ವೃತ್ತಿಯಿಂದ ವೈದ್ಯರಾದರೂ ಪ್ರವೃತ್ತಿಯಿಂದ ಕಲಾ ಪ್ರಕಾರದ ಅನೇಕ ಬಗೆಗಳನ್ನು ತನ್ನದಾಗಿಸಿಕೊಂಡಿರುವ ಡಾ. ಶೃತಿ, ಸೌಂದರ್ಯ ಕ್ಷೇತ್ರದಲ್ಲಿ ಸಾಧಿಸಿದ್ದು ನಿಜಕ್ಕೂ ಅನನ್ಯ. ಇವರ ವಿಶಿಷ್ಟ ವ್ಯಕ್ತಿತ್ವದ ಕುರಿತು ವಿವರವಾಗಿ ತಿಳಿಯೋಣವೇ....?
ಪ್ರತಿಷ್ಠಿತ ವಿಶ್ವ ಬ್ಯೂಟಿ ಪೇಜೆಂಟ್ ನಲ್ಲಿ ಸ್ಪರ್ಧಿಸಿ ಜಯಮಾಲೆ ಧರಿಸಿದ ನಮ್ಮ ಹುಬ್ಬಳಿಯ ಯುವ ವೈದ್ಯೆಗೆ ಸನ್ಮಾನ ಸಮಾರಂಭವಿತ್ತು. ಕಿರೀಟ ಧರಿಸಿದ ಡಾ. ಶೃತಿ ನೀಲಿ ವರ್ಣದ ಸೀರೆಯಲ್ಲಿ ಹಂಸಗಮನೆಯಾಗಿ ವೇದಿಕೆ ಏರಿದಾಗ, ಕಿಕ್ಕಿರಿದ ಸಭಾಂಗಣದಲ್ಲಿ ಕರತಾಡನದ ಅನುರಣನ. ಸ್ಛುಟವಾದ ಕನ್ನಡದಲ್ಲಿ ಅನುಭವದ ಮಾತಗಳನ್ನಾಡಿದ ಆಕೆ ಸುಶ್ರಾವ್ಯವಾಗಿ ಹಾಡಿದ `ಯಾವ ಮೋಹನ ಮುರಳಿ ಕರೆಯಿತು....' ಸ್ವರ ಮಾಧುರ್ಯಕ್ಕೆ ತಲೆದೂಗುವಂತಾಗಿತ್ತು.
ಆಕೆಯನ್ನು ಮಾತನಾಡಿಸಿದಾಗ, ಯಾವುದೇ ನಖರಾ ತೋರದೆ ಎಲ್ಲರೊಡನೆ ಸಾಮಾನ್ಯಳಂತೆ ಬೆರೆತಿದ್ದರು. ಅಂದಚೆಂದ, ಫ್ಯಾಷನ್ನಿನೆಡೆ ಒಲವಿದ್ದಲ್ಲಿ ಬುದ್ಧಿಮತ್ತೆ ಶೂನ್ಯವೆಂಬ ಪೂರ್ವಾಗ್ರಹ ಪೀಡಿತ ಅಭಿಪ್ರಾಯಕ್ಕೆ ಅಪಾದದಂತಿರುವ ಡಾ. ಶೃತಿಯವರ ಸಾಧನೆಯೇ ಈ ಲೇಖನಕ್ಕೆ ಪ್ರೇರಣೆ. ಬ್ಯೂಟಿ ಬ್ರೇನ್ ಎಂಬುದಕ್ಕೆ ಡಾ. ಶೃತಿ ಸಾಕ್ಷಿ.
ಓದಿನೊಟ್ಟಿಗೆ ಅನ್ಯ ಕ್ಷೇತ್ರಗಳಲ್ಲಿ ಸಾಧಿಸುವ ಜಾಣ್ಮೆ, ತುಡಿತವಿದ್ದರೂ ಸ್ಪರ್ಧಾತ್ಮಕ ಯುಗವೇ ನೆಪವಾಗಿ ಗಳಿಕೆಯನ್ನು ಪೇರಿಸುವ ಶಿಕ್ಷಣಕ್ಕಷ್ಟೇ ಪ್ರಾಮುಖ್ಯತೆ ಕೊಡುವ ಪರಿಸ್ಥಿತಿ ಇಂದಿನ ಯುವಪೀಳಿಗೆಯದ್ದು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಂತೂ ಎರಡು ದೋಣಿಯಲ್ಲಿ ಕಾಲಿಡದೇ ಶಿಕ್ಷಣಕ್ಕಷ್ಟೇ ಆದ್ಯತೆ ನೀಡುವಂತೆ ಸಲಹೆ, ಉಪದೇಶಗಳಿಗೆ ಅನುಗುಣವಾಗಿ ಬದ್ಧತೆಯಿಂದ ಮುನ್ನಡೆಯಲೇಬೇಕಾದ ಅನಿವಾರ್ಯತೆ.
ಹಾಗೆಂದೇ ಹೈಸ್ಕೂಲಿಗೆ ಕಾಲಿಡುತ್ತಲೇ ನೃತ್ಯ, ಸಂಗೀತ ಮುಂತಾದ ಕಲಿಕೆಗಳಿಗೆ ಪೂರ್ಣವಿರಾಮ, ಓದಿನೆಡೆಗಷ್ಟೇ ಗಮನ! ಈ ವ್ಯವಸ್ಥೆಯಲ್ಲಿ ಸ್ಟೆತಾಸ್ಕೋಪ್ ಆಯ್ದು ಕೊಂಡರೂ ಅಂತಾರಾಷ್ಟ್ರೀಯ ಬ್ಯೂಟಿ ಪೇಜೆಂಟ್ ನಲ್ಲಿ ಸ್ಪರ್ಧಿಸಿ, `ಮಿಸ್ ಯೂನಿವರ್ಸ್‌ಪೆಟೀಟ್' ಟಿಯಾರಾವನ್ನು ಮುಡಿಗೇರಿಸಿಕೊಂಡ ಮೊದಲ ಕನ್ನಡತಿಯಷ್ಟೇ ಅಲ್ಲದೇ, ಮೊದಲ ಭಾರತೀಯಳೆಂಬ ಹೆಗ್ಗಳಿಕೆಯೂ ಉತ್ತರ ಕರ್ನಾಟಕದವರಾದ ಡಾ. ಶೃತಿ ಹೆಗಡೆಗೆ ಸಲ್ಲುತ್ತದೆ.
40 ದೇಶದ ಸ್ಪರ್ಧಾರ್ಥಿಗಳನ್ನು ಹಿಂದಿಕ್ಕಿ ಕಿರೀಟವನ್ನು ತಮ್ಮದಾಗಿಸಿಕೊಂಡ ಇವರದು ಪ್ರಮುಖ ಪ್ರತಿಭೆಯೇ ಸೈ! ಬ್ಯೂಟಿ ವಿತ್ ಬ್ರೇನ್ ಎಂಬುದನ್ನು ಮತ್ತೆ ಸಾಬೀತು ಪಡಿಸಿದ್ದಾರೆ.
ಗಂಡು ಮೆಟ್ಟಿದ ನಾಡೆಂದೇ ಜನಜನಿತವಾಗಿರುವ ಹುಬ್ಬಳ್ಳಿ ನಿವಾಸಿಯಾದ ಇವರು ಸಜ್ಜನಿಕೆ, ಸರಳತೆಗೆ ಹೆಸರಾದ ಹವ್ಯಕ ಬ್ರಾಹ್ಮಣ ಸಮುದಾಯದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮುಡಿಗೇಸರದ ಮೂಲದವರು.
ಸಂಪ್ರದಾಯದ ಚೌಕಟ್ಟನ್ನು ದಾಟಿ ಸೌಂದರ್ಯ ಸ್ಪರ್ಧೆಯೆಡೆ ಗಮನವಿತ್ತು ಪಾಲ್ಗೊಳ್ಳುವುದು ಡಾ. ಶೃತಿಗೆ ಸುಲಭದ ಮಾತಾಗಿರಲಿಲ್ಲ. ತಂದೆ ಡಾ. ಕೃಷ್ಣ ಹೆಗಡೆ ಮತ್ತು ಅಣ್ಣ ಡಾ. ಸತೀಶ್ (ರೇಡಿಯಾಲಜಿಸ್ಟ್)ರಂತೆ ಸೇವೆಯನ್ನೇ ಗುರಿಯಾಗಿಸಿ ವೈದ್ಯ ವೃತ್ತಿಯನ್ನು ಆಯ್ದುಕೊಂಡರೂ, ಕಾಡುತ್ತಿದ್ದ ಕನಸಿನ ಬೆನ್ನೇರಿ ಛಲದಿಂದ ಸಾಧಿಸಿ ಮನಸ್ಸಿದ್ದಲ್ಲಿ ಮಾರ್ಗವುಂಟು ಎಂಬುದಕ್ಕೆ ನಿದರ್ಶನರಾಗಿದ್ದಾರೆ. ಗೃಹಿಣಿ ಕಮಲಾ ಹೆಗಡೆ ಮಗಳ ಕನಸುಗಳಿಗೆ ಬೆನ್ನೆಲುಬಾಗಿ ಬೆಂಬಲವಿತ್ತು ಪ್ರೋತ್ಸಾಹಿಸುತ್ತಿದ್ದಾರೆ.
``ಎಲ್ಲರಂತೆಯೇ ನನ್ನಲ್ಲೂ ಕನಸಿತ್ತು, ಋಣಾತ್ಮಕ ಮಾತುಗಳಿಂದ ವಿಚಲಿತಳಾಗದೇ ಕನಸನ್ನು ನನಸಾಗಿಸಲು ಛಲದಿಂದ ಮುನ್ನುಗ್ಗಿದ್ದರ ಫಲಶೃತಿಯೇ ಇದು! ಕಸುಗಳೇನೇ ಇದ್ದರೂ ಅದರೆಡೆ ಲಕ್ಷ್ಯವಿಟ್ಟು ದೃಢತೆಯಿಂದ ಸಾಗಿದರೆ ಯಶ ಶತಃಸಿದ್ಧ,'' ಎಂಬುದು ಡಾ. ಶೃತಿಯವರ ಮನದಾಳದ ಮಾತು. ಧಾರಾವಾಡದ ಎಸ್.ಡಿ.ಎಂ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌ವ್ಯಾಸಂಗದ ನಂತರ ಪ್ರಸ್ತುತ ತುಮಕೂರಿನ ಮೆಡಿಕಲ್ ಕಾಲೇಜಿನಲ್ಲಿ ಚರ್ಮರೋಗ ವಿಷಯದಲ್ಲಿ ಎಂ.ಡಿ ಅಧ್ಯಯನ ಮಾಡುತ್ತಿದ್ದಾರೆ. 2019ರಲ್ಲಿ ಹೊಟ್ಟೆಯ ಟ್ಯೂಮರ್ ನ ಕಾರಣ ತೆರೆದ ಶಸ್ತ್ರಚಿಕಿತ್ಸೆಗೆ ಒಳಪಟ್ಟಾಗ ಚೇತರಿಕೆಯ ಜೊತೆಗೆ ಇಂಟರ್ನ್ ಶಿಪ್, ನೀಟ್ ಪರೀಕ್ಷೆಗೂ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಜೀವನದ ಎರಡು ಅಮೂಲ್ಯ ವರ್ಷಗಳು ಉರುಳಿದವು.





