ನೀರಜಾ ಹೊಸ್ತಿಲಿನಲ್ಲಿ ನಿಂತು ಒಳಗೆ ಕಣ್ಣಾಡಿಸಿದಳು. ಮನೆ ಎಂದಿನಂತೆ ನಿಶ್ಶಬ್ದವಾಗಿರಲಿಲ್ಲ. ಸಂತೆಯ ಗದ್ದಲ ತುಂಬಿತ್ತು. ಯಾರೋ ಒಬ್ಬ ಮೇಜಿನ ಮೇಲೆ ಕೈಬೆರಳುಗಳಿಂದ ತಬಲಾ ಬಾರಿಸುತ್ತಿದ್ದ. ಇನ್ನೊಬ್ಬ ಸೋಫಾದ ಮೇಲಿರಿಸಿದ್ದ ಕುಶನ್‌ನ್ನು ಮೇಲೆತ್ತಿ ಹಾರಿಸಿ ಹಿಡಿಯುವ ಆಟ ಆಡುತ್ತಿದ್ದ. ಉಷಾ ಸ್ಟೀರಿಯೋದಿಂದ ಜೋರಾಗಿ ಮೊಳಗುತ್ತಿದ್ದ ಹಾಡಿಗೆ ದನಿ ಸೇರಿಸಿ ಹಾಡುತ್ತಿದ್ದಳು. ನೀರಜಾಳನ್ನು ನೋಡಿದೊಡನೆ ಎಲ್ಲರೂ ಬೊಂಬೆಗಳಂತೆ ನಿಂತುಬಿಟ್ಟರು. ಎಲ್ಲೆಡೆ ಮೌನ ಆವರಿಸಿತು. ಉಷಾ ಸ್ಟೀರಿಯೋ ಆರಿಸಿಬಿಟ್ಟಳು.

ನೀರಜಾಳಿಗೆ ತಾನೂ ಜೋರಾಗಿ ನಕ್ಕು ಈ ಎಳೆಯರ ಆಟದಲ್ಲಿ ಭಾಗಿಯಾಗಬೇಕೆಂಬ ಆಸೆಯಾಯಿತು. ಆದರೆ ಜವಾಬ್ದಾರಿಗಳನ್ನು ಹೊತ್ತು ಅವಳೀಗ ತ್ರಿವಿಕ್ರಮನಂತೆ ಬೆಳೆದುಬಿಟ್ಟಿದ್ದಳು. ಈಗ ಮಕ್ಕಳೊಡನೆ ಕಲೆತು ಆಡಲು ಅವಳ ಆ ಬೆಳವಣಿಗೆಯೇ ಅಡ್ಡಿಯಾಗಿತ್ತು.

ನೀರಜಾ ಮುಖದ ಮೇಲೆ ನಗೆಯನ್ನು ಎಳೆತಂದು ಕೇಳಿದಳು, “ರಾಜೂ, ನಿನ್ನ ವ್ಯಾಸಂಗ ಹೇಗೆ ನಡೆದಿದೆ?”

“ಚೆನ್ನಾಗಿ ನಡೆಯುತ್ತಿದೆ ಅಕ್ಕಾ.”

“ಉಷಾ, ನಿನ್ನ ಪರೀಕ್ಷೆ ಯಾವಾಗ?”

“ಮುಂದಿನ ತಿಂಗಳಿಂದ ಅಕ್ಕ, ಚೆನ್ನಾಗಿ ಓದ್ತಿದ್ದೀನಿ.”

ಮತ್ತೆ ಮೌನ ವ್ಯಾಪಿಸಿತು. ನೀರಜಾ ತನ್ನ ಕೋಣೆಗೆ ಹೋಗುತ್ತಲೇ, ಅದುವರೆಗೆ ಅದುಮಿದಂತಿದ್ದ ಹುಡುಗರು ಕುಸುಕುಸನೆ ಮಾತನಾಡತೊಡಗಿದರು. ನೀರಜಾ ಸೀರೆ ಕಳಚಿ, ನೈಟಿ ಧರಿಸಿದಳು, ಮನೆಯ ಪಕ್ಕದ ಗುಲಾಬಿ ತೋಟಕ್ಕೆ ಬಂದಳು.

“ನಮಸ್ಕಾರ ಅಮ್ಮ…” ಮಾಲಿ ಕೈ ಜೋಡಿಸಿ ವಂದಿಸಿದ.

ರಾತ್ರಿ ಮಾಲಿಯ ಮಗ ಜೋರಾಗಿ ಅಳುತ್ತಿದ್ದ. ಅದಕ್ಕೇನು ಕಾರಣ ಎಂದು ಕೇಳಬೇಕೆಂದುಕೊಂಡಳು ನೀರಜಾ. ಆದರೆ ತನ್ನ ದೊಡ್ಡಸ್ತಿಕೆಯ, ಗಾಂಭೀರ್ಯದ ಮುಖವಾಡ ಕಳಚಿಬಿದ್ದೀತೆಂದು, ಅವಳು ಮಾತುಗಳನ್ನು ಮನದಲ್ಲೇ ಅಡಗಿಸಿಕೊಂಡಳು.

“ಮನೆ ಮುಂದೆ ಇರೋ ಮಲ್ಲಿಗೆ ಬಳ್ಳಿ ಕಡ್ಡಿ ಕಡ್ಡಿಯಾಗಿ ಒಣಗಿಕೊಂಡಿದೆ. ಒಣಗಿರೋದನ್ನು ಕತ್ತರಿಸು.”

“ಈಗ್ಲೇ ಮಾಡ್ತೀನಮ್ಮಾ.”

ಅವಳು ಬಂದು ಲಾನಿನಲ್ಲಿ ಇರಿಸಿದ್ದ ಕುರ್ಚಿಯಲ್ಲಿ ಕುಳಿತಳು. ಎದುರುಗಡೆ ಒಂದು ಅಶೋಕ ಮರವಿತ್ತು. ಅದರ ಹಿಂದೆ ಮುಳುಗುತ್ತಿದ್ದ ಕೆಂಪು ಸೂರ್ಯ ಕಾಣಿಸುತ್ತಿದ್ದ. ಪ್ರತಿದಿನ ಇದೇ ನೋಟ. ಆದರೆ ಕೆಲವೊಮ್ಮೆ ಸೂರ್ಯನ ಮುಂದೆ ಮೋಡಗಳು ಕಾಣುತ್ತಿದ್ದವು.

ಪಕ್ಷಿಗಳು ಹಿಂಡು ಹಿಂಡಾಗಿ ಗುಂಪಿನತ್ತ ಹಾರುತ್ತಿದ್ದ. ತಾನೂ ಒಂದು ಹಕ್ಕಿಯಾಗಿ ಆಕಾಶದಲ್ಲೆಲ್ಲಾ ಸುತ್ತಾಡಿ ಬರಬೇಕೆಂದು ಎಷ್ಟೋ ಬಾರಿ ನೀರಜಾ ಆಸೆಪಡುತ್ತಿದ್ದಳು. ಜೋರಾಗಿ ನಗಬೇಕು, ಅಳಬೇಕು, ಕಣ್ಣಾಮುಚ್ಚಾಲೆ ಆಡಬೇಕು, ಜೆಯಿಂಟ್‌ ವೀಲ್ ನಲ್ಲಿ ಕುಳಿತುಕೊಳ್ಳಬೇಕು, ಕಡ್ಡಿ ಐಸ್‌ಕ್ರೀಂ ತಿನ್ನಬೇಕು, ಅಭಿಲಾಷನ ಎದೆಗೊರಗಿ, ಅವನ ಕಣ್ಣಿನಾಳದಲ್ಲಿ  ಮುಳುಗಿಹೋಗಬೇಕು….

ಅಭಿಲಾಷನ ನೆನಪಾದೊಡನೆ, ನೀರಜಾಳ ಎದೆ ಧಸಕ್ಕೆಂದಿತು. ನೆಟ್ಟಗೆ ಕುಳಿತು ತನ್ನ ಕನ್ನಡಕವನ್ನು ಒರೆಸತೊಡಗಿದಳು.

“ಅಮ್ಮಾ ಫೋನ್‌…. ಐ.ಜಿ.ಪಿ. ಸಾಹೇಬ್ರದ್ದು….” ರಾಮಣ್ಣ ಫೋನ್‌ ಎತ್ತಿಕೊಂಡು ಬಂದ.

ಅವಳು ಕೈ ನೀಡಿ ಅದನ್ನು ಎತ್ತಿಕೊಂಡು ಮಾತನಾಡಿದಳು. ಮಾತು ಮುಗಿಸಿ ಫೋನ್‌ನ್ನು ರಾಮಣ್ಣನಿಗೆ ಕೊಟ್ಟು, “ಕಾರ್‌ ತೆಗಿ,” ಎಂದು ಆದೇಶಿಸಿದಳು.

ಕಣ್ಣುಮುಚ್ಚಿ, ಕುರ್ಚಿಗೆ ಬೆನ್ನು ಆನಿಸಿ ನೀರಜಾ ಕುಳಿತೇ ಇದ್ದಳು. ಕಾರಿನ ಹಾರ್ನ್‌ ಕೇಳಿಸಿತು. ರಾಮಣ್ಣ ಅವಳ ಕಾಶ್ಮೀರಿ ಶಾಲ್ ‌ತೆಗೆದುಕೊಂಡು ಬಂದ. ಬೇರೆ ಸೀರೆ ಧರಿಸಿ ಬಂದ ನೀರಜಾ ಅವನಿಂದ ಶಾಲ್ ತೆಗೆದು ಹೊದ್ದುಕೊಂಡು ಕಾರಿನಲ್ಲಿ ಹೋಗಿ ಕುಳಿತಳು.

ಆ ನಿರ್ಜನ ಸ್ಥಳಕ್ಕೆ ಸಾಮಾನ್ಯವಾಗಿ ಯಾರೂ ಬರುತ್ತಿರಲಿಲ್ಲ. ಆದರೆ ಡೆಪ್ಯೂಟಿ ಕಮೀಷನರ್‌ ನೀರಜಾ ಸಂಜೆಯ ನಸುಗತ್ತಲಿನಲ್ಲಿ ಇಲ್ಲಿಗೆ ಬರುತ್ತಿದ್ದಳು. ಎರಡು ಬೃಹತ್‌ ಆಲದ ಮರಗಳ ನಡುವೆ ಒಂದು ಅಗಲವಾದ ಬಂಡೆ ಇತ್ತು. ಅದರ ಮೇಲೆ ಕುಳಿತು ಕಾಲುಗಳನ್ನು ಇಳಿಬಿಟ್ಟು ಹೊಳೆಯ ಜುಳು ಜುಳು ಹರಿಯುವ ನೀರಿನಲ್ಲಿ  ಆಟಾಡಬಹುದಾಗಿತ್ತು. ಹೊಳೆಯ ಎದುರು ಬದಿಯಲ್ಲಿ ಕುರುಚಲು ಮರಗಳ ಕಾಡಿತ್ತು.

ನೀರಜಾ ಅಲ್ಲಿ ಏಕಾಂಗಿಯಾಗಿ ಕುಳಿತುಕೊಂಡಳು. ಕಣ್ಣು ಮಂಜಾದಂತೆನಿಸಿ ಕನ್ನಡಕ ತೆಗೆದು ಮತ್ತೊಮ್ಮೆ ಒರೆಸಿಕೊಂಡಳು. ಆದರೆ ಕಣ್ಣಿನಲ್ಲಿ ನೀರಿದ್ದರೆ ದೃಷ್ಟಿ ಸ್ಪಷ್ಟವಾಗಿ ಕಾಣಿಸೀತೇ?

“ನೀರೂ, ಇವತ್ತು ಮತ್ತೆ ತಡವಾಗಿ ಬಂದಿದ್ದೀಯ. ಹೋಗು ನಿನ್ನ ಜೊತೆ ಮಾತಾಡೋಲ್ಲ.” ಈ ನಿರ್ಜನ ಸ್ಥಳದಲ್ಲಿ ಯಾರೋ ಕೂಗಿ ಹೇಳಿದಂತಾಯಿತು. ಭ್ರಮೆ! 12 ವರ್ಷಗಳ ಹಿಂದೆ ನಡೆದ ಘಟನೆ ಪುನರಾವರ್ತನೆಯಾಗುವುದುಂಟೇ?

ಗುಬ್ಬಚ್ಚಿಯೊಂದು ನೆಗೆನೆಗೆದು ಹೊಳೆಯವ ನೀರಿನಲ್ಲಿ ಸ್ನಾನ ಮಾಡುತ್ತಿತ್ತು. ನೀರಜಾ ಕೂಡ ಒಂದಾನೊಂದು ಕಾಲದಲ್ಲಿ ಹೀಗೇ ನೆಗೆದಾಡುತ್ತಿರಲಿಲ್ಲವೇ? ಅವಳ ಅಮ್ಮ ಕೋಪದಿಂದ ಹೇಳುತ್ತಿದ್ದರು, “ಏನೇ ಈ ಹಾರಾಟ? ಅಷ್ಟೆತ್ತರ ಬೆಳೆದರೂ ಇನ್ನೂ ಹುಡುಗಾಟಿಕೆ ಹೋಗಲಿಲ್ಲವಲ್ಲೇ….?”

ಇದೆಲ್ಲಾ ಕೆಲವೇ ದಿನಗಳ ಹುಡುಗಾಟಿಕೆ ಎಂದು ಆಗ ಅವಳಿಗೇನು ಗೊತ್ತಿತ್ತು? ಅವಳಂತೂ ತನ್ನ ಅಭಿಯ ಕೈ ಕೈ ಹಿಡಿದು ಸುತ್ತಾಡುತ್ತಾ ಪ್ರಪಂಚವನ್ನೇ ಮರೆತಿದ್ದಳು. ಎಲ್ಲ ನೀರ್ಗುಳ್ಳೆಯಂತೆ ಒಡೆಯುವುದೆಂದು ಯಾರ ತಾನೇ ತಿಳಿದಿದ್ದರು?

ತಂದೆಯ ಅಕಾಲ ಮರಣದಿಂದಾಗಿ ಮನೆಯ ಜವಾಬ್ದಾರಿಯನ್ನೆಲ್ಲ 22ರ ಹೊಸ್ತಿಲಲ್ಲಿದ್ದ ಅವಳೇ ಹೊರಬೇಕಾಗಿ ಬಂದಿತ್ತು. ತಮ್ಮ ರಾಜು ಆಗಿನ್ನೂ 13 ವರ್ಷದ ಹುಡುಗ, ಉಷಾ ಇನ್ನೂ 8 ವರ್ಷದ ಹುಡುಗಿ, ಜೊತೆಗೆ ಪ್ರಪಂಚ ಜ್ಞಾನವೇ ಇಲ್ಲದ ಅಮ್ಮ, ಹಾರಾಟ ನೆಗೆದಾಟ ಎಲ್ಲ ತಾನಾಗಿ ಮರೆಯಾಗಿದ್ದವು. ತನ್ನ ತಾರುಣ್ಯದ ಹೊಂಗನಸುಗಳೆಲ್ಲವನ್ನೂ ಅವಳು ಒಂದು ಪೆಟ್ಟಿಗೆಗೆ ಹಾಕಿ, ಬೀಗ ಜಡಿದುಬಿಟ್ಟಳು.

ಆ ದಿನ ಅವಳು ಅಭಿಲಾಷನ ಜೊತೆ ಕೊನೆಯ ಬಾರಿಗೆ ಈ ಜಾಗಕ್ಕೆ ಬಂದಿದ್ದಳು. ಇಬ್ಬರೂ ಮೌನವಾಗಿ, ಥಳಥಳಿಸುತ್ತಿದ್ದ ನೀರನ್ನು ನೋಡುತ್ತ ಕುಳಿತಿದ್ದರು. ಮೈನಾವೊಂದು ತನ್ನ ಗೂಡಿನ ದಾರಿ ಮರೆತು ಅಲ್ಲಿಗೆ ಬಂದು ಚಿಂವ್‌ಗುಟ್ಟುತ್ತಿತ್ತು. ಇಬ್ಬರೂ ಆ ಸದ್ದು ಕೇಳಿ ಬೆಚ್ಚಿಬಿದ್ದರು.

“ಅಮ್ಮ ಬಂದಿದ್ದಾರೆ….” ನೀರಿನಲ್ಲಿ ಸಣ್ಣ ಅಲೆಗಳು ಮೂಡಿದ್ದವು.

“ಹೂಂ….” ಮತ್ತೆ ಮೌನದ ಸಾಮ್ರಾಜ್ಯ.

“ನಿನ್ನನ್ನು ಕರ್ಕೊಂಡ್ಬಾ ನೋಡಬೇಕು ಅಂದರು,” ಅಭಿಲಾಷ್‌ ಒಂದು ಕಲ್ಲನ್ನೆತ್ತಿ ನೀರಿಗೆ ತೂರಿದ.

“ಹೂಂ.”

ಅಭಿಲಾಷ್‌ ಹಿಂದಿರುಗಿ ಅವಳನ್ನು ದೃಷ್ಟಿಸುತ್ತಾ, “ನನ್ನ ಮದುವೆ ಬೇಗ ಮಾಡಬೇಕೂಂತ ಅಮ್ಮನ ಆಸೆ,” ಅಭಿಯ ಧ್ವನಿ ತೀಕ್ಷ್ಣವಾಗಿತ್ತು.

“ಬೇಗ ಮಾಡಿಕೊಳ್ಳಿ…..” ನೀರಜಾ ಮೇಲೆದ್ದು ನಿಂತು ಹೇಳಿದಳು.

“ನೀರಜಾ…. ಇದನ್ನು ನೀನು….”

“ಹೌದು…. ನಾನೇ ಹೇಳ್ತಿದೀನಿ ಅಭಿಲಾಷ್‌. ನಾನು ಪೋಣಿಸಿದ ಸರಮಾಲೆಯ ದಾರ ಕಿತ್ತುಹೋಗಿ ಹೂಗಳೆಲ್ಲಾ ಮಣ್ಣಾಗಿಬಿಟ್ಟವು. ಈಗ ಮನೆ ಜವಾಬ್ದಾರಿ ಎಲ್ಲ ನನ್ನದೇ…. ನಾನು ಮದುವೆಯಾಗಲಾರೆ.”

“ನಿನ್ನ ಜವಾಬ್ದಾರಿಗಳನ್ನು ನಾನೂ ಹಂಚಿಕೊಳ್ತೀನಿ ನೀರಜಾ.”

“ನೀವಾಗಿ ಮುಂದೆ ಬಂದರೂ ಜವಾಬ್ದಾರಿಗಳ ಹಂಚಿಕೆ ಸಾಧ್ಯವಿಲ್ಲ ಅಭಿಲಾಷ್‌. ವರದಕ್ಷಿಣೆಯಾಗಿ ಸೊಸೆ ತನ್ನ ತಾಯಿ, ತಮ್ಮ, ತಂಗಿಯರನ್ನು ಜೊತೆಯಲ್ಲಿ ಕರ್ಕೊಂಡು ಬರೋದು ನಿಮ್ಮ ತಾಯಿಯವರಿಗೆ ಖಂಡಿತಾ ಇಷ್ಟವಾಗೋದಿಲ್ಲ.”

ನೀರಜಾಳ ಕಾಲಿನ ಬಳಿ ಇದ್ದ ದಪ್ಪ ಕಲ್ಲೊಂದು ನೀರಿಗೆ ಉರುಳಿ ಬಿತ್ತು. ಆಳವಾಗಿದ್ದ ನೀರಿನಲ್ಲಿ ದೊಪ್ಪೆಂದು ಸದ್ದಾಯಿತು. ಕಲ್ಲು ಹೊಳೆ ಆಳದಲ್ಲಿ ಹೂತುಹೋಗಿರಬೇಕು.

“ನೀರಜಾ, ಇದೇ ನಿನ್ನ ಕೊನೆಯ ನಿರ್ಧಾರವೇನು?”

“ಬೇರೇ ದಾರಿ ಇಲ್ಲ ಅಭೀ…. ವಯೋಸಹಜ ಆಸೆ ಆಕಾಂಕ್ಷೆಗಳು ನನಗೂ ಇವೆ. ನಿಮ್ಮನ್ನು ಮದುವೆಯಾಗಿ ಅವುಗಳನ್ನೆಲ್ಲ ಪೂರೈಸಿಕೊಳ್ಳಬೇಕೆಂಬ ಹಂಬಲ ಇತ್ತು. ಆದರೆ ನಾನು ಅಸಹಾಯಕಳಾಗಿದ್ದೇನೆ. ನನ್ನನ್ನು ಕ್ಷಮಿಸಿ ಅಭೀ…..”

ಮನೆಗೆ ಹಿಂದಿರುಗಿದಾಗ ತಾಯಿ ಅವಳಿಗೊಂದು ದೊಡ್ಡ ಲಕೋಟೆ ಕೊಟ್ಟರು. ಲೋಕಸೇವಾ ಆಯೋಗದ ಪರೀಕ್ಷೆಯ ಫಲಿತಾಂಶ ಬಂದಿತ್ತು. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಳು. ಆದರೆ ಮೌಖಿಕ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು. ಹೈದರಾಬಾದಿನಲ್ಲಿ ಕ್ಲರ್ಕ್‌ ಕೆಲಸ ಸಿಕ್ಕಿದಾಗ ಸಂಸಾರ ಸಮೇತ ಹೊರಟುಬಿಟ್ಟಳು. ಅದಕ್ಕೆ ಮುಂಚೆ ಮತ್ತೆ ಅಭಿಲಾಷ್‌ನನ್ನು ಭೇಟಿಯಾಗಿರಲಿಲ್ಲ. ತನ್ನ ಮನಸ್ಸಿನಲ್ಲಿ ಅಭಿಲಾಷ್‌ನನ್ನು ಕೂಡಿಹಾಕಿ, ಬಾಗಿಲಿಗೆ ಬೀಗ ಹಾಕಿಬಿಟ್ಟಳು. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತ 15 ವರ್ಷಗಳನ್ನು ಹೇಗೆ ಕಳೆದಳೋ, ಗೊತ್ತೇ ಆಗಿರಲಿಲ್ಲ.

ಇದರ ನಡುವೆ ಐ.ಎ.ಎಸ್‌, ಪರೀಕ್ಷೆ ಕಟ್ಟಿ ಉತ್ತೀರ್ಣಳಾಗಿ ಡೆಪ್ಯೂಟಿ ಕಮೀಷನರ್‌ ಆಗಿದ್ದಳು. ಎಲ್ಲವನ್ನೂ ನೋಡಿ ಸಂತೋಷಪಡಲು ತಾಯಿಯೂ ಬದುಕುಳಿದಿರಲಿಲ್ಲ. ಅಕ್ಕನ ಮುಖದ ಮೇಲೆ ಮಂದಹಾಸವನ್ನೆಂದೂ ಕಾಣದ ತಮ್ಮ, ತಂಗಿ ಬೇಕೆಂದರೂ ಅವರ ಎದುರು ನಗುವ ಸಾಹಸ ಮಾಡಲಿಲ್ಲ. ಅವಳು ಮುಖದ ಮೇಲೆ ಎಳೆದುಕೊಂಡಿದ್ದ ಗಾಂಭೀರ್ಯ ಕ್ರಮೇಣ ಅವಳ ರಕ್ತದಲ್ಲಿ ಒಂದಾಗಿಹೋಗಿತ್ತು. ಮನಸ್ಸಿನಲ್ಲಿ ಆಸೆ ಆಕಾಂಕ್ಷೆಗಳು ಉದಿಸುವುದಿರಲಿ, ಒಂದು ಗರಿಕೆಯೂ ಹುಟ್ಟದ ಮರುಭೂಮಿಯಾಗಿತ್ತು. ಎಷ್ಟೋ ಜನರು ಅವಳ ಹೃದಯವನ್ನು ಗೆದ್ದುಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಆ ಚಕ್ರವ್ಯೂಹ ಭೇದಿಸಲು ಯಾರಿಗೂ ಶಕ್ತಿ ಇರಲಿಲ್ಲ.

ಮನೆಗೆ ಹಿಂದಿರುಗಿದಾಗ ಕೆಲವರು ತನ್ನನ್ನು ಭೇಟಿಯಾಗಲು ಬರಲಿದ್ದಾರೆಂದು ಆಪ್ತ ಸಹಾಯಕ ಅರುಣ್‌ ಕುಮಾರ್‌ ಹೇಳಿದ್ದು ನೆನಪಿಗೆ ಬಂದಿತು.

ಅರುಣ್‌ ಬಂದು ಕುಳಿತಿದ್ದವರಿಗೆ ಅವಳ ಪರಿಚಯ ಮಾಡಿಸಿದ. “ಇವರು ಸೇಠ್‌ ಮೋತಿಲಾಲ್‌, ಹೊಸದೊಂದು ಆಸ್ಪತ್ರೆ ಕಟ್ಟಿಸುತ್ತಿದ್ದಾರೆ. ಮುಂದಿನ ತಿಂಗಳು 25 ರಂದು ನೀವು ಅದನ್ನು ಉದ್ಘಾಟಿಸಬೇಕೆಂದು ಪ್ರಾರ್ಥಿಸುತ್ತಾರೆ….”

“ಇವರು ಕೇಂದ್ರ ಸಚಿವಾಲಯದಲ್ಲಿ ಕಾರ್ಯದರ್ಶಿಗಳಾಗಿರುವ…. ಮತ್ತು ಇವರು ಇಲ್ಲಿಯ ಹೊಸ ಡೆಪ್ಯೂಟಿ ಕಮೀಷನರ್‌,” ಮಾತುಕತೆ ನಡೆಯಿತು. ಯಾರೂ ಅಗತ್ಯವಿಲ್ಲದ ಮಾತು ಆಡಲಿಲ್ಲ. ಜನರೆಲ್ಲರೂ ಅವಳನ್ನು `ಕಲ್ಲು ಹೃದಯದವಳು’ ಎಂದೇ ಕರೆಯುತ್ತಾರೆಂದು ಅವಳಿಗೆ ತಿಳಿದಿತ್ತು. ಕಲ್ಲಿನ ಹೃದಯ ಸ್ಪಂದಿಸುವುದುಂಟೇ?

ಅವರುಗಳನ್ನು ಬೀಳ್ಕೊಟ್ಟು, ತನ್ನ ಕೋಣೆಗೆ ಹಿಂದಿರುಗುವ ಮುನ್ನ ಅವಳು ರಾಮಣ್ಣನನ್ನು ಕೇಳಿದಳು. “ರಾಜು ಮತ್ತು ಉಷಾ ಎಲ್ಲಿದ್ದಾರೆ?”

“ತಮ್ಮ ರೂಮಿನಲ್ಲಿ ಓದಿಕೊಳ್ತಿದ್ದಾರೆ.”

ಕಾಯಿಸಿ ಇರಿಸಿದ್ದ ಬಿಸಿ ನೀರು ಮುಟ್ಟದೆ, ಅವಳು ಅರ್ಧ ಗಂಟೆಗಿಂತ ಹೆಚ್ಚು ಹೊತ್ತು ತಣ್ಣೀರಿನಿಂದ ಶವರ್‌ ತಿರುಗಿಸಿ ಸ್ನಾನ ಮಾಡಿದಳು. ಮಾನಸಿಕ ತುಮುಲ ಪರಿಹಾರವಾದಂತೆ ತೋರಿತು. ತಮ್ಮ, ತಂಗಿಯರೊಡನೆ ಊಟಕ್ಕೆ ಬಂದು ಕುಳಿತಾಗ, ಯಾರೂ ಬಾಯ್ತೆರೆಯಲಿಲ್ಲ. ಅಡುಗೆ ಭಟ್ಟರು ಚುರುಕಾಗಿ ಬಡಿಸುತ್ತಿದ್ದರು. ಬಾಲ್ಯದಲ್ಲಿ ಅಮ್ಮನ ಮಜ್ಜಿಗೆ ಅನ್ನದ ಕೈ ತುತ್ತಿನ ಸವಿ ಈ ತರಹೆವಾರಿ ಶ್ರೀಮಂತ ಭಕ್ಷ್ಯ ಭೋಜನದಲ್ಲೇಕೆ ಸಿಗುತ್ತಿಲ್ಲ ಎಂದು ನೀರಜಾ ಕೆಲವೊಮ್ಮೆ ಯೋಚಿಸುತ್ತಿದ್ದಳು.

ಮತ್ತೆ ತನ್ನ ಕೋಣೆಗೆ ಬಂದು ಯಾವುದೋ ಪುಸ್ತಕ ಹಿಡಿದು ಕುಳಿತಳು. ಆಯಾಸವೆನಿಸಿದಾಗ ಅದನ್ನು ತೆಗೆದಿಟ್ಟು ಮಲಗಿಕೊಂಡಳು. ಹೂವಿನಂಥ ಪಲ್ಲಂಗದ ಮೇಲೆ ಮಲಗಿದ್ದರೂ, ಅಶಾಂತಗೊಂಡ ಮನ ನಿದ್ರೆ ಮಾತ್ರೆ ನುಂಗದೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ.

ಸ್ಕಾಲರ್‌ ಶಿಪ್‌ ದೊರೆತಾಗ ರಾಜು ಉನ್ನತಾಭ್ಯಾಸಕ್ಕಾಗಿ ಲಂಡನ್ನಿಗೆ ಹೊರಟುಹೋದ. ಒಂದು ದಿನ ಉಷಾಳನ್ನು ಏನೋ ಕೇಳಬೇಕೆಂದು ಬಂದ ನೀರಜಾ ಒಳಗಿನಿಂದ ಕೇಳಿಬಂದ ಮಾತುಗಳನ್ನು ಹೊರಗೇ ನಿಂತು ಕೇಳಿಸಿಕೊಂಡಳು.

“ಇಲ್ಲ ಶೇಖರ್‌, ನಾನಂತೂ ಕೇಳೋಲ್ಲ…..”

“ಏನು ಹಾಗಂದ್ರೆ?”

“ಅಕ್ಕನ ಹತ್ರ ಮಾತಾಡ್ಲಿಕ್ಕೆ ನನಗೆ ಭಯವಾಗುತ್ತೆ.”

“ಹಾಗಂದರೆ…. ನಿನಗೆ ನಾನು ಇಷ್ಟವಿಲ್ಲ ಅಂತಾಯ್ತು.”

“ಶೇಖರ್‌, ಸ್ವಲ್ಪ ಅರ್ಥ ಮಾಡ್ಕೊಳ್ಳಿ. ಅಕ್ಕಂಗೆ ನಾನಿನ್ನೂ ಮುಂದೆ ಓದಬೇಕೂಂತ ಆಸೆ, ನನ್ನನ್ನೂ ಲಂಡನ್ನಿಗೋ, ಅಮೆರಿಕಾಗೋ ಕಳಿಸಬೇಕೂಂತಿದ್ದಾರೆ.”

“ಇನ್ನೂ ಒಳ್ಳೆಯದೇ ಆಯ್ತಲ್ಲ, ಇಬ್ರೂ ಹೋಗೋಣ. ನಮ್ಮ ಹನಿಮೂನ್‌ ಅಲ್ಲೇ ಆಗಲಿ.”

“ತಮಾಷೆ ಮಾಡಬೇಡೀಪ್ಪಾ. ಆದರೆ ಅಕ್ಕನ ಹತ್ತಿರ ಮಾತಾಡ್ಲಿಕ್ಕೆ ನನಗಂತೂ ಆಗೋದಿಲ್ಲ.”

“ನಿನಗೆ ಅವರ ಹತ್ತಿರ ಮಾತಾಡ್ಲಿಕ್ಕೆ ಆಗಲ್ಲ. ಅವರಂತೂ ಸ್ವಲ್ಪನೂ ಅರ್ಥಾನೇ ಮಾಡಿಕೊಳ್ಳೋಲ್ಲ. ಯಾವಾಗ್ಲಾದ್ರೂ ನಿನಗೆ ಏನಾದ್ರೂ ಬೇಕಾಂತಾ ಕೇಳಿದ್ದಾರಾ? ಒಂದ್ಸರ್ತಿಯಾದ್ರೂ ಪ್ರೀತಿಯಿಂದ ನಿನ್ನ ಕಷ್ಟ ಸುಖ ವಿಚಾರಿಸಿಕೊಳ್ತಾರಾ? ಅಗತ್ಯಗಳನ್ನು ಪೂರೈಸುವುದು ಮಾತ್ರ ಅಕ್ಕನ ಕರ್ತವ್ಯ ಅಂತೀಯಾ? ಅವರು ನಿಭಾಯಿಸಬೇಕಾದ ಬೇರೆ ಕರ್ತವ್ಯಗಳೂ ಇವೆ. ಸ್ವಯಂ ಕಲ್ಲು ಮನಸ್ಸಿನ ಹೆಣ್ಣಾದ್ದರಿಂದ ಇದೆಲ್ಲವನ್ನೂ ಮರೆತಿರಬೇಕು.”

ಮುಂದಿನ ಮಾತು ಕೇಳಿಸಿಕೊಳ್ಳುವ ಶಕ್ತಿ ನೀರಜಾಳಿಗೆ ಇರಲಿಲ್ಲ. ತನ್ನ ಕೋಣೆಗೆ ಬಂದು ಹಾಸಿಗೆಯ ಮೇಲೆ ಕಾಲು ಚಾಚಿ ಕುಳಿತು ದೀರ್ಘ ಆಲೋಚನೆಯಲ್ಲಿ ಮುಳುಗಿದಳು. ಅವಳು ತನ್ನ ಕರ್ತವ್ಯಗಳನ್ನು ಮರೆತಿದ್ದಳೇ? ತಂಗಿಯ ವಿದ್ಯಾಭ್ಯಾಸ ಪೂರೈಸುವುದಕ್ಕಿಂತ, ಈ ಬಗ್ಗೆ ಯೋಚಿಸುವುದು ತನ್ನ ಕರ್ತವ್ಯವಾಗಿತ್ತೇ? ಶೇಖರ್‌ ಹೇಳಿದಂತೆ ತಾನು ಕಲ್ಲು ಮನಸ್ಸಿನವಳೇ? ತಾನು ಅದುಮಿಟ್ಟುಕೊಂಡಿದ್ದ ಆಸೆ ಆಕಾಂಕ್ಷೆಗಳಿಗೆ ಕೊಂಚವೂ ತಲೆ ಎತ್ತಲು ಅವಕಾಶ ಕೊಟ್ಟಿದ್ದರೂ, ಇಂದು ಈ ಭವ್ಯ ಬಂಗಲೆ ತನ್ನದಾಗಿರುತ್ತಿರಲಿಲ್ಲ. ಈ ಪದವಿ, ಅಂತಸ್ತು, ಹಣ ಇರುತ್ತಿರಲಿಲ್ಲ ಎಂಬುದನ್ನು ಅವಳು ಯಾರಿಗೆ ಹೇಗೆ ವಿವರಿಸಿಯಾಳು? ಅವಳು ತನ್ನ ಎದೆಯನ್ನು ಒತ್ತಿಕೊಂಡಳು. ಈ ತೆಳು, ನೀಳ ಶರೀರದಲ್ಲಿ ಅಡಗಿರುವ ಈ ಪುಟ್ಟ ಹೃದಯ ಕಲ್ಲಿನಿಂದ ಮಾಡಲ್ಪಟ್ಟಿದೆಯೇ?

ನಗರದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರಾಜಾರಾಮರ ಒಬ್ಬನೇ ಮಗ ಶೇಖರ್‌ ಎಂಜಿನಿಯರ್‌ ಆಗಿದ್ದ. ನೀರಜಾ ತಾನೇ ಮುಂದಾಗಿ ಶೇಖರ್‌ ಉಷಾರ ಮದುವೆ ಮಾಡಿಸಿದಳು. ಮದುವೆಗೆ ರಾಜು ಕೂಡ ಬಂದಿದ್ದ. ಅವನು ಲಂಡನ್ನಿನಲ್ಲಿ ತನ್ನೊಡನೆ ಓದುತ್ತಿದ್ದ ಕವಿತಾಳನ್ನು ತಂಗಿಯ ಮದುವೆಗೆ ಕರೆತಂದಿದ್ದ. ಅವನು ನೀರಜಾಳಿಗೆ ಏನನ್ನೂ ಹೇಳಿರಲಿಲ್ಲ. ಆದರೂ ಈ ಗೆಳೆತನ ಶೀಘ್ರದಲ್ಲೇ ಮದುವೆಯಲ್ಲಿ ಪರ್ಯವಸಾನಗೊಳ್ಳುತ್ತದೆ ಎಂದು ನೀರಜಾ ತಾನಾಗಿ ತೀರ್ಮಾನಿಸಿದಳು.

ಉಷಾ ಗಂಡನೊಡನೆ ಹೊರಟುಹೋದ ಮೇಲೆ ನೀರಜಾಳಿಗೆ ಮನೆ ಶೂನ್ಯವಾಗಿ ತೋರುತ್ತಿತ್ತು. ಜೊತೆಯಲ್ಲಿ ರಾಜು ಕೂಡಾ ಇಲ್ಲ, ರಾಮಣ್ಣ ಮತ್ತು ಅಡುಗೆಯ ಭಟ್ಟರ ಮಕ್ಕಳೆಲ್ಲ ಸೇರಿ ಆಟ ಆಡುವುದನ್ನು ನೋಡಿದಾಗೆಲ್ಲ ಅವಳಿಗೆ ತಾನು ಏನೋ ಅಮೂಲ್ಯವಾದುದನ್ನು ಕಳೆದುಕೊಂಡಂತೆ ಭಾಸವಾಗುತ್ತಿತ್ತು. ತನ್ನ ಕೋಣೆಯ ದೀಪ ಆರಿಸಿ ಕತ್ತಲೆಯಲ್ಲಿ ನಿಂತು ಅವರ ಆಟವನ್ನು ಗಂಟೆಗಟ್ಟಲೆ ನೋಡುತ್ತ ನಿಂತಿರುತ್ತಿದ್ದ ನೀರಜಾಳಿಗೆ ಇತ್ತೀಚೆಗೆ ಅಭಿಲಾಷ್‌ ಪದೇ ಪದೇ ನೆನಪಾಗುತ್ತಿದ್ದ.

ಭೋಜನ ಕೂಟವೊಂದಕ್ಕೆ ಹೋದಾಗ ಆತಿಥೇಯರು ಅವಳಿಗೆ ನಾಯಿಮರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಯಾರಿಂದಲೂ ಯಾವ ಉಡುಗೊರೆಯನ್ನೂ ನೀರಜಾ ಸ್ವೀಕರಿಸುತ್ತಿರಲಿಲ್ಲ. ಆದರೆ ಹತ್ತಿಯ ಚೆಂಡಿನಂತಿದ್ದ ನಾಯಿಮರಿಯನ್ನು ಅವಳು ನಿರಾಕರಿಸಲಿಲ್ಲ. ಪ್ರೀತಿಯಿಂದ ಅದನ್ನೆತ್ತಿಕೊಂಡು ಮನೆಗೆ ಬಂದಳು. ಅದೀಗ ನೀರಜಾಳ ಎಡಿಬಿಡದ ಸಂಗಾತಿಯಾಯಿತು.

ಮಿನ್ನಿ ನೆಗೆನೆಗದು ಮನೆಯ ಎಲ್ಲ ವಸ್ತುಗಳನ್ನೂ ಅಸ್ತವ್ಯಸ್ತಗೊಳಿಸಿದರೆ, ಅದನ್ನು ಪ್ರೀತಿಯಿಂದ ಗದರಿಸುತ್ತ, ಎಲ್ಲವನ್ನೂ ಮತ್ತೆ ಆಯಾ ಜಾಗದಲ್ಲಿ ಜೋಡಿಸುವುದೇ ನೀರಜಾಳ ಕೆಲಸವಾಯಿತು. ಪುಟ್ಟ ನಾಯಿಮರಿಯೇ ಆದರೂ, ಮಿನ್ನಿಯ ಹಿಂದೆ ಹಿಂದೆ ಓಡಾಡಿ ನೀರಜಾಳಿಗೆ ಬಹಳ ದಣಿವಾಗುತ್ತಿತ್ತು. ಈಗ ಮಲಗಿ ನಿದ್ರಿಸಲು ಅವಳೇನೂ ನಿದ್ರೆ ಮಾತ್ರೆ ಸೇವಿಸಬೇಕಾಗಿಲ್ಲ. ಅವಳು ಹಾಸಿಗೆಯಲ್ಲಿ ಮಲಗಿದೊಡನೆ, ಮಿನ್ನಿ ಕೂಡಾ ನೆಗೆದು, ಅವಳ ಕಾಲುಗಳ ನಡುವೆ ಮಲಗುತ್ತಿತ್ತು.

ಒಮ್ಮೆ ಗ್ರಾಮೀಣ ಪ್ರದೇಶಗಳ ಟೂರ್‌ ಹೊರಡಬೇಕಾಯಿತು. ಹಿಂತಿರುಗುವಾಗ ಅವಳ ಜೀಪ್‌ ಕೆಟ್ಟುಹೋಗಿ, ಸನಿಹದ ಪ್ರವಾಸೀ ಬಂಗಲೆಯಲ್ಲಿಯೇ ತಂಗಬೇಕಾಯಿತು. ಅರುಣ್‌ ಕುಮಾರ್‌ ಮತ್ತು ನೌಕರ ಜೊತೆಯಲ್ಲಿದ್ದರು. ಚಳಿಗಾಲದ ರಾತ್ರಿಯಲ್ಲಿ ಅವಳು ಸರಿಯಾದ ಹಾಸಿಗೆ ಹೊದಿಕೆಯಿಲ್ಲದೆ ನಡುಗತೊಡಗಿದಳು. ಮರುದಿನ ಮನೆಗೆ ಹಿಂದಿರುಗುವ ವೇಳೆಗೆ ಅವಳಿಗೆ ಜ್ವರ ಬಂದಿತ್ತು.

ಮಾರನೇ ದಿನ ಗಂಟೆ ಎಂಟಾದರೂ ಅವಳು ಕೆಳಗಿಳಿದು ಬರಲಿಲ್ಲ. ಮಿನ್ನಿ ಕಾಲಿನಿಂದ ಬಾಗಿಲು ಕೆರೆಯುವ ಸದ್ದು ಕೇಳಿ ರಾಮಣ್ಣ ಹೆದರಿಬಿಟ್ಟ. ತಕ್ಷಣ ಅರುಣ್‌ ಕುಮಾರ್‌ಗೆ ಫೋನ್‌ ಮಾಡಿದ, ತನ್ನ ಹೆಂಡತಿಯನ್ನೂ ಕರೆಸಿದ. ಸೀತಮ್ಮ ಒಳಗೆ ಹೋಗಿ ನೋಡಿದಾಗ ನೀರಜಾ ಜ್ವರದಿಂದ ಎಚ್ಚರ ತಪ್ಪಿರುವುದು ತಿಳಿಯಿತು.

ಅರುಣ್‌ ತಕ್ಷಣ ಡಾಕ್ಟರ್‌ನ್ನು ಬರಮಾಡಿದ. ಉಷಾಳಿಗೆ ಫೋನ್‌ ಮಾಡಿದ. ಆ ಗಡಿಬಿಡಿಯಲ್ಲಿ ಉಷಾ ಶೇಖರನೊಡನೆ ಮಧುಚಂದ್ರ ಪ್ರವಾಸ ಹೋಗಿರುವುದೂ ಅವನಿಗೆ ಮರೆತುಹೋಯಿತು. ಆದರೆ ರಾಜಾರಾಮ್ ಓಡಿ ಬಂದರು. ಮನೆಯಲ್ಲಿ ಜನಜಂಗುಳಿ ನೆರೆಯಿತು. ಎಚ್ಚರ ಬಂದಾಗ ನೀರಜಾ ಎಲ್ಲರನ್ನೂ ಹೊರಟುಹೋಗುವಂತೆ  ಕೇಳಿಕೊಂಡಳು. ಸೀತಮ್ಮ ಮಾತ್ರ ಅವಳ ಪಕ್ಕ ಇದ್ದಳು. ಮಿನ್ನಿ ಪಕ್ಕದಲ್ಲೇ ಕುಳಿತು ಕುಂಯಿಗುಡುತ್ತಿತ್ತು.

ನೀರಜಾ ಕಣ್ಣು ಮುಚ್ಚಿ ಮಲಗಿದ್ದಳು. ಸೀತಮ್ಮ ಅವಳ ಹಣೆಯ ಮೇಲೆ ಒದ್ದೆ ಬಟ್ಟೆಯನ್ನು ಆಗಾಗ ಬದಲಿಸುತ್ತಿದ್ದಳು. ಆಗಾಗ ಕೈಕಾಲು ನೀವುತ್ತಿದ್ದಳು. ರಾತ್ರಿ ಜ್ವರ ಬಿಟ್ಟರೂ, ಸೀತಮ್ಮ ಮನೆಗೆ ಹೋಗಲಿಲ್ಲ. ನೀರಜಾ ನಿಟ್ಟುಸಿರಿಟ್ಟಳು. ಸೀತಮ್ಮ ತನಗೆ ಏನಾಗಬೇಕು? ತನ್ನ ತಮ್ಮ ಪರದೇಶದಲ್ಲಿದ್ದಾನೆ. ತಂಗಿ ಮಧುಚಂದ್ರದ ಸುಖ ಅನುಭವಿಸುತ್ತಿದ್ದಾಳೆ. ತಾನೋ ಏಕಾಂಗಿ, ತನ್ನ ಮನದ ಅಳಲು ಯಾರಲ್ಲಿ ಹೇಳಿಕೊಳ್ಳುವುದು? ಎಲ್ಲ ಸುಖ ಸೌಲಭ್ಯಗಳಿದ್ದೂ ತನಗೆ ಏನೇನೂ ಇಲ್ಲದ ಭಾವನೆ…. ಹೇಳಿದರೂ ಯಾರಾದರೂ ನಂಬುತ್ತಾರೆಯೇ? ಉನ್ನತ ಪದವಿಗೇರಿದರೆ ನೆಂಟಸ್ತಿಕೆಯ ಬಳ್ಳಿ ಸೊರಗಬೇಕೇಕೆ?

ರಾಜೂನ ಕಾಗದ ಬಂದಿತ್ತು. ಅವನ ಓದು ಮುಗಿದಿತ್ತು. ಸ್ವದೇಶಕ್ಕೆ ಹಿಂದಿರುಗಿ ಬರುತ್ತಾನೆ. ಕಾಗದದಲ್ಲಿ ನಿನಗೇನೋ ಆಶ್ಚರ್ಯ ತರಲಿದ್ದೇನೆ ಎಂದು ಬರೆದಿದ್ದ. ನೀರಜಾಳ ಸಂತೋಷ ಹೇಳತೀರದು. ತಮ್ಮ ಬರುತ್ತಿದ್ದಾನೆ ಮನೆ ಮತ್ತೆ ತುಂಬಿಕೊಳ್ಳುತ್ತದೆ. ಆದರೆ ಅವನು ಇಲ್ಲೇ ಇರಲು ಬರುತ್ತಿದ್ದಾನೋ ಅಥವಾ ಕೆಲವೇ ದಿನಗಳಿಗಾಗಿ ಬರುತ್ತಿದ್ದಾನೋ ಗೊತ್ತಿಲ್ಲ. ಆಶ್ಚರ್ಯ ಇನ್ನೇನಿರಬಹುದು? ಉಷಾಳ ಮದುವೆಗೆ ಕರೆತಂದಿದ್ದ ಹುಡುಗಿಯನ್ನು ಮದುವೆ ಆಗಿರಬಹುದು. ಅದಕ್ಕಿಂತ ಇನ್ನೇನಿದ್ದೀತು?

ಗುಲಾಬಿ ಹೂಗಳ ಎರಡು ದೊಡ್ಡ ಹಾರಗಳೊಡನೆ ಅವಳು ವಿಮಾನ ನಿಲ್ದಾಣಕ್ಕೆ ಹೋದಳು. ರಾಜುವಿಗೆ ಇಷ್ಟವಾದ ತರಹೆವಾರಿ ಅಡುಗೆ ಮಾಡಿಡುವಂತೆ ಮನೆಯಲ್ಲಿ ಭಟ್ಟರಿಗೆ ತಾಕೀತು ಮಾಡಿದಳು. ನಿಶ್ಚಿತ ಸಮಯಕ್ಕೆ ವಿಮಾನ ಬಂದಿಳಿಯಿತು. ವಿಮಾನದ ಮೆಟ್ಟಿಲಿಳಿದು ಬರುತ್ತಿದ್ದ ಜನರಲ್ಲಿ ತಮ್ಮ ಮತ್ತು ಅವನ ಹೆಂಡತಿಯನ್ನು ಅವಳ ಕಣ್ಣು ಅರಸುತ್ತಿತ್ತು. ಪಕ್ಕದಲ್ಲಿ ಹಾರಗಳನ್ನು ಹಿಡಿದು ಅರುಣ್‌ ನಿಂತಿದ್ದ.

ಇದ್ದಕ್ಕಿದ್ದಂತೆ ನೀರಜಾ ಬೆಚ್ಚಿದಳು. ರಾಜು ಕೈಯಾಡಿಸುತ್ತಾ ಬರುತ್ತಿದ್ದ. ಕಣ್ಣುಗಳಿಗೆ ಅಗಲವಾದ ತಂಪು ಕನ್ನಡಕ ಧರಿಸಿದ್ದ. ಆದರೆ ಅವನ ಪಕ್ಕದಲ್ಲಿ ಬರುತ್ತಿದ್ದ ವ್ಯಕ್ತಿ…. ಚಿರಪರಿಚಿತ ಮುಖ, ಕಣ್ಣುಗಳಿಗೆ ಬಂಗಾರದ ಫ್ರೇಮ್ ನ ಕನ್ನಡಕ ಬೇರೆ. ಇದೇನಿದು? ರಾಜೂ ಜೊತೆ ಏಕೆ? ಹೇಗೆ? ರಾಜು ಕೈಯಾಡಿಸುತ್ತಲೇ  ಇದ್ದ. ಆದರೆ ನೀರಜಾಳಿಗೆ ತನ್ನ ಕೈ ಎತ್ತಿ ಬೀಸುವುದಾಗಲಿಲ್ಲ. ರಾಜು ಜೊತೆ ಇದ್ದ ವ್ಯಕ್ತಿಯ ನೋಟ ನೀರಜಾಳ ಕಡೆಗೇ ಇತ್ತು. ಇಬ್ಬರೂ ವೇಗವಾಗಿ ಧಾವಿಸಿ ಬರುತ್ತಿದ್ದರು. ಸ್ವಲ್ಪ ಹೊತ್ತಿಗೆಲ್ಲಾ ರಾಜು ಓಡಿ ಬಂದು ಅಲ್ಲಿಯೇ ಅವಳ ಕಾಲುಮುಟ್ಟಿ ನಮಸ್ಕರಿಸಿದ.

“ಅಕ್ಕಾ, ಹೇಗಿದ್ದೀಯಾ?” ಎಂದು ಕೇಳಿದ.

ರಾಜು ಪ್ರಶ್ನೆಗೆ ಅವಳ ಮೌನವೇ ಉತ್ತರವಾಯಿತು. ಅವಳ ದೃಷ್ಟಿ ಅವನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ನೆಟ್ಟಿತ್ತು.

“ಅಕ್ಕಾ, ನಿನಗೆ ಆಶ್ಚರ್ಯ ತರ್ತೀನಿ ಅಂತ ಬರೆದಿದ್ದೆನಲ್ಲ…. ನೋಡು, ಇವರು ಡಾ. ಅಭಿಲಾಷ್‌. ನಮ್ಮ ಪ್ರೊಫೆಸರ್‌. ಲಂಡನ್ನಿನಲ್ಲಿ ಐದು ವರ್ಷ ಇದ್ದು ಇದೀಗ ಹಿಂದಿರುಗಿದ್ದಾರೆ. ಬ್ರಹ್ಮಚಾರಿಯಾಗಿ ಹೋಗಿ, ಬ್ರಹ್ಮಚಾರಿಯಾಗಿಯೇ ವಾಪಸ್ಸು ಬಂದಿದ್ದಾರೆ,” ರಾಜು ಅಕ್ಕನ ಭುಜಗಳನ್ನು ಹಿಡಿದು ಸ್ನೇಹದಿಂದ ಅಮುಕುತ್ತಾ ಹೇಳಿದ.

ನೀರಜಾ ಆಶ್ಚರ್ಯದಿಂದ ಮೂಕಳಾದಳು. ಅರುಣ್‌ ಅವಳ ಕೈಗೆ ಒಂದು ಹಾರವನ್ನು ಕೊಟ್ಟಿದ್ದ, ಏನು ಮಾಡುವುದು? ಅವಳ ಕೈ ಮೇಲೆದ್ದರೆ ತಾನೇ? ಅಭಿಲಾಷ್‌ ತಾನೇ ಅವಳಿಂದ ಆ ಹಾರವನ್ನು ತೆಗೆದುಕೊಂಡ. ರಾಜು ಕಿಲಕಿಲನೆ ನಕ್ಕು ಕ್ಯಾಮೆರಾ ಕ್ಲಿಕ್ಕಿಸಿದ. “ಅಕ್ಕಾ, ನಿನಗೆ ಮೊದಲೇ ಗೊತ್ತಿತ್ತೇನು? ಹಾರದ ಸಮೇತ ಬಂದಿದ್ದೀಯಾ?”

ನೀರಜಾ ಲಜ್ಜೆಯಿಂದ ತಮ್ಮನ ಕಿವಿ ಹಿಂಡಿದಳು. 15 ವರ್ಷಗಳ ಹಿಂದಿನ ಚೆಲುವು ಅವಳ ಮುಖದ ಮೇಲೆ ಅನಾಯಾಸವಾಗಿ ಕಾಣಿಸಿಕೊಂಡಿತು. ರಾಜು ಮನೆಗೆ ಬಂದವನೇ, ತನ್ನ ಗೆಳೆಯರನ್ನು ಕಾಣಬೇಕೆಂದು ನೆಪ ಹೇಳಿ ಹೊರಟುಹೋದ. ಅಭಿಲಾಷ್ ಅವಳಿಗೆ ಎಲ್ಲವನ್ನೂ ವಿವರಿಸಿದ.

“ರಾಜು ನಿನ್ನ ತಮ್ಮ ಅನ್ನೋದು ಅಕಸ್ಮಾತ್ತಾಗಿ ಗೊತ್ತಾಯಿತು. ಅಲ್ಲಿ ನನ್ನ ಅವಧಿ ಕೂಡಾ ಮುಗಿದಿತ್ತು. ಮತ್ತೆ ಅಲ್ಲೇ ಇರಲಿಕ್ಕೆ ನನಗೂ ಇಷ್ಟವಾಗಲಿಲ್ಲ.”

ಊಟ ಮುಗಿಸಿದ ಮೇಲೆ ಹಣ್ಣುಗಳ ತಟ್ಟೆಯೊ   ಡನೆ ಬಂದ ನೀರಜಾ ತಾನೇ ಕೇಳಿದಳು, “ನಿಮ್ಮ ತಾಯಿ ಹೇಗಿದ್ದಾರೆ?”

“ಕಾಲವಾಗಿ ಬಹಳ ದಿನಗಳಾಯಿತು…. ಸೊಸೆಯನ್ನು ನೋಡುವ ಅವರ ಆಸೆ ಈಡೇರಲೇ ಇಲ್ಲ.”

“ಮದುವೆ ಏಕೆ ಮಾಡಿಕೊಳ್ಳಲಿಲ್ಲ?’ ಅವಳ ಪ್ರಶ್ನೆಗೆ ಅವಳಿಗೇ ಭಯವಾಯಿತು. ಮತ್ತೆ ತಕ್ಷಣ ಸಂಭಾಳಿಸಿಕೊಂಡು, “ರಾಜು ಜೊತೆ ಕವಿತಾ ಎನ್ನುವ ಹುಡುಗಿ ಓದುತ್ತಿದ್ದಳಲ್ಲ…. ಅವಳು ಬರಲಿಲ್ಲವೇ?”

“ಎರಡು ದಿನ ಮುಂಚೆ ತಂದೆ ಜೊತೆಗೇ ಬಂದಿದ್ದಾಳೆ. ಎರಡು ಮದುವೆಗಳೂ ಒಟ್ಟಿಗೆ ಆಗಬೇಕು ಅನ್ನೋದು ರಾಜು ಹಠ.”

“ಎರಡು ಮದುವೆ…..?” ನೀರಜಾಳ ಮೈ ಕಂಪಿಸಿತು. ತನ್ನನ್ನು ಒಂದು ಮಾತು ಕೂಡಾ ಕೇಳದೆ ಇದೇನು ಹೇಳಿದ್ದಾನೆ? ಅವಳು ಕಣ್ಣೆತ್ತಿ ನೋಡಿದಾಗ ಅಭಿಲಾಷ್‌ನ ಕಣ್ಣುಗಳು ಪ್ರೇಮದ ಜ್ಯೋತಿಗಳಂತೆ ಮಿನುಗುತ್ತಿದ್ದವು.

“ಅಭೀ…. ಆದರೆ ನನಗೀಗ….” ವರ್ಷಗಳ ನಂತರ ಅವನ ಹೆಸರು ಹಿಡಿದು ಕೂಗುವುದು ಎಷ್ಟು ಸೊಗಸಾದ ಅನುಭವ!

“ಇನ್ನೂ ಏನಾದರೂ ಜವಾಬ್ದಾರಿ ಇದ್ದರೆ ಹೇಳು, ಇನ್ನೂ ಪ್ರತೀಕ್ಷೆ ಮಾಡಲೇ?”

ಅಭಿಲಾಷ್‌ನ ಮಾತು ಕೇಳಿ ಅವಳಿಗೆ ತುಂತುರು ಮಳೆಯಲ್ಲಿ ಮಿಂದ ಅನುಭವವಾಯಿತು. ಮತ್ತೆ ದೊರೆತ ಆಸರೆ ಅವಳ ಕಣ್ಣುಗಳಲ್ಲಿ ನೀರು ತರಿಸಿತು. ಇಂದು ಅವಳು ಮತ್ತೊಮ್ಮೆ ತನ್ನ ಪ್ರೀತಿಯ ಅಭಿಯ ನೀರೂ ಆಗಿಬಿಟ್ಟಿದ್ದಳು.

ಅಷ್ಟರಲ್ಲಿ ಮಿನ್ನಿ ನೆಗೆಯುತ್ತ ಬಂದಿತು. ಅಪರಿಚಿತನನ್ನು ನೋಡಿ ಕ್ಷಣ ಕಾಲ ಹಿಂಜರಿದು ಮತ್ತೆ ಹಾರಿ ನೀರಜಾಳ ಮಡಿಲನ್ನೇರಿತು.

“ಮಿನ್ನಿ ನನ್ನ ಒಂಟಿ ಬಾಳಿನ ಜೊತೆಗಾತಿ,” ನೀರಜಾ ಪರಿಚಯ ಮಾಡಿಕೊಟ್ಟಳು.

“ನನ್ನ ಪರಿಚಯ ಮಾಡಿಕೊಡು. ಇಲ್ಲವಾದರೆ ನನ್ನನ್ನು ತನ್ನ ಸವತಿ ಎಂದುಕೊಂಡು ಕಚ್ಚಿಬಿಟ್ಟರೆ ಕಷ್ಟ.”

ಇಬ್ಬರೂ ಒಟ್ಟಿಗೆ ನಕ್ಕರು. ಕವಿತಾಳೊಡನೆ ಹಿಂದಿರುಗಿ ಬಂದ ರಾಜು ಅವರನ್ನು ನೋಡಿ ಸಾರ್ಥಕತೆ ಅನುಭವಿಸಿದ.

Tags:
COMMENT