ಮಹಾರಾಷ್ಟ್ರದ ಕೊಲ್ಹಾಪುರದ ಕೊಲ್ಹಾಪುರಿ ಚಪ್ಪಲಿಗಳು ಈಗ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಆಸುಪಾಸು ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿವೆ. ಕೊಲ್ಹಾಪುರಿ ಚಪ್ಪಲಿಗಳು 13ನೇ ಶತಮಾನದಲ್ಲಿಯೇ ತಯಾರಾಗುತ್ತಿದ್ದವೆಂದು ಹೇಳಲಾಗುತ್ತದೆ. ಯಾವ ಊರುಗಳಲ್ಲಿ ಈ ಚಪ್ಪಲಿಗಳು ತಯಾರಾಗುತ್ತಿದ್ದವೋ ಆ ಊರಿನ ಹೆಸರಿನಿಂದಲೇ ಚಪ್ಪಲಿಗಳು ಪ್ರಸಿದ್ಧವಾಗಿದ್ದವು.
ಕೊಲ್ಹಾಪುರಿ ಚಪ್ಪಲಿಗಳು ಅತಿ ಹೆಚ್ಚು ಪ್ರಸಿದ್ಧಿಗೆ ಬಂದದ್ದು 1920ರ ಬಳಿಕವೇ. ಅಲ್ಲಿನ ಸೌದಾಗರ್ ಕುಟುಂಬದವರು ಚಪ್ಪಲಿಗಾಗಿ ಹೊಸ ಡಿಸೈನ್ ರೂಪಿಸಿದರು. ಕಿವಿಯ ಹಾಗಿರುವ ಅತ್ಯಂತ ತೆಳ್ಳಗಿನ ಡಿಸೈನ್ ಆಗಿದ್ದರಿಂದ ಅದಕ್ಕೆ `ಕಾನಲಿ’ ಎಂದು ಕರೆದರು. ಅಲ್ಲಿಂದ ಚಪ್ಪಲಿಗಳು ಮುಂಬೈಗೂ ಹೋದವು. ಅಲ್ಲಿಯೂ ಜನರಿಂದ ಮೆಚ್ಚುಗೆ ಗಳಿಸಿದವು.
ಕೊಲ್ಹಾಪುರಿ ಚಪ್ಪಲಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಸೌದಾಗರ್ ಕುಟುಂಬದವರು ಕೆಲವು ಹೊಸಬರಿಗೂ ಅದರ ತಯಾರಿಕೆ ಬಗ್ಗೆ ಕಲಿಸಿಕೊಟ್ಟರು. ಹೀಗೆ ದೇಶದ ಬೇರೆಬೇರೆ ಕಡೆ ಇವು ಜನಪ್ರಿಯತೆ ಗಳಿಸಿದವು. ಕಾನಲಿ ಚಪ್ಪಲಿಗಳೇ ಮುಂದೆ ಕೊಲ್ಹಾಪುರಿ ಚಪ್ಪಲಿಗಳಾಗಿ ಪ್ರಸಿದ್ಧಿಗೆ ಪಾತ್ರನೈದವು.
ಎತ್ತು ಹಾಗೂ ಕೋಣಗಳ ಚರ್ಮದಿಂದ ತಯಾರಾಗುವ ಈ ಚಪ್ಪಲಿಗಳು ಬಾಳಿಕೆಯ ಜೊತೆಗೆ ಬೇಸಿಗೆಯ ಬಿಸಿಯಿಂದಲೂ ಜನರ ಕಾಲುಗಳನ್ನು ರಕ್ಷಿಸುತ್ತವೆ.
ಮುಂಬೈನಿಂದ ಪರಿಚಯ
ಮುಂಬೈನ ದಾದರ್‌ನಲ್ಲಿರುವ ಚಂದ್ರಕಾಂತ ಚಪ್ಪಲ್ ಮಾರ್ಟ್‌ನ ಮೂಲಕ ಚಂದ್ರಕಾಂತ ಪಾಖರೆ ಕೊಲ್ಹಾಪುರಿ ಚಪ್ಪಲಿ ಅಂಗಡಿಗಳು ಮುಂಬೈನ ಬೇರೆಬೇರೆ ಸ್ಥಳಗಳಲ್ಲಿ ಇವೆ. ಅವರ ಕುಟುಂಬ ಈ ಉದ್ಯೋಗವನ್ನು ಕಳೆದ 50 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈಗಾಗಲೇ 3 ಪೀಳಿಗೆ ಈ ಉದ್ಯೋಗವನ್ನು ಮುನ್ನಡೆಸಿವೆ. ಈಗ ಚಪ್ಪಲಿಗಳನ್ನು ಜನರ ಬೇಡಿಕೆಗನುಗುಣವಾಗಿ ಬೇರೆಬೇರೆ ಪ್ಯಾಟರ್ನ್‌ಗಳಲ್ಲಿ ತಯಾರಿಸಲಾಗುತ್ತಿದೆ. ಈ ಚಪ್ಪಲಿಗಳು ಹೆಚ್ಚಾಗಿ ಕೊಲ್ಹಾಪುರ, ಮೀರಜ್, ಸತಾರಾ ಮುಂತಾದ ಕಡೆ ತಯಾರಾಗಿ ಮುಂಬೈ ಮಾರುಕಟ್ಟೆಗೆ ಬರುತ್ತವೆ. ಚಪ್ಪಲಿ ತಯಾರಿಸಲು ಬೇಕಾಗುವ ಚರ್ಮ ಚೆನ್ನೈ ಹಾಗೂ ಕೋಲ್ಕತಾದಿಂದ ಬರುತ್ತವೆ.
ಡಿಸೈನರ್ ಪೂಜಾ ಪಾರ್ ಈ ಬಗ್ಗೆ ಹೀಗೆ ಹೇಳುತ್ತಾರೆ, “ಕೊಲ್ಹಾಪುರಿ ಚಪ್ಪಲಿಗಳು 4 ರಿಂದ 5 ರೇಂಜ್‌ಗಳಲ್ಲಿ ದೊರೆಯುತ್ತವೆ. ಸ್ಟೈಲಿಶ್ ಹಾಗೂ ಫ್ಯಾಷನೆಬಲ್ ಆಗಿರುವುದರ ಜೊತೆ ಜೊತೆಗೆ ಇವು ರಿಚ್ ಆಗಿರುವುದನ್ನೂ ಬಿಂಬಿಸುತ್ತವೆ. ಕೊಲ್ಹಾಪುರಿ ಚಪ್ಪಲಿಗಳು `ಕಾರ್ ಟು ಕಾರ್ಪೆಟ್’ ಶ್ರೇಣಿಯಲ್ಲಿ ಬರುತ್ತವೆ. ಕುರುಬ ಜನಾಂಗದವರು ಮತ್ತು ರೈತರು ಈ ಚಪ್ಪಲಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಏಕೆಂದರೆ ಇವು ಬಾಳಿಕೆ ಬರುವುದರ ಜೊತೆ ಜೊತೆ ಆರಾಮದಾಯಕ ಕೂಡ ಆಗಿರುತ್ತವೆ. ರಾಂಪ್ ಶೋ ಹಾಗೂ ಚಲನಚಿತ್ರಗಳಲ್ಲೂ ಇವುಗಳ ಬಳಕೆ ಸ್ಟೈಲಿಶ್ ರೂಪದಲ್ಲಿ ಮಾಡಲಾಗುತ್ತಿದೆ.”
ವಿದೇಶದಲ್ಲೂ ಕ್ರೇಝ್
ಕೊಲ್ಹಾಪುರಿ ಚಪ್ಪಲಿಗಳ ಕ್ರೇಜ್ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಇದೆ. ಅಲ್ಲೂ ಕೂಡ ಇವನ್ನು ಧರಿಸಲಾಗುತ್ತಿದೆ. ವೆಸ್ಟರ್ನ್, ಇಂಡಿಯನ್ ಎಲ್ಲ ಬಗೆಯ ಉಡುಗೆಗಳೊಂದಿಗೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸಿಂಗಾಪೂರ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಕೊಲ್ಹಾಪುರಿ ಕಾಪಸಿ, ಕೊಲ್ಹಾಪುರಿ ಪಾಯಿಂಟೆಡ್, ಲೇಡೀಸ್ ಹಾಗೂ ಜೆಂಟ್ಸ್ ಮೋಝರಿ ಮುಂತಾದವು ಇದರ ಬೇರೆ ಬೇರೆ ಪ್ಯಾಟರ್ನ್‌ಗಳಾಗಿವೆ. ಕೊಲ್ಹಾಪುರಿ ಚಪ್ಪಲಿಗಳನ್ನು ಖರೀದಿಸುವಾಗ ಈ ಕೆಳಕಂಡ ಸಂಗತಿಗಳನ್ನು ಗಮನಿಸಿ :
ಅವುಗಳ ಹೊಲಿಗೆಯ ಬಗ್ಗೆ ಗಮನ ಕೊಡಿ.
ಧರಿಸಿದಾಗ ಕಾಲಿಗೆ ಚುಚ್ಚುತ್ತಿರುವ ಅನುಭವ ಆಗುತ್ತಿದೆಯೇ ಎಂಬುದನ್ನು ಗಮನಿಸಿ.
ಖರೀದಿಸುವಾಗ ಅವು ಸಡಿಲವಾಗಿರಬಾರದು. ಏಕೆಂದರೆ ಖರೀದಿಸಿದ ಸ್ವಲ್ಪ ದಿನಗಳ ಬಳಿಕ ಅವು ಸಡಿಲವಾಗುತ್ತವೆ.
ಮಳೆಗಾಲದ ಸಮಯದಲ್ಲಿ ಕೊಲ್ಹಾಪುರಿ ಚಪ್ಪಲಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಡಿ. ಏಕೆಂದರೆ ಅದರ ಒಳಭಾಗದಲ್ಲಿ ಗಾಳಿ ಪ್ರವೇಶಿಸಬಾರದು. ಅವನ್ನು ಆಗಾಗ ಪಾಲಿಶ್ ಮಾಡುತ್ತಿದ್ದರೆ 2-3 ವರ್ಷಗಳ ಕಾಲ ಆರಾಮವಾಗಿ ಧರಿಸಬಹುದು.
ಅಪಾಯದಲ್ಲಿ ಉದ್ಯಮ
ಮಾರ್ಚ್ 4, 2015ರ ಜಾನುವಾರು ಸಂರಕ್ಷಣೆ (ತಿದ್ದುಪಡಿ) ಅಧಿನಿಯಮದ ಪ್ರಕಾರ, ಎತ್ತು ಹಾಗೂ ಕೋಣಗಳ ವಧೆಯ ಮೇಲೆ ನಿರ್ಬಂಧ ಹಾಕಲಾಗಿದೆ. ಈ ಕಾನೂನಿನನ್ವಯ ಯಾರಾದರೂ ಗೋಮಾಂಸ ಮಾರುವುದು ಇಲ್ಲವೇ ವಧೆ ಮಾಡಿದ್ದು ಕಂಡುಬಂದರೆ, ಅವರಿಗೆ 10 ಸಾವಿರ ರೂ. ದಂಡ ಹಾಗೂ 5 ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಪ್ರತಿಬಂಧ ವಿಧಿಸುವುದರ ಮೂಲಕ ಮಹಾರಾಷ್ಟ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿರಬಹುದು. ಆದರೆ ಇಡೀ ಉದ್ಯೋಗವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಂಬಿಕೊಂಡಿರುವ ಸಾವಿರಾರು ಜನರಿಗೆ ಅದೆಷ್ಟು ತೊಂದರೆಯಾಗಬಹುದೆಂಬ ಬಗ್ಗೆಯಾಗಲಿ, ಕೃಷಿ ಆರ್ಥಿಕತೆಯ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬ ಬಗ್ಗೆಯಾಗಲಿ ಸರ್ಕಾರ ಯೋಚಿಸಿದಂತಿಲ್ಲ.
ತಜ್ಞರು ಹೇಳುವ ಪ್ರಕಾರ, ವಯಸ್ಸಾದ ಪಶುಗಳಿಗೆ ಸಂರಕ್ಷಣೆ ನೀಡುವ ವ್ಯವಸ್ಥೆ ಇದುವರೆಗೂ ಆಗಿಲ್ಲ. ಕೆಲವು ಸ್ಥಳಗಳಲ್ಲಿ ಈ ವಯಸ್ಸಾದ ಸಾಕುಪ್ರಾಣಿಗಳಿಗೆ ಮೇವು ಹಾಕಲಾಗದೇ ಅವನ್ನು ಬೀದಿಗೆ ಬಿಟ್ಟುಬಿಡಲಾಗುತ್ತದೆ. ಅವು ಮೇವಿಗಾಗಿ ಹುಡುಕಾಡುತ್ತಾ ನೂರಾರು ಕಿ.ಮಿ. ಸಂಚಾರ ಮಾಡಿ ಸುಸ್ತಾಗಿ ಸಾವನ್ನಪ್ಪುತ್ತವೆ. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಈ ರೀತಿಯ ಪ್ರತಿಬಂಧ ಇಲ್ಲ. ಇಂತಹ ಸ್ಥಿತಿಯಲ್ಲಿ ಮಾರಾಟಕ್ಕೆ ಸಂಬಂಧ ಪಟ್ಟಂತೆ ಕಾಳಸಂತೆ ಆರಂಭವಾಗಬಹುದೆಂದು ಹೇಳಲಾಗುತ್ತದೆ. ಈ ಉದ್ಯಮದಲ್ಲಿ ಕೋಣ ಮತ್ತು ಎತ್ತುಗಳ ಚರ್ಮವನ್ನಷ್ಟೇ ಬಳಸಲಾಗುತ್ತಿದೆಯೇ ಹೊರತು ಗೋವಿನ ಚರ್ಮವನ್ನಲ್ಲ ಎಂದು ಮಹಾರಾಷ್ಟ್ರದ ಚಪ್ಪಲಿ, ಉದ್ಯಮದವರು ಸ್ಪಷ್ಟೀಕರಣ ನೀಡಿದ್ದರು.
ಕೆಲವು ವ್ಯಾಪಾರಿಗಳು ಕೊಲ್ಹಾಪುರಿ ಚಪ್ಪಲಿಗಳ ಹೆಸರಿನಲ್ಲಿ ಅಗ್ಗದ ಚಪ್ಪಲಿಗಳನ್ನು ಮಾರಾಟ ಮಾಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಅವುಗಳ ಬಳಕೆಗೆ ಯಾವುದೇ ಗ್ಯಾರಂಟಿ ಇಲ್ಲ.
– ಜಿ. ಸುಮಾ