ಇಂದಿನ ಬದಲಾಗುತ್ತಿರುವ ಜೀವನಶೈಲಿಗೆ ಪ್ರತಿಯೊಂದು ವಸ್ತು ಟ್ರೆಂಡಿ ಮಾಡರ್ನ್‌ ಆಗಿದ್ದಾಗ ಮಾತ್ರ ಇಷ್ಟವಾಗುತ್ತದೆ. ಆದರೆ ನಾವು ನಮ್ಮ ಡ್ರೆಸ್‌ಮೇಕಪ್‌ನಲ್ಲಿ ಈ ವಿಷಯ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಮನೆಯನ್ನು ಟ್ರೆಂಡಿ ಆಗಿಸಲು ಮರೆಯುತ್ತೇವೆ. ಪ್ರಸ್ತುತ ಇಂಥ ಬಹಳಷ್ಟು ಟ್ರೆಂಡಿ ವಿಧಾನಗಳಿದ್ದು, ಅವು ಮನೆಗೆ ಹೊಸ ಲುಕ್ಸ್ ಕೊಡುವಲ್ಲಿ ಹೆಚ್ಚು ಸಹಕಾರಿ. ಈಗೆಲ್ಲ ಮನೆಯ ಇಂಟೀರಿಯರ್‌ನಲ್ಲಿ ಟೈಲ್ಸ್ ಫ್ಲೋರಿಂಗ್‌ಗೇ ತನ್ನದೇ ಆದ ಮಹತ್ವವಿದೆ.

ಹಿಂದೆಲ್ಲ ಇದ್ದಂತೆ ಪ್ಲೇನ್‌ ಅಥವಾ ರೆಡ್‌ ಆಕ್ಸೈಡ್‌ ಫ್ಲೋರಿಂಗ್‌ನ್ನು ಯಾರೂ ಬಯಸುವುದಿಲ್ಲ. ಕೇವಲ ಹೋಟೆಲ್‌, ರೆಸ್ಟೋರೆಂಟ್‌ಗಳಿಗೆ ಮೀಸಲಾಗಿದ್ದ ಟೈಲ್ಸ್ ಫ್ಲೋರಿಂಗ್‌ ಈಗ ಮಧ್ಯಮ ವರ್ಗದ ಮನೆ ಮನೆಗಳಲ್ಲೂ ಸಾಮಾನ್ಯ ಎನಿಸಿದೆ. ದಿನೇದಿನೇ ಇದರ ಬೇಡಿಕೆ ಹೆಚ್ಚಲು ಕಾರಣ, ಸ್ಟೋನ್‌ಗೆ ಹೋಲಿಸಿದಾಗ ಟೈಲ್ಸ್ ಹಾಕಿಸುವಿಕೆ ಸುಲಭ ಎನಿಸುತ್ತದೆ. ಜೊತೆಗೆ ಮತ್ತೆ ಮತ್ತೆ ಪಾಲಿಶ್ ಮಾಡಿಸುವ ಅಗತ್ಯ ಇಲ್ಲ. ಜೊತೆಗೆ ಇಡೀ ಮನೆಗೆ ನವನವೀನ ಟಚ್‌ ನೀಡಿದಂತಾಗುತ್ತದೆ.

ಟೈಲ್ಸ್ ಫ್ಲೋರಿಂಗ್ ಲಾಭಗಳು

ನೀವು ನಿಮ್ಮ ಮನೆಯಲ್ಲಿ ಎಷ್ಟೇ ದುಬಾರಿ ಪೀಠೋಪಕರಣ ಬಳಸಿರಲಿ, ಮನೆಯ ಫ್ಲೋರಿಂಗ್‌ ಸರಿಹೋಗುವ ತನಕ ಇಂಟೀರಿಯರ್ಸ್‌ ಉತ್ತಮ ಎಂದೆನಿಸುವುದಿಲ್ಲ. ನೆಲದ ದೃಷ್ಟಿಯಿಂದ ಟೈಲ್ಸ್ ಫ್ಲೋರಿಂಗ್‌ ಸಾಕಷ್ಟು ಮಜಬೂತಾಗಿರುತ್ತದೆ. ದೀರ್ಘ ಬಾಳಿಕೆಯ ವಿಷಯದಲ್ಲೂ ಎರಡು ಮಾತಿಲ್ಲ. ಇದು ಗಡಸು ನೀರಿಗೂ ಜಗ್ಗುವುದಿಲ್ಲ. ಸ್ವಚ್ಛತೆ ಶುಭ್ರತೆಗೂ ಇದು ಪೂರಕ.

ಆಧುನಿಕ ಯುಗದ ಹೊಸ ಟೈಲ್ಸ್ ಮನೆಯ ಸೊಗಸು ಹೆಚ್ಚಿಸಲು ಹಾಗೂ ಗೋಡೆಗಳನ್ನು ಸುಂದರವಾಗಿ ಅಲಂಕರಿಸಲು ಟೈಲ್ಸ್ ಅಳವಡಿಸುವಿಕೆ ಒಂದು ಉತ್ತಮ ಆಯ್ಕೆ ಎನ್ನಬಹುದು. ಇತ್ತೀಚೆಗಂತೂ 3ಡೀ, ವುಡನ್‌, ಸ್ಟೋನ್‌ ಫಿನಿಶ್‌, ಮೊಸಾಯಿಕ್‌, ಸ್ಟೀಲ್ ಟೈಲ್ಸ್ ಇತ್ಯಾದಿಗಳು ಹೆಚ್ಚು ಬೇಡಿಕೆಯಲ್ಲಿವೆ. ಮನೆಗೆ ಪಾರಂಪರಿಕ ಲುಕ್‌ ನೀಡಲು ಹ್ಯಾಂಡ್‌ಮೇಡ್‌ ಟೈಲ್ಸ್ ಬೆಸ್ಟ್ ಆಪ್ಶನ್‌ ಆಗಿದೆ. ಡೆಕೋರೇಟಿವ್ ಟೈಲ್ಸ್ ಸಹ ಲಭ್ಯ. ಅವನ್ನು ಇಡೀ ಫ್ಲೋರ್‌ಗೆ ಹಾಕಿಸುವ ಬದಲು, ಒಂದು ಗೋಡೆಯ ಕೆಲವು ವಿಶಿಷ್ಟ ಭಾಗಗಳಿಗೆ ಹಾಕಿಸಬಹುದು. ಅಗತ್ಯವೆನಿಸಿದರೆ ನೀವು ಮನೆಯ ಮುಂಭಾಗದಲ್ಲೂ ಹಾಕಿಸಬಹುದು.

ಟೈಲ್ಸ್ ನಲ್ಲಿ ಮ್ಯಾಟ್‌ ಫಿನಿಶ್‌ ಹೆಚ್ಚು ಚಾಲ್ತಿಯಲ್ಲಿದೆ. ಅತಿ ಹೊಳೆಯುವ ಗ್ಲಾಸಿ ಟೈಲ್ಸ್ ಈಗ ಔಟ್‌ಡೇಟೆಡ್‌ ಎನಿಸಿವೆ. ಎಷ್ಟೋ ಕಂಪನಿಗಳು ನಿಮ್ಮಿಷ್ಟದ ಆಯ್ಕೆಯಂತೆ ಟೈಲ್ಸ್ ತಯಾರಿಸಿ ಕೊಡುತ್ತವೆ. ಇವು ಕಂಪ್ಯೂಟರ್‌ ನೆರವಿನಿಂದ ರೂಪುಗೊಳ್ಳುತ್ತವೆ. ಇದರಲ್ಲಿ ನೀವು ನಿಮ್ಮ ನೆಚ್ಚಿನ ಮೋಟಿಫ್ಸ್ ಅಥವಾ ಕುಟುಂಬದ ಸದಸ್ಯರ ಫೋಟೋ ಸಹ ಪ್ರಿಂಟ್‌ ಹಾಕಿಸಬಹುದು.

ಟೈಲ್ಸ್ ಪ್ಲೋರಿಂಗ್‌ ಮಾಡಿಸುವಾಗ, ಫ್ಲೋರಿಂಗ್‌ ನಿಮ್ಮ ಮನೆಯ ಗೋಡೆಗಳಿಗೆ ಮ್ಯಾಚ್‌ ಆಗುವಂತಿರಬೇಕು. ನಿಮ್ಮ ಮನೆಯ ಗೋಡೆಗಳು ಲೈಟ್‌ ಕಲರ್‌ ಆಗಿದ್ದರೆ, ಟೈಲ್ಸ್ ಡಾರ್ಕ್‌ ಕಲರ್‌ ಆಗಿರಬೇಕು. ಅದೇ ಗೋಡೆಗಳು ಡಾರ್ಕ್‌ ಕಲರ್‌ ಆಗಿದ್ದರೆ, ಟೈಲ್ಸ್ ಲೈಟ್‌ ಇರುವಂಥದ್ದನ್ನೇ ಆರಿಸಿ.

ಬೇಡಿಕೆಯ ಡಿಸೈನಿಂಗ್ಟೈಲ್ಸ್

ಡಿಜಿಟಲ್ ಪ್ರಿಂಟೆಡ್‌ ಗ್ಲಾಸ್‌ ಟೈಲ್ಸ್

ವುಡನ್‌ ಲುಕ್‌ ಟೈಲ್ಸ್

ಲೆದರ್‌ ವುಡನ್‌ ಟೈಲ್ಸ್

ವಾಟರ್‌ ಟೈಲ್ಸ್ ವಿತ್‌ ಡಿಜಿಟಲ್ ಪ್ರಿಂಟ್‌

ಗ್ಲಿಟರ್‌ ಟೈಲ್ಸ್

ಸ್ಟೋನ್‌ ಕಾನ್ಸೆಪ್ಟ್ ಡಿಸೈನಿಂಗ್‌ ಟೈಲ್ಸ್

ಲಿವಿಂಗ್ಏರಿಯಾ

ಮೇನ್‌ ಹಾಲ್ ಅಥವಾ ಡ್ರಾಯಿಂಗ್‌ ರೂಮ್ ಮನೆಯ ಜೀವಾಳ, ಇದುವೇ ಲಿವಿಂಗ್‌ ಏರಿಯಾ. ಇಲ್ಲಿ ಅತಿಥಿಗಳು ಬಂದು ಕೂರುತ್ತಾರೆ, ಫ್ರೆಂಡ್ಸ್ ಸೇರುತ್ತಾರೆ. ಈ ಜಾಗವನ್ನು ಮನೆಯ ವಿಶಿಷ್ಟ ಭಾಗವಾಗಿಸಬೇಕು. ಇಲ್ಲಿ ನೀವು ಕಾರ್ಪೆಟ್‌ ಟೈಲ್ಸ್ ಹಾಕಿಸಬಹುದು.

ಇದನ್ನು ಇಡೀ ಫ್ಲೋರಿಂಗ್‌ಗೆ ಹಾಕಿಸುವ ಬದಲು, ಒಂದು ನಿಶ್ಚಿತ ಜಾಗದಲ್ಲಿಯೇ ಹಾಕಿಸಿ, ಆಗ ಒಂದು ಕಾರ್ಪೆಟ್‌ ಹಾಸಿರುವಂತೆ ಎದ್ದು ಕಾಣಿಸುತ್ತದೆ. ಇಲ್ಲಿ ನೀವು ಕೆಲವು ಹ್ಯಾಂಡ್‌ ಮೇಡ್‌ ಅಥವಾ ಮೊಸಾಯಿಕ್‌ ಟೈಲ್ಸ್ ಕೂಡ ಹಾಕಿಸಬಹುದು.

ನೀವು ಬಯಸಿದರೆ ಫ್ಲೋರ್‌ಗೆ ಇದನ್ನು ಹಾಕಿಸುವುದರ ಜೊತೆ ಜೊತೆಯಲ್ಲೇ ಲಿವಿಂಗ್‌ ಏರಿಯಾದ ಒಂದು ಗೋಡೆಗೂ ಟೈಲ್ಸ್ ಹಾಕಿಸಬಹುದು.

ನಿಮ್ಮ ಮನೆ ಚಿಕ್ಕದು ಎನಿಸಿದರೆ, ಒಂದೇ ತರಹದ ಟೈಲ್ಸ್ ಹಾಕಿಸಿ, ಆಗ ಅದು ಉತ್ತಮ ಲುಕ್‌ ನೀಡುತ್ತದೆ. ನಿಮ್ಮ ಮನೆ ದೊಡ್ಡದಾಗಿದೆ ಎನಿಸಿದರೆ ಬೇರೆ ಬೇರೆ ಡಿಸೈನಿನ ಟೈಲ್ಸ್ ಹಾಕಿಸಿ. ಲಿವಿಂಗ್‌ ಏರಿಯಾದಲ್ಲಿ ಪ್ಯಾಟರ್ನ್‌ಬಾರ್ಡರ್‌ವುಳ್ಳ ಟೈಲ್ಸ್ ಇದೀಗ ಟ್ರೆಂಡ್‌ನಲ್ಲಿದೆ.

ಬೆಡ್ರೂಮ್

ಇದು ನಾವು ಹಾಯಾಗಿ ರಿಲ್ಯಾಕ್ಸ್ ಮಾಡುವ ವಿಶ್ರಾಂತಿ ಪಡೆಯು ಜಾಗ. ಎಷ್ಟೋ ಜನ ಇಲ್ಲಿ ಡಾರ್ಕ್‌ ಕಲರ್‌ನ ಫ್ಲೋರಿಂಗ್‌ ಮಾಡಿಸುತ್ತಾರೆ. ಎಂದೂ ಹಾಗೆ ಮಾಡದಿರಿ. ಬೆಡ್‌ರೂಮಿನಂಥ ಏರಿಯಾದಲ್ಲಿ ಸದಾ ಫ್ಲೋರಿಂಗ್‌ ಟೈಲ್ಸ್ ಲೈಟ್‌ಪೇಸ್ಟಲ್ ಶೇಡ್ಸ್ ಆಗಿರಬೇಕು.

ಇದರಿಂದ  ಮಾನಸಿಕ ಒತ್ತಡ ದೂರವಾಗಿ ಹಿತಾನುಭವ ಹೆಚ್ಚುತ್ತದೆ. ಬೆಡ್‌ರೂಮಿನಲ್ಲಿ ಫ್ಲೋರ್‌ ಪ್ಯಾಟರ್ನ್‌ ಅಥವಾ ಲೈಟ್‌ ಕಲರ್‌ನ ಟೈಲ್ಸ್ ಬಳಸಬಹುದು. ಇದರ ಹೊರತಾಗಿ ನೀವು ಬಣ್ಣಬಣ್ಣದ ಅಥವಾ ವಿಭಿನ್ನ ಬಗೆಯ ಬಾರ್ಡರ್‌ವುಳ್ಳ ಟೈಲ್ಸ್ ಸಹ ಅಳವಡಿಸಬಹುದು. ಬೆಡ್‌ರೂಮಿಗೆ ನ್ಯಾಚುರಲ್ ಸ್ಟೋನ್‌ ಟೈಲ್ಸ್ ಸಹ ಉತ್ತಮ ಎನಿಸುತ್ತದೆ.

ಕಿಚನ್

ಕಿಚನ್‌ ಚಿಕ್ಕದಾಗಿದ್ದರೆ ಗೋಡೆಗಳಿಗೆ ವೈಟ್‌ ಬಣ್ಣದ ಟೈಲ್ಸ್ ಹಾಕಿಸಬೇಕು. ಅದೇ, ಕಿಚನ್‌ ದೊಡ್ಡದಾಗಿದ್ದರೆ ಫಾಸ್ಟ್ ಕಲರ್‌ ಟೈಲ್ಸ್ ಬಳಸಿಕೊಳ್ಳಿ. ಇತ್ತೀಚೆಗೆ ಕಿಚನ್‌ನಲ್ಲಿ ಸ್ಟೀಲ್ ಲುಕ್‌ವುಳ್ಳ ಟೈಲ್ಸ್ ಟ್ರೆಂಡಿ ಎನಿಸಿದೆ.

ಇವನ್ನು ಅಳವಡಿಸುವುದರಿಂದ ಅಡುಗೆಮನೆಯ ಸ್ವಚ್ಛತೆ, ಶುಭ್ರತೆಯಲ್ಲಿ ಯಾವುದೇ ತರಹದ ತೊಂದರೆ ಇರುವುದಿಲ್ಲ. ಸದಾ ಪ್ಲೇನ್‌ ಸರ್ಫೇಸ್‌ವುಳ್ಳ ಟೈಲ್ಸ್ ನ್ನೇ ಆರಿಸಿ, ಏಕೆಂದರೆ ಇವನ್ನು ಸ್ವಚ್ಛಗೊಳಿಸುವುದು ಸುಲಭ. ತುಸು ಉಬ್ಬಿಕೊಂಡಂತಿರುವ ಟೈಲ್ಸ್ ಅಳವಡಿಸಿದರೆ, ಡಿಸೈನ್‌ಗಳ ಮಧ್ಯೆ ಕೊಳೆ ಸೇರಿಕೊಳ್ಳುತ್ತದೆ. ಅದನ್ನು ಶುಚಿಗೊಳಿಸುವುದು ನಿಜಕ್ಕೂ ಕಷ್ಟವೇ ಸರಿ.

ಬಾಥ್ರೂಮ್

ಈ ಜಾಗ ಮನೆಯಲ್ಲಿ ಹೆಚ್ಚು ಬಳಕೆ ಆಗುವಂಥದು. ಇದನ್ನು ಸದಾ ಶುಚಿಯಾಗಿಟ್ಟು, ಸುಂದರವಾಗಿ ಇರುವಂತೆ ನೋಡಿಕೊಳ್ಳಬೇಕು. ಬಾಥ್‌ರೂಮಿನಲ್ಲಿ ಸದಾ ಸಾಫ್ಟ್ ಫೀಲ್ ಇರುವಂಥ ಟೈಲ್ಸ್ ನ್ನೇ ಅಳವಡಿಸಿ. ಈ ಟೈಲ್ಸ್ ಬರಿಗಾಲಿನ ಓಡಾಟಕ್ಕೆ ಹೆಚ್ಚು ಪೂರಕ, ರಿಲ್ಯಾಕ್ಸಿಂಗ್‌ ಫೀಲ್ ನೀಡುತ್ತದೆ.

ಕೆಲವು ಜನ ಬಾಥ್‌ರೂಮಿನಲ್ಲೂ ಹೂಬಳ್ಳಿಗಳ ವಿನ್ಯಾಸದ ಟೈಲ್ಸ್ ಹಾಕಿಸುತ್ತಾರೆ, ಹಾಗೆ ಮಾಡಬೇಡಿ. ಕೆಲವು ರಿಫ್ರೆಶಿಂಗ್‌ ಥೀಮ್ ಆಧರಿಸಿದ ಟೈಲ್ಸ್ ಹಾಕಿಸಿ, ಆಗ ಸ್ನಾನ ಮಾಡುವ ಸಮಯದಲ್ಲಿ ನೀವು ಅದರೆಡೆ ದೃಷ್ಟಿಸಿದಂತೆ ನಿಮಗೂ ರಿಫ್ರೆಶಿಂಗ್‌ ಫೀಲಿಂಗ್ ಬರುವಂತಿರಬೇಕು. ಇತ್ತೀಚೆಗೆ ಬಾಥ್‌ರೂಮಿಗೆ ಸೀ ಬ್ಲೂ  ಪಿಂಕ್‌ ಕಲರ್‌ನ ಆ್ಯಂಟಿ ಸ್ಕಿಡ್‌ ಟೈಲ್ಸ್ ಹೆಚ್ಚು ಬೇಡಿಕೆಯಲ್ಲಿವೆ. ಬಾಥ್‌ರೂಮಿಗೆ ಸೆರಾಮಿಕ್‌ ಟೈಲ್ಸ್ ಕೂಡ ಹಲವು ವಿಧಗಳಲ್ಲಿ ಲಭ್ಯ. ನೀವು ಬಾರ್ಡರ್‌ ಇರುವಂಥ, ಕ್ರಿಸ್‌ ಕ್ರಾಸ್‌ ಪ್ಯಾಟರ್ನ್‌ನ ಟೈಲ್ಸ್ ಸಹ ಹಾಕಿಸಬಹುದು.

ವಾಲ್ ಟೈಲ್ಸ್

ಇತ್ತೀಚೆಗೆ ಟೈಲ್ಸ್ ನ್ನು ಕೇವಲ ನೆಲಕ್ಕೆ ಮಾತ್ರ ಸೀಮಿತಗೊಳಿಸದೆ, ಗೋಡೆಗಳಿಗೂ ಹಾಕಿಸುವ ಪದ್ಧತಿ ಇದೆ. ಹಾಗೆ ನೋಡಿದರೆ ಮನೆಯ ಎಷ್ಟೋ ಭಾಗಗಳ ಗೋಡೆಗಳಿಗೆ ಇಂಥ ಟೈಲ್ಸ್ ಬೇಕಾಗುತ್ತದೆ. ಉದಾ : ಗಾರ್ಡನ್‌ಗೆ ಹೊಂದಿಕೊಂಡ ಗೋಡೆ ಅಥವಾ ಮೆಟ್ಟಿಲುಗಳ ಗೋಡೆ ಇತ್ಯಾದಿ. ಈಜಿಫ್ಟ್, ಇಂಡಿಯನ್‌, ಟ್ರೆಡಿಶನ್‌, ಚೈನೀಸ್‌ ಪ್ಯಾಟರ್ನ್‌ವುಳ್ಳ ಟೈಲ್ಸ್ ಡ್ರಾಯಿಂಗ್‌ ರೂಮ್ ಅಥವಾ ಎಂಟ್ರಿ ಗೇಟ್‌ ಬಳಿ ಪೇಂಟಿಂಗ್‌ ತರಹ ಬಳಸಿಕೊಳ್ಳಬಹುದು.

ಸಂರಕ್ಷಣೆ ಸಾಮಾನ್ಯವಾಗಿ ಟೈಲ್ಸ್ ದೀರ್ಘ ಬಾಳಿಕೆ ಬರುತ್ತದೆ. ಇನ್ನು ಶುಚಿಗೊಳಿಸುವುದೂ ಸುಲಭ. ಕೆಲವರಂತೂ ಟೈಲ್ಸ್ ಶುಚಿಗೊಳಿಸಲು ಹಾರ್ಶ್‌ ಕೆಮಿಕಲ್ಸ್ ಬಳಸುತ್ತಾರೆ. ಖಂಡಿತಾ ಹಾಗೆ ಮಾಡಬೇಡಿ. ಟೈಲ್ಸ್ ಶುಚಿಗೊಳಿಸಲು ಟಾಯ್ಲೆಟ್‌ ಕ್ಲೀನರ್ ಬಳಸಿದರಾಯಿತು. ಸರ್ಫ್‌ ಕದಡಿದ ನೀರಿನಿಂದಲೂ ಟೈಲ್ಸ್ ಶುಚಿಗೊಳಿಸಬಹುದು.

ಎನ್‌. ಅಲಂಕೃತಾ 

ಕೆಲವು ಕಿವಿಮಾತುಗಳು

ಟೈಲ್ಸ್ ಕೊಳ್ಳುವಾಗ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಅವೆಲ್ಲ ಒಂದೇ ಬ್ಯಾಚಿನದಾಗಿರಬೇಕು.

ಎಂದೂ ಟೈಲ್ಸ್ ಪ್ಲೋರಿಂಗ್‌ನಲ್ಲಿ ಸಣ್ಣ ಸಣ್ಣ ಟೈಲ್ಸ್ ಬಳಸದಿರಿ. ಏಕೆಂದರೆ ಇವುಗಳ ಜಾಯಿಂಟ್ಸ್ ಉತ್ತಮ ಲುಕ್‌ ಕೊಡುವುದಿಲ್ಲ. ಹಾಗಾಗಿ ದೊಡ್ಡ ಟೈಲ್ಸ್ ನ್ನೇ ಹಾಕಿಸಬೇಕು.

ಟೈಲ್ಸ್ ಆರಿಸುವಾಗ ನಿಮ್ಮ ಮನೆಯ ಗೋಡೆಗಳನ್ನೆಂದೂ ನಿರ್ಲಕ್ಷಿಸಬೇಡಿ. ಗೋಡೆ ಟೈಲ್ಸ್ ಬಣ್ಣ ಮ್ಯಾಚ್‌ ಆಗದೆ ಇಜ್ಜೋಡು ಆಗಬಾರದು.

ಉಳಿದ ಟೈಲ್ಸ್ ನ್ನು ಜೋಪಾನವಾಗಿ ಎತ್ತಿಡಿ. ಯಾವುದೇ ಟೈಲ್ಸ್ ಒಡೆದುಹೋದರೆ, ಇದರಿಂದ ರೀಪ್ಲೇಸ್‌ ಮಾಡಿ. ಒಮ್ಮೊಮ್ಮೆ ಇವುಗಳಿಂದ ಡೆಕೋರೇಟಿವ್ ‌ಐಟಂ ತಯಾರಿಸಿ ಗೃಹಾಲಂಕಾರಕ್ಕೂ ಬಳಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ