ಭಾನುವಾರ ಮುಂಜಾನೆ 6 ಗಂಟೆಗೆಲ್ಲ ವಂದನಾ ಏಳುತ್ತಿದ್ದಂತೆ ದೀಪಕ್ ಸಿಡಿಮಿಡಿಗೊಂಡು ಕೇಳಿದ, “ಇಂದು ಏಕೆ ಇಷ್ಟು ಬೇಗ ಏಳುತ್ತಿರುವೆ?”
“ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ.”
“ಅದೆಂಥ ಕೆಲಸಗಳು?”
“ನೀರು ತುಂಬಿಸಬೇಕು. ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಬೇಕು. ತಿಂಡಿ ರೆಡಿ ಮಾಡಬೇಕು. ಸ್ನಾನಕ್ಕೆ ನೀರು ಕಾಯಿಸೋದು, ಮಕ್ಕಳ ಹೋಂವರ್ಕ್ ಮಾಡಿಸೋದು ಹೀಗೆ ಏನೆಲ್ಲ ಕೆಲಸಗಳಿವೆ.”
“ಅವೆಲ್ಲ ಕೆಲಸಗಳನ್ನು ಆಮೇಲೂ ಮಾಡಬಹುದು. ಇನ್ನೂ ಸ್ವಲ್ಪ ಹೊತ್ತು ನನ್ನ ಬಳಿ ಮಲಗಿಕೊ,” ಎಂದು ಹೇಳಿ ಅವಳ ಕೈಹಿಡಿದುಕೊಂಡ.
“ಮುಂಜಾನೆ ಮುಂಜಾನೆಯೇ ಪ್ರೀತಿ ಮಾಡೋ ಅದೃಷ್ಟ ನನಗೆಲ್ಲಿದೆ?” ಎಂದು ಹೇಳುತ್ತ ವಂದನಾ ಅವನ ಕೈಯಿಂದ ತನ್ನ ಕೈ ಬಿಡಿಸಿಕೊಂಡು ಮಂಚದಿಂದ ಕೆಳಗಿಳಿದಳು.
ಕೆಲಸದ ಒತ್ತಡದಿಂದ ತತ್ತರಿಸಿಹೋಗಿ ನಿರಾಶೆ ಹಾಗೂ ಸಿಡಿಮಿಡಿಗೊಂಡವಳಂತೆ ಕಂಡುಬಂದ ವಂದನಾ ಹೊಸ ಶೈಲಿಯಲ್ಲಿ ಮಾತನಾಡುತ್ತಿರುವುದನ್ನು ಕಂಡು ದೀಪಕ್‌ಗೆ ಆಶ್ಚರ್ಯದ ಜೊತೆಗೆ ಗಲಿಬಿಲಿ. ಏಕೆಂದರೆ ಭಾನುವಾರದಂದು ಬಹಳ ಹೊತ್ತಿನತನಕ ನಿದ್ರೆ ಮಾಡಲು ತೊಂದರೆಯಾದರೆ ಅವನು ಜಗಳಕ್ಕೆ ಇಳಿದುಬಿಡುತ್ತಿದ್ದ. ಇಂದು ವಂದನಾ ಬೇಗನೇ ಎದ್ದಿರುವುದು ಅವನ ತಿಳಿವಳಿಕೆಗೆ ಹೊರತಾಗಿತ್ತು.
ಪುನಃ ಗಾಢ ನಿದ್ರೆಗೆ ಜಾರಿದ ದೀಪಕ್‌ನನ್ನು ಅರ್ಧ ಗಂಟೆ ಬಳಿಕ ವಂದನಾ ಬೆಡ್ ಟೀ ಕೊಡಲೆಂದು ಹೋಗಿ ಎಚ್ಚರಿಸಿದಾಗ ಅವನು ಜೋರಾಗಿ ಕೂಗಿದ, “ಇಂದು ಭಾನುವಾರ. ಯಾಕೆ ಆಗಾಗ ನನ್ನ ನಿದ್ರೆಗೆ ಅಡ್ಡಿ ಮಾಡುತ್ತಿರುವೆ. ಇಂದು ವರ್ಕಿಂಗ್ ಡೇ ಇರುವವರಂತೆ ಬೆಡ್ ಟೀ ತಂದು ಯಾಕೆ ತೊಂದರೆ ಕೊಡ್ತಿರುವೆ?”
“ನನಗೆ ಚಹ ಕುಡೀಬೇಕು ಅನಿಸುತಿತ್ತು. ಹಾಗಾಗಿ ಮಾಡಿದೆ. ನನ್ನ ಖಾಲಿ ಕಪ್ ನೋಡಿ ನನಗೇಕಿಲ್ಲ ಎಂದು ನೀವು ಜಗಳವಾಡುತ್ತೀರಿ, ಆಗ ಇಡೀ ದಿನ ಅಶಾಂತಿಯಲ್ಲೇ ಕಳೆಯುತ್ತೆ,” ವಂದನಾ ಮುಗುಳ್ನಗುತ್ತಲೇ ಹೇಳಿದಳು.
“ಮೇಲಿಂದ ಮೇಲೆ ಎಚ್ಚರಗೊಳಿಸಿ ನೀನು ನನಗೆ ತೊಂದರೆ ಕೊಡ್ತಿದೀಯಾ. ನನಗೆ ಈಗಲೇ ಚಹಾ ಕುಡೀಬೇಕಿಲ್ಲ,” ಎಂದು ಹೇಳಿ ದೀಪಕ್ ಮಗ್ಗಲು ಬದಲಿಸಿ ಮಲಗಲು ಪ್ರಯತ್ನಿಸಿದ.
“ಸಂಡೆ ಇರಲಿ ಅಥವಾ ಮಂಡೆ ನನಗೆ ಸೇವೆಯ ಬದಲು ಸಿಗುವುದು ನಿಮ್ಮ ಬೈಗುಳದ ಉಂಡೆ ಮಾತ್ರ,” ಎಂದು ವಿಭಿನ್ನ ಡೈಲಾಗ್ ಹೇಳುತ್ತಾ ವಂದನಾ ಬೆಡ್ ರೂಮಿನಿಂದ ಹೊರಗೆ ಹೋದಳು.
ಪೂರಿ, ಆಲೂಗಡ್ಡೆ ಪಲ್ಯಕ್ಕೆ ಸಿದ್ಧತೆ ಆರಂಭಿಸಿ ಆಕೆ ರಾಜು ಮತ್ತು ಸಂಜೀವನನ್ನು ಎಬ್ಬಿಸಲು ಹೋದಳು. ಆದರೆ ಅವರು ಕೂಡ ಭಾನುವಾರದ ನೆಪವೊಡ್ಡಿ ಏಳಲು ನಿರಾಕರಿಸಿದರು. ಆಗ ವಂದನಾ ಅವರ ಬೆಡ್ ಮೇಲೆಯೇ ಕುಳಿತು ಮಧುರ ಸ್ವರದಲ್ಲಿಯೇ, “ಕಳೆದು ಹೋದ ಸಮಯ ಮತ್ತೆಂದೂ ಬರದು ಮಕ್ಕಳೇ, ತಿಂಡಿ ತಿಂದ ನಂತರ ಬಹಳಷ್ಟು ಹೋಂವರ್ಕ್ ನಿಮಗಾಗಿ ಕಾಯುತ್ತಿದೆ. ಸೋಮವಾರ ನಡೆಯುವ ಟೆಸ್ಟ್ ಗಾಗಿ ಸಿದ್ಧತೆ ಮಾಡ್ಕೋಬೇಕು. ಉಜ್ವಲ ಭವಿಷ್ಯಕ್ಕಾಗಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಮುದ್ದು ಕಂದಮ್ಮಗಳೇ,” ಎಂದು ಹೇಳಿದಳು.
“ಅಮ್ಮಾ, ದಯವಿಟ್ಟು ತೊಂದರೆ ಕೊಡಬೇಡಿ,” 12 ವರ್ಷದ ರಾಜು ಕೋಪದಿಂದಲೇ ಹೇಳಿದ.
“ಅಮ್ಮಾ, ನೀವು ಹೊರಡಿ. ಅಭ್ಯಾಸ ಮಾಡಲು ಇನ್ನೂ ಸಾಕಷ್ಟು ಸಮಯವಿದೆ,” ರಾಜುವಿಗಿಂತ 2 ವರ್ಷ ಚಿಕ್ಕವನಾದ ಸಂಜೀವ್ ಕೈಯಲ್ಲಿ ದಿಂಬು ಹಿಡಿದು ಮೂಲೆಯ ಬದಿ ಓಡುತ್ತ ಹೇಳಿದ.
“ನೀವಿಬ್ಬರೂ ಈಗ ಏಳಲೇಬೇಕು. ಇಲ್ಲದ್ದಿದರೆ ಅಪ್ಪ ಎಲ್ಲರನ್ನೂ ಬೈತಾರೆ.”
“ಅಪ್ಪ ಎದ್ದು ಬಿಟ್ಟಿದಾರಾ?”
“ಇಲ್ಲ ಮಕ್ಕಳೆ, ನಮ್ಮನ್ನು ಗದರಿಸಲು ಅವರಿಗೆ ಬೇಗನೇ ಏಳಬೇಕಾದ ಅವಶ್ಯಕತೆಯಿಲ್ಲ. ನೀವು ಬೇಗನೇ ಎದ್ದರೆ ಸರಿ, ಇಲ್ಲದಿದ್ದರೆ ಈ ಗ್ಲಾಸಿನಲ್ಲಿರುವ ತಣ್ಣೀರನ್ನು ನಿಮ್ಮಿಬ್ಬರ ಮುಖಕ್ಕೆ ಸುರಿಯಬೇಕಾಗುತ್ತದೆ.”
“ಬೇಡ ಅಮ್ಮಾ ಬೇಡ,” ಎಂದು ಹೇಳುತ್ತ ರಾಜು ಎದ್ದು ಕುಳಿತ. ಸಂಜೀವನಿಗೂ ಅಷ್ಟಿಷ್ಟು ನೀರು ಮುಖಕ್ಕೆ ಸ್ಪರ್ಶವಾಗುತ್ತಿದ್ದಂತೆ ಅವನ ನಿದ್ದೆ ಹಾರಿಹೋಯಿತು. ಇಬ್ಬರೂ ಕೂಗುತ್ತ ಓಡೋಡಿ ಅಪ್ಪನ ಬಳಿ ಹೋದರು. ವಂದನಾ ಕೂಡ ಅವರ ಹಿಂದೆ ಹಿಂದೆಯೇ ಓಡಿದಳು. ದೀಪಕ್ ಏನಾದರೂ ಹೇಳುವ ಮುಂಚೆಯೇ, “ನಾನು ಇಂದು ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಬೇಕೆಂದು ಬೇಗ ಎದ್ದಿರುವೆ. ನೀವು ನನ್ನ ಈ ನಿರ್ಧಾರವನ್ನು ಹತ್ತಿಕ್ಕಲು ಪ್ರಯತ್ನಿಸಬೇಡಿ. ಇಲ್ಲದಿದ್ದರೆ ನಿಮಗೂ ನನಗೂ ಜಗಳವಾಗಬಹುದು.”
“ಅರೆ, ಇನ್ನೂ 7 ಗಂಟೆ ಕೂಡ ಆಗಿಲ್ಲ. ಇವರಿಗೆ ಇನ್ನೂ ಸ್ವಲ್ಪ ಹೊತ್ತು….”
“ಯಾವುದೇ ಕೆಲಸ ಮುಂದೂಡಲು ಬಯಸುವವರು ಮಾತ್ರ ಈ ರೀತಿಯ ಮಾತುಗಳನ್ನು ಆಡುತ್ತಾರೆ. ಬಾಸ್ ಹಾಗೂ ನಾನು ಈ ಮೊದಲಿನ ಶ್ರೇಣಿಯಲ್ಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಏನಾದ್ರೂ ಮಾಡ್ತೀನಿ, ಈಗಲೇ ಅಂಥಾದ್ದೇನಾಗಿದೆ, ಆಮೇಲೆ ನೋಡಿದರಾಯ್ತು, ನೀವೇ ಏಕೆ ಮಾಡಲು ಆಗುವುದಿಲ್ಲ? ಎಂಬಂತಹ ಡೈಲಾಗ್‌ಗಳನ್ನು ಹೇಳಿ ನಿಮ್ಮನ್ನು ಹಗಲು ರಾತ್ರಿ ಪೀಡಿಸುವ ವಂದನಾ ಇನ್ನು ಮುಂದೆ ಹುಡುಕಾಡಿದರೂ ಸಿಗುವುದಿಲ್ಲ,” ಎಂದು ಹೇಳಿ ವಂದನಾ ರಾಜು ಮತ್ತು ಸಂಜೀವರನ್ನು ಸ್ನಾನದ ಮನೆಯ ಕಡೆ ಹೆಚ್ಚುಕಡಿಮೆ ಎಳೆದುಕೊಂಡು ಹೋದಳು.
ದೀಪಕ್ ಆಕೆಯನ್ನು ತಡೆಯಲು ಏನೋ ಹೇಳಲು ಪ್ರಯತ್ನಿಸಿದ. ಆದರೆ ವಂದನಾಳ ಬದಲಾದ ವರ್ತನೆಯಿಂದ ಅವನಿಗೆ ಏನನ್ನೂ ಹೇಳುವ ಧೈರ್ಯ ಸಾಲಲಿಲ್ಲ.
ತಿಂಡಿ ತಿಂದ ಬಳಿಕ ಇಬ್ಬರೂ ಟಿ.ವಿ. ನೋಡುವ ಅಪೇಕ್ಷೆ ಇಟ್ಟುಕೊಂಡಿದ್ದರು. ಆದರೆ ವಂದನಾ ಅವರನ್ನು ಹೋಂವರ್ಕ್ ಮಾಡಿಸಲು ಕೂರಿಸಿಬಿಟ್ಟಳು. ಅವರಿಗೆ ಓದಲು ಮನಸ್ಸೇ ಇರಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತಿನ ಬಳಿಕ ಇಬ್ಬರೂ ಪರಸ್ಪರ ಜಗಳವಾಡಲಾರಂಭಿಸಿದರು.
ಸಂಜೀವನ ಕಿರುಚಾಟದ ಶಬ್ದ ಕೇಳಿ ವಂದನಾ ಅವರ ಕೋಣೆ ತಲುಪಿದಾಗ, ರಾಜು ಸಂಜೀವನನ್ನು ತನ್ನ ಕೆಳಗೆ ಒತ್ತಿ ಹಿಡಿದಿದ್ದ ಸಂಜೀವ್ ಅವನ ಕೂದಲನ್ನು ಹಿಡಿದೆಳೆಯತ್ತಿದ್ದ.
“ಆಹಾ! ಎಂತಹ ಅದ್ಭುತ ದೃಶ್ಯ!” ವಂದನಾ ಖುಷಿಯಿಂದ ತನ್ನ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, “ಅಣ್ಣ ತಮ್ಮ ಪರಸ್ಪರ ಜಗಳವಾಡುತ್ತಿದ್ದರೆ ಅವರ ಪ್ರೀತಿ ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ನಾನು ಈವರೆಗೆ ನೀವು ಜಗಳವಾಡುವುದನ್ನು ನೋಡಿ ಸುಮ್ಮಸುಮ್ಮನೇ ಕೂಗಾಡಿ ನನ್ನ ರಕ್ತ ಬಿಸಿ ಮಾಡಿಕೊಳ್ಳುತ್ತಿದ್ದೆ. ಇಂದು ನಾನು ನಿಮ್ಮ ಜಗಳದಲ್ಲೂ ಪಾಲ್ಗೊಂಡು ತಾಯಿ ಮಕ್ಕಳ ನಡುವಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ,” ಎಂದಳು.
ರಾಜು ಹಾಗೂ ಸಂಜೀವ್ ಅಮ್ಮನ ಮಾತನ್ನು ಅರ್ಥ ಮಾಡಿಕೊಳ್ಳುವ ಮೊದಲೇ ವಂದನಾ ದಿಂಬನ್ನು ಎತ್ತಿಕೊಂಡು ಅವರಿಬ್ಬರಿಗೆ ಅದರಿಂದ ಹೊಡೆಯತೊಡಗಿದಳು. ಮೊದಮೊದಲು ಅವರು ಅದನ್ನು ಆಟ ಎಂದು ಭಾವಿಸಿ ನಗತೊಡಗಿದ್ದರು. ಆದರೆ ಅದರಿಂದ ಯಾವಾಗ ಪೆಟ್ಟುಬೀಳತೊಡಗಿತೊ, ಅಗ ಅವರು ಜೋರು ಜೋರಾಗಿ ಕೂಗಿಕೊಳ್ಳಲು ಆರಂಭಿಸಿದರು.
“ಅಮ್ಮಾ, ಏಟಾಗ್ತಿದೆ,” ಮೊದಲು ರಾಜು ಹೇಳಿದ.
“ನಮಗೂ ದಿಂಬು ತೆಗೆದುಕೊಳ್ಳಲು ಅವಕಾಶ ಕೊಡಮ್ಮ,” ಸಂಜೀವ್ ಅಮ್ಮನ ಏಟಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ.
“ಜಗಳ ಆಡೋದ್ರಲ್ಲಿ ಎಷ್ಟೊಂದು ಮಜ ಇರುತ್ತೆ ಅನ್ನೋದು ನನಗೆ ಇಂದೇ ಗೊತ್ತಾಯಿತು. ನಾನು ಬೇಡ ಬೇಡ ಅಂದ್ರು ನೀವು ಜಗಳ ಮುಂದುವರಿಸುತ್ತಿದ್ದುದು ಇದಕ್ಕೇ ಅಲ್ವೇ?” ಎಂದು ಹೇಳುತ್ತ ವಂದನಾ ಅವರ ಮೇಲೆ ದಿಂಬನ್ನು ಎಸೆಯುತ್ತಿದ್ದಂತೆ ಅವಳಿಗೆ ಉಸಿರಾಟ ಏರುಪೇರು ಆಗತೊಡಗಿತು.
ಅವರಿಬ್ಬರಿಗೆ ಅಮ್ಮನಿಂದ ಬಚಾವಾಗಿ ದೂರ ಹೋಗುವುದೇ ಸರಿ ಅನ್ನಿಸಿತು. ಅವರು ತಕ್ಷಣವೇ ಮಂಚದಿಂದ ಜಿಗಿದು ಕೆಳಭಾಗದಲ್ಲಿ ಅಡಗಿ ಕುಳಿತರು.
“ನನಗೆ ಈಗಷ್ಟೇ ಜಗಳದ ಮಜ ಸಿಗುತ್ತಲಿತ್ತು. ನೀವು ಹೆದರುಪುಕ್ಕಲುಗಳು. ಮಂಚದ ಕೆಳಗೆ ಅಡಗಿ ಕುಳಿತುಬಿಟ್ರಾ? ನಾನು ಸಧ್ಯ ತಿಂಡಿ ಮಾಡೋಕೆ ಅಡುಗೆಮನೆಗೆ ಹೋಗ್ತೀನಿ. ನಿಮಗೆ ಮತ್ತೆ ಜಗಳ ಆಡೋಕೆ ಮನಸ್ಸು ಬಂದ್ರೆ ನಾನು ಪುನಃ ಬರ್ತೀನಿ. ಆದರೆ ಈ ಸಲ ದಿಂಬು ಬೇಡ. ಪೊರಕೆ ಅಥವಾ ಕೋಲು ಹಿಡಿದುಕೊಂಡು ಆಟ ಆಡೋಣ,” ಎಂದು ಹೇಳಿ ಇಬ್ಬರಿಗೂ ಫ್ಲಯಿಂಗ್ ಕಿಸ್ ಕೊಡುತ್ತ ವಾಷಿಂಗ್ ಮೆಷಿನ್‌ನಿಂದ ಬಟ್ಟೆ ತೆಗೆಯಲು ಹೋದಳು. ಸ್ವಲ್ಪ ಹೊತ್ತಿನ ಬಳಿಕ ದೀಪಕ್ ಮಕ್ಕಳ ಬಳಿ ಬಂದಾಗ, ಅಮ್ಮನ ಬದಲಾದ ವರ್ತನೆಯ ಬಗ್ಗೆ ಹೇಳುತ್ತ ಅವರಿಬ್ಬರ ಕಣ್ಣುಗಳು ತುಂಬಿಬಂದವು. ಅಂದಹಾಗೆ ಅವರಿಬ್ಬರು ತುಂಟರು ಮೌನದಿಂದ ಹೋಂವರ್ಕ್ ಮಾಡುತ್ತಿರುವುದನ್ನು ಕಂಡು ಅಚ್ಚರಿ ಕೂಡ ಆಯಿತು. ಊಟ ಮಾಡಿದ ಬಳಿಕ ರಾಜು ಸಂಜೀವ್ ಸ್ವಲ್ಪ ಹೊತ್ತು ಟಿ.ವಿ. ನೋಡಿ ಮಲಗಿಕೊಂಡರು.
ವಂದನಾ ಹೊಲಿಗೆ ಮೆಶಿನ್ ತೆಗೆಯುತ್ತಿರುವುದನ್ನು ನೋಡಿ ಸಹಜ ಸ್ವರದಲ್ಲಿಯೇ ತಕರಾರು ತೆಗೆಯುತ್ತ ದೀಪಕ್ ಕೇಳಿದ, “ವಂದನಾ ಏನಿದು, ಇಡೀ ದಿನ ಕೆಲಸ ಮಾಡಬೇಕೆಂಬ ಭೂತ ನಿನ್ನ ಮೈಯಲ್ಲಿ ಹೊಕ್ಕಿದೆಯೇ? ಈಗಲಾದರೂ ಸ್ವಲ್ಪ ಹೊತ್ತು ವಿಶ್ರಾಂತಿ ತಗೋ.”
“ಮಕ್ಕಳ ಹರಿದ ಬಟ್ಟೆ ಹೊಲಿಯದಿದ್ದರೆ ನಾವು ಇಡೀ ಕಾಲೋನಿಗೆ ಎಷ್ಟೊಂದು ಕೊಳಕು ಎಂದು ಗೊತ್ತಾಗುವುದಿಲ್ಲವೇ? ನೀವು ಹೋಗಿ ವಿಶ್ರಾಂತಿ ತಗೋಳಿ. ನಾನು ಇಂದು ಈ ಕೆಲಸ ಮಾಡದಿದ್ರೆ ಮುಂದಿನ ವಾರದ ತನಕ ಹಾಗೆಯೇ ಪೆಂಡಿಂಗ್‌ಉಳಿಯುತ್ತವೆ.”
“ಒಬ್ಬನೇ ವಿಶ್ರಾಂತಿ ಮಾಡೋದ್ರಲ್ಲಿ ಏನ್ ಮಜಾ ಇದೆ?”
“ಇಲ್ಲ ಸರ್, ಡ್ಯೂಟಿ ಫಸ್ಟ್.”
“ಈ ಕೆಲಸವನ್ನು ಸಂಜೆ ಮಾಡಲು ಆಗುವುದಿಲ್ಲವೇ?”
“ಈಗ ನನ್ನ ಪುಸಾಯಿಸ್ತೀರಾ? ಆಮೇಲೆ ನೀವೇ ನಾನು ಏನೂ ಮಾಡಿಲ್ಲ ಎಂದು ಕೂಗಾಡ್ತೀರಿ. ದಯವಿಟ್ಟು ನನಗೆ ಕೆಲಸ ಮಾಡಲು ಅವಕಾಶ ಕೊಡಿ,” ಎಂದು ಹೇಳುತ್ತಾ ವಂದನಾಳ ವರ್ತನೆ ಸ್ವಲ್ಪ ಒರಟು ಎನಿಸುತ್ತಿದ್ದಂತೆ ದೀಪಕ್ ಮುಖ ಊದಿಸಿಕೊಂಡು ಏಕಾಂಗಿಯಾಗಿಯೇ ಬೆಡ್ ರೂಮಿನತ್ತ ಹೊರಟ. ಸಂಜೆ 6 ಗಂಟೆಗೆ ರಾಜು ಮತ್ತು ಸಂಜೀವ್ ಹೊರಗೆ ಸುತ್ತಾಡಿಸಲು ಅಪ್ಪನ ಮನವೊಲಿಸಿದರು.
“ಹೋಗಿ ಅಮ್ಮನಿಗೂ ತಯಾರಾಗಲು ಹೇಳಿ,” ಎಂದು ದೀಪಕ್ ಮಕ್ಕಳಿಗೆ ಸೂಚಿಸಿದ. ಅಪ್ಪನ ಮಾತುಗಳು ಕಿವಿಗೆ ಬೀಳುತ್ತಿದ್ದಂತೆ ಇಬ್ಬರೂ ಅಮ್ಮನ ಬಳಿ ಓಡೋಡಿ ಬಂದರು.
“ಬೇಡ. ಹೊರಗಿನ ತಿಂಡಿ ಆರೋಗ್ಯಕ್ಕೆ ಹಾನಿಕರ. ನಾನು ಈಗ ದಣಿದಿದ್ದರೂ ನಿಮಗಿಷ್ಟವಾದ ತಿಂಡಿಯನ್ನೇ ಮಾಡಿ ಕೊಡ್ತೀನಿ,” ಅಮ್ಮನ ಮಾತನ್ನು ಕೇಳಿ ಅವರಿಬ್ಬರು ಆಶ್ಚರ್ಯಚಕಿತರಾದರು.
“ಹೊರಗೆ ತಿಂಡಿ ತಿನ್ನಲು ಅಪ್ಪ ಈವರೆಗೆ ಬೇಡ ಅಂತಾ ಹೇಳ್ತಿದ್ರು. ನಾವು ಹೊರಗೆ ತಿಂಡಿ ತಿನ್ನುವುದು ಅಪರೂಪ ಎಂದು ನೀವು ಆಗ ಅಪ್ಪನನ್ನು ಮನವೊಲಿಸೋಕೆ ನೋಡ್ತಿದ್ರಿ. ಈಗ ನೀವೇ ಈ ಥರ ಮಾತಾಡ್ತಿದೀರಲ್ಲ. ನಮ್ಮ ಇಂದಿನ ಮಜ ಏಕೆ ಹಾಳು ಮಾಡುತ್ತಿರುವಿರಿ?”
ರಾಜುವಿನ ಈ ಪ್ರಶ್ನೆಗೆ ಉತ್ತರವೆಂಬಂತೆ ವಂದನಾ ಇಬ್ಬರ ತಲೆಯ ಮೇಲೆ ಪ್ರೀತಿಯಿಂದ ಕೈಸವರಿ ಪುನಃ ಅಡುಗೆ ಕೆಲಸದಲ್ಲಿ ಮಗ್ನಳಾದಳು.
ದೀಪಕ್ ಕೂಡ ಆಕೆಯನ್ನು ಹೊರಗೆ ಹೋಗಲು ತಯಾರು ಮಾಡಲು ಆಗಲಿಲ್ಲ. ವಂದನಾಳ ಹಠದಿಂದಾಗಿ ಆ ಮೂವರ ಮೂಡ್ ಹಾಳಾಯಿತು. ಸ್ವಲ್ಪ ಹೊತ್ತಿನ ಬಳಿಕ ಅಪ್ಪ ಮತ್ತು ಮಕ್ಕಳು ಹೊರಗಡೆ ಪಾರ್ಕಿಗೆ ಹೋಗಿ ಸುತ್ತಾಡಿಕೊಂಡು ಬಂದರು. ವಾಪಸ್ ಬಂದ ಬಳಿಕ ಯಾರೊಬ್ಬರೂ ವಂದನಾಳೊಂದಿಗೆ ಮುಖ ಕೊಟ್ಟು ಮಾತನಾಡಲಿಲ್ಲ.
ಆದರೆ ಅವರು ಮುನಿಸಿಕೊಂಡಿರುವುದು ಅವಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಆಕೆ ಅವರೊಂದಿಗೆ ನಗುನಗುತ್ತಲೇ ಮಾತನಾಡುತ್ತಿದ್ದಳು.
“ಬನ್ನಿ, ಇಂದು ನಾವು ಕೇರಂ ಆಡೋಣ,” ಎಂದು ಆಕೆ ಮಕ್ಕಳ ಮುಂದೆ ಪ್ರಸ್ತಾಪ ಇಟ್ಟಳು.
“ನನಗೆ ಮೂಡ್ ಇಲ್ಲ,” ರಾಜು ಮುಖ ಸಿಂಡರಿಸುತ್ತ ಹೇಳಿದ.
“ಲೂಡೊ ಆಡೋಣ್ವಾ?”
“ಬೇಡ,” ಸಂಜೀವ್ ಅಮ್ಮನ ಕಡೆ ನೋಡದೆಯೇ ಉತ್ತರ ಕೊಟ್ಟ.
“ನಾನು ಆಫೀಸಿನಿಂದ ದಣಿದು ಬಂದಾಗ ಇವರು ನನ್ನೊಂದಿಗೆ ಆಟ ಆಡಲು ಹಠ ಮಾಡುತ್ತಿರುತ್ತಾರೆ. ಇಂದು ನಾನು ಇವರಿಗೆ ಆಟ ಆಡಲು ಆಮಂತ್ರಣ ಕೊಡುತ್ತಿದ್ದೇನೆ. ಆದರೆ ಇವರು ಇದನ್ನು ತಿರಸ್ಕರಿಸುತ್ತಿದ್ದಾರೆ. ನಮ್ಮ ಈ ರಾಜಕುಮಾರರೊಂದಿಗೆ `ಕ್ವಾಲಿಟಿ ಟೈಮ್’ ಕೊಡಲು ನಾನು ಇನ್ನೇನು ಮಾಡಬೇಕು ಹೇಳಿ.”
ವಂದನಾಳ ಈ ಪ್ರಶ್ನೆಗೆ ದೀಪಕ್ ಯಾವುದೇ ಉತ್ತರ ಕೊಡದೆ ಮುಖ ಊದಿಸಿಕೊಂಡು ಹೊರಗೆ ಸುತ್ತಾಡಲು ಹೊರಟುಬಿಟ್ಟ.
ವಂದನಾ ಬ್ರೆಡ್ ಪಕೋಡಾ ಮಾಡಿ ಮಕ್ಕಳ ಮನಸ್ಸನ್ನು ಸ್ವಲ್ಪ ಹೊತ್ತಿನ ನಂತರ ಗೆದ್ದಳು. ಆದರೆ ದೀಪಕ್‌ನ ಮುಖ ಇನ್ನೂ ಊದಿಕೊಂಡಂತೆಯೇ ಇತ್ತು. ಅವನು ಮನಸ್ಸಿಲ್ಲದ ಮನಸ್ಸಿನಿಂದ ತಿಂಡಿ ತಿಂದ.
“ಇಂದೂ ಕೂಡ ನೀವು ಖುಷಿಯಿಂದ ಏಕಿಲ್ಲ? ಮನೆಯ ಇಂಚಿಂಚು ಜಾಗ ಕಂಗೊಳಿಸುತ್ತಿದೆ. ಎಲ್ಲ ಕೆಲಸಗಳು ಸರಿಯಾದ ಟೈಮ್ಗೆ ಮುಗಿದಿವೆ… ಮಕ್ಕಳ ಹೋಂವರ್ಕ್ ಕೂಡ ಆಗಿದೆ. ಇಂದು ಯಾವ ವಿಷಯದ ದೂರು ಇದೆ,” ಈ ಪ್ರಶ್ನೆ ಕೇಳುತ್ತಿದ್ದ ವಂದನಾಳಲ್ಲಿ ಮುಗ್ದತನ ಎದ್ದು ಕಾಣುತ್ತಿತ್ತು.
“ಯಾವುದೂ ಅತಿಯಾದರೆ ಒಳ್ಳೆಯದಲ್ಲ,” ದೀಪಕ್ ಸ್ವಲ್ಪ ಸಿಡಿಮಿಡಿಗೊಂಡು ಹೇಳಿದ.
“ಆದರೆ ಯಾವುದರ ಬಗ್ಗೆ ನೀವು ಯಾವಾಗಲೂ ತಕರಾರು ಮಾಡುತ್ತಿದ್ದಿರೊ, ನಾನು ಅದನ್ನೇ ಮಾಡಿದ್ದೀನಲ್ಲ. ಅವನ್ನೆಲ್ಲ ಮಾಡುವುದು ಅತಿ ಹೇಗೆ ಆಗುತ್ತದೆ.”
“ನೀವು ನಮ್ಮ ಸಂಜೆಯನ್ನು ವ್ಯರ್ಥ ಮಾಡಿಬಿಟ್ಟಿರಿ?” ಸಂಜೀವ್ ಅಣ್ಣನ ಧ್ವನಿಗೆ ಧ್ವನಿಗೂಡಿಸುತ್ತ ಹೇಳಿದ.
“ನಮ್ಮ ಅಪೇಕ್ಷೆಗಿಂತ ಹೆಚ್ಚಾಗಿ ನಾವು ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸಬೇಕು…..” ಎಂದು ಹೇಳುತ್ತಾ ವಂದನಾ ಗಕ್ಕಂತ ನಿಂತುಬಿಟ್ಟಳು. ಏಕೆಂದರೆ ಆಕೆಯ ಮಾತುಗಳನ್ನು ಆಲಿಸಲು ಅಲ್ಲಿ ಯಾರೂ ಇರಲಿಲ್ಲ.
ದೀಪಕ್ ಬಹಳ ಹೊತ್ತಿನ ತನಕ ಡ್ರಾಯಿಂಗ್ ರೂಮಿನಲ್ಲಿ ಏಕಾಂಗಿಯಾಗಿ ಟಿ.ವಿ. ನೋಡುತ್ತ ಕುಳಿತಿದ್ದ. ಅವನು 1-2 ಗಂಟೆಯ ಹೊತ್ತಿಗೆ ಬೆಡ್ ರೂಮಿಗೆ ಬಂದಾಗ ವಂದನಾ ಗಾಢ ನಿದ್ರೆಯಲ್ಲಿದ್ದಳು.
ದೀಪಕ್ ಪಕ್ಕದಲ್ಲಿಯೇ ಮಲಗಿಕೊಳ್ಳುತ್ತಿದ್ದಾಗ, ಅವನ ಮೊಣಕೈ ಅವಳ ತಲೆಗೆ ತಗಲುತ್ತಿದ್ದಂತೆ ಅವಳಿಗೆ ಒಮ್ಮೆಲೆ ಎಚ್ಚರವಾಯಿತು. ವಂದನಾ ಒಮ್ಮೆಲೆ ಎದ್ದು ಕುಳಿತು ಅತ್ಯಂತ ರೊಮ್ಯಾಂಟಿಕ್ ಧ್ವನಿಯಲ್ಲಿ ಹೇಳಿದಳು. “ಐ ಆ್ಯಮ್ ವೆರಿ ಸಾರಿ ಮೈ ಸ್ವೀಟ್ ಹಾರ್ಟ್, ನಾನು ಸಿದ್ಧ.”
“ಯಾವುದಕ್ಕೆ….?”
“ಪ್ರೀತಿ ಮಾಡಲು…. ಖುಷಿಯ ಕ್ಷಣಗಳಿಗಾಗಿ,” ಎಂದು ಹೇಳಿ ವಂದನಾ ಚುಂಬನ ಪಡೆಯಲು ಅವನತ್ತ ವಾಲಿದಳು.
“ನನ್ನಿಂದ ದೂರ ಇರು,” ದೀಪಕ್ ಈಗಲೂ ಅವಳ ಬಗ್ಗೆ ಅತೃಪ್ತಿಯಿಂದಿದ್ದ.
“ಇದೇನು ಹೇಳ್ತಿರುವಿರಿ ನನ್ನ ರಾಜಕುಮಾರ? ದಿನವಿಡೀ ಕೆಲಸ ಮಾಡಿ ನನ್ನ ಮೈಮನ ಎಲ್ಲ ದಣಿದು ಹೋಗಿದೆ. ಆದರೂ ನಿಮ್ಮ ಖುಷಿಗಾಗಿ ನಾನು ಸಿದ್ಧಳಾಗಿರುವೆ. ಈಗ ನೀವು ನನ್ನ ನಿರಾಕರಿಸಿ ನನ್ನ ಮನಸ್ಸನ್ನು ನೋಯಿಸಬೇಡಿ,” ಎಂದು ಹೇಳುತ್ತ ಅವಳು ಒತ್ತಾಯಪೂರ್ವಕವಾಗಿ ಅವನನ್ನು ತಬ್ಬಿಕೊಂಡಳು.
“ನನಗೆ ನಿನ್ನೊಂದಿಗೆ ಸರಸ ಆಡಲು ಮನಸ್ಸಿಲ್ಲ,” ಎಂದು ಹೇಳಿ ಅವಳನ್ನು ದೂರ ತಳ್ಳಲು ನೋಡಿದ. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ.
“ಇಂದು ನೀವು ನನ್ನ ಡೈಲಾಗ್ ಹೇಳಿದರೆ, ನಾನು ನಿಮ್ಮ ಹಾಗೆಯೇ ಕೋಪ ಮಾಡಿಕೊಳ್ಳಬೇಕಾಗುತ್ತದೆ,” ಎಂದು ಒಯ್ಯಾರದಿಂದ ಹೇಳಿದಾಗ ದೀಪಕ್ ಅನಿವಾರ್ಯವಾಗಿ ನಗಲೇಬೇಕಾದ ಸ್ಥಿತಿ ಉಂಟಾಯಿತು.
“ಅಂತೂ ಮೌನದ ಕೋಟೆ ನೆಲಸಮವಾಯಿತು…” ಎನ್ನುತ್ತಾ ಅವನ ಕೆನ್ನೆಗೆ ಮುತ್ತಿನ ಮಳೆ ಸುರಿಸಿದಳು.
“ನನ್ನ ಒಂದು ಪ್ರಶ್ನೆಗೆ ಮೊದಲು ಉತ್ತರ ಕೊಡು,” ವಂದನಾಳನ್ನು ತನ್ನ ಬಾಹುಗಳಲ್ಲಿ ಹಿಡಿದು ಅವಳು ಮತ್ತಷ್ಟು ಮುಂದೆ ಬರದಂತೆ ತಡೆದ.
“ಬೇಗ ಕೇಳಿ,” ಅವಳು ಅವನ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನ ನಡೆಸಿದಳು.
“ನನ್ನ ಪ್ರಶ್ನೆಗೆ ಸತ್ಯವಾದ ಉತ್ತರವನ್ನೇ ಕೊಡು.”
“ಹಾಂ, ಸತ್ಯವನ್ನೇ ಹೇಳ್ತೀನಿ.”
“ನಿನ್ನ ವರ್ತನೆ ಇಡೀ ದಿನ ಇಷ್ಟೊಂದು ಬದಲಾವಣೆ ಹೇಗಾಯ್ತು?”
“ಏಕೆಂದರೆ, ನಾನು ನಿಮ್ಮ ದೈನಂದಿನ ದೂರುಗಳನ್ನು ದೂರ ಮಾಡಲು ನಿನ್ನೆ ನಮ್ಮ ಬಾಸ್‌ಗೆ ರಾಜೀನಾಮೆ ಕೊಟ್ಟುಬಿಟ್ಟೆ. ಅದರಿಂದಾಗಿ ನಾನು ಬಹಳ ದುಃಖಿತಳು, ನಿರಾಶಳಾಗಿದ್ದೆ. ಮನೆಯಲ್ಲಿ ನೀವು ಯಾವಾಗಲೂ ನನ್ನ ತಪ್ಪುಗಳನ್ನೇ ಎತ್ತಿ ಎತ್ತಿ ಹೇಳ್ತಿದ್ರಿ. ಈ ಕಾರಣದಿಂದಾಗಿ ನಾನು ಕೋಪ, ಸಿಡಿಮಿಡಿಯಿಂದ ಮಕ್ಕಳನ್ನು ಗದರಿಸುತ್ತಿದ್ದೆ. ನಿಮ್ಮೊಂದಿಗೆ ಕೂಡ ಜಗಳ ಆಡ್ತಿದ್ದೆ.
“ನನಗೆ ಒಮ್ಮೆಲೆ ಸಮಸ್ಯೆಗೆ ಪರಿಹಾರವೊಂದು ಹೊಳೆಯಿತು. ನನ್ನ ಸುಖ, ಸಂತೋಷ, ವಿಶ್ರಾಂತಿ, ಅಭಿಲಾಷೆ, ಕನಸುಗಳನ್ನು ಪೂರ್ತಿಯಾಗಿ ನಿರ್ಲಕ್ಷಿಸಬೇಕು. ನನ್ನ ಮನಸ್ಸನ್ನು ಪರಿಪೂರ್ಣವಾಗಿ ಮುರಿದುಕೊಂಡು ಕೇವಲ ನಿಮ್ಮ ಹಾಗೂ ಮಕ್ಕಳ ಹಿತವನ್ನಷ್ಟೇ ಗಮನದಲ್ಲಿಟ್ಟುಕೊಂಡು ಜೀವಿಸಬೇಕೆಂದುಕೊಂಡೆ.
“ಇಂದು ನಾನು ಅದೇ ರೀತಿ ಜೀವಿಸಲು ಪ್ರಯತ್ನಿಸಿದೆ. ನಿಮ್ಮ ಬಾಯಿಂದ ಹೊರಡುವ ಅಪಶಬ್ದಗಳನ್ನು ಇನ್ನೆಂದೂ ಕೇಳಬಾರದೆಂದು ನಿರ್ಧರಿಸಿದೆ. ನಿಮ್ಮ ದೃಷ್ಟಿಯಲ್ಲಿ ನಾನು ಒಳ್ಳೆಯವಳಾಗಬೇಕು ಎನ್ನುವುದು ನನ್ನ ಯೋಚನೆ. ನನ್ನ ತಲೆನೋವು, ಸೊಂಟನೋವು, ದಣಿವಿನ ಕಾರಣದಿಂದ ನೀವು ಎಂದೂ ಉಪವಾಸ ಮಲಗುವಂತಾಗಬಾರದು ಮೈ ಡಾರ್ಲಿಂಗ್,” ಭಾವುಕಳಾದ ವಂದನಾ ಅವನ ಎದೆಗೆ ಒರಗಿದಳು.
“ನಮ್ಮ ಹಿತ ಗಮನದಲ್ಲಿಟ್ಟುಕೊಂಡು ನಿನ್ನಲ್ಲಿ ಏನೇನು ಬದಲಾವಣೆ ತಂದುಕೊಂಡಿರುವೆಯೋ ಅದರ ಬಗ್ಗೆ ನಾಳೆ ಚರ್ಚಿಸೋಣ. ಸದ್ಯಕ್ಕಂತೂ ನಾನು ಒಂದು ಕೆಲಸ ಮಾಡಬೇಕು,” ಎಂದು ಹೇಳುತ್ತ ಅವನು ಅವಳ ಕೆನ್ನೆ ಚುಂಬಿಸಿದ.
“ನಾನು ನಿಮ್ಮ ಜೊತೆಗೆ ಪರಿಪೂರ್ಣವಾಗಿ ಸಹಕರಿಸ್ತೀನಿ.”
“ಹಾಗಾದರೆ 5 ನಿಮಿಷ ನಿನ್ನ ದೇಹದ ಸುಗಂಧದ ಆನಂದ ಪಡೆಯಲು ಅವಕಾಶ ಕೊಡು. ನೀನು ಕಣ್ಣುಮುಚ್ಚಿಕೊಂಡಿರು. ಈ ಅವಧಿಯಲ್ಲಿ ನೀನು ಸ್ವಲ್ಪವೂ ಅಲುಗಾಡಬಾರದು. ಇಲ್ಲದಿದ್ದರೆ ನನ್ನ ಮಜವೆಲ್ಲ ಹೊರಟುಹೋಗುತ್ತದೆ.”
“ಓ.ಕೆ.,” ಎಂದು ಹೇಳಿ ವಂದನಾ ಮುಗುಳ್ನಗುತ್ತಾ ಕಣ್ಣು ಮುಚ್ಚಿಕೊಂಡಳು.
5 ನಿಮಿಷ ಮುಗಿಯುವಷ್ಟರಲ್ಲಿ ದಿನವಿಡಿಯ ದಣಿವಿನಿಂದಾಗಿ ವಂದನಾ ಗಾಢ ನಿದ್ರೆಗೆ ಜಾರಿದ್ದಳು.
“ನೀನು ಬಹಳ ಪ್ರೀತಿಪಾತ್ರಳು ಮೈ ಲವ್. ನೀನು ನನಗೆ ನನ್ನ ತಪ್ಪಿನ ಅರಿವು ಮಾಡಿಕೊಟ್ಟಿ. ಇನ್ಮುಂದೆ ನಾನು ಕೂಗಾಡುವುದಾಗಲಿ, ತಪ್ಪೆಣಿಸುವುದಾಗಲಿ ಮಾಡುವುದಿಲ್ಲ. ಮನೆಗೆಲಸಗಳ ನಿರ್ವಹಣೆಯಲ್ಲಿ ನಿನಗೆ ಸಂಪೂರ್ಣ ಸಹಕಾರ ಕೊಡ್ತೀನಿ,” ಎಂದು ಹೇಳಿ ವಂದನಾಳ ಹಣೆಯನ್ನು ಚುಂಬಿಸಿ ಅವಳ ಮುಗ್ಧ ಮುಖವನ್ನು ಪ್ರೀತಿಯಿಂದ ನೋಡುತ್ತ ಕುಳಿತುಬಿಟ್ಟ.