ವೆಜಿಟೆಬಲ್ ವಿತ್ಸ್ಪೈಸಿ ರೈಸ್

ಸಾಮಗ್ರಿ : 2 ಕಪ್‌ ಬಾಸಮತಿ ಅಕ್ಕಿಯ ಉದುರುದುರಾದ ಅನ್ನ, 1 ಕಪ್‌ನಷ್ಟು ಸಣ್ಣಗೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್ ಹೆಚ್ಚಿದ  ಬೀನ್ಸ್, 4 ಚಮಚ ಹೆಚ್ಚಿದ ಕ್ಯಾರೆಟ್‌, 1-1 ಸಣ್ಣ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪ್ಯೂರಿ, ಸಕ್ಕರೆ, ಓರಿಗೆನೊ, ಮೊಸರು, 1 ತುಂಡು ಚೀಸ್‌, ಅರ್ಧ ಸೌಟು ರೀಫೈಂಡ್‌ ಎಣ್ಣೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಅಲಂಕರಿಸಲು ಸಲಾಡ್‌.

ವಿಧಾನ : ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಎಲ್ಲಾ ತರಕಾರಿ ಹಾಕಿ 4 ನಿಮಿಷ ಸಾಟೆ ಮಾಡಿ, ಬೇರೆಯಾಗಿ ಇರಿಸಿ. ಆಮೇಲೆ ಇದಕ್ಕೆ ಉಳಿದ ಎಣ್ಣೆ ಬೆರೆಸಿ, ಒಗ್ಗರಣೆ ಕೊಡಿ. ಹೆಚ್ಚಿದ ಈರುಳ್ಳಿ ಬಾಡಿಸಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಮೊಸರು ಬೆರೆಸಿ ಕೈಯಾಡಿಸಿ. ಆಮೇಲೆ ಟೊಮೇಟೊ ಪ್ಯೂರಿ, ಉಪ್ಪು, ಖಾರ ಹಾಕಿ ಕೆದಕಬೇಕು. ನಂತರ ಮೊಸರು ಬೆರೆಸಿ ಕೈಯಾಡಿಸಿ. ಆಮೇಲೆ ಟೊಮೇಟೊ ಪ್ಯೂರಿ, ಉಪ್ಪು, ಖಾರ ಹಾಕಿ 2 ನಿಮಿಷ ಮತ್ತೆ ಕೆದಕಿರಿ. ಆಮೇಲೆ ಎಲ್ಲಾ ತರಕಾರಿ ಹಾಕಿ ಬಾಡಿಸಬೇಕು. ನಂತರ ಓರಿಗೆನೊ, ಅನ್ನ ಹರಡಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಒಂದು ಮೈಕ್ರೋವೇವ್ ‌ಡಿಶ್‌ಗೆ ಹರಡಿ, ಮೇಲೆ ಚೀಸ್‌ ತುರಿಯಿರಿ. ಇದನ್ನು 2000 ಸೆಂ.ಶಾಖದಲ್ಲಿ ಚೀಸ್‌ ಕರಗುವವರೆಗೂ ಬಿಸಿ ಮಾಡಿ, ತಕ್ಷಣ ಸವಿಯಲು ಕೊಡಿ.

ರೈಸ್ಢೋಕ್ಲಾ

ಸಾಮಗ್ರಿ : 1 ಕಪ್‌ ಅಕ್ಕಿ, 4 ಚಮಚ ಉದ್ದಿನಬೇಳೆ, 2-3 ಚಮಚ ರವೆ, ಅರ್ಧ ಕಪ್‌ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಶುಂಠಿ-ಮೆಣಸಿನಕಾಯಿ ಪೇಸ್ಟ್, ಇಂಗು, ಸೋಡ, ನಿಂಬೆರಸ, ಈನೋ ಫ್ರೂಟ್‌ ಸಾಲ್ಟ್, 4 ಚಮಚ ರೀಫೈಂಡ್‌ ಎಣ್ಣೆ, ಒಗ್ಗರಣೆಗಾಗಿ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು.

ವಿಧಾನ : ಅಕ್ಕಿ ಉದ್ದನ್ನು ಒಟ್ಟಿಗೆ 4 ತಾಸು ನೆನೆಹಾಕಿ, ನಂತರ ಮೊಸರು ಬೆರೆಸಿ ರುಬ್ಬಿಕೊಳ್ಳಿ. ಈನೋ ಸಾಲ್ಟ್ ಬಿಟ್ಟು ಉಳಿದೆಲ್ಲ ಸಾಮಗ್ರಿ ಇದಕ್ಕೆ ಬೆರೆಸಿ (ಇಡ್ಲಿಹಿಟ್ಟಿನ ಹದಕ್ಕೆ) ಇಡೀ ರಾತ್ರಿ ನೆನೆಯಲು ಬಿಡಿ. ಮಾರನೇ ಬೆಳಗ್ಗೆ ಈನೋ ಸಾಲ್ಟ್ ಬೆರೆಸಿ, ಇಡ್ಲಿ ಸ್ಟ್ಯಾಂಡಿನಲ್ಲಿ ಇಡ್ಲಿ ತರಹ ರೆಡಿ ಮಾಡಿ. ಹಬೆಯಾಡುತ್ತಿರುವ ಇದನ್ನು ವಜ್ರಾಕಾರವಾಗಿ ಕತ್ತರಿಸಿ, ಮೇಲೆ ಒಗ್ಗರಣೆ ಹರಡಿರಿ. ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಸ್ಪೈಸಿ ರೈಸ್ಕಾಯಿನ್ಸ್

ಸಾಮಗ್ರಿ : 1 ಕಪ್‌ ಅನ್ನ, ಅರ್ಧ ಕಪ್‌ ಕಡಲೆಹಿಟ್ಟು, 1-1 ಸಣ್ಣ ಚಮಚ ಹೆಚ್ಚಿದ ಶುಂಠಿ, ಹಸಿಮೆಣಸು, ಕರಿಬೇವು, ಕೊ.ಸೊಪ್ಪು, ಪುದೀನಾ, ಅರ್ಧ ಕಪ್‌ ಹುರಿದು ತರಿ ಮಾಡಿದ ಕಡಲೆಕಾಯಿಬೀಜ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಧನಿಯಾಪುಡಿ, ಜೀರಿಗೆಪುಡಿ, ಚಾಟ್‌ ಮಸಾಲ, ಗರಂಮಸಾಲ, ಕರಿಯಲು ಎಣ್ಣೆ.

ವಿಧಾನ : ಅನ್ನವನ್ನು ಚೆನ್ನಾಗಿ ಕಿವುಚಿ ಅದಕ್ಕೆ ಮೇಲೆ ಹೇಳಲಾದ ಎಲ್ಲಾ ಸಾಮಗ್ರಿ ಬೆರೆಸಿಕೊಂಡು ಗಟ್ಟಿಯಾಗಿ ಕಲಸಿಡಿ. ದಪ್ಪಗಿನ ಕೋಡುಬಳೆ ತರಹ ಇದನ್ನು ರೋಲ್ ಮಾಡಿ.  ನಂತರ 10 ನಿಮಿಷ ಹಬೆಯಲ್ಲಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಚಾಕುವಿನಿಂದ ಬಿಲ್ಲೆಗಳಾಗಿ ಕತ್ತರಿಸಿ. ಇದನ್ನು ಕಾದ ಎಣ್ಣೆಯಲ್ಲಿ  ಗರಿಮುರಿ ಕರಿದು, ಟೊಮೇಟೊ ಸಾಸ್‌, ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಲು ಕೊಡಿ.

ರೈಸ್ಕಟ್ಲೆಟ್

ಸಾಮಗ್ರಿ : 1 ಕಪ್‌ ಅನ್ನ, ಬೇಯಿಸಿ ಮಸೆದ 1 ದೊಡ್ಡ ಆಲೂ, 4 ಚಮಚ ಕಡಲೆಹಿಟ್ಟು, ಅರ್ಧ ಕಪ್‌ ಓಟ್ಸ್ ಪೌಡರ್‌, 1-1 ಚಮಚ ಹೆಚ್ಚಿದ ಶುಂಠಿ, ಹಸಿಮೆಣಸು, ಕರಿಬೇವು, ಕೊ.ಸೊಪ್ಪು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ಪುಡಿ, ಧನಿಯಾಪುಡಿ, ಜೀರಿಗೆಪುಡಿ, ಚಾಟ್‌ ಮಸಾಲ, ಗರಂಮಸಾಲ, 3-4 ಅಂಚು ಕತ್ತರಿಸಿದ ಬ್ರೆಡ್‌ ತುಂಡು, ಶ್ಯಾಲೋ ಫ್ರೈಗಾಗಿ ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ.

ವಿಧಾನ : ಮಸೆದ ಆಲುವಿಗೆ ಅನ್ನ ಮತ್ತಿತರ ಸಾಮಗ್ರಿ ಸೇರಿಸಿ ಕಿವುಚಿರಿ. ಈ ಮಿಶ್ರಣದಿಂದ ಚಿತ್ರದಲ್ಲಿರುವ ಅಥವಾ ಇನ್ನಿತರ ಆಕಾರ ನೀಡಿ ಕಟ್‌ಲೆಟ್‌ ತಟ್ಟಿಡಿ. ಇದನ್ನು ಅರ್ಧ ಗಂಟೆ ಕಾಲ ಫ್ರಿಜ್‌ನಲ್ಲಿರಿಸಿ, ನಂತರ ಹೊರತೆಗೆದು ಅಳ್ಳಕವಾದ ಕಾವಲಿಯಲ್ಲಿ ಶ್ಯಾಲೋ ಫ್ರೈ ಮಾಡಿ, ಎರಡೂ ಬದಿ ಬೇಯಿಸಿ. ಬಿಸಿಬಿಸಿಯಾದ ಇದನ್ನು ಪುದೀನಾ ಚಟ್ನಿ ಜೊತೆ ಸವಿಯಲು ಕೊಡಿ.

ಗ್ರೀನ್ಫ್ರೈಡ್ರೈಸ್

ಸಾಮಗ್ರಿ : 6 ಕಪ್‌ ಉದುರಾದ ಅನ್ನ, ಅರ್ಧರ್ಧ ಕಪ್‌ ಮೊಳಕೆ ಕಟ್ಟಿದ ಹೆಸರುಕಾಳು, ತುಂಡರಿಸಿ ಬ್ಲ್ಯಾಂಚ್‌ ಮಾಡಿದ ಬ್ರೋಕ್ಲಿ/ಬೀನ್ಸ್, ಹೆಚ್ಚಿದ ಕ್ಯಾಪ್ಸಿಕಂ, ಪಾಲಕ್‌ಸೊಪ್ಪು, ಈರುಳ್ಳಿ, ಈರುಳ್ಳಿ ತೆನೆ, ರುಚಿಗೆ ತಕ್ಕಷ್ಟು ಉಪ್ಪು, ಗ್ರೀನ್‌ ಚಿಲೀ ಸಾಸ್‌, ನಿಂಬೆರಸ, 4-5 ಚಮಚ ರೀಫೈಂಡ್‌ ಎಣ್ಣೆ, ಒಂದಿಷ್ಟು ಕರಿಬೇವು, ಕೊ.ಸೊಪ್ಪು, ಪುದೀನಾ.

ವಿಧಾನ : ನಾನ್‌ಸ್ಟಿಕ್‌ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆ ಕೊಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಕರಿಬೇವು, ಬ್ರೋಕ್ಲಿ, ಫ್ರೆಂಚ್‌ ಬೀನ್ಸ್, ಕ್ಯಾಪ್ಸಿಕಂ, ಹೆಸರುಕಾಳು ಸೇರಿಸಿ ಚೆನ್ನಾಗಿ ಬಾಡಿಸಿ. ನಂತರ ಪಾಲಕ್‌ಸೊಪ್ಪು, ಈರುಳ್ಳಿ ತೆನೆ ಸೇರಿಸಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಗ್ರೀನ್‌ ಚಿಲೀ ಸಾಸ್‌, ನಿಂಬೆರಸ ಬೆರೆಸಿ ಕೈಯಾಡಿಸಿ. ಇದಕ್ಕೆ ಅನ್ನ ಸೇರಿಸಿ ಬೇಗ ಬೇಗ ಕೆದಕಿ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ ಸೇರಿಸಿ ತಕ್ಷಣ ಸವಿಯಲು ಕೊಡಿ. ಜೊತೆಗೆ ಹಸಿರು ಚಟ್ನಿ ಇದ್ದರೆ ಸೊಗಸು!

ಸೋಯಾ ರೈಸ್ಪರೋಟ

ಸಾಮಗ್ರಿ : 1 ಕಪ್‌ ಅನ್ನ, ಅರ್ಧರ್ಧ ಕಪ್‌ ಸೋಯಾಹಿಟ್ಟು ಗೋಧಿಹಿಟ್ಟು, 4 ಚಮಚ ಓಟ್ಸ್ ಹಿಟ್ಟು, 2-3 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು, ಹಸಿಮೆಣಸಿನ ಪೇಸ್ಟ್ , 1 ಸಣ್ಣ ಚಮಚ ಸೋಂಪು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು, 4-5 ಚಮಚ ತುಪ್ಪ, ಅರ್ಧ ಸೌಟು ಎಣ್ಣೆ, ಜೊತೆಗೆ ಉಪ್ಪಿನಕಾಯಿ ಮತ್ತು ಸಲಾಡ್‌.

ವಿಧಾನ : ಚೆನ್ನಾಗಿ ಕಿವುಚಿದ ಅನ್ನಕ್ಕೆ ಮೇಲಿನ ಎಲ್ಲಾ ಸಾಮಗ್ರಿ, ತುಸು ನೀರು ಬೆರೆಸಿ ಮೃದು ಚಪಾತಿ ಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ನಾದಿಕೊಂಡು 1-2 ತಾಸು ನೆನೆಯಲು ಬಿಡಿ. ನಂತರ ನಿಂಬೆಗಾತ್ರದ ಉಂಡೆ ಮಾಡಿ, ಲಟ್ಟಿಸಿ, ಎಣ್ಣೆ ಸವರುತ್ತಾ, ಮಡಿಚಿ, ಮತ್ತೆ ಲಟ್ಟಿಸಿ, ನಾನ್‌ಸ್ಟಿಕ್‌ ತವಾಗೆ ಹಾಕಿ, ಎಣ್ಣೆ ಬಿಡುತ್ತಾ ಎರಡೂ ಬದಿ ಬೇಯಿಸಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ತೆಂಗು ಬೆರೆತ ಅಕ್ಕಿಹಿಟ್ಟಿನುಂಡೆ

ಸಾಮಗ್ರಿ : 1 ಕಪ್‌ ಅಕ್ಕಿಹಿಟ್ಟು, 4-5 ಚಮಚ ರೀಫೈಂಡ್‌ ಎಣ್ಣೆ, 2 ಕಪ್‌ ನೀರು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸುವೆ, ಜೀರಿಗೆ, ಉದ್ದಿನಬೇಳೆ, ತುಂಡರಿಸಿದ ಒಣ ಮೆಣಸಿನಕಾಯಿ, ಕರಿಬೇವು, 1 ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.

ವಿಧಾನ : ದಪ್ಪ ತಳದ ಸ್ಟೀಲ್ ‌ಪಾತ್ರೆಯಲ್ಲಿ 2-3 ಚಮಚ ಎಣ್ಣೆ ಬಿಸಿ ಮಾಡಿ. ಇದಕ್ಕೆ ನೀರು ಬೆರೆಸಿ ಕುದಿಯಲು ಬಿಡಿ. ಅದಕ್ಕೆ ಎಡಗೈನಿಂದ ಅಕ್ಕಿಹಿಟ್ಟು ಉದುರಿಸುತ್ತಾ ಬಲಗೈನಿಂದ ಮಗುಚುವ ಕೈಯಾಡಿಸುತ್ತಾ, ಬೇಗ ಬೇಗ ತೊಳೆಸಬೇಕು, ಗಂಟಾಗಬಾರದು. ನಡುನಡುವೆ ತುಸು ಎಣ್ಣೆ ಬಿಡುತ್ತಾ ಕೈಯಾಡಿಸುತ್ತಿರಿ. ಹೀಗೆ ಹಿಟ್ಟು ಮೋದಕಕ್ಕೆ ಬೇಕಾದಂತೆ ತಯಾರಾದಾಗ, ಕೆಳಗಿಳಿಸಿ ಆರಲು ಬಿಡಿ. ನಂತರ ಜಿಡ್ಡು ಕೈನಿಂದ ಆರಿದ ಈ ಮಿಶ್ರಣದಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ, ಜಿಡ್ಡು ಸರಿದ ಇಡ್ಲಿ ಸ್ಟ್ಯಾಂಡಿಗಿಟ್ಟು, 10 ನಿಮಿಷ ಮತ್ತೆ ಹಬೆಯಲ್ಲಿ  ಬೇಯಿಸಿ. ನಂತರ ಇವನ್ನು ತಟ್ಟೆಯಲ್ಲಿ ಜೋಡಿಸಿಕೊಂಡು ಮೇಲೆ ತೆಂಗಿನ ತುರಿ ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು, ಒಗ್ಗರಣೆ ಕೊಡಿ. ಬಿಸಿ ಬಿಸಿ ಕಾಫಿ/ಟೀ ಜೊತೆ ಬಿಸಿಯಾಗಿ ಸವಿಯಿರಿ.

ಹಲಸಿನ ದಮ್ ಬಿರಿಯಾನಿ

ಮೂಲ ಸಾಮಗ್ರಿ : ಶುಚಿಗೊಳಿಸಿದ ಹಲಸಿನಕಾಯಿ ಹೋಳು, 1 ಕಪ್‌ ಬಾಸಮತಿ ಅಕ್ಕಿ, 3-4 ಲವಂಗ, 2-3 ಏಲಕ್ಕಿ, 1 ಸಣ್ಣ ತುಂಡು ಚಕ್ಕೆ, 1-2 ಮೊಗ್ಗು, 1-2 ಪಲಾವ್ ‌ಎಲೆ, 4 ಚಮಚ ಎಣ್ಣೆ, ರುಚಿಗೆ ಉಪ್ಪು.

ಹಲಸನ್ನು ಮ್ಯಾರಿನೇಟ್‌ಗೊಳಿಸಲು : ಹುರಿದ 3-4 ಈರುಳ್ಳಿಯ ಪೇಸ್ಟ್, 1-1 ಚಮಚ  ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2-3 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪುಖಾರ, 2-3 ಚಮಚ ಕಡಲೆಹಿಟ್ಟು, ಕರಿಯಲು ಎಣ್ಣೆ.

ಇತರೆ ಸಾಮಗ್ರಿ : 1 ಕಪ್‌ ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಅರ್ಧ ಕಪ್‌ ಮೊಸರು, 4 ಚಮಚ ಈರುಳ್ಳಿ ಪೇಸ್ಟ್, ಅರ್ಧರ್ಧ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಚಿಟಕಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಟೊಮೇಟೊ ಪ್ಯೂರಿ, 2-3 ಪಲಾವ್ ‌ಎಲೆ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, 2-3 ಉದ್ದನೆಯ ಹಸಿಮೆಣಸು (ಹಾಗೇ ಸೀಳಿಕೊಳ್ಳಿ), 1 ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ಒಗ್ಗರಣೆಗೆ ತುಪ್ಪ, ಜೀರಿಗೆ, ಸೋಂಪು, ತುಸು ಕೇದಗೆ ಎಸೆನ್ಸ್ ನಲ್ಲಿ ನೆನೆದ ಕೇಸರಿ.

ವಿಧಾನ : 20 ನಿಮಿಷ ಅಕ್ಕಿ ನೆನೆಹಾಕಿ. ಹಲಸಿನ ಕಾಯಿ ಹೋಳುಗಳನ್ನು ಮ್ಯಾರಿನೇಟ್‌ ಮಿಶ್ರಣದಲ್ಲಿ ಚೆನ್ನಾಗಿ ಹೊರಳಿಸಿ ಅರ್ಧ ಗಂಟೆ ಹಾಗೇ ಬಿಡಿ. ದಪ್ಪ ತಳದ ಪಾತ್ರೆಯಲ್ಲಿ 6 ಕಪ್‌ ನೀರು ಬಿಸಿ ಮಾಡಿ. ಅದಕ್ಕೆ ಚಕ್ಕೆಲವಂಗಗಳು, ಎಣ್ಣೆ, ಅಕ್ಕಿ ಹಾಕಿ ಅದು 80% ನಷ್ಟು ಬೇಯುವಂತೆ ಮಾಡಿ. ನಂತರ ಅದರ ಗಂಜಿ ಬಸಿದುಬಿಡಿ. ಮ್ಯಾರಿನೇಟ್‌ ಆದ ಹಲಸಿನ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಮೊಸರು, ಡ್ರೈ ಮಸಾಲೆ, ಉಪ್ಪು ಹಾಕಿ ಕೆದಕಬೇಕು. ಆಮೇಲೆ ಟೊಮೇಟೊ ಪ್ಯೂರಿ ಸೇರಿಸಿ. ಮಸಾಲೆ ಎಣ್ಣೆ ಬಿಟ್ಟುಕೊಂಡಾಗ, ಇದಕ್ಕೆ 1 ಕಪ್‌ ನೀರು ಬೆರೆಸಿ ಕುದಿಸಬೇಕು. ನಂತರ ಕರಿದ ಹಲಸು ಬೆರೆಸಿ, 2-3 ನಿಮಿಷ ಕೈಯಾಡಿಸಿ. ಈಗ ಇನ್ನೊಂದು ಭಾರಿ ಬಾಣಲೆಯಲ್ಲಿ ಮೊದಲು ತುಸು ತುಪ್ಪ ಬಿಸಿ ಮಾಡಿ. ಪಲಾವ್ ‌ಎಲೆ ಹಾಕಿ ಚಟಪಟಾಯಿಸಿ. ಇದರ ಮೇಲೆ ಅರ್ಧದಷ್ಟು ಅನ್ನ ಬರಲಿ. ಇದರ ಮೇಲೆ ಪೂರ್ತಿ ಹಲಸನ್ನು ಹರಡಿ. ಅದರ ಮೇಲೆ ಹುರಿದ ಈರುಳ್ಳಿಯ ಅರ್ಧ ಭಾಗ ಬರಲಿ. ಈಗ ಪುನಃ ಸ್ವಲ್ಪ ಅನ್ನ ಹರಡಿ ಅದರ ಮೇಲೆ ಹುರಿದ ಈರುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ ಇತ್ಯಾದಿ ಹರಡಿ. ನಂತರ ಉಳಿದ  ಪೂರ್ತಿ ಅನ್ನ ಹರಡಬೇಕು ಇದರ ಮೇಲೆ ಕೇದಗೆ ಎಸೆನ್ಸ್ ನಲ್ಲಿ ನೆನೆದ ಕೇಸರಿ ಬರಲಿ, ಉಳಿದ ತುಪ್ಪ ಸುತ್ತಲೂ ಹರಡಿರಿ. ಇದಕ್ಕೆ ಭಾರಿ ಮುಚ್ಚಳ ಮುಚ್ಚಿರಿಸಿ, 10-12 ನಿಮಿಷ ಮಂದ ಉರಿಯಲ್ಲಿ ಬೇಯಲು ಬಿಡಿ. ಚಿತ್ರದಲ್ಲಿರುವಂತೆ ಸಲಾಡ್‌ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ