``ನನ್ನ ಮಗಳು ಎಕನಾಮಿಕಲಿ, ಎಮೋಶನಲಿ ಹಾಗೂ ಸೆಕ್ಶುಲಿ ಇಂಡಿಪೆಂಡೆಂಟ್ ಆಗಿದ್ದಾಳೆ. ಹಾಗಾದರೆ ಅವಳಿಗೆ ಮದುವೆಯ ಅವಶ್ಯಕತೆಯಾದರೂ ಏನಿದೆ?''
`ಪೀಕೂ' ಚಲನಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹೇಳಿದ ಈ ಸಂಭಾಷಣೆ ಮೆಟ್ರೋ ಸಿಟಿಗಳಲ್ಲಿ ವಾಸಿಸುವ ಪ್ರತಿಯೊಬ್ಬ ಸ್ವತಂತ್ರ ಹುಡುಗಿಯ ಕನಸಾಗುತ್ತ ಹೊರಟಿದೆ. ಈಗ ಪ್ರತಿಯೊಬ್ಬ ಹುಡುಗಿ ತನ್ನದೇ ಆದ ರೀತಿಯಲ್ಲಿ ಜೀವನದ ನಿರ್ಣಯ ತೆಗೆದುಕೊಳ್ಳಲು ಇಷ್ಟಪಡುತ್ತಾಳೆ. ಆದರೆ ಮದುವೆ ಯಾವಾಗ ಆಗಬೇಕು, ಆಗಬೇಕೊ ಬೇಡವೋ ಎಂಬುದನ್ನು ತಾನೇ ಸ್ವತಃ ನಿರ್ಧರಿಸಬೇಕೆನ್ನುತ್ತಾಳೆ. ಅವರು ತಮ್ಮದೇ ಆದ ರೀತಿಯಲ್ಲಿ ಜೀವಿಸಲು ಇಷ್ಟಪಡುತ್ತಾರೆ.
ಬೆಂಗಳೂರಿನ ಶರ್ಮಿಳಾ ಹಸನ್ಮುಖ ಸ್ವಭಾವದ ಸುಂದರ ಹುಡುಗಿ. ಜೊತೆಗೆ ಸ್ವತಂತ್ರ ಪ್ರವೃತ್ತಿಯವಳು. ಅವಳು ತನ್ನ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಜೀವಿಸುತ್ತಿದ್ದಾಳೆ. ಅವಳಿಗೆ ಮದುವೆ ಆಗಬೇಕೆಂಬ ಯಾವ ಇಚ್ಛೆಯೂ ಇಲ್ಲ. ಆದರೆ ಒಮ್ಮೊಮ್ಮೆ ಸಮಾಜದ ಮಾತುಗಳು ಅವಳನ್ನು ಕಸಿವಿಸಿಗೊಳ್ಳುವಂತೆ ಮಾಡುತ್ತವೆ. ಪ್ರತಿಯೊಬ್ಬರ ಪ್ರಶ್ನೆ `ಯಾವಾಗ ಸೆಟಲ್ ಆಗುತ್ತಿದ್ದೀಯಾ?' ಎಂದಾಗಿರುತ್ತದೆ. `ವಯಸ್ಸು ಹೆಚ್ಚುತ್ತಾ ಹೊರಟಿದೆ, ಮುಂದೆ ಸಮಸ್ಯೆ ಆಗುತ್ತದೆ,' ಎಂದು ಅವರೆಲ್ಲ ಪುಕ್ಕಟೆ ಸಲಹೆ ಕೊಡುತ್ತಿರುತ್ತಾರೆ.
ಅಂದಹಾಗೆ, ಶರ್ಮಿಳಾ ತನ್ನದೇ ಆದ ರೀತಿಯಲ್ಲಿ ಜೀವನ ಸಾಗಿಸಬೇಕೆನ್ನುತ್ತಾಳೆ. ಅದು ಸಾಮಾಜಿಕ ಹಾಗೂ ಧಾರ್ಮಿಕ ಮರ್ಯಾದೆಗೆ ತಕ್ಕಂತೆ ಇಲ್ಲ. ಹೀಗಾಗಿ ಪ್ರತಿಯೊಬ್ಬ ಏಕಾಂಗಿ ಮಹಿಳೆಯನ್ನು ಸಮಾಜ ಪ್ರಶ್ನಾರ್ಥಕ ದೃಷ್ಟಿಯಲ್ಲಿ ನೋಡುತ್ತದೆ. ಮನೋಶಾಸ್ತ್ರಜ್ಞೆ ಪ್ರಗತಿ ಹೀಗೆ ಹೇಳುತ್ತಾರೆ, ``ಪ್ರತಿಯೊಬ್ಬ ವ್ಯಕ್ತಿಯ ಯೋಚನೆ ಬೇರೆಬೇರೆಯಾಗಿರುತ್ತದೆ. ಸಮಾಜ ರೂಪಿಸಿದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದೇನೂ ಇಲ್ಲ. ಸೂಕ್ತ ವಯಸ್ಸಿನಲ್ಲಿ ಓದು, ಮದುವೆ, ಮಕ್ಕಳು ಇವೆಲ್ಲ ಟಿಪಿಕಲ್ ಮಾತುಗಳು. ಈಗ ಹುಡುಗಿಯರು ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಲು ಬಯಸುತ್ತಾರೆ. ಇದು ಸಮಾನತೆಯ ಯುಗ. ಈಗ ಹುಡುಗಿಯರು ತಮ್ಮದೇ ಮನೆ, ವಾಹನ ಖರೀದಿಸಿಕೊಂಡು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಅಪೇಕ್ಷಿಸುತ್ತಾರೆ. ಹೀಗೆ ಮಾಡಿ ಒಳ್ಳೆಯ ಫೀಲಿಂಗ್ ಮಾಡಿಕೊಳ್ಳುವುದು ಆಕೆಯ ಅಪೇಕ್ಷೆ.
``ಆ ಬಳಿಕ ಆಕೆಗೆ ಮದುವೆ ಮಾಡಿಕೊಳ್ಳಲೇಬೇಕು ಎನಿಸಿದರೆ ಅದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾಳೆ. ಇಲ್ಲದಿದ್ದರೆ ಆಕೆ ಆ ಬಗ್ಗೆ ಯೋಚಿಸಲು ಹೋಗುವುದೇ ಇಲ್ಲ.
``ಈಗ ಹುಡುಗಿಯರಿಗೆ ಪುರುಷ ಸಂಗಾತಿಗಳ ಅವಶ್ಯಕತೆಯೂ ಉಂಟಾಗುವುದಿಲ್ಲ. ಪುರುಷ ಸಂಗಾತಿಗಳು ಆಫೀಸಿನಲ್ಲಿ ಸಿಕ್ಕೇ ಸಿಗುತ್ತಾರೆ. ಅದರಲ್ಲಿ ಕೆಲವರ ಜೊತೆ ಅವರು ಭಾವನಾತ್ಮಕವಾಗಿ ನಿಕಟರಾಗುತ್ತಾರೆ. ಅಂದಹಾಗೆ ಕೆರಿಯರ್‌ನಲ್ಲಿ ಸೆಟಲ್ ಆಗುವ ಹೊತ್ತಿಗೆ 30 ವರ್ಷ ದಾಟಿ ಹೋಗಿರುತ್ತದೆ. ಈ ಮಧ್ಯೆ ದೈಹಿಕ ಅಗತ್ಯತೆಗಳಿಗಾಗಿ ಲಿವ್ ಇನ್ ರಿಲೇಶನ್‌ಶಿಪ್‌ನ ಆಶ್ರಯ ಪಡೆಯುತ್ತಿದ್ದಾಳೆ.''
ಇಂದಿನ ಮಹಿಳೆಗೆ ಬೇಕು ಸ್ವಾತಂತ್ರ್ಯ
ಮದುವೆ ಒಂದು ವೈಯಕ್ತಿಕ ಸಂಗತಿ ಹಾಗೂ ಇದು ಜೀವನದ ಜೊತೆಗಿನ ಹೊಂದಾಣಿಕೆ ಕೂಡ ಆಗಿದೆ. ಮದುವೆಯಿಂದಾಗಿ ಮಹಿಳೆಯ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗುತ್ತದೆ. ಅವಳ `ಪರ್ಸನಲ್ ಸ್ಪೇಸ್' ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಮನೆಯ ಎಲ್ಲ ಜವಾಬ್ದಾರಿಗಳು ಅವಳ ಹೆಗಲಿಗೆ ಬೀಳುತ್ತವೆ. ಹೀಗಾಗಿ ಆಕೆ ಮದುವೆಯ ಬಗ್ಗೆ ಬಂಡಾಯದ ಕಹಳೆ ಊದುತ್ತಿದ್ದಾಳೆ. ಹೊಸ ಪೀಳಿಗೆ ಹೆಚ್ಚೆಚ್ಚು ಬೋಲ್ಡ್ ಆಗುತ್ತಿದೆ. ಅವರೀಗ ಯಾವುದೇ ನಿರ್ಣಯ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ಹುಡುಗಿಯರು ಹೆಚ್ಚೆಚ್ಚು ಸ್ವತಂತ್ರರಾಗುತ್ತ ಹೊರಟಂತೆ ಅವರು ಯಾವುದೇ ಅತಿರೇಕತನವನ್ನು ಸಹಿಸಿಕೊಳ್ಳುವುದಿಲ್ಲ. ಈಗಲೂ ಮಹಿಳೆ ತನ್ನ ಇಚ್ಛೆಯಂತೆ ಜೀವಿಸಲು ಆಗುವುದಿಲ್ಲ. ಧರ್ಮ ಆಕೆಯ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ನೋಡುತ್ತಿದೆ.