‘ಮಹಾನಟಿ’ ಖ್ಯಾತಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರನ್ನು ಯುನಿಸೆಫ್​ ಇಂಡಿಯಾದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನೇಮಕ ಮಾಡಲಾಗಿದೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಂಸ್ಥೆ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ಕೀರ್ತಿ ಅವರು, ದುರ್ಬಲ ಮಕ್ಕಳಿಗಾಗಿ ಯುನಿಸೆಫ್​ನ ಪ್ರಯತ್ನಗಳನ್ನು ಬೆಂಬಲಿಸುವ ಗಣ್ಯ ವ್ಯಕ್ತಿಗಳ ವಿಶೇಷ ಗುಂಪು ಸೇರಿದ್ದಾರೆ ಎಂದು ತಿಳಿಸಿದೆ.

ಮಾನಸಿಕ ಆರೋಗ್ಯ, ಶಿಕ್ಷಣ ಮತ್ತು ಲಿಂಗ ಸಮಾನತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

 

ಕೀರ್ತಿ ಸುರೇಶ್ ಅವರನ್ನು ನಮ್ಮ ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಪಾಲುದಾರಿಕೆ ಮಾಡಿಕೊಳ್ಳಲು ಸಂತೋಷವಾಗುತ್ತಿದೆ. ಸಿನಿಮಾಗಳ ಮೂಲಕ ಅವರು ಪ್ರೇಕ್ಷಕರ ಮೇಲೆ ಬೀರಿರುವ ಪ್ರಭಾವವು, ಮಕ್ಕಳ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ವಕಾಲತ್ತು ವಹಿಸಲು ಪ್ರಬಲ ಮತ್ತು ಸ್ಪೂರ್ತಿದಾಯಕ ವೇದಿಯಾಗಲಿದೆ ಎಂದು ಯುನಿಸೆಫ್​ ಇಂಡಿಯಾ ಪ್ರತಿನಿಧಿ ಸಿಂಥಿಯಾ ಮೆಕ್‌ಕ್ಯಾಫ್ರಿ ಹೇಳಿದ್ದಾರೆ.ತಮ್ಮನ್ನು ದುರ್ಬಲ ಮಕ್ಕಳ ಹಕ್ಕುಗಳ ಹೋರಾಟದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ನೇಮಿಸಿದ್ದಕ್ಕೆ ನಟಿ ಕೀರ್ತಿ ಸುರೇಶ್​ ಅವರು ಸಂತಸ ಮತ್ತು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಜವಾಬ್ದಾರಿ ವಹಿಸಿಕೊಳ್ಳಲು ತಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

“ಮಕ್ಕಳು ನಮ್ಮ ದೊಡ್ಡ ಜವಾಬ್ದಾರಿ ಮತ್ತು ಭರವಸೆ. ಪೋಷಣೆ, ಪ್ರೀತಿಯ ಆರೈಕೆಯು ಅವರು ಸಂತೋಷ, ಆರೋಗ್ಯಕರ ಮತ್ತು ತೃಪ್ತಿಕರ ಜೀವನ ನಡೆಸಲು ಅಗತ್ಯವಿರುವ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅಡಿಪಾಯ. ಮಗುವಿನ ಹಿನ್ನೆಲೆ ಅಥವಾ ಸಾಮರ್ಥ್ಯ ಲೆಕ್ಕಿಸದೆ ಎಲ್ಲರೂ ಅಭಿವೃದ್ಧಿ ಹೊಂದುವಂತೆ ಜಾಗೃತಿ ಮೂಡಿಸುತ್ತಿರುವ ಮತ್ತು ಪ್ರೇರೇಪಿಸುತ್ತಿರುವ ಯುನಿಸೆಫ್ ಇಂಡಿಯಾದೊಂದಿಗೆ ಕೈಜೋಡಿಸಲು ನಾನು ಹರ್ಷಿಸುತ್ತೇನೆ” ಎಂದು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ