ಸುಖ ಸೌಲಭ್ಯಗಳು ತುಂಬಿರುವ ಜೀವನವಿದ್ದರೂ ಬದುಕಲ್ಲಿ ಸಂತಸ ಮರೀಚಿಕೆ ಎನಿಸುತ್ತದೆ. ಅಂಥವರೂ ಸಹ ಸದಾ ಖುಷಿ ಖುಷಿಯಾಗಿರಲು ಏನು ಮಾಡಬೇಕು.....?
ಕೆಲವು ದಿನಗಳ ಹಿಂದೆ ರೇಖಾಳ ಬರ್ತ್ ಡೇ ಇತ್ತು. ಹುಟ್ಟಿದ ಹಬ್ಬ ಅಂತ ತಾನು ಗ್ರಾಂಡಾಗಿ ಸ್ವಾದಿಷ್ಟ ವ್ಯಂಜನಗಳನ್ನು ತಯಾರಿಸಿದಳು. ಮಧ್ಯಾಹ್ನದ ಗ್ರಾಂಡ್ ಊಟ ಮುಗಿಸಿ ಅವಳ ಮನೆಯವರೆಲ್ಲರೂ ಸಂಜೆ ಕಬ್ಬನ್ ಪಾರ್ಕ್ ಕಡೆ ಹಾಯಾಗಿ ಹೊರಟರು. ಅದೆಲ್ಲ ಮುಗಿಸಿ ರಾತ್ರಿ ಹೊರಗೆ ಡಿನ್ನರ್ ಸವಿದು, ಮನೆಗೆ ಬಂದಾಗ 11 ಗಂಟೆ ದಾಟಿತು, ತುಸು ಹೊತ್ತು ಟಿವಿ, ಫೋನು ಎಂದು ಗಮನಿಸಿ ಮಲಗುವಷ್ಟರಲ್ಲಿ 12 ದಾಟಿತು. ಆಗ ಏನನ್ನಿಸಿತೋ ಏನೋ, ರೇಖಾಳ ಗಂಡ ಮಧುಕರ್, ಇತ್ತೀಚೆಗೆ ಯಾಕೋ ನಾನು ಖುಷಿ ಖುಷಿಯಾಗಿ ಇರುತ್ತಿಲ್ಲ, ಎಂದ.
ಆತನ ಮಾತು ಕೇಳಿ ಅವಳಿಗೆ ಆಶ್ಚರ್ಯವಾಯಿತು. ಕನಿಷ್ಠ ಈ ದಿನ ಈ ಟಾಪಿಕ್ ತೆಗೆಯಬಾರದಿತ್ತು ಎಂದು ಅವಳು ನಿಡುಸುಯ್ದಳು. ಆ ದಿನ ಹಾಯಾಗಿ ಕಳೆದಿತ್ತು. ಆತ ಹಾಗೆ ಹೇಳಿದ್ದು ಯಾಕೆ ಅಂತ ರೇಖಾ ಯೋಚನೆಗೆ ಬಿದ್ದಳು. ಅದರ ಹಿಂದೆ ಏನೋ ಒಂದು ಕಾರಣ ಇದ್ದಿರಲೇಬೇಕು. ಆಗ ರೇಖಾ ಗಂಡನನ್ನು ಪರಿಪರಿಯಾಗಿ ಅದಕ್ಕೆ ಕಾರಣ ಏನೆಂದು ವಿಚಾರಿಸಿದಳು. ಆದರೆ ಅದಕ್ಕೆಲ್ಲ ಆತ ಹಾರಿಕೆ ಉತ್ತರ ನೀಡುತ್ತಾ, ಎಲ್ಲಾ ವಿಧದಲ್ಲೂ ಜೀವನ ಚೆನ್ನಾಗಿದೆ, ಏನೂ ತೊಂದರೆ ಇಲ್ಲ, ಆದರೂ..... ಜೀವನದಲ್ಲಿ ಖುಷಿ ಇಲ್ಲ!
ಹಾಗಾದರೆ ತಾನು ಮಾತ್ರ ಖುಷಿಯಾಗಿ ಇದ್ದೇನೆಯೇ ಎಂದು ರೇಖಾ ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಆಗ ಅವಳಿಗೆ ಅನ್ನಿಸಿತು, ಬಹುಶಃ ತಾನೂ ಖುಷಿ ಖುಷಿಯಾಗಿಲ್ಲ! ಅರೆರೆ.... ಹಾಗೇಕೆ? ಅಂದುಕೊಂಡಳು. ಎಲ್ಲಾ ಸುಖ ಸೌಲಭ್ಯಗಳಿರುವ ಆರಾಮದ ಜೀವನ ನಡೆಸುತ್ತಿದ್ದರೂ, ಇಬ್ಬರೂ ಸಂತೋಷವಾಗಿಲ್ಲ ಎಂದರೆ ಏನರ್ಥ?
ಈ ವಿಷಯ ಅವಳನ್ನು ವಿಚಲಿತಳಾಗಿಸಿತು. ಜೀವನದ ವಾಸ್ತವಿಕತೆಗೆ ಸಂಬಂಧಿಸಿದ ಪುಸ್ತಕಗಳನ್ನೂ ಅವಳು ತಿರುವಿ ಹಾಕತೊಡಗಿದಳು. ಇಂಟರ್ ನೆಟ್ ನ ಹಲವು ಸೈಟ್ಸ್ ಸಂದರ್ಶಿಸಿದಳು. ಹೀಗೆ ಸಂತಸ ಇಲ್ಲದಿರುವುದು ಏಕೆ, ಅದನ್ನು ಮರಳಿ ಪಡೆಯುವ ದಾರಿ ಏನು ಎಂದು ಹುಡುಕಾಡಿದಳು. ಎಷ್ಟೋ ಸಾಧು ಸಂತರ ಸಲಹೆಗಳನ್ನೂ ಪರಿಶೀಲಿಸಿದಳು. ಆದರೆ ಎಲ್ಲೂ ಅವಳಿಗೆ ತೃಪ್ತಿದಾಯಕ ಉತ್ತರ ಮಾತ್ರ ಸಿಗಲೇ ಇಲ್ಲ.
ಇದರಿಂದ ಸೋತಂತಾಗಿ ರೇಖಾ ನೇರವಾಗಿ ತನ್ನ ಫ್ಯಾಮಿಲಿ ಡಾಕ್ಟರ್ ಬಳಿ ಹೋದಳು. ಅವರ ಬಳಿ ತನ್ನ ಸಮಸ್ಯೆ ಹೇಳಿಕೊಂಡು, ಇದು ಒಂದು ಬಗೆಯ ಮಾನಸಿಕ ರೋಗವೇ ಎಂದು ಕೇಳಿದಳು. ಅದಕ್ಕೆ ಪರಿಹಾರವಾದರೂ ಏನು? ಎಂದು ಪ್ರಶ್ನಿಸಿದಳು.
ಇದೊಂದು ರೋಗವೇ....? ಅದಕ್ಕೆ ಡಾಕ್ಟರ್ ಮುಗುಳ್ನಗುತ್ತಾ, ಇದನ್ನು ರೋಗ ಎಂದು ಭಾವಿಸಬಹುದು ಅಥವಾ ಏನೂ ಇಲ್ಲ ಅಂತಲೂ ಸಹ! ಆದರೆ ಇದಕ್ಕೆ ಚಿಕಿತ್ಸೆಯೂ ನಿಮ್ಮ ಕೈಲೇ ಪರಿಹಾರ ಇದೆ, ಎಂದರು. ಯಾವ ವ್ಯಕ್ತಿಯೇ ಆಗಲಿ ಸಂತೋಷವಾಗಿ ಇರುವುದು ಬಿಡುವುದು, ನಮ್ಮ ದೇಹ ಸ್ರವಿಸುವ 4 ಹಾರ್ಮೋನ್ಸ್ ನ್ನು ಅವಲಂಬಿಸಿದೆ. ನಮ್ಮ ದೇಹ ಎಲ್ಲಿಯವರೆಗೆ ಈ 4 ಹಾರ್ಮೋನ್ಸ್ ಸ್ರವಿಸುತ್ತಿರುತ್ತವೋ ಅಲ್ಲಿಯವರೆಗೆ ನಾವು ಖುಷಿಯಾಗಿರುತ್ತೇವೆ.





