ಬಹಳ ಅದೃಷ್ಟವಂತರು ನೀವು ನಾವಿಲ್ಲಿ ಕಣ್ಣು ಬಿಟ್ಕೊಂಡು ಕಾಯ್ತಿದ್ದೀವಿ. ಆದರೆ ಕಳ್ಳರ ದೃಷ್ಟಿ ನಮ್ಮ ಮೇಲಿನ್ನೂ ಬಿದ್ದಿಲ್ಲ.

ಒಮ್ಮೆ ಹೀಗಾಯಿತು. ನಮ್ಮ ಅಕ್ಕಪಕ್ಕದ ಮನೆಗಳಲ್ಲಿ ಕಳ್ಳತನಗಳಾದವು. ಕಳ್ಳತನಗಳು ಯಾವುದೇ ಯೋಜನಾಬದ್ಧ ರೀತಿಯಲ್ಲಿ ನಡೆದಿದ್ದರೆ ಯಾರಿಗೂ ಆಶ್ಚರ್ಯವಾಗುತ್ತಿರಲಿಲ್ಲ. ಆದರೆ ಕಳ್ಳರು ಎಂತಹ ಪೆದ್ದರೆಂದರೆ, ಒಂದು ದಿನ ಒಬ್ಬರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರೆ ಮೂರನೆಯ ದಿನ ಅದೇ ಮನೆಗೆ ಕನ್ನ ಹಾಕಲು ಹೋಗುತ್ತಿದ್ದರು. ಅದರಿಂದಾಗಿ ಅವರೇ 2 ದಿನಗಳ ಹಿಂದೆ ರದ್ದಿಯೆಂದು ಬಿಟ್ಟುಹೋಗಿದ್ದ ಅಮೂಲ್ಯ ವಸ್ತುಗಳು ಸಿಗುತ್ತಿದ್ದವು. ಉದಾಹರಣೆಗೆ ಪ್ರಸಿದ್ಧ ಲೇಖಕರ ಕೃತಿಗಳು.

ನಮ್ಮ ಏರಿಯಾದ ಒಬ್ಬ ಮಹಾನುಭಾವರು ಎಚ್ಚರಿಕೆ ವಹಿಸಿ ತಮ್ಮ ಮನೆಯ ಗೇಟಿಗೆ ಒಂದು ರಟ್ಟಿನಲ್ಲಿ ಹೀಗೆ ಬರೆದು ಸಿಕ್ಕಿಸಿದ್ದರು, “ಈ ಮನೆಯಲ್ಲಿ ಒಂದು ಬಾರಿ ಕಳ್ಳತನ ಆಗಿದೆ. ದಯವಿಟ್ಟು ಇನ್ನು ಬೇರೆ ಯಾವುದಾದರೂ ಮನೆ ನೋಡಿಕೊಳ್ಳಿ. ಈ ಏರಿಯಾದಲ್ಲಿ ಇನ್ನೂ ಬಹಳಷ್ಟು ಉಳ್ಳವರ ಮನೆಗಳಿವೆ.”

ನಾನು ಆ ಬಗ್ಗೆ ವಿಚಾರಿಸಿದಾಗ ಅವರು ಹೀಗೆ ಹೇಳಿದರು, “ಈಗೀಗ ಕಳ್ಳರೂ ಕಳ್ಳತನದ ಡೆಮಾಕ್ರಸಿ ಅರ್ಥ ಮಾಡಿಕೊಂಡಿದ್ದಾರೆ. ಬಾಗಿಲನ್ನು ತಟ್ಟದೆ ತಮ್ಮ ಕೆಲಸ ಮಾಡುತ್ತಿದ್ದಾರೆ.” ಆಗ ನನ್ನ ಏಕಮಾತ್ರ ಅದ್ವಿತೀಯ ಹೆಂಡತಿ ಹಣೆಗೆ, ಗಲ್ಲಕ್ಕೆ ಹೊಡೆದುಕೊಂಡು ಹೇಳಿದಳು, “ಛೆ, ಈ ಮನೆಗೆ ಬಂದು ನನ್ನ ಭಾಗ್ಯವೇ ಬರಡಾಗಿ ಹೋಯ್ತು. ಯಾಕಾದರೂ ಈ ಮನೆಗೆ ಬಂದೆನೋ?”

ನಾನು ಹೇಳಿದೆ, “ಬಿಡೆ, ಇದಂತೂ ಹೆಂಡತಿಯರು ಶತಮಾನಗಳಿಂದ ಹೇಳಿಕೊಂಡು ಬಂದಿರೋ ಹಳೆ ಡೈಲಾಗ್‌. ನೀನಂತೂ ಯಾವಾಗಲೂ ಇದನ್ನು ಗೊಣಗ್ತಾನೇ ಇರ್ತೀಯ.”

“ರೀ ನಾನು ನಿಮ್ಮ  ಹೆಂಡ್ತಿ. ನನ್ನ ಆಸೆ ಎಲ್ಲಿ ಪೂರೈಸ್ತೀರಿ? ನೀವಂತೂ ಯಾವಾಗಲೂ ನನ್ನನ್ನು ತಮಾಷೆ ಮಾಡ್ತಾನೇ ಇರ್ತೀರಿ,” ಅವಳೆಂದಳು.

“ಹೂಂ, ತಮಾಷೆ ಏನು ಮಾಡೋದು? ಅದೂ ಮದುವೆ ಆದಮೇಲೆ! ಆಯ್ತು. ಅಪ್ಪಣೆಯಾಗಲಿ.”

“ಏನು ಅಪ್ಪಣೆಯಾಗಲಿ? ಎಲ್ಲ ಮನೆಗಳಲ್ಲೂ ಕಳ್ಳತನಗಳು ಆಗುತ್ತಿವೆ. ಆದರೆ ನಮ್ಮ ದುರದೃಷ್ಟ ನೋಡಿ. ಒಬ್ಬ ಕಳ್ಳನೂ ಬರ್ತಿಲ್ಲ.”

ಆಗ ನಾನು ಹೇಳಿದೆ, “ಅಲ್ಲಾ ಕಣೆ, ನೀನು ಈ ಮನೇಲಿ ಇರೋವಾಗ  ಇನ್ನು ಬೇರೆ ಕಳ್ಳರ ಅಗತ್ಯವಾದರೂ ಏನಿದೆ?”

ನನ್ನ ಜೇಬಿನಲ್ಲಿದ್ದ ದುಡ್ಡನ್ನು ನನ್ನ ಹೆಂಡತಿ ತನ್ನ ಖಾತೆಗೆ ಆಗಾಗ ವರ್ಗಾಯಿಸಿ ಕೊಳ್ಳುತ್ತಿರುತ್ತಾಳೆ. ಏಕೆಂದರೆ ಮದುವೆಯಲ್ಲಿ ಪವಿತ್ರ ಅಗ್ನಿಯ ಮುಂದೆ ಸಪ್ತಪದಿ ಹಾಕುತ್ತಿದ್ದಾಗ ನಾವಿಬ್ಬರೂ ಪರಸ್ಪರರ ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತೇವೆಂದು ಪ್ರತಿಜ್ಞೆ ಮಾಡಿದ್ದೆ.

ಆ ಪ್ರತಿಜ್ಞೆಯನ್ನು ನಾವಿಬ್ಬರೂ ಸರಿಯಾಗಿ ನಿರ್ವಹಿಸುತ್ತಿದ್ದೆ. ವ್ಯತ್ಯಾಸ ಏನೆಂದರೆ ಅವಳು ದುಃಖ ಕೊಡುತ್ತಿರುತ್ತಾಳೆ. ಸುಖ ಕೊಡುವ ಕರ್ತವ್ಯ ನನ್ನದಾಗಿದೆ. ಆದರೆ ನಾನು ಮನೆಯ ಈ ಕಳ್ಳ ಸಂಗಾತಿಯ ಬಗ್ಗೆ ಏನೂ ಮಾತಾಡುವಂತಿಲ್ಲ. ಏಕೆಂದರೆ ಗೃಹಸ್ಥ ಜೀವನ ಒಂದು ರೀತಿಯಲ್ಲಿ ಚದುರಂಗವಿದ್ದಂತೆ. ಈ ಚದುರಂಗದಲ್ಲಿ ಸೋಲು ಯಾವಾಗಲೂ ಪತಿಯದ್ದೇ ಆಗಿರುತ್ತದೆ. ನಾನು ಅವಳಿಗೆ ಹೀಗೆ ಹೇಳಿದೆ, “ಪ್ರಿಯೆ, ಕಳ್ಳನನ್ನು ವ್ಯವಸ್ಥೆ ಮಾಡುವುದು ನನಗೆ ಚಿಟಿಕೆ ಹೊಡೆದಂತೆ, ನಾನು ಸಮಾಜದಲ್ಲಿ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಈಗಲೇ ಪೊಲೀಸ್‌ ಸ್ಟೇಷನ್‌ಗೆ ಫೋನ್‌ ಮಾಡಿದರೆ ಅರ್ಧ ಗಂಟೆಯಲ್ಲಿ 5-6 ಕಳ್ಳರು ಬಂದುಬಿಡ್ತಾರೆ. ಅಲ್ಲಂತೂ ಕಳ್ಳರ ದೊಡ್ಡ ಗ್ಯಾಂಗ್‌ ಇರುತ್ತೆ.”

ನನ್ನ ಈ ವೀರೋಚಿತ ಘೋಷಣೆ ಕೇಳಿ ನನ್ನಾಕೆ 25 ವರ್ಷಗಳ ನಂತರ ನನ್ನ ಮೇಲೆ ಮತ್ತೆ ಅನುರಕ್ತಳಾದಳು. ಅವಳು ನನ್ನನ್ನು ಚುಂಬಿಸಿ ಎಂದು ಕೇಳಿದಾಗ ನಾನು ಮೊದಲು ಕಳ್ಳ ಬರಲಿ, ಆಮೇಲೆ ಚುಂಬನ ಮಿಕ್ಕಿದ್ದೆಲ್ಲ ಎಂದು ತಳ್ಳಿಹಾಕಿದೆ. ಚುಂಬನ ಬಿಟ್ಟು ನಮ್ಮ ಬಳಿ ಬೇರೆ ಇನ್ನೇನು ತಾನೇ ಉಳಿಯುತ್ತೆ?

ಪೊಲೀಸ್‌ ಠಾಣೆಗೆ ಫೋನ್‌ ಮಾಡಿದ ನಂತರ, ಒಂದು ವೇಳೆ ನಿಜವಾಗಿಯೂ ನಮ್ಮ ಮನೆಗೆ ಕಳ್ಳರು ಬಂದುಬಿಟ್ಟರೆ ನಮ್ಮ ಮನೆಯಿಂದ ಅವರು ಕೊಂಡೊಯ್ಯಲು ಏನು ತಾನೇ ಇದೆ ಎಂದು ನಾನು ಯೋಚಿಸಿದೆ. ಕೆಲವು ದಿನಗಳ ಹಿಂದೆ ಒಬ್ಬ ಕವಿಯ ಮನೆಗೆ ಒಬ್ಬ ಕಳ್ಳ ನುಗ್ಗಿದ್ದ. ಅಲ್ಲಿ ಅವನಿಗೆ ಯಾವುದೇ ಅಮೂಲ್ಯ ವಸ್ತುಗಳು ಸಿಗಲಿಲ್ಲ. ಸಿಕ್ಕಿದ್ದರೆ ಅವನು ಕವಿಯನ್ನು ಬ್ಲ್ಯಾಕ್‌ ಮೇಲ್ ‌ಮಾಡಬಹುದಿತ್ತು. ಅಲ್ಲಿಂದ ಖಾಲಿ ಕೈಯಲ್ಲಿ ಹಿಂತಿರುಗುವಾಗ ಅವನು ಕೋಪದಿಂದ ಕವಿಯ ಕವಿತೆಗಳ ಬಗ್ಗೆ ಕಠೋರವಾಗಿ ವಿಮರ್ಶೆ ಮಾಡಿ ಬರೆದು ಹೊರಟುಹೋದ. ಆಶ್ಚರ್ಯವೆಂದರೆ ಹೆಚ್ಚು ಓದಿದವರು ಕಳ್ಳರೇಕೆ ಆಗುತ್ತಾರೆ? ಅದರ ಬದಲು ವಿಮರ್ಶಕರಾಗ ಬಹುದಲ್ಲಾ ಎಂದು ಅನ್ನಿಸುತ್ತದೆ.

ನಮ್ಮ ಮನೆಯ ಹಿಂದೆ ಇದ್ದ ಒಬ್ಬ ಕವಿಯ ಮನೆಯಲ್ಲಿ ಕಳ್ಳತನ ಆಗಿತ್ತು. ಕಳ್ಳನಿಗೆ ಏನು ಭ್ರಮೆ ಎಂದರೆ ಇತ್ತೀಚೆಗೆ ಕನ್ನಡದಲ್ಲಿ ಕಾರ್ಯಕ್ಕೆ ಪ್ರಶಂಸೆ ಕಡಿಮೆ ಹಾಗೂ ಹಣ ಹೆಚ್ಚು ಸಿಗುತ್ತದೆ ಎಂದು. ಗಜಲ್ ಹೇಳಿದ ನಂತರ ಕವಿ ಹಣ ಕೇಳಿದಾಗ ವ್ಯವಸ್ಥಾಪಕರು ಕೊಡ್ತೀವಿ…. ಕೊಡ್ತೀವಿ ಎನ್ನುತ್ತಾರೆ. ಕವಿ ಮತ್ತೆ ಹಣ…. ಹಣ…. ಎಂದಾಗ ಮತ್ತೆ ಕೊಡ್ತೀವಿ…. ಕೊಡ್ತೀವಿ ಎನ್ನುತ್ತಾ ಸಮಯ ದೂಡುತ್ತಿರುತ್ತಾರೆ.

ಅಂದರೆ ಶಾಯಿರಿ ಬರೆಯುವವರಿಗೆ ಹಣ ಸಿಗುವುದಿಲ್ಲ, ಬರೀ ಭರವಸೆ ಸಿಗುತ್ತದೆ. ಯಾವ ಕಳ್ಳನೂ ನನ್ನ ಮನೆಗೆ ಬರಲಿಲ್ಲ. ಏಕೆಂದರೆ ಒಂದು ಕಾಲದಲ್ಲಿ ನಾನೂ ಕವಿಯಾಗಿದ್ದೆ. ಕವಿತೆಗಳನ್ನು ಬರೆಯುವುದನ್ನು ಏಕೆ ಬಿಟ್ಟೆನೆಂದರೆ ಅವುಗಳು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಎಲ್ಲಿಯವರೆಗೆಂದರೆ ಬರಬರುತ್ತಾ ನನಗೂ ಅರ್ಥವಾಗುತ್ತಿರಲಿಲ್ಲ.

ಆದ್ದರಿಂದ ನಾನು ಪೊಲೀಸ್‌ ಠಾಣೆಗೆ ಫೋನ್‌ ಮಾಡುವುದನ್ನು ಬಿಟ್ಟು ಆ ಕವಿಯ ಮನೆಗೆ ಫೋನ್‌ ಮಾಡಿ ಕೇಳಿದೆ, “ಪ್ರಕಾಶ್‌ರವರೇ, ನಿಮ್ಮ ಮನೆಗೆ ಕಳ್ಳ ಬಂದಿದ್ನಂತೆ ಹೌದೇ?”

ಅವರು ಹೆಮ್ಮೆಯಿಂದ, “ಹೌದು, ಬಂದಿದ್ದ!” ಎಂದರು.

“ಬಹಳ ಅದೃಷ್ಟವಂತರು ನೀವು. ನಾವಿಲ್ಲಿ ಕಣ್ಣು ಬಿಟ್ಕೊಂಡು ಕಾಯ್ತಿದ್ದೀವಿ. ಆದರೆ ಕಳ್ಳನ ದೃಷ್ಟಿ ನಮ್ಮ ಮೇಲಿನ್ನೂ ಬಿದ್ದಿಲ್ಲ. ಒಟ್ಟಿನಲ್ಲಿ ನಮ್ಮ ಮೇಲೆ ಸಮಾಜದ ಕೃಪೆಯೂ ಇಲ್ಲ, ಕಳ್ಳನ ಕೃಪೆಯೂ ಇಲ್ಲ. ನನ್ನ ಹೆಂಡತಿಯಂತೂ ಈ ದುಃಖದಲ್ಲಿ ಊಟ, ತಿಂಡಿ ಬಿಟ್ಟು ಕೂತಿದ್ದಾಳೆ. ನಿಮ್ಮ ಮನೆಗೆ ಬಂದ ಕಳ್ಳ ಹೇಗಿದ್ದ?” ಎಂದು ಕೇಳಿದೆ.

“ಬಹಳ ಚೆನ್ನಾಗಿದ್ದ. ನೋಡೋಕೆ ಲಕ್ಷಣಾಗಿದ್ದ.”

“ಅವನ ಅಡ್ರೆಸ್‌ ಏನಾದ್ರೂ ಗೊತ್ತಾಯ್ತಾ?”

ಪ್ರಕಾಶ್‌ ಹೇಳಿದರು, “ನಾವಿಬ್ರೂ ಪರಸ್ಪರ ನಮಸ್ತೆ….. ನಮಸ್ತೆ ಕೂಡ ಹೇಳೋಕಾಗ್ಲಿಲ್ಲ. ಏಕೆಂದರೆ ನಾನು ಕವಿ ಸಮ್ಮೇಳನಕ್ಕೆ ಹೋಗಿದ್ದೆ. ನನ್ನ ಹೆಂಡತಿ ಅಲ್ಲಿ ಆಹಾ….ಆಹಾ….. ಎಂದು ತಲೆದೂಗೋಕೆ ನನ್ನ ಜೊತೆಯಲ್ಲೇ ಬಂದಿದ್ದಳು. ಮಕ್ಕಳು ಸ್ಕೂಲಿಗೆ ಹೋಗಿದ್ರು.”

“ಈಗೀಗ ಕಳ್ಳರೂ ಬಹಳ ಹೈಟೆಕ್‌ ಆಗಿದ್ದಾರೆ. ರಾತ್ರಿ ಹೊತ್ತು ಕನ್ನ ಹಾಕಲ್ಲ. ಬೆಳಗ್ಗೆಯೇ ಬರ್ತಾರೆ. ಬೆಲೆಬಾಳುವ ಡ್ರೆಸ್‌ಗಳನ್ನು ಧರಿಸಿರ್ತಾರೆ. ಬೀಗ ಮುರಿಯಲ್ಲ. ಕೀನಿಂದಲೇ ಬೀಗ ತೆಗೀತಾರೆ. ಹೀಗಾಗಿ ಅವರನ್ನು ಕಳ್ಳರು ಅನ್ನೋಕಾಗಲ್ಲ. ನೆಂಟರು ಅಂದ್ಕೋಬೇಕು. ಸಾಮಾನುಗಳನ್ನು ಹೇಗೆ ಕೊಂಡೊಯ್ಯುತ್ತಾರೆಂದರೆ ಅದನ್ನು ಕಳ್ಳತನ ಮಾಡ್ಕೊಂಡು ಅಲ್ಲ, ಮನೆ ಬದಲಿಸ್ತಾ ಇದಾರೆ ಅಂದ್ಕೋಬೇಕು,” ಎಂದರು.

ನಂತರ ನಾನು ಕೇಳಿದೆ, “ನಿಮ್ದು ಯಾವ ಯಾವ ಸಾಮಾನು ಶಿಫ್ಟ್ ಮಾಡಿ ತಗೊಂಡು ಹೋದರು?”

“ನಂದು ಹೊಸ ಬಟ್ಟೆಗಳನ್ನೆಲ್ಲಾ ಎತ್ಕೊಂಡು ಹೋಗಿದ್ದಾರೆ. ಹಳೇದು ಹರಿದಿರೋದನ್ನು ಬಿಟ್ಟಿದ್ದಾರೆ.”

“ಬಟ್ಟೆಗಳನ್ನು ಬಿಟ್ಟರೆ ಬೇರೆ ಹಳೆ ಸಾಮಾನು ಯಾವುದನ್ನು ಬಿಟ್ಟುಹೋಗಿದ್ದಾರೆ?”

“ನನ್ನ ಹೆಂಡ್ತೀನ…..”

ಹೀಗೆಂದು ಹೇಳಿ ಆ ಕವಿ ಜೋರಾಗಿ ನಕ್ಕರು. ನಾನು ಅತ್ತೆ. ಒಂದು ವೇಳೆ ಆ ಕಳ್ಳರು ನನ್ನ ಮನೆಗೂ ಬಂದು ಇದೇ ವಿಧಾನ ಅನುಸರಿಸಿದರೆ…. ಆದರೆ ಆ ಕವಿಯ ಹೆಂಡತಿ ಕವಿತೆ ಮೆಚ್ಚಿ ಆಹಾ…..ಆಹಾ….. ಎನ್ನಲು, ಚಪ್ಪಾಳೆ ತಟ್ಟಲು ಹೊರಟುಹೋಗಿದ್ದರು. ಆದರೆ ನನ್ನ ಹೆಂಡತಿಯಂತೂ ಯಾವಾಗಲೂ ಮನೆಯಲ್ಲೇ ಇರುತ್ತಾಳೆ. ಆದ್ದರಿಂದ ನಾನು ಎಚ್ಚರಿಕೆವಹಿಸಿ ಕಳ್ಳರ ಈ ವಿಧಾನದ ಬಗ್ಗೆ ಮನೆಯಲ್ಲಿ ಹೆಂಡತಿಗೆ ಏನೂ ಹೇಳದೆ, ಪೊಲೀಸ್‌ ಸ್ಟೇಷನ್‌ಗೆ ಫೋನ್‌ ಮಾಡಿದೆ. ಪೋನ್‌ ಎಂಗೇಜ್ ಆಗಿರುತ್ತದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಒಂದು ಭಯಂಕರ ಸದ್ದು ಕೇಳಿ ಬಂತು. ಏನೆಂದು ನೋಡಿದಾಗ ಒಬ್ಬಾತ ನಮ್ಮ ಡ್ರಾಯಿಂಗ್ ರೂಂ ಕಿಟಕಿಯಿಂದ ಧುಮುಕಿ ಕೆಳಗೆ ಬಿದ್ದಿದ್ದ. ನಂತರ ಅವನು ಮೇಲೆದ್ದು ಗಡುಸಾಗಿ, “ಕೈಗಳನ್ನು ಮೇಲೆತ್ತು,” ಎಂದ.

ನಾನು ಕೇಳಿದೆ, “ಶ್ರೀಯುತರ ಶುಭ ನಾಮಧೇಯ?”

“ನಾನು ಕಳ್ಳ,” ಅವನು ಹೇಳಿದ.

ನಾನು ನಿಟ್ಟುಸಿರು ಬಿಡುತ್ತಾ ಹೇಳಿದೆ, “ಕಳ್ಳನಾ? ಬಹಳ ನಿಧಾನವಾಗಿ ಬಂದ್ರಿ. ನನ್ನ ಹೆಂಡ್ತಿ ನಿಮ್ಮನ್ನು ಬಹಳ ಜ್ಞಾಪಿಸಿಕೊಳ್ತಿದ್ಲು.”

ಆ ದುರುಳ ಜೊಲ್ಲು ಸುರಿಸುತ್ತಾ ಕೇಳಿದ, “ಯಾಕೇ?”

ನಾನು ಹೇಳಿದೆ? “ಹೆಂಗಸರು ಪಕ್ಕದ ಮನೆಗೆ ಫ್ರಿಜ್‌ ಬಂದರೆ ಅಸೂಯೆಪಡುತ್ತಾರೆ. ಹಾಗೆಯೇ ಅಕ್ಕಪಕ್ಕದ ಮನೆಗಳಿಗೆ ಕಳ್ಳರು ನುಗ್ಗಿದರೂ ನಮ್ಮ ಭಾಗ್ಯದಲ್ಲಿ ಒಬ್ಬ ಕಳ್ಳ ಕೂಡ ಮನೆಗೆ ಬರೋದನ್ನು ಬರೆದಿಲ್ಲ. ಹೀಗಾಗಿ ಶ್ರೀಯುತರೇ, ನೀವು ನಮ್ಮ ಪಾಲಿಗೆ ಕಳ್ಳರಲ್ಲ, ಗಣ್ಯ ಅತಿಥಿಗಳು.

”ಅವನು ಕೋಪದಿಂದ, “ಬಾಯಿ ಮುಚ್ಕೊಂಡು ಎರಡೂ ಕೈ ಮೇಲೆತ್ತಿ ನಿಲ್ಲು,” ಎಂದ.

ನಾನು ಏನೋ ಹೇಳಲು ಇಚ್ಛಿಸಿದ್ದೆ. ಆದರೆ ಅವನು ತಪ್ಪು ತಿಳಿಯಬಹುದು ಎಂದುಕೊಂಡು ತೆಪ್ಪಗಿದ್ದೆ. ಬರದೇ ಬರದೇ ಒಬ್ಬ ಕಳ್ಳ ಮನೆಗೆ ಬಂದಿದ್ದ. ಅವನಿಗೆ ಕೋಪ ಬರಿಸಲೇ? ನಾನು ಕೂಡಲೇ ಹೇಳಿದೆ, “ಸ್ವಾಮಿ ಕಳ್ಳ ಮಹಾಶಯರೆ, ನೀವು ಕಿಟಕಿ ಮುರಿದು ಒಳಗೆ ಯಾಕೆ ಬಂದ್ರಿ? ಮುಂದಿನ ಬಾಗಿಲಿನಿಂದ ನಮ್ಮ ನೆಂಟರಂತೆ ಬರಬಹುದಿತ್ತು!”

“ನಾ ಕಳ್ಳರು. ಮುಂದಿನ ಬಾಗಿಲಿನಿಂದ ಬರೋದು ನಮಗೆ ಅವಮಾನ ಅಂತ ತಿಳೀತೀವಿ,” ಅವನು ಹೇಳಿದ.

ನಾನು ಪ್ರಶಂಸೆಯಿಂದ ಚಪ್ಪಾಳೆ ತಟ್ಟಿ, “ಹೌದಾ?” ಎಂದು ಕೇಳಿದೆ.

ಕಳ್ಳ ಬಂದ ಕೂಡಲೇ ಭಯದಿಂದ ನನ್ನ ಬೆನ್ನಿನ ಹಿಂದೆ ಅಡಗಿದ್ದ ಹೆಂಡತಿಗೆ ಅಭಿನಂದನೆ ಸಲ್ಲಿಸಿದೆ?

“ನಿನ್ನ ಮನದಾಸೆ ಈಡೇರಿತು. ಪೊಲೀಸರ ಸಹಾಯ ಬೇಕಾಗಲಿಲ್ಲ. ಕಳ್ಳ ತಾನಾಗಿ ಬಂದಿದ್ದಾರೆ. ಇವರಿಗೆ ನಮಸ್ಕಾರ ಮಾಡು.”

ಆದರೆ ನನ್ನ ಹೆಂಡತಿ ನಡುಗುತ್ತಿದ್ದಳು. ಕಳ್ಳ ಕಿರುಚಿದ, “ನೀನ್ಯಾಕೆ ಚಪ್ಪಾಳೆ ತಟ್ಟಿದ್ದು? ಈ ಹೆಂಗಸು ಯಾರು?”

“ಇವಳು ಒಬ್ಬ ಶರಣಾರ್ಥಿ,” ನಾನು ಹೇಳಿದೆ.

“ತಮಾಷೆ ಸಾಕು. ಇವಳಿಗೆ ನೀನು ಏನಾಗಬೇಕೂಂತ ಹೇಳು,” ಅವನು ಗರ್ಜಿಸಿದ.

“ಶರಣಾರ್ಥಿಗಳ ಶಿಬಿರದ ಕಾಲುಗಾರ,” ಎಂದೆ. ಕಳ್ಳನಲ್ಲಿ ಹಾಸ್ಯ ಮನೋಭಾವ ಇದ್ದಿದ್ದರೆ ಖಂಡಿತಾ ನನ್ನ ಮಾತಿಗೆ ಹೊಗಳ್ತಿದ್ದ. ಆದರೆ ಅವನು ನನ್ನನ್ನು ದುರುಗುಟ್ಟಿ ನೋಡಿ, “ನನ್ನ ಸಮಯ ಹಾಳು ಮಾಡಬೇಡ. ನಾನು ಇನ್ನೂ 3 ಮನೆಗಳಲ್ಲಿ ಕಳ್ಳತನ ಮಾಡಬೇಕಾಗಿದೆ. ಬೀರುವಿನ ಬೀಗದ ಕೈಗಳನ್ನು ಕೊಡು,” ಎಂದ.

“ನಾನೂ ನಿಮ್ಮ ಜೊತೆಗೆ ಬಂದು ಮಾರ್ಗದರ್ಶನ ಮಾಡ್ತೀನಿ ನಡೀರಿ.”

ಆಗ ನನ್ನಾಕೆ ಕಿವಿಯಲ್ಲಿ ಹೇಳಿದಳು, “ನೀವ್ಯಾಕೆ ಅವನ ಜೊತೆ ಹೋಗಿ ನಿಮ್ಮ ಪ್ರಾಣಕ್ಕೆ ಆಪತ್ತು ತಂದ್ಕೋತೀರಿ? ಅವನಿಗೆ ಅಥಾರಿಟಿ ಲೆಟರ್‌ ಕೊಟ್ಬಿಡಿ. ಅವನೇ ಹೋಗ್ತಾನೆ.”

ಜೀವನದಲ್ಲಿ ಮೊದಲ ಬಾರಿಗೆ ನನ್ನ ಹೆಂಡತಿ ನನ್ನನ್ನು ಬೀರುವಿಗಿಂತ ಹೆಚ್ಚು ಬೆಲೆ ಬಾಳುತ್ತೇನೆಂದುಕೊಂಡಿದ್ದಾಳೆಂದು ತಿಳಿಯಿತು.

ನಾವು ಅದೂ ಇದೂ ಮಾತಾಡಿ ಅವನನ್ನು ದಾರಿ ತಪ್ಪಿಸುತ್ತಿದ್ದೇವೆಂದು ಕಳ್ಳನಿಗೆ ಸಂದೇಹ ಉಂಟಾಯಿತು. ಅವನು ನನ್ನ ಹೆಂಡತಿಯ ಕುತ್ತಿಗೆಗೆ ಚಾಕುವಿನ ತುದಿಯಿಟ್ಟು ಹೇಳಿದ, “ನಿನ್ನ ಚಿನ್ನದ ಸರ ಬಿಚ್ಚಿ ಕೊಡ್ತಿಯೋ, ನಾನೇ ಕಿತ್ತುಕೊಳ್ಲೋ?”

ಭಾರತೀಯ ಮಹಿಳೆಯರು ಇತರ ಗಂಡಸರ ಬಳಿ ನೇರವಾಗಿ ಮಾತಾನಾಡುವುದನ್ನು ಸಭ್ಯತೆಯಲ್ಲವೆಂದುಕೊಳ್ಳುತ್ತಾರೆ. ಹೀಗಾಗಿ ನನ್ನಾಕೆ ನನ್ನನ್ನು ಸಂಬೋಧಿಸಿ ಹೇಳಿದಳು, “ಅವನಿಗೆ ಅವದು ನಕಲಿ ಸರ ಅಂತ ಹೇಳಿ. ಅಸಲಿ ಸರಾನ ಹೋದವಾರ ರಸ್ತೇಲಿ ಯಾರೋ ಕಿತ್ಕೊಂಡು ಹೋದ್ರು.”

ಆದರೆ ಸಭ್ಯತೆಯ ವಿಷಯದಲ್ಲಿ ಕಳ್ಳನ ಜ್ಞಾನ ನನ್ನ ಹೆಂಡತಿಗಿಂತ ಅಧಿಕವಾಗಿತ್ತು.

“ನಿನ್ನ ಜ್ಯೂವೆಲರಿ ಬಾಕ್ಸ್ ಇರಬೇಕಲ್ಲ. ಅದನ್ನು ಎಲ್ಲಿಟ್ಟಿದ್ದೀಯ?” ಎಂದು ಕೇಳಿದ.

ಪ್ರತಿಯೊಬ್ಬ ಭಾರತೀಯ ಮಹಿಳೆಯ ಬಳಿ ಒಡವೆಗಳ ಬಾಕ್ಸ್ ಖಂಡಿತ ಇರುತ್ತದೆ ಎಂದು ಕಳ್ಳನಿಗೆ ಗೊತ್ತಿತ್ತು. ಅವನು ಚಾಕುವಿನ ತುದಿಯನ್ನು ನನ್ನಾಕೆಯ ಕುತ್ತಿಗೆಗೆ ಒತ್ತಿ ಹಿಡಿದಾಗ ಸಂಪೂರ್ಣ ಭಾರತೀಯ ಸಂಸ್ಕೃತಿ ಹೊರಗೆ ಬಂತು. ನನ್ನಾಕೆ ಹೇಳಿದಳು, “ಜ್ಯೂವೆಲ್ ‌ಬಾಕ್ಸ್ ಬ್ಯಾಂಕ್‌ ಲಾಕರ್‌ನಲ್ಲಿದೆ. ಬ್ಯಾಂಕ್‌ ರಸೀದಿ ಮತ್ತು ಕೀ ಇಲ್ಲಿದೆ…”

ಈಗ ಕಳ್ಳನಿಗೆ ವಿಪರೀತ ಕೋಪ ಬಂತು. ಅವನು ನಮ್ಮಿಬ್ಬರನ್ನು ಜೋರಾಗಿ ನೆಲಕ್ಕೆ ತಳ್ಳಿದಾಗ ಒಬ್ಬರನ್ನೊಬ್ಬರು ಅಪ್ಪಿಕೊಂಡಂತೆ ಬಿದ್ದೆವು. ಅಪ್ಪುಗೆಯ ಆನಂದ ನಮಗೆ ಹನಿಮೂನ್‌ನಲ್ಲಿ ಮಾತ್ರ ಸಿಕ್ಕಿತ್ತು. ಕಳ್ಳ ಈಗ ಮನೆಯಲ್ಲಿನ ವಸ್ತುಗಳನ್ನೆಲ್ಲಾ ಕಿತ್ತು ಬಿಸಾಡುತ್ತಿದ್ದ. ಅವನಿಗೆ ನನ್ನಾಕೆಯ ಪರ್ಸ್‌ನಲ್ಲಿ ಹರಿದು ಜೀರ್ಣವಾಗಿದ್ದ ಹಳೆಯ 5 ರೂ. ನೋಟು ಸಿಕ್ಕಿತು. ಅದು ನನ್ನ ಪ್ಯಾಂಟ್ ಜೇಬಿನಿಂದ ಅವಳ ಪರ್ಸ್‌ಗೆ, ಅವಳ ಪರ್ಸ್‌ನಿಂದ ಕಳ್ಳನ ಕೈಗೆ ತಲುಪಿತ್ತು. ಕೆಲವು ಬಣ್ಣ ಮಾಸಿದ ಕೊಳೆ ಬಟ್ಟೆಗಳು ಸಿಕ್ಕಿದವು. ಅವನ್ನು ನಾವು ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಕಳಿಸಬೇಕೆಂದು ಇಟ್ಟಿದ್ದಿ. ಅದನ್ನು ಏಕೆ ಕಳಿಸಲಾಗಿರಲಿಲ್ಲವೆಂದರೆ ಬಟ್ಟೆ ವ್ಯಾಪಾರಿಗಳು ಬಟ್ಟೆಗಳ ದರವನ್ನು ಮೂರರಷ್ಟು ಹೆಚ್ಚು ಮಾಡಿದ್ದರು. ಒಂದು ಪೀಡಿತ ಕುಟುಂಬ ಇನ್ನೊಂದು ಪೀಡಿತ ಕುಟುಂಬಕ್ಕೆ ಸಹಾಯ ಮಾಡುವುದು ನಮಗೆ ಇಷ್ಟವಿಲ್ಲ. ಕಳ್ಳ ನನ್ನ ಬೀರುವಿನಿಂದ ಕೆಲವು ಪುಸ್ತಕಗಳನ್ನು ತೆಗೆದು ಕೆಳಗೆ ಬಿಸಾಡಿದ. ಮಾರುಕಟ್ಟೆಯಲ್ಲಿ ಸಾಹಿತ್ಯದ ರದ್ದಿಗೆ ಅಷ್ಟೇನೂ ಬೆಲೆ ಇರದಿದ್ದುದರಿಂದ ಅವನ್ನು ಎತ್ತಿಕೊಂಡು ಹೋಗಲಿಲ್ಲ. ಅವನ್ನು ಅಡ ಇಟ್ಟರೆ ಒಂದು ಕರ್ಬೂಜಾ ಹಣ್ಣನ್ನೂ ಖರೀದಿಸಲಾಗುದಿಲ್ಲ.

ಕಳ್ಳನಿಗೆ ಉಪಯೋಗಕ್ಕೆ ಬರುವ ಯಾವುದೇ ವಸ್ತು ಸಿಗದಿದ್ದುದರಿಂದ ಅವನು ವಾಪಸ್‌ ಹೋಗುವಾಗ ಕೋಪದಿಂದ ಬಾಗಿಲನ್ನು ಜೋರಾಗಿ `ಧಡ್‌’ ಎಂದು ಎಳೆದುಕೊಂಡ. ಅವನು ಎಳೆದ ರಸಭಕ್ಕೆ ಅದರ ಗಾಜು ಚೂರಾಯಿತು. ನನ್ನಾಕೆ, “ಹಾಳಾದೋನು…. ನಮ್ಮ ಗಾಜು ಒಡೆದುಹಾಕಿ ಹೋದ್ನಲ್ರಿ! ಈಗ ಹೊಸ ಗಾಜು ಹಾಕಿಸೋಕೆ ಹಣ ಎಲ್ಲಿಂದ ತರೋದು?” ಎಂದು ಪಿಸುಗುಟ್ಟಿದಳು.

ಬಹುಶಃ ಕಳ್ಳನಿಗೆ ಇದು ಕೇಳಿಸಿರಬೇಕು. ಅವನು ಬಾಗಿಲಿನಿಂದ ಇಣುಕಿ ಆ ಹಳೆಯ 5 ರೂ. ನೋಟನ್ನು ನನ್ನಾಕೆಯ ಮುಖಕ್ಕೆ ಎಸೆದು, “ಥೂ, ದರಿದ್ರದೋರು! ಗಾಜು ಹಾಕಿಸೋಕು ದುಡ್ಡಿಲ್ಲ. ತಗೊಳ್ರಿ ನಿಮ್ಮ 5 ರೂಪಾಯಿ,” ಎಂದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ