ದಸರಾ, ದೀಪಾವಳಿ ಹಬ್ಬಗಳ ಖುಷಿಯ ದಿನಗಳಿವೆ. ಹಬ್ಬದ ದಿನಗಳು ಇನ್ನೂ ತಿಂಗಳಿರುವಾಗಲೇ ಸಿದ್ಧತೆ ಆರಂಭವಾಗುತ್ತದೆ. ಹೀಗಾಗಿ ಮನಸ್ಸಿಗೆ ಖುಷಿಯೋ ಖುಷಿ. ಹಬ್ಬದ ದಿನಗಳು ಮುಗಿದು ಹೋದ ಬಳಿಕ ಆ ಸಂತೋಷ  ಹಾಗೆಯೇ ಮುಂದುವರಿಯಬೇಕು. ಅದಕ್ಕಾಗಿ ದಂಪತಿಗಳು ಒಂದಿಷ್ಟು ಸಂಗತಿಗಳ ಬಗ್ಗೆ ಗಮನ ಕೊಡಬೇಕು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಯಶಸ್ಸು ಹಾಗೂ ಖುಷಿ ಪಡೆದುಕೊಳ್ಳಲು ಧಾವಿಸುತ್ತಿದ್ದಾರೆ. ಎಲ್ಲರಿಗೂ ವಾಹನ ಹಾಗೂ ಆಧುನಿಕ ಸುಖಸೌಲಭ್ಯಗಳುಳ್ಳ ಮನೆ ಪ್ರತಿಷ್ಠೆಯ ಸಂಕೇತವಾಗಿಬಿಟ್ಟಿದೆ.

ಆಧುನಿಕ ಸುಖಸೌಲಭ್ಯಗಳನ್ನು ದೊರಕಿಸಿಕೊಳ್ಳಲು ಈಗ ಗಂಡಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯ ಎಂಬಂತಾಗಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಉದ್ಯೋಗ ಮತ್ತು ಕೌಟುಂಬಿಕ ಜೀವನದ ಚಕ್ರವ್ಯೂಹದಲ್ಲಿ ಸಿಲುಕಿರುವ ದಂಪತಿಗಳ ವೈವಾಹಿಕ ಜೀವನ ಸಾಕಷ್ಟು ಪ್ರಭಾವಿತಗೊಳ್ಳುತ್ತಿದೆ. ಅವರ ದಿನಚರಿ ಎಷ್ಟೊಂದು ವ್ಯಸ್ತವಾಗುತ್ತಿದೆ ಎಂದರೆ, ಅವರ ಬಳಿ ತಮಗಾಗಿ ಹಾಗೂ ಯಾವುದಾದರೂ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಸಮಯವೇ ಉಳಿದಿರುವುದಿಲ್ಲ.

ಒಂದು ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೆಂದರೆ, ದೆಹಲಿ ನಗರವೊಂದರಲ್ಲಿ ಜನರು ಡಬಲ್ ಇನ್‌ ಕಮ್ ನ ಲಕ್ಸುರಿ ಜೀವನವನ್ನು ಇಷ್ಟಪಡುತ್ತಾರೆ. ಇಡೀ ದೇಶದಲ್ಲಿ ಶೇ.54ರಷ್ಟು ದಂಪತಿಗಳು ವೀಕೆಂಡ್‌ ಪೇರೆಂಟ್‌ ಆಗಿ ಉಳಿದುಬಿಟ್ಟಿದ್ದಾರೆ. ಶೇ.34ರಷ್ಟು ಉದ್ಯೋಗಸ್ಥ ದಂಪತಿಗಳು ಒತ್ತಡದಿಂದ ಉಂಟಾದ ಮತಬೇಧಗಳಿಂದ ವಿಚ್ಛೇದನದ ಹಂತ ತಲುಪಿದ್ದಾರೆ. ಕುಟುಂಬ ಹಾಗೂ ಉದ್ಯೋಗದ ಇಬ್ಬಗೆಯ ಚಕ್ರವ್ಯೂಹದಲ್ಲಿ ಸಿಲುಕಿ ಒತ್ತಡ ಹಾಗೂ ದಣಿವಿನ ಭಾರಕ್ಕೆ ಸಿಲುಕಿದ ದಂಪತಿಗಳಿಗೆ ಇದು ಮತ್ತೂ ಅವಶ್ಯಕವಾಗಿದೆ. ಅವರ ಜೀವನದಲ್ಲಿ ಎಂತಹ ಕೆಲವು ಮನರಂಜನಾತ್ಮಕ ಕ್ಷಣಗಳು ಬರಬೇಕೆಂದರೆ, ಅವು ಅವರ ಜೀವನವನ್ನು ಪ್ರಫುಲ್ಲಿತಗೊಳಿಸಿ ಹೊಸ ಉತ್ಸಾಹವನ್ನು ತುಂಬುತ್ತವೆ.

ಹಬ್ಬಗಳಲ್ಲಂತೂ ಆ ಕ್ಷಣಗಳು ಸಹಜವಾಗಿ ಲಭ್ಯವಾಗುತ್ತವೆ. ಆದರೆ ಆ ಬಳಿಕ ವಾರದ 5 ಕೆಲಸದ ದಿನಗಳಲ್ಲಿ ನಿಮಗೆ ಮನೆ ಹಾಗೂ ಉದ್ಯೋಗದ ಹಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿ ಬರುತ್ತದೆ. ಆದರೆ ವಾರಾಂತ್ಯದ ರಜೆ ನಿಮಗೆ ತಾಜಾ ವಾತಾವರಣದ ಮಜ ಸವಿಯಲು ಅವಕಾಶ ಕೊಡುತ್ತದೆ.

ರಜೆಯ ಈ 2 ದಿನಗಳನ್ನು ನೀವು ಚಿಕ್ಕಪುಟ್ಟ ಖುಷಿಗಳಿಂದ ಭರ್ತಿ ಮಾಡಿಕೊಂಡು ಪ್ರಸನ್ನತೆಯನ್ನು ಸೃಷ್ಟಿ ಮಾಡಿಕೊಳ್ಳಬಹುದು. ವಾರಾಂತ್ಯವನ್ನು ನಿಮಗೆ ಹಾಗೂ ಕುಟುಂಬಕ್ಕೆ ಸೂಕ್ತ ರೀತಿಯಲ್ಲಿ ಅಂದರೆ ಹಬ್ಬದ ರೀತಿಯಲ್ಲಿ ಸಿಂಗರಿಸಿಕೊಂಡು ಉತ್ಸಾಹ ಪೂರ್ಣಗೊಳಿಸಬಹುದು. ಒಂದು ಸಂಗತಿ ನೆನಪಿನಲ್ಲಿರಲಿ, ಜೀವನ ತುಂಬಾ ಚಿಕ್ಕದು. ಅದನ್ನು ಉತ್ಸಾಹದಿಂದ ಜೀವಿಸಲು ಜೀವನದಲ್ಲಿ ಬಂದ ಚಿಕ್ಕಪುಟ್ಟ ಅವಕಾಶಗಳನ್ನು ಖುಷಿಯಿಂದ ಕಳೆಯುವಂತಾಗಬೇಕು.

ಒತ್ತಡದಲ್ಲಿ ವೀಕೆಂಡ್ ಸೊಗಡು

40 ವರ್ಷದ ಶ್ರದ್ಧಾ ಇಬ್ಬರು ಪುಟ್ಟ ಮಕ್ಕಳ ತಾಯಿ. ಅವರು ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ದಿನಗಳೇ ಇರಬಹುದು ಅಥವಾ ರಜೆಯೇ ಇರಬಹುದು. ಅವರು ಪ್ರತಿದಿನ ಏಳುವುದು ಮುಂಜಾನೆ 5 ಗಂಟೆಗೆ. ಮಕ್ಕಳ ನಿರ್ವಹಣೆ, ಅವರ ಆಹಾರ, ಓದು ಬರಹದ ಬಗ್ಗೆ ಗಮನ ಕೊಡುವುದು ಅವರದ್ದೇ ಜವಾಬ್ದಾರಿ. ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಅವರು ಮುಂಜಾನೆ 8ಕ್ಕೆ ಹೊರಡುತ್ತಾರೆ. ಮನೆಗೆ ವಾಪಸ್ಸಾಗುವುದು ಸಂಜೆ 6.30ರ ಬಳಿಕ. ಪ್ರತಿ ಶುಕ್ರವಾರದ ರಾತ್ರಿಯೇ ಆಕೆ ಶನಿವಾರ-ಭಾನುವಾರದ ರಜೆಗಳನ್ನು ಹೇಗೆ ಕಳೆಯುವುದೆಂದು ನಿರ್ಧರಿಸುತ್ತಾರೆ. 5 ದಿನದ ಧಾವಂತದ ಬಳಿಕ ವಾರಾಂತ್ಯದಲ್ಲಿ ಇಡೀ ಕುಟುಂಬ ಸುತ್ತಾಡಲು, ಸಿನಿಮಾ ನೋಡಲು ಅಥವಾ ಶಾಪಿಂಗ್‌ ಮಾಡಲು ಹೊರಡುತ್ತದೆ. ಕುಟುಂಬದ ಜೊತೆಗೆ ಆನಂದದಿಂದ ಕಾಲ ಕಳೆಯವುದು ಶ್ರದ್ಧಾಗೆ ಮುಂದಿನ 5 ದಿನಗಳ ಆಫೀಸ್‌ ಕೆಲಸ ಕಾರ್ಯಗಳಿಗೆ ಸಾಕಷ್ಟು ಎನರ್ಜಿ ಕೊಡುತ್ತದೆ. ಭಾನುವಾರ ರಾತ್ರಿಯೇ ಆಕೆ ಮುಂಬರುವ ಕೆಲಸದ ದಿನಗಳ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾರೆ.

ವಾರಾಂತ್ಯವನ್ನು ವ್ಯವಸ್ಥಿತವಾಗಿ ಕಳೆಯಿರಿ

ನಿಮ್ಮನ್ನು ಒತ್ತಡ ಮುಕ್ತರಾಗಿಸಿ : ಗಂಡ ಹೆಂಡತಿ ಯಾವುದಾದರೂ ಸ್ಪಾಗೆ ಹೋಗಿ ರಿಲ್ಯಾಕ್ಸ್ ಮಾಡಿ ಮಸಾಜ್‌ ಸಹ ಮಾಡಿಸಿಕೊಳ್ಳಿ. ಯಾವುದಾದರೂ ಅರೋಮಾ ಥೆರಪಿ ತೆಗೆದುಕೊಳ್ಳಿ. ನಿಮಗೆ ಈಜು ಇಷ್ಟವಾಗಿದ್ದರೆ, ಈಜುಕೊಳಕ್ಕೆ ಹೋಗಿ ಒಂದಿಷ್ಟು ಹೊತ್ತು ಈಜಾಡಿ ಬನ್ನಿ. ಇದರಿಂದ ನಿಮ್ಮ ಮೆದುಳು ತಾಜಾತನದ ಅನುಭೂತಿ ಮಾಡಿಕೊಳ್ಳುತ್ತದೆ.

ಮನೆ ಮುಂದೆ, ಮನೆಯ ಮೇಲ್ಭಾಗದಲ್ಲಿ ಜಾಗ ಇದ್ದರೆ ತೋಟಗಾರಿಕೆಯ ಚಟುವಟಿಕೆ ಅನುಸರಿಸಿ. ಕುಟುಂಬದವರೊಂದಿಗೆ ಯಾವುದಾದರೂ ಆಟ ಆಡಿ, ಪಿಕ್ನಿಕ್‌ಗೆ ಹೋಗಿ, ಇವೆಲ್ಲ ಖುಷಿಯ ಮಿತಿಯನ್ನು ಹೆಚ್ಚಿಸುತ್ತವೆ. ಕುಟುಂಬದವರು ಕೂಡ ಪರಸ್ಪರ ನಿಕಟವಾಗಲು ನೆರವಾಗುತ್ತದೆ.

ಕುಟುಂಬದವರ ಜೊತೆ ಸ್ನೇಹಿತರ ಮನೆಗೆ, ಸಂಬಂಧಿಕರ ಮನೆಗೂ ಆಗಾಗ ಹೋಗತ್ತಾ ಇರಿ. ಅವರನ್ನು ನಿಮ್ಮ ಮನೆಗೂ ಆಹ್ವಾನಿಸಿ.

ಪೇಂಟಿಂಗ್‌, ಸಂಗೀತ, ಫ್ಯಾಬ್ರಿಕ್‌ ಡಿಸೈನಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಬ್ಯೂಟಿ ಕೋರ್ಸ್‌ ಮುಂತಾದವುಗಳಲ್ಲಿ ಯಾವುದನ್ನಾದರೂ ಕಲಿಯಬಹುದು.

ಹೊಸ ಹೊಸ ಜನರನ್ನು ಭೇಟಿಯಾಗಿ. ಇಡೀ ವಾರ ನೀವು ಅದೇ ಜನರನ್ನು ನೋಡಿ ಬೇಸರ ಅನುಭವಿಸುತ್ತಿರಬಹುದು. ವಾರಾಂತ್ಯದಲ್ಲಿ ಹೊಸ ವ್ಯಕ್ತಿಯ ಭೇಟಿ, ಚರ್ಚೆ ನಿಮಗೆ ಹೊಸ ಹುರುಪು ತುಂಬಬಹುದು.

ಮಗುವಿನ ಹುಟ್ಟುಹಬ್ಬದ ನೆಪದಿಂದ ಅನಾಥಾಶ್ರಮಕ್ಕೆ ಹೋಗಿ ಮಕ್ಕಳಿಗೆ ಸಿಹಿ ತಿಂಡಿ, ಆಟಿಕೆ ವಸ್ತುಗಳನ್ನು ಉಡುಗೊರೆಯಾಗಿ ಕೊಡಿ. ವೃದ್ಧಾಶ್ರಮಕ್ಕೆ ಹೋಗಿ ಅವರ ಜೊತೆ ಸ್ವಲ್ಪ ಹೊತ್ತು ಕಾಲ ಕಳೆಯಬಹುದು. ಇದು ಅವರಲ್ಲಿ ಖುಷಿ ತುಂಬುತ್ತದೆ, ನಿಮ್ಮಲ್ಲಿ ಎನರ್ಜಿ ಭರಿಸುತ್ತದೆ.

ಯಾವುದಾದರೂ ಎನ್‌ಜಿಒ ಜೊತೆ ಸೇರಿಕೊಂಡು ನಿಮಗಿಷ್ಟವಾಗುವ ಕೆಲಸ ಮಾಡಬಹುದು.

ನಿಮ್ಮ ಕಂಫರ್ಟ್‌ ಝೋನ್‌ನಿಂದ ಹೊರಗೆ ಬನ್ನಿ. ಹಾರ್ಸ್‌ ರೈಡಿಂಗ್‌, ಪ್ಯಾರಾ ಗ್ಲೈಡಿಂಗ್‌, ಟ್ರೆಕ್ಕಿಂಗ್‌, ಲಾಂಗ್‌ ಡ್ರೈವ್ ‌ಮುಂತಾದ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬಹುದು. ಇದರಿಂದ ಏಕತಾನತೆಗೆ ಬ್ರೇಕ್‌ ಬೀಳುತ್ತದೆ.

ನಿಸರ್ಗವನ್ನು ಹತ್ತಿರದಿಂದ ನೋಡಿದಾಗಲೇ ಅದರ ಖುಷಿ. ಸಮುದ್ರ ತೀರಕ್ಕೆ, ನದಿ ತೀರಕ್ಕೆ ಅಥವಾ ಯಾವುದಾದರೂ ಒಳ್ಳೆಯ ಪಾರ್ಕ್‌ಗೆ ಹೋಗಿ ತಾಜಾ ವಾತಾವರಣದ ಹಿತ ಅನುಭವಿಸಿ.

ಜೀವನದಲ್ಲಿ ಚಿಕ್ಕಪುಟ್ಟ ಸಂಗತಿಗಳಲ್ಲೇ, ದೊಡ್ಡ ದೊಡ್ಡ ಖುಷಿ ದೊರಕುತ್ತವೆ. ಅವು ಹಬ್ಬದ ಮುಖಾಂತರ ಅಥವಾ ವಸ್ತುರೂಪದಲ್ಲಿ ದೊರಕುತ್ತವೆ. ಅವನ್ನು ಕೊಂಡುಕೊಳ್ಳಬೇಕು ಎಂದೇನಿಲ್ಲ.

ಗೃಹಸ್ಥ ಜೀವನವೆಂಬ ಉದ್ಯಾನವನ್ನು ಖುಷಿ ಹಾಗೂ ಉಲ್ಲಾಸದ ಮುಖಾಂತರ ಹಸಿರಾಗಿಸಿ, ಯಶಸ್ಸಿನ ಉತ್ತುಂಗಕ್ಕೆ ತಲುಪಬಹುದು. ಅದಕ್ಕೆ ಶಾಂತಮನಸ್ಸು ಹಾಗೂ ಸೌಹಾರ್ದಪೂರ್ಣ ವಾತಾವರಣ ಅತ್ಯಂತ ಅವಶ್ಯ. ಇವು ನಿಮ್ಮನ್ನು ಮುಂದೆ ಸಾಗಲು ಪ್ರೇರಣೆ ನೀಡುತ್ತವೆ. ಹೀಗಾಗಿ ನಿಮ್ಮ ವಾರಾಂತ್ಯ ಅಥವಾ ರಜೆ ಸಿಕ್ಕಾಗ ಅದನ್ನು ಹಬ್ಬದ ರೀತಿಯಲ್ಲಿ ಆಚರಿಸಿಕೊಳ್ಳಿ. ಅದಕ್ಕಾಗಿ ನಿಮ್ಮ ದೃಷ್ಟಿಕೋನ ಸದಾ ಸಕಾರಾತ್ಮಕವಾಗಿರಲಿ.

ಎಂ.ಎನ್‌. ಸುನಂದಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ