ಆಶಾ 25 ಯುಗಾದಿಗಳನ್ನು ಕಂಡಿದ್ದ ಹುಡುಗಿ. ಇದುವರೆಗೂ ಆಕೆ ಯಾರ ಪ್ರೀತಿ ಪ್ರೇಮದ ಗುಂಗಿನಲ್ಲಿಯೂ ಬಿದ್ದಿರಲಿಲ್ಲ, ಈ ವಿಷಯವಾಗಿ ಅವಳಿಗೆ ಬಲು ಹೆಮ್ಮೆ ಎನಿಸಿತ್ತು. ಮದುವೆಗೆ ಮುಂಚಿನ ಪ್ರೀತಿ ಪ್ರೇಮವೆಲ್ಲ ಬರೀ ಟ್ರಾಷ್‌…. ಅದು ಕೇವಲ ಆಕರ್ಷಣೆ, ಯೌವನದ ಸೆಳೆತಷ್ಟೆ ಎಂಬುದು ಅವಳ ವಾದ. ಅದರಲ್ಲೂ ಇಂದಿನ ಯುವಜನತೆ ಹುಚ್ಚು ಆವೇಶದ ಭರದಲ್ಲಿ ಕಾಮವನ್ನೇ ಪ್ರೇಮವೆಂದು ಭಾವಿಸಿ, 4 ದಿನಗಳ ಹಾರಾಟದ ನಂತರ ಕೈ ತೊಳೆದುಕೊಳ್ಳುವ ಕೆಟ್ಟ ಪ್ರಕ್ರಿಯೆಯನ್ನೂ ಆಕೆ ದ್ವೇಷಿಸುತ್ತಿದ್ದಳು.

ಆಶಾಳಂಥ ಸುಂದರ ಸುಶೀಲ ಕನ್ಯೆ ಪರಿಪಕ್ವ ವಯಸ್ಸು ಸಮೀಪಿಸಿದರೂ, ಯಾವುದೇ ಹುಡುಗನ ಜೊತೆ ಪ್ರಣಯ ಪ್ರಸಂಗಕ್ಕೆ ಸಿಲುಕಿಕೊಳ್ಳದೇ ಹಾಗೇ ಉಳಿದುಬಿಟ್ಟಿದ್ದು ಆಶ್ಚರ್ಯದ ವಿಷಯವಾಗಿತ್ತು. ಅವಳ ಹೃದಯ ಯಾರಿಗಾಗಿಯೂ ಮಿಡಿಯಲಿಲ್ಲ. ಅಂದರೆ ಅವಳಲ್ಲಿ ಏನಾದರೂ ದೈಹಿಕ ಕೊರತೆ ಇತ್ತೇ? ಅಥವಾ ಆಕೆ ಬೆಳೆದು ಬಂದ ಪರಿಸರ, ಕೌಟುಂಬಿಕ ಮೌಲ್ಯ, ಸಂಸ್ಕಾರ ಇತ್ಯಾದಿಗಳ ಪ್ರಭಾವದಿಂದ ಇಂಥ ಆಕರ್ಷಣೆಗೆ ಮನಸೋಲದಂತೆ ತನ್ನನ್ನು ತಾನು ಬಲಂತವಾಗಿ ನಿಗ್ರಹಿಸಿಕೊಳ್ಳುತ್ತಿದ್ದಳೇ?

ಹಾಗೆಂದ ಮಾತ್ರಕ್ಕೆ ಆಶಾ ಸುಂದರಿ ಅಲ್ಲ ಎಂದುಕೊಳ್ಳಬಾರದು, ಆದರೆ ಅವಳ ಸೌಂದರ್ಯಕ್ಕೆ ಗ್ರಹಣ ಹಿಡಿದಂತೆ ಸದಾ ಏನೋ ಒಂದು ಮಂಕು ಕವಿದುಕೊಂಡಿರುತ್ತಿತ್ತು. ಮರೆತೂ ಸಹ ಅಳೆಂದೂ ಮುಗುಳ್ನಗು ಬೀರುತ್ತಿರಲಿಲ್ಲ. ಅವಳು ತನ್ನ ಗೆಳತಿಯರ ಮಧ್ಯೆ ಗಂಡಸಿನಂಥ ಹೆಂಗಸು ಎಂಬ ಅಡ್ಡಹೆಸರು ಹೊಂದಿದ್ದಳು, ಸಾಲದ್ದಕ್ಕೆ ಅವಳಿಗೆ ಪುರುಷಕಂಠ ಇತ್ತು. ಎಲ್ಲರೂ ಅವಳನ್ನು ಇದಕ್ಕಾಗಿ ಕೀಟಲೆ ಮಾಡುತ್ತಿದ್ದರು.

ಗೆಳತಿಯರು ತಂತಮ್ಮ ಪ್ರಣಯ ಪ್ರಸಂಗಗಳನ್ನು ಬಿಚ್ಚಿಕೊಂಡು ಹರಟುತ್ತಿದ್ದಾಗ, ಅವಳು ಆ ಜಾಗವನ್ನೇ ಬಿಟ್ಟು ಹೊರಟು ಬಿಡುತ್ತಿದ್ದಳು. ಅವರೆಲ್ಲ ಚೆನ್ನಾಗಿ ರೇಗಿಸುತ್ತಿದ್ದರು, “ಥೂ…… ಇವಳೆಂಥ ಬೊಡ್ಡೆ ಮರವೇ! ಅದೆಲ್ಲಿಂದ ಹುಡುಗಿಯಾಗಿ ಸೃಷ್ಟಿಯಾಗಿ ಬಂದಳೋ…. ಹುಡುಗಿಯ ದೇಹದಲ್ಲಿ ಒರಟು ಗಂಡಸಿನ ಆತ್ಮ ಸೇರಿಕೊಂಡಂತಿದೆ, ಆದರೆ ಈ ಹಾಳಾದವಳು ಹುಡುಗಿ ತರಹ ಯಾರನ್ನೂ ಆಕರ್ಷಿಸುವುದೂ ಇಲ್ಲ.

“ಹುಡುಗ ಹುಡುಗಿಯರಿಬ್ಬರೂ ಒಂದೇ ಇವಳೆದುರಿಗೆ. ಮುಂದೇನು ಕಥೆಯೋ ಗೊತ್ತಿಲ್ಲ….. ಅದಾವ ಪುಣ್ಯಾತ್ಮ ಇವಳನ್ನು ಪ್ರೇಮಿಸುತ್ತಾನೋ…. ಅದಾರು ಇವಳ ಕೈ ಹಿಡಿಯಲಿದ್ದಾರೋ? ಯಾಜ್ಜೀವನ ಕನ್ಯಾಕುಮಾರಿಯಾಗುಳಿದರೂ ಆಶ್ಚರ್ಯವೇನಿಲ್ಲ.”

ಯಾರೇನು ಟೀಕೆ ಟಿಪ್ಪಣಿ ಮಾಡಿದರೂ, ಮೌನವಾಗಿ ಅರ್ಧಂಬರ್ಧ ತುಟಿ ಅರಳಿಸಿ, ದಿವ್ಯಾ ನಿರ್ಲಿಪ್ತತೆ ಪ್ರದರ್ಶಿಸಿ ಅದು ತನಗೆ ಹೇಳಿದ್ದೇ ಅಲ್ಲವೇನೋ ಎಂಬಂತೆ ಸುಮ್ಮನಿದ್ದುಬಿಡುತ್ತಿದ್ದಳು.

ಒಂದು ದಿನ ಇವಳ ಆಪ್ತ ಗೆಳತಿ ನೇತ್ರಾ ಅತಿ ಕಕ್ಕುಲತೆಯಿಂದ ವಿಚಾರಿಸಿಕೊಂಡಳು, “ನೀನೇಕೆ ನಿನ್ನ ಜೀವನವನ್ನು ಹೀಗೆ ಬರಡು ಬಂಜರುಭೂಮಿ ಆಗಿರಿಸಿಕೊಂಡಿರುವೆ? ಹೆಣ್ಣಿನ ಜೀವನ ಅಂದಮೇಲೆ ಅದರಲ್ಲಿ ಪ್ರೀತಿ ಪ್ರೇಮಗಳಂಥ ಮಹತ್ತರ ಭಾವನೆಗಳಿಗೆ ಉನ್ನತ ಸ್ಥಾನವಿರಬೇಕು. ಇಂಥ ಕೋಮಲ ಭಾವನೆಗಳು ನಿನ್ನ ಹೃದಯದಲ್ಲಿ ಮೂಡುವುದೇ ಇಲ್ಲವೇ? ಅಷ್ಟು ಮಾತ್ರ ನಿನ್ನ ಹೃದಯ ಕಠೋರವಾಗಿದೆಯೇ? ನಿನ್ನ ಜೀವನದಲ್ಲೂ ಪ್ರೀತಿ ಪ್ರೇಮದ ತಂಗಾಳಿ ಬೀಸಬೇಕು ಎಂದೆನಿಸುವುದಿಲ್ಲವೇ…..?”

ನೇತ್ರಾ ಒಳ್ಳೆಯ ಸ್ವಭಾವದ ಹುಡುಗಿ. ಅವಳು ಆಶಾಳ ಒಬ್ಬ ಪರಮಾಪ್ತ ಹಿತೈಷಿ ಕೂಡ. ಆಶಾಳಿಗೆ ಸದಾ ಒಳಿತಾಗಲಿ ಎಂದು ಆಶಿಸುವ ಈ ಶ್ರೇಯೋಭಿಲಾಷಿಯ ಮೇಲೆ ಮುನಿಸು ಬಾರದೆ, ಆಶಾ ಸಮಾಧಾನದಿಂದಲೇ ಈ ಪ್ರಶ್ನೆಗೆ ಎಷ್ಟೋ ಸಲ ಉತ್ತರ ಕೊಟ್ಟಿದ್ದಾಳೆ. ಆಶಾಳ ಈ ಶುಷ್ಕ, ನೀರಸ ಜೀವನ ಸರಿಹೋಗಲು ಒಂದೋ, ಅವಳು ಯಾರನ್ನಾದರೂ ಮದುವೆಯಾಗಬೇಕು ಅಥವಾ ಯಾರನ್ನಾದರೂ ಪ್ರೇಮಿಸಬೇಕು, ಈ ಕಾಲಕ್ಕೆ ಅದು ಅನಿವಾರ್ಯ ಕೂಡ ಎಂದೇ ನೇತ್ರಾ ಹೇಳುತ್ತಿದ್ದಳು.

“ಈಗಾಗಲೇ ನಿನ್ನ ಈ ಪ್ರಶ್ನೆಗೆ ಸುಮಾರು ಸಲ ಉತ್ತರಿಸಿದ್ದೇನೆ….. ಆದರೂ ನಿನಗೆ ಸಮಾಧಾನವಿಲ್ಲ…. ಈ ಪ್ರೀತಿ ಪ್ರೇಮ ಅನ್ನೋದೆಲ್ಲ ನನ್ನಂಥೋರಿಗಲ್ಲ ಕಣೆ. ಆದರೂ ಅದು ಅನಿವಾರ್ಯ ಅನ್ನುವುದಾದರೆ…. ಅದು ಕೇವಲ ನನ್ನ ಗಂಡನಿಗೆ ಮಾತ್ರ, ಮದುವೆಗೆ ಮುಂಚಿನ ಲವ್ವು ಗಿವ್ವು ಬೇಕಾಗೇ ಇಲ್ಲ!” ಆಶಾ ತನ್ನ ಜಡೆ ಎಳೆದು ಆಡಿಸುತ್ತಾ ಹೇಳಿದಳು.

“ಮದುವೆಗೆ ಮುಂಚಿನ ಪ್ರೀತಿ ಪ್ರೇಮದಲ್ಲಿ ತಪ್ಪಾದರೂ ಏನು? ಬೇರೆಯವರ ತರಹ ನೀನು ದೈಹಿಕವಾಗಿ ಕೂಡಲೇಬೇಕು ಅಂತ ಕಡ್ಡಾಯವೇನಿಲ್ಲ…. ಹಾಗೇಂತ ಪ್ರೇಮಿಸುವುದೇ ತಪ್ಪೆ?” ನೇತ್ರಾಳ ಮಾತಿದು.

“ಈಗಿನ ಕಾಲದ ಹುಡುಗರು ಲವ್ವಿನ ಹೆಸರಲ್ಲಿ ಇಂಥದನ್ನೇ ಬಯಸುತ್ತಾರೆ. ಒಮ್ಮೆ ಹುಡುಗಿ ಅದಕ್ಕೆ ಒಪ್ಪಿಬಿಟ್ಟರೆ ಮುಗಿಯಿತು, ಪ್ರೇಮಗೀಮ ಎಲ್ಲಾ ಫುಲ್ ಸ್ಟಾಪ್‌,” ಆಶಾ ದೃಢವಾಗಿ ಹೇಳಿದಳು.

“ಹುಡುಗರೇನೋ ಅಂಥದ್ದನ್ನು ಬಯಸಬಹುದು, ಇಂದಿನ ಸಿನಿಮಾಗಳಂತೂ ಅದನ್ನೇ ವೈಭವೀಕರಿಸುತ್ತಿವೆ ಅಲ್ಲವೇ? ಆದರೆ ಯಾವ ಹಂತದ ಸಲುಗೆ ಇದೆ, ಈ ಹುಡುಗರನ್ನು ಎಷ್ಟು ಹತ್ತಿರ ಬಿಟ್ಟುಕೊಳ್ಳಬಹುದು ಎಂಬುದೆಲ್ಲ ಹುಡುಗಿಯರ ಕಂಟ್ರೋಲ್‌ನಲ್ಲಿ ತಾನೇ ಇದೆ?”

“ಒಮ್ಮೆ ಪ್ರೀತಿ ಪ್ರೇಮದಲ್ಲಿ ಮುಳುಗಿಹೋದ ಮೇಲೆ ಆಯ್ತು, ಈ ರೀತಿ ಅಳತೆಗೋಲು ಇಟ್ಟುಕೊಂಡು ಇಷ್ಟು ಹತ್ತಿರ ಇಷ್ಟು ದೂರ ಅಂತೆಲ್ಲ ಯಾರಾದರೂ ತರ್ಕ ಮಾಡುತ್ತಾರೇನು? ಹುಡುಗ ಹುಡುಗಿ ಏಕಾಂತ ಪಡೆದ ಮೇಲೆ ಮುಗಿಯಿತು, ಇದಲ್ಲದೆ ಬೇರೇನು ನಡೆಯಲು ಸಾಧ್ಯ?” ಆಶಾ ತನ್ನ ಜೀವನದಲ್ಲಿಯೇ ಇಂಥದ್ದು ನಡೆದಿದೆಯೇನೋ ಎಂಬಷ್ಟು ಆತ್ಮವಿಶ್ವಾಸದಿಂದ ಈ ಕುರಿತು ಮಾತನಾಡುತ್ತಿದ್ದಳು.

“ಆದರೆ ನನ್ನ ನಂಬಿಕೆ ಎಂದರೆ….. ಹುಡುಗಿ ತನ್ನದೇ ಆದ ನಿಯಮ, ಕಟ್ಟಳೆಗಳನ್ನು ಮಾಡಿಕೊಂಡು ಅದನ್ನು ಮೀರದಂತೆ ಪ್ರೇಮಿಸಬಹುದು. ಪ್ರತಿಯೊಬ್ಬರ ಸ್ವಭಾವ ವಿಭಿನ್ನವಾದುದು. ಇದು ಅವರವರ ತರ್ಕಕ್ಕೆ ಬಿಟ್ಟಿದ್ದು. ನಿನ್ನದು ತೀರ ವಿಭಿನ್ನ ಸ್ವಭಾವ.

ನಿನ್ನದೇ ಆದ ಒಂದು ವೃತ್ತ ಮಾಡಿಕೊಂಡು ಅದರೊಳಗಿನ ಪರಿಧಿಯಲ್ಲೇ ಇರಬಯಸುತ್ತೀಯಾ. ಹೀಗಾಗಿಯೇ ಯಾವ ಹುಡುಗನೂ ಆ ಪರಿಧಿಯ ವ್ಯಾಪ್ತಿ ಮೀರಿ ಅದರೊಳಗೆ ಪ್ರವೇಶಿಸಲು ಯತ್ನಿಸುತ್ತಿಲ್ಲ. ಒಂದಂತೂ ಸತ್ಯ, ಹುಡುಗಿ ತನ್ನದೇ ಆದ ಇತಿಮಿತಿಯೊಳಗೆ ಇರಬಯಸಿದರೆ, ಯಾವ ಹುಡುಗನೂ ಅದನ್ನು ಮೀರಿ ವ್ಯವಹರಿಸಲಾರ.”

“ಅದೆಲ್ಲ ಸರಿ ನೇತ್ರಾ…. ಆದರೆ ಯಾರನ್ನಾದರೂ ಪ್ರೇಮಿಸಲೇಬೇಕು ಅನ್ನುವ ಅಗತ್ಯ ನನಗೆಲ್ಲಿದೆ?” ತುಸು ಗೊಂದಲಗೊಂಡವಳಂತೆ ಆಶಾ ಹೇಳಿದಳು.

“ಅಗತ್ಯ ಅಂತ ಅಲ್ಲ…. ಯಾರನ್ನಾದರೂ ನಿನ್ನ ಮನದಾಳದಿಂದ ಪ್ರೀತಿಸಿ ನೋಡು. ಆಗ ನಿನಗೇ ತಿಳಿಯುತ್ತದೆ…. ಪ್ರೇಮರಹಿತ ಜೀವನಕ್ಕಿಂತ ಪ್ರೇಮಪೂರಿತ ಜೀವನ ಎಷ್ಟು ಮಧುರವಾದುದು ಅಂತ. ಒಣಗಿಹೋದ ರೆಂಬೆ ಮೇಲೆ ಯಾವ ಹಕ್ಕಿಯೂ ಕೂರಬಯಸುವುದಿಲ್ಲ. ನೀನು ಯಾವುದೋ ಮರಳುಗಾಡಿನ ಒಂದು ಭಾಗವಾಗಿ ಉಳಿದುಬಿಡಬೇಡ.

“ಅದರಲ್ಲಿ ಯಾವ ಬಳ್ಳಿಯೂ ಚಿಗುರಲೇ ಇಲ್ಲ ಅಂತಾಗಬಾರದು…. ನಿನ್ನ ಜೀವನವನ್ನು ನೀನೇ ನೀರಸ ಮಾಡಿಕೊಳ್ಳಬೇಡ. ನಿನ್ನ ವರ್ತನೆಗಳಿಂದ ನೀನು ಎಲ್ಲಾ ಹುಡುಗಿಯರಿಂದ ವಿಭಿನ್ನವಾಗಿ ದೂರ ದೂರ ಆಗುತ್ತಿದ್ದಿ. ಯಾವ ಹುಡುಗಿಯೂ ನಿನ್ನನ್ನು ಮನಸಾರೆ ತನ್ನ ಗೆಳತಿ ಅಂತ ಟ್ರೀಟ್‌ ಮಾಡುವುದೇ ಇಲ್ಲ.

“ಹೀಗಾಗಿ ನಿನಗೆ ನೀನೇ ಒಂದು ದ್ವೀಪವಾಗುತ್ತಿದ್ದಿ. ಒಂದು ದಿನ ನಾನೂ ನಿನ್ನಿಂದ ದೂರವಾಗಿ ಹೋಗ್ತೀನಿ. ಆಗ ನೀನು ಯಾರ ಜೊತೆ ತಾನೇ ಹೀಗೆ ನಸುನಗುತ್ತಾ ಬೆರೆಯಲು ಸಾಧ್ಯ?

“ಯಾರ ಜೊತೆ ಗೆಳೆತನ ಮುಂದುವರಿಸಿ ನಿನ್ನ ಕಷ್ಟಸುಖ ಹಂಚಿಕೊಳ್ಳುವೆ? ಹುಡುಗರಂತೂ ಮೊದಲೇ ನಿನ್ನಿಂದ ದೂರ ಆಗಿಬಿಟ್ಟಿದ್ದಾರೆ. ಯಾರೂ ಈಗ ನಿನ್ನ ಕಡೆ ನೋಡಿ ಫ್ರೆಂಡ್‌ಶಿಪ್‌ ಮುಂದುವರಿಸಲು ಸಹ ಇಷ್ಟಪಡುವುದಿಲ್ಲ. ಯಾವ ಪ್ರಶಂಸಕರೂ ಇಲ್ಲದ ನಿನ್ನ ಈ ಸೌಂದರ್ಯ ಕಾಡಿನ ಬೆಳದಿಂಗಳಾಗಿ ಹೋಗುವುದಿಲ್ಲವೇ?” ನೇತ್ರಾ ದೊಡ್ಡ ಭಾಷಣವನ್ನೇ ಬಿಗಿದಿದ್ದಳು.

ಆಶಾಳಿಗೆ ಒಂದು ಕ್ಷಣ ಶಾಕ್‌ ತಗುಲಿದಂತಾಯಿತು. ಅಂದ್ರೆ ನಿಜವಾಗಿಯೂ ಈ ಪ್ರೀತಿಪ್ರೇಮ ಅನ್ನೋದು ಜೀವನಕ್ಕೆ ಇಷ್ಟು ಅನಿವಾರ್ಯವೇ? ಇದೊಂದು ಮಾತ್ರವೇ ಮನುಷ್ಯ ಮನುಷ್ಯರನ್ನು ಜೋಡಿಸುವ ತಂತುವೇ? ಅದರಿಂದ ಮಾತ್ರ ಖುಷಿ ಸಂತೋಷಗಳೇ? ಅವಳ ವಿಚಾರಗಳು ಬಿರುಗಾಳಿಯಂತೆ ಸುತ್ತಲಾರಂಭಿಸಿದವು, ಅವಳು ಅದರಲ್ಲಿ ಕತ್ತರಿಸಿಹೋದ ಗಾಳಿಪಟವಾಗಿದ್ದಳು.

ಇಂಥ ವಿಷಯಗಳನ್ನು ನೇತ್ರಾ ಈಗ ಮೊದಲ ಬಾರಿ ಅವಳಿಗೆ ಹೇಳಿದ್ದಳು ಅಂತೇನಲ್ಲ. ಅವರಿಬ್ಬರ ಮಧ್ಯೆ ಇಂಥ ಅನೇಕ ವಿಚಾರಗಳು ಬಂದುಹೋಗಿದ್ದವು. ಆದರೆ ಆಶಾ ಅದನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ಬಿಟ್ಟುಬಿಡುತ್ತಿದ್ದಳು. ಅವಳು ಪ್ರೀತಿಪ್ರೇಮದ ವಿಷಯಗಳನ್ನು ಎಂದೂ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಕಾಲಕ್ರಮೇಣ ಅವಳು ಆ ಯುವ ವರ್ಗದ ಗುಂಪಿನ ಮಧ್ಯೆ ತಾನು ಒಬ್ಬಂಟಿ ಎಂದು ಗ್ರಹಿಸಿದ್ದಳು. ಎಲ್ಲರೂ ಅವಳಿಗೆ ಪರಿಚಿತರೆ, ಆದರೆ ಯಾರೂ ಅವಳತ್ತ ಆಸಕ್ತಿಯಿಂದ ಮಾತನಾಡಿಸಲು ಅಥವಾ ಅವಳ ಮಾತು ಕೇಳಿಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಅವಳು ಉಪೇಕ್ಷಿತಳಾಗಿ ಒಂದು ಕಡೆ ಬೇಸರದಿಂದ ಕುಳಿತುಬಿಡುತ್ತಿದ್ದಳು.

ಆಶಾ ಎಷ್ಟೋ ಸಲ ಈ ಪ್ರಪಂಚದಲ್ಲಿ ತನ್ನ ಭಾವನೆಗಳಿಗೆ ಏನೇನೂ ಬೆಲೆ ಇಲ್ಲವೇ ಎಂದುಕೊಳ್ಳುತ್ತಿದ್ದಳು. ಅದು ಖಂಡಿತಾ ಇದೆ ಅಂದುಕೊಂಡರೆ, ಜನರೇಕೆ ಅವಳ ಕಡೆ ಆಕರ್ಷಿತರಾಗುತ್ತಾ ಇರಲಿಲ್ಲ? ಎಲ್ಲರೂ ಅವಳನ್ನೇಕೆ ಅಷ್ಟು ದೂರ ಸರಿಸಿಬಿಟ್ಟಿದ್ದಾರೆ? ಈ ಪ್ರಶ್ನೆಗೆ ಅವಳ ಬಳಿ ಉತ್ತರವಿತ್ತು, ಅದು ಅವಳಿಗೆ ಚೆನ್ನಾಗಿ ತಿಳಿದೂ ಇತ್ತು.

ಆ ರಾತ್ರಿಯಿಡೀ ಆಶಾ ಚಿಂತಿತಳಾಗಿದ್ದಳು. ನಿದ್ದೆ ಅವಳಿಂದ ಗಾವುದ ದೂರ ಹಾರಿತ್ತು. ಮೈಕೈ ಪೂರ್ತಿ ಅತಿಯಾಗಿ ನೋಯುತ್ತಿರುವಂತೆ ಹಿಂಸೆ ಎನಿಸಿತ್ತು. ಹೀಗೆ ನಾನಾ ಯೋಚನೆಗಳಿಂದ ಅವಳ ತಲೆ ಕೆಟ್ಟು ರಾಡಿಯಾಗಿತ್ತು.

ಮಾರನೇ ದಿನ ಅವಳು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಾಗ ಬಹಳ ಬಾಡಿಹೋಗಿರುವಂತೆ ಅನಿಸಿತು. ನಿರಾಸೆಯ ಮತ್ತೊಂದು ಪದರ ಮುಖವೇರಿತ್ತು. ಒಂದೊಂದಾಗಿ ಉದಾಸೀನತೆಯ ಪದರಗಳು ಅವಳ ಮುಖಕ್ಕೆ ಮೆತ್ತಿಕೊಳ್ಳುತ್ತಿತ್ತು. ಅದು ನಿಜಕ್ಕೂ ಗಂಭೀರ ವಿಷಯವಾಗಿತ್ತು. 25ರ ಹರೆಯದ ಈ ಹುಡುಗಿಯ ಮುಖದಲ್ಲಿ ವಸಂತಾಗಮನ ಕಾಣುವ ಬದಲು ಶಿಶಿರದ ಕಾರ್ಮೋಡಗಳು ಕವಿಯಬೇಕೇ? ಇದೇಕೆ ಹೀಗಾಯಿತು?

ನೇತ್ರಾ ಒಂದು ದಿನ ಅವಳನ್ನು ಮತ್ತೆ ತಡೆದು ಕೇಳಿದಳು, “ನೀನು ದಿನೇದಿನೇ ಹೆಚ್ಚು ಸಿಡುಕಳಾಗುತ್ತಿದ್ದಿ ಅಂತ ಅನಿಸುವುದಿಲ್ಲವೇ? ಮಾತುಮಾತಿಗೂ ನಿನಗೆ ಕೋಪ ಹೆಚ್ಚುತ್ತಲೇ ಇದೆಯಲ್ಲ?”

“ಅದಕ್ಕೆ…… ನಾನೇನು ಮಾಡಬೇಕು ಅಂತೀಯಾ?”

“ಬೇಕಾದಷ್ಟು….. ಇಷ್ಟು ಸುಶಿಕ್ಷಿತಳಾದ ಮೇಲೆ ಸಹ ನಿನ್ನೊಂದಿಗೆ ಹೀಗೆ ಏಕೆ ಆಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಬರುವುದಿಲ್ಲವೇ? ಈ ನಿಟ್ಟಿನಲ್ಲಿ ನಿನ್ನನ್ನು ನೀನು ಸುಧಾರಿಸಿಕೊಳ್ಳದಿದ್ದರೆ ಮುಂದೆ ಹುಚ್ಚಳಾಗಿ ಹೋಗ್ತಿ. ಇಷ್ಟರಲ್ಲಿ ನಿನಗೆ ಹಿಸ್ಟೀರಿಯಾದ ಲಕ್ಷಣಗಳು ಕಾಣಿಸಲಾರಂಭಿಸುತ್ತವೆ.”

“ನಿಜಕ್ಕೂ ಹಾಗೆ ಆಗುವುದುಂಟೆ? ನಾನಂತೂ ಸಂಪೂರ್ಣ ಆರೋಗ್ಯವಾಗಿದ್ದೀನಿ.”

“ದೇಹದ ಆರೋಗ್ಯವೇನೋ ಚೆನ್ನಾಗೇ ಇದೆ. ಆದರೆ ಮಾನಸಿಕ ಆರೋಗ್ಯವೇ ಸರಿ ಇಲ್ಲ. ಯೌವನ ತುಂಬಿದ ಹೆಂಗಸರ ದೈಹಿಕ ಹಸಿವು ಹಿಂಗದಿದ್ದರೆ ಅವರು ಹಿಸ್ಟೀರಿಯಾಗೆ ತುತ್ತಾಗುತ್ತಾರಂತೆ.

“ಹಳ್ಳಿಗಾಡಿನ ಹೆಂಗಸರು ಇದೇ ನೆಪದಲ್ಲಿ ದೆವ್ವ ಭೂತ ಮೆಟ್ಟಿಕೊಂಡಿತು ಅಂತ ಚಿಕಿತ್ಸೆಯ ನೆಪದಲ್ಲಿ ಮಾಂತ್ರಿಕರ ಬಳಿ ಹೋಗಿ ತಮ್ಮ ಹಸಿವು ಹಿಂಗಿಸಿಕೊಳ್ಳುತ್ತಾರಂತೆ. ನಿನಗೂ ಎಲ್ಲಾದರೂ ಅಂಥ ದೆವ್ವ ಮೆಟ್ಟಿಕೊಂಡೀತು ಅಂತ ನನಗೆ ಹೆದರಿಕೆ. ಇಂಥದೇ ಯೋಚನೆಯ ಸುಳಿಗೆ ಸಿಲುಕಿ ಹುಚ್ಚು ಅಂಟಿಸಿಕೊಳ್ಳಬೇಡ.”

“ನೀನು ನನ್ನನ್ನು ಭಯಪಡಿಸುತ್ತಿರುವೆಯಾ?” ಆಶಾ ನಿಜಕ್ಕೂ ಗಾಬರಿಗೊಂಡಿದ್ದಳು.

ನೇತ್ರಾ ಅವಳ ಕಡೆ ಉದಾಸೀನಳಾಗಿ ನೋಡುತ್ತಾ ಹೇಳಿದಳು, “ಇಲ್ಲ….. ನಾನು ನಿಜವನ್ನೇ ಹೇಳುತ್ತಿದ್ದೇನೆ. ನೀನು ಡಿಗ್ರಿ ಮುಗಿದ ತಕ್ಷಣ ಮದುವೆ ಆಗಿಬಿಡು, ಅದೇ ನಿನ್ನೆಲ್ಲ ಚಿಂತೆಗಳಿಗೆ ಪರಿಹಾರ.”

ನೇತ್ರಾಳ ಸಲಹೆ ಕೇವಲ ಆಶಾಳನ್ನು ಒಪ್ಪಿಸುವುದಾಗಿತ್ತು, ಅದನ್ನು ಒಪ್ಪಿ ನಡೆಸುವುದು ಬಿಡುವುದು ಅಶಾಳಿಗೆ ಸೇರಿದ್ದು.

ಬಾಲ್ಯದಿಂದ ಇಲ್ಲಿಯವರೆಗೂ ಆಶಾ ಒಂದು ಭ್ರಮಾಲೋಕದಲ್ಲೇ ಬದುಕುತ್ತಿದ್ದಳು. ಅವಳ ಕೌಟುಂಬಿಕ ಸಂಸ್ಕಾರ ಅವಳ ಮನದಲ್ಲಿ ಆಳವಾಗಿ ಬೇರುಬಿಟ್ಟ ವಿಚಾರವೆಂದರೆ ಪ್ರೀತಿಪ್ರೇಮ, ಹುಡುಗ ಹುಡುಗಿಯರು ಪರಸ್ಪರ ಬೆಳೆಸುವ ಮೈತ್ರಿ, ಅವರನ್ನು ಏಕಾಂತಕ್ಕೆ ಎಳೆದೊಯ್ದು ಹಾದಿ ತಪ್ಪುವಂತೆ ಮಾಡುತ್ತವೆ ಎಂಬುದು. ಇದು ಕೇವಲ ಕೆಟ್ಟ ವಿಚಾರ ಮಾತ್ರವಲ್ಲದೆ, ಸಾಮಾಜಿಕ ಪ್ರತಿಷ್ಠೆ ಹಾಗೂ ಕೌಟುಂಬಿಕ ಮರ್ಯಾದೆಗೂ ಧಕ್ಕೆ ತರುತ್ತದೆ ಎಂಬುದು. ಇದೇ ವಿಚಾರವನ್ನು ತನ್ನ ಮನದಲ್ಲಿ ದೃಢವಾಗಿ ಬೇರೂರಿಸಿಕೊಂಡು, ಆಶಾ ನೈಸರ್ಗಿಕವಾಗಿ ಮೈಗೂಡಿದ ಬದಲಾವಣೆಗಳನ್ನು ತನ್ನ ಭಾವನೆಗಳಿಂದ ಬಲವಂತವಾಗಿ ನಿಯಂತ್ರಿಸುತ್ತಾ ಹಾಗೇ ಬದುಕಿಬಿಟ್ಟಿದ್ದಳು…. ಅದನ್ನು ಬದುಕು ಎನ್ನುವುದಕ್ಕಿಂತ ಕ್ಷಣಕ್ಷಣ ಸತ್ತು ಉಳಿದಿದ್ದಳು ಎನ್ನಬಹುದು. ಅವಳು ತನ್ನ ಮುಖದ ಮೇಲೆ ಒಂದು ಸುಳ್ಳಿನ ಮುಖವಾಡ ಧರಿಸಿ, ವಾಸ್ತತೆಯನ್ನು ನೇರವಾಗಿ ಎದುರಿಸಲು ಸದಾ ಹೆದರುತ್ತಿದ್ದಳು.

ಆದರೆ ವಾಸ್ತವ ಎಂಬುದು ನಿಜಕ್ಕೂ ಬೇರೆಯೇ ಆಗಿತ್ತು. ಮೇಲ್ನೋಟಕ್ಕೆ ಅವಳು ಏನೇ ಮುಖಭಾವ ಪ್ರದರ್ಶಿಸಲಿ, ಆಂತರಿಕವಾಗಿ ಅವಳು ಒಬ್ಬ ಪರಿಪಕ್ವ ಹೆಣ್ಣಾಗಿದ್ದಳು. ಎಲ್ಲಾ ಸಾಮಾನ್ಯ ಹುಡುಗಿಯರಂತೆಯೇ ಅವಳ ಮನದಲ್ಲೂ ಸಹ ನೂರಾರು ಆಸೆಗಳು ತುಂಬಿದ್ದವು. ಅವಳ ಮನದಲ್ಲೂ ಕಾಮದ ಕಚಗುಳಿ ಇಡುವ ಬಯಕೆಗಳಿದ್ದವು. ಯಾರನ್ನಾದರೂ ಪ್ರೇಮಿಸಿ ತನ್ನವನನ್ನಾಗಿಸಿಕೊಳ್ಳಬೇಕೆಂಬ ಅದಮ್ಯ ಆಸೆಯಿತ್ತು. ಕಟ್ಟುಮಸ್ತಾದ ಹುಡುಗರನ್ನು ಕಂಡು ಅವಳ ಹೃದಯ ಆವೇದನೆಯಿಂದ ಹೊಡೆದುಕೊಳ್ಳುತ್ತಿತ್ತು. ಆದರೆ ಈ ಮುಖವಾಡ ಕಳಚಿ ತನ್ನ ಮನದ ಭಾವನೆ ಹೊರಹೊಮ್ಮಿಸಲು ಅವಳಿಗೆ ಧೈರ್ಯವಿರಲಿಲ್ಲ.

ಎಂ.ಎ. ಮುಗಿಸಿದ ನಂತರ ಇದೇ ಕಾಲೇಜಿನಡಿ ಅವಳು ಪಿ.ಎಚ್‌.ಡಿ. ಮಾಡಿದ್ದಳು. ಆ ಯೌವನದ ದಿನಗಳು ಕಳೆದು ಇದೀಗ ಪ್ರಾಧ್ಯಾಪಕಿಯಾಗಿ ಪಿಯುಸಿಗೆ ಪಾಠ ಮಾಡಲು ಅದೇ ಕಾಲೇಜನ್ನು ಸೇರಿದ್ದಳು. ಇದೇ ಕಾಲೇಜಿನ ಎಷ್ಟೋ ಹುಡುಗರು ಅವಳನ್ನು ತಮ್ಮ ಪ್ರೇಮಜಾಲದಲ್ಲಿ ಬಂಧಿಸಲು, ಎಷ್ಟೋ ಪ್ರಾಧ್ಯಾಪಕರು ತಮ್ಮ ಪ್ರೇಮ ನಿವೇದಿಸಿಕೊಳ್ಳಲು ಆತುರರಾಗಿದ್ದರು. ಆದರೆ ಅವಳು ಅವರೆಲ್ಲರನ್ನೂ ಮಾರುದೂರ ಇಟ್ಟಿದ್ದಳು. ಇಷ್ಟು ದಿನ ಅವಳು ತನ್ನನ್ನು ತಾನು ಯಾವ ರೀತಿ ವಂಚಿಸಿಕೊಂಡಿದ್ದಳು ಎಂಬುದು ಅವಳಿಗೆ ಮಾತ್ರ ಗೊತ್ತು. ಅವಳು ತನ್ನೆಲ್ಲ ಆಸೆ, ಬಯಕೆಗಳನ್ನೂ ಅಡಗಿಸಿಬಿಟ್ಟಿದ್ದಳು.

ದೈಹಿಕ ಬದಲಾವಣೆ, ಮಾನಸಿಕ ಚಿಂತೆ, ಗೆಳತಿಯರ ವ್ಯಂಗ್ಯ ವಾಗ್ಬಾಣಗಳಿಂದ ಈಗವಳು ಹೆಚ್ಚು ವಿಚಲಿತಳಾಗುತ್ತಿದ್ದಳು. ಮನಸ್ಸು ಎಲ್ಲದರಿಂದ ದೂರ ಓಡಿಹೋಗಬೇಕು ಎಂದು ಬಯಸುತ್ತಿತ್ತು. ಆದರೆ ನಿರರ್ಥಕ ಆದರ್ಶಗಳು, ಸಂಪ್ರದಾಯದ ಚೌಕಟ್ಟು ಅವಳನ್ನು ಬಂಧಿಸಿಟ್ಟಿತ್ತು. ಉಸಿರುಗಟ್ಟಿಸುವ ವಾತಾವರಣದಲ್ಲಿ ಅವಳು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳಾಗಿದ್ದಳು.

ಕೊನೆಗೆ, ಅವಳು ತನ್ನ ಈ ಪರಿಯ ಮನಸ್ಥಿತಿಯನ್ನು ಗೆಳತಿ ನೇತ್ರಾಳ ಬಳಿ ನಿವೇದಿಸಿಕೊಂಡಳು.

ಅದನ್ನು ಕೇಳಿ ನಸುನಕ್ಕ ನೇತ್ರಾ, ಅವಳನ್ನು ತೋಳಲ್ಲಿ ಬಳಸಿ ಹೇಳಿದಳು, “ಅಂದ್ರೆ….. ಕಲ್ಲುಬಂಡೆ ಕರಗುತ್ತಿದೆ ಅಂತಾಯ್ತು…. ಬರಡಾದ ಕೊರಡು ಕೊನರುತ್ತಿದೆ ಅಲ್ವೇ? ಕಂಗ್ರಾಟ್ಸ್!”

“ನೀನೇ ಈಗ ನನಗೇನಾದರೂ ದಾರಿ ತೋರಿಸಬೇಕು,” ಎಂದು ಅವಳು ಹೇಳಿದಳು.

“ನೀನು ಪ್ರೀತಿಪ್ರೇಮಕ್ಕೆ ಸಿಲುಕುವವಳಲ್ಲ, ಆದ್ದರಿಂದ ಬೇಗ ಮದುವೆ ಆಗಿಬಿಡು,” ನೇತ್ರಾ ಸಹಜವಾಗಿ ಹೇಳಿದಳು.

“ಸಾಕು ನಿನ್ನ ತಮಾಷೆ….. ನಿನಗೇ ಗೊತ್ತಿದೆ, ನಾನೀಗಲೇ ಮದುವೆ ಆಗುವ ಸ್ಥಿತಿಯಲ್ಲಿಲ್ಲ. ನಮ್ಮ ಮನೆಯಲ್ಲಿ ಯಾರೂ ಈ ವಿಷಯದ ಬಗ್ಗೆ ಮಾತನಾಡುವುದೂ ಇಲ್ಲ,” ಅವಳ ಧ್ವನಿಯಲ್ಲಿ ನಿರಾಸೆಯಿತ್ತು.

“ಹೌದ್ಹೌದು, ಕರೆಯುವ ಹಸುವನ್ನು ಯಾರು ಕಂಡೋರ ಮನೆಗೆ ಅಟ್ಟುತ್ತಾರೆ?” ನೇತ್ರಾ ಹೇಳಿದಳು.

ನೇತ್ರಾಳ ಮಾತುಗಳು ಆಶಾಳ ದುಃಖ ಹೆಚ್ಚಿಸಿತು. ಮನೆಯಲ್ಲಿ ಅವಳ ಅಣ್ಣ ಇದ್ದ. ಅವನಿಗೂ ಮದುವೆ ಆಗಿತ್ತು. ಆದರೆ ಅವನು ಮಹಾ ಬೇಜವಾಬ್ದಾರಿಯ, ಪೋಲಿ ಅಲೆಯುವ ಉಂಡಾಡಿ ಗುಂಡನಾಗಿದ್ದ. ತಂದೆ, ತಂಗಿಯರ ಸಂಪಾದನೆ ಅವಲಂಬಿಸಿ ತನ್ನ, ಹೆಂಡತಿಯ ಹೊಟ್ಟೆ ತುಂಬಿಸುತ್ತಿದ್ದ. ಅವನ ಕಾರಣ ಮನೆಯಲ್ಲಿ ದಿನವೂ ಜಗಳ ನಡೆಯುತ್ತಿತ್ತು. ಆದರೆ ಅದು ಅವನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಎಲ್ಲರೂ ಅವನನ್ನು ಮನೆಯಿಂದ ಓಡಿಸಬೇಕೆಂದೇ ಬಯಸಿದರು. ಆದರೆ ಮಾನಗೇಡಿ, ಎಷ್ಟು ಉಗಿಸಿಕೊಂಡರೂ ಮನೆ ಬಿಟ್ಟು ಕದಲುತ್ತಿರಲಿಲ್ಲ. ಭಂಡತನದ ಪರಮಾವಧಿ ಮೀರಿದ್ದ ಅವನು ಮನೆಯಲ್ಲೇ ಕದ್ದು ತಿಂದು, ಜಗಲಿಯಲ್ಲಿ ಬಿದ್ದಿರುತ್ತಿದ್ದ. ಬಿಟ್ಟಿ ಕದ್ದು ತಿಂದು, ಹೇಗೋ ಕಾಲ ತಳ್ಳಿಬಿಡುತ್ತಿದ್ದ. ಅವನ ಹೇಡಿತನದಿಂದಾಗಿ ಮನೆಯವರು ಸಂಪಾದಿಸುವ ಹುಡುಗಿಗೆ ಮದುವೆ ಮಾಡಿ ಕಳುಹಿಸುವ ವಿಚಾರವನ್ನೇ ಕೈಬಿಟ್ಟಿದ್ದರು. ಅವಳ ಮದುವೆ ಖಚಿತವಾಗುವವರೆಗೂ ಮನೆಗಂತೂ ಸಂಬಳ ಬರುತ್ತದಲ್ಲ….?

“ನನಗಂತೂ ಎಲ್ಲಾ ವಿಧದಲ್ಲೂ ಯೋಚನೆ ಮಾಡಿ ಸಾಕಾಗಿದೆ,” ಆಶಾ ಎಲ್ಲಾ ಜವಾಬ್ದಾರಿಯನ್ನೂ ನೇತ್ರಾಳಿಗೆ ವರ್ಗಾಯಿಸಿದಂತೆ ಹೇಳಿದಳು,

“ನನಗೆ ಈ ಒಂಟಿ ಜೀವನ ಸಾಕಾಗಿಹೋಗಿದೆ.”

“ಹಾಗಿದ್ದರೆ…. ಒಳ್ಳೆ ಹುಡುಗನನ್ನು ನೋಡಿ ಫ್ರೆಂಡ್‌ಶಿಪ್‌ ಬೆಳೆಸಿಕೊ,” ನೇತ್ರಾ ತಕ್ಷಣ ಹೇಳಿದಳು.

“ಆದರೆ ಯಾರನ್ನು ಫ್ರೆಂಡ್‌ ಮಾಡಿಕೊಳ್ಳಲಿ?”

“ಯಾರ ಬಗ್ಗೆ ನಿನ್ನ ಮನಸ್ಸು ಹರಿಯುವುದೋ…… ಅಂಥವನನ್ನು!”

“ಅವನೂ ಕೇವಲ ಕಾಮಕ್ಕೆ ಬೆಲೆ ಕೊಟ್ಟು ಪ್ರೀತಿ ಪ್ರೇಮ ನಿರ್ಲಕ್ಷಿಸಿದರೆ…..?”

“ಹಾಗಿದ್ದ ಮೇಲೆ….. ನೀನು ಯಾರನ್ನೂ ಪ್ರೀತಿಸುವ ಗೊಡವೆಗೇ ಹೋಗಬೇಡ!” ನೇತ್ರಾ ಗದರಿಸುವಂತೆ ಹೇಳಿದಳು.

“ಅಯ್ಯೋ ಹುಚ್ಚಿ….. ನಿನ್ನಂಥ ಬುದ್ಧಿಗೆಟ್ಟವಳಿಗೆ ಏನು ಹೇಳುವುದು….? ಮೊದಲು ಯಾರ ಜೊತೆಗಾದರೂ ಫ್ರೆಂಡ್‌ಶಿಪ್‌ ಅಂತ ಮಾಡು….. ಅದಾದ ಮೇಲೆ ಆ ವ್ಯಕ್ತಿ ಪ್ರೇಮಕ್ಕೆ ಯೋಗ್ಯನೋ ಅಲ್ಲವೋ ನಿರ್ಧರಿಸಿದರಾಯ್ತು. ಹೀಗೆ ಮುಂದುವರಿಸಿದರೆ ಕೊನೆಗೊಂದು ದಿನ ಮದುವೆ ಅಂತ ಆಗುತ್ತೆ.”

ಇದನ್ನು ಕೇಳಿ ಆಶಾಳ ಮನಸ್ಸು ಚಂಚಲವಾಯ್ತು. ಅವಳ ಮನದ ಪರದೆಯ ಮೇಲೆ ತನಗೆ ಪರಿಚಯವಿದ್ದ ಎಲ್ಲಾ ಹುಡುಗರ ಚಿತ್ರಗಳೂ ತೇಲಿಹೋದವು. ಗೆಳೆಯರಾಗಲು ಬಹಳ ಹುಡುಗರೇನೋ ಇದ್ದರು, ಆದರೆ ಅವರಲ್ಲಿ ಅವಳ ಪಾಲಿನ ಆಪ್ತರು ಬಲು ಕಡಿಮೆ. ಅವಳೀಗ ತನ್ನ ಪ್ರಯತ್ನದಿಂದ ಅವರಲ್ಲಿ ಯಾರಾದರೊಬ್ಬರನ್ನು ತನ್ನ ನಿಕಟವರ್ತಿಯಾಗಿಸಿಕೊಳ್ಳಬೇಕಿತ್ತು. ಈ ಕೆಲಸ ಖಂಡಿತಾ ಸುಲಭದ್ದಲ್ಲ. ಏಕೆಂದರೆ ಎಲ್ಲರಿಗೂ ಅವಳ ಸ್ವಭಾವದ ಪರಿಚಯವಿತ್ತು. ಆದರೆ ಈ ಬಾರಿ ಅವಳು ಅಸಾಧ್ಯವಾದುದನ್ನು ಸಾಧ್ಯ ಮಾಡಿ ತೋರಿಸಲು ಬಯಸಿದ್ದಳು. ನೇತ್ರಾಳ ಸಲಹೆ, ಸೂಚನೆಗಳ ಪ್ರಕಾರ ಅವಳು ಪ್ರೇಮದ ಹಾದಿಯಲ್ಲಿ ಮುಂದುವರಿಯಲು ಬಯಸಿದಳು.

ಶಶಾಂಕ್‌ ಕಾಲೇಜಿನಲ್ಲಿ ಅವಳಿಗಿಂತ 2 ವರ್ಷ ಸೀನಿಯರ್‌ ಆಗಿದ್ದ. ಆತ ಸೈಕಾಲಜಿ ಬೋಧಿಸುತ್ತಿದ್ದ. ಆಶಾ ಎಷ್ಟೋ ಬಾರಿ ಅವನ ಬಗ್ಗೆ ನೆನೆಸಿದ್ದಿದೆ. ಈಗಂತೂ ಅವಳ ಮನಸ್ಸು ಅವನಲ್ಲಿಯೇ ನಾಟಿತ್ತು. ಅವರಿಬ್ಬರ ನಡುವೆ ಔಪಚಾರಿಕತೆ ಮೀರಿದ ಮಾತುಕಥೆ ಎಂದೂ ನಡೆದಿರಲಿಲ್ಲ. ಶಶಾಂಕ್‌ ಶಾಂತ ಪ್ರವೃತ್ತಿಯ ಹಸನ್ಮುಖಿ ಯುವಕನಾದರೆ ಆಶಾ ಮಹಾ ಸಂಕೋಚಪ್ರವೃತ್ತಿಯ ಮಿತಭಾಷಿ. ಇಬ್ಬರ ಸ್ವಭಾವದಲ್ಲಿ ಕಡಿಮೆ ಮಾತನಾಡುವ ಗುಣ ಬಿಟ್ಟರೆ ಹೆಚ್ಚಿನ ಹೊಂದಾಣಿಕೆ ಏನಿರಲಿಲ್ಲ. ಇಬ್ಬರೂ ತಂತಮ್ಮ ಪ್ರಪಂಚದಲ್ಲಿ ಮುಳುಗಿರುತ್ತಿದ್ದ ಪ್ರಾಣಿಗಳಾಗಿದ್ದರು. ಅವರಿಬ್ಬರ ನಡುವೆ ಗಟ್ಟಿ ಗೆಳೆತನವೇ ಮೂಡಿರಲಿಲ್ಲ, ಹಾಗಿರುವಾಗ ಪ್ರೀತಿ ಪ್ರೇಮದ ಮಾತುಗಳಾದರೂ ಹೇಗೆ ಸಾಧ್ಯ? ಇಬ್ಬರೂ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು, ಸ್ಟಾಫ್‌ ರೂಮಿನಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ, ಒಂದಿಷ್ಟು ಮಾತು ಆಡಿದ್ದುಂಟು.

ನೇತ್ರಾ ಅವರಿಬ್ಬರ ನಡುವೆ ಸೇತುವೆಯಾಗಿ ಹೋಗಲು ನಿರ್ಧರಿಸಿದಳು. ಸ್ಟಾಫ್‌ರೂಮಿನಲ್ಲಿ ತಾವು ಮೂವರೇ ಉಳಿಯುವಂತಾದಾಗ, ಅವನ ಎದುರಿಗೆ ಕೂರುತ್ತಿದ್ದ ನೇತ್ರಾ ಹಲವಾರು ಬಗೆಯ ಮಾತುಗಳಿಂದ ಶಶಾಂಕನನ್ನು ಕಟ್ಟಿಹಾಕಲು ಯತ್ನಿಸಿದರೆ, ಆಶಾ ನವ ವಧುವಿನಂತೆ ತಲೆ ತಗ್ಗಿಸಿ ನಾಚಿಕೊಳ್ಳುತ್ತಾ ಕೂರುತ್ತಿದ್ದಳು. ಅವಳು ಸದಾ ಕಂಗಳಲ್ಲಿ ಸುಂದರವಾದ ಹೊಂಗನಸು ಕಾಣುತ್ತಾ, ಒಮ್ಮೊಮ್ಮೆ ಕಣ್ಣಿನ ಓರೆಕೋರೆಯಿಂದ, ಯಾವಾಗಲೋ ಅಪರೂಪಕ್ಕೆ ಒಮ್ಮೆ ಅವನನ್ನು ನೇರವಾಗಿ ನೋಡುತ್ತಾ ತನ್ನದೇ ಭಾವನಾಲೋಕದಲ್ಲಿ ವಿಹರಿಸುವಳು.

ಶಶಾಂಕನಿಗೆ ಆಶಾಳ ಈ ಪರಿಯ ವರ್ತನೆ ಗೊತ್ತಾಗಿಬಿಡುತ್ತಿತ್ತು, ಅವನಿಗೆ ಬಹಳ ಆಶ್ಚರ್ಯವಾಗುತ್ತಿತ್ತು. ಅವನು ನೇತ್ರಾಳ ಜೊತೆ ಹರಟುತ್ತಿದ್ದರೂ, ಗಮನವೆಲ್ಲ ಭಾವ ಬದಲಾಯಿಸುತ್ತಿದ್ದ ಆಶಾಳ ಕಂಗಳಲ್ಲೇ ನೆಟ್ಟಿತ್ತು. ಹಿಂದೆಯೂ ಅವನು ಆಶಾಳನ್ನು ಗಮನಿಸಿದ್ದ, ಆದರೆ ಅವಳೆಂದೂ ಇಷ್ಟು ಚಂಚಲೆ ಆಗಿರಲಿಲ್ಲ….. ಅವನು ಸ್ನೇಹಪೂರ್ವಕವಾಗಿ ಅಲ್ಲದಿದ್ದರೂ, ಅನುಮಾನದ ದೃಷ್ಟಿಯಿಂದ ಅವಳ ಮನದಲ್ಲೇನಿದೆಯೋ ಅರಿಯದೆ ಅವಳನ್ನೇ ದೃಷ್ಟಿಸುತ್ತಿದ್ದ.

ಕೊನೆಗೂ ನೇತ್ರಾ ಈ ಕಸಿವಿಸಿ ಸರಿಪಡಿಸಲೆಂಬಂತೆ, “ಅದಿರಲಿ ಶಶಾಂಕ್‌ ಸಾರ್‌, ಆಶಾಳ ಕಡೆ ನಿಮ್ಮ ವಿಶೇಷ ಗಮನ ಇರುವಂತಿದೆ. ಮಾತು ನನ್ನೊಂದಿಗೆ ಆಡುತ್ತಿದ್ದರೂ ನಿಮ್ಮ ಗಮನವೆಲ್ಲ ಅವಳಲ್ಲೇ ನೆಟ್ಟಿದೆ.”

ಅವನು ತಕ್ಷಣ ಎಚ್ಚೆತ್ತು, “ಛೇ…..ಛೇ….! ಇಲ್ಲ…. ಇಲ್ಲ……. ಹಾಗೇನಿಲ್ಲ……” ಎನ್ನುತ್ತಾ ಕಾರಣವಿಲ್ಲದೆ ತನ್ನ ಮುಂದಿದ್ದ ವಿದ್ಯಾರ್ಥಿಗಳ ನೋಟ್ಸ್ ಪರೀಕ್ಷಿಸುವವನಂತೆ ನಟಿಸತೊಡಗಿದ.

ನೇತ್ರಾ ಅರ್ಥಪೂರ್ಣ ದೃಷ್ಟಿಯಿಂದ ಆಶಾಳ ಕಂಗಳನ್ನು ದಿಟ್ಟಿಸಿದಳು. ಆಶಾ ಸಹ ತನಗೆ ಪ್ರೇಮದ ಖಜಾನೆ ಸಿಕ್ಕಿರುವ ಹಾಗೆ ಕಂಗಳಲ್ಲೇ ನಸುನಕ್ಕಳು.

“ಓ…. ಆಗಲೇ ಊಟದ ಸಮವಾಯ್ತು. ನಡೆಯಿರಿ, ಕ್ಯಾಂಟೀನ್‌ಗೆ ಹೋಗಿ ಏನಾದರೂ ಒಂದಿಷ್ಟು ಕವಳ ಕತ್ತರಿಸೋಣ,” ನೇತ್ರಾ ಸಲಹೆ ನೀಡಿದಳು.

“ಹೂಂ, ನನಗೂ ಬಹಳ ಹಸಿವಾಗಿದೆ,” ಆಶಾ ತಕ್ಷಣ ಪ್ರತಿಕ್ರಿಯಿಸಿದಳು.

ಈ ಪ್ರಸ್ತಾಪದಿಂದಲೂ ಶಶಾಂಕನಿಗೆ ಆಶ್ಚರ್ಯವಾಯ್ತು. ಹೀಗೆ ಒಟ್ಟಾಗಿ ಎಲ್ಲರೂ ಕ್ಯಾಂಟೀನ್‌ಗೆ ಹೋಗುವ ಪ್ರಸಂಗ ಬಂದಿರಲಿಲ್ಲ. ನೇತ್ರಾ ಸಹಜವಾಗಿ ಬೆರೆತು ಮಾತನಾಡುತ್ತಿದ್ದಳು. ಆಶಾ ಸಹ ಕ್ಯಾಂಟೀನ್‌ಗೆ ಬರಲು ಸಿದ್ಧಳಾಗಿ ನಗುಮುಖ ಹೊಂದಿದ್ದಳು. ಇದರಲ್ಲಿ ಏನೋ ವಿಷಯ ಅಡಗಿರುವಂತಿದೆ, ಆದರೆ ಅದೇನೆಂದು ಶಶಾಂಕನಿಗೆ ತಕ್ಷಣ ಅರ್ಥವಾಗಲಿಲ್ಲ.

ತಾನು ಆಹ್ವಾನಿಸುವ ಬದಲು ಈ ಹುಡುಗಿಯರು ತಾವಾಗಿಯೇ ಕ್ಯಾಂಟೀನ್‌ಗೆ ಹೋಗೋಣ ಎಂದು ಪ್ರಸ್ತಾಪವಿರಿಸಿದ್ದೇಕೆ? ಆಶಾ ಇಷ್ಟು ಸಹಜವಾಗಿ ಗಂಡಸರ ಜೊತೆ ಬರಲು ಒಪ್ಪಿದ್ದು ಹೇಗೆ? ಇದರಲ್ಲಿ ಏನೋ ರಹಸ್ಯ ಅಡಗಿರಬೇಕು, ಇಲ್ಲದಿದ್ದರೆ ಇಷ್ಟು ಸುಲಭವಾಗಿ ಈ ಹೆಂಗಸರು ತನ್ನೊಂದಿಗೆ ಊಟಕ್ಕಾಗಿ ಕ್ಯಾಂಟೀನ್‌ಗೆ ಹೊರಡುತ್ತಿರಲಿಲ್ಲ ಎಂದುಕೊಂಡ. ಅದರಲ್ಲೂ ಆಶಾಳಂಥ ಮುಟ್ಟಿದರೆ ಮುನಿಯಂಥ ಹೆಣ್ಣು ಇಷ್ಟು ಸಹಜವಾಗಿ ವರ್ತಿಸಿದ್ದು ಹೇಗೆ?

ಹೀಗೆ ಅವನ ಮನದಲ್ಲಿ ಸಂದೇಹದ ಮೋಡಗಳು ತುಂಬಿರಲು, ಅದನ್ನು ತಿಳಿಯಾಗಿಸಲು ಶಶಾಂಕ್‌ ಅವರೊಂದಿಗೆ ನಿಧಾನವಾಗಿ ಕ್ಯಾಂಟೀನ್‌ ಕಡೆ ಹೆಜ್ಜೆ ಹಾಕುತ್ತಾ, “ಏನೋ ಅಪರೂಪಕ್ಕೆ ಹೇಳ್ತಿದ್ದೀರಿ, ನಡೆಯಿರಿ ಹೋಗೋಣ,” ಎಂದ ಶಶಾಂಕ್‌

“ಆದರೆ….. ಕಾಲೇಜ್‌ ಕ್ಯಾಂಟೀನ್‌ಗೆ ಬೇಡ. ಅಲ್ಲಿ ವಿದ್ಯಾರ್ಥಿಗಳ ದಂಡು ತುಂಬಿರುತ್ತದೆ. ನಮ್ಮ ಇತರ ಸಹೋದ್ಯೋಗಿಗಳೂ ಕಾಣಿಸಬಹುದು, ಅನಗತ್ಯದ ಚರ್ಚೆಗೆ ದಾರಿಯಾಗುತ್ತದೆ. ನಡೆಯಿರಿ, ಇಲ್ಲೇ ಹತ್ತಿರದ ಯಾವುದಾದರೂ ಹೋಟೆಲ್‌ಗೆ ಹೋಗೋಣ,” ಎಂದು ನೇತ್ರಾ ವಾಸ್ತವತೆಯ ಪರಿಚಯ ಮಾಡಿಸಿದಳು.

“ಆದರೆ…. 2 ಗಂಟೆಗೇ ನನಗೆ ಕ್ಲಾಸಿದೆ,” ಶಶಾಂಕ್‌ ಅವರಿಗೆ ನೆನಪಿಸಿದ.

“ನಾವು ಬೇಗನೆ ವಾಪಸ್ಸು ಬಂದುಬಿಡೋಣ. ಹೆವಿಮೀಲ್ಸ್ ಬೇಡ, ಆರ್ಡಿನರಿ ಆದರೆ ಸಾಕು,” ಎಂದಳು ನೇತ್ರಾ.ಮೊದಲ ಬಾರಿಗೆ ಆಶಾ ಶಶಾಂಕ್‌ ಜೊತೆ ಹೀಗೆ ಹೋಟೆಲ್‌ಗೆ ಬಂದಿದ್ದಳು. ಆದರೆ ಇಬ್ಬರ ನಡುವೆ ವಿಶೇಷ ಮಾತುಕಥೆಗಳೇನೂ ಆಗಲಿಲ್ಲ. ನೇತ್ರಾಳೇ ಮೌನಿ ಆಶಾಳೆದುರು ಹೆಚ್ಚು ಮಾತಾಡುವಂತಾಯಿತು. ಊಟದ ಸಮಯದಲ್ಲಿ ಎದುರಿಗಿದ್ದ ಶಶಾಂಕ್‌ನನ್ನು ಅವಳು ಆಗಾಗ ಕದ್ದುಮುಚ್ಚಿ ನೋಡುತ್ತಿದ್ದಳು. ಶಶಾಂಕನ ಮನದಲ್ಲಿ ನಾನಾ ವಿಚಾರಗಳು ಬಂದುಹೋದವು. ಆದರೆ ಅವನು ಅದನ್ನು ಪ್ರಕಟವಾಗಿ ಹೇಳಿಕೊಳ್ಳುವಂತೆ ಇರಲಿಲ್ಲ. ಅವನು ನೇತ್ರಾಳ ವಟಗುಟ್ಟುವಿಕೆ ಹಾಗೂ ಆಶಾಳ ಕದ್ದು ನೋಡುವಿಕೆಯ ಮಧ್ಯೆ ಕಳೆದುಹೋಗಿದ್ದವು.

ಈ ದಿನ ಆಶಾಳಂಥ ಸಂಕೋಚದ ಹುಡುಗಿಗೂ ಶಶಾಂಕನನ್ನು ಮತ್ತೆ ಮತ್ತೆ ಕಣ್ತುಂಬಿ ನೋಡಬೇಕೆನಿಸಿತ್ತು. ಆದರೆ ಅವಳ ನೋಟದ ವಿಶೇಷ ವ್ಯಾಖ್ಯಾನಗಳೇನೆಂದು ಶಶಾಂಕನಿಗೆ ತಿಳಿಯಲಿಲ್ಲ. 2 ಗಂಟೆ ಆಗಿಹೋದೀತೆಂಬ ಆತಂಕದಲ್ಲಿ ಹೇಗೋ ಊಟ ಮುಗಿಸಿ ಬಂದಿದ್ದರು.

ಮುಂದಿನ 2-3 ಭೇಟಿಗಳೂ ನೇತ್ರಾ ಮಧ್ಯಸ್ಥಿಕೆಯಲ್ಲೇ ನಡೆಯಿತು. ಶಶಾಂಕನಿಗೆ ನಿಧಾನವಾಗಿ ವಿಷಯ ಅರ್ಥವಾಗತೊಡಗಿತು, ಆದರೂ ಅವನ ಮನದಲ್ಲಿ ಇನ್ನೂ ಸಂದೇಹಗಳಿದ್ದವು. ಆಶಾಳ ಸಂಕೋಚ ಇನ್ನೂ ಪೂರ್ಣವಾಗಿ ಬಿಟ್ಟುಹೋಗಿರಲಿಲ್ಲ. ಅವರಿಬ್ಬರೂ ತೆರೆದ ಮನಸ್ಸಿನಿಂದ ಇನ್ನೂ ಸಂಭಾಷಣೆಗೆ ಇಳಿದಿರಲೇ ಇಲ್ಲ. ನೇತ್ರಾ ತಾನೇ ಆಶಾಳ ಮನಸ್ಸಿನ ಹೊಯ್ದಾಟವನ್ನು ಶಶಾಂಕನಿಗೆ ತಲುಪಿಸಿ, ಅವನು ಆಶಾಳಲ್ಲೇ ಮನಸ್ಸನ್ನಿಡುವಂತೆ ಮಾಡಲು ಮತ್ತೆ ಮತ್ತೆ ಪ್ರಯತ್ನಿಸಿದಳು.

ಅವರಿಬ್ಬರೂ ಸಂಕೋಚದ ಪರದೆ ಸರಿಸಿ ತಾವೇ ಮುಂದುವರಿಯಲಾರರು ಎಂಬುದು ಅವಳಿಗೆ ಗೊತ್ತಿತ್ತು. ಹೀಗಾಗಿ ಅವಳೇ ಏನಾದರೂ ಮಾಡಬೇಕಿತ್ತು. ಒಂದು ದಿನ ಸ್ಟಾಫ್‌ ರೂಮಿನಲ್ಲಿ ತಾವಿಬ್ಬರೇ ಉಳಿದಾಗ ನೇತ್ರಾ ಕೇಳಿಯೇಬಿಟ್ಟಳು, “ಶಶಾಂಕ್‌, ಪೀಠಿಕೆ ಇಲ್ಲದೆ ನಾನೊಂದು ಪ್ರಶ್ನೆ ನೇರವಾಗಿ ಕೇಳುತ್ತೇನೆ. ಆಶಾ ಕುರಿತು ನಿಮ್ಮ ಮನಸ್ಸಿನಲ್ಲಿ ಯಾವ ಭಾವನೆ ಇದೆ?”

ಅವನು ನಸುನಗುತ್ತಾ ಬೇಕೆಂದೇ ಹೇಳಿದ, “ನಾನಂತೂ ಸದಾ ನಿಮ್ಮನ್ನೇ ನೆನೆಸಿಕೊಳ್ತೀನಿ.”

ನೇತ್ರಾಳಿಗೆ ಆಶ್ಚರ್ಯವಾಗಲಿಲ್ಲ, ಶಾಕ್‌ ತಗುಲಿದಂತೆಯೂ ಆಗಲಿಲ್ಲ. ನಿರ್ವಿಕಾರ ಭಾವದಲ್ಲಿ  ಹೇಳಿದಳು, “ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ. ನಾನು ನಿಮ್ಮ ಕೈಗೆ ಸಿಗುವವಳಲ್ಲ. ಆಶಾಳ ಬಗ್ಗೆ ಯೋಚಿಸಿ ನೋಡಿ. ಅವಳು ನಿಮ್ಮ ಬಗ್ಗೆ ಆಕರ್ಷಣೆ ಬೆಳೆಸಿಕೊಂಡಿದ್ದಾಳೆ. ನಿಮ್ಮ ಕುರಿತು ಏನಾದರೂ ಮಾತನಾಡುತ್ತಾ ಇರುತ್ತಾಳೆ, ತುಂಬಾ ವಿಶ್ವಾಸ ಬೆಳೆಸಿಕೊಂಡು ಹಚ್ಚಿಕೊಂಡುಬಿಟ್ಟಿದ್ದಾಳೆ….”

“ಇರಬಹುದು…. ಆದರೆ…. ಅವಳು ನನಗೆ ಹೆಣ್ಣಿನ ತರಹ ಕಾಣಿಸುವುದೇ ಇಲ್ಲ. ಆಕೆಗೆ ಸ್ತ್ರೀಯೋಚಿತ ಗುಣಗಳೂ ಇಲ್ಲ. ಅವಳೊಂದು ಶುದ್ಧ ಕೊರಡು ಅನ್ಸುತ್ತೆ…”

“ನಿಮ್ಮ ಮನಸ್ಸಿನ ಈ ವ್ಯರ್ಥ ಧೋರಣೆಗಳನ್ನು ಬಿಟ್ಟುಬಿಡಿ. ಅವಳು ನಿಜಕ್ಕೂ ಒಬ್ಬ ಸುಂದರ ಹುಡುಗಿ. ಬಾಹ್ಯಕ್ಕಿಂತಲೂ ಅವಳ ಆಂತರಿಕ ಸೌಂದರ್ಯ ಹಿರಿದು. ನೀವು ಮತ್ತೊಮ್ಮೆ ಪ್ರಯತ್ನಪೂರ್ವಕವಾಗಿ ಅವಳನ್ನು ಗಮನಿಸಿ ನೋಡಿ. ಅವಳ ಶುಷ್ಕ ಸ್ವಭಾವ ಕಂಡು, ಅವಳ ಒಳಮನಸ್ಸು ಭಾವರಹಿತ ಅಂತ ಭಾವಿಸಬೇಡಿ. ಒಣಗಿಹೋದ ಮರಕ್ಕೆ ಉತ್ತಮ ಗೊಬ್ಬರ ಹಾಕಿ ನೀರೆರೆದರೆ ಅದು ಖಂಡಿತಾ ಚಿಗುರುತ್ತದೆ,” ನೇತ್ರಾ ಗಂಭೀರವಾಗಿ ಹೇಳಿದಳು.

ಆದರೆ ಶಶಾಂಕನ ಮನಸ್ಸು ಗೊಂದಲದ ಗೂಡಾಗಿತ್ತು. “ಆಕೆಯ ಮುಖ ಗಮನಿಸಿದರೆ ನನ್ನ ಬಗ್ಗೆ ಪ್ರೀತಿ ಪ್ರೇಮ ಬೆಳೆಸಿಕೊಂಡಿರುವ ಹಾಗೇನೂ ಕಾಣಿಸುವುದಿಲ್ಲ. ಪ್ರೀತಿ ಪ್ರೇಮದ ವಿಷಯದಲ್ಲಿ ಅವಳಿನ್ನೂ ಕಣ್ಣು ಬಿಡುತ್ತಿರುವ ಕೂಸು. ಅವಳಿಗೆ ಪ್ರೀತಿ ಪ್ರೇಮದ ಬಗ್ಗೆ ಏನು ಹೇಳಲಿಕ್ಕೂ ಗೊತ್ತಿಲ್ಲ, ಆದರೆ ಅವಳ ಮನದಲ್ಲಿ ಪ್ರೇಮಸಾಗರವೇ ತುಂಬಿದೆ. ತನ್ನಲ್ಲೇ ತಾನೊಂದು ಕೋಟೆ ಕಟ್ಟಿಕೊಂಡು ಅವಳು ಬಂದಿಯಾಗಿದ್ದಾಳೆ. ಆ ಕೋಟೆ ಒಡೆದುಹಾಕಿ, ಅವಳ ಪ್ರೀತಿ ಹೊರಗೆ ಉಕ್ಕುವಂತೆ ಮಾಡಬೇಕು. ಮುಂದೆ ಆ ಪ್ರೀತಿಯ ಸಾಗರದಲ್ಲಿ ನೀವು ಕೊಚ್ಚಿಹೋಗದಿದ್ದರೆ ಕೇಳಿ…..”

ಪ್ರತಿದಿನ ಇದೇ ತರಹದ ಮಾತುಗಳು ನಡೆಯುತ್ತಿದ್ದವು. ನೇತ್ರಾಳ ಮಾತಿನ ಪ್ರಭಾವಕ್ಕೆ ಒಳಗಾಗಿ, ಅವನು ಆಶಾಳ ಕುರಿತು ಯೋಚಿಸುವಂತಾದ. ಅವಳು ನಿಧಾನವಾಗಿ ಅವನ ಮನಸ್ಸನ್ನು ಆಕ್ರಮಿಸತೊಡಗಿದಳು…. ಹೀಗೆ ಕಾಲಕ್ರಮೇಣ ಆಶಾ ಅವನ ಮನದಾಳದಿಂದ ಒಂದು ಕ್ಷಣ ಬಿಟ್ಟು ಜರುಗದಂತೆ ಆಗಿಹೋದಳು. ಅದೇ ವಿಚಾರವಾಗಿ ಮನಸ್ಸಿನಲ್ಲೇ ಕೊರಗುತ್ತಿದ್ದರೆ ಲಾಭವೇನು? ವಿಷಯ ಮುಂದುವರಿಸಬೇಕಿತ್ತು.

ನೇತ್ರಾಳ ಸಲಹೆಯ ಮೇರೆಗೆ ಶಶಾಂಕ್‌ ಏಕಾಂತದಲ್ಲಿ ಒಂದು ದಿನ ಆಶಾಳಿಗೆ ಪ್ರಪೋಸ್‌ ಮಾಡಿಯೇಬಿಟ್ಟ…..

“ಆಶಾ, ನಿಮ್ಮ ಬಳಿ ನಾನೊಂದು ಮಾತು ಹೇಳಬೇಕಿತ್ತು.”

“ಹೇಳಿ….” ಅವನನ್ನು ಪ್ರೋತ್ಸಾಹಿಸುಂತೆ ನಸುನಗುತ್ತಾ ಹೇಳಿದಳು, ಅವನು ಏನು ಹೇಳಲಿದ್ದಾನೋ ಅವಳಿಗೆ ಅರ್ಥವಾಗಿತ್ತು.

“ಸಂಜೆ ಎಲ್ಲಾದರೂ ಹೊರಗೆ ಹೋಗೋಣವೇ…?” ಅವನು ಸಂಕೋಚದಿಂದ ಹೇಳಿದ.

“ಎಲ್ಲಿಗೆ?”

“ಎಲ್ಲಿಗಾದರೂ ಸರಿ…. ಕ್ಲಾಸ್‌ ಮುಗಿಸಿಕೊಂಡು ಹಾಗೇ ಹೋಗೋಣ. ನಂತರ ನಾನೇ ನಿಮ್ಮನ್ನು ಡ್ರಾಪ್‌ಮಾಡುತ್ತೇನೆ.”

“ಇಂಥದ್ದೇ ಜಾಗ ಅಂತ ಹೇಳಲಿಕ್ಕೆ ನನಗೆ ಗೊತ್ತಾಗೋದಿಲ್ಲ. ನೀವು ಎಲ್ಲಿಗೆ ಕರೆದುಕೊಂಡು ಹೋಗ್ತೀರೋ ನಡೆಯಿರಿ, ಬರ್ತೀನಿ. ಆದರೆ ಒಂದು ಷರತ್ತಿನ ಮೇಲೆ…. ತೀರಾ ಜನನಿಬಿಡ ಪ್ರದೇಶ ಆಗಿರಬಾರದು, ಮತ್ತೆ….. ಮತ್ತೆ…. ಸಿನಿಮಾ ಹೀರೋ ತರಹ ಹಾಗೇ ಹೀಗೆ ವರ್ತಿಸಬಾರದು…..” ತಲೆತಗ್ಗಿಸಿ ನಾಚಿಕೆಯಿಂದ ಹೇಳಿದಳು.

ಇದು ಅವರಿಬ್ಬರ ಮೊದಲ ಏಕಾಂತದ ಭೇಟಿ ಆಗಿತ್ತು. ಅವರಿಬ್ಬರ ನಡುವೆ ಪ್ರೇಮಾಂಕುರ ಆಗುವ ಶುಭ ಘಳಿಗೆಯಲ್ಲಿ ಆಶಾ ಏನೇನೋ ಮಾತನಾಡಿ ಅವನ ಮೂಡ್‌ ಆಫ್‌ ಮಾಡುವುದರಲ್ಲಿದ್ದಳು.

ಶಶಾಂಕನಿಗೆ ಅವಳ ಮಾತು ಕೇಳಿ ಶಾಕ್‌ ತಗುಲಿದಂತಾಯ್ತು. ಇಂಥ ಹುಡುಗಿ ಜೊತೆ ನಿಜಕ್ಕೂ ಪ್ರೀತಿ ಪ್ರೇಮ ಸರಿಹೋದೀತೇ? ಬಹಳ ಕಠಿಣ ಮನಸ್ಕಳು ಅನಿಸಿತು. ಅವನಿಗೆ ತಕ್ಷಣ ನೇತ್ರಾಳ ಮಾತುಗಳನ್ನು ನೆನೆದು ಕೋಪ ಬಂತು. ತಕ್ಷಣ ತನ್ನನ್ನು ತಾನು ಸಂಭಾಳಿಸಿಕೊಂಡ. ಅವನ ತಿಳಿವಳಿಕೆಯ ವ್ಯವಹಾರದಿಂದಲೇ ಏನಾದರೊಂದು ಒಳ್ಳೆಯದು ನಡೆಯಬೇಕಿತ್ತು. ಇಂಥ ಹುಡುಗಿಯ ಬಾಳಲ್ಲೂ ಪ್ರೀತಿ ಪ್ರೇಮದ ಸಿಂಚನ ಆಗ ಮಾತ್ರ ಸಾಧ್ಯವಿತ್ತು. ಇಲ್ಲದಿದ್ದರೆ ಅವಳು ಹೀಗೇ ಜೀವನವಿಡೀ ಕಲ್ಲುಬಂಡೆಯಾಗಿಯೇ ಉಳಿದುಬಿಡುವಳು,

ಶಶಾಂಕ್‌ಗೆ ಈ ಹುಡುಗಿ ಬಗ್ಗೆ ಪ್ರೀತಿಪ್ರೇಮವೇನೂ ಉಕ್ಕಿ ಹರಿದುಬರಲಿಲ್ಲ. ಅವಳ ಕುರಿತಾಗಿ ತನ್ನ ಮನದಾಳದಲ್ಲಿ ನವಿರು ಭಾವನೆಗಳಿರಲಿಲ್ಲ. ನೇತ್ರಾಳ ಸಮಾಧಾನದ ಮಾತುಗಳಿಂದ ಇವಳ ಕುರಿತು ಅವನ ಮನಸ್ಸು ತುಸು ಮೃದುವಾಗಿತ್ತು. ಬಾಹ್ಯ ಸೌಂದರ್ಯ ಇಲ್ಲದ, ಭಾವನೆಗಳನ್ನೇ ವ್ಯಕ್ತಪಡಿಸದ ಈ ಹುಡುಗಿಯಲ್ಲಿ ಓಲೈಸಿ ಮಾತನಾಡುವ ಗುಣವಾಗಲಿ, ತಿಳಿವಳಿಕೆಯ ವ್ಯವಹಾರವಾಗಲಿ…. ಏನೇನೂ ಇರಲಿಲ್ಲ. ಈ ಹುಚ್ಚು ಹುಡುಗಿ ಮೇಲೆ ಕೋಪಿಸಿಕೊಳ್ಳುವುದು ಬೇಡ ಎಂದು ತನ್ನನ್ನು ನಿಗ್ರಹಿಸಿಕೊಳ್ಳುತ್ತಾ, ಇವಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿರ್ಧರಿಸಿದ.

ತನ್ನನ್ನು ತಾನು ಏನೋ ಅಂದುಕೊಂಡಿದ್ದ ಅವಳು ದೊಡ್ಡ ಆದರ್ಶ ಸತಿಯಂತೆ ವ್ಯವಹರಿಸಿದ್ದಳು. ನನ್ನಂಥ ಹುಡುಗನ ಬಳಿ ಬಂದ ಮೇಲೆ, ನನ್ನನ್ನೇ ಮೂರ್ಖನನ್ನಾಗಿ ಮಾಡಬೇಡ ಎಂದು ಮನದಲ್ಲೇ ಬೈದುಕೊಂಡ.

ತುಸು ಕಸಿವಿಸಿ ಎನಿಸಿದರೂ, ಅಂತೂ ಇಬ್ಬರೂ ಹೊರಗೆ ಹೊರಡುವ ನಿರ್ಧಾರ ಮಾಡಿದರು. ಇಬ್ಬರೂ ವಾರದಲ್ಲಿ 2 3 ಸಲ ಕಾಲೇಜಿನಿಂದ ಹೊರಗಡೆ ಸುತ್ತಾಡಲು ಹೊರಡುತ್ತಿದ್ದರು. ಬೇಕೆಂದೇ ದಟ್ಟ ಜನಸಂದಣಿ ಇರುತ್ತಿದ್ದ ಪಾರ್ಕ್‌ನ್ನೇ ಆರಿಸಿ ಶಶಾಂಕ್‌ಅಲ್ಲಿ ಕೂರಬಯಸುತ್ತಿದ್ದ. ಬಸ್ಸು, ಮೆಟ್ರೋ, ಬೈಕ್‌ನಲ್ಲಿ ಅವಳ ಮೈಕೈ ಸೋಕದಷ್ಟು ದೂರದಲ್ಲಿದ್ದುಕೊಂಡು ಮಾತನಾಡುತ್ತಿದ್ದ. ಅವಳ ಸಾನ್ನಿಧ್ಯಕ್ಕಾಗಿ ತಾನು ಹಪಹಪಿಸುತ್ತಿದ್ದೇನೆ ಎಂದು ಅವಳು ಭಾವಿಸಬಾರದು ಎಂಬುದು ಅವನ ಉದ್ದೇಶವಾಗಿತ್ತು.

ಪಾರ್ಕ್‌ ಅಥವಾ ಬೇರೆ ಸ್ಥಳವಿರಲಿ, ಅತಿಯಾದ ಪ್ರೀತಿ ಪ್ರೇಮದ ಮಾತುಗಳನ್ನು ಅವನೆಂದೂ ಆಡುತ್ತಿರಲಿಲ್ಲ. ಅವಳ ಉಡುಗೆ ತೊಡುಗೆ, ಮೇಕಪ್‌, ಸೌಂದರ್ಯದ ಕುರಿತಾಗಿ ಅನೆಂದೂ ಕಮೆಂಟ್‌ ಮಾಡಲಿಲ್ಲ. ತಾನು ಅವಳನ್ನು ಅತಿಯಾಗಿ ಪ್ರೀತಿಸುತ್ತಿದ್ದೇನೆ ಅಥವಾ ಅಳ ಪ್ರೀತಿ ಪಡೆಯಲು ಬಾಯಿ ಬಿಟ್ಟುಕೊಂಡು ಕಾದಿದ್ದೇನೆ ಎಂದು ಅವನು ತೋರಿಸಿಕೊಳ್ಳಲೇ ಇಲ್ಲ. ಅವಳ ಸೌಂದರ್ಯದಿಂದಂತೂ ಖಂಡಿತಾ ಅವನು ಪ್ರಭಾವಿತನಾಗಿರಲಿಲ್ಲ. ಇಬ್ಬರೂ ಹಳೆಯ ಸ್ನೇಹಿತರಂತೆ ಭೇಟಿಯಾಗಿ, ಅದೂ ಇದೂ ಮಾತನಾಡಿ, ಕತ್ತಲೆ ಆವರಿಸುವ ಮುನ್ನಾ ತಮ್ಮ ಮನೆಗಳಿಗೆ ಹೊರಡುತ್ತಿದ್ದರು.

ಹಲವು ತಿಂಗಳು ಕಳೆದಿದ್ದರೂ ಇದುವರೆಗೂ ಒಮ್ಮೆಯೂ ಶಶಾಂಕ್‌ ಅವಳ ಕೈ ಸಹ ಸೋಕಿಸಿಕೊಂಡಿರಲಿಲ್ಲ. ಅವನು ಬೇಕೆಂದೇ ಬಹಳ ಶಿಸ್ತಾಗಿ ಹಾಗೆ ವರ್ತಿಸುತ್ತಿದ್ದಾನೆ ಎಂದು ಆಶಾ ಅರಿತುಕೊಂಡಳು. ಶಶಾಂಕನ ಈ ಪರಿಯ ಉದಾಸೀನ ಭಾವ ಗಮನಿಸಿ ಅವಳಿಗೇ ಮೈ ಪರಚಿಕೊಳ್ಳುವಂತಾಗುತ್ತಿತ್ತು. ಅವನು ಬೇಕೆಂದೇ ತನಗೆ ಇನ್‌ಸಲ್ಚ್ ಮಾಡುತ್ತಿಲ್ಲ ತಾನೇ ಎಂದು ಹಲವು ಸಲ ಯೋಚಿಸಿದಳು. ಆದರೆ ತಾನಾಗಿ ಏನೂ ಹೇಳಲಾರಳು. ಏಕೆಂದರೆ ಆರಂಭದಲ್ಲಿ ಅವಳೇ ಅಂಥ ಷರತ್ತನ್ನು ಒಡ್ಡಿದ್ದಳು. ಅವಳದೇ ತಪ್ಪಾದ್ದರಿಂದ ಈಗ ಅದನ್ನು ಹೇಗೆ ಸುಧಾರಿಸುವುದೋ ತಿಳಿಯದಾಯಿತು. ಈ ರೀತಿಯ ಭೇಟಿಗಳಿಂದಾಗಿ ಇಬ್ಬರೂ ಪ್ರೇಮಮಯ ಪುಳಕದಲ್ಲಿ ಮಿಂದೇಳದೆ, ಮರಳುಗಾಡಿನ ಬಿಸಿಲಲ್ಲಿ ಬೆಂದುಹೋಗುತ್ತಿದ್ದರು. ಶಶಾಂಕನ ಒಡನಾಟದಿಂದಾಗಿ ಅವಳ ಭಾವನೆಗಳಲ್ಲಿ ಎಷ್ಟೋ ಪರಿವರ್ತನೆಯಾಗಿತ್ತು. ಈಗ ಅವಳು ಇಡಿಯಾಗಿ ಶಶಾಂಕನೆಡೆ ಆಕರ್ಷಿತಗೊಂಡಿದ್ದಳು. ಈಗ ಮನಸಾರೆ ಅವನನ್ನು ಪ್ರೇಮಿಸುತ್ತಿದ್ದಳು. ತನಗಾಗಿ ಅವನು ಒಂದಿಷ್ಟು ಪ್ರೀತಿಯ ಮಾತುಗಳನ್ನು ಆಡಬಾರದೇ ಎಂದು ಕಾತರಿಸುತ್ತಿದ್ದಳು.

ಇತ್ತೀಚೆಗೆ ಅವಳು ನೀಟಾಗಿ ಡ್ರೆಸ್‌ ಮಾಡಿಕೊಂಡು, ಅಚ್ಚುಕಟ್ಟಾಗಿ ಮೇಕಪ್‌ ಮಾಡಿಕೊಳ್ಳುತ್ತಿದ್ದಳು. ಮನದಲ್ಲೇ ಅವಳು ಈ ದಿನ ಶಶಾಂಕ್‌ ತನ್ನ ಗೆಟಪ್‌ ನೋಡಿ ಹೊಗಳಬಹುದೆಂದು ಮಂಡಿಗೆ ಮೆಲ್ಲುತ್ತಿದ್ದಳು. ಆದರೆ ಅವನು ಏನನ್ನೂ ಅಂಟಿಸಿಕೊಳ್ಳದ ನಿರ್ಮೋಹಿಯಂತೆ ಸುಮ್ಮನಿದ್ದುಬಿಡುತ್ತಿದ್ದ. ಬೇರೆಯವರ ತರಹ ಯಾವಾಗಲೋ ಒಮ್ಮೊಮ್ಮೆ ಅವಳೆಡೆ ಕಳ್ಳನೋಟ ಬೀರುತ್ತಿದ್ದ, ಆದರೆ ಅವಳ ದೃಷ್ಟಿಗೆ ದೃಷ್ಟಿ ಬೆರೆಸಿ ಮಾತನಾಡುತ್ತಿರಲಿಲ್ಲ.

ಒಂದು ದಿನ ಆಶಾ ಹೇಳಿಯೇಬಿಟ್ಟಳು, “ನಡೆಯಿರಿ, ಎಲ್ಲಾದರೂ ಏಕಾಂತದಲ್ಲಿ ಕುಳಿತು ಮಾತನಾಡೋಣ.’

“ಇಲ್ಲಿ ಏಕಾಂತ ಎಲ್ಲಿಂದ ಬರಬೇಕು?” ಶಶಾಂಕ್‌ ಬೆರಗಾಗಿದ್ದ.

“ಬ್ಯೂಗಲ್ ರಾಕ್‌ಗೆ ಹೋಗೋಣ….. ಅಲ್ಲಿ ಹಾಯಾಗಿ ಏಕಾಂತದಲ್ಲಿ ಕೂರಬಹುದು,” ಆಶಾ ಆಸೆಯಿಂದ ಹೇಳಿದಳು.

“ಅದು ನಿಮಗೆ ಹೇಗೆ ಗೊತ್ತು?” ಶಶಾಂಕ್‌ ಮತ್ತೆ ಕೇಳಿದ.

“ಅದೇ…. ನೇತ್ರಾ ಹೇಳುತ್ತಿದ್ದಳು,” ಅವಳು ಥಟ್ಟನೆ ಹೇಳಿದಾಗ ಶಶಾಂಕ್‌ ಒಪ್ಪಲೇಬೇಕಾಯಿತು.

ಅಂತೂ ಇಬ್ಬರೂ ಹೋಗಿ ಬ್ಯೂಗಲ್ ರಾಕ್‌ನ ಏಕಾಂತದ ಸ್ಥಳದಲ್ಲಿ ಕುಳಿತರು. ಆದರೇನು ಲಾಭ? ಮಧ್ಯೆ ಅಂತರ ಇರುವಂತೆ ಒಂದು ಚಿಕ್ಕ ಬಂಡೆಕಲ್ಲಿನ ಮೇಲೆ ಇಬ್ಬರೂ ಕುಳಿತು ಅದೇ ಹಳೆ ಕಂತೆ ಪುರಾಣ ಮಾತನಾಡಿದರು. ತಾನು ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ ಎಂದು ಆಶಾ ತುಸು ಅವನ ಹತ್ತಿರ ಸರಿದು ಕುಳಿತಳು. ಈಗ ಬೇಕೆಂದೇ ಶಶಾಂಕ್‌ ಇನ್ನಷ್ಟು ದೂರ ಜರುಗಿದ.

ಆಶಾಳಿಗೆ ತುಸು ರೇಗಿತು. ಅವಳು ಅವನತ್ತ ತಿಂದುಬಿಡುವಂಥ ದೃಷ್ಟಿ ಬೀರಿದಳು. ಆದರೆ ಶಶಾಂಕ್‌ ಎಂದಿನಂತೆ ನಿರ್ವಿಕಾರನಾಗಿದ್ದ.

ಆಶಾ ಮತ್ತಷ್ಟು ಅವನತ್ತ ಜರುಗುತ್ತಾ, “ಏನಾದ್ರೂ ಮಾತಾಡಿ….. ಪ್ಲೀಸ್‌…..” ಎಂದಳು.

“ನೀವೇ ಏನಾದ್ರೂ ಹೇಳಿ,” ಶಶಾಂಕನ ನಿರ್ಲಿಪ್ತ ಉತ್ತರ.

ಇಬ್ಬರೂ ಕುಳಿತಲ್ಲೇ ನೋಡಿ, ಸುತ್ತಲಿದ್ದ ಹುಲ್ಲನ್ನು ಕಿತ್ತು ಗುಡ್ಡೆ ಹಾಕತೊಡಗಿದರು.

“ಅಲ್ಲಿ ನೋಡಿ, ಆ ಹೂ ಎಷ್ಟು ಸುಂದರವಾಗಿದೆ!”

“ಸಾಮಾನ್ಯವಾಗಿ ಎಲ್ಲಾ ಹೂಗಳೂ ಸುಂದರವಾಗಿರುತ್ತವೆ,” ತನ್ನ ವಿದ್ಯಾರ್ಥಿಗೆಂಬಂತೆ ಅವನು ಹೇಳಿದ.

ಆಶಾಳ ಹೃದಯದ ಮೇಲೆ ಯಾರೋ ಮಂಜುಗಡ್ಡೆ ಸುರಿದಂತಾಯಿತು. ಅವಳು ಒಳಗೇ ಮುದುಡಿಹೋದಳು. ಇಂಥ ವ್ಯಕ್ತಿಯನ್ನು ತಾನು ತನ್ನ ಸಂಗಾತಿಯಾಗಿ ಆರಿಸಿಕೊಳ್ಳಬಯಸಿದೆನೇ? ಇದನ್ನೇ ಪ್ರೀತಿ ಪ್ರೇಮ ಅನ್ನುತ್ತಾರಾ? ಅವಳು ಅಂದುಕೊಂಡಂತೆ ಪ್ರೀತಿ ಪ್ರೇಮದ ಚಮತ್ಕಾರ ಏನೂ ನಡೆಯಲಿಲ್ಲ. ತಾನು ಇತರ ಹುಡುಗಿಯರ ಬಳಿ ಕೇಳಿ ತಿಳಿದ ಹಾಗೆ ಹುಡುಗ ಹುಡುಗಿಯರ ನಡುವಿನ ಮಧುರ ಬಾಂಧವ್ಯವೇನೂ ಇಲ್ಲಿ ಕಾಣುತ್ತಿರಲಿಲ್ಲ. ಶಶಾಂಕ್‌ ಹಾಗೇನೂ ನಡೆದುಕೊಳ್ಳದ ಕಾರಣ, ಎಲ್ಲಾ ಹುಡುಗರೂ ಕಾಮಾತುರರಾಗಿರುವುದಿಲ್ಲ, ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಬೆಲೆ ಕೊಡುವುದಿಲ್ಲ ಎಂದು ಅರಿತಳು. ಶಶಾಂಕ್‌ ಎಂದೂ ಮರುಳು ಮಾಡುವ ಮಾತುಗಳಾಡಿರಲಿಲ್ಲ.

ಅದೇ ತರಹ ತಾನೂ ಸಹ ಶಶಾಂಕನಿಗೆ ಎಂದೂ ಅಂಥ ಪ್ರಮಾಣದ ಮಾತುಗಳಾಡಿರಲಿಲ್ಲ. ಸೀಮಾರೇಖೆ ದಾಟಿ ಹೆಚ್ಚಿನ ಆತ್ಮೀಯತೆ ತೋರಿರಲಿಲ್ಲ. ಅಂದರೆ ತನ್ನ ಕಡೆಯಿಂದಲೂ ತಪ್ಪಿದೆಯಲ್ಲವೇ….? ತಾನೇ ಅವನನ್ನು ಪ್ರೀತಿಯಿಂದ ಓಲೈಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ಅದೆಲ್ಲ ಸಾಧ್ಯ….. ಆದರೆ ನಾಚಿಕೆ, ಸಂಕೋಚದ ಮುದ್ದೆಯಾದ ಅವಳು ಅದನ್ನು ತೋರ್ಪಡಿಸಿಕೊಂಡಿರಲಿಲ್ಲ.

ಶಶಾಂಕ್‌ ತನ್ನ ಸಹವಾಸದಿಂದಲೇ ದಿನದಿನಕ್ಕೆ ತನ್ನಲ್ಲೇ ಮುದುಡಿಕೊಳ್ಳುತ್ತಾ, ಕೇವಲ ಔಪಚಾರಿಕತೆಯ ಮಾತುಕಥೆಗಷ್ಟೇ ತಮ್ಮ ಸ್ನೇಹವನ್ನು ಸೀಮಿತಗೊಳಿಸಿಬಿಡುವನೇ? ಹೀಗಾಗಿ ತಾನೇ ಈಗ ಈ ನಿಟ್ಟಿನಲ್ಲಿ ಮುಂದುವರಿಯ ಬಯಸಿದಳು.

ಅಕಸ್ಮಾತ್‌ ಇವಳು ಅವನ ಕೈ ತಗುಲಿಸಿದರೆ, ಅವನು ತಕ್ಷಣ `ಸಾರಿ’ ಎಂದು ಸರಕ್ಕನೆ ಕೈ ಹಿಂದಕ್ಕೆ ಎಳೆದುಕೊಳ್ಳುತ್ತಿದ್ದ. ಅವನ ಸಣ್ಣಪುಟ್ಟ ಮಾತಿಗೂ ಇವಳು ಮನಸಾರೆ ನಕ್ಕು ಪ್ರೋತ್ಸಾಹಿಸಿದರೆ, ಶಶಾಂಕ್‌ ಅವಳನ್ನೇ ಕಣ್ಣು ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದ. ಹೀಗೆ ಈ ವ್ಯವಹಾರ ಮುಂದುವರಿದಿತ್ತು.

ಮುಂದೆ ಆಶಾ ತಾನೇ ಬಹಳ ಹೊತ್ತು ಏಕಾಂತದಲ್ಲಿ ಕೂರೋಣವೆಂದು ಹಠ ಮಾಡುತ್ತಿದ್ದಳು. ಆದರೆ ಶಶಾಂಕ್‌ ತಡವಾಯಿತೆಂದು ಮನೆಗೆ ಹೊರಡಲು ಏಳುತ್ತಿದ್ದ. ಕತ್ತಲಾಯ್ತು, ಇನ್ನೂ ತಡ ಮಾಡಬಾರದು ಎಂದು ಅವನು ಹೇಳಿದರೆ ವಿಧಿಯಿಲ್ಲದೆ ಅವಳೂ ಏಳಬೇಕಾಗುತ್ತಿತ್ತು. ಅಂತೂ ಇಬ್ಬರ ನಡುವೆ ಪ್ರೀತಿ ಪ್ರೇಮ ಎಂದು ಹೆಸರಿಸಬಹುದಾದ ಯಾವ ವ್ಯವಹಾರ ಇರಲಿಲ್ಲ.

ಈ ವಿಷಯವನ್ನು ಆಶಾ ನೇತ್ರಾಳಿಗೆ ತಿಳಿಸಿ, ಶಶಾಂಕನದು ಅತಿ ನಿಷ್ಠೂರ ವ್ಯವಹಾರ ಎಂದಳು. ಅವಳಿಗೆ ಮೊದಲು ಆಶ್ಚರ್ಯವಾದರೂ, ಶಶಾಂಕ್‌ ಹಾಗೇಕೆ ಮಾಡುತ್ತಿದ್ದಾನೆಂದು ಅವಳಿಗೆ ಅರ್ಥವಾಯಿತು.

ಮಾರನೇ ದಿನ ಆಶಾ ಅಚ್ಚುಕಟ್ಟಾಗಿ ಅಲಂಕರಿಸಿಕೊಂಡಳು. ಗುಲಾಬಿ ಸೀರೆಯಲ್ಲಿ ಅವಳು ನಿಜಕ್ಕೂ ಚೆನ್ನಾಗಿ ಮಿಂಚುತ್ತಿದ್ದಳು. ಹೇಗಾದರೂ ಈ ದಿನ ಶಶಾಂಕನ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳಲೇಬೇಕು ಎಂದು ನಿರ್ಧರಿಸಿದ್ದಳು. ಅವಳು ನೋಡ ನೋಡುತ್ತಿದ್ದಂತೆ ಕಣ್ಣ ಮುಂದೆಯೇ ಶಶಾಂಕನನ್ನು ಕಳೆದುಕೊಳ್ಳುತ್ತೀನೇನೋ ಎಂಬ ಭಾವ ಆರಿಸಿತ್ತು. ತಾನು ಅವನನ್ನು ಪ್ರೀತಿಸದಿದ್ದರೆ, ಜಗತ್ತಿನಲ್ಲಿ ಬೇರಾರನ್ನೂ ಆ ದೃಷ್ಟಿಯಲ್ಲಿ ನೋಡಲಾರೆ ಎನಿಸಿತು.

ಆ ಸಂಜೆ ಅವರು ಹಲಸೂರಿನ ಕೆರೆ ದಂಡೆಗೆ ಬಂದಿದ್ದರು. ಒಂದು ರೌಂಡ್‌ ಬೋಟಿನಲ್ಲಿ ಹೋಗಿಬರೋಣ ಎನಿಸಿತು. ಬೋಟ್‌ನಲ್ಲಿ ಅವರು ಅಕ್ಕಪಕ್ಕದ ಬದಲು ಎದುರುಬದುರು ಕುಳಿತರು. ಇಂದು ಅವಳು ಅವನ ಕಣ್ಣಿಗೆ ಬಹು ಸುಂದರವಾಗಿ ಕಾಣಿಸುತ್ತಿದ್ದಳು.

ದೋಣಿ ಮುಂದೆ ಸಾಗಿದಂತೆ ಏಕಾಂತದ, ಮಾದಕ ಪರಿಸರ ಇಬ್ಬರಲ್ಲೂ ಹೊಸ ರೊಮ್ಯಾಂಟಿಕ್‌ ಮೂಡ್‌ ತರಿಸಿತ್ತು.

ಒಮ್ಮೆ ದೋಣಿ ತುಸು ವಾಲಿದಾಗ, ಅವಳು ಅನಿವಾರ್ಯವಾಗಿ ಅವನ ಹೆಗಲ ಮೇಲೆ ಕೈಯಿರಿಸಿ, ಬೀಳುವುದರಿಂದ ತಪ್ಪಿಸಿಕೊಳ್ಳಬೇಕಾಯಿತು.

“ನಾನು ಬಹಳ ಕೆಟ್ಟ ಹುಡುಗಿ ಅಲ್ಲವೇ?”

“ಅದ್ಯಾಕೆ ಹಾಗೆ ಹೇಳಿದಿರಿ?”

“ನನ್ನ ಹೃದಯದಲ್ಲಿ ಭಾವನೆಗಳೇ ಇಲ್ಲವೆಂದುಕೊಂಡಿದ್ದೀರೇನೋ….” ಅವಳ ಸ್ವರದಲ್ಲಿ ಭಾವುಕತೆ ಇತ್ತು.

ಶಶಾಂಕ್‌ ಇದರಿಂದ ಕಕ್ಕಾಬಿಕ್ಕಿಯಾಗಿದ್ದ. ಏನು ಹೇಳುವುದೋ ತಿಳಿಯದೆ ಕಸಿವಿಸಿಕೊಂಡ. ಇಂದಿನ ಅವಳ ಗೆಟಪ್‌ ಅವನಲ್ಲೂ  ಪ್ರಣಯಾಂಕುರ ಮೂಡಿಸಿ, ಮುಂದುವರಿಯುವಂತೆ ಪ್ರೇರೇಪಿಸಿತ್ತು. ಅವನು ಏನೂ ಉತ್ತರಿಸದೆ ಅವಳನ್ನೇ ನೋಡುತ್ತಾ ಇದ್ದುಬಿಟ್ಟ.

“ನೀವು ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದೀರಿ ಅನ್ಸುತ್ತೆ….”

“ಇಲ್ಲವಲ್ಲ…. ಎಂಥ ಸೇಡು?”

“ನೀವು ಇಷ್ಟು ಮುಗ್ಧರಾಗುವ ಅಗತ್ಯವಿಲ್ಲ. ಮೊದಲ ಭೇಟಿಯಲ್ಲೇ ನಿಮ್ಮನ್ನು ದೂರ ಇರಿಸುವ ಮಾತನಾಡಿ ನಾನು ನಿಮ್ಮ  ಮನಸ್ಸಿಗೆ ಬೇಸರ ಮಾಡಿದೆ. ಅದಕ್ಕೆ ನೀವು ಸದಾ ನನ್ನಿಂದ ದೂರದೂರವೇ ಉಳಿದುಬಿಟ್ಟಿರಿ….” ಮಾತು ಮುಗಿಯುವಷ್ಟರಲ್ಲಿ ಅವಳು ಬಿಕ್ಕಳಿಸಿದ್ದಳು.

ಶಶಾಂಕ್‌ ಏನೂ ಉತ್ತರಿಸಲಾಗದೆ ಅಸಹಾಯಕತೆಯಿಂದ ಅವಳ ಕಡೆ ನೋಡುತ್ತಿದ್ದ.

“ನನ್ನ ಮೂರ್ಖತನದಿಂದ ಬೇಸತ್ತು ಇವಳಿಗೆ ಪಾಠ ಕಲಿಸೋಣವೆದು ನೀವು ಹೀಗೆ ದೂರ ಉಳಿದಿರಬಹುದು. ಹುಡುಗಿ ಹುಡುಗನನ್ನು ಕಂಡು ಹೊರಗಿನಿಂದ `ಬೇಡ’ ಎಂದರೆ ಅವಳು ಮನಸ್ಸಿನಿಂದ `ಬೇಕು’ ಎನ್ನುತ್ತಿದ್ದಾಳೆ  ಎಂದು ನಿಮಗೆ ಗೊತ್ತಿಲ್ಲವೇ? ಪ್ರೀತಿ ಪ್ರೇಮದ ಆರಾಧಕರು ಈ ಮಾತನ್ನು ಚೆನ್ನಾಗಿ ಅರಿತಿರುತ್ತಾರೆ…. ನೀವು ನನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲೇ ಇಲ್ಲವೇ….?”

ಆಗ ನಸುಗತ್ತಲೇ ಆವರಿಸತೊಡಗಿತು. ಸುತ್ತಮುತ್ತಲಿನ ವಿದ್ಯುದ್ದೀಪಗಳ ಕಾಂತಿ ದೋಣಿ ಮೇಲೆ ಪ್ರತಿಫಲಿಸತೊಡಗಿತು.

ಆಗ ಅವಳು ಶಶಾಂಕನ ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳುತ್ತಾ, “ಇವತ್ತು ನೀವು ನನ್ನ ಒಳಗಣ್ಣು ತೆರೆಸಿದ್ದೀರಿ. ನಾನು ಮನಸಾರೆ ಹೇಳುತ್ತಿದ್ದೇನೆ, ನಾನು…. ನಿಮ್ಮನ್ನೇ ಪ್ರೀತಿಸುತ್ತೇನೆ….. ನೀವು ನನ್ನನ್ನು ನಿಮ್ಮವಳು ಎಂದು ಭಾವಿಸದಿದ್ದರೆ…. ಬಹುಶಃ ನಾನು ಬದುಕುಳಿಯಲಾರೆ….” ಎನ್ನುವಷ್ಟರಲ್ಲಿ ಅವಳನ್ನು ಮೀರಿ ಕಣ್ಣೀರು ಉಕ್ಕಿತು, ಕಂಠ ತುಂಬಿಬಂದಿತ್ತು.

“ಶಶಾಂಕ್‌…. ಇನ್ನೂ ನಿಮಗೆ ನನ್ನ ಪ್ರೀತಿಯ ಭಾಷೆ ಅರ್ಥವಾಗಲಿಲ್ಲವೇ? ನಿಮ್ಮ ಕಣ್ಣಲ್ಲಿಯೂ ಇದೇ ತರಹದ ಪ್ರೀತಿ ತುಂಬಿರುವುದನ್ನು ಮೊದಲ ದಿನ ಗಮನಿಸಿಯೇ ನಾನು ಇಷ್ಟು ಮುಂದುವರಿದದ್ದು….. ದಯವಿಟ್ಟು ಇನ್ನು ಈ ಅತಿ ಆದರ್ಶದ ಮುಖವಾಡ ಕಳಚಿಬಿಡಿ. ನನ್ನನ್ನು ನಿಮ್ಮವಳೆಂದು ಭಾವಿಸಿ ನಿಮ್ಮ ಮನದ ಅಭಿಪ್ರಾಯ ತಿಳಿಸಿ….” ಎಂದು ಅವನ ಕೈಗಳನ್ನು ತನ್ನ ಕಣ್ಣಿಗೊತ್ತಿಕೊಂಡಳು. ಅದು ಕಣ್ಣೀರ ಹನಿಗಳಿಂದ ತೊಯ್ದುಹೋಯಿತು.

ಈಗ ಶಶಾಂಕ್‌ ನಿಜಕ್ಕೂ ಕರಗಿಹೋಗಿದ್ದ. ಅವನು ಎಷ್ಟು ದಿನ ತಾನೇ ತನ್ನ ಮನದಲ್ಲಿದ್ದ ಅನುರಾಗವನ್ನು ಮರೆಸಲು ಸಾಧ್ಯ?

“ಸಾಕು…. ಸಾಕು…. ಆಶಾ, ನೀನಾಗಿ ನಿನ್ನ ಅತಿ ಆದರ್ಶದ ಪರದೆಯಿಂದ ಹೊರಬರಲಿ ಎಂದು ಕಾಯುತ್ತಿದ್ದೆ. ಇಷ್ಟು ದಿನಗಳ ವ್ಯವಹಾರದ ಮೇಲಾದರೂ ನಾನು ಸಭ್ಯಸ್ಥ, ನನ್ನೊಂದಿಗೆ ಪ್ರೀತಿ ಪ್ರೇಮ ಹಂಚಿಕೊಳ್ಳಬಹುದು ಎಂದು ಗೊತ್ತಾಯ್ತು ತಾನೇ? ನನಗೆ ನಿನ್ನ ಮೇಲೆ ದ್ವೇಷ ಇದ್ದಿದ್ದರೆ ಪ್ರತಿದಿನದ ಭೇಟಿಗೆ ಬರುತ್ತಲೇ ಇರಲಿಲ್ಲ. ಆ ದಿನವೇ ನಾನು ನಿನಗೆ ಮನಸೋತಿದ್ದೆ….” ಎನ್ನುತ್ತಾ ಅವಳನ್ನು ತನ್ನ ಎದೆಗೊರಗಿಸಿಕೊಳ್ಳುತ್ತಾ, ಅವಳ ಬೆನ್ನ ಮೇಲೆ ಕೈಯಾಡಿಸಿ ಸಮಾಧಾನಪಡಿಸಿದ ಶಶಾಂಕ್‌.

ಅವಳು ಆನಂದಬಾಷ್ಪದಿಂದ ಅವನ ಎದೆ ತೊಯ್ಸಿದಳು. “ಮತ್ತೆ…. ನಿನ್ನನ್ನು ಮದುವೆ ಮಾಡಿಕೊಡಿ ಎಂದು ಕೇಳಲು ನಿಮ್ಮ ಮನೆಗೆ ಯಾವಾಗ ಬರಲಿ….?”

“ಇಂದೇ…. ಈಗಲೇ!” ಅವಳು ತೃಪ್ತಿಯಿಂದ ಉತ್ತರಿಸಿದಳು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ