ಸಾಮಾನ್ಯವಾಗಿ ಗೃಹಿಣಿಯರು ಅಚ್ಚುಕಟ್ಟಾಗಿ ಅಡುಗೆ ಮಾಡಿ, ಬಂದ ಅತಿಥಿಗಳಿಂದ ಶಭಾಷ್‌ಗಿರಿ ಪಡೆಯುತ್ತಾರೆ. ಒಮ್ಮೊಮ್ಮೆ ಎಲ್ಲೋ ಏನೋ ಎಡವಟ್ಟಾಗಿ ಅಡುಗೆಯ ರುಚಿ ಕೆಟ್ಟು ಹೋಗಬಹುದು, ಅದರ ಪೋಷಕಾಂಶಗಳೂ ನಷ್ಟ ಹೊಂದಬಹುದು. ಒಮ್ಮೊಮ್ಮೆ ಹಣ್ಣುಗಳನ್ನು ನೀಟಾಗಿ ಎಲ್ಲಾ ಹೋಳೂ ಒಂದೇ ಆಕಾರದಲ್ಲಿ ಬರುವಂತೆ ಕತ್ತರಿಸಬಹುದು, ಆದರೆ ಮರೆತು ಈರುಳ್ಳಿ ಹೆಚ್ಚಿದ್ದ ಅದೇ ಮಣೆ ಮತ್ತು ಚಾಕು ಉಪಯೋಗಿಸಿದ್ದರಿಂದ ಹಣ್ಣಿನ ರುಚಿ ಹೇಳುವುದೇ ಬೇಡ.
ಅದೇ ತರಹ ಮೊಟ್ಟೆ ಬೀಟ್ ಮಾಡಿದ ಕಪ್‌ನ್ನು ಸರಿಯಾಗಿ ತೊಳೆದಿರದೆ, ಅದೇ ಕಪ್‌ನಲ್ಲಿ ಯಾರಿಗಾದರೂ ಕಾಫಿ/ಟೀ ಸರ್ವ್ ಮಾಡಿದರೆ, ಕಾಫಿ/ಟೀ ಎಷ್ಟೇ ಚೆನ್ನಾಗಿದ್ದರೂ ಅದು ಯಾರಿಗೂ ರುಚಿಸದು.
ಹೀಗೆ ಅಡುಗೆಮನೆಯ ನಿರ್ವಹಣೆಯಲ್ಲಿ ಸಣ್ಣಪುಟ್ಟ ಲೋಪದೋಷಗಳು ಇಣುಕು ಸಾಧ್ಯತೆ ಇದ್ದೇ ಇದೆ. ಇದರಿಂದ ಉತ್ತಮ ವ್ಯಂಜನ ಕೆಡುವುದಲ್ಲದೆ, ಅಸಮರ್ಪಕ ಬಳಕೆಯಿಂದ ಅಡುಗೆಮನೆಯ ಅಂದ ಹಾಳಾಗುತ್ತದೆ. ಹಾಗಾಗದಂತೆ ಎಚ್ಚರವಹಿಸುವುದು ಹೇಗೆ?
ಮಿಸ್ಟೇಕ್ ನಂ.1 : ಮೈಕ್ರೋವೇವ್‌ನಲ್ಲಿ ಖಾದ್ಯ ಬಿಸಿ ಮಾಡಿದ ನಂತರ ಅಥವಾ ಅಡುಗೆ ಮಾಡಿದ ಮೇಲೆ ತಕ್ಷಣ ಅದರ ಡೋರ್‌ಓಪನ್ ಮಾಡಿ ಸಾಮಗ್ರಿ ಹೊರತೆಗೆಯುವುದು.
ಪರಿಹಾರ : ಅಡುಗೆ ಆದ ಮೇಲೆ ಅಥವಾ ಬಿಸಿ ಮಾಡಿದಾಗ, ತಕ್ಷಣ ಮೈಕ್ರೋವೇವ್ ಡೋರ್ ತೆರೆಯಬೇಡಿ. ಹೊರಗಿನ ಮತ್ತು ಒಳಗಿನ ಶಾಖದಲ್ಲಿ ವ್ಯತ್ಯಾಸ ಇರುವುದರಿಂದ, ಮೈಕ್ರೋವೇವ್‌ನ ಸೇಫ್ ಕಂಟೇನರ್ ಒಡೆಯುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲ, ಮೈಕ್ರೋವೇವ್ ಆಫ್ ಆದ ಕೆಲವು ಕ್ಷಣಗಳ ನಂತರ ವಿದ್ಯುತ್ ತರಂಗಗಳು ಆಹಾರದ ಮೇಲೆ ತಮ್ಮ ಪ್ರಭಾವ ಬೀರುತ್ತಿರುತ್ತವೆ. ಹೀಗಾಗಿ ಮೈಕ್ರೋವೇವ್ ಸ್ವಿಚ್ ಆಫ್ ಆದ 1 ನಿಮಿಷದ ಬಳಿಕ ವ್ಯಂಜನ ಹೊರ ತೆಗೆಯಿರಿ.
ಮಿಸ್ಟೇಕ್ ನಂ.2 : ಮೈಕ್ರೋವೇವ್‌ನಲ್ಲಿ ಅಡುಗೆ ತಯಾರಿಸಲು ಅಥವಾ ಬಿಸಿ ಮಾಡಲು ಪ್ಲಾಸ್ಟಿಕ್ ಕಂಟೇನರ್ ಬಳಕೆ.
ಪರಿಹಾರ : ಅಡುಗೆ ತಯಾರಿಸುವ ಅಥವಾ ಬಿಸಿ ಮಾಡುನ ಅತಿ ವೇಗದ ವಿಧಾನ ಎಂದರೆ ಮೈಕ್ರೋವೇವ್. ಆದರೆ ಇದರಲ್ಲಿ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಇಡುವುದರಿಂದ, ಪ್ಲಾಸ್ಟಿಕ್‌ನ ಹಾನಿಕಾರಕ ಅಂಶಗಳು ನಮ್ಮ ಆಹಾರಕ್ಕೆ ಸೇರಿಕೊಳ್ಳುತ್ತವೆ. ಅರಿಯದೆ ಅದನ್ನು ನಾವು ತಿಂದುಬಿಡುತ್ತೇವೆ. ಇದರಿಂದ ಕ್ಯಾನ್ಸರ್‌ವರೆಗಿನ ಯಾವುದೇ ತೊಂದರೆ ಬರಬಹುದು. ಆದ್ದರಿಂದ ಪ್ಲಾಸ್ಟಿಕ್ ಕಂಟೇನರ್ ಬಳಸಲೇಬೇಡಿ. ಮೈಕ್ರೋವೇವ್ ಪ್ರೂಫ್ ಇರುವಂಥ ಕಂಟೇನರ್ಸ್ ಮಾತ್ರ ಬಳಸಬೇಕು.
ಮಿಸ್ಟೇಕ್ ನಂ.3 : ಹಿಂದಿನ ದಿನದ ಉಳಿದ ಅನ್ನ, ಪಲ್ಯ, ಸಾಂಬಾರ್ ಇತ್ಯಾದಿ ಏನನ್ನೇ ಬಿಸಿ ಮಾಡಿದರೂ ಅದರ ತೇವಾಂಶವೆಲ್ಲ ಹಿಂಗಿಹೋಗುತ್ತದೆ.
ಪರಿಹಾರ : ಮೇಲಿನ ಯಾವುದೇ ಪದಾರ್ಥ ಬಿಸಿ ಮಾಡಿದರೂ, ಅದರ ಮೇಲ್ಭಾಗದಲ್ಲಿ ತುಸು ನೀರು ಚಿಮುಕಿಸಿ ನಂತರ ಬಿಸಿಗಿಡಿ. ಆಗ ಈ ಸಮಸ್ಯೆ ಇರಲ್ಲ.
ಮಿಸ್ಟೇಕ್ ನಂ.4 : ಫ್ರಿಜ್‌ನಿಂದ ಆಹಾರ ಪದಾರ್ಥ ಹೊರತೆಗೆದ ತಕ್ಷಣ ಅದನ್ನು ಬಿಸಿ ಮಾಡುವುದು.
ಪರಿಹಾರ : ತಪ್ಪು, ಹೀಗೆ ಮಾಡುವ ಬದಲು ಫ್ರಿಜ್‌ನಲ್ಲಿರಿಸಿದ್ದ ಯಾವುದೇ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಸು ವೊದಲು, ಬೇಸಿಗೆಯಲ್ಲಿ ಅರ್ಧ ಗಂಟೆ ಹಾಗೂ ಚಳಿ/ಮಳೆಗಾಲದಲ್ಲಿ ಒಂದು ಗಂಟೆ ಮೊದಲೇ ತೆಗೆದು ಕೋಣೆಯ ತಾಪಮಾನಕ್ಕೆ ಬರುವಂತೆ ಅವನ್ನು ಹೊರಗಿಡಬೇಕು. ಅದರ ತಾಪಮಾನ ಮಾಮೂಲಾಯ್ತು ಎಂದು ಖಾತ್ರಿಪಡಿಸಿಕೊಂಡೇ ಕೆಲಸ ಶುರುಮಾಡಿ. ಮತ್ತೊಂದು ವಿಷಯ, ಇಂಥವನ್ನು ಗ್ಯಾಸ್ ಅಥವಾ ಮೈಕ್ರೋವೇವ್ ಯಾದರಲ್ಲೇ ಬಿಸಿ ಮಾಡಿ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹೊರತೆಗೆದು ಬಳಸಬೇಕು. ಸಾಮಾನ್ಯವಾಗಿ ಮಹಿಳೆಯರು ಫ್ರಿಜ್‌ನಿಂದ ಹೊರತೆಗೆದ ಅಷ್ಟನ್ನೂ ಬಿಸಿ ಮಾಡಿ, ಬಡಿಸಿ ಉಳಿದದ್ದನ್ನು ಮತ್ತೆ ಫ್ರಿಜ್‌ನಲ್ಲಿ ಇಡುತ್ತಾರೆ. ಇದರಿಂದ ಗ್ಯಾಸ್, ಫ್ರಿಜ್ ಕಂಪ್ರೆಸರ್ ಎರಡಕ್ಕೂ ಟ್ಯಾಕ್ಸ್ ಆಗುತ್ತದೆ. ಹೀಗೆ ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಸಹಜವಾಗಿಯೇ ಪದಾರ್ಥದ ರುಚಿ ಕೆಡುತ್ತದೆ.