ಎಸ್.ಜೆ.
ಟಗರು', 'ಸಲಗ' ಹಾಗೂ 'ಯುಐ' ಚಿತ್ರಗಳನ್ನು ನಿರ್ಮಿಸಿರುವ ಕೆಪಿ ಶ್ರೀಕಾಂತ್ ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ವೀನಸ್ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರುವ ನಾಲ್ಕನೇ ಚಿತ್ರಕ್ಕೆ ಹಲ್ಕಾ ಡಾನ್ ಎಂಬ ಶೀರ್ಷಿಕೆ ಇಡಲಾಗಿದೆ. ಇಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಶಿವಣ್ಣ-ಗೀತಾ ದಂಪತಿ, ಸುದೀಪ್, ರಚಿತಾ ರಾಮ್, ದುನಿಯಾ ವಿಜಯ್, ವಿನಯ್ ರಾಜ್ ಕುಮಾರ್, ನಿರ್ದೇಶಕ ಆರ್ ಚಂದ್ರು ಸೇರಿದಂತೆ ಸೇರಿದಂತೆ ಹಲವು ತಾರೆಯರು ತಂಡಕ್ಕೆ ಶುಭ ಕೋರಿದ್ದಾರೆ. ಇದೇ ವೇಳೆ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್ ಅವರಿಗೆ ಚಿತ್ರತಂಡ ಸನ್ಮಾನಿಸಿದೆ.
ಕಿಚ್ಚ ಸುದೀಪ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಗೀತಾಕ್ಕ ಹಾಗೂ ರಚಿತಾ ರಾಮ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ಶಿವಣ್ಣ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳಿದರು. ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕನಾಗಿ, ಅಮೃತಾ ಅಯ್ಯಂಗಾರ್ ನಾಯಕಿಯಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ, ಜ್ಯೋತಿ ರೈ ತಾರಾಬಳಗದಲ್ಲಿದ್ದಾರೆ.

ಬಳಿಕ ದುನಿಯಾ ವಿಜಯ್ ಮಾತನಾಡಿ, ಶ್ರೀಕಾಂತ್ ಸರ್ ಮೇಲೆ ಪ್ರೀತಿ, ಕೋಪ ಎರಡು ಇದೆ. ಸಿನಿಮಾ ಮಾಡದೇ ಇದ್ದಾಗ ಕೋಪ, ಮಾಡಿದಾಗ ಖುಷಿ ಇರುತ್ತದೆ. ನಾನು ಒಂದು ಹಂತದಿಂದ ದೊಡ್ಡ ಮಟ್ಟಕ್ಕೆ ಹೋಗಲು ಕಾರಣ ಶ್ರೀಕಾಂತ್ ಸರ್ ಬ್ಯಾನರ್, ಸಲಗ ಸಿನಿಮಾ ಬಳಿಕ ಭೀಮ ಸಿನಿಮಾ. ನನಗೆ ಮತ್ತೊಂದು ಜನ್ಮ ಕೊಟ್ಟ ಪ್ರೊಡಕ್ಷನ್ ಹೌಸ್. ಹಲ್ಕಾ ಡಾನ್ ಸಿನಿಮಾ ಸೂಪರ್ ಹಿಟ್ ಆಗಲಿ. ಈ ಚಿತ್ರದ ಕಾಂಬಿನೇಷನ್ ಸೂಪರ್ ಆಗಿದೆ. ಸತ್ಯ ಹೆಗ್ಡೆ ಹಾಗೂ ಸೂರಿ ಅವರನ್ನು ನಾನು ಯಾವತ್ತೂ ಮರೆಯುವ ಆಗಿಲ್ಲ. ಹರಿಕೃಷ್ಣ ಸೂಪರ್ ಹಿಟ್ ಹಾಡು ಕೊಟ್ಟವರು. ಗಾಂಧಿ ನಗರದಲ್ಲಿ ರೇಸ್ ಕುದುರೆಗಳ ಕರೆಕ್ಟ್ ಕುನ್ನಿಸ್ ಬಾಯಿ ಹಿಡಿಯುವವರು ಅಂದರೆ ಅದು ಶ್ರೀಕಾಂತ್ ಸರ್. ರತ್ನನ್ ಪ್ರಪಂಚದಲ್ಲಿ ಪ್ರಮೋದ್ ಅವರ ಆಕ್ಟಿಂಗ್ ಚೆನ್ನಾಗಿ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.

ನಿರ್ಮಾಪಕರಾದ ಶ್ರೀಕಾಂತ್ ಮಾತನಾಡಿ, ಹಲ್ಕಾ ಡಾನ್ ಸಿನಿಮಾದ ಮುಹೂರ್ತ ನೋಡಿದರೆ ಎಂಥ ಎನರ್ಜಿ ಬಂದಿದೆ ಎಂದರೆ ಮುಂದೆ ಶಿವಣ್ಣ ಹಾಗೂ ವಿಜಯ್ ಅವರ ಜೊತೆ ಸಿನಿಮಾ ಮಾಡುತ್ತೇನೆ. ಅವರಿಬ್ಬರ ಜೊತೆ ಹರಿಕೃಷ್ಣ ಮ್ಯೂಸಿಕ್ ಇರಲಿದೆ. ಕಾಲರ್ ಎತ್ಕೊಂಡು ಕನ್ನಡ ಪ್ರೇಕ್ಷಕರು ಸಿನಿಮಾ ನೋಡಬಹುದು. ನಮ್ಮ ಸಂಸ್ಥೆಗೆ ಈ ಎನರ್ಜಿ ಇರಲು ಕಾರಣರಲ್ಲಿ ಒಬ್ಬರು ವಿಜಿ ಸರ್. ನನ್ನ ಹಿಂದೆ ಒಳ್ಳೆ ತಂಡ ಇದೆ. ಎಲ್ಲರ ಆಶೀರ್ವಾದದಿಂದ ಸಿನಿಮಾ ಚೆನ್ನಾಗಿ ಆಗಲಿದೆ. ಹಲ್ಕಾ ಡಾನ್ ಎಂಬುದು ಆಡು ಭಾಷೆ. ಚಿತ್ರದಲ್ಲಿ ಪ್ರಮೋದ್ ಅವರು ಸಾಯಿ ಕುಮಾರ್ ಸರ್ ಫ್ಯಾನ್ ಎಂದರು.





