ಹೆಂಡತಿಗೆಂದೂ ಸುಳ್ಳು ಹೇಳಬೇಡಿ. ಇದರಿಂದ ಶಬ್ದ ಮಾಲಿನ್ಯದಿಂದ ನಿಮಗೆ ಮುಕ್ತಿ ಸಿಗುವುದಲ್ಲದೆ, ಹೇಳಿದ ಸುಳ್ಳನ್ನು ಸಾಧಿಸಿಕೊಳ್ಳಲು ತೆರಬೇಕಾದ ದೊಡ್ಡ ಮೊತ್ತದ ಖರ್ಚೂ ಉಳಿಯುತ್ತದೆ.

ಮತ್ತೆ ಮತ್ತೆ ನೀವು ಹೆಂಡತಿ ಎದುರು, `ಯಾಕಾದರೂ ನಿನ್ನನ್ನು ಕಟ್ಟಿಕೊಂಡೆನೋ?’ ಎಂದು ಹೇಳುತ್ತಿರಬೇಡಿ. ಇದು ನಿಮ್ಮ ಅಂತರಂಗದಲ್ಲೇ ಇರಲಿ, ಅದನ್ನು ಆಕೆಗೆ ಹೇಳಿ ಏನು ಲಾಭ? ಈಗಾಗಲೇ ಬಲಿಗಾಗಿ ಬಕರಾ ತಲೆ ಬಗ್ಗಿಸಿದ್ದಾಗಿದೆ. ಇಷ್ಟು ವರ್ಷಗಳಾದ ಮೇಲೆ `ಮ್ಯಾಮ್‌….ಮ್ಯಾಮ್….’ ಎಂದರೇನು ಲಾಭ?

ನೆರೆಮನೆಯ ಗೃಹಿಣಿ ಮಾಡಿದ ಅಡುಗೆ ಸಖತ್ತಾಗಿದೆ ಎಂದು ಅಪ್ಪಿತಪ್ಪಿಯೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡಿ ನೋಡಿ, ಆಗ ಮನೆಯಲ್ಲಿ ನೆಮ್ಮದಿ, ಸುಖಶಾಂತಿ ಎಷ್ಟು ಸಮೃದ್ಧವಾಗಿರುತ್ತದೆ ಎಂಬುದು ನಿಮಗೆ ಮೊದಲ ಬಾರಿಗೆ ಗೊತ್ತಾಗುತ್ತದೆ.

ನಿಮ್ಮ ಹೆಂಡತಿಯ ತವರಿನವರ ಒಳ್ಳೆಯತನ ಅರಿತುಕೊಂಡು ಅದರಂತೆ ನಡೆಯುವೆ ಎಂದು ವಾಗ್ದಾನ ನೀಡಿ. ಆಗ ನೋಡಿ, ಹಿಂದೆ ಎಂದೂ ಕಾಣದ ರೊಮ್ಯಾನ್ಸ್ ನಿಮ್ಮ ಜೀವನವನ್ನು ರೋಮಾಂಚನಗೊಳಿಸಲಿದೆ.

ಭೀಮನ ಅಮಾವಾಸ್ಯೆಯ ಹಾಗೂ ಇನ್ನಿತರ ವ್ರತಗಳಿಗೆ ಹೆಂಡತಿಯರು ಮಾತ್ರ ಏಕೆ ಉಪವಾಸ ಇರಬೇಕು? ನೀವು ಇರುವುದಾಗಿ ಹಠ ಹೂಡಿ. ನಿಮ್ಮ ಹೆಂಡತಿ ನಿಮಗೆ ಆಗ 10ಕ್ಕೆ 10 ಅಂಕ ನೀಡುತ್ತಾರೆ. ಮುಖ್ಯವಾಗಿ ಆಕೆ ಕಿಟಿ ಪಾರ್ಟಿಯ ದಿನ ಬಿಝಿ ಇರುವಾಗ ನೀವು ಇಂಥ ವ್ರತದ ನೆಪವೊಡ್ಡಿ, ಉಪವಾಸ ಇದ್ದುಬಿಡಿ. `ಲಂಘನಂ ಪರಮೌಷಧಂ’ ಆದ್ದರಿಂದ ಅಜೀರ್ಣದ ತೊಂದರೆಗಳೂ ಮಾಯ! ವಾರಕ್ಕೆ ಕನಿಷ್ಠ 2 ಸಲವಾದರೂ ಟ್ರೈ ಮಾಡಿ ನೋಡಿ.

ನಿಮ್ಮ ಸಂಬಳದ ಪೂರ್ತಿ ಹಣ ಹೆಂಡತಿ ಕೈಗಿರಿಸಿ ತೆಪ್ಪಗಿದ್ದುಬಿಡಿ. ನಡುನಡುವೆ ನಿಮ್ಮ ಪರ್ಸ್‌ನಿಂದ ಆಕೆ ಆಗಾಗ ಹಣ ಎಗರಿಸಿದಳು ಅಂತ ನೀವು ಚಿಂತೆ ಮಾಡುವ ಟೆನ್ಶನ್‌ ತಪ್ಪುತ್ತದೆ. ಅಲ್ಲದೆ, ನೀವು ಪ್ರೀತಿಯಿಂದ ಕೇಳಿದರೆ ನಿಮ್ಮ ಬಸ್‌ ಚಾರ್ಜ್‌ಮತ್ತು ಕಾಫಿ ಖರ್ಚಿಗೆ ಆಕೆ ಕೊಡೋದಿಲ್ಲ ಅಂತಾಳೇನು? ಚಿಂತಾಮುಕ್ತರಾಗಲು ಎಂಥ ಸುವರ್ಣಾಕಾಶ ನೋಡಿ!

ಪ್ರತಿ ನಿತ್ಯ ಬೆಡ್‌ ಕಾಫಿ ಒದಗಿಸುತ್ತೇನೆಂದು ಇಂದೇ ಆಣೆ ಮಾಡಿ, ನಿಮ್ಮ ದಾಂಪತ್ಯದ ತೋಟ ನಳನಳಿಸದಿದ್ದರೆ ಕೇಳಿ. ಬೆಳಗ್ಗೆ ಬೇಗ (ಅದು ಕಷ್ಟ. ಆದರೂ….) ಎದ್ದು 1 ಕಪ್‌ ಕಾಫಿ ಮಾಡಿ ಕೊಡುವಿರೋ ಅಥವಾ ಇಡೀ ದಿನ ಕೈಬಾಯಿ ಸುಟ್ಟುಕೊಂಡಿರ್ತೀರೋ….? ನಿಮಗೇ ಬಿಟ್ಟಿದ್ದು.

ಪರಸ್ತ್ರೀಯರನ್ನೆಂದೂ ನಿಮ್ಮ ಓರೆಗಣ್ಣಿನಿಂದ ನೋಡಲು ಹೋಗದಿರಿ. ಆಗ ನಿಮ್ಮ ಮನೆಗೆ ನೀವೇ ಇಂದ್ರ, ನೀವೇ ಚಂದ್ರ! ಆಗ ನೋಡಿ, ನಿಮಗೆ ವಿಐಪಿ ಟ್ರೀಟ್‌ಮೆಂಟ್‌ ಮಾತ್ರವಲ್ಲದೆ ಮಂತ್ರಿ ಮಂಡಳಕ್ಕಿಲ್ಲದ ಮರ್ಯಾದೆಯೂ ಸಿಗುತ್ತದೆ.

ಪತ್ನಿಯ ಕುಂದುಕೊರತೆಗಳನ್ನು ದೊಡ್ಡ ದೋಷವಾಗಿ ಪರಿಗಣಿಸದೆ ಬಿಟ್ಟುಬಿಡಿ. ಕ್ಷಮೆ ದೊಡ್ಡ ಗುಣ, ಋಷಿ ಮುನಿಗಳು ಅದನ್ನು ದೈವಗುಣವೆಂದೇ ಬಣ್ಣಿಸಿದ್ದಾರೆ. ಆದ್ದರಿಂದ ಆಕೆಯ (ಕು)ಕೃತ್ಯಗಳನ್ನು ನೀವು ಕ್ಷಮಿಸಿದರೆ, ಬದುಕಲ್ಲಿ ಸಮರಸವೇ ಸಮರಸ!

ಹೆಂಡತಿಗೆ ಮನೆಯ ಎಲ್ಲಾ ಕೆಲಸಗಳಲ್ಲೂ ಖಂಡಿತಾ ನೆರವಾಗುವೆ ಎಂದು ಪ್ರಮಾಣ ಮಾಡಿ. ಆಗ ನೋಡಿ, ಮನೆ ಸ್ವರ್ಗಸಮಾನ ಆಗುವುದಲ್ಲದೆ, ಯಾವುದಾದರೂ ಸಾಮಾಜಿಕ ಸಂಘ ಸಂಸ್ಥೆಗಳು `ಆದರ್ಶ ಸಂಗಾತಿ’ ಇತ್ಯಾದಿ ಪ್ರಶಸ್ತಿಗಳನ್ನಿತ್ತು ನಿಮ್ಮನ್ನು ಸನ್ಮಾನಿಸಿದರೂ ಆಶ್ಚರ್ಯವಿಲ್ಲ.

ಸಂಗಾತಿಗಾಗಿ ನಿಮ್ಮ ಹೃದಯದಲ್ಲಿ ಹೀಗೆ ಪ್ರೀತಿ ಹೊರಹೊಮ್ಮಿದರೆ, ನಿಮ್ಮ  ರೂಪ, ವ್ಯಕ್ತಿತ್ವ ಹೆಚ್ಚು ಪ್ರಜ್ವಲಿಸುತ್ತದೆ. ನೀವು ಮತ್ತಷ್ಟು ಹ್ಯಾಂಡ್‌ಸಮ್ ಆಗಿ ನಿಮ್ಮ ಕಾಲೋನಿಯ ಹೀರೋ ಆಗಿ ಲಕಲಕಾಯಿಸುವಿರಿ.

ಈ ಮೇಲಿನ ಸಂಕಲ್ಪದ ಚಾರ್ಟ್‌ ನೋಡಿ ನಿಮ್ಮ ಗೃಹಸ್ಥ ಜೀವನವನ್ನು ಸುಖಮಯವಾಗಿಸಿಕೊಳ್ಳಿ. ಇನ್ನೇಕೆ ತಡ? ಮೇಲಿನ ಸಂಕಲ್ಪಗಳನ್ನು ನಿಮ್ಮದಾಗಿಸಿಕೊಂಡು ನಿಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳಿ, ನಿಮ್ಮ ಸತೀ ಧರ್ಮ ಪಾಲಿಸಿ! ಆದೇಶಿಸಿದರು, ಪತಿವ್ರತಾ ಪತ್ನಿ ಸಂಘ, ಭಾರತ ಸರಕಾರದ ಒಂದು ಅಂಗಸಂಸ್ಥೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ