ಮೆಟ್ರೋ ಸಂಸ್ಕೃತಿಯ ಕೊಡುಗೆಯಾದ ಈ `ಅಪಾರ್ಟ್‌ಮೆಂಟ್ ಸಂಸ್ಕೃತಿ’ಯು ಜನರ ನಡೆನುಡಿ, ಹಾವಭಾವ, ರೀತಿರಿವಾಜು ಎಲ್ಲವನ್ನೂ ಬದಲಾಯಿಸಿದೆ. ಅಪಾರ್ಟ್‌ಮೆಂಟ್ ಅಂದಾಗ ನಮ್ಮ ಕಣ್ಮುಂದೆ ಬರುವುದು, ಅಲ್ಲಿ ದೊಡ್ಡದಾಗಿರುವ ಮನೆಗಳಿಲ್ಲ, ಓಡಾಡಿಕೊಂಡಿರಲು ವಿಶಾಲವಾದ ಅಂಗಳಗಳಿರುವುದಿಲ್ಲ, ಆರಾಮವಾಗಿ ಅಡ್ಡಾಡಲು `ಲಾನ್’ಗಳು ಇರುವುದಿಲ್ಲ. ಇದಕ್ಕೆ ಕಾರಣ ನಗರ ಪ್ರದೇಶಗಳಲ್ಲಿ ಜಾಗದ ಕೊರತೆ ಮತ್ತು ಅತ್ಯಧಿಕ ಬೆಲೆಯಾಗಿರುವುದರಿಂದ ಮಧ್ಯಮ ವರ್ಗದವರು ಒಂದು ನಿರ್ದಿಷ್ಟ ಜಾಗದಲ್ಲಿ ಒಂದಿಷ್ಟು ಮಂದಿ ಒಟ್ಟಾಗಿ ಒಂದೇ ವಸತಿ ಸಮುಚ್ಚಯದಲ್ಲಿ ವಾಸಿಸುವ ಈ ಸಂಸ್ಕೃತಿಯನ್ನು `ಅಪಾರ್ಟ್‌ಮೆಂಟ್‌ಸಂಸ್ಕೃತಿ’ ಎಂದು ಕರೆಯಲಾಗಿದೆ. ಈ ಪರಿಕಲ್ಪನೆಯ ಮೂಲಕ `ಸ್ವಂತ ಮನೆ’ಯ ಕನಸನ್ನು ಅಲ್ಪ ಆದಾಯದ ಮೂಲಕ ನೆರವೇರಿಸಿಕೊಳ್ಳುತ್ತಾರೆ. ಆದರೆ ಇಂತಹ `ಅಪಾರ್ಟ್‌ಮೆಂಟ್ ಸಂಸ್ಕೃತಿ’ಯಲ್ಲಿ ಬದುಕಲಿಚ್ಛಿಸುವವರು ಇಲ್ಲಿಯದೇ ಆದ ಕೆಲವೊಂದು ನೀತಿ ನಿಯಮಗಳು, ರೀತಿರಿವಾಜುಗಳನ್ನು ಪಾಲಿಸಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿ, ನಿಮ್ಮ ಇಷ್ಟದಂತೆ ಬದುಕುತ್ತೀರೆಂದರೆ, ಅವರು ನಿಮ್ಮನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮೂಲೆಗುಂಪಾಗಿಸುತ್ತಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡಬಯಸುವವರು ಕೆಲವೊಂದು ನಿಯಮಗಳನ್ನು ನೆನಪಿನಲ್ಲಿಡಬೇಕು.
ಅಪಾರ್ಟ್‌ಮೆಂಟುಗಳಲ್ಲಿ ಮನೆಗಳು ಒಂದಕ್ಕೊಂದು ಚಾಚಿಕೊಂಡಿರುತ್ತವೆ. ಅಕ್ಕಪಕ್ಕ, ಮೇಲೆ ಕೆಳಗೆ ಎಲ್ಲಾ ಕಡೆಯೂ ಮನೆಗಳಿರುವುದರಿಂದ, ದೊಡ್ಡ ದನಿಯಿಂದ ಮಾತಾಡುವುದು, ಗಟ್ಟಿಯಾಗಿ ಕಿರುಚುವುದು ಒಳಿತಲ್ಲ. ಸಾಧ್ಯವಾದಷ್ಟು ಮೆಲುದನಿಯಲ್ಲೇ ಮಾತನಾಡಿ. ಅಲ್ಲದೆ ಸುಖಾಸುಮ್ಮನೆ ಮನೆಯ ಕಾಲ್ ಬೆಲ್ ಒತ್ತುವುದು, ಯಾರೋ ಬಂದರು ಎಂದು ಮನೆಯವರು ಬಾಗಿಲು ತೆರೆಯುವುದು ಮುಂತಾದ ಚಿಲ್ಲರೆ ಕೆಲಸವನ್ನು ಮಾಡುವಂತಿಲ್ಲ.
ಅಪಾರ್ಟ್‌ಮೆಂಟ್ ಅಥವಾ ಸೊಸೈಟಿಯ ಮನೆಗಳಲ್ಲಿ ಆಗಾಗ್ಗೆ ಕೆಲವೊಂದು ಚಿಕ್ಕಪುಟ್ಟ ಸಮಸ್ಯೆಗಳಾದ ಕ್ಲೀನಿಂಗ್, ಮೈದಾನದ ಸ್ವಚ್ಛತೆ ಮುಂತಾದ ಕೆಲಸ ಕಾರ್ಯಗಳಲ್ಲಿ ಎಲ್ಲರೊಂದಿಗೂ ಬೆರೆತು, ನಿರ್ವಹಣೆಯಲ್ಲಿ ಕೈಜೋಡಿಸಿ. ಇಂತಹ ಕೆಲಸಗಳಿಂದ ಯಾವಾಗಲೂ ವಿಮುಖರಾಗದಿರಿ.
ಅಪಾರ್ಟ್‌ಮೆಂಟುಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಧರ್ಮದ, ಪ್ರಾಂತ್ಯ, ಭಾಷೆಯ ಜನರು ಒಟ್ಟಾಗಿ ವಾಸಿಸುತ್ತಾರೆ. ಹಾಗಾಗಿ ಜಾತಿ ಧರ್ಮ ಭಾಷೆಯ ಕುರಿತು ಟೀಕೆ ಲೇವಡಿ ಮಾಡುವಂತಿಲ್ಲ. ಆದ್ದರಿಂದ ಬೇರೆ ಧರ್ಮಸಂಸ್ಕೃತಿ ಕುರಿತು ಭಾವನಾತ್ಮಕ ಹೇಳಿಕೆಗಳನ್ನು ನೀಡಿ ಯಾರ ಮನಸ್ಸನ್ನು ನೋಯಿಸದಿರಿ.
ಅಕ್ಕಪಕ್ಕದಲ್ಲೇ ಮನೆಗಳಿರುವುದರಿಂದ ಜೋರಾಗಿ ಕಿರುಚುವುದು, ಕೂಗಾಡುವುದು ಮಾಡಬಾರದು. ಅಲ್ಲದೆ, ಜೋರಾಗಿ ಸಂಗೀತ ಹಾಡುಗಳನ್ನು ಕೇಳಿಸುವುದರಿಂದ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿಯಾಗಿ ತೊಂದರೆ ಅನುಭವಿಸುತ್ತಾರೆ. ಆದ್ದರಿಂದ ಸಾಧ್ಯವಾದಷ್ಟು ನಿಶ್ಶಬ್ದತೆಯನ್ನು ಕಾಪಾಡಿ.
ಒಂದು ವೇಳೆ ನಿಮಗೆ ಚಿಕ್ಕಪುಟ್ಟ ವಸ್ತುಗಳನ್ನು ಸಾಲದ ರೂಪವಾಗಿ ಪಡೆಯುವ ಅಭ್ಯಾಸವಿದ್ದರೆ ಖಂಡಿತವಾಗಿ ಬಿಟ್ಟುಬಿಡಿ. ಇಲ್ಲದೆ ಹೋದಲ್ಲಿ ನಿಮ್ಮ ಬಗ್ಗೆ ಅವರಿಗೆ ತಾತ್ಸಾರ ಮನೋಭಾವ ಬರಬಹುದು ಮತ್ತು ನಿಮ್ಮ ಗೌರವಕ್ಕೂ ಚ್ಯುತಿ ಬರಬಹುದು. ಹಾಗೇ ನಿಮ್ಮ ಬಳಿ ಯಾರಾದರೂ ಸಾಲದ ರೂಪದಲ್ಲಿ ಏನಾದರೂ ಕೇಳಿದ್ದಲ್ಲಿ ಒಲ್ಲದ ಮನಸ್ಸಿನಿಂದ ಕೊಟ್ಟು ನೀವು ಪರಿತಪಿಸುವುದಕ್ಕಿಂತ ಇಂತಹ ಅಭ್ಯಾಸ ಒಳ್ಳೆಯದಲ್ಲ ಅಂತ ತಿಳಿ ಹೇಳಿ.
ನಿಮ್ಮ ನೆರೆಹೊರೆಯವರ ಬಗ್ಗೆ ಅಷ್ಟಾಗಿ ತಿಳಿಯದ ನೀವು ಅವರ ಸಿಹಿ ಮಾತುಗಳಿಗೆ ಮರುಳಾಗಿ ಅವರು ಹೇಳಿದ್ದಕ್ಕೆಲ್ಲಾ ಹೌದು ಎನ್ನುವಂತೆ ತಲೆದೂಗುತ್ತಾ, ನಿಮ್ಮ ಒಳಗುಟ್ಟುಗಳನ್ನು ಬಿಟ್ಟುಕೊಡಬೇಡಿ. ಏಕೆಂದರೆ ನಿಮ್ಮ ದೌರ್ಬಲ್ಯವನ್ನು ಅರಿತುಕೊಂಡು ನಿಮ್ಮನ್ನು ಯಾವುದಾದರೂ ಸಮಸ್ಯೆಗೆ ಸಿಕ್ಕಿಸಿಬಿಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಎಲ್ಲವನ್ನೂ ಎಲ್ಲರೊಂದಿಗೂ ಹಂಚಿಕೊಳ್ಳುವುದು ಅಪಾಯಕಾರಿ. ಬದಲಿಗೆ ಮನೆಗೆ ಅನುಕೂಲವಾಗುವ ಯಾವುದಾದರೂ ಕೆಲಸಗಳಿಗೆ ನೆರೆಹೊರೆಯವರನ್ನು ಬಳಸಿಕೊಳ್ಳಿ.
ಫ್ಲಾಟುಗಳಲ್ಲಿ ನೀವು ವಾಸಿಸುತ್ತಿರುವುದರಿಂದ ಸದಾ ಅಪರಿಚಿತರಂತೆ ಇರಬೇಡಿ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧ್ಯವವನ್ನು ಇಟ್ಟುಕೊಳ್ಳಿ. ಎದುರಿಗೆ ಸಿಕ್ಕಾಗ `ಹಾಯ್’ `ಹಲೋ’ ಎನ್ನುವ ಮೂಲಕ ಆತ್ಮೀಯತೆಯ ಭಾವವನ್ನು ತಿಳಿಸಿ. ಅವರೊಂದಿಗೆ ಮಾತನಾಡುತ್ತಾ, ಸೌಖ್ಯ ಸಮಾಚಾರಗಳನ್ನು ಕೇಳಿ. ಜೊತೆಗೆ ವೃದ್ಧರಿಗೆ, ಅಸಹಾಯಕರಿಗೆ ನೆರವು ನೀಡುವ ಪರಿಪಾಠವನ್ನು ಬೆಳೆಸಿಕೊಳ್ಳಿ.
ವಾಸ್ತವವಾಗಿ ಬೇರೆಯವರ ಕೆಲಸಗಳಿಗೆ ನಿಮ್ಮ ಬಳಿ ಸಮಯ ಇಲ್ಲದಿರಬಹುದು, ಆದರೂ ಕೂಡ ಸಮಯ ಸಿಕ್ಕಾಗೆಲ್ಲಾ ಬಿಡುವು ಮಾಡಿಕೊಂಡು, ಅಪಾರ್ಟ್‌ಮೆಂಟ್‌ನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಂದ ದೂರ ಉಳಿಯದೆ ಅದರಲ್ಲಿ ಭಾಗವಹಿಸಿ. ಜೊತೆಗೆ ನಿಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನೆರೆಹೊರೆಯವರನ್ನು ಆಹ್ವಾನಿಸಿ.
ಸಾಮಾನ್ಯವಾಗಿ ವಠಾರಗಳಂತೆ ವಸತಿ ಸಮುಚ್ಚಯಗಳಲ್ಲೂ ಗಾಳಿಮಾತು (ಗಾಸಿಪ್)ಗಳಿಗೇನೂ ಕೊರತೆ ಇರದು. ಆದ್ದರಿಂದ ನೀವು ಕೂಡ ಗಾಸಿಪ್‌ನಿಂದ ದೂರ ಉಳಿಯಬೇಕಾದರೆ, ನಿಮ್ಮ ಖಾಸಗಿ ವಿಚಾರಗಳು ಹೊರಗಡೆ ಲೀಕ್ ಆಗದಂತೆ ನೋಡಿಕೊಳ್ಳಿ. ಜೊತೆಗೆ ನೆರೆಹೊರೆಯವರ ಖಾಸಗಿ ವಿಚಾರಗಳತ್ತ ಗಮನವಿಡಿ. ಇದರಿಂದ ಅನಗತ್ಯ ಗಾಸಿಪ್‌ಗಳನ್ನು ತಡೆಯಬಹುದು.
ಫ್ಲಾಟ್‌ಗಳಲ್ಲಿ ನೀರು, ವಿದ್ಯುತ್, ಚರಂಡಿ ಮುಂತಾದ ಮೂಲಭೂತ ಸಮಸ್ಯೆಗಳು ಬಂದಾಗ, ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಎಲ್ಲರೊಂದಿಗೂ ನೀವು ಕೈ ಜೋಡಿಸಿ.
ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲೂ ಅದರದೆ ಆದ ನೀತಿನಿಯಮಗಳಿರುತ್ತವೆ. ಆದ್ದರಿಂದ ಅಲ್ಲಿಯ ಆ ನಿಯಮಗಳನ್ನು ಪಾಲಿಸತಕ್ಕದ್ದು ನಿಮ್ಮ ಕರ್ತವ್ಯವಾಗಿರುತ್ತದೆ. ಜೊತೆಗೆ ಇದೇ ನಿಮಯನ್ನು ನಿಮ್ಮ ಸ್ನೇಹಿತರು, ಬಂಧುಗಳಿಗೂ ತಿಳಿಸಿ. ಉದಾಹರಣೆಗೆ ಮುಖ್ಯ ಗೇಟ್‌ನಿಂದ ಆಗಮನ, ಇತ್ಯಾದಿ.
ನಿಮಗೆ ಕೆಲವು ಹವ್ಯಾಸಗಳಿರಬಹುದು. ಅದು ಬಿಟ್ಟಿರಾಗದ ಹವ್ಯಾಸವಾಗಿರಬಹುದು. ನಿಮ್ಮ ಹವ್ಯಾಸಗಳು ಬೇರೆಯವರಿಗೆ ತೊಂದರೆಯಾಗುವಂತೆ ಇರಬಾರದು. ನಿಮಗೆ ಸಾಕುಪ್ರಾಣಿಗಳನ್ನು ಸಾಕುವ ಹವ್ಯಾಸವಿದ್ದಲ್ಲಿ ಅವುಗಳ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಂಡು ಸಾಕಬೇಕು. ಇವುಗಳಿಂದ ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.
ಮಹಾನಗರಗಳ ಮನೆಗಳಲ್ಲಿ ಕಳ್ಳತನವಾಗುವುದು ಮಾಮೂಲು ಸಂಗತಿ. ಹಾಗಾಗಿ ನಿಮ್ಮ ಅಕ್ಕಪಕ್ಕದ ಮನೆಯವರು ಹೊರಗಡೆ ಹೋದಾಗ ಅಥವಾ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅವರ ಮನೆಯತ್ತ ಒಂದು ಕಣ್ಣಿಡುವುದು ಉತ್ತಮ. ಇದರಿಂದ ದರೋಡೆಕೋರರ, ಅಪರಿಚಿತರ ಕೃತ್ಯವನ್ನು ತಡೆಗಟ್ಟಬಹುದು. ಹಾಗೆಯೇ ನೀವು ಮನೆಯಲ್ಲಿ ಇಲ್ಲದಿದ್ದಾಗ ನಿಮ್ಮ ಮನೆಯ ಬಗ್ಗೆಯೂ ನಿಗಾ ಇಡುವಂತೆ ನೆರೆಯವರನ್ನು ಕೋರಿಕೊಳ್ಳಿ. ಆಗ ನೀವು ಎಂದಾದರೊಮ್ಮೆ ಮನೆಯಿಂದ ಹೊರಗಡೆ ಇದ್ದಾಗ ಅವರು ನಿಮ್ಮ ಮನೆಯನ್ನು ಗಮನಿಸಬಹುದು.
ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗಳು ಸಾಮಾನ್ಯವಾಗಿ ಹಿಂದೆಮುಂದೆ, ಮೇಲೆ ಕೆಳಗೆ ಇರುತ್ತವೆ. ಬಟ್ಟೆ ತೊಳೆಯುವ ಸಮಯದಲ್ಲಿ ನಿಮ್ಮ ಅಜಾಗರೂಕತೆಯಿಂದ ಅಕ್ಕಪಕ್ಕ ಅಥವಾ ನಿಮ್ಮ ಕೆಳಗಿನ ಮನೆಯ ಮೇಲೆ ನೀರು ಬೀಳದಂತೆ ನೋಡಿಕೊಳ್ಳಿ. ಹಾಗೇ ಹೂಕುಂಡಗಳನ್ನು ಇಡುವ ಜಾಗವನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಅವುಗಳ ಎಲೆಕಾಂಡಗಳು ಪಕ್ಕ ಮನೆಯವರ ಮೇಲೆ ಬೀಳದಂತೆ ಎಚ್ಚರವಹಿಸಿ.
– ಪವಿತ್ರಾ ಕುಮಾರಿ