ಅಚ್ಚ ಕನ್ನಡದ ಹುಡುಗಿ, ಪ್ರತಿಭಾವಂತೆ, ನೋಡುವುದಕ್ಕೂ ಚಂದವಾಗಿದ್ದಾಳೆ, ಅವಕಾಶಗಳೂ ಇವೆ. ಆದರೆ ತನಗಿಷ್ಟವಾದರೆ ಮಾತ್ರ ಪಾತ್ರಗಳನ್ನು ಒಪ್ಪಿಕೊಳ್ಳುವುದನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವಂಥ ನಟಿ ಮೇಘನಾ ಗಾವಂಕರ್. ಉತ್ತರ ಕರ್ನಾಟಕದ ಈ ಚೆಲುವೆಯ ಮೊದಲ ಚಿತ್ರ `ನಮ್ ಏರಿಯದಲ್ಲೊಂದು ದಿನ.’ ಆನಂತರದ ಚಿತ್ರಗಳು `ವಿನಾಯಕ ಗೆಳೆಯರ ಬಳಗ,’ `ಚಾರ್ ಮಿನಾರ್.’ ಇತ್ತೀಚೆಗೆ ಬಂದಂಥದು `ಸಿಂಪಲ್ಲಾಗೊಂದು ಲವ್ ಸ್ಟೋರಿ.’
ಈ ಚಿತ್ರಗಳಲ್ಲಿ ಮೇಘನಾ ತನ್ನ ಅಭಿನಯದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಳು. ಮೇಘನಾ ಹುಟ್ಟಿದ್ದು ಗುಲ್ಬರ್ಗಾದಲ್ಲಿ. ಅಲ್ಲಿಯೇ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಕಾಮರ್ಸ್ ಡಿಗ್ರಿ ಪಡೆದಳು. ಅಷ್ಟೇ ಅಲ್ಲದೆ, ಇಂಗ್ಲಿಷ್ ಲಿಟ್ರೇಚರ್‌ನಲ್ಲಿ ಎಂ.ಎ. ಮಾಡಿದ್ದಾಳೆ. ಕಲೆ ಬಗ್ಗೆ ಆಸಕ್ತಿ ಇದ್ದುದರಿಂದ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಆ್ಯಕ್ಟಿಂಗ್ ಕಲಿತಳು.
ಉಳಿದೆಲ್ಲ ನಟಿಯರಿಗಿಂತ ಮೇಘನಾ ವಿಭಿನ್ನವಾಗಿ ನಿಲ್ಲಲು ಕಾರಣ ಆಕೆಯಲ್ಲಿರುವ ಬುದ್ಧಿವಂತಿಕೆ. ಸಣ್ಣ ಕಥೆಗಳನ್ನು ಬರೆಯೋದು, ಪ್ರಪಂಚದ ಎಲ್ಲ ವಿವರಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಓದುವುದು, ಇದೆಲ್ಲದರ ಜೊತೆಗೆ ಸಂಗೀತಪ್ರಿಯೆ. ಕಲೆಗೆ ಸಂಬಂಧಪಟ್ಟ ಯಾವುದೇ ವಿಷಯವಿದ್ದರೂ ಆಸಕ್ತಿ ವಹಿಸುವ ಮೇಘನಾ ಸಿನಿಮಾರಂಗವನ್ನೇ ನಂಬಿ ಕುಳಿತಂಥ ಹುಡುಗಿಯಲ್ಲ.
ಮುಂದೊಂದು ದಿನ ಸರ್ಕಾರಿ ಹುದ್ದೆ ಸಿಕ್ಕರೆ ಅಲ್ಲಿಯೂ ಸಹ ಒಳ್ಳೆ ಕೆಲಸಗಳನ್ನು ಮಾಡುವುದಾಗಿ ಹೇಳುತ್ತಾಳೆ. ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳುವ ಗೋಜಿಗೆ ಹೋಗದೆ ಕಥೆ, ತನ್ನ ಪಾತ್ರ ಎರಡೂ ಹಿಡಿಸಿದಾಗ ಮಾತ್ರ ನಟಿಸಲು `ಎಸ್’ ಎನ್ನುವ ಮೇಘನಾ, ತಾನೊಬ್ಬ ಬಿಜಿ ತಾರೆ ಎಂದು ಕರೆಸಿಕೊಳ್ಳುವ ಆಸೆಯನ್ನು ಸಹಾ ಹೊಂದಿಲ್ಲ. ಸಿಂಪಲ್ ಹುಡುಗಿ ಮೇಘನಾ ಸಮಯ ವ್ಯರ್ಥ ಮಾಡದೆ ಏನಾದರೂ ಕಲಿಯುತ್ತಲೇ ಇರುತ್ತಾಳೆ. ಸಿನಿಮಾ ವಿಷಯದಲ್ಲಿ ಪಿ.ಎಚ್.ಡಿ. ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದಾಳಂತೆ. ಬದುಕಿನಲ್ಲಿ ಯಾವುದರ ಬಗ್ಗೆಯೂ ಪ್ಲಾನ್ ಮಾಡದ ಮೇಘನಾ ಭವಿಷ್ಯದ ಬಗ್ಗೆ ಕನಸು ಕಾಣುವುದರ ಬದಲು ತನ್ನನ್ನು ತಾನು ಬಿಜಿಯಾಗಿಡಲು ಪ್ರಯತ್ನಪಡುತ್ತಾಳೆ.
“ಸಿನಿಮಾ ರಂಗಕ್ಕೆ ಬಂದಾಗಿನಿಂದ ನನಗಿರೋದು ಒಂದೇ ಆಸೆ. ಒಳ್ಳೆ ಪಾತ್ರಗಳನ್ನು ನಿರ್ವಹಿಸಬೇಕು. ನಾನೊಬ್ಬ ಒಳ್ಳೆ ನಟಿ ಅಂತ ಹತ್ತು ಜನ ಹೇಳಬೇಕು. ನಾನು ಮಾಡುವ ಪಾತ್ರ ಜನರ ನೆನಪಿನಲ್ಲಿ ಸದಾ ಇರಬೇಕು ಅಷ್ಟೆ,” ಎನ್ನುವ ಮೇಘನಾಳಿಗೆ `ಚಾರ್ ಮಿನಾರ್’ ಚಿತ್ರದಲ್ಲಿನ ಪಾತ್ರ ತುಂಬಾ ಇಷ್ಟವಾಗಿತ್ತಂತೆ.
“ಅಭಿನಯ ನನ್ನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತೆ. ಸಾಕಷ್ಟು ಪ್ರಾಜೆಕ್ಟ್ ಗಳು ಬರ್ತಿವೆ. ಕಥೆಗಳನ್ನು ಕೇಳ್ತಾ ಇದ್ದೀನಿ. ಸದ್ಯದಲ್ಲೇ ಚಿತ್ರವೊಂದನ್ನು ಒಪ್ಪಿಕೊಳ್ಳಲಿದ್ದೇನೆ. ಡೀಟೆಲ್ಸ್ ಸದ್ಯದಲ್ಲೇ ಕೊಡ್ತೀನಿ. ಇದೆಲ್ಲದರ ನಡುವೆ ಬಿಡುವು ಮಾಡಿಕೊಂಡು ಸಾಹಿತ್ಯದ ಕಡೆ ಆಸಕ್ತಿ ತೋರುತ್ತಿದ್ದೇನೆ. ಸದ್ಯದಲ್ಲೇ ಪುಸ್ತಕವೊಂದನ್ನು ಹೊರತರಲಿದ್ದೇನೆ. ಬರವಣಿಗೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದರಲ್ಲೂ ಒಂದು ರೀತಿ ಖುಷಿಕೊಡುತ್ತೆ,” ಎನ್ನುತ್ತಾಳೆ.
ಇತ್ತೀಚೆಗಷ್ಟೆ ಫೋಟೋ ಶೂಟ್ ಮಾಡಿಸಿರುವ ಮೇಘನಾಳ ಆಕರ್ಷಕ ಆಲ್ಬಮ್ ಎಲ್ಲ ಕಡೆ ಸಾಕಷ್ಟು ಜನಪ್ರಿಯವಾಗಿದೆ. ಇನ್ನಷ್ಟು ಸುಂದರವಾಗಿ ಕಾಣುವ ಮೇಘನಾಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡಿದೆ. ಎಲ್ಲರ ಮೆಚ್ಚುಗೆ ಗಳಿಸಿದೆ.
“ಹೌದು ಫೋಟೋ ಶೂಟ್ ಮಾಡಿಸಿ ಎರಡು ವರ್ಷದ ಮೇಲಾಗಿತ್ತು. ಹಾಗಾಗಿ ಫೋಟೋಗೆ ಶೂಟ್ ಮಾಡಿಸಿದೆ. ತಾರೆಯರಾದ ಮೇಲೆ ಆಗಾಗ್ಗೆ ನಮ್ಮ ಫೋಟೋಗಳು ಕೂಡ ಅಪ್‌ಡೇಟ್ ಆಗಿರಬೇಕಲ್ವ…. ಫೋಟೋ ಶೂಟ್ ಕೂಡಾ ಹೊಸ ಅನುಭವ ನೀಡಿದೆ. ಮೈಸೂರಿನ ಪ್ರತಿಭಾವಂತ ಛಾಯಾಗ್ರಾಹಕರು ತೆಗೆದಂಥ ಫೋಟೋಗಳಿವು,” ಎಂದು ತನ್ನ ಹೊಸ ಲುಕ್ ಬಗ್ಗೆ ಮೇಘನಾ ಖುಷಿಪಡುತ್ತಾಳೆ.
ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಸಿನಿಮಾರಂಗದಲ್ಲಿ ತನ್ನದೇ ಆದ ಇಮೇಜ್‌ನ್ನು ಬೆಳೆಸಿಕೊಂಡು ಎಲ್ಲ ಪಾತ್ರಕ್ಕೂ ಒಗ್ಗಿಕೊಳ್ಳುವ ಮೇಘನಾಳಿಗೆ ಮುಂದೊಂದು ದಿನ ಚಿತ್ರವೊಂದನ್ನು ನಿರ್ದೇಶಿಸಬೇಕೆಂಬ ಆಸೆ ಇಟ್ಟುಕೊಂಡಿದ್ದಾಳೆ. ಅದಕ್ಕೆಲ್ಲ ಇನ್ನೂ ಸಮಯವಿದೆ. ಸದ್ಯಕ್ಕೆ ನಟನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಹೇಳುವ ಮೇಘನಾಳ ಎಲ್ಲ ಕನಸು ನನಸಾಗಲಿ, ಎಂದು ಹಾರೈಸೋಣ.
– ಸರಸ್ವತಿ