ಗೆಳೆಯರಾದ ರಾಜು ರಾಮು ಬಹಳ ಹೊತ್ತಿನಿಂದ ಹರಟೆ ಹೊಡೆಯುತ್ತಿದ್ದರು.

ರಾಜು : ಅಲ್ಲಿ ನೋಡು…. ಒಬ್ಬ ಅಮೆರಿಕನ್‌ ಚಂದ್ರನ ಮೇಲೆ ಇಳಿಯುತ್ತಿದ್ದಾನೆ.

ರಾಮು : ಏನು ನೋಡಲಿ ನಿನ್‌ ತಲೆ…. ಮೊನ್ನೆ ನಾನು ಚಂದ್ರಮಂಡಲಕ್ಕೆ ಹೋಗಿದ್ದಾಗ ಅಲ್ಲೇ ಕನ್ನಡಕ ಮರೆತು ಬಂದುಬಿಟ್ಟಿದ್ದೆ.

 

ಕಿರಣ್‌ : ಇವತ್ತು ನನಗೆ ಕೇವಲ 5/ ರೂ.ಗೆ 3 ಬಾಳೆಹಣ್ಣು ಸಿಕ್ಕಿತು ಗೊತ್ತಾ?

ವರುಣ್‌ : ಈ ಕಲಿಯುಗದಲ್ಲಿ ಅದು ಹೇಗೆ ಸಾಧ್ಯ?

ಕಿರಣ್‌ : ಬಾಳೆಹಣ್ಣಿನ ಗಾಡಿಯವನು 1 ಡಝನ್‌ ಹಣ್ಣಿಗೆ 60/ ರೂ. ಅಂದ. ಸರಿ ಅಂತ ನಾನು 5/ ರೂ. ಕೊಟ್ಟು ಒಂದು ಹಣ್ಣು ತಗೊಂಡೆ. ಅವನು ಆ ಕಡೆ ತಿರುಗಿದ್ದ ಅಂತ ಇನ್ನೊಂದು ಹಣ್ಣು ತಗೊಂಡು ಓಡತೊಡಗಿದ. ಅದನ್ನು ಗಮನಿಸಿದ ಅವನು ಕೋಪದಿಂದ ಇನ್ನೊಂದು ಹಣ್ಣು ತೆಗೆದು ನನ್ನತ್ತ ಬೀಸಿದ. ಬಿಡ್ತೀನಾ….? ಅದನ್ನೂ ಕರೆಕ್ಟ್ ಆಗಿ ಕ್ಯಾಚ್‌ ಹಿಡಿದೆ!

 

ವಿಮಲಮ್ಮ : ಅಲ್ವೋ ಪರಮೇಶಿ, ನಿನಗೆ ಪ್ರಾಕ್ಟಿಕಲ್ಸ್ ಎಗ್ಸಾಮ್ ಇದೆ ಅಂತ ಕಾಲೇಜಿಗೆ ಹೊರಟಿದ್ದಿ. ಹೊರಗೆ ನೋಡಿದ್ರೆ ರಾಜಕೀಯದ ಗಲಭೆಯಿಂದ ಗೋಲಿಬಾರ್‌ ನಡೆದು ಎಲ್ಲಾ ಕಡೆ ಶಾಲಾ ಕಾಲೇಜು ರಜೆ ಅಂತಿದ್ದಾರೆ…. ಮತ್ತೆ ನೀನೆಲ್ಲಿಗೆ ಹೊರಟಿದ್ದಿ ಅಂತ….?

ಪರಮೇಶಿ : ಅದೇಮ್ಮ ನಾನು ಹೇಳೋದೂ… ನಾನು ರಾಜನೀತಿ ಶಾಸ್ತ್ರ (ಪೊಲಿಟಿಕಲ್ ಸೈನ್ಸ್)ದ ವಿದ್ಯಾರ್ಥಿ. ಹೀಗಾಗಿ ಇದುವೇ ನನ್ನ ಪ್ರಾಕ್ಟಿಕಲ್ಸ್!

 

ಸಾಹುಕಾರ ಸಿದ್ದಪ್ಪ ಸೋಮಣ್ಣನಿಗೆ ಸಾಲ ಕೊಟ್ಟು ಅದನ್ನು ವಾಪಸ್ಸು ಪಡೆಯಲೆಂದು ಅಲೆದಲೆದೂ ಸಾಕಾಗಿ ಹೋಯಿತು. 6 ತಿಂಗಳಾದರೂ ಸೋಮಣ್ಣ ಸಾಲ ಹಿಂತಿರುಗಿಸುವ ಲಕ್ಷಣ ಕಾಣಲಿಲ್ಲ. ಬಡ್ಡಿನೂ ಕೊಡುತ್ತಿರಲಿಲ್ಲ. ಸಿದ್ದಪ್ಪನಿಗೆ ಸಾಕು ಸಾಕಾಗಿತ್ತು ಸಿದ್ದಪ್ಪ : ಸೋಮಣ್ಣ, ಹಾಳಾಗಿ ಹೋಗಲಿ. ನಾನು 10 ಸಾವಿರದಲ್ಲಿ ಅರ್ಧ ಕೊಟ್ಟಿದ್ದನ್ನು ಮರೆತು ಬಿಡ್ತೀನಿ. ಉಳಿದ 5 ಸಾವಿರವನ್ನಾದರೂ ಕೊಡು.

ಸೋಮಣ್ಣ : ಸಾಹುಕಾರ್ರೆ…. ಅಷ್ಟು ವಿಶಾಲ ಮನೋಭಾವದಿಂದ ಮೊದಲರ್ಧದ ಸಾಲವನ್ನು ನೀವು ಮರೆತಿರುವಂತೆ ಉಳಿದರ್ಧದ ಸಾಲವನ್ನು ನಾನೂ ಮರೆತುಬಿಡ್ತೀನಿ ಬಿಡಿ, ಇನ್ನೇಕೆ ಚಿಂತೆ?

 

ವಿನುತಾ : ಡಿಯರ್‌, ನೀನು ನನ್ನ ಬಾಯ್‌ ಫ್ರೆಂಡ್‌ ಅಂತ ಮನೆಯವರಿಗೆ ಹೇಗೋ ತಿಳಿದುಹೋಗಿದೆ. ಆದ್ದರಿಂದ ಅಪ್ಪಿತಪ್ಪಿಯೂ ನಮ್ಮ ಬೀದಿ ಕಡೆ ಸುಳಿಯಬೇಡ, ನಮ್ಮಣ್ಣನ ಕೈಗೆ ಸಿಕ್ಕಿಹಾಕಿಕೊಂಡ್ರೆ ಬಲೇ ಫಜೀತಿ!

ವರುಣ್‌ : ಅಷ್ಟೇ ತಾನೇ? ಕದ್ದೋಡುವಾಗ ಮನೆಯವರೂ, ಗುದ್ದೊಡುವಾಗ ಟ್ರಾಫಿಕ್‌ ಪೊಲೀಸರೂ ನನ್ನ ಹಿಡಿಯಲಾಗಲಿಲ್ಲ. ಇನ್ನು ನಿಮ್ಮಣ್ಣ ಯಾವ ಮಹಾ…..?

 

ಮಕ್ಕಳು ಸಂಜೆ ಮನೆ ಎದುರಿನ ರಸ್ತೆಯಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಆಗ ಚೆಂಡು ಎದುರು ಮನೆ ಅಂಗಳದೊಳಕ್ಕೆ ನುಗ್ಗಿಹೋಯಿತು. ಅದನ್ನು ಹುಡುಕಿ ತರುವ ಕೆಲಸ ಕಿಶೋರನದಾಗಿತ್ತು. ಕಿಶೋರ್‌ ಆ ಮನೆಯ ಗೇಟ್‌ ತೆರೆದು ಒಳಗೆ ಹೋಗಿ ಬಾಗಿಲು ಬಡಿದ.

ಕಿಶೋರ್‌ : ಅಂಕಲ್, ಯಾವುದಾದ್ರೂ ಬಾಲ್ ಸಿಕ್ಕಿತೇ?

ಅಂಕಲ್ : ಹೂಂ, ಯಾವುದೋ ಬಂದಹಾಗಿತ್ತು. ನೋಡು, ಇದೇನಾ ಅಂತ…?

ಕಿಶೋರ್‌ : ಅಂಕಲ್…. ನಿಮ್ಮ ಮನೆಯ ಕಿಟಕಿ ಗಾಜುಗಳು ಯಾವುದೂ ಒಡೆದಿಲ್ಲ ತಾನೇ?

ಅಂಕಲ್ : ಇಲ್ಲ ಬಿಡು.

ಕಿಶೋರ್‌ ತಕ್ಷಣ ಅವರ ಕೈಯಿಂದ ಆ ಬಾಲ್ ಕಿತ್ತುಕೊಳ್ಳುತ್ತಾ, “ಹಾಗಿದ್ರೇ ಈ ಬಾಲ್ ನಮ್ಮದೇ!” ಎಂದು ಓಡಿಬಿಡುವುದೇ?

 

ಮಾಲಾ ಶೀಲಾ ಬಹಳ ಹೊತ್ತಿನಿಂದ ಹರಟೆ ಹೊಡೆಯುತ್ತಿದ್ದರು. ಮಾತು ಎಲ್ಲೆಲ್ಲಿಗೋ ಹೋಗಿ ಮದುವೆಗೆ ಬಂತು.

ಮಾಲಾ : ನಾನಂತೂ ಗಟ್ಟಿ ನಿರ್ಧಾರ ಮಾಡಿಬಿಟ್ಟಿದ್ದೀನಿ. ನನಗೆ 25 ತುಂಬುವವರೆಗೂ ಖಂಡಿತಾ ಮದುವೆ ಆಗುವುದಿಲ್ಲ ಅಂತ.

ಶೀಲಾ : ನಾನೂ ಅಷ್ಟೇ…. ಮದುವೆ ಆಗುವವರೆಗೂ ನನಗೆ 25 ತುಂಬಿತು ಅಂತ ಹೇಳೋದೇ ಇಲ್ಲ!

 

ಕಿಲಾಡಿ ಕಿಟ್ಟಿ ರೋಡ್‌ ರೋಮಿಯೋ ಎಂದೇ ಕಾಲೇಜಿನಲ್ಲಿ (ಕು)ಖ್ಯಾತನಾಗಿದ್ದ. ಸ್ಮಿತಾ ಅವರ ಕಾಲೇಜಿಗೆ ಹೊಸದಾಗಿ ಬಂದು ಸೇರಿದ್ದಳು. ಕಿಟ್ಟಿ ಬಿಡ್ತಾನಾ? ಶುರು ಹಚ್ಚಿಕೊಂಡ.

ಕಿಟ್ಟಿ : ಹಾಯ್‌ ಡಾರ್ಲಿಂಗ್‌… ಹೊಸ ಅಡ್ಮಿಷನ್‌ ಅಂತೆ… ಸ್ವಲ್ಪ ಈ ಪ್ರೇಮಿಯ ಹೃದಯದಲ್ಲೂ ಅಡ್ಮಿಟ್‌ ಆಗಿಬಿಡು.

ಸ್ಮಿತಾ : ನಿನ್ನ ಮುಸುಡಿಗಿಷ್ಟು! ಇರು, ಚಪ್ಪಲಿ ಕಳಚಿ ಕೈಯಲ್ಲಿ ಹಿಡಿದು ಆಮೇಲೆ ಅಡ್ಮಿಟ್‌ ಆಗ್ತೀನಿ.

ಕಿಟ್ಟಿ : ಛೇ…ಛೇ… ಅಷ್ಟೊಂದು ತೊಂದರೆ ಯಾಕೆ? ನನ್ನ ಹೃದಯವೇನು ದೇವಾಲಯವೇ?

 

ರವಿ ಅಪರೂಪಕ್ಕೆ ಯಾವುದೋ ಹೋಟೆಲ್‌ಗೆ ಹೋದ. ಆರ್ಡರ್‌ ನೀಡಿ ಬಹಳ ಹೊತ್ತು ಕಾದರೂ ಮಾಣಿ ಇವನಿಗೆ ಯಾವ ತಿಂಡಿಯನ್ನೂ ತಂದುಕೊಡಲಿಲ್ಲ. ಕಾದೂ ಕಾದೂ ರೋಸಿ ಹೋದ ಮಾಣಿಯತ್ತ ತಿರುಗಿ ಕಿರುಚಿದ.

ರವಿ : ಏನಪ್ಪ… ಆರ್ಡರ್‌ ಕೊಟ್ಟು ಅರ್ಧ ಗಂಟೆ ಆಯ್ತು. ಇನ್ನೂ ಚೌಚೌ ಭಾತ್‌ ರೆಡಿ ಆಗಿಲ್ವಾ?

ಮಾಣಿ : ಸಾರ್‌, ಅದು ತಯಾರಾಗಿ 4 ದಿನ ಆಯ್ತು. ಬಹಳ ತಣ್ಣಗಾಗಿತ್ತು, ಬಿಸಿಯಾಗಲು ತಡವಾಯ್ತು. ಇನ್ನೇನು…. ಬಂದೇಬಿಡ್ತು!

 

ಒಬ್ಬ ಮರಿ ಪುಢಾರಿ ಪಬ್ಲಿಕ್‌ ಮಧ್ಯೆ ಟ್ರಾಫಿಕ್‌ ಪೊಲೀಸ್‌ ಕಡೆ ಕೆಕ್ಕರಿಸಿಕೊಂಡು ನೋಡುತ್ತಾ ದಬಾಯಿಸುತ್ತಿದ್ದ, “ಏಯ್‌… ಮೊದಲು ನನಗೆ ದಾರಿಬಿಡು! ನಾನು ಯಾರು ಅಂತ ಗೊತ್ತಾ….?”

ಟ್ರಾಫಿಕ್‌ ಪೊಲೀಸ್‌ ಸಾರ್ವಜನಿಕರನ್ನು ಉದ್ದೇಶಿಸಿ ಹೇಳಿದ, “ನೋಡಿ ಸ್ವಾಮಿ, ಈ ಮಹಾಶಯನಿಗೆ ತಾನ್ಯಾರು ಅಂತಾನೇ ಗೊತ್ತಿಲ್ಲವಂತೆ. ನಿಮ್ಮಲ್ಲಿ ಯಾರಿಗಾದರೂ ಗೊತ್ತಿದ್ದರೆ ತಿಳಿಸಿಕೊಡಿ, ದೊಡ್ಡ ಉಪಕಾರವಾಗುತ್ತೆ…..”

ನೈತಿಕ ಶಿಕ್ಷಣ (ಮಾರಲ್ ಸೈನ್ಸ್)ದ ಟೀಚರ್‌ ಮಕ್ಕಳಿಗೆ ಅತಿಥಿ ಸತ್ಕಾರದ ಮಹತ್ವ ತಿಳಿಸಿಕೊಟ್ಟ ನಂತರ ಕೇಳಿದರು, “ಮಕ್ಕಳೇ, ಈಗ ಹೇಳಿ. ಅಕಸ್ಮಾತ್‌ ನಿಮ್ಮ ಮನೆಗೆ ಯಾರಾದರೂ ನೆಂಟರು ಬಂದರೆ ಇಂದಿನ ಕಾಲಕ್ಕೆ ತಕ್ಕಂತೆ ಹೇಗೆ ಉಪಚರಿಸುತ್ತೀರಿ?”

ಕೊನೆಯ ಬೆಂಚಿನಿಂದ ಕೂಡಲೇ ಉತ್ತರ ಬಂದಿತು, “ಬನ್ನಿ, ಕುಳಿತುಕೊಳ್ಳಿ. ನೀರು ಆಮೇಲೆ ಕುಡಿಯುವಿರಂತೆ. ಮೊದಲು ನಿಮ್ಮ ಮೊಬೈಲ್ ‌ಕೊಡಿ ಚಾರ್ಜಿಂಗ್‌ ಮಾಡ್ತೀವಿ. ಕರೆನ್ಸಿ ಕಡಿಮೆ ಆಗಿದೆಯೇ? ಹಾಕಿಸಿ ಕೊಡ್ತೀವಿ. ನೆಟ್‌ ಸಹಾಯ ಬೇಕೇ? ನಮ್ಮ ಮನೆ ವೈಫೈ ಅಳವಡಿಸಿಕೊಳ್ಳಿ…. ಇತ್ಯಾದಿ.”

 

ರೋಗಿ : ಡಾಕ್ಟರ್‌, ಹಿಂದೊಮ್ಮೆ ನಾನು ಹಲ್ಲು ನೋವು ಎಂದು ಬಂದಿದ್ದಾಗ ಒಂದು ವಿಶಿಷ್ಟ ಬಗೆಯ ಹಲ್ಲುಪುಡಿ ಕೊಟ್ಟಿದ್ದಿರಿ. ದಯವಿಟ್ಟು ಈ ಸಲ ಮತ್ತೆ ಅದನ್ನೇ ಕೊಡಿ.

ದಂತ ವೈದ್ಯರು : ಛೇ….. ಛೇ…. ಈಗ ಅದರ ಸ್ಟಾಕ್‌ ಇಲ್ಲ ಬಿಡಿ. ಮತ್ತೆ ನೋಡೋಣ.

ರೋಗಿ : ಅದ್ಯಾಕೆ ಹಾಗೆ ಹೇಳ್ತೀರ?

ದಂತ ವೈದ್ಯರು : ಹಳೆಯ ರೋಗಿಗಳ ಕಿತ್ತ ಹಲ್ಲಿನಿಂದ ಮಾಡಿದ ಪುಡಿ ಅದಾಗಿತ್ತು, ಮತ್ತೆ ಸ್ಟಾಕ್‌ ಸೇರಲು ಸಾಕಷ್ಟು ಕಾಲಾವಕಾಶ ಬೇಕು.

 

ಟೀಚರ್‌ : ಗಿರೀಶ್‌, ನೀನು ರಸ್ತೆಯಲ್ಲಿ ಹೋಗುವಾಗ 10/ ಮತ್ತು 5/ ರ ಎರಡು ನೋಟು ಸಿಕ್ಕಿದರೆ ಯಾವುದನ್ನು ಮೊದಲು ಎತ್ತಿಕೊಳ್ಳುವೆ?

ಗಿರೀಶ್‌ : ನಾನೇನು ದಡ್ಡನೇ? 10/ ರ ನೋಟು.

ಟೀಚರ್‌ : ಮತ್ತೆ ರಾಜೇಶ್‌ ನೀನು..?

ರಾಜೇಶ್‌ : ನಾನು ಬಿಡ್ತೀನಾ? ಎರಡನ್ನೂ!

 

ಅರುಣ್‌ ತಲೆಗೆ ಗಾಯವಾಗಿತ್ತು. ಅವನು ತಕ್ಷಣ ಡಾಕ್ಟರ್‌ ಬಳಿ ಹೋದ.

ಡಾಕ್ಟರ್‌ : ಇದೆಲ್ಲ ಹೇಗೆ ನಡೆಯಿತು?

ಅರುಣ್‌ : ನಾನು ಕಷ್ಟಪಟ್ಟು ಗೋಡೆಗೆ ಮೊಳೆ ಹೊಡೆಯುತ್ತಿದ್ದೆ. ಅದು ಸರಿ ಹೋಗುತ್ತಿರಲಿಲ್ಲ. ಆಗ ನಮ್ಮ ಮಾವ ಬಂದು, `ಲೋ, ಮಾಡೋ ಕೆಲಸದಲ್ಲಿ ನೆಟ್ಟಗೆ ನಿನ್ನ ತಲೆ ಉಪಯೋಗಿಸು,’ ಅಂತ ಹೇಳಿದರು. ಮುಂದೆ ನಾನೇನು ಮಾಡಿರಬಹುದು ಅಂತ ನೀವೇ ಊಹಿಸಿಕೊಳ್ಳಿ…!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ