ದೀಪಾವಳಿ ಹಬ್ಬದಲ್ಲಿ ದೊಡ್ಡ ದೊಡ್ಡ ಆಲಸಿಗಳೂ ಚೈತನ್ಯಪೂರಿತರಾಗಿ ಕೆಲಸ ಮಾಡಲು ಉದ್ಯುಕ್ತರಾಗುತ್ತಾರೆ. ಕೆಲವು ಗಂಡಂದಿರು ವರ್ಷವಿಡೀ ಸೋಮಾರಿತನದ ರಗ್‌ ಹೊದ್ದು ಮಧುರವಾದ ಗೊರಕೆಗಳ ಆಲಾಪನೆ ಮಾಡುತ್ತಿರುತ್ತಾರೆ. ಆದರೆ ದೀಪಾವಳಿ ಬರುತ್ತಲೇ ಅವರಲ್ಲಿ ಯಾವ ರೀತಿಯ ಎನರ್ಜಿ ತುಂಬುತ್ತದೆಂದರೆ ಅವರು ಸ್ವತಃ ಉತ್ತಮವಾಗಿ ಕೆಲಸ ಮಾಡತೊಡಗುತ್ತಾರೆ ಮತ್ತು ನೋಡಿದ ಜನ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಬನ್ನಿ, ಇಲ್ಲಿ ಇಂತಹ ದಿವಾಳಿ ಪತಿಯಂದಿರು ಅಂದರೆ ದೀಪಾವಳಿಯ ಹುಚ್ಚ ಪತಿಯಂದಿರ ತಳಿಗಳ ಬಗ್ಗೆ ಹೇಳುತ್ತಿದ್ದೇವೆ :

ಸ್ವಚ್ಛಗೊಳಿಸುವ ಪತಿ

ಈ ತಳಿಯ ಪತಿ ಇತರ ದಿನಗಳಲ್ಲಿ ಧೂಳಿನಿಂದ ಆವೃತರಾಗಿದ್ದರೂ ದೀಪಾವಳಿಯ ಹೆಜ್ಜೆಯ ಸಪ್ಪಳವನ್ನು ಕೇಳಿದ ಕೂಡಲೇ ಅದನ್ನು ಸ್ವಾಗತಿಸಲು ಸಿದ್ಧತೆಯಲ್ಲಿ ತೊಡಗುತ್ತಾರೆ. ಅವರು ಮನೆಯ ಸ್ವಚ್ಛತೆ ಹೇಗೆ ಮಾಡುತ್ತಾರೆಂದರೆ ಹೆಂಡತಿಯ ಸಂತಸಕ್ಕೆ ಪಾರವೇ ಇರುವುದಿಲ್ಲ. ಗಂಡನಂತೂ ತನ್ನ ಸ್ವಚ್ಛತೆಯ ಅಭಿಯಾನವನ್ನು ಬರುವ ವರ್ಷದವರೆಗೂ ಸ್ಥಗಿತಗೊಳಿಸುವುದಿಲ್ಲ. ಅವರ ಸ್ವಚ್ಛತಾ ವಿಧಾನ ಎಷ್ಟು ಜೋರಾಗಿರುತ್ತದೆ ಎಂದರೆ ಎಲ್ಲಕ್ಕೂ ಮೊದಲು ಮನೆಯ ಕ್ರಾಕರಿ, ಆಲ್ಮೇರಾಗಳ ಗ್ಲಾಸ್‌, ಫ್ಲವರ್‌ ವಾಸ್‌, ಟೇಬಲ್ ಗ್ಲಾಸ್‌ನಂತಹ ಸೂಕ್ಷ್ಮ ವಸ್ತುಗಳನ್ನು ಎಚ್ಚರಿಕೆಯಿಂದ ಗಮನಿಸದೆ ಒಡೆದಿರುತ್ತಾರೆ. ಸ್ವಚ್ಛತೆ ಮಾಡುವಾಗ ಹಳೆಯ ವಸ್ತುಗಳನ್ನು ಎಸೆಯುವುದಿಲ್ಲ. ಸ್ವಚ್ಛತೆ ಮಾಡುವ ಇಂತಹ ಗಂಡಂದಿರು ಹೆಂಡತಿಯ ಕೆಲಸವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತಾರೆ.

ರಸಿಕ ಪತಿ

ನೀವು ತಪ್ಪು ತಿಳಿದಿದ್ದೀರಿ. ಇವರು ತಮ್ಮ ರೊಮ್ಯಾಂಟಿಕ್‌ ಮೂಡ್‌ಗಳಿಂದ ಪತ್ನಿಗೆ ಖುಷಿ ಕೊಡುವ ರಸಿಕರಲ್ಲ. ಇವರು ಎಂತಹ ತಳಿಯ ಪತಿಯೆಂದರೆ ಪತ್ನಿ ಎಷ್ಟೇ ಬೇಡವೆಂದರೂ ಕೇಳದೇ ಮನೆಗೆ ತಾವೇ ಬಣ್ಣ ಬಳಿದು ಪತ್ನಿಯನ್ನು ಇಂಪ್ರೆಸ್‌ ಮಾಡಲು ಇಚ್ಛಿಸುತ್ತಾರೆ. ಇವರು ಗೋಡೆಗಳಿಗಿಂತಾ ಹೆಚ್ಚು ಜಮಖಾನ, ತಮ್ಮ ಬಟ್ಟೆಗಳು ಹಾಗೂ ಇತರ ವಸ್ತುಗಳ ಮೇಲೆ ಬಣ್ಣ ಬಳಿದು ಮನೆಗೆ ಬಣ್ಣ ಬಳಿದರೋ ಅಥವಾ ಮನೆಯ ವಸ್ತುಗಳಿಗೋ ಎಂದು ಸಂಶಯ ಮೂಡುತ್ತದೆ. ಇವರು ಏಣಿಯಿಂದ ಜಾರಿ ಕೆಳಗೆ ಬಿದ್ದು ಪೇಂಟ್‌ ಡಬ್ಬವನ್ನು ತಮ್ಮ ತಲೆಯ ಮೇಲೆ ಬೀಳಿಸಿಕೊಳ್ಳುವವರೆಗೆ ಅಥವಾ ತಮ್ಮ ಕೈ ಕಾಲುಗಳನ್ನು ಮುರಿದುಕೊಂಡು ಅದಕ್ಕೆ ಪ್ಲ್ಯಾಸ್ಟರ್‌ ಹಾಕಿಸಿಕೊಳ್ಳುವವರೆಗೆ ತಮ್ಮ ಕೆಲಸ ನಿಲ್ಲಿಸುವುದಿಲ್ಲ. ಇಂತಹ ಪತಿವರ್ಯರು ಕೆಳಗೆ ಬಿದ್ದು ಬಣ್ಣದಲ್ಲಿ ತೊಪ್ಪೆಯಾದರೂ ಮನೆಯ ಗೋಡೆಗಳನ್ನು ಒಣಗಿದಂತೆಯೇ ಬಿಡುತ್ತಾರೆ.

ನಳ ಮಹಾರಾಜ

ಈ ತಳಿಯ ಪತಿ ದೊಡ್ಡ ಕಲ್ಪನಾಶೀಲರಾಗಿರುತ್ತಾರೆ. ಇವರ ಮೂಗು ಎಷ್ಟು ಉದ್ದವಾಗಿರುತ್ತದೆಂದರೆ ಇವರು ದೀಪಾವಳಿಯ ಸುವಾಸನೆಯನ್ನು ಮೊದಲೇ ಆಘ್ರಾಣಿಸುತ್ತಾರೆ ಮತ್ತು ಹೊಸ ಹೊಸ ಭಕ್ಷ್ಯಗಳನ್ನು ತಯಾರಿಸುವ ಕನಸುಗಳನ್ನು ಕಾಣುತ್ತಾರೆ. ಇವರಿಗೆ ಅಡುಗೆ ಮನೆಯೊಂದಿಗೆ ಸಂಬಂಧವಿಲ್ಲ. ಅಡುಗೆ ಮಾಡಲು ಬರುವುದಿಲ್ಲ. ಆದರೆ ದೀಪಾವಳಿ ಬರುತ್ತಲೇ ಇರುವ ಅಡುಗೆಮನೆಗೆ ಓಡತೊಡಗುತ್ತಾರೆ. ದೀಪಾವಳಿಯಲ್ಲಿ ಇವರದು ಒಂದಂಶದ ಕಾರ್ಯಕ್ರಮ. ಹೊಸ ಹೊಸ ಅಡುಗೆ ಮಾಡಿ ಹೆಂಡತಿಯನ್ನು ಸಂತೋಷಪಡಿಸುವುದು. ಹಾಗಾಗಿ ಅವರು ಅಡುಗೆಮನೆಯನ್ನು ತಮ್ಮ ಅಡ್ಡಾ ಮಾಡಿಕೊಳ್ಳುತ್ತಾರೆ. ಈ ಪ್ರಯೋಗಶೀಲ ಪತಿ ಮಹಾಶಯರು ಭಕ್ಷ್ಯಗಳನ್ನು ತಯಾರಿಸುವಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಹೊಗಳಿಸಿಕೊಳ್ಳಬೇಕೆಂದಿರುತ್ತಾರೆ. ಆದರೆ ದುರಾದೃಷ್ಟ! ಏನೇನೋ ಹುಚ್ಚು ಪ್ರಯೋಗಗಳನ್ನು ಮಾಡಲು ಹೋಗಿ ಹೆಂಡತಿಯ ಮನಸ್ಸು ಖುಷಿಯಾಗುವ ಬದಲು ದರ್ಭೆಯಂತೆ ಶುಷ್ಕವಾಗುತ್ತದೆ. ಎಲ್ಲೆಂದರಲ್ಲಿ ವಸ್ತುಗಳನ್ನು ಹರಡಿ ಕಿಚನ್‌ಗೆ ಸ್ಟೋರ್‌ ರೂಮ್ ಲುಕ್‌ ಕೊಡುವವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ.

ಶಾಪಿಂಗ್ಪ್ರಿಯ ಪತಿ

ಈ ತಳಿಯ ಪತಿ ಮನೆಯ ಸ್ವಚ್ಛತೆಗಿಂತ ಜೇಬಿನ ಸ್ವಚ್ಛತೆಗೇ ಹೆಚ್ಚು ಗಮನ ಕೊಡುತ್ತಾರೆ. ಪತ್ನಿಯ ವೀಕ್‌ನೆಸ್‌ ಶಾಪಿಂಗ್‌ ಎಂದು ಇವರಿಗೆ ಗೊತ್ತು. ಅವಳನ್ನು ಖುಷಿಪಡಿಸಲು ತಮ್ಮ ಬಜೆಟ್‌ನ ಬೇರೆ ಮೊತ್ತವನ್ನೂ ದೀಪಾವಳಿ ಶಾಪಿಂಗ್‌ಗಾಗಿ ಖರ್ಚು ಮಾಡುತ್ತಾರೆ. ಆಮೇಲೆ ಪತ್ನಿ ಆಡಿಟ್‌ ಮಾಡಿದಾಗ ತಬ್ಬಿಬ್ಬಾಗುತ್ತಾರೆ. ಇವರು ತಮ್ಮ ಮಕ್ಕಳಿಗೆ ಬಟ್ಟೆ, ಪತ್ನಿಗೆ ಬೆಲೆ ಬಾಳುವ ಸೀರೆಯನ್ನಂತೂ ಖರೀದಿಸುತ್ತಾರೆ. ಜೊತೆಗೆ ದೀಪಾವಳಿಗೆ ಕ್ರಾಕರಿ, ಬೆಡ್‌ ಶೀಟ್‌, ಪಿಲ್ಲೋಕವರ್‌, ಕಂಬಳಿ, ಗಿಫ್ಟ್ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸಿ ದೀಪಾವಳಿ ಬರುವ ಮೊದಲೇ ಇಡೀ ತಿಂಗಳ ಹಣವನ್ನು 2 ದಿನಗಳಲ್ಲಿ ಉಡಾಯಿಸಿಬಿಡುತ್ತಾರೆ. ಇಂತಹ ಪತಿವರ್ಯರ ದೀಪಾವಳಿಯಂತೂ ಗ್ರ್ಯಾಂಡ್‌ ಆಗಿರುತ್ತದೆ. ಆದರೆ ಮುಂದಿನ ತಿಂಗಳ ಸಂಬಳ ಬರುವವರೆಗೆ ಬಾಯಿ ಬಾಯಿ ಬಿಡಬೇಕಾಗುತ್ತದೆ!

ಲಕ್ಷ್ಮೀಪ್ರಿಯ ಪತಿ

ಈ ತಳಿಯ ಪತಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಗಂಟೆಗಟ್ಟಲೆ ಪೂಜೆಯಲ್ಲಿ ತೊಡಗಿರುತ್ತಾರೆ. ಪಾಪ, ಅವರ ಪತ್ನಿ ಚೆನ್ನಾಗಿ ಸಿಂಗರಿಸಿಕೊಂಡು ಯಾವಾಗ ಗಂಡ ಹೊಗಳುತ್ತಾರೆಂದು ಕಾಯುತ್ತಲೇ ಇರುತ್ತಾಳೆ. ಆದರೆ ಪತಿ ತನ್ನ ಪೂಜೆ ಮುಗಿಸುವ ಮಾತೇ ಇಲ್ಲ. ಅದರಿಂದ ಪತ್ನಿಯ ಮೂಡ್‌ ಹಾಗೂ ಮೇಕಪ್‌ ಎರಡೂ ಹಾಳಾಗುತ್ತದೆ. ಆದ್ದರಿಂದ ಇಂತಹ ಪತಿ ಮಹಾಶಯರು ಸಮಯಕ್ಕೆ ಸರಿಯಾಗಿ ಸಂಭಾಳಿಸಿಕೊಳ್ಳದಿದ್ದರೆ ಪತ್ನಿ ಅವರಿಗೇ ಸರಿಯಾಗಿ ಪೂಜೆ ಮಾಡಿ ಮಂಗಳಾರತಿ ಎತ್ತಬೇಕಾಗುತ್ತದೆ.

ಗೃಹಲಕ್ಷ್ಮೀ ಪ್ರಿಯ ಪತಿ

ಈ ತಳಿಯ ಪತಿ ತನ್ನ ಬುದ್ಧಿಯ ಸದುಪಯೋಗವನ್ನು ತನ್ನ ಪತ್ನಿಯ ಬುದ್ಧಿವಂತಿಕೆಯಿಂದ ಮಾಡಿಕೊಳ್ಳುತ್ತಾರೆ. ಇವರು ತಮ್ಮ ಗೃಹಲಕ್ಷ್ಮಿ ಹೌದು ಎಂದಾಗ ಹೌದು, ಇಲ್ಲ ಎಂದಾಗ ಇಲ್ಲ ಎಂದು ಯಾವುದೇ ಯೋಚನೆಯಿಲ್ಲದೆ ಕ್ಷಣಾರ್ಧದಲ್ಲಿ ಹೇಳಿಬಿಡುತ್ತಾರೆ. ಇಂತಹ ಪತಿ ತಮ್ಮ ಸೇವೆ, ಸಮರ್ಪಣೆ ಮತ್ತು ಭಕ್ತಿ ಭಾವನೆಯಿಂದ ಗೃಹಲಕ್ಷ್ಮಿಯನ್ನು ಪ್ರಸನ್ನಗೊಳಿಸುತ್ತಾರೆ ಮತ್ತು ಅವಳಿಂದ ವರ ಪಡೆಯುತ್ತಾರೆ.

ಈ ಬುದ್ಧಿವಂತ ತಳಿಯ ಪತಿಗೆ ದೀಪಾವಳಿಯ ಸಂದರ್ಭದಲ್ಲಿ ತಾನು ಗೂಬೆಯಂತಾದರೂ ಪತ್ನಿಯಿಂದ ನಿರೀಕ್ಷೆಗಿಂತ ಹೆಚ್ಚು ಸಂತೋಷ ಪಡೆಯಬಹುದೆಂದು ಚೆನ್ನಾಗಿ ಗೊತ್ತು.

ಪಟಾಕಿ ಪ್ರಿಯ ಪತಿ

ಈ ತಳಿಯ ಪತಿಗೆ ಆಟಂಬಾಬ್‌ ಪಟಾಕಿಗಳನ್ನು ಸಿಡಿಸುವುದರಲ್ಲಿ ಹೆಚ್ಚು ನಂಬಿಕೆ. ಬೆದರಿದ ಜನ ಕಿವಿಗಳನ್ನು ಮುಚ್ಚಿಕೊಂಡು ಓಡಿದಾಗ ಇವರು ಬಿದ್ದುಬಿದ್ದು ನಗುತ್ತಾರೆ. `ಢಮಾರ್‌’ ಎಂದು ಪಟಾಕಿ ಸಿಡಿಸುವುದು ಇವರ ಉದ್ಯೋಗ. ಇಂತಹ ಪತಿ ಹೆಂಡತಿಗಾಗಿ ಇದ್ದಕ್ಕಿದ್ದಂತೆ ಹೊಸ ಸರ ತಂದು ಅಥವಾ ಹೊಳೆಯುವ ಹೊಸ ಕಾರು ತಂದು ಸರ್‌ಪ್ರೈಸ್‌ ನೀಡುತ್ತಾರೆ. ಇಂತಹ ಪತಿ ಸಂತೋಷವನ್ನಂತೂ ನೀಡುತ್ತಾರೆ. ಆದರೆ ಥಟ್ಟನೆ ನೀಡುವ ಶಾಕ್‌ನಿಂದಾಗಿ ಪತ್ನಿಯ ಹೃದಯದ ಬಡಿತವನ್ನೂ ಹೆಚ್ಚಿಸುತ್ತಾರೆ.

ಇವು ಪತಿ ಮಹಾಶಯರ ಒಟ್ಟು ತಳಿಗಳಲ್ಲಿ ಆರಿಸಿರುವ ಕೆಲವು ತಳಿಗಳು. ಈಗ ಪತ್ನಿಯರು ತಮ್ಮ ಪತಿವರ್ಯರು ಎಂತಹ ತಳಿ ಎಂದು ನಿರ್ಧರಿಸಲಿ. ಒಂದು ವೇಳೆ ಅವರು ನಷ್ಟ ಉಂಟು ಮಾಡುವಂತಹ ತಳಿಯರಾಗಿದ್ದರೆ ಎಚ್ಚರದಿಂದಿರಲಿ. ಒಂದು ವೇಳೆ ಲಾಭ ತಂದುಕೊಡು ತಳಿಯರಾಗಿದ್ದರೆ ಚಿಂತೆಯೇಕೆ? ಸಂತಸದಿಂದ ದೀಪಾವಳಿ ಆಚರಿಸಿ, ಹ್ಯಾಪಿ ದೀಪಾವಳಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ