ಈ ಸಿನಿಮಾರಂಗವೊಂದು ಮಾಯಾ ಜಗತ್ತು. ಇಲ್ಲಿ ಯಾವಾಗ ಏನು ಸಂಭವಿಸುತ್ತದೋ ಗೊತ್ತಿಲ್ಲ. ಹಗಲು ಕಳೆದು ರಾತ್ರಿಯಾಗುವುದರೊಳಗೆ ತಾರೆಯಾಗಿಬಿಡುತ್ತಾರೆ. ಅದೃಷ್ಟದ ದೇವತೆ ಒಲಿಯದೆ ಹೋದರೆ ಅವರು ಎಷ್ಟೇ ಸೈಕಲ್ ಹೊಡೆದರೂ ಮುಂದಕ್ಕೆ ಸಾಗುವುದಿಲ್ಲ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಬರು ಯಶಸ್ಸಿನಿಂದ ಬೀಗುತ್ತಿರುವುದನ್ನು ನೋಡುತ್ತಲೇ ಇದ್ದೀವಿ. ಜನಪ್ರಿಯ ಸ್ಟಾರ್‌ಗಳಿಗಿಂತ ಹೆಚ್ಚು ಜನಪ್ರಿಯ ಈ ಹೊಸಬರು ಎನ್ನುವಷ್ಟು ಪ್ರೇಕ್ಷಕರ ಪ್ರೋತ್ಸಾಹ ಸಿಗುತ್ತಿದೆ.
`ಯೂ ಟರ್ನ್' ಚಿತ್ರವನ್ನು ನೀವು ನೋಡಿದ್ದೇ ಆದರೆ ಆ ಚಿತ್ರದಲ್ಲಿ ಹೆಲ್ಮೆಟ್ ಹುಡುಗಿ ಎಂದೇ ಇದೀಗ ಚಿರಪರಿಚಿತಳಾಗಿರುವ ಶ್ರದ್ಧಾ ಶ್ರೀನಾಥ್ ಎನ್ನುವ ಹೊಸ ಪ್ರತಿಭೆಯನ್ನು ತುಂಬಾನೆ ಇಷ್ಟಪಡುತ್ತೀರಿ. ಶ್ರದ್ಧಾ ಶ್ರೀನಾಥ್ ನಮ್ಮ ಕನ್ನಡದ ಹುಡುಗಿ.
`ಯೂ ಟರ್ನ್' ಚಿತ್ರದ ನಂತರ ಈ ನಟಿ ಹಿಂತಿರುಗಿ ನೋಡುತ್ತಲೇ ಇಲ್ಲ. ಸಾಲು ಸಾಲಾಗಿ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಬಿಜಿ ತಾರೆ ಎಂದರೂ ತಪ್ಪಿಲ್ಲ.
ಇದನ್ನೆಲ್ಲ ನೀವು ನಿರೀಕ್ಷಿಸಿದ್ರಾ? ಎಂದು ಶ್ರದ್ಧಾಳನ್ನು ಕೇಳಿದಾಗ......
ಸಿನಿಮಾರಂಗಕ್ಕೆ ಬಂದದ್ದೇ ಆಕಸ್ಮಿಕ. ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂಬ ಕನಸನ್ನೂ ಕಂಡವಳಲ್ಲ. ಆದರೆ ಇಂಗ್ಲಿಷ್ ರಂಗಭೂಮಿಯಲ್ಲಿ ನಾನು ನಿರತಳಾಗಿ ಸಾಕಷ್ಟು ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ನಾನು ರಂಗಭೂಮಿ ನಟಿ. `ಯೂ ಟರ್ನ್' ಚಿತ್ರದಲ್ಲಿ ಅಭಿನಯಿಸುವುದಕ್ಕೆ ಮೊದಲೇ ನನಗೆ ಸಿನಿಮಾವೊಂದರಲ್ಲಿ ನಟಿಸಲು ಕರೆ ಬಂದಿತ್ತು. ಆದರೆ ಆ ಚಿತ್ರ ಅಲ್ಲಿಗೇ ನಿಂತುಹೋಯಿತು. ನಾನು ಆಗಲೇ ನಿರ್ಧರಿಸಿಬಿಟ್ಟೆ, ಈ ಸಿನಿಮಾರಂಗದಲ್ಲಿ ಯಾವುದನ್ನಾದರೂ ಸಾಧಿಸಲೇಬೇಕು ಅಂತ. ನನ್ನನ್ನು ರಂಗಭೂಮಿಯಲ್ಲಿ ಪವನ್ ಕುಮಾರ್ ನೋಡಿದ್ದರು. ಅವರು `ಯೂ ಟರ್ನ್' ಚಿತ್ರ ಶುರುಮಾಡುತ್ತಿದ್ದಾರೆಂದು ತಿಳಿದ ಕೂಡಲೇ ನನ್ನ ಫೋಟೋಗಳನ್ನು ಕಳುಹಿಸಿದ್ದೆ. ಆಡೀಶನ್‌ಗೆ ಹೋದೆ, `ಯೂ ಟರ್ನ್' ಚಿತ್ರಕ್ಕೆ ಆಯ್ಕೆಯಾದೆ. ಆದರೆ ಇವೆಲ್ಲದಕ್ಕೂ ನಾನು ಮಾಡಿದ ದೊಡ್ಡ ತ್ಯಾಗ.... ನನ್ನ ವೃತ್ತಿಯನ್ನು ತೊರೆದದ್ದು. ನಂಬಿಕೆ ಮೇಲೆ ನನ್ನ ಬೆಂಬಲವಾಗಿ ನನ್ನ ಅಪ್ಪ ಅಮ್ಮ ಕೂಡ ನಿಂತಿದ್ದರು. ನಿಜ ಹೇಳಬೇಕೆಂದರೆ ನನ್ನ ಬದುಕು ಮತ್ತು ವೃತ್ತಿ ನಡುವೆ ಗ್ಯಾಂಬ್ಲಿಂಗ್ ತರಹ ನಡೆದುಹೋಗಿತ್ತು. ಆದರೂ ನನ್ನಲ್ಲಿ ತುಂಬು ಆತ್ಮವಿಶ್ವಾಸವಿತ್ತು. ನಾನು ಈ ಸಿನಿಮಾರಂಗದಲ್ಲಿ ಖಂಡಿತವಾಗಿಯೂ ಏನಾದರೂ ಸಾಧಿಸುತ್ತೇನೆ ಅಂತ.
ಈಗಂತೂ ನೀವು ಸಿಕ್ಕಾಪಟ್ಟೆ ಬಿಜಿ. ಹೇಗನಿಸುತ್ತೆ?
`ಯೂ ಟರ್ನ್' ಯಶಸ್ಸಿನ ನಂತರ ಜನ ನನ್ನನ್ನು ಗುರುತುಹಿಡಿದು ಮಾತನಾಡಿಸಿದಾಗ ಒಂಥರಾ ಖುಷಿಯಾಗ್ತಿತ್ತು. ಬಿಡುವಿಲ್ಲದಷ್ಟು ಕೆಲಸ. ನಾರ್ಮಲ್ ಬದುಕಿಗಿಂತ ದೂರ ಸರಿದಂತಾಗಿದೆ. ಅಪ್ಪ ಅಮ್ಮ ಜೊತೆ ಕಾಲ ಕಳೆಯಲು ಆಗುತ್ತಿಲ್ಲ. ಅವರಿಗೂ ನನ್ನ ಬಗ್ಗೆ ತುಂಬಾ ಹೆಮ್ಮೆ ಇದೆ. ಇತ್ತೀಚಿನ ಈ ಬೆಳವಣಿಗೆ ನನ್ನಲ್ಲಿ ಹೊಸತನನ್ನು ತಂದಿದೆ.
ಉಳಿದೆಲ್ಲ ನಾಯಕಿಯರಿಗಿಂತ ನೀವು ಹೇಗೆ ಡಿಫರೆಂಟ್?
ಕಮರ್ಷಿಯಲ್, ಆರ್ಟ್ ಅಂತ ನಾನ್ಯಾತ್ತೂ ವಿಂಗಡಿಸಿ ನೋಡಿಲ್ಲ. ಒಳ್ಳೆ ಚಿತ್ರ, ಕಥೆ, ಪಾತ್ರಗಳ ಮೂಲಕ ನನ್ನನ್ನು ನಾನು ಪ್ರೇಕ್ಷಕರ ಮುಂದೆ ನಿಲ್ಲಿಸಲು ಇಷ್ಟಪಡ್ತೀನಿ. ನನ್ನ ಪಾತ್ರಕ್ಕೆ ಅರ್ಥವಿರಬೇಕು ಅಷ್ಟೆ. ಕಮರ್ಷಿಯಲ್ ಚಿತ್ರಗಳಲ್ಲಿ ಅಂಥ ಪ್ರಯತ್ನಗಳಾಗುತ್ತಿವೆ.





