ಕನ್ನಡ ಚಿತ್ರರಂಗ ಇದೀಗ ಮುಹೂರ್ತಗಳ ಸಂಭ್ರಮವನ್ನು ಆಚರಿಸುತ್ತಿದೆ. ಆಷಾಢಕ್ಕೂ ಮೊದಲೇ ಮುಹೂರ್ತದ ಮಳೆ ಸುರಿಯುತ್ತಿದೆ. ಪರಂಪರೆಯಾಗಿ ನಡೆದುಕೊಂಡು ಬಂದಿರುವವಂತೆ, ಸಿನಿಮಾ ಮಂದಿ ಆಷಾಢ ಮಾಸದಲ್ಲಿ ಯಾವುದೇ ಚಿತ್ರವನ್ನು ಪ್ರಾರಂಭ ಮಾಡುವುದಿಲ್ಲ. ಹಾಗಾಗಿ ಆಷಾಢ ಮಾಸ ಬರುವುದಕ್ಕೆ ಮೊದಲೇ ತಮ್ಮ ಹೊಸ ಸಿನಿಮಾಗೆ ಮುಹೂರ್ತ ಫಿಕ್ಸ್ ಮಾಡಿಬಿಡುತ್ತಾರೆ. ಈ ವರ್ಷ ಸಿನಿಮಾರಂಗಕ್ಕೆ ಹೊಸಬರ ಆಗಮನ ಹೆಚ್ಚಾಗುತ್ತಿರುವುದರ ಜೊತೆಗೆ ರಾಜಕೀಯ ರಂಗದ ಧುರೀಣರ ಮಕ್ಕಳು ರಾಜಕೀಯ ರಣರಂಗವನ್ನು ಬಿಟ್ಟು ಸಿನಿಮಾ ರಂಗದಲ್ಲಿ ಹೋರಾಟಕ್ಕೆ ಇಳಿಯುತ್ತಿರುವುದು ವಿಶೇಷ.
ರಾಜಕಾರಣಿ ರೇವಣ್ಣ ಅವರ ಪುತ್ರ ಅನೂಪ್ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. `ಲಕ್ಷ್ಮಣ’ ಎಂದು ಚಿತ್ರಕ್ಕೆ ನಾಮಕರಣ ಮಾಡಲಾಗಿದೆ. ಕನ್ನಡದ ಯಶಸ್ವೀ ನಿರ್ದೇಶಕ ಆರ್. ಚಂದ್ರು ನಿರ್ದೇಶಿಸುತ್ತಿದ್ದಾರೆ.
`ಲಕ್ಷ್ಮಣ’ ಸಿನಿಮಾ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್ ವುಡ್‌ನ ಟಾಪ್ ಸ್ಟಾರ್‌ಗಳು, ನಿರ್ದೇಶಕರು, ನಿರ್ಮಾಪಕರು, ನಟರು ಎಲ್ಲರೂ ಆಗಮಿಸಿ `ಲಕ್ಷ್ಮಣ’ ಚಿತ್ರದ ನವ ನಾಯಕ ಅನೂಪ್‌ಗೆ ಶುಭ ಕೋರಿದ್ದಾರೆ.
ಸ್ಟಾರ್ ಆಗುವ ಎಲ್ಲ ಲಕ್ಷಣಗಳನ್ನೂ ಹೊಂದಿರುವ ಅನೂಪ್ ತನ್ನ ಮೊದಲ ಚಿತ್ರದಲ್ಲೇ ರಫ್ ಅಂಡ್ ಟಫ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ರಾಜಕಾರಣಿ ಎಚ್.ಎಂ. ರೇವಣ್ಣ ತುಂಬು ಹೃದಯದಿಂದಲೇ ತಮ್ಮ ಮಗ ಅನೂಪ್‌ನನ್ನು ಒಬ್ಬ ಒಳ್ಳೆಯ ನಟನಾಗಿ ಸಿನಿಮಾ ರಂಗದಲ್ಲಿ ಬೆಳಗಲಿ ಎಂದು ಹಾರೈಸುತ್ತಾರೆ. ತನ್ನ ಬೆರಳು ಹಿಡಿದು ನಡೆಯುತ್ತಿದ್ದ ಹುಡುಗ ತನ್ನ ಭುಜದೆತ್ತರಕ್ಕೆ ಬೆಳೆದಾಗ ಅವನ ಭವಿಷ್ಯ ರೂಪಿಸಲು ತಂದೆ ಪರಿತಪಿಸುತ್ತಾನೆ. ಹಾಗೆಯೇ ನನ್ನ ಮಗ ಅನೂಪ್ ಒಬ್ಬ ಕಲಾವಿದನಾಗಿ ಕಲಾಸೇವೆ ಮಾಡಲು ಬಯಸುತ್ತಿದ್ದಾನೆ. ಮಕ್ಕಳು ಇಷ್ಟಪಟ್ಟ ಕ್ಷೇತ್ರವನ್ನು ಪ್ರೋತ್ಸಾಹಿಸುವುದು ತಂದೆಯಾದ ನನ್ನ ಕರ್ತವ್ಯ. ಎಲ್ಲ ರೀತಿಯ ತರಬೇತಿ ಪಡೆದು ಬೆಳ್ಳಿತೆರೆಗೆ ಬಂದಿದ್ದಾನೆ. ಅನೂಪ್‌ನನ್ನು ಹಾರೈಸಿ ಎಂದು ರೇವಣ್ಣ ಕನ್ನಡಿಗರ ಮಡಿಲಲ್ಲಿ ತಮ್ಮ ಮಗನನ್ನು ಹಾಕಿದ್ದಾರೆ.
`ಲಕ್ಷ್ಮಣ’ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಯಶಸ್ವಿ ನಿರ್ದೇಶಕ ಆರ್. ಚಂದ್ರು ಮಾತನಾಡುತ್ತಾ, “ಸಣ್ಣ ಹಳ್ಳಿಯಿಂದ ಬಂದ ಒಬ್ಬ ರೈತನ ಮಗ ನಾನು. ಸಿನಿಮಾರಂಗ ಮತ್ತು ಮಾಧ್ಯಮರಂಗ ನನ್ನನ್ನು ರಾಜ್ಯ ಪ್ರಶಸ್ತಿಯವರೆಗೂ ಕರೆದುಕೊಂಡು ಹೋಗಿದೆ. ತೆಲುಗು ಚಿತ್ರರಂಗದಲ್ಲೂ ನಿರ್ದೇಶಕನಾಗಿ ಗುರುತಿಸಿಕೊಳ್ಳುವಂತೆ ಎಲ್ಲರೂ ಪ್ರೋತ್ಸಾಹಿಸಿದ್ದೀರಿ. ಬದುಕು ನಿಂತ ನೀರಾಗಬಾರದು, ಹರಿವ ನೀರಾಗಬೇಕು ಎಂಬಂತೆ ನನಗಿಷ್ಟೆಲ್ಲಾ ಕೊಟ್ಟ ನಿಮಗೆಲ್ಲ ನಾನೊಂದು ಪುಟ್ಟ ಕೊಡುಗೆಯಾಗಿ ಅನೂಪ್‌ನನ್ನು ಪರಿಚಯಿಸಿ ಅರ್ಪಿಸುತ್ತಿದ್ದೇನೆ.” ಎಂದು ಭಾವುಕರಾಗಿ ಹೇಳುತ್ತಾರೆ.
ಅದ್ಧೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ಆರಂಭ ಫಲಕ ತೋರಿಸಿ ಟೀಸರ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹೊಸ ಪ್ರತಿಭೆಗಳಿಗೆ ಗಾಡ್ ಫಾದರ್ ಆಗಿರುವ ಆರ್. ಚಂದ್ರು `ಲಕ್ಷ್ಮಣ’ ಚಿತ್ರದ ಬಗ್ಗೆ ತುಂಬಾನೆ ಉತ್ಸಾಹದಿಂದ ನಮ್ಮೊಂದಿಗೆ ಮಾತನಾಡಿದರು.
`ಗುರಿ ಇಟ್ರೆ ಮುಟ್ದೇ ಬಿಡೋಲ್ಲಾ…. ಗೆರೆ ಹಾಕಿದ್ರೆ ದಾಟಕ್ಕೆ ಬಿಡೋಲ್ಲ….’ ಇದು ನಮ್ಮ `ಲಕ್ಷ್ಮಣ’ ಚಿತ್ರದ ಡೈಲಾಗ್ ಎಂದು ಖುಷಿಯಿಂದ ಹೇಳಿಕೊಂಡ ಚಂದ್ರು ಅವರು `ಲಕ್ಷ್ಮಣ’ ಚಿತ್ರದ ಬಗ್ಗೆ ಇನ್ನಷ್ಟು ವಿಷಯ ಹೊರ ಹಾಕಿದರು.
ನಾಗಚೈತನ್ಯ ಜೊತೆ ತೆಲುಗು ಚಿತ್ರ ಮಾಡಬೇಕಿತ್ತು. ಕನ್ನಡದಲ್ಲಿ ಶಿವಣ್ಣ ಅವರೊಂದಿಗೆ ಬಾದ್‌ಶಾ ಮಾಡಬೇಕಿತ್ತು. ಸ್ಕ್ರಿಪ್ಟ್ ರೆಡಿ ಮಾಡ್ತಾ ಇದೀವಿ. ಆಗ ರೇವಣ್ಣ ಸಾರ್ ಫೋನ್ ಮಾಡಿ ಮೀಟಿಂಗ್‌ಗೆ ಕರೆದರು. ಚಂದ್ರು ನನ್ನ ಮಗ ಬುದ್ಧಿವಂತ. ಕಲೆ ಬಗ್ಗೆ ಆಸಕ್ತಿ ಜಾಸ್ತಿ. ಸಿನಿಮಾ ಲ್ಯಾಂಡಿಗೆ ಕಳಿಸೋಣ ಅಂದುಕೊಂಡಿದ್ದೀನಿ. ನೀನೇ ಲಾಂಚ್ ಮಾಡಬೇಕು ಅಂದರು. ಶಿವಣ್ಣ ಅವರ ಜೊತೆ ಡಿಸ್ಕಸ್ ಮಾಡಿದೆ. ನವೆಂಬರ್‌ನಲ್ಲಿ `ಬಾದ್‌ಶಾ’ ಮಾಡೋಣ ಅಂತ ಗ್ರೀನ್ ಸಿಗ್ನಲ್ ಕೊಟ್ಟರು. ರೇವಣ್ಣ ಅವರು ಸಿನಿಮಾರಂಗಕ್ಕೆ ಚಿರಪರಿಚಿತರು. ಅದೂ ಅಲ್ಲದೇ `ಬಾದ್‌ಶಾ’ ನಿರ್ಮಾಪಕರಾದ ಮೈಲಾರಿ ತಿಪಟೂರು ಕೂಡಾ ರೇವಣ್ಣ ಅವರ ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಹಾರೈಸಿದ್ದರು.
ರೇವಣ್ಣ ತಮ್ಮ ಮಗನನ್ನು ಸಿನಿಮಾರಂಗಕ್ಕೆ ಪರಿಚಯಿಸುವ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಚಂದ್ರು ಎಲ್ಲರಿಗೂ ಸಕ್ಸಸ್ ಕೊಡುತ್ತಾರೆ. ಸಿನಿಮಾ ಮುಗಿದ ಮೇಲೂ ಕಡೆಯತನಕ ಜೊತೆಯಲ್ಲಿ ಇರ್ತಾರೆ. ಲಾಂಚಿಂಗ್‌ಗೆ ಕನ್ನಡದ ನಿರ್ದೇಶಕರೇ ಬೇಕು ಅಂತ ರೇವಣ್ಣ ನಿರ್ಧರಿಸಿದ್ದರು. ಹೊಸಬರ ಜೊತೆ ಕೆಲಸ ಮಾಡೋದು ನನಗಿಷ್ಟ. ಇಂಡಸ್ಟ್ರಿಯಲ್ಲಿ ಚಂದ್ರುವನ್ನು ನಂಬಿದ್ರೆ ಲಾಸ್‌ಆಗೋಲ್ಲ ಎನ್ನುವ ನಂಬಿಕೆ ಇದೆ. ಮೊದಲ ಬಾರಿಗೆ ಅನೂಪ್‌ನನ್ನು ನೋಡಿದಾಕ್ಷಣ ಸೂರ್ಯ ಮತ್ತು ವಿಜಯ್ ಇಬ್ಬರ ಮಿಶ್ರಣ ಅನೂಪ್ ಅನಿಸಿತು. ಮಾಸ್ ಹೀರೋ ಆಗ್ತಾನೆ ಎನಿಸಿತು. ನಮ್ಮ ಹುಡುಗ ಅನಿಸಿಬಿಡ್ತಾನೆ. ಅದಕ್ಕಾಗಿ ಆ್ಯಕ್ಷನ್ ಹೀರೋ ಅಂತ ನಾಮಕಾರಣ ಮಾಡಿಬಿಟ್ಟೆ.
ಜುಲೈ 1 ರಿಂದ ಶೂಟಿಂಗ್ ಶುರುವಾಗಿದೆ. ನಾಯಕಿ ಪಾತ್ರಕ್ಕೆ ಕನ್ನಡದವರನ್ನೇ ಹಾಕುವ ಆಸೆ. ನೋಡಬೇಕು ಎಂದಷ್ಟೇ ಹೇಳಿ ಚಂದ್ರು ತಮ್ಮ ಕೆಲಸದಲ್ಲಿ ನಿರತರಾದರು. ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ನವ ನಾಯಕ ಅನೂಪ್ ಜೊತೆಗಿನ ಮಾತುಕಥೆ ಹೀಗಿತ್ತು :
ನಟನಾಗಬೇಕೆಂಬ ಕನಸು ಯಾವಾಗ ಹುಟ್ಟಿತು?
ಚಿಕ್ಕವಯಸ್ಸಿನಿಂದಲೇ ನಾನೊಬ್ಬ ನಟನಾಗಬೇಕೆಂದು ಕನಸು ಕಂಡಿದ್ದೆ. ಎಲ್ಲ ನಾಯಕರ ಸಿನಿಮಾಗಳನ್ನು ನೋಡುತ್ತಿದ್ದೆ. ಅವರಂತೆ ನಟಿಸಲು ಟ್ರೈ ಮಾಡುತ್ತಿದ್ದೆ. ನಟನಾಗಲು ನಾನು ಎಲ್ಲ ತಯಾರಿ ಮಾಡಿಕೊಂಡೆ. ಡ್ಯಾನ್ಸು, ಫೈಟ್, ಚೈನಾಗೆ ಹೋಗಿ ಕುಂಗ್‌ಫೂ ಕಲಿತೆ. ಡ್ರಾಮಾಗಳಲ್ಲಿ ನಟಿಸುತ್ತಿದ್ದೆ. ಈಗ ಅಭಿನಯ, ಜಾನಪದ ಶೈಲಿ ನೃತ್ಯ, ಹಿಪ್‌ಹಾಪ್, ಬಾಲಿವುಡ್ ಸ್ಟೈಲ್ ಡ್ಯಾನ್ಸ್, ಆ್ಯಕ್ಷನ್ ಟ್ರೇನಿಂಗ್ ಎಲ್ಲ ಕಲಿಯುತ್ತಿದ್ದೇನೆ.
ಉಳಿದೆಲ್ಲ ನಟರಿಗಿಂತ ನೀವು ಹೇಗೆ ಡಿಫರೆಂಟ್ ಆಗಿ ನಿಲ್ಲುವ ಆಸೆ?
ಡಿಫರೆಂಟ್ ಅನ್ನುವುದಕ್ಕಿಂತ, ನಾನು ಅಂದುಕೊಂಡಿರುವಂತೆ ನಾನು ನನ್ನ ಕೆಲಸಕ್ಕೆ ಫುಲ್ ಎಫರ್ಟ್ ಹಾಕಬೇಕಿದೆ. ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಕೊಡಬೇಕು. ನನ್ನಲ್ಲಿರುವ ಮೈನಸ್‌ನ್ನು ಪ್ಲಸ್ ಮಾಡಿಕೊಳ್ಳುವ ಪ್ರಯತ್ನ.
ಮಚ್ಚು ಹಿಡ್ಕೊಂಡ್ ಎಂಟ್ರಿ ಆಗುತ್ತಿದ್ದೀರಾ?
ರೌಡಿಸಂ ಅಲ್ಲ, ಕೆಲವು ಸಲ ಒಳ್ಳೆಯ ಕೆಲಸಕ್ಕೂ ಈ ರೂಪ ತಾಳಬೇಕಾಗುತ್ತದೆ. ಮಚ್ಚು ಹಿಡಿದೋರೆಲ್ಲ ರೌಡಿಗಳಲ್ಲ. ಈ ಚಿತ್ರದ ಮೂಲಕ ಒಂದೊಳ್ಳೆ ಮೆಸೇಜ್ ಕೊಡ್ತೀವಿ.
ನಿಮ್ಮ ಮೆಚ್ಚಿನ ಹೀರೋ?
ಎಲ್ಲರೂ ನನ್ನ ಅಚ್ಚುಮೆಚ್ಚು. ನಾನು ಎಲ್ಲ ಭಾಷೆಯ ಚಿತ್ರಗಳನ್ನೂ ನೋಡ್ತೀನಿ.
ಹವ್ಯಾಸ….?
ಕುಂಗ್‌ಫೂ, ಡ್ರೈವಿಂಗ್, ಕಾರ್ ಕ್ರೇಜ್ ತುಂಬಾ ಇದೆ. ವಿಂಟೇಜ್ ಕಾರ್ ಮತ್ತು ಫಾಸ್ಟ್ ಕಾರುಗಳ ಬಗ್ಗೆ ವಿಶೇಷವಾದ ಆಸಕ್ತಿ ಇದೆ. ಪುಟ್ಟ ಹುಡುಗನಿಂದಲೇ ಡ್ರೈವಿಂಗ್ ಕಲಿತಿದ್ದೆ. ವೇಗವಾಗಿ ಓಡಿಸೋದಂದ್ರೆ ತುಂಬಾ ಇಷ್ಟ. ಕಾರ್‌ಗಳ ಬಗ್ಗೆ ವಿಶೇಷವಾದ ಆಸಕ್ತಿ ಇರೋದ್ರಿಂದ ದಯಾನಂದ ಸಾಗರ್ ಕಾಲೇಜಿನಲ್ಲಿ ಆಟೋ ಮೊಬೈಲ್ ಎಂಜಿನಿಯರಿಂಗ್ ಮಾಡುತ್ತಿದ್ದೇನೆ, ಎಂದು ಹೇಳು ಅನೂಪ್ ಸ್ಯಾಂಡಲ್ ವುಡ್‌ನಲ್ಲಿ ಆ್ಯಕ್ಷನ್ ಹೀರೋ ಆಗಿ ಮಿಂಚಲಿ ಎಂದು ಹಾರೈಸೋಣ.
– ಸರಸ್ವತಿ ಜಾಗೀರ್ದಾರ್