- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಖ್ಯಾತ ಸಾಹಿತಿ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕಥಾದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕನ್ನಡದ ಗಟ್ಟಿಯಾದ ಕಥಾ ಲೋಕಕ್ಕೆ ರಾಷ್ಟ್ರಮಟ್ಟದ ಮನ್ನಣೆ ದೊರೆತಂತಾಗಿದೆ.
ಈ ಪ್ರಶಸ್ತಿಯು ₹1,00,000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ. ಜಯಲಲಿತ ಮತ್ತು ಸಹನಾ ಕಾಂತಬೈಲು ಅವರಿದ್ದ ತಜ್ಞರ ಸಮಿತಿಯು ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2025ರ ಜನವರಿ 30ರಂದು ಆರಂಭವಾದ ಸುದೀರ್ಘ ಆಯ್ಕೆ ಪ್ರಕ್ರಿಯೆಯ ನಂತರ ಈ ಅಧಿಕೃತ ಘೋಷಣೆ ಹೊರಬಿದ್ದಿದೆ.

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. 'ಮಣ್ಣು ಸೇರಿತು ಬೀಜ', 'ತಮಂಧದ ಕೇಡು' ಇವರ ಪ್ರಮುಖ ಕಥಾಸಂಕಲನಗಳಾಗಿವೆ
‘ದಡ ಸೇರಿಸು ತಂದೆ’ ಕೃತಿಯ ಹೂರಣ
ಇದು ಅಮರೇಶ ನುಗಡೋಣಿ ಅವರ 6ನೇ ಕಥಾ ಸಂಕಲನವಾಗಿದ್ದು, ಇದರಲ್ಲಿ ಒಟ್ಟು ಎಂಟು ಕಥೆಗಳಿವೆ. ಈ ಕೃತಿಯು ಇಂದಿನ ಗ್ರಾಮೀಣ ಭಾರತದ ಜ್ವಲಂತ ಸಮಸ್ಯೆಗಳನ್ನು ಕನ್ನಡಿ ಹಿಡಿದಿದೆ. ಹಳ್ಳಿಗಳಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳು ಮತ್ತು ಗುಂಪು ಹಿಂಸಾಚಾರದ (Mob Violence) ಕ್ರೌರ್ಯವನ್ನು ಇಲ್ಲಿ ಅತ್ಯಂತ ನೈಜವಾಗಿ ಚಿತ್ರಿಸಲಾಗಿದೆ. ಬದುಕಿನ ವೈವಿಧ್ಯತೆ ಹಾಗೂ ಸಮಕಾಲೀನ ಸಮಾಜದ ವಿಘಟನೆಗಳನ್ನು ಈ ಸಂಕಲನವು ಓದುಗರ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. 2020ರ ಜನವರಿ 19 ರಂದು ರಾಯಚೂರಿನಲ್ಲಿ ಈ ಕೃತಿ ಲೋಕಾಪರ್ಣೆಯಾಗಿತ್ತು. ಪುಸ್ತಕವನ್ನು ಪಲ್ಲವ ಪ್ರಕಾಶನವು ಹೊರತಂದಿದೆ.





