ಅಂಜಲಿ ಮತ್ತು ಅಭಿಷೇಕ್‌ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇಬ್ಬರೂ ಹನಿಮೂನ್‌ಗೆಂದು ಊಟಿಗೆ ಹೋಗಿದ್ದರು. ಅವರು ಅಲ್ಲಿಗೆ ಬಂದು ಎರಡು ದಿನಗಳಷ್ಟೇ ಆಗಿತ್ತು. ಆಕಸ್ಮಿಕವಾಗಿ ಅಂಜಲಿಗೆ ಉರಿಮೂತ್ರದ ಸಮಸ್ಯೆ ಶುರುವಾಯಿತು. ಅವಳಿಗೆ ಮೇಲಿಂದ ಮೇಲೆ ಮೂತ್ರಕ್ಕೆ ಹೋಗುವ ಸಮಸ್ಯೆ ಶುರುವಾಗಿತ್ತು.

ಮೂತ್ರ ಮಾಡುವಾಗ ಆಕೆಗೆ ಅದೆಷ್ಟು ನೋವು ಹಾಗೂ ಚುಚ್ಚಿದ ಅನುಭವ ಆಗುತ್ತಿತ್ತೆಂದರೆ ಅವಳಿಗೆ ಆ ಸಮಯದಲ್ಲಿ ಅಳು ಬಂದುಬಿಡುತ್ತಿತ್ತು.

ಇಬ್ಬರೂ ಬಂದಿರುವುದು ಹನಿಮೂನ್‌ಗೆಂದು. ಆದರೆ ಅಂಜಲಿಯ ಈ ತೊಂದರೆಯ ಕಾರಣದಿಂದ ಅವರ ಇಡೀ ಕಾರ್ಯಕ್ರಮವೇ ದಿಕ್ಕು ತಪ್ಪಿಬಿಟ್ಟಿತು. ರಾತ್ರಿ ಅವಳು ಮಲಗಿಕೊಂಡಾಗ ಚಳಿಯ ಜೊತೆಗೆ ಜ್ವರ ಕೂಡ ಬಂತು. ಬೆಳಗ್ಗೆ ವೈದ್ಯರ ಬಳಿ ಹೋದಾಗ ತಪಾಸಣೆಯ ಬಳಿಕ ತಿಳಿದು ಬಂದ ಸಂಗತಿಯೇನೆಂದರೆ, ಆಕೆಗೆ ಯುಟಿಐ ಅಂದರೆ ಯೂರಿನರಿ ಟ್ರ್ಯಾಕ್‌ ಇನ್‌ಫೆಕ್ಷನ್‌ ಆಗಿದೆ ಎಂದು. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ, ಆಕೆಗೆ ಮೂತ್ರದ ಸೋಂಕು ಉಂಟಾಗಿತ್ತು.

ಸಾಮಾನ್ಯವಾಗಿ ಮಹಿಳೆಯರಿಗೆ ಮದುವೆಯಾದ ತಕ್ಷಣ ಮೂತ್ರದ ಸೋಂಕು ಉಂಟಾಗುತ್ತದೆ. ಅದನ್ನು ವೈದ್ಯರು `ಹನಿಮೂನ್

ಸಿಸ್ಟೈಸಿಸ್‌’ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಅನುಭವದ ಕೊರತೆ ಮತ್ತು ವೈಯಕ್ತಿಕ ಸ್ವಚ್ಠತೆಯ ಬಗ್ಗೆ ಗಮನಕೊಡದೇ ಇರುವುದು.

ಮೊದಲ ಸಲದ ಸಮಾಗಮದಿಂದ ಗುಪ್ತಾಂಗಕ್ಕೆ ತಗುಲಿದ ಏಟು ಕೂಡ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ವಾಸ್ತವದಲ್ಲಿ ಹಲವು ಮಹಿಳೆಯರ ಜೊತೆ ಈ ರೀತಿ ಘಟಿಸುತ್ತದೆ. ಸಕಾಲಕ್ಕೆ ವೈದ್ಯರಿಂದ ಚಿಕಿತ್ಸೆ ಪಡೆಯದೇ ಇದ್ದರೆ ಮುಂದೆ ಈ ಸಮಸ್ಯೆ ಅಪಾಯಕಾರಿಯಾಗಿ ಪರಿಣಮಿಸಬಹುದು.

ಮಹಿಳೆಯರ ಮೂತ್ರ ಜನಕಾಂಗ ವ್ಯವಸ್ಥೆಯಲ್ಲಿ ಕೀಟಾಣು ಪ್ರವೇಶಿಸಿದರೆ ಅವರಿಗೆ ಸೋಂಕು ತಗುಲುತ್ತದೆ. ಅದರ ಪರಿಣಾಮವೆಂಬಂತೆ ಮೂತ್ರ ಮಾಡುವಾಗ ತಳಮಳ ಮತ್ತು ಅಸೌಕರ್ಯ ಉಂಟಾಗುತ್ತದೆ. ಏಳುವುದು ಕೂರುವುದು ಕೂಡ ಕಷ್ಟಕರವಾಗಿ ಪರಿಣಮಿಸುತ್ತದೆ.

ಒಂದು ಸಮೀಕ್ಷೆಯ ಪ್ರಕಾರ, 100ರಲ್ಲಿ 5 ಮಹಿಳೆಯರು ಜೀವನದಲ್ಲಿ ಒಮ್ಮೊಮ್ಮೆ ಯುಟಿಐ ಸಮಸ್ಯೆಯನ್ನು ಎದುರಿಸಿರುತ್ತಾರೆ.  ಎಷ್ಟೋ ಮಹಿಳೆಯರು ಅನೇಕ ಬಾರಿ ಈ ಸಮಸ್ಯೆಗೆ ತುತ್ತಾಗಿರುತ್ತಾರೆ.

ಹಿರಿಯ ಯೂರಾಲಜಿಸ್ಟ್ ಡಾ. ಸಂದೀಪ್‌ ಅವರ ಪ್ರಕಾರ, ಸಾಮಾನ್ಯವಾಗಿ ಈ ರೋಗ ಅತ್ಯಂತ ಗಂಭೀರವಾಗೇನೂ ಇರುವುದಿಲ್ಲ ಹಾಗೂ ಆ್ಯಂಟಿಬಯಾಟಿಕ್‌ ಔಷಧಿಯಿಂದ ಕಡಿಮೆ ಆಗಬಹುದು. ಎಷ್ಟೋ ಸಲ ಈ ಸಮಸ್ಯೆ ಮಹಿಳೆಯರಿಗೆ ಮೇಲಿಂದ ಮೇಲೆ ಪೀಡಿಸುತ್ತದೆ. ಒಂದುವೇಳೆ ಸೋಂಕು ಕಿಡ್ನಿ ತನಕ ಪಸರಿಸಿಬಿಟ್ಟರೆ ಆಗ ಪರಿಣಾಮ ಘಾತಕವಾಗಿಬಿಡುತ್ತದೆ. ಎಷ್ಟೋ ಸಲ ಕಿಡ್ನಿ ವೈಫಲ್ಯ ಕೂಡ ಆಗಿಬಿಡುತ್ತದೆ.

ಯುಟಿಐನ ಪ್ರಕಾರಗಳು

ಸಾಮಾನ್ಯವಾಗಿ ಇನ್‌ಫೆಕ್ಷನ್‌ ಮೂತ್ರ ಜನಕಾಂಗದ ಅತ್ಯಂತ ಕೆಳಭಾಗದಲ್ಲಿ ಉಂಟಾಗುತ್ತದೆ. ಯುರೇಥ್ರಾದ ಮುಖಾಂತರ ಮೂತ್ರಕೋಶದ ತನಕ ತಲುಪುವುದನ್ನೇ `ಸಿಸ್ಟೈಟಿಸ್‌’ನ ಹೆಸರಿನಿಂದ ಕರೆಯಲಾಗುತ್ತದೆ. ಒಂದುವೇಳೆ ಯಾವುದೋ ಕಾರಣದಿಂದ ಸೋಂಕು ಕಿಡ್ನಿಗೆ ತಗುಲಿದರೆ ಅದನ್ನು `ಫಿಲೋನಿಫಿರೈಟಿಸ್‌’ ಎಂದು ಕರೆಯುತ್ತಾರೆ.

ಯುಟಿಐನ ಲಕ್ಷಣಗಳು

ಮೂತ್ರ ಮಾಡುವಾಗ ಉರಿ ಹಾಗೂ ಚುಚ್ಚಿದಂತಾಗುವಿಕೆ.

ಮೇಲಿಂದ ಮೇಲೆ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ

ಯಾವಾಗಲಾದರೊಮ್ಮೆ ಮೂತ್ರದಲ್ಲಿ ರಕ್ತಸ್ರಾವವಾಗುವುದು.

ಜೋರಾಗಿ ಮೂತ್ರ ಮಾಡಬೇಕೆನಿಸುತ್ತದೆ. ಅದನ್ನು ತಡೆಯಲು ಕಷ್ಟ ಎನಿಸುವುದು.

ಮೂತ್ರ ಮಾಡುವಾಗ ಕೆಳಭಾಗದಲ್ಲಿ ನೋವಿನ ಅನುಭೂತಿ ಉಂಟಾಗುವುದು.

ಹೊಟ್ಟೆಯ ಕೆಳಭಾಗದಲ್ಲಿ ನೋವು ಹಾಗೂ ತಳಮಳ.

ಅತಿಯಾದ ಸೋಂಕಿನ ಸಂದರ್ಭದಲ್ಲಿ ನಡುಕದ ಜೊತೆಗೆ ಜ್ವರ ಬರುವುದು, ವಾಂತಿ ಬಂದಂತಾಗುವುದು. ತೀವ್ರ ಕಾಡುವ ಬೆನ್ನು ಮತ್ತು ಸೊಂಟ ನೋವು.

ಯುಟಿಐಗೆ ಕಾರಣಗಳು

ಮದುವೆಯ ಬಳಿಕ ಉಂಟಾಗುವ ಈ ಸಮಸ್ಯೆಗೆ ಮುಖ್ಯ ಕಾರಣ ಅನುಭವದ ಕೊರತೆ, ಮೊದಲ ಸಲದ ಸಂಭೋಗದಿಂದ  ಆಂತರಿಕ ಅಂಗಗಳಿಗೆ ಉಂಟಾದ ಪೆಟ್ಟು ಹಾಗೂ ಸ್ವಚ್ಛತೆಯ ಬಗ್ಗೆ ಗಮನ ಕೊಡದೇ ಇರುವುದು ಕಾರಣವಾಗಿದೆ.

ಮೂತ್ರದ ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸಿಕೊಳ್ಳದೇ ಇರುವುದು.

ಬಹಳ ಹೊತ್ತಿನತನಕ ಮೂತ್ರವನ್ನು ತಡೆಹಿಡಿದಿರುವುದು. ಮೂತ್ರಕೋಶ ಅನೇಕ ಗಂಟೆಗಳ ಕಾಲ ಹಾಗೆಯೇ ಭರ್ತಿಯಾಗಿರುವುದರಿಂದ ಆ ಭಾಗದಲ್ಲಿನ ಮಾಂಸಖಂಡಗಳು ದುರ್ಬಲಗೊಳ್ಳುತ್ತವೆ. ಅದರಿಂದಾಗಿ ಅವುಗಳ ಸಂಕುಚನಗೊಳ್ಳುವ ಶಕ್ತಿ ಕಡಿಮೆಯಾಗುತ್ತದೆ.

ಮೂತ್ರಕೋಶದಲ್ಲಿ ಮೂತ್ರ ಹಾಗೆಯೇ ಉಳಿದಿರುವುದು. ಮಧುಮೇಹಿ, ಮುಟ್ಟಂತ್ಯವಾದವರು ಹಾಗೂ ಗರ್ಭಿಣಿಯರಿಗೆ  ಸಮಸ್ಯೆ ಹೆಚ್ಚು ಬಾಧಿಸುತ್ತದೆ.

ಪರೀಕ್ಷೆ ಅತ್ಯವಶ್ಯ

ಎಷ್ಟೋ ಗಂಭೀರ ಪ್ರಕರಣಗಳಲ್ಲಿ ರೋಗಿಗೆ ಯೂರಾಲಜಿಸ್ಟ್ ರ ಮುಖಾಂತರ `ಐವಿಪಿ’ ಎಂಬ ಟೆಸ್ಟ್ ಮಾಡಲು ತಿಳಿಸಲಾಗುತ್ತದೆ. ಅದಕ್ಕಾಗಿ ಸಿಸ್ಟೊಯುರೆಥ್ರೋಗ್ರಫಿ ಪರೀಕ್ಷೆ ಕೂಡ ಮಾಡಿಸಲಾಗುತ್ತದೆ. ಈ ಪರೀಕ್ಷೆಯ ಮುಖಾಂತರ ಮೂತ್ರ ಮಾಡಿದ ಬಳಿಕ ಮೂತ್ರಕೋಶದಲ್ಲಿ ಅಷ್ಟಿಷ್ಟು ಮೂತ್ರ ಉಳಿಯುತ್ತಿರಬಹುದೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ.

ಯುಟಿಐ ಪರೀಕ್ಷೆಗಾಗಿ ಮೂತ್ರವನ್ನು ಮೈಕ್ರೋಸ್ಕೋಪಿಕ್‌ ಪರೀಕ್ಷೆ ಮಾಡಿ ಅದರಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ಹಾಗೂ ರಕ್ತ ಕಣಗಳ ಸಂಖ್ಯೆಯನ್ನು ಅರಿತುಕೊಳ್ಳಲಾಗುತ್ತದೆ. ಯೂರಿನ್‌ ಕಲ್ಚರ್‌ನ ನೆರವಿನಿಂದ ಕೀಟಾಣುಗಳನ್ನು ಗುರುತಿಸಿ. ಉಪಯುಕ್ತ ಔಷಧಿಗಳ ವಿಶ್ಲೇಷಣೆ ಮತ್ತು ನಿರ್ಧಾರ ಕೈಗೊಳ್ಳಲಾಗುತ್ತದೆ.

ಯುಟಿಐ ತಡೆಯಲು

ಯುಟಿಐನಿಂದ ರಕ್ಷಿಸಿಕೊಳ್ಳಲು ಎಲ್ಲಕ್ಕೂ ಮುಖ್ಯ ಉಪಾಯವೆಂದರೆ ವೈಯಕ್ತಿಕ ಸ್ವಚ್ಛತೆಯ ಅಭ್ಯಾಸ ಮತ್ತು ನೈರ್ಮಲೀಕರಣದಿಂದ ಸೋಂಕು ದೂರಾಗುತ್ತದೆ.

ಮಲಮೂತ್ರ ವಿಸರ್ಜನೆಯ ಬಳಿಕ ಆ ಭಾಗವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಮೂತ್ರ ತಡೆಹಿಡಿಯಲು ಪ್ರಯತ್ನಿಸಬೇಡಿ.

ಸಮಾಗಮದ ಬಳಿಕ ಗುಪ್ತಾಂಗವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿಕೊಳ್ಳಿ. ಸಾಧ್ಯವಾದರೆ ಸಮಾಗಮದ ಬಳಿಕ ಮೂತ್ರ ವಿಸರ್ಜನೆ ಮಾಡಿ.

ದಿನಕ್ಕೆ ಕನಿಷ್ಠವೆಂದರೂ  8-10 ಗ್ಲಾಸ್‌ ನೀರನ್ನು ಕುಡಿಯಲೇಬೇಕು.

ಯಾವಾಗಲೂ ಸ್ವಚ್ಛ ಒಣ ಒಳ ಉಡುಪುಗಳನ್ನೇ ಧರಿಸಿ.

ಛಾಯಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ