ರಂಜಿನಿ ಕೂಡ ಬಹಳಷ್ಟು ಜನರಂತೆ ಇವತ್ತು ಬದುಕುವುದನ್ನು ನಂಬಿದ್ದರು. ಭವಿಷ್ಯದ ಬಗ್ಗೆ ಚಿಂತೆ ಏಕೆ ಮಾಡಬೇಕು, ಏನಾಗುತ್ತೋ ಮುಂದೆ ನೋಡೋಣ ಎನ್ನುತ್ತಿದ್ದರು. ರಂಜನಿ ಒಂದು ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಸಂಬಳ, ಸಣ್ಣ ಕುಟುಂಬ, ಗಂಡ, ಇಬ್ಬರು ಮಕ್ಕಳು, 8 ವರ್ಷದ ಮಗಳು, 6 ವರ್ಷದ ಮಗ. ಹೆಚ್ಚು ಯೋಚಿಸಲು ಏನಿದೆ?

ಆದರೆ ಇದ್ದಕ್ಕಿದ್ದಂತೆ ಒಂದು ಅಪಘಾತದಲ್ಲಿ 30 ವರ್ಷದ ಅವರ ಸೋದರ ಸಂಬಂಧಿ ತೀರಿಕೊಂಡರು. ಆಗ ರಂಜನಿಗೆ ತನ್ನ ಮಕ್ಕಳ ಭವಿಷ್ಯದ ಚಿಂತೆಯಾಗತೊಡಗಿತು. ಅವರು ಕೂಡಲೇ ವಿಮಾ ಸಲಹೆಗಾರರನ್ನು ಭೇಟಿಯಾಗಿ ಇಬ್ಬರೂ ಮಕ್ಕಳಿಗೆ ಪಾಲಿಸಿಗಳನ್ನು ಪಡೆದರು.

ಈಗ ರಂಜನಿಗೆ ಮಕ್ಕಳ ಆರ್ಥಿಕ ಚಿಂತೆಯಿಂದ ಮುಕ್ತಿ ಸಿಕ್ಕಿತು.

ಹೆಚ್ಚಿನ ಪೋಷಕರು ಇತರ ಕ್ಷೇತ್ರಗಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿದ್ದಾರೆ. ಆದರೆ ತಮ್ಮ ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮಕ್ಕಳ ಭವಿಷ್ಯದ ಯೋಜನೆ ಮಾಡುವುದು ಬಹಳ ಅಗತ್ಯ. ಸರ್ವಶ್ರೇಷ್ಠ ಶಿಕ್ಷಣ ಕೊಡುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು.

ವಿಮೆಯಿಂದ ನಿಮ್ಮ ಮಗುವಿನ ಭವಿಷ್ಯಕ್ಕೆ ಉಳಿತಾಯವಾಗುವುದಲ್ಲದೆ, ನಿಮ್ಮ ಮಕ್ಕಳಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಅಸಮರ್ಥರಾಗಿರುವಂತಹ ಸ್ಥಿತಿಯಲ್ಲೂ ಮಕ್ಕಳ ಯೋಗಕ್ಷೇಮ ಗಮನಿಸಬಹುದು. ಹೀಗಾಗಿ ಈಗ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್ ಅಗತ್ಯವೆಂದು ತಿಳಿಯಲಾಗಿದೆ.

ಮಾರುಕಟ್ಟೆಯಲ್ಲಿ ಹಲವು ರೀತಿಯಲ್ಲಿ ಚೈಲ್ಡ್ ಪ್ಲ್ಯಾನ್‌ಗಳು ಲಭ್ಯವಿವೆ. ಬಹಳಷ್ಟು ಸ್ಕೀಮುಗಳು, ತಮ್ಮ ಪ್ಲ್ಯಾನ್‌ಗಳ ಸಮರ್ಥನೆಯಲ್ಲಿ ನೂರೆಂಟು ಆಶ್ವಾಸನೆಗಳನ್ನು ಕಂಡು ಪೋಷಕರು ಗಲಿಬಿಲಿಗೊಳ್ಳುತ್ತಾರೆ. ಯಾವ ಚೈಲ್ಡ್ ಪ್ಲ್ಯಾನ್‌ ತಮಗೆ ಉತ್ತಮವೆಂಬ ಗೊಂದಲದಲ್ಲಿರುತ್ತಾರೆ. ತಮ್ಮ ಸಾಮರ್ಥ್ಯ ಹಾಗೂ ಗುರಿಗೆ ತಕ್ಕಂತೆ ಪಾರಂಪರಿಕ ಅಥವಾ ಯೂನಿಟ್‌ ಲಿಂಕ್ಡ್ ಪ್ಲ್ಯಾನ್‌, ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ ಆರಿಸಿಕೊಳ್ಳಬಹುದು. ಆರಿಸಿಕೊಳ್ಳುವ ಮೊದಲು ಈ ವಿಷಯಗಳನ್ನು ಗಮನಿಸಿ.

ವಿಮೆ ಮಾಡಿಸಿದ ತಾಯಿ ತಂದೆಯರ ಸಾವಿನ ನಂತರ ಮಕ್ಕಳಿಗೆ ಹಣದ ಸಹಾಯ ಸಿಗಬೇಕು.

ಮಕ್ಕಳ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗಬೇಕು.

ಮಕ್ಕಳ ಸುರಕ್ಷಿತ ಭವಿಷ್ಯಕ್ಕೆ ಸಾಕಷ್ಟು ಮೊತ್ತದ ಹಣ ಇರಬೇಕು.

ಪಾರಂಪರಿಕ ಚೈಲ್ಡ್ ಪ್ಲ್ಯಾನ್

ಈ ಪ್ಲ್ಯಾನ್‌ನಲ್ಲಿ ವಿಮಾ ಹಣದ ದೊಡ್ಡ ಭಾಗ ಸಾಲದ ಆಧಾರಿತ ಯೋಜನೆಗಳಲ್ಲಿ ಹೂಡಿ ನಿಶ್ಚಿತ ಸಮಯದಲ್ಲಿ ನಿಶ್ಚಿತ ಮೊತ್ತದ ಪೂರೈಕೆಯ ಬಗ್ಗೆ ಗ್ಯಾರಂಟಿ ನೀಡಲಾಗುತ್ತದೆ. ಇದರಲ್ಲಿ ರಿಸ್ಕ್ ಕಡಿಮೆ ಹಾಗೂ ನಿಶ್ಚಿತ ರಿಟರ್ನ್ಸ್ ಸಿಗುವ ಗ್ಯಾರಂಟಿ ಹೆಚ್ಚಾಗಿರುತ್ತದೆ. ತಮಗೆ ಆ ಸಮಯದಲ್ಲಿ ಎಷ್ಟು ಮೊತ್ತದ ಹಣ ಸಿಗುವುದೆಂದು ತಂದೆ ತಾಯಿಯರಿಗೆ ತಿಳಿಯುತ್ತದೆ.

ಯೂನಿಟ್‌ ಲಿಂಕ್ಡ್ ಪ್ಲ್ಯಾನ್‌ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವಿರುವ ಪೋಷಕರು ಮಕ್ಕಳಿಗೆ ಯೂನಿಟ್‌ ಲಿಂಕ್ಡ್ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ (ಯೂಲಿಪ್‌) ಪಡೆಯಬಹುದು. ಈ ಪ್ಲ್ಯಾನ್‌ನಲ್ಲಿ ಈಕ್ವಿಟಿ ಮತ್ತು ಸಾಲದ ಬಜಾರ್‌ನಲ್ಲಿ ಹೂಡುತ್ತಾರೆ. ಇಂತಹ ಯೋಜನೆಗಳಲ್ಲಿ ದೀರ್ಘ ಅವಧಿಗೆ (15-20 ವರ್ಷ) ಈಕ್ವಿಟಿಯಿಂದ ಸಾಕಷ್ಟು ಒಳ್ಳೆಯ ರಿಟರ್ನ್ಸ್ ಸಿಗುತ್ತದೆ. ಸರಿಯಾದ ಆಯ್ಕೆ ಮಾಡಿಕೊಂಡರೆ ಯೂಲಿಪ್‌ ಪ್ಲ್ಯಾನ್‌ನಿಂದ 15-20 ವರ್ಷಗಳಲ್ಲಿ ನಿಮ್ಮ ಹಣ ಬಹಳಷ್ಟು ವೃದ್ಧಿಯಾಗುತ್ತದೆ.

ಚೈಲ್ಡ್ ಇನ್ಶೂರೆನ್ಸ್ ಅಗತ್ಯ

ಒಂದು ಸಮೀಕ್ಷೆಯ ಪ್ರಕಾರ ಶೇ.72ರಷ್ಟು ಪೋಷಕರು ತಮ್ಮ ಮಕ್ಕಳಿಗಾಗಿ ಹಣ ಉಳಿಸುವುದನ್ನು ಬಹಳ ಅಗತ್ಯವೆಂದು ತಿಳಿಯುತ್ತಾರೆ. ಇದರ ಲಾಭ ಪಡೆಯಲು ಬಹಳಷ್ಟು ಕಂಪನಿಗಳು ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ ಲಾಂಚ್‌ ಮಾಡುತ್ತಿವೆ. ಚೈಲ್ಡ್ ಪ್ಲ್ಯಾನ್‌ನಲ್ಲಿ ಹೂಡುವುದರಿಂದ ಮಕ್ಕಳ ಭವಿಷ್ಯ ಸುರಕ್ಷಿತವಾಗಿರುತ್ತದೆ. ಜೊತೆಗೆ ನಿಮ್ಮ ಆದಾಯ ತೆರಿಗೆಯೂ ಉಳಿಯುತ್ತದೆ.

ಹೂಡಿಕೆಯ ಸಲಹೆಗಾರ ಸುಭಾಶ್‌ ಪ್ರಕಾರ ಟ್ರೆಡಿಶನಲ್ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಹೂಡಿಕೆಯ ಬದಲು ಯೂಲಿಪ್‌ ಚೈಲ್ಡ್ ಪ್ಲ್ಯಾನ್‌ನಲ್ಲಿ ಹೂಡುವುದು ಉತ್ತಮ. ಆದರೆ ಪ್ಲ್ಯಾನ್‌ ಪಡೆಯಲು ಮೊದಲು ನೀವು ಷರತ್ತುಗಳನ್ನು ಅಗತ್ಯವಾಗಿ ಗಮನಿಸಿ. ಇದರೊಂದಿಗೆ ಅವಸರದಲ್ಲಿ ತಪ್ಪು ನಿರ್ಣಯ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿದೆ.

ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್

ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು. ಜೊತೆಗೆ ಇದರ ನೆಪದಲ್ಲಿ ಸೇವಿಂಗ್ಸ್ ಕೂಡ ಆಗುತ್ತದೆ. ಮಕ್ಕಳ ಶಿಕ್ಷಣದ ಹೊರೆಯೂ ನಿಮ್ಮ ಮೇಲೆ ಬೀಳುವುದಿಲ್ಲ. ಮಗು ಹುಟ್ಟಿದ ನಂತರ 18 ವರ್ಷಗಳ ಪ್ಲ್ಯಾನ್‌ ಪಡೆದರೆ ಒಳ್ಳೆಯದು. ತಂದೆ ತಾಯಿಯರಿಗೂ ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಟೆನ್ಶನ್‌ ಇರುವುದಿಲ್ಲ. ಅವರಂತೂ ಆರ್ಥಿಕ ಚಿಂತೆಯಿಂದ ಮುಕ್ತರಾಗುತ್ತಾರೆ.

ಹೂಡಿಕೆ ಯಾವಾಗ ಮಾಡಬೇಕು?

ಚೈಲ್ಡ್ ಇನ್ಶೂರೆನ್ಸ್ ಯೂಲಿಪ್‌ ಪ್ಲ್ಯಾನ್‌-2 ರೀತಿಯಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದರಲ್ಲಿ ಮಗುವಿನ ವಿಮಾ ಕವರೇಜ್‌ ಅದಕ್ಕೆ 7 ವರ್ಷವಾದಾಗ ಮಾಡಲಾಗುತ್ತದೆ. ಇನ್ನೊಂದರಲ್ಲಿ ಮಗು ಹುಟ್ಟಿದ 90 ದಿನಗಳ ಒಳಗೆ ವಿಮೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ಹೂಡಿಕೆಯ ಅವಧಿ ದೀರ್ಘವಾಗುವುದರ ಜೊತೆಗೆ ರಿಸ್ಕ್ ಕೂಡ ಕಡಿಮೆಯಾಗುತ್ತದೆ.

ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ ವಿಷಯದಲ್ಲಿ ಪಾಲಿಸಿ ತೆಗೆದುಕೊಳ್ಳುವವರು ಪೋಷಕರಾಗಿದ್ದು ಅದರ ಲಾಭ ಮಕ್ಕಳಿಗೆ ಸಿಗುತ್ತದೆ. ಒಂದುವೇಳೆ ಟರ್ಮ್ ಇರುವಾಗಲೇ ತಂದೆ ತಾಯಿ ಮೃತರಾದರೆ ವಿಮೆಯ ಹಣ ಮಕ್ಕಳಿಗೆ ಸಿಗುತ್ತದೆ. ಈ ಅವಧಿ 10-25 ವರ್ಷಗಳ ಮಧ್ಯೆ ಇರುತ್ತದೆ. ಒಂದುವೇಳೆ ಹೀಗಾಗದಿದ್ದರೆ ಈ ಪ್ಲ್ಯಾನ್‌ನಲ್ಲಿ ವಿಮೆಯ ಮೊತ್ತವನ್ನು ಒಂದೇ ಕಂತಿನಲ್ಲಿ ಕೊಡುತ್ತಾರೆ ಹಾಗೂ ನಿಗದಿತ ಅವಧಿಯಲ್ಲಿ ಬೋನಸ್‌ ಕೂಡ ಸಿಗುತ್ತದೆ. ಹೂಡಿಕೆ ಸಲಹೆಗಾರ ಸುಭಾಶ್‌ ಹೀಗೆ ಹೇಳುತ್ತಾರೆ, ಮಗು ಹುಟ್ಟಿದ ಕೂಡಲೇ ಹೂಡಿಕೆ ಮಾಡಬೇಕು. ಅದಕ್ಕೆ 18 ವರ್ಷಗಳಾದಾಗ ಉನ್ನತ ಶಿಕ್ಷಣ ಕೊಡಿಸಲು ಬೇರೆಯವರತ್ತ ನೋಡಬೇಕಾಗಿರುವುದಿಲ್ಲ.

ಒಳ್ಳೆಯ ಉಡುಗೊರೆ ಕೂಡ

ಕೆಲವು ಕಂಪನಿಗಳು ಪೋಷಕರಲ್ಲದೆ, ಇತರ ಹತ್ತಿರದ ಸಂಬಂಧಿಕರಿಗೂ ಸಹ ಅವರ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಸಲಹೆ ನೀಡುತ್ತವೆ. ತಾತ, ಅಜ್ಜಿ, ಅಕ್ಕ, ಅಣ್ಣ, ಸೋದರಮಾವ, ಅತ್ತೆಯರೂ ಸಹ ಸಿಂಗಲ್ ಪ್ರೀಮಿಯಮ್ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ನ ಉಡುಗೊರೆ ಕೊಡಬಹುದು.

ಜಾಹೀರಾತನ್ನೂ ಪರೀಕ್ಷಿಸಿ

ವಿಮಾ ಯೋಜನೆಯ ಜಾಹೀರಾತುಗಳಲ್ಲಿ ಮಕ್ಕಳಿಗೆ ಬಹಳ ಉಪಯೋಗವಾಗುತ್ತಿದೆ. ಕೆಲವು ವರ್ಷಗಳಿಂದ ಪ್ಲ್ಯಾನ್‌ನ ಜನಪ್ರಿಯತೆಯೂ ಹೆಚ್ಚಿದೆ. ಕೆಲವು ವಿಮಾ ಕಂಪನಿಗಳ ಒಟ್ಟು ಮಾರಾಟದಲ್ಲಿ ಚೈಲ್ಡ್ ಇನ್ಶೂರೆನ್ಸ್ ನ ಪಾಲು ಶೇ.35ರಷ್ಟು ಇದೆ. ಪ್ಲ್ಯಾನ್‌ ಪಡೆಯುವಾಗ ಕೆಲವು ವಿಷಯಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಿ. ಪಾಲಿಸಿದಾರರ ಸಾವಿನ ನಂತರ ಸಮ್‌ ಅಶ್ಶೂರ್ಡ್ ಮೊತ್ತ ಸಿಗುವುದಲ್ಲದೆ, ಪ್ರೀಮಿಯಂ ಕಟ್ಟದೆಯೂ ಪಾಲಿಸಿ ಜಾರಿಯಲ್ಲಿರುತ್ತದೆಯೇ ಎಂದು ತಿಳಿದುಕೊಳ್ಳಿ. ಚೈಲ್ಡ್ ಪ್ಲ್ಯಾನ್‌ ಯೂನಿಟ್ ಲಿಂಕ್ಡ್ ಆಗಿದ್ದರೆ ಫಂಡ್‌ ಆಯ್ಕೆಗಳು ಎಷ್ಟಿವೆ? ಪ್ಲ್ಯಾನ್‌ ಪಾರಂಪರಿಕವೇ ಅಥವಾ ಯೂನಿಟ್‌ ಲಿಂಕ್ಡ್? ಪಾರಂಪರಿಕ ವಿಮಾ ಪಾಲಿಸಿಗಳು ನಿಶ್ಚಿತ ಪ್ರತಿಫಲ ಕೊಡುವುದಲ್ಲದೆ, ಅವುಗಳಲ್ಲಿ ಸಮ್  ಅಶ್ಶೂರ್ಡ್ ಮೊತ್ತ ಮೆಚ್ಯೂರಿಟಿಯಾದ ಮೇಲೆ ಅಥವಾ ನಿಶ್ಚಯಿಸಿದ ಅವಧಿಯಲ್ಲಿ ಸಿಗುತ್ತದೆ. ಅದೇ ಯೂಲಿಪ್‌ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಹೂಡಿಕೆ ಮತ್ತು ಲೈಫ್‌ ಕವರ್‌ ಎರಡೂ ಇವೆ.

ವಿಮಾ ಸುರಕ್ಷೆ

ಯೂಲಿಪ್‌ ಪ್ಲ್ಯಾನ್‌ನ ಎರಡನೇ ವಿಭಾಗದಲ್ಲಿ ಪಾಲಿಸಿ ಪ್ರಸ್ತಾವನೆ ಮಾಡಿದವರಿಗೂ ವಿಮಾ ಸುರಕ್ಷತೆಯ ಲಾಭ ಸಿಗುತ್ತದೆ. ಆದರೆ ಹೆಚ್ಚಿನ ಯೋಜನೆಗಳು ಗ್ರ್ಯಾಂಡ್‌ ಫಾದರ್‌ ಆಗಿ ಕವರೇಜ್‌ ನೀಡುವುದಿಲ್ಲ.

ಪ್ಲ್ಯಾನ್‌ ಉತ್ತಮ ಚೈಲ್ಡ್ ಇನ್ಶೂರೆನ್ಸ್ ರಿಸ್ಕ್ ಕವರ್‌ನಿಂದ ಮಕ್ಕಳಿಗೆ ಬಹಳಷ್ಟು ಅನುಕೂಲಗಳಿವೆ. ಈಗೀಗ ಚೈಲ್ಡ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಅನೇಕ ಹೊಸ ಫೀಚರ್‌ಗಳು ಬರತೊಡಗಿವೆ. ಅವುಗಳಲ್ಲಿ ಯೂನಿಟ್‌ ಲಿಂಕ್ಡ್ ಪ್ಲ್ಯಾನ್‌ ವಿಶೇಷವಾಗಿದೆ. ಇದರಲ್ಲಿ ಹೂಡಿಕೆದಾರರಿಗೆ ಈಕ್ವಿಟಿಯಲ್ಲಿ ಹೂಡಲು ಎಕ್ಸ್ ಪೋಶರ್‌ ಸಿಗುತ್ತದೆ. ಈಕ್ವಿಟಿಯಲ್ಲಿ ಹೂಡುವುದರಿಂದ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಉಂಟಾಗುವ ಏರಿಳಿತಗಳಿಂದ ಲಾಂಗ್‌ ಟರ್ಮ್ ನಲ್ಲಿ ಹೂಡಿಕೆಯಿಂದ ಲಾಭ ಸಿಗುತ್ತದೆ. ಮಕ್ಕಳಿಗೆ ದೀರ್ಘಕಾಲಿಕ ಮೆಚ್ಯೂರಿಟಿ ಅವಧಿಯ ಇನ್ಶೂರೆನ್ಸ್ ಪ್ಲ್ಯಾನ್‌ ಪಡೆಯುವವರಿಗೆ ಯೂನಿಟ್‌ ಲಿಂಕ್ಡ್ ಇನ್ಶೂರೆನ್ಸ್ ಪ್ಲ್ಯಾನ್ ಖರೀದಿಸುವುದು ಉತ್ತಮ. ಇದರಲ್ಲಿ ಹೂಡಿಕೆದಾರರಿಗೆ ಪಾರಂಪರಿಕ ಪ್ಲ್ಯಾನ್‌ಗೆ ಹೋಲಿಸಿದರೆ ಹೆಚ್ಚು ಲೈಫ್‌ ಕವರ್‌ ಸಿಗುತ್ತದೆ. ಒಮ್ಮೊಮ್ಮೆ ಕಂಬೈನ್ಡ್ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕ. ಒಂದುವೇಳೆ ಇನ್ಶೂರೆನ್ಸ್ ಪ್ಲ್ಯಾನ್‌ನ್ನು ರಿಸ್ಕ್ ಕವರ್‌ ಮಾಡಲು ಪಡೆಯುತ್ತಿದ್ದರೆ ಮಾರುಕಟ್ಟೆಯಲ್ಲಿ ಟರ್ಮ್ ಪ್ಲ್ಯಾನ್‌ ಇದೆ.

ಸಮಯ ಇರುವಾಗಲೇ ಚೈಲ್ಡ್ ಇನ್ಶೂರೆನ್ಸ್ ಮಾಡಿಸಿದರೆ ಮಕ್ಕಳು ಸ್ಕೂಲ್ ಮುಗಿಸಿದ ನಂತರ ಒಳ್ಳೆಯ ಪ್ರೊಫೆಶನ್‌ ಕೋರ್ಸ್ ಸೇರಲು ಸಹಾಯವಾಗುತ್ತದೆ. ಆದ್ದರಿಂದ ವಿಮಾ ಪಾಲಿಸಿಯ ಪ್ರತಿಯೊಂದು ಮಜಲನ್ನೂ ತಿಳಿದುಕೊಂಡು ನಿಮ್ಮ ಮಗುವಿನ ವಿಮಾ ಪಾಲಿಸಿ ಪಡೆಯಿರಿ.

ಯಶೋದಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ