ಸ್ಟಾರ್ ರೋಲ್.......!
ಸಿನಿಮಾದೊಳಗೊಂದು ಸಿನಿಮಾ.... ನೋಡುವುದು, ಅಂಥ ಪ್ರಯತ್ನಕ್ಕೆ ಕೈ ಹಾಕೋದು ಎರಡೂ ರಿಸ್ಕಿ ಅಂತ ಗೊತ್ತಿದ್ದೂ, ಕೆಲವರು `ಒಂದು ಕೈ ನೋಡೇ ಬಿಡೋಣ,' ಎನ್ನುತ್ತಾರೆ. ಪೂಜಾ ಗಾಂಧಿ ಬಹಳ ರಿಸ್ಕ್ ತಗೊಂಡು `ಅಭಿನೇತ್ರಿ' ಚಿತ್ರ ನಿರ್ಮಿಸಿದ್ದರು. ಮಿನುಗುತಾರೆ ಕಲ್ಪನಾ ಅವರ ಬದುಕಿನಾಧಾರಿತ ಚಿತ್ರ. ಸಾಕಷ್ಟು ಲಾಸ್ ಮಾಡಿಕೊಂಡಿದ್ದಳು ಪೂಜಾ. ಕಲ್ಪನಾ ಅವರ ಪಾತ್ರ ವಹಿಸುವುದರಲ್ಲಿ ಪೂಜಾ ಎಲ್ಲಿ ಎಡವಿದರೋ ಗೊತ್ತಿಲ್ಲ. ಈಗ ಕನ್ನಡದ ಮತ್ತೊಬ್ಬ ಸೂಪರ್ ಸ್ಟಾರ್ ಬದುಕಿನ ಚಿತ್ರ ಸಿದ್ಧವಾಗಲಿದೆ. ಆಕೆ ಯಾರು ಎಂಬುದನ್ನು ರಿವೀವ್ ಮಾಡಿಲ್ಲ. ಆದರೆ ಆ ತಾರೆಯ ಪಾತ್ರವನ್ನು ವಹಿಸುತ್ತಿರುವುದು ಸಿಂಪಲ್ ಹುಡುಗಿ ಶ್ವೇತಾ ಶ್ರೀವಾಸ್ತವ್, ಸೂಪರ್ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳಲಿರುವ ಶ್ವೇತಾ ಕಿರಗೂರಿನ ನಂತರ ನಾನು ಒಪ್ಪಿಕೊಂಡಿರುವ ದಿ ಬೆಸ್ಟ್ ಸಿನಿಮಾ ಇದು. ಭಾವನೆಗಳ ಮೇಲೆ ಸಾಗುವ ಚಿತ್ರ ಆದರೆ ಯಾವ ನಟಿಯ ಬದುಕು ಎಂಬುದನ್ನು ಈಗಲೇ ಹೇಳಲಾಗದು ಎನ್ನುತ್ತಾರೆ ಶ್ವೇತಾ ಶ್ರೀವಾಸ್ತವ್.
ಅಂಬಿಯ ಬ್ಯಾಕ್ ಬೋನ್
ಕನ್ನಡ ಚಿತ್ರರಂಗದ ಅಪರೂಪದ ತಾರಾ ದಂಪತಿ ಎಂದೇ ಜನಪ್ರಿಯರಾಗಿರುವ ಅಂಬರೀಷ್ ಸುಮಲತಾ ಎಲ್ಲರಿಗೂ ಮಾದರಿಯಾಗಿಬಿಟ್ಟಿದ್ದಾರೆ. ಅಂಬರೀಷ್ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹಗಲುರಾತ್ರಿ ಎನ್ನದೇ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರು ಸುಮಲತಾ. ಸಿಂಗಾಪೂರಿಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆದುಕೊಂಡು ಹೋಗುವಾಗಲೂ ಅಭಿಮಾನಿಗಳಿಗೆ ಸುಮಲತಾ ಹೇಳಿದ್ದು ಒಂದೇ ಮಾತು. `ನಿಮ್ಮ ರೆಬಲ್ ಸ್ಟಾರ್‌ನ್ನು ಆರೋಗ್ಯವಂತರನ್ನಾಗಿ ಕ್ಷೇಮವಾಗಿ ಕರೆದುಕೊಂಡು ಬರ್ತೀನಿ,' ಅಂತ ಭರವಸೆ ಕೊಟ್ಟಿದ್ದರು. ನುಡಿದಂತೆ ನಡೆದರು. ಪತಿ ಎಲ್ಲೇ ಹೋದರೂ ಸುಮಲತಾ ಜೊತೆಗೆ ಹೋಗುತ್ತಾರೆ. ಇತ್ತೀಚೆಗೆ `ಅಕ್ಕ' ಸಂಭ್ರಮದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗಿದ್ದಾಗಲೂ ಸಹ ಅವರು ಜೊತೆಯಲ್ಲಿ ಹೋಗಿದ್ದರು. ಒಟ್ಟಿನಲ್ಲಿ ಎಲ್ಲ ವಿಷಯದಲ್ಲೂ ಅಂಬಿಯ ಬ್ಯಾಕ್ ಬೋನ್ ಆಗಿ ನಿಲ್ಲುವ ಸುಮಲತಾ ನಿಜಕ್ಕೂ ಗ್ರೇಟ್!
ವಿನ್ನರ್ ಶಶಾಂಕ್
ಸ್ಯಾಂಡಲ್‌ವುಡ್‌ನ ಯಶಸ್ವೀ ನಿರ್ದೇಶಕ. ಜನ ಶಶಾಂಕ್ ಚಿತ್ರ ಎಂದೇ ನೋಡಲು ಹೋಗುವುದುಂಟು. ಇವರ ನಿರ್ದೇಶನದ `ಮುಂಗಾರುಮಳೆ-2' ಚಿತ್ರ ಭಾರೀ ನಿರೀಕ್ಷೆ ಮೂಡಿಸಿತ್ತು. ಮುಂಗಾರುಮಳೆಯಂತೆ ಇದೂ ಸೂಪರ್ ಹಿಟ್ ಆಗಬಹುದೇ..... ಅಷ್ಟೇ ಚೆನ್ನಾಗಿರುತ್ತಾ..... ಎಂಬ ನಿರೀಕ್ಷೆಯಲ್ಲ ಬಿಡುಗಡೆಯಾಯಿತು. ಅಂದಹಾಗೆ ಶಶಾಂಕ್‌ಗೆ ಈ ಚಿತ್ರ ಸಿಕ್ಕಿದ್ದು ಆ ಘಳಿಗೆ ವಿಶೇಷವಾಗಿದೆ. ನಿರ್ಮಾಪಕ ಗಂಗಾಧರ್ ಮುಂಗಾರುಮಳೆ ಬಿಡುಗಡೆಯಾದ ಸಮಯದಲ್ಲೇ ಈ ಟೈಟಲ್ ರಿಜಿಸ್ಟರ್ ಮಾಡಿದ್ದರಂತೆ. ಭಟ್ಟರು ಬಿಜಿಯಾಗಿದ್ದರಿಂದ ಯಾರಿಂದ ಈ ಸಿನಿಮಾ ಮಾಡಿಸೋದು ಎಂದು ಯೋಚಿಸುತ್ತಿದ್ದಾಗ ಅವರ ಕಣ್ಮುಂದೆ ಬಂದದ್ದು ಶಶಾಂಕ್. ಇಂತಹ ಕಥೆಗಳನ್ನು ಮಾಡಲು ಅವರೇ ಸೂಕ್ತ ಎಂದು ಸಿನಿಮಾ ನಿರ್ದೇಶಿಸುವಂತೆ ಕೇಳಕೊಂಡರಂತೆ. ಚಿತ್ರ ಬಿಡುಗಡೆಯಾಗಿದೆ..... `ಮುಂಗಾರಮಳೆ-2' ತನ್ನ ಮೊದಲಿನ ಕ್ರೇಜನ್ನು ಹುಟ್ಟುಹಾಕಬಹುದೇ? ಕಾದು ನೋಡೋಣ.
ಗೋವಾದಲ್ಲಿ ಜೋಡಿಯಾದರು
ಸ್ಯಾಂಡಲ್ ವುಡ್‌ನ ಯಂಗ್ ಕಪಲ್ ಎಂದೇ ಜನಪ್ರಿಯರಾದರು ಯಶ್ ಮತ್ತು ರಾಧಿಕಾ ಪಂಡಿತ್. `ನಂದಗೋಕುಲ' ಧಾರಾವಾಹಿಯಿಂದ ಕಿರುತೆರೆಗೆ ಪರಿಚಿತರಾದ ಇಬ್ಬರೂ `ಮೊಗ್ಗಿನ ಮನಸು' ಚಿತ್ರದ ಮೂಲಕ ಬೆಳ್ಳಿತೆರೆ ಅಲಂಕರಿಸಿದರು. ಅಂದಿನಿಂದ ಬೆಳೆದ ಸ್ನೇಹ ಇರದು. ಯಶ್ ರಾಧಿಕಾ ಬಗ್ಗೆ ಗಾಸಿಪ್ ಕೇಳುತ್ತಲೇ ಇವತ್ತಾದರೂ ಅವರಿಬ್ಬರೂ ಎಂದಿಗೂ ಆ ರೀತಿ ಸೆಟ್‌ನಲ್ಲಿ ನಡೆದುಕೊಳ್ಳುತ್ತಿರಲಿಲ್ಲ. ಇವರ ಗೆಳೆತನ ಪ್ರೀತಿಗೆ ತಿರುಗಿದಾಗಲೂ ಸಹ ಈ ಜೋಡಿ ಪ್ರೇಮಿಗಳಾಗಿ ವರ್ತಿಸುತ್ತಿರಲಿಲ್ಲ. ಇಂಥಿಂದು ಅಪರೂಪದ ಜೋಡಿ ಇತ್ತೀಚೆಗೆ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಾಗ ಚಿತ್ರರಂಗದ ತಾರೆಗಳ ಮೆರವಣಿಗೆ ಹೊರಟಿತು. ಅಂಬರೀಷ್, ಸುಮಲತಾ, ಮಾಳವಿಕಾ, ಅವಿನಾಶ್, ಪುನೀತ್ ರಾಜ್‌ಕುಮಾರ್ ಹೀಗೆ ತಾರಾ ಮೇಳವೇ ಅಲ್ಲಿ ಜಮಾಯಿಸಿತ್ತು. ಈ ಸುಂದರ ಜೋಡಿ ಉಂಗುರ ತೊಡಿಸುವುದರ ಮೂಲಕ ತಮ್ಮ ಇಷ್ಟು ದಿನದ ಪ್ರೀತಿಗೆ ಹೊಸ ಅರ್ಥ ಕಲ್ಪಿಸಿಕೊಟ್ಟರು. ಜನವರಿಯಲ್ಲಿ ಮದುವೆಯಾಗಲಿದ್ದಾರೆಂಬ ಸುದ್ದಿಯನ್ನು ಅವರ ಕುಟುಂಬದವರು ಸುದ್ದಿಗಾರರ ಮುಂದಿಟ್ಟರು.