ಅಂಗವೈಕಲ್ಯ ಮಾನವನ ಅಭಿವೃದ್ಧಿಗೆ ಅಡ್ಡಗೋಡೆಯಲ್ಲ ಎಂದು ಆದರ್ಶ ಶಿಕ್ಷಕಿ ಹರ್ಷಿಯಾ ಬಾನು, ಯಾವ ರೀತಿ ಇಂದಿನ ಆಧುನಿಕ ತರುಣಿಯರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ತಿಳಿಯೋಣವೇ......?
84 ಜೀವರಾಶಿಗಳಲ್ಲಿ ಈ ಮಾನವ ಜನ್ಮ ಶ್ರೇಷ್ಠವಾದದ್ದು. ಈ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಏನಾದರೂ ಒಂದು ಸಾಧನೆ ಮಾಡಬೇಕು ಎನ್ನುವುದು ಎಲ್ಲರ ತುಡಿತ, ಆದರೆ ನಾವುಗಳು ಏನಾದರೂ ಒಂದು ಜೊಳ್ಳು ಕಾರಣ ಕೊಟ್ಟುಕೊಳ್ಳುತ್ತಾ, ಆ ದಾರಿಯಿಂದ ಹಿಂದೆ ಸರಿಯುತ್ತೇವೆ. ಆದರೆ ನಮ್ಮ ಸಮಾಜದಲ್ಲಿ ಒಂದಷ್ಟು ಸಾಧಕರು ಇದ್ದಾರೆ. ಅವರಿಗೆ ತಮ್ಮಲ್ಲಿದ್ದ ಊನವನ್ನು ಲೆಕ್ಕಿಸದೆ ಈ ಸಮಾಜಕ್ಕೆ ತನ್ನಿಂದಾದ ಏನಾದರೂ ಒಂದು ಕೊಡುಗೆ ನೀಡಬೇಕು ಎನ್ನುವ ಮಹತ್ವಾಕಾಂಕ್ಷೆ.
ಅಂಥವರ ಸಾಲಿನಲ್ಲಿ ನಮ್ಮ ಅರಸೀಕೆರೆಯ ಹರ್ಷಿಯಾ ಬಾನು ಒಬ್ಬರಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುವುದು. ಅರಸೀಕೆರೆಯ ಮೂಲದವರಾದ ಇವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ತಂದೆ ಕರೀಂಸಾಬ್ ಆರೋಗ್ಯ ಇಲಾಖೆಯ ಡಿ ದರ್ಜೆಯ ನೌಕರರಾಗಿದ್ದರು. ತಾಯಿ ರೆಹಾನ್ ಬಾನು ಗೃಹಿಣಿ. ಇವರಿಬ್ಬರ ಮುದ್ದಿನ ಮಗಳೇ ಹರ್ಷಿಯಾ ಬಾನು.
ಮಗಳ ಆಗಮನ ಎಷ್ಟು ಖುಷಿ ತಂದಿತೋ, ಸ್ವಲ್ಪ ದಿನಗಳ ನಂತರ ಅಷ್ಟೇ ಆತಂಕಕ್ಕೆ ಎಡೆ ಮಾಡಿತು. ಮಗಳಲ್ಲಿನ ನ್ಯೂನತೆ ತಾಯಿ ತಂದೆಗೆ ತಿಳಿಯಲು ತುಂಬಾ ಸಮಯ ಹಿಡಿಯಲಿಲ್ಲ. ವೈದ್ಯರಿಗೆ ತೋರಿಸಿದಾಗ ನೇತ್ರ ತಜ್ಞರಲ್ಲಿ ತೋರಿಸಲು ಸಲಹೆ ನೀಡಿದರು.
ಅದರ ಪ್ರಕಾರ, ಹರ್ಷಿಯಾಳನ್ನು ಕಣ್ಣಿನ ವೈದ್ಯರಿಗೆ ತೋರಿಸಿದಾಗ ಒಂದು ಆಘಾತಕಾರಿ ವಿಷಯ ತಿಳಿಯಲ್ಪಟ್ಟಿತು. `ಕನ್ಜಂಟೈಟ್‌ಬ್ಲೈಂಡ್ ನೆಸ್ ವಿಥ್ ಪಾರ್ಷಿಯ್ ಸೈಟ್.' ಅಂದರೆ ನೂರರಲ್ಲಿ ಐದು ಪರ್ಸೆಂಟ್ ಅಷ್ಟೇ ಕಣ್ಣು ಕಾಣಿಸುವುದು, ಭಾಗಶಃ ಅಂಧತ್ವ.
ಹುಟ್ಟಿನಿಂದಲೇ ಇದ್ದಿರುವುದರಿಂದ ಇದಕ್ಕೆ ಯಾವ ಚಿಕಿತ್ಸೆ ಇಲ್ಲವಾದರೂ, ತಾಯಿ ತಂದೆಯರಲ್ಲಿ ಒಂದು ಆಸೆ. ದೊಡ್ಡ ನಗರಗಳ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರೆ ಮಗಳು ಗುಣಮುಖಳಾಗಬಹುದೆಂದು ಬೆಂಗಳೂರು, ಮಣಿಪಾಲ್, ಪುಣೆಯಂತಹ ಮಹಾನಗರಗಳಿಗೆಲ್ಲ ತೋರಿಸಿದರು. ಎಲ್ಲ ವೈದ್ಯರೂ ಹೇಳಿದ್ದು ಒಂದೇ ಮಾತು. ಮಗಳ ಭವಿಷ್ಯತ್ತಿನ ಚಿಂತೆಯೊಂದಿಗೆ ಮರಳಿದ ದಂಪತಿಗಳು ಚಿಂತೆಯಲ್ಲಿ ಮುಳುಗಿದರು.
ಪ್ರಾಥಮಿಕ ಕಲಿಕೆ
ಕೊನೆಗೆ ತಾವೇ ಧೈರ್ಯ ತೆಗೆದುಕೊಂಡು, ಸಾಮಾನ್ಯ ಮಗುವಿನಂತೆ ಹರ್ಷಿಯಾಳನ್ನು ಬೆಳೆಸುವುದು ಎಂದು ನಿರ್ಧರಿಸಿ ಮುನ್ನಡೆದರು. ಮಗಳು ಬೆಳೆಯುತ್ತಾ ಒಂದೊಂದೇ ಬೆಳವಣಿಗೆಯ ಮೈಲುಗಲ್ಲು ದಾಟುತ್ತಾ ಶಾಲೆಗೆ ಹೋಗುವ ವಯಸ್ಸಿಗೆ ಬಂದಾಗ, ಎಲ್ಲರೂ ಅಂಧರ ಶಾಲೆಗೆ ಸೇರಿಸಲು ಹೇಳಿದಾಗ, ತಂದೆಯ ಮನ ಒಪ್ಪಲಿಲ್ಲ.
ಸಾಮಾನ್ಯ ಶಾಲೆಗೆ ಸೇರಿಸಿದರು. ಆದರೆ ಪುಸ್ತಕವನ್ನು ಕಣ್ಣಿಗೆ ತುಂಬಾ ಹತ್ತಿರ ಹಿಡಿದು ಓದಬೇಕಿತ್ತು. ಇದರಿಂದ ಕಣ್ಣಿಗೆ ನೋವಾಗುತ್ತಿತ್ತು. ಕಪ್ಪು ಹಲಗೆ ಮೇಲೆ ಬರೆದ ಅಕ್ಷರಗಳಂತೂ ಕಾಣುತ್ತಿರಲಿಲ್ಲ. ಆದರೆ ವಿದ್ಯೆ ಕಲಿಯಬೇಕೆಂಬ ಆ ಮಗುವಿನ ಅದಮ್ಯ ಆಸೆಗೆ ಶಿಕ್ಷಕರು ಹಾಗೂ ಸಹ ವಿದ್ಯಾರ್ಥಿಗಳು ಸಹಾಯಕರಾದರು. ಅವರು ಓದಿದ್ದನ್ನು ಕೇಳಿ ಮನದಟ್ಟು ಮಾಡಿಕೊಳ್ಳುತ್ತಿದ್ದಳು.
ತಾನು ವೈದ್ಯೆ ಆಗಬೇಕೆಂಬ ಅದಮ್ಯ ಆಸೆಯಿಂದ ಓದುತ್ತಿದ್ದ ಹರ್ಷಿಯಾಳಿಗೆ ಸತತ ಅಧ್ಯಯನ ಹಾಗೂ ಪ್ರಯೋಗಾಲಯದಲ್ಲಿ ತೊಂದರೆ ಆಗಬಹುದು ಎಂದು ತನ್ನ ಆಸೆಯನ್ನು ಕೈಬಿಟ್ಟಳು. ಆದರೆ ತನ್ನ ತಂದೆ ಕೆಲಸ ಮಾಡುವ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚೀಟಿ ಬರೆಯುವ ಕೆಲಸ ಮಾಡಿದಳು. ಸತತ ಅಧ್ಯಯನ ನಡೆದೇ ಇತ್ತು. ಇದರ ಫಲವಾಗಿ ಎಂ.ಎ, ಬಿಎಡ್‌ಮುಗಿಸಿದರು.





