ಪಾಸಿಟಿವಿಟಿ ಅಂದರೆ ಸಕಾರಾತ್ಮಕತೆ ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ, ಶಕ್ತಿಯುತರನ್ನಾಗಿ ಮಾಡುತ್ತದೆ. ಆದ್ದರಿಂದ ಎಂತಹ ದೊಡ್ಡ ಕಠಿಣ ಪರಿಸ್ಥಿತಿಯನ್ನಾದರೂ ಎದುರಿಸುವುದು ಅವರಿಗೆ ಕಷ್ಟವಾಗುವುದಿಲ್ಲ. ಪಾಸಿಟಿವಿಟಿಗೆ ಸಕಾರಾತ್ಮಕ ಆಲೋಚನೆ ಇರುವುದು ಅಗತ್ಯ. ಏಕೆಂದರೆ ನಮ್ಮ ಆಲೋಚನೆಯನ್ನು ನಕಾರಾತ್ಮಕವಾಗಿ ಮಾಡುವ ಅಂಶಗಳು ನಮ್ಮ ಸುತ್ತಮುತ್ತ ಇರದಿರುವುದು ಮತ್ತು ನಮ್ಮನ್ನು ನಾವು ಪಾಸಿಟಿವ್ ಎನರ್ಜಿಯುಕ್ತರೆಂದು ಭಾವಿಸುವುದು.

ಪಾಸಿಟಿವ್ ಎನರ್ಜಿ ಎಂದರೇನು?

ಎನರ್ಜಿ ಎಂದರೆ ಶಕ್ತಿ. ಪಾಸಿಟಿವ್ ‌ಎನರ್ಜಿ ಎಂದರೆ ನಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯ ಅನುಭವ ಕೊಡುವಂತಹ ಶಕ್ತಿ ಹಾಗೂ ನಮ್ಮ ಆಲೋಚನೆಯನ್ನು ಸಕಾರಾತ್ಮಕವಾಗಿ ಮಾಡುವಂತಹ ಶಕ್ತಿ. ಯಾವಾಗಲೂ ಪಾಸಿಟಿವ್ ‌ಎನರ್ಜಿಯಿಂದ ತುಂಬಿ ತುಳುಕಲು ನಾವು ನಮ್ಮ ಮನೆಯನ್ನು ಪಾಸಿಟಿವ್ ‌ಎನರ್ಜಿಯುಕ್ತವನ್ನಾಗಿ ಮಾಡಿಸಬೇಕು. ಅದಕ್ಕಾಗಿ ಈ ಕೆಳಗಿನ ವಿಷಯಗಳನ್ನು ಗಮನಿಸಿ.

ಮನೆಯನ್ನು ಸ್ವಚ್ಛವಾಗಿ ವ್ಯವಸ್ಥಿತವಾಗಿಡಿ. ಮನೆಯ ವಸ್ತುಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಪರೀಕ್ಷಿಸಿ. ನೀವು ಕಳೆದ 6 ತಿಂಗಳಿನಿಂದ ಉಪಯೋಗಿಸದ ವಸ್ತುವನ್ನು ಎಸೆದುಬಿಡಿ. ಉಪಯೋಗವಿಲ್ಲದ ವಸ್ತು ನಿಮ್ಮ ಮನೆಯ ಜಾಗವನ್ನು ಆಕ್ರಮಿಸಿ ಕೊಳ್ಳುತ್ತದೆ. ಮನೆಯಲ್ಲಿನ ನಿರರ್ಥಕ ವಸ್ತು ಮತ್ತು ಕಸ ಇತ್ಯಾದಿ ನೆಗೆಟಿವ್ ಎನರ್ಜಿ ಉತ್ಪನ್ನ ಮಾಡುತ್ತದೆ.

ಮನೆಯ ಪ್ರತಿ ಕೋಣೆಯಲ್ಲೂ ವಸ್ತುಗಳನ್ನು ತಂದು ತುರುಕುವ ಬದಲು ಮಾರುಕಟ್ಟೆಯಿಂದ ಅಗತ್ಯವಿರುವ ವಸ್ತುಗಳನ್ನು ಮಾತ್ರ ತನ್ನಿ. ಸ್ವಚ್ಛವಾದ ಮನೆ ಪಾಸಿಟಿವ್ ‌ಎನರ್ಜಿ ತರುತ್ತದೆ.

ಮನೆಯ ಕಿಟಕಿಗಳನ್ನು ತೆರೆದಿಡಿ. ಮನೆಯಲ್ಲಿ ತಾಜಾ ಗಾಳಿ ಓಡಾಡುವಂತಿರಲಿ.

ಮನೆಯ ನಿರರ್ಥಕ ವಸ್ತುಗಳನ್ನು ತಿಂಗಳ ಕೊನೆಯಲ್ಲಿ ಬೀದಿ ಬದಿಯ ಕಸದ ವ್ಯಾಪಾರಿಗೆ ಕೊಟ್ಟುಬಿಡಿ.

ಮನೆಯ ಫರ್ನೀಚರ್‌ನ್ನು ರೀ ಅರೇಂಜ್‌ ಮಾಡುತ್ತಿರಿ. ಆ ಜಾಗದಲ್ಲಿ ಸೇರಿಕೊಂಡಿರುವ ಕಸ, ಧೂಳು ಹೋಗಿ ಸ್ವಚ್ಛವಾಗುತ್ತದೆ. ಹೊಸ ಜಾಗದಲ್ಲಿ ಇಟ್ಟಿರುವ ಫರ್ನೀಚರ್‌ ನಿಮ್ಮೊಳಗೆ ಹೊಸತನದ ಅನುಭವ ತಂದು ಪಾಸಿಟಿವ್ ಎನರ್ಜಿ ಉಂಟುಮಾಡುತ್ತದೆ.

ಮನೆಯಲ್ಲಿ ಪಾಮ್, ಕ್ಯಾಕ್ಟಸ್‌, ಮನಿಪ್ಲ್ಯಾಂಟ್‌, ರಬ್ಬರ್‌ ಪ್ಲ್ಯಾಂಟ್ಸ್, ಫರ್ನ್‌, ಕ್ರೋಟನ್‌, ಆ್ಯಲೋವೆರಾದಂತಹ ಇನ್‌ ಡೋರ್‌ಪ್ಲ್ಯಾಂಟ್ಸ್ ಹಾಗೂ ಬಾಲ್ಕನಿಯಲ್ಲಿ ಪಿಟೋನಿಯಾ ಮತ್ತು ಬೋಗನ್‌, ಬೇಲಿಯಾದಂತಹ ಬಣ್ಣಬಣ್ಣದ ಹೂಗಳು ಮತ್ತು ಬಳ್ಳಿಗಳ ಗಿಡಗಳನ್ನು ಹಾಕಿ. ಇವು ಮನೆಯಲ್ಲಿ ಆಕ್ಸಿಜೆನ್‌ ಮತ್ತು ಪಾಸಿಟಿವ್ ಎನರ್ಜಿ ಉಂಟುಮಾಡುತ್ತವೆ.

ಮನೆಯಲ್ಲಿ ಕೆಮಿಕಲ್‌ಯುಕ್ತ ವಸ್ತುಗಳ ಜಾಗದಲ್ಲಿ ಇಕೋಫ್ರೆಂಡ್ಲಿ ನಾನ್‌ ಟಾಕ್ಸಿಕ್‌ ಹೋಮ್ ಮೇಡ್‌ ಸಲ್ಶೂಶನ್ಸ್ ಉಪಯೋಗಿಸಿ. ಈಗ ಮಾರುಕಟ್ಟೆಯಲ್ಲಿ ಇಕೋ ಫ್ರೆಂಡ್ಲಿ ಸೋಪ್‌, ಸಲ್ಯೂಶನ್ಸ್ ಕ್ರಾಕರಿ ಮತ್ತು ಫರ್ನೀಚರ್‌ ಲಭ್ಯವಿವೆ.

ಮನೆಯಲ್ಲಿ ರೀ ಸೈಕಲ್ ಮಾಡಲಾಗುವ ವಸ್ತುಗಳನ್ನು ಉಪಯೋಗಿಸಿ. ಮನೆಯಲ್ಲಿ ಪ್ರತಿದಿನ ಬೀಳುವ ಕಸಕ್ಕೆ 2 ಡಬ್ಬಿ ಇಡಿ. ಒಂದರಲ್ಲಿ ಪೇಪರ್‌, ವಿಭಿನ್ನ ವಸ್ತುಗಳ ರಾಪರ್‌ಗಳು ಮತ್ತು ಒಣತ್ಯಾಜ್ಯ ಇಡಿ. ಇನ್ನೊಂದರಲ್ಲಿ ತರಕಾರಿ, ಹಣ್ಣುಗಳ ಸಿಪ್ಪೆಗಳು, ಉಳಿದ ಆಹಾರ ಪದಾರ್ಥಗಳು ಇತ್ಯಾದಿ ಹಾಕಿ. ಅವನ್ನು ಒಂದು ಹಳ್ಳದಲ್ಲಿ ಅಥವಾ ಡಬ್ಬಿಯಲ್ಲಿ ಸೇರಿಸಿ ಗೊಬ್ಬರ ತಯಾರಿಸಿ. ಆ ಗೊಬ್ಬರ ನಿಮ್ಮ ಮನೆಯ ಗಿಡಗಳಿಗೆ ಅತ್ಯಂತ ಸಹಕಾರಿ.

ಮನೆಯಲ್ಲಿ ಪ್ರಾಕೃತಿಕ ಬೆಳಕು ಸಾಕಷ್ಟು ಬರುವಂತೆ ವ್ಯವಸ್ಥೆ ಮಾಡಿಸಿ. ಏಕೆಂದರೆ ಕೋಣೆಯಲ್ಲಿರುವ ಕತ್ತಲೆ ನಿಮ್ಮ ಆಲೋಚನೆಯನ್ನು ಸಂಕುಚಿತಗೊಳಿಸುತ್ತದೆ. ಅದೇ ಪ್ರಕಾಶಮಾನವಾದ ಕೋಣೆ ನಿಮ್ಮನ್ನು ಶಕ್ತಿವಂತರನ್ನಾಗಿ ಮಾಡಿ ಪಾಸಿಟಿವ್ ಆಲೋಚನೆಯನ್ನು ವಿಕಸಿತಗೊಳಿಸುತ್ತದೆ. ಬೆಳಗಾಗುತ್ತಲೇ ಕಿಟಕಿಗಳ ಪರದೆಗಳನ್ನು ಸರಿಸಿ ಬೆಳಕು ಚೆನ್ನಾಗಿ ಬರುವಂತೆ ಮಾಡಿ.

ಲೈಟಿಗೂ ಪರ್ಯಾಪ್ತ ವ್ಯವಸ್ಥೆ ಮಾಡಿಕೊಳ್ಳಿ. ಎಲ್ಇಡಿ ಲೈಟ್ಸ್ ಉಪಯೋಗಿಸಿ, ಆರೋಗ್ಯ ಹಾಗೂ ಪರಿಸರ ಎರಡಕ್ಕೂ ಲಾಭಕಾರಿ.

ಮನೆಯಲ್ಲಿ ಲ್ಯಾವೆಂಡರ್‌, ಮಿಂಟ್‌, ಲಾವಂಚದ ಬೇರು, ಮಲ್ಲಿಗೆ, ರೋಸ್‌ನಂತಹ ಪ್ರಾಕೃತಿಕ ಸುವಾಸನೆಯ ಕ್ಯಾಂಡಲ್ಸ್ ಹಚ್ಚಿ. ಅವುಗಳ ಸುವಾಸನೆ ಮನೆಯ ನೆಗೆಟಿವ್ ‌ಎನರ್ಜಿ ದೂರಗೊಳಿಸಿ ಪಾಸಿಟಿವಿಟಿ ಹೆಚ್ಚಿಸುತ್ತದೆ.

ನಿಮ್ಮನ್ನು ನೀವು ಪ್ರಕೃತಿಯ ಸಮೀಪಕ್ಕೆ ಒಯ್ಯಿರಿ. ಮನೆಯಲ್ಲಿ ಜಾಗವಿದ್ದರೆ ಕಿಚನ್‌ ಗಾರ್ಡನ್‌ ಅಗತ್ಯವಾಗಿ ಮಾಡಿಸಿ ಅಥವಾ ಪಾಟುಗಳಲ್ಲಿ ಗಿಡ ನೆಟ್ಟು ಮನೆಯನ್ನು ಹಸಿರುಗೊಳಿಸಿ.

ಮಿರರ್‌ಗಳು ಎನರ್ಜಿ ಉತ್ಪಾದಿಸುತ್ತವೆ. ಪಾಸಿಟಿವ್ ‌ಎನರ್ಜಿ ಹೆಚ್ಚಿಸಬೇಕೆಂದಿರುವ ಸ್ಥಳದಲ್ಲಿ ಕನ್ನಡಿಗಳನ್ನು ಹಾಕಿಸಿ. ಇವನ್ನು ಟಾಯ್ಲೆಟ್‌, ಬಾಥ್‌ರೂಮ್ ಅಥವಾ ಡಸ್ಟ್ ಬಿನ್‌ಗಳ ಬಳಿ ಹಾಕಿಸಬೇಡಿ. ಇಲ್ಲದಿದ್ದರೆ ನೆಗೆಟಿವ್ ‌ಎನರ್ಜಿ ಉತ್ಪನ್ನವಾಗುತ್ತದೆ.

ಜಿ. ಪ್ರತಿಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ