರಮಗಳಲ್ಲಿ ತನ್ನ ಸಹೋದರಿ ನಮಿತಾ ಅವರೊಡನೆ ನಮ್ರತಾ ಸಹ ಪಾಲ್ಗೊಂಡು ತಮ್ಮ ಅಮೋಘ ನೃತ್ಯ ಪ್ರದರ್ಶನ ನೀಡಿ, ಸಭಿಕರ ಕಣ್ಮನಗಳನ್ನು ಸೂರೆಗೊಂಡಿದ್ದರು. ಇಷ್ಟೇ ಅಲ್ಲದೆ ನಮ್ರತಾ, ಪೇಂಟಿಂಗ್ಸ್ ನಲ್ಲಿ ಆಸಕ್ತಿ ಹೊಂದಿದ್ದು ಆಗಾಗ ಸ್ಕೆಚಿಂಗ್ ಮತ್ತು ಪೇಂಟಿಂಗ್ಸ್ ಸಹ ಮಾಡುತ್ತಾರೆ. ಇವರ ಈ ಬಹುಮುಖ ಪ್ರತಿಭೆ ಹಾಗೂ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ, ಇವರ ಸ್ಕೇಟಿಂಗ್ ಹಾಗೂ ನೃತ್ಯ ಸೇರಿದಂತೆ ಸಮಗ್ರ ಸಾಧನೆಗೆ ಒಲಿದು ಬಂದ 2005ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಕರ್ನಾಟಕ ರಾಜ್ಯ ಸರ್ಕಾರದ ಪುರಸ್ಕಾರ, ಇವರು ಕಾರ್ಯ ನಿರ್ವಹಿಸುತ್ತಿರುವ ಆ್ಯಕ್ಸೆಂಚರ್ ಸಂಸ್ಥೆ ಇವರ ಉತ್ತಮ ಕಾರ್ಯದಕ್ಷತೆಯನ್ನು ಗುರುತಿಸಿ ನೀಡಿದ ನ್ಯುಮರೋ ಉನೋ ಅವಾರ್ಡ್.
ಇಂದು ಮಹಿಳೆಯರು ತಾವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರುತ್ತಿರುವ ಸಮಯ. ಹಾಗಾಗಿ ಮನೆಯವರ ಪ್ರೋತ್ಸಾಹ, ತಂದೆ ತಾಯಿ, ಪತಿಯ ಸಹಾಕರವಿದ್ದರೆ ಹೆಣ್ಣು ತಾನು ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎನ್ನುವ ನಮಿತಾ, ನಮ್ರತಾ ಸೋದರಿಯರು ಹೆಣ್ಣುಮಕ್ಕಳೆಂದರೆ ಕೇವಲ ಮದುವೆಯಾಗಿ ಮನೆ ಸಂಸಾರವೆಂದಷ್ಟೇ ಯೋಚಿಸದೆ ಅವರಲ್ಲಿಯೂ ಸಾಮರ್ಥ್ಯವಿದೆ ಎನ್ನುವುದನ್ನು ಗುರುತಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕಿದೆ ಎನ್ನುತ್ತಾರೆ. ಸತತ ಪರಿಶ್ರಮ ಶ್ರದ್ಧೆಗಳಿದ್ದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದು ಈ ಸೋದರಿಯರ ಅಂಬೋಣ. ತಮ್ಮ ನೃತ್ಯ ಗುರುಗಳಾದ ಸುಂದರಿ ಸಂತಾನಂ. ಅವರ ನೃತ್ಯ ಗುರುಗಳಾಗಿದ್ದ ಡಾ. ಪದ್ಮಾ ಸುಬ್ರಹ್ಮಣ್ಯಂ ಇವರುಗಳೇ ತಮ್ಮ ರೋಲ್ ಮಾಡೆಲ್‌ಗಳು ಎನ್ನುವ ನಮಿತಾ ನೃತ್ಯ ಕ್ಷೇತ್ರದಲ್ಲಿ ನಾವಿನ್ನೂ ಕಲಿಯಬೇಕಾದದ್ದು ಬಹಳಷ್ಟಿದೆ, ಇನ್ನೂ ಬಹಳ ದೂರ ಸಾಗಬೇಕಿದೆ ಎನ್ನುತ್ತಾರೆ.
ನಮ್ರತಾ ಮಾತ್ರ, ನನಗೆ ನನ್ನ ಅಕ್ಕನೇ ರೋಲ್ ಮಾಡೆಲ್. ನಾನು ಚಿಕ್ಕಂದಿನಿಂದ ಅವರನ್ನೇ ನೋಡಿಕೊಂಡು ಬೆಳೆದವಳಾದುದರಿಂದ ಅವರೇ ನನ್ನ ಉತ್ತಮ ರೋಲ್ ಮಾಡೆಲ್ ಆಗಬಲ್ಲರು ಎನ್ನುತ್ತಾರೆ. ಹೀಗೆ ಬಹುಮುಖ ಪ್ರತಿಭೆ ಹೊಂದಿದ ನಮ್ಮ ನಾಡಿನ ಪ್ರತಿಭಾನ್ವಿತ ಸೋದರಿಯರು ತಮ್ಮ ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿ, ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆಯಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.
– ರಾಘವೇಂದ್ರ ಅಡಿಗ ಎಚ್ಚೆನ್