ಮಹಿಳೆಯರಲ್ಲಿ ನೈಸರ್ಗಿಕವಾಗಿ 45 ರಿಂದ 52 ವಯಸ್ಸಿನಲ್ಲಿ ಮುಟ್ಟು ನಿಲ್ಲುತ್ತದೆ. ಇದನ್ನೇ ಮೆನೊಪಾಸ್‌ ಎನ್ನುತ್ತೇವೆ. ಕೆಲವರಲ್ಲಿ ಈ ಪ್ರಕಿಯೆ ನಿಧಾನವಾಗಿ ಆರಂಭವಾದರೆ, ಮತ್ತೆ ಕೆಲವರಲ್ಲಿ ಆಕಸ್ಮಿಕವಾಗಿ ಬಂದುಬಿಡುತ್ತದೆ.

ಮೆನೊಪಾಸ್‌ ಬಳಿಕ ಅಂಡಕೋಶದಿಂದ ಈಸ್ಟ್ರೋಜೆನ್‌ ಮತ್ತು  ಸ್ವಲ್ಪ ಮಟ್ಟಿನ ಪ್ರೊಜೆಸ್ಟೆರಾನ್‌ ಹಾರ್ಮೋನು ಸ್ರಾವ ಆಗುವ ಪ್ರಕ್ರಿಯೆ ಸ್ಥಗಿತಗೊಳ್ಳುವ ಕಾರಣದಿಂದ ಅನೇಕ ದೈಹಿಕ ಹಾಗೂ ವರ್ತನೆಗೆ ಸಂಬಂಧಪಟ್ಟ ಬದಲಾವಣೆಗಳು ಗೋಚರಿಸುತ್ತವೆ. ವಿಶೇಷ ರೂಪದಲ್ಲಿ  ಈಸ್ಟ್ರೋಜೆನ್‌ ಹಾರ್ಮೋನು ಸ್ರಾವ ನಿಂತುಹೋಗುವ ಕಾರಣದಿಂದ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತವೆ.

ಮುಟ್ಟಂತ್ಯದ ಬಳಿಕ ಈ ಸಮಸ್ಯೆಗಳು ಪೋಸ್ಟ್ ಮೆನೊಪಾಸ್‌ ಸಿಂಡ್ರೋಮ್ (ಪಿಎಂಎಸ್‌) ಎಂದು ಕರೆಯಿಸಿಕೊಳ್ಳುತ್ತವೆ. ಈ ಹಂತದಲ್ಲಿ ಸ್ತನಗಳ ಗಾತ್ರ ಕುಗ್ಗುತ್ತದೆ ಮತ್ತು ಜೋತು ಬೀಳುತ್ತವೆ. ಯೋನಿ ಶುಷ್ಕಗೊಳ್ಳುತ್ತದೆ. ಲೈಂಗಿಕ ಸಮಾಗಮ ನಡೆಸುವಾಗ ನೋವು ಎನಿಸುತ್ತದೆ. ಮುಖದ ಮೇಲೆ ಕೂದಲು ಹುಟ್ಟಿಕೊಳ್ಳುತ್ತದೆ. ಮಾನಸಿಕವಾಗಿ ಅಸಮತೋಲನ ಉಂಟಾಗುತ್ತದೆ. ಬಹುಬೇಗ ಕೋಪ ಬರುತ್ತದೆ. ಒತ್ತಡಗ್ರಸ್ತರಾಗುತ್ತಾರೆ, ಹೃದಯಾಘಾತದ ಅಪಾಯ ಹೆಚ್ಚುತ್ತದೆ, ಕಾರ್ಯ ಸಾಮರ್ಥ್ಯ ಕುಗ್ಗುತ್ತದೆ.

ಪಿಎಂಎಸ್ಗೆ ಚಿಕಿತ್ಸೆ

ಪಿಎಂಎಸ್‌ ಕಾರಣದಿಂದಾಗಿ ಯಾವ ಮಹಿಳೆಯರ ದೃಷ್ಟಿಕೋನ ಸಕಾರಾತ್ಮಕವಾಗಿರುತ್ತೊ, ಸದಾ ಖುಷಿ ಮತ್ತು ಸಂತೃಪ್ತಿಯಿಂದ ಇರಲು ಪ್ರಯತ್ನಿಸುತ್ತಿರುತ್ತಾರೊ ಅವರಲ್ಲಿ ಈ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಬಾಧಿಸುತ್ತದೆ. ಅವರಿಗೆ ಯಾವುದೇ ಚಿಕಿತ್ಸೆಯ ಅಗತ್ಯ ಉಂಟಾಗದು. ಯಾರಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸಮಸ್ಯೆಗಳು ತಲೆದೋರಿದರೆ ಅವರು ತಮ್ಮ ವರ್ತನೆಯಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಿಕೊಳ್ಳುವುದರ ಮೂಲಕ, ಸಕಾಲಕ್ಕೆ ಊಟ ತಿಂಡಿ ನಡಿಗೆ ಅನುಸರಿಸುವುದರ ಮೂಲಕ ಸಕ್ರಿಯ ಜೀವನಶೈಲಿ ರೂಪಿಸಿಕೊಳ್ಳಬಹುದು.

ಯಾವ ಮಹಿಳೆಯರಲ್ಲಿ ಸಮಸ್ಯೆ ಗಂಭೀರವಾಗಿರುತ್ತದೋ ಅವರು ವೈದ್ಯರನ್ನು ಭೇಟಿಯಾದರೆ ಈಸ್ಟ್ರೋಜೆನ್‌ ಹಾರ್ಮೋನು ಹಾಗೂ ಪ್ರೊಜೆಸ್ಟೆರಾನ್‌ ಹಾರ್ಮೋನು ಮಿಶ್ರಣದ ಮಾತ್ರೆ ಸೇವನೆಯ ಬಗ್ಗೆ ಸಲಹೆ ನೀಡುತ್ತಾರೆ. ಈ ರೀತಿಯ ಚಿಕಿತ್ಸೆ `ಹಾರ್ಮೋನ್‌ ರೀಪ್ಲೇಸ್‌ಮೆಂಟ್‌ ಥೆರಪಿ’ ಎಂದು ಕರೆಯಿಸಿಕೊಳ್ಳುತ್ತದೆ. ಆದರೆ ಈ ಮಾತ್ರಗಳನ್ನು ದೀರ್ಘಾವಧಿಯವರೆಗೆ ಸೇವನೆ ಮಾಡುವುದರಿಂದ ಹಲವು ಬಗೆಯ ದುಷ್ಪರಿಣಾಮಗಳು ಉಂಟಾಗಬಹುದು. ಹೀಗಾಗಿ ರಜೋನಿವೃತ್ತಿಯ ಬಳಿಕ ಈ ಬಗೆಯ ಮಾತ್ರೆಗಳನ್ನು ಸೇವಿಸುವಾಗ ಕೆಳಕಂಡ ಎಚ್ಚರಿಕೆಗಳನ್ನು ವಹಿಸಬೇಕು.

ಎಚ್ಆರ್ಟಿಯ ಲಾಭ

ಮುಟ್ಟಂತ್ಯದ ಬಳಿಕ ಎಚ್‌ಆರ್‌ಟಿ ಸೇವನೆಯಿಂದ ಹಾಟ್‌ ಫ್ಲ್ಯಾಶೆಸ್‌ ಅಂದರೆ ದೇಹದಲ್ಲಿ ಬಿಸಿ ಉತ್ಪನ್ನವಾಗುವುದರಿಂದ ವಿಪರೀತ ಬೆವರು, ಹೃದಯಬಡಿತ ತೀವ್ರಗೊಳ್ಳುವಂತಹ ಲಕ್ಷಣಗಳು ಗೋಚರಿಸುತ್ತವೆ.

ಹಾರ್ಮೋನ್‌ ಥೆರಪಿ ಅನುಸರಿಸುವುದರಿಂದ ಯೋನಿ ಶುಷ್ಕತೆ ಕಡಿಮೆಯಾಗಿ ಸಮಾಗಮದ ಸಮಯದಲ್ಲಿ ನೋವಿನ ಪ್ರಮಾಣ ಕಡಿಮೆಗೊಳ್ಳುತ್ತದೆ.

ಈಸ್ಟ್ರೋಜೆನ್‌ ಹಾರ್ಮೋನಿನ ಕೊರತೆಯಿಂದ ಯೋನಿ ಸೋಂಕು ಉಂಟಾಗುತ್ತದೆ. ಎಚ್‌ಆರ್‌ಟಿಯಿಂದ ಅದರ ಪ್ರಮಾಣ ಕಡಿಮೆಗೊಳ್ಳುತ್ತದೆ.

ಎಚ್‌ಆರ್‌ಟಿಯಿಂದ ಮೂತ್ರ ಸೋಂಕಿಗೆ  ರಕ್ಷಣೆ ದೊರಕುತ್ತದೆ.

ಮುಟ್ಟಂತ್ಯದ ಸಮಯದಲ್ಲಿ ಉಂಟಾಗುವ ಮಾಂಸಖಂಡಗಳು, ಕೀಲುಗಳ ನೋವು ನಿಶ್ಶಕ್ತಿ ಮುಂತಾದ ದೂರುಗಳು ಕಡಿಮೆಯಾಗುತ್ತವೆ.

ನಿದ್ರಾಹೀನತೆ, ಚಿಂತೆ, ಖಿನ್ನತೆ ಮುಂತಾದ ಸಮಸ್ಯೆಗಳಿಂದಲೂ ಸಾಕಷ್ಟು ನಿರಾಳತೆ ದೊರಕುತ್ತದೆ.

ಮಹಿಳೆಯರಲ್ಲಿ ಮುಟ್ಟು ನಿಂತ ಬಳಿಕ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಆಸ್ಚ್ರೊಪೊರೊಸಿಸ್‌ನ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ಅವು ಸಣ್ಣ ಏಟಿನಿಂದಲೂ ಬಹುಬೇಗ ಮುರಿಯಬಹುದು. ಎಚ್‌ಆರ್‌ಟಿಯಿಂದಾಗಿ ಈ ತೊಂದರೆಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಎಚ್‌ಆರ್‌ಟಿ ಅನುಸರಿಸುವುದರಿಂದ ಕಾರ್ಯ ಸಾಮರ್ಥ್ಯ ಹೆಚ್ಚುತ್ತದೆ. ಜೊತೆಗೆ ನಿರ್ಣಯ ತೆಗೆದುಕೊಳ್ಳುವ ಶಕ್ತಿ, ಏಕಾಗ್ರತೆ ಸಾಧಿಸುವಿಕೆಯಂತಹ ಅನೇಕ ಉಪಯೋಗಗಳು ಆಗುತ್ತವೆ.

ಎಚ್‌ಆರ್‌ಟಿಯಿಂದ ತ್ವಚೆಯಲ್ಲಿ ಮೃದುತ್ವ, ಕೂದಲಿನ ಹೊಳಪು ಹೆಚ್ಚುತ್ತದೆ.

ಇದರ ಸೇವನೆಯಿಂದ ವೃದ್ಧಾಪ್ಯದಲ್ಲಿ ಹಲ್ಲು, ಕಣ್ಣುಗಳಲ್ಲಿ ಉಂಟಾಗುವ ಸಮಸ್ಯೆಗಳು ನಿಧಾನಗೊಳ್ಳುತ್ತವೆ.

ಅಧ್ಯಯನಗಳಿಂದ ತಿಳಿದು ಬಂದ ಸಂಗತಿಯೆಂದರೆ, ಎಚ್‌ಆರ್‌ಟಿ ಪ್ರಕ್ರಿಯೆ ಅನುಸರಿಸುತ್ತಿರುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಸಾಧ್ಯತೆ ಕಡಿಮೆಯಾಗುತ್ತದೆ. ಕರುಳಿನ ಕ್ಯಾನ್ಸರ್‌ ಹಾಗೂ ಹೃದ್ರೋಗದ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ.

ಎಚ್ಆರ್ಟಿಯ ದುಷ್ಪರಿಣಾಮಗಳು

ಕೇವಲ ಈಸ್ಟ್ರೋಜೆನ್‌ ಹಾರ್ಮೋನಿನ ಸೇವನೆಯಿಂದ ಗರ್ಭಕೋಶದ ಕ್ಯಾನ್ಸರಿನ ಅಪಾಯ ಹೆಚ್ಚಾಗುತ್ತದೆ. ಗರ್ಭಕೋಶ ತೆಗೆಸಿಕೊಳ್ಳದೇ ಇದ್ದಲ್ಲಿ, ಈಸ್ಟ್ರೋಜೆನ್‌ ಪ್ರೊಜೆಸ್ಟೆರಾನ್‌ ಹಾರ್ಮೋನ್‌ ಮಿಶ್ರಣ ಇರುವ ಮಾತ್ರೆಗಳನ್ನು ಸೇವಿಸಬೇಕು. ಒಂದುವೇಳೆ ಶಸ್ತ್ರಚಿಕಿತ್ಸೆ ಮುಖಾಂತರ ಗರ್ಭಕೋಶ ತೆಗೆಸಿಕೊಂಡಿದ್ದರೆ ಕೇವಲ ಈಸ್ಟ್ರೋಜೆನ್‌ ಹಾರ್ಮೋನನ್ನು ಮಾತ್ರ ಸೇವಿಸಬೇಕು.

ಎಚ್‌ಆರ್‌ಟಿ ಸೇವನೆಯಿಂದ ರಕ್ತನಾಳಗಳಲ್ಲಿ ರಕ್ತ ಗರಣೆಗಟ್ಟುವ ಸಾಧ್ಯತೆ ಹೆಚ್ಚುತ್ತದೆ.

ಇವುಗಳ ಸೇವನೆಯಿಂದ ಪಿತ್ತಕೋಶದಲ್ಲಿ ಕಲ್ಲು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಎಚ್‌ಆರ್‌ಟಿಯ ನಿರ್ಧಾರಿತ ಪ್ರಮಾಣವನ್ನು ಮುಟ್ಟು ಅಂತ್ಯಗೊಳ್ಳುವ ಸಮಯದಲ್ಲಿ ಹಾಗೂ ಆ ಬಳಿಕ ಉಂಟಾಗುವ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು 5 ವರ್ಷಗಳ ಕಾಲ ಸೇವಿಸಬಹುದು.

ಮುಟ್ಟು ನಿಂತ ಬಳಿಕ ಉಂಟಾಗುವ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಕೇವಲ ಎಚ್‌ಆರ್‌ಟಿಯೊಂದೇ ಪರಿಹಾರವಲ್ಲ. ಮೆನೊಪಾಸ್‌ ಸಂದರ್ಭದಲ್ಲಿ ಹಾಗೂ ಆ ಬಳಿಕ ಕ್ಯಾಲ್ಶಿಯಂ ಸಾಕಷ್ಟು ಪ್ರಮಾಣದಲ್ಲಿ ಇರುವ ಆಹಾರಗಳನ್ನು ಸೇವಿಸಿ. ಇದರ ಹೊರತಾಗಿ ಮಲ್ಟಿ ವಿಟಮಿನ್‌ ಕ್ಯಾಪ್ಸೂಲ್ ‌ಮತ್ತು ವಿಟಮಿನ್‌ `ಡಿ’ಯನ್ನು ಸೇವಿಸಿ.

ಡಾ. ಜೆ. ಲಲಿತಾ ಗೋಪಾಲ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ