ಅಂಡಕೋಶದಲ್ಲಿ ಕಾಣಿಸಿಕೊಂಡ ರಂಧ್ರಗಳಿಲ್ಲದ ಚಿಕ್ಕ ಚೀಲದಂತಹ ರಚನೆಯೇ `ಸಿಸ್ಟ್’ ಎಂದು ಕರೆಸಿಕೊಳ್ಳುತ್ತದೆ. ಅಂಡಕೋಶದ ಮೇಲ್ಭಾಗದಲ್ಲಿ ಅಥವಾ ಅದರ ಮೇಲೆಯೇ ಪೂರ್ತಿ ತೆಳ್ಳನೆಯ ಅಥವಾ ಅರೆ ತೆಳ್ಳನೆಯ ಪದಾರ್ಥದಿಂದ ಅದು ತುಂಬಿಕೊಂಡಿರಬಹುದು. ಬಹಳಷ್ಟು `ಓವೇರಿಯನ್ ಸಿಸ್ಟ್’ಗಳು ತಂತಾನೇ ಸರಿಹೋಗುತ್ತವೆ.
ದ್ರವ ಉತ್ಪನ್ನ ಮಾಡುವ ಜೀವಕೋಶಗಳು ಅಸಾಮಾನ್ಯ ರೂಪದಲ್ಲಿ ಬೆಳೆಯುತ್ತ ಹೋಗುವುದು ಹಾಗೂ ಆ ದ್ರವ ಹೊರಹಾಕಲು ಸೂಕ್ತ ದಾರಿ ದೊರಕದೇ ಇರುವುದು ಸಿಸ್ಟ್ ಆಗಲು ಮುಖ್ಯ ಕಾರಣವಾಗಿದೆ.
ಧೂಮಪಾನ ಮಾಡುವ ಮಹಿಳೆಯರಲ್ಲಿ ಧೂಮಪಾನ ಮಾಡದೇ ಇರುವ ಮಹಿಳೆಯರಿಗಿಂತ ಓವೇರಿಯನ್ ಸಿಸ್ಟ್ ಉಂಟಾಗುವ ಸಾಧ್ಯತೆ ಹೆಚ್ಚು.
ಅಸಾಮಾನ್ಯ ಹಾರ್ಮೋನಿಗೆ ಕಾರಣ
ಪಾಲಿಸಿಸ್ಟಿಕ್ ಓವರೀಸ್‌ನ ಆರಂಭಿಕ ಲಕ್ಷಣವೆಂದರೆ, ಬೇಡವಾದ ಕೂದಲುಗಳು ಕಾಣಿಸಿಕೊಳ್ಳುವುದು, ನಿರಂತರ ತೂಕ ಹೆಚ್ಚುತ್ತಾ ಹೋಗುವುದು ಹಾಗೂ ಅನಿಯಮಿತ ಋತುಚಕ್ರ. ಇನ್ನು ನಿರ್ಲಕ್ಷಿಸಬೇಡಿ. ಪಿಸಿಓಎಸ್ ಎಂಬ ರೋಗದ ಆರಂಭಿಕ ಲಕ್ಷಣಗಳೂ ಇದಕ್ಕೆ ಕಾರಣ ಆಗಿರಬಹುದು. ಇದರಿಂದ ಬಂಜೆತನ ಹಾಗೂ ಕ್ಯಾನ್ಸರಿನ ಅಪಾಯ ಕೂಡ ಉಂಟಾಗಬಹುದು.
ಪಿಸಿಓಎಸ್‌ನ ಸಮಸ್ಯೆಗೆ ತುತ್ತಾದ ಮಹಿಳೆಯರ ಅಂಡಕೋಶದಲ್ಲಿ ಹಾರ್ಮೋನುಗಳು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಈ ಕಾರಣದಿಂದ ಅಂಡಾಣುಗಳು `ಸಿಸ್ಟ್’ ಅಥವಾ ಗುಳ್ಳೆಯ ರೂಪ ತಳೆಯುತ್ತವೆ. ಅವೇ ಎಷ್ಟೋ ಸಲ ಕ್ಯಾನ್ಸರಿನ ರೂಪ ಪಡೆದುಕೊಳ್ಳುತ್ತವೆ.
ಅಂಡಕೋಶದಲ್ಲಿ ಈ ರೀತಿಯ ಸಿಸ್ಟ್ ಗಳು ಆಗಾಗ ಒಂದೆಡೆ ಸೇರುತ್ತಲೇ ಇರುತ್ತವೆ. ಕ್ರಮೇಣ ಇವುಗಳ ಆಕಾರ ಹೆಚ್ಚುತ್ತ ಹೋಗುತ್ತದೆ. ಇದನ್ನು ವೈದ್ಯ ಭಾಷೆಯಲ್ಲಿ `ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಎಂತಹ ಕಗ್ಗಂಟಾಗಿ ಪರಿಣಮಿಸುತ್ತದೆಯೆಂದರೆ, ಮಹಿಳೆ ಈ ಕಾರಣದಿಂದಾಗಿಯೇ ಗರ್ಭ ಧರಿಸುವುದಿಲ್ಲ.`
ಓವೇರಿ ಸಿಸ್ಟ್‘ನ ಬಗೆಗಳು
ಅಂಡಕೋಶದ ಸಿಸ್ಟ್ ಗಳು ದ್ರವ ಪದಾರ್ಥಗಳಿಂದ ತುಂಬಿದ ಚೀಲಗಳಂತಿರುತ್ತವೆ. ಅವು ಅಂಡಕೋಶದ ಒಳಭಾಗದಲ್ಲಿ ಇರುತ್ತವೆ. ಅಂಡಕೋಶದಲ್ಲಿರುವ ಹೆಚ್ಚಿನ ಸಿಸ್ಟ್ ಗಳು ದೇಹಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಋತುಚಕ್ರದ ಸಂದರ್ಭಲ್ಲಿ ತಂತಾನೇ ಹೊರಟುಹೋಗುತ್ತವೆ. ಒಂದು ವೇಳೆ ನೋವು ಅಧಿಕಗೊಂಡರೆ ವೈದ್ಯರನ್ನು ಕಾಣುವುದು ಅತ್ಯವಶ್ಯಕ.
ಮುಟ್ಟಂತ್ಯದ ಬಳಿಕ ಸಿಸ್ಟ್ ನ ಸಮಸ್ಯೆ ಏನಾದರೂ ಕಂಡುಬಂದರೆ, ಸಿಸ್ಟ್ ನಲ್ಲಿ ಕ್ಯಾನ್ಸರ್‌ನ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಹೀಗಾಗಿ ಮುಟ್ಟು ನಿಂತ ಬಳಿಕ ಪೆಲ್ವಿಕ್ ಎಕ್ಸಾಮಿನೇಶನ್ ಟೆಸ್ಟ್ ಮತ್ತು ಪೆಲ್ವಿಕ್ ಅಲ್ಟ್ರಾಸೌಂಡ್ ಮಾಡಿಸಿಕೊಳ್ಳುವುದು ಅತ್ಯವಶ್ಯಕ. ಅದರಿಂದ ಸಿಸ್ಟ್ ಇರುವುದು ಗೊತ್ತಾಗುತ್ತದೆ.
ಲಕ್ಷಣಗಳು
ಸಾಮಾನ್ಯವಾಗಿ ಓವೇರಿಯನ್ ಸಿಸ್ಟ್ ನ ಲಕ್ಷಣಗಳು ಬಾಹ್ಯ ಭಾಗದಲ್ಲಿ ಗೋಚರಿಸುವುದಿಲ್ಲ. ಆದರೆ `ಸಿಸ್ಟ್’ ಇದ್ದಲ್ಲಿ ಕೆಳಕಂಡ ಲಕ್ಷಣಗಳು ಗೋಚರಿಸಬಹುದು :
ಸ್ತನಗಳಲ್ಲಿ ನಿರಂತರ ನೋವು
ಹೊಟ್ಟೆಯಲ್ಲಿ ಊತ ಉಂಟಾಗುವಿಕೆ
ಮೂತ್ರಕೋಶದ ಮೇಲೆ ಅಥವಾ ಮಲದ್ವಾರದ ಮೇಲೆ ಒತ್ತಡ ಬಿದ್ದು ಮೇಲಿಂದ ಮೇಲೆ ಮಲವಿಸರ್ಜನೆಗೆ ಹೋಗಬೇಕೆನಿಸುತ್ತದೆ.
ಸಮಾಗಮ ಕ್ರಿಯೆ ನಡೆಸಲು ಕಷ್ಟವಾಗುತ್ತದೆ.
ಋತುಚಕ್ರ ಏರುಪೇರಾಗುತ್ತದೆ. ಅದು ಸಾಮಾನ್ಯಕ್ಕಿಂತ ಅಧಿಕ ಅಥವಾ ಆ ಬಳಿಕ ಕಡಿಮೆ ಕೂಡ ಆಗುತ್ತದೆ.
ಒಮ್ಮೊಮ್ಮೆ ಸಿಸ್ಟ್ ಗಳು ಪರಸ್ಪರ ಘರ್ಷಣೆ ಹೊಂದುವುದರಿಂದ ಹೊಟ್ಟೆಯಲ್ಲಿ ಅತಿಯಾಗಿ ನೋವುಂಟಾಗುತ್ತದೆ. ಅದರಿಂದ ವಾಂತಿ ಬಂದಂತಾಗುತ್ತದೆ ಮತ್ತು ಜ್ವರ ಕೂಡ ಬರಬಹುದು. ಇದರಿಂದ ಒಮ್ಮೊಮ್ಮೆ ಪೆರಿಟೊನೈಟಿಸ್ ಆಗುವ ಸಾಧ್ಯತೆ ಕೂಡ ಇರುತ್ತದೆ.
ಸಿಸ್ಟ್ ನ ಶಸ್ತ್ರಚಿಕಿತ್ಸೆ
ಹಲವು ಬಗೆಯ ಸಿಸ್ಟ್ ಗಳನ್ನು ಯಾವುದೇ ಚಿಕಿತ್ಸೆಯಿಲ್ಲದೇ ಗುಣಪಡಿಸಬಹುದು. ಇನ್ನು ಕೆಲವು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಹೊರಟುಹೋಗುತ್ತವೆ. ಆದರೆ ಕೆಲವೊಂದು ಬಗೆಯ `ಸಿಸ್ಟ್’ಗಳಿಗೆ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ಅಲ್ಟ್ರಾಸೌಂಡ್‌ಮುಖಾಂತರ ಪರೀಕ್ಷೆ ಮಾಡಿ ಹಾಗೂ ವೈದ್ಯರ ಸೂಚನೆಗಳನ್ನು ಪಾಲಿಸುವುದರಿಂದ ಓವೇರಿಯನ್ ಸಿಸ್ಟ್ ಗೆ ಸಂಪೂರ್ಣ ಚಿಕಿತ್ಸೆ ಸಾಧ್ಯವಿದೆ.
`ಸಿಸ್ಟ್’ನ್ನು ಟ್ಯೂಮರ್ ಎಂದೂ ಹೇಳಲಾಗುತ್ತದೆ. ಕೆಲವು ಓವೇರಿಯನ್ ಟ್ಯೂಮರ್‌ಗಳು ಕ್ಯಾನ್ಸರಿಗೂ ಕಾರಣವಾಗುತ್ತವೆ. ಆಗ ಓವೆರಿ ಮತ್ತು ಫೆಲೋಪಿಯನ್ ಟ್ಯೂಬ್‌ನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ನಿವಾರಿಸಬೇಕಾಗುತ್ತದೆ. ಮಹಿಳೆಯ ವಯಸ್ಸು, ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಸರ್ಜರಿಯ ನಿರ್ಣಯ ಕೈಗೊಳ್ಳಲಾಗುತ್ತದೆ.
ಪ್ರತಿಯೊಬ್ಬ ಮಹಿಳೆಯ ಕೇಸ್ ಬೇರೆ ಬೇರೆಯಾಗಿರುತ್ತದೆ. ಆದರೆ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಸಂತಾನೋತ್ಪತ್ತಿ ಅಂಗವನ್ನು ಪರಿಪೂರ್ಣವಾಗಿ ತೆಗೆದುಹಾಕಬೇಕಾಗುತ್ತದೆ.
ಕ್ಲಿಷ್ಟತೆಗಳು
ಒಂದುವೇಳೆ ಸಿಸ್ಟ್ ಒಡೆದುಹೋದರೆ ಭಾರಿ ನೋವು ಹಾಗೂ ರಕ್ತಸ್ರಾವ ಉಂಟಾಗುತ್ತದೆ. `ಸಿಸ್ಟ್’ನ ಆಕಾರ ಕ್ರಮೇಣ ಹೆಚ್ಚುತ್ತಾ ಹೊರಟಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಇರುತ್ತದೆ. ಒಂದುವೇಳೆ ಸಿಸ್ಟ್ ದ್ರವ ಪದಾರ್ಥದಿಂದ ಭರ್ತಿಯಾಗಿದ್ದರೆ, ಸಿಸ್ಟ್ ಕ್ಯಾನ್ಸರಿನಲ್ಲಿ ಪರಿವರ್ತನೆಗೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಆ ಸಿಸ್ಟ್ ಗಟ್ಟಿಯಾಗಿರುವುದರ ಜೊತೆಗೆ ಅದರಲ್ಲಿ ದ್ರವ ಪದಾರ್ಥ ಇದ್ದರೆ ಅದು ಕ್ಯಾನ್ಸರ್ ಹೌದು ಅಲ್ಲವೋ ಎನ್ನುವುದನ್ನು ಕಂಡುಕೊಳ್ಳಬೇಕಾಗುತ್ತದೆ. ಹದಿವಯಸ್ಸಿನ ಹುಡುಗಿಯರಿಗೆ ಋತುಚಕ್ರ ಶುರುವಾಗುವ ಮುಂಚೆಯೇ ಕಂಡುಬರುವ ಸಿಸ್ಟ್ ಚಿಂತೆಯ ವಿಷಯವಾಗುತ್ತದೆ. ಈ ಸ್ಥಿತಿಯಲ್ಲಿ ಸಿಸ್ಟ್ ಕ್ಯಾನ್ಸರ್‌ಗ್ರಸ್ಥ ಆಗುವ ಸಾಧ್ಯತೆ ಶೇ.50ರಷ್ಟಿರುತ್ತದೆ. ಸಾಮಾನ್ಯವಾಗಿ ಫಂಕ್ಷನ್ ಸಿಸ್ಟ್ 4 ತೆರನಾಗಿರುತ್ತವೆ.
ರಂಧ್ರ ಸಂಬಂಧಿತ ಸಿಸ್ಟ್
ಕಾಪರ್ಸ್ ಲ್ಯೂಟಿಯಂ ಯಾವುದೇ ಗ್ರಂಥಿ ಒಡೆದಾಗ ಅಂಡಕೋಶದಲ್ಲಿ ಉಂಟಾದ ಹಳದಿ ದುಂಡಗಿನ ಗೆಡ್ಡೆಯಂಥ ವಸ್ತು ಮತ್ತು ಪಾಲಿಸಿಸ್ಟಿಕ್ ಸಿಸ್ಟ್. ಈ ಎಲ್ಲ ಸಿಸ್ಟ್ ಗಳು ಕ್ಯಾನ್ಸರ್‌ಗ್ರಸ್ಥ ಆಗಿರುವುದಿಲ್ಲ.
ಸಾಮಾನ್ಯ ಸಮಸ್ಯೆಗೆ ಕಾರಣಗಳು
ಪಾಲಿಸಿಸ್ಟಿಕ್ ಓವರೀಸ್‌ನಲ್ಲಿ ಎಷ್ಟೋ ಸಿಸ್ಟ್ಗಳು ಏಕಕಾಲಕ್ಕೆ ಅಂಡಗ್ರಂಥಿಯ ಕಾರ್ಟೆಕ್‌್ಸನಲ್ಲಿರು ಒಂದು ದುಂಡಗಿನ ರಚನೆಯಾಗಿದ್ದು, ಅದನ್ನು ಅಂಡಕೋಶದ ರಂಧ್ರ ಎಂದೂ ಹೇಳಲಾಗುತ್ತದೆ. ಅವು ಏಕಕಾಲಕ್ಕೆ ರೂಪುಗೊಳ್ಳುತ್ತವೆ. ಆ ಸಿಸ್ಟ್ ಸಂಖ್ಯೆ 10 ಆಗಿರಬಹುದು. ಅದರಿಂದಾಗಿ ಓವೆರಿ ಗಾತ್ರ ಹೆಚ್ಚಾಗುತ್ತದೆ. ಈ ಸಿಸ್ಟ್ ಮಹಿಳೆಯರ ಸಾಮಾನ್ಯ ಸಮಸ್ಯೆಯ ಕಾರಣವಾಗುತ್ತದೆ. ಈ ಕಾರಣದಿಂದ ಬಂಜೆತನ, ಗರ್ಭಪಾತ, ಮುಖ, ಎದೆ, ಹೊಟ್ಟೆ ಹಾಗೂ ಕಾಲುಗಳ ಮೇಲೆ ಕೂದಲುಗಳು ಕಾಣಿಸಿಕೊಳ್ಳುವುದು, ಮೊಡವೆ ತೂಕ ಹೆಚ್ಚಾಗುವಿಕೆ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಡಾ. ವಿಶಾಖಾ ಅವರು ಈ ಕುರಿತಂತೆ ಹೀಗೆ ಹೇಳುತ್ತಾರೆ, “ಈ ಎಲ್ಲ ಸಮಸ್ಯೆಗಳಿಗೆ ಹಾರ್ಮೋನುಗಳೇ ಹೊಣೆಯಾಗಿರುತ್ತವೆ. ಒಬ್ಬ ಮಹಿಳೆಗೆ ನೀಡಿದ ಚಿಕಿತ್ಸೆ ಇನ್ನೊಬ್ಬ ಮಹಿಳೆಗೂ ಅದೇ ಹೊಂದುತ್ತದೆ ಎಂದು ಹೇಳಲಾಗದು. ಹೀಗಾಗಿ ಯಾವುದೇ ಚಿಕಿತ್ಸೆ ಪಡೆಯುವ ಮುನ್ನ ಸ್ತ್ರೀರೋಗ ತಜ್ಞರ ಪರಾಮರ್ಶೆ ತೆಗೆದುಕೊಳ್ಳದೇ ಮಾಡಿಸಿಕೊಳ್ಳುವ ಚಿಕಿತ್ಸೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ನಿರ್ಲಕ್ಷಿಸಬೇಡಿ ಒಂದುವೇಳೆ ಓವೇರಿಯನ್ ಸಿಸ್ಟ್ 60 ದಿನಗಳಿಗೂ ಹೆಚ್ಚು ಕಾಲ ಹಾಗೆಯೇ ಮುಂದುವರಿದರೆ ಅದರ ಬಗ್ಗೆ ನಿರ್ಲಕ್ಷ್ಯ ತೋರಿಸಬೇಡಿ, ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ ಎಂದೂ ವೈದ್ಯರು ಹೇಳುತ್ತಾರೆ.
ಮಹಿಳೆ ಗರ್ಭಧರಿಸುವ ಇಚ್ಛೆ ಹೊಂದಿರದೇ ಇದ್ದಲ್ಲಿ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವ ಮೂಲಕ ಈ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಗರ್ಭನಿರೋಧಕ ಮಾತ್ರೆಗಳನ್ನು ಯಾವಾಗ, ಹೇಗೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತ್ಯವಶ್ಯ.
ದೊಡ್ಡ ದೊಡ್ಡ ರೋಗಗಳಿಗೆ ಸಾಮಾನ್ಯವಾಗಿ ಚಿಕ್ಕ ಚಿಕ್ಕ ನಿರ್ಲಕ್ಷ್ಯತನಗಳೇ ಕಾರಣವಾಗುತ್ತವೆ. ಮಹಿಳೆಯರು ತಮ್ಮ ಕುಟುಂಬದ ಜವಾಬ್ದಾರಿಯ ಜೊತೆ ಜೊತೆಗೆ ತಮ್ಮ ದೈಹಿಕ ಸಮಸ್ಯೆಗಳ ಬಗೆಗೂ ಗಮನಕೊಟ್ಟರೆ ಜೀವನ ಸುಖಮಯವಾಗಿ ಸಾಗುತ್ತದೆ.
– ಡಾ. ಪ್ರೇಮಲತಾ
ಅಧಿಕ ಡಯೆಟಿಂಗ್ ಆರೋಗ್ಯಕ್ಕೆ ಮಾರಕ
ಇತ್ತೀಚಿನ ಯುವತಿಯರಲ್ಲಿ ತೆಳ್ಳಗಾಗುವ ಅಕಾಂಕ್ಷೆ ಹೆಚ್ಚುತ್ತಲೇ ಹೊರಟಿದೆ. ಬೊಜ್ಜು ಯಾವ ರೀತಿ ದೇಹಕ್ಕೆ ಹಾನಿಕಾರಕವೇ, ಅದೇ ರೀತಿ ಅತಿಯಾಗಿ ತೆಳ್ಳಗಾಗುವುದು ಕೂಡ ದೇಹಕ್ಕೆ ಸೂಕ್ತವಾದುದಲ್ಲ. ತೆಳ್ಳಗೆ ಮತ್ತು ಅತಿತೆಳ್ಳಗೆ ಈ ಎರಡರಲ್ಲಿ ಸಾಕಷ್ಟು ವ್ಯತ್ಯಾಸವಿದೆ. ತೆಳ್ಳಗಾದರೆ ಅದರಲ್ಲಿ ಸ್ವಲ್ಪ ಆಕರ್ಷಣೆಯಾದರೂ ಇರುತ್ತದೆ. ಆದರೆ ಅತಿ ತೆಳ್ಳಗೆ ಇದನ್ನು `ಬಡಕಲು’ ಎಂದು ಹೇಳಬಹುದು. ದೇಹ ಬಡಕಲಾಗಿಬಿಟ್ಟರೆ ಅದರಲ್ಲಿ ಯಾವುದೇ ಚೈತನ್ಯವಾಗಲಿ, ಆಕರ್ಷಣೆಯಾಗಲಿ ಇರುವುದಿಲ್ಲ.
ದೇಹದಲ್ಲಿ ದುರ್ಬಲತೆ ಉಂಟಾಗಲು ಅನೇಕ ಕಾರಣಗಳಿರುತ್ತವೆ. ಕೆಲವರು ಹುಟ್ಟಿನಿಂದಲೇ ದುರ್ಬಲರಾಗಿರುತ್ತಾರೆ. ಕಡಿಮೆ ಆಹಾರ ಸೇವನೆ, ಚಿಕ್ಕವಯಸ್ಸಿನಲ್ಲಿಯೇ ಮದುವೆ ಮತ್ತು ಬೇಗ ಮಕ್ಕಳಾಗುವುದು ಇಲ್ಲವೇ ದೇಹದಲ್ಲಿ ವಿಟಮಿನ್ ಮತ್ತು ಕ್ಯಾಲ್ಶಿಯಂನ ಕೊರತೆ ಹಾಗೂ ರಕ್ತಹೀನತೆಯಿಂದಾಗಿ ಸದಾ ಒತ್ತಡದಲ್ಲಿರುವುದು ಈ ಎಲ್ಲ ಕಾರಣಗಳಿಂದ ದೇಹ ದುರ್ಬಲಗೊಳ್ಳುತ್ತದೆ.
ಒಮ್ಮೊಮ್ಮೆ ತೆಳ್ಳಗೆ ಕಾಣಬೇಕೆಂಬ ಹಂಬಲದಿಂದ ಮಾಡುವ ಡಯೆಟಿಂಗ್ ದೇಹಕ್ಕೆ ಲಾಭಕರವಾಗಿ ಪರಿಣಮಿಸುವುದಿಲ್ಲ. ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವದ ಇತರೆ ದೇಶಗಳಲ್ಲೂ ತೆಳ್ಳಗಾಗುವ ಮೋಹದಲ್ಲಿ ಪೌಷ್ಟಿಕ ಆಹಾರದಿಂದ ದೂರ ಉಳಿಯುತ್ತಿದ್ದಾರೆ.
ವೈದ್ಯರ ಅಭಿಪ್ರಾಯದಲ್ಲಿ ನಿಮ್ಮ ದೇಹದ ಎತ್ತರಕ್ಕನುಗುಣವಾಗಿ ತೂಕ ಶೇ.30ರಷ್ಟು ಕಡಿಮೆಯಿದ್ದಲ್ಲಿ ನೀವು ನಿಮ್ಮ ದೇಹದ ಬಗ್ಗೆ ಗಮನ ಕೊಡುವುದು ಅತ್ಯವಶ್ಯ. ಎಷ್ಟೋ ಸಲ ನೀವು ಅನೋರೇಸಿಯಾ ನರ್ವೋಸಾ ಕಾಯಿಲೆಗೆ ತುತ್ತಾಗಬಹುದು. ಇಂತಹದರಲ್ಲಿ ವ್ಯಕ್ತಿಗೆ ಹಸಿಗಾಗುವುದಿಲ್ಲ. ಆಗ ದೇಹ ದುರ್ಬಲಗೊಳ್ಳುತ್ತದೆ.
ನೀವು ಆಕರ್ಷಕವಾಗಿ ಕಾಣಬೇಕೆಂಬ ಆಸಕ್ತಿಯುಳ್ಳವರಾಗಿದ್ದರೆ, ಎಲ್ಲಕ್ಕೂ ಮುಂಚೆ ನಿಮ್ಮ ದುರ್ಬಲತೆಯನ್ನು ದೂರಗೊಳಿಸಬೇಕು. ಅದನ್ನು ದೂರಗೊಳಿಸಬೇಕೆಂದರೆ ನಿಮ್ಮ ಆಹಾರದಲ್ಲಿ ಸುಧಾರಣೆ ತಂದುಕೊಳ್ಳಬೇಕು. ನಿಮ್ಮ ಆಹಾರದಲ್ಲಿ ಹಾಲು, ಮೊಸರು ತುಪ್ಪ, ಬೆಣ್ಣೆ, ಜೇನುತುಪ್ಪ, ಒಣಹಣ್ಣುಗಳು, ತಾಜಾಹಣ್ಣುಗಳು, ಸೋಯಾಬೀನ್, ಶೇಂಗಾಕಾಳು ಮುಂತಾದವನ್ನು ನಿಮ್ಮ ಆಹಾರದಲ್ಲಿ ಸೇರ್ಪಡೆ ಮಾಡಿಕೊಳ್ಳಿ.
ವೈದ್ಯರ ಸಲಹೆಯ ಮೇರೆದೆ ವಿಟಮಿನ್ `ಬಿ’ ಕಾಂಪ್ಲೆಕ್ಸ್ ಮತ್ತು ವಿಟಮಿನ್ `ಸಿ’ ಕೂಡ ಸೇರ್ಪಡೆ ಮಾಡಿಕೊಳ್ಳಬಹುದು.
ವಿಟಮಿನ್ `ಬಿ’ ಕಾಂಪ್ಲೆಕ್ಸ್ ಹಾಗೂ ವಿಟಮಿನ್ `ಸಿ’ಯನ್ನು ನಿಯಮಿತವಾಗಿ ತೆಗೆದುಕೊಂಡರೆ ನಿಮಗೆ ಸಾಕಷ್ಟು ಹಸಿವೆಯಾಗುತ್ತದೆ. ನೀವು ಉಪವಾಸ ಹಾಗೂ ಡಯೆಟಿಂಗ್‌ನ್ನು ಹೆಚ್ಚಾಗಿ ಮಾಡಬೇಡಿ.