ಡ್ಯಾನ್ಸ್ ಫ್ಲೋರ್‌ನಲ್ಲಿ ಗಾಯತ್ರಿ ತನ್ನ ವುಡ್‌ಬಿ ಶೇಖರ್‌ನೊಂದಿಗೆ ಮೋಜಿನಿಂದ ಕುಣಿಯುತ್ತಿದ್ದಳು. ಯೌವನ ತುಂಬಿದ ಸುಂದರ ಶರೀರದ ಗಾಯತ್ರಿ ಪಾರ್ಟಿಯಲ್ಲಿ ಹಾಜರಾಗಿದ್ದ ಪ್ರತಿ ಯುವಕರ ಹೃದಯದ ಬಡಿತ ಏರಿಸುತ್ತಿದ್ದಳು.

ಶೇಖರ್‌ ತನ್ನ ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಕ್ಕಿದ್ದಂತೆ ಗಾಯತ್ರಿಯೊಂದಿಗೆ ತಾನು ಬೇಗ ಮದುವೆಯಾಗುವುದಾಗಿ ಘೋಷಿಸಿ ಎಲ್ಲ ಗೆಳೆಯರನ್ನೂ ಆಶ್ಚರ್ಯಪಡಿಸಿದ.

“ಈ ಸುಂದರ ಚಿಟ್ಟೆ ಕೊನೆಗೂ ಒಬ್ಬ ಶ್ರೀಮಂತ ಹುಡುಗನನ್ನು ತನ್ನ ಸೌಂದರ್ಯದ ಜಾಲದಲ್ಲಿ ಸಿಕ್ಕಿಸುವಲ್ಲಿ ಯಶಸ್ವಿಯಾದಳು. ಸಾಧಾರಣ ಫ್ಲ್ಯಾಟ್‌ನಲ್ಲಿ ವಾಸಿಸುವ ಈ ಹುಡುಗಿ ಈಗ ಅರಮನೆಯಲ್ಲಿ ರಾಣಿಯಾಗುತ್ತಾಳೆ,” ಗಾಯತ್ರಿ ತನ್ನ ಗೆಳೆಯರು ಈ ರೀತಿ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಪಾರ್ಟಿಯ ಸಂಪೂರ್ಣ ಆನಂದ ಪಡೆಯುತ್ತಿದ್ದಳು.

ಶೇಖರನ ಕಣ್ಣುಗಳಲ್ಲಿ ಪ್ರೀತಿಯಿಂದ ಇಣುಕಿ ನೋಡುತ್ತಾ ಗಾಯತ್ರಿ ಅವನು ಸ್ವಲ್ಪ ಹೊತ್ತಿನ ಮುಂಚೆ ತೊಡಿಸಿದ್ದ ವಜ್ರದುಂಗುರವನ್ನು ಮುತ್ತಿಕ್ಕಿ ಅವನ ಸದೃಢ ಶರೀರವನ್ನು ಬಳಸಿ ಕುಣಿಯತೊಡಗಿದಳು.

ಗಾಯತ್ರಿಯ ಸುಂದರ ಶರೀರದ ಸುವಾಸನೆ ಹಾಗೂ ಬೆಚ್ಚನೆಯ ಸ್ಪರ್ಶ ಶೇಖರನ ಭಾವನೆಗಳನ್ನು ಕೆರಳಿಸತೊಡಗಿತು. ಅವನ ಕಿವಿಯಲ್ಲಿ ತನ್ನ ಬಿಸಿಯುಸಿರನ್ನು ಬಿಡುತ್ತಾ ಗಾಯತ್ರಿ ಹೇಳಿದಳು, “ಐ ಲವ್ ಯು ಮೈ ಡಾರ್ಲಿಂಗ್‌.”

ಶೇಖರ್‌ ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೆ ಡ್ಯಾನ್ಸ್ ನಿಲ್ಲಿಸಿ ಗಾಯತ್ರಿಯನ್ನು ತನ್ನ ಬಾಹುಗಳಲ್ಲಿ ಹಿಡಿದು ಅವಳ ಗುಲಾಬಿ ತುಟಿಗಳ ಮೇಲೆ ತನ್ನ ತುಟಿಯನ್ನಿಟ್ಟು ದೀರ್ಘ ಚುಂಬನ ನೀಡಿದ.

ಶೇಖರನ ಗೆಳೆಯರು ಖುಷಿಯ ಆವೇಶದಲ್ಲಿ `ಹೋ’ ಎಂದು ಕೂಗಿ ಅವನ ಸಾಮರ್ಥ್ಯ ಹೆಚ್ಚಿಸಿದರು. ಗಾಯತ್ರಿ ಒಯ್ಯಾರದಿಂದ ಶೇಖರನ ಕೈ ಹಿಡಿದು ಕೆಳಗಿಳಿದಳು. ಶೇಖರ್‌ ಅವಳಿಗೆ ಕೂಲ್ ಡ್ರಿಂಕ್ಸ್ ತರಲು ಹೋದ. ಗಾಯತ್ರಿ ಫ್ರೆಶ್‌ ಆಗಲು ಟಾಯ್ಲೆಟ್‌ಗೆ ಹೋದಳು. ಸುಮಾರು 10 ನಿಮಿಷಗಳ ನಂತರ ಗಾಯತ್ರಿ ಟಾಯ್ಲೆಟ್‌ನಿಂದ ಹೊರಬಂದಾಗ ಎದುರಿಗೆ ಅವಳ ಹಳೆಯ ಪ್ರೇಮಿ ರೋಹಿತ್‌ ನಿಂತಿದ್ದ.

“ಕಂಗ್ರಾಟ್ಸ್ ಸ್ವೀಟಿ,” ರೋಹಿತ್‌ ಅವಳನ್ನು ತಡೆದು ಹೇಳಿದ.

“ಥ್ಯಾಂಕ್ಸ್ ಡಿಯರ್‌,” ಗಾಯತ್ರಿ ನಗುತ್ತಾ ಹೇಳಿ ಬೆರಳಲ್ಲಿ ತೊಟ್ಟ ವಜ್ರದುಂಗುರವನ್ನು ತೋರಿಸಿದಳು.

“ಗಾಯತ್ರಿ, ಶೇಖರನ ಜಾಗದಲ್ಲಿ ನಾನಿರಬೇಕಿತ್ತು….” ಗಾಯತ್ರಿಯನ್ನು ಆಸೆ ತುಂಬಿದ ಕಣ್ಣುಗಳಿಂದ ನೋಡುತ್ತಾ ರೋಹಿತ್‌ತನ್ನ ಮನದಾಸೆಯನ್ನು ವ್ಯಕ್ತಪಡಿಸಿದ.

“ನಿನಗೆ ಒಳ್ಳೆ ಅವಕಾಶ ಇತ್ತು. ಆಗ ನೀನು ಆ ಮಾಡೆಲ್ ಸಲುವಾಗಿ ನನ್ನನ್ನು ಬಿಟ್ಟು ಹೋದೆ. ನನ್ನನ್ನು ಕಳೆದುಕೊಂಡೆ ರೋಹಿತ್‌,” ಎಂದಳು.

“ಈಗ ಏನು ಮಾಡೋಕೂ ಆಗಲ್ವಾ? ನಾನು ಶೇಖರ್‌ಗಿಂತ ಸ್ಮಾರ್ಟ್‌ ಆಗಿದ್ದೀನಿ. ನೀನು ಅವನನ್ನು ಬಿಟ್ಟು ನನ್ನವಳಾಗು.”

“ನೀನು ಅವನಿಗಿಂತ ಸ್ಮಾರ್ಟ್‌ ಹೌದು. ಆದರೆ…..”

“ಅವನಷ್ಟು ಶ್ರೀಮಂತ ಅಲ್ಲ,” ರೋಹಿತ್‌ ಅವಳ ವಾಕ್ಯವನ್ನು ನಗುತ್ತಾ ಪೂರ್ತಿ ಮಾಡಿದ.

“ಹೌದು…ಹೌದು,” ಗಾಯತ್ರಿ ಜೋರಾಗಿ ನಕ್ಕಳು.

“ಸುಂದರವಾಗಿರೋ ಜೊತೆಗೆ ನೀನು ಇಂಟಲಿಜೆಂಟ್‌ ಕೂಡ.”

“ಥ್ಯಾಂಕ್ಸ್.”

“ಮತ್ತೊಮ್ಮೆ ಕಂಗ್ರಾಟ್ಸ್ ಸ್ವೀಟ್‌ ಹಾರ್ಟ್‌,” ಎಂದು ರೋಹಿತ್‌ ಕೈ ಚಾಚಿದ.

“ಥ್ಯಾಂಕ್ಸ್,” ಗಾಯತ್ರಿ ತನ್ನ ಕೈಯನ್ನು ಅವನ ಕೈಯಲ್ಲಿಟ್ಟಳು.

ಗಾಯತ್ರಿಯ ಕೈಯನ್ನು ಗಟ್ಟಿಯಾಗಿ ಹಿಡಿದ ರೋಹಿತ್‌ ನಗುತ್ತಾ ಹೇಳಿದ, “ಹಿಂದೆ ನಾವು ಒಟ್ಟಿಗೇ ಕಳೆದ ಕ್ಷಣಗಳನ್ನು ನೆನೆಸಿಕೊಂಡು ಇವತ್ತು ಪ್ರೀತಿಯಿಂದ ಒಂದು ಕಿಸ್‌ ಕೊಡು.”

“ನೋ….ನೋ,” ಗಾಯತ್ರಿ ಒಯ್ಯಾರದಿಂದ ಕುತ್ತಿಗೆ ಅತ್ತಿಂದಿತ್ತ ಆಡಿಸಿದಳು.

“ಪ್ಲೀಸ್‌…. ಪ್ಲೀಸ್‌.”

“ಇಲ್ಲ.”

“ಸರಿ. ನಿನ್ನ ಕೆನ್ನೆ ಮೇಲೆ ಒಂದು ಸಣ್ಣ ಕಿಸ್‌ ಕೊಡ್ತೀನಿ.”

“ಓ.ಕೆ,” ಎಂದು ಅವನನ್ನು ನಿವಾರಿಸಲು ಕೆನ್ನೆ ಮುಂದು ಮಾಡಿದಳು. ರೋಹಿತ್‌ ಮುಂದೆ ಬಂದು ಅವಳ ಕೆನ್ನೆಗೆ ಮುತ್ತಿಕ್ಕಿ ಥಟ್ಟನೆ ತೋಳುಗಳಲ್ಲಿ ಬಂಧಿಸಿದ. ಗಾಯತ್ರಿ ಬಿಡಿಸಿಕೊಳ್ಳಲು ಕೊಸರಾಡಿದಳು. ಅವಕಾಶ ನೋಡಿ ರೋಹಿತ್‌ ಬಲವಂತವಾಗಿ ಅವಳ ತುಟಿಯನ್ನು ಹೀರಿದ. ತನ್ನ ತುಟಿಗಳಿಗೆ ಪೆಟ್ಟಾಗುತ್ತದೆ ಹಾಗೂ ಗುಂಪಿನಲ್ಲಿ ತಮಾಷೆಯ ವಸ್ತುವಾಗುತ್ತೇನೆಂದು ಗಾಯತ್ರಿ ಅವನಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಲಿಲ್ಲ.

ಆಗಲೇ ಅಲ್ಲಿಗೆ ಶೇಖರ ಬಂದುಬಿಟ್ಟ. ತನಗೆ ನಿಶ್ಚಯವಾಗಿದ್ದ ಹುಡುಗಿಯನ್ನು ಹಳೆಯ ಪ್ರೇಮಿ ಬಾಹುಗಳಲ್ಲಿ ಬಂಧಿಸಿರುವುದನ್ನು ಕಂಡು ಅವನ ಮೈ ಉರಿಯಿತು.

“ಗಾಯತ್ರೀ!” ಕೋಪದಿಂದ ಅವನು ಕಿರುಚಿದಾಗ ರೋಹಿತ್‌ ಮುತ್ತು ಕೊಡುವುದನ್ನು ಅರ್ಧಕ್ಕೇ ಬಿಟ್ಟು ಗಾಯತ್ರಿಯನ್ನು ಮುಕ್ತಿಗೊಳಿಸಿದ.

“ಈ ನೀಚ ಬಲವಂತವಾಗಿ ನನಗೆ ಕಿಸ್‌ ಮಾಡಿದ್ದಾನೆ ಶೇಖರ್‌, ” ಬಿಡಿಸಿಕೊಂಡ ಕೂಡಲೇ ಕಿರುಚಿದ ಗಾಯತ್ರಿ ರೋಹಿತನ ಕೆನ್ನೆಗೆ ಬಾರಿಸಿದಳು.

“ಸತಿ ಸಾವಿತ್ರಿ ತರಹ ನಾಟಕ ಆಡಬೇಡ ಗಾಯತ್ರಿ,” ಅವಳ ಕೈಯನ್ನು ಹಿಡಿದು ತಿರುಚಿದ ರೋಹಿತ್‌ ಶೇಖರ್‌ಗೆ ಹೇಳಿದ, “ಗಲ್ಲಿ ಗಲ್ಲಿಯ ನೀರು ಕುಡಿದಿರೋ ಈ ಚಿಟ್ಟೇನ ನಂಬಿ ಇವಳನ್ನು ಮದುವೆಯಾಗೋ ಮೂರ್ಖತನ ಮಾಡಬೇಡ ಶೇಖರ್‌. ಈ ಗುಂಪಿನಲ್ಲಿ ಬೇಕಾದ್ರೆ ಇವಳ 4-5 ಹಳೆಯ ಪ್ರೇಮಿಗಳನ್ನು ತೋರಿಸ್ತೀನಿ. ಅವರು ಇವಳಿಗೆ ಏನು ಬೇಕಾದ್ರೂ ಮಾಡಬಹುದು. ಒತ್ತಾಯ ಮಾಡಬೇಕಾಗಿಲ್ಲ,” ಎನ್ನುತ್ತಾ ರೋಹಿತ್‌ ಗುಂಪಿನಲ್ಲಿ ಜಾಗ ಮಾಡಿಕೊಂಡು ಪಾರ್ಟಿ ಬಿಟ್ಟು ಹೊರಟುಹೋದ. ಗಾಯತ್ರಿಯನ್ನು ರೋಹಿತ್‌ ಬಾಹುಗಳಲ್ಲಿ ಬಂಧಿಸಿದ್ದಾಗ ಅವಳು ಬಿಡಿಸಿಕೊಳ್ಳಲು ಪ್ರಯತ್ನಿಸದೆ ಇದ್ದುದನ್ನು ಶೇಖರ್‌ ನೋಡಿದ್ದ. ಹೀಗಾಗಿ ಅವನು ಆ ದೃಶ್ಯಕ್ಕೆ ತಪ್ಪು ಅರ್ಥ ಕಲ್ಪಿಸಿಕೊಂಡು ಅವಳ ಮುಂದೆ ಹೋಗಿ ನಿಂತು ಕೋಪದಿಂದ ಗರ್ಜಿಸಿದ, “ಯೂ ಕ್ಯಾರೆಕ್ಟರ್‌ಲೆಸ್‌, ಶೇಮ್ ಲೆ‌ಸ್‌ ಬಿಚ್‌. ನಿನಗೆ ಈ ಉಂಗುರ ಧರಿಸೋ ಯೋಗ್ಯತೆ ಇಲ್ಲ. ಇದನ್ನು ಈಗಲೇ ವಾಪಸ್‌ಕೊಡು.”

“ಶೇಖರ್‌, ನನ್ನನ್ನು ನಂಬು.”

“ಶಟಪ್‌!” ಶೇಖರ್‌ ಕೋಪದಿಂದ ಕಿರುಚಿದ.

“ಅವನು ಹೇಳಿದ್ದನ್ನು ನಂಬಬೇಡ….”

ಆಗ ಶೇಖರ್‌ ಗಾಯತ್ರಿಯ ಕೆನ್ನೆಗೆ ರಪ್ಪೆಂದು ಹೊಡೆದ. ಗಾಯತ್ರಿ ಕುಸಿದು ಅಳತೊಡಗಿದಳು. ಶೇಖರ್‌ ಅವಳ ಬೆರಳಿನಿಂದ ಬಲವಂತವಾಗಿ ಉಂಗುರ ಕಿತ್ತುಕೊಂಡು ಎಲ್ಲರಿಗೂ ಕೇಳುವಂತೆ ಹೇಳಿದ, “ಈ ಲೋಯರ್‌ ಕ್ಲಾಸ್‌ ಹುಡುಗೀಗೆ ನಾನು ಐಶ್ವರ್ಯ ಹಾಗೂ ಗೌರವ ತುಂಬಿದ ಬದುಕನ್ನು ಕೊಡೋಣಾಂತಿದ್ದೆ. ಆದರೆ ನೋಡಿ, ಇವಳು ಎಷ್ಟು ಬೇಗ ತನ್ನ ನಿಜರೂಪ ಪ್ರದರ್ಶಿಸಿದ್ಲು. ಈ ಕ್ಷಣದಿಂದ ನನಗೂ ಇವಳಿಗೂ ಯಾವುದೇ ವಿಧವಾದ ಸಂಬಂಧ ಉಳಿದಿಲ್ಲ,” ಎಂದು ಗಾಯತ್ರಿಯನ್ನು ಅಳಲು ಬಿಟ್ಟು ಆಚೆ ಹೊರಟುಹೋದ.

samarpane-1

ಗಾಯತ್ರಿಗೆ ಸಹಾನುಭೂತಿ ತೋರಿಸಲು ಇಬ್ಬರು ಹುಡುಗಿಯರು ಹತ್ತಿರ ಬಂದರು. ಅವಳು ಅವರನ್ನು ತಳ್ಳಿ ಅಳುತ್ತಲೇ ಪಾರ್ಟಿ ಬಿಟ್ಟು ಆಚೆ ಹೊರಟಳು. ಮನೆಗೆ ಬಂದು ಅವಳು ತನ್ನ ತಾಯಿ ತಂದೆಗೆ ಒಳ್ಳೆಯ ಹುಡುಗನನ್ನು ನೋಡಿ ನನ್ನ ಮದುವೆ ಮಾಡಿ ಎಂದು ಹೇಳಿದಳು. ಅವಳು ಹೊಸ ಬದುಕನ್ನು ಆರಂಭಿಸಲು ನಿರ್ಧರಿಸಿದಳು.

ಸುಮಾರು 2 ತಿಂಗಳ ನಂತರ ಗಾಯತ್ರಿಯ ಜೀವನ ಸಂಗಾತಿಯಾಗಿ ವಸಂತ್‌ ಬಂದ. ಅವನು ಮಿಕ್ಸಿ ಪಾರ್ಟ್‌ಗಳನ್ನು ತಯಾರಿಸುವ ಬಿಸ್‌ನೆಸ್‌ ಮಾಡುತ್ತಿದ್ದ. ಅವನಿಗೆ ಹಾಗೂ ಅವನ ತಾಯಿ ತಂದೆಗೆ ವರದಕ್ಷಿಣೆ ಬೇಕಾಗಿರಲಿಲ್ಲ. ಆದರೆ ಒಬ್ಬ ಸುಂದರ, ಸುಶಿಕ್ಷಿತ ಯುವತಿ ಸೊಸೆಯ ರೂಪದಲ್ಲಿ ಬೇಕಾಗಿತ್ತು. ಹೀಗಾಗಿ ಅವರು ಮೂವರೂ ಮೊದಲ ಭೇಟಿಯಲ್ಲೇ ಗಾಯತ್ರಿಯನ್ನು ಒಪ್ಪಿಕೊಂಡರು.

ತನ್ನ ಬಣ್ಣ, ರೂಪ ಹಾಗೂ ಒಯ್ಯಾರಗಳಿಂದ ಅವಳು ವಸಂತ್‌ನನ್ನು ತಣಿಸಿದಳು. ವಸಂತ್‌ ಬಹಳ ಸರಳ ಸ್ವಭಾವದವನಾಗಿದ್ದು ಗಾಯತ್ರಿ ಅವನಿಗೆ ಸಂಪೂರ್ಣವಾಗಿ ಸಮರ್ಪಿತಳಾಗಿ ಅವನ ಎಲ್ಲ ಇಚ್ಛೆಯನ್ನು ಪೂರೈಸಲು ಸಿದ್ಧಳಾಗಿರುತ್ತಿದ್ದಳು.

ಅವರ ಮದುವೆಯಾಗಿ ಸುಮಾರು 10 ದಿನಗಳ ನಂತರ ಒಂದು ರಾತ್ರಿ ಗಾಯತ್ರಿಯ ಅತ್ತೆಗೆ ಭಯಂಕರ ಹೊಟ್ಟೆನೋವು ಬಂದಿತು. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆಗ ರಾತ್ರಿ 12 ಗಂಟೆಯಾಗಿತ್ತು.

ಒಬ್ಬ ಜೂನಿಯರ್‌ ಡಾಕ್ಟರ್‌ ಅವರನ್ನು ಪರೀಕ್ಷಿಸಿ ಸಿಸ್ಟರ್‌ಗೆ ಇಂಜೆಕ್ಷನ್‌ ಕೊಡಲು ಹೇಳಿ ಕೆಲವು ಟೆಸ್ಟ್ ಗಳನ್ನು ಬರೆದು ಇನ್ನೊಬ್ಬ ರೋಗಿಯನ್ನು ನೋಡಲು ಹೋದರು.

ಅರ್ಧ ಗಂಟೆ ಕಳೆದ ನಂತರವೂ ನೋವು ಕಡಿಮೆಯಾಗಲಿಲ್ಲ. ಗಾಯತ್ರಿ ಸೀನಿಯರ್‌ ಡಾಕ್ಟರ್‌ ಬಳಿ ಹೋದಳು. ಅವರು ಯಾವುದೋ ರೋಗಿಯ ಸಂಬಂಧಿಕರಿಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದರು.

5 ನಿಮಿಷಗಳ ನಂತರ ರೋಗಿಯ ಸಂಬಂಧಿ ಹೊರಗೆ ಹೋದರು. ಆಗ ಡಾಕ್ಟರ್‌ ಗಾಯತ್ರಿಯ ಜೊತೆ ಮಾತನಾಡತೊಡಗಿದರು.

“ನಮ್ಮ ಅತ್ತೆ ನೋವಿನಿಂದ ನರಳುತ್ತಿದ್ದಾರೆ ಸಾರ್‌. ನೀವೇ ಅವರ ಚಿಕಿತ್ಸೆ ಮಾಡಬೇಕು,” ಗಾಯತ್ರಿ ಭಾವುಕಳಾಗಿ ಹೇಳಿದಾಗ ಡಾಕ್ಟರ್‌ಗೆ ಒಪ್ಪದೇ ಬೇರೆ ವಿಧಿಯಿರಲಿಲ್ಲ.

ಅವರು ಜೂನಿಯರ್‌ ಡಾಕ್ಟರ್‌ಗೆ ಫೋನ್‌ ಮಾಡಲು ರಿಸೀವರ್‌ ಎತ್ತಿಕೊಳ್ಳುವಾಗ ಗಾಯತ್ರಿ ಅವರ ಕೈಹಿಡಿದು ಆತ್ಮೀಯತೆಯಿಂದ, “ಸಾರ್‌, ನನಗೋಸ್ಕರ ನಮ್ಮ ಅತ್ತೆಯನ್ನು ನೋಡಲು ಬನ್ನಿ,” ಎಂದು ಕರೆದಳು. ಡಾಕ್ಟರ್‌ ಗಾಯತ್ರಿಯ ದೊಡ್ಡ ದೊಡ್ಡ ಸುಂದರ ಕಣ್ಣುಗಳು, ಆಕರ್ಷಕ ಮುಗುಳ್ನಗೆಯ ಜಾದೂಗೆ ಮರುಳಾದರು. ಅವರು ಗಾಯತ್ರಿಗೆ ಧೈರ್ಯ ಹೇಳುವ ರೀತಿಯಲ್ಲಿ ಅವಳ ಕೈ ಒತ್ತಿ ಎದ್ದು ನಿಂತರು.

ಗಾಯತ್ರಿ ಸೀನಿಯರ್‌ ಡಾಕ್ಟರ್‌ರನ್ನು ಕರೆತಂದಿದ್ದು ಒಳ್ಳೆಯದಾಯಿತು. ಗಾಯತ್ರಿಯ ಅತ್ತೆಯ ಅಪೆಂಡಿಕ್ಸ್ ನಲ್ಲಿ ಊತ ಬಂದಿತ್ತು. ಅದು ಯಾವಾಗಾದರೂ ಒಡೆದು ಅವರ ಪ್ರಾಣಕ್ಕೆ ಕಂಟಕವಾಗಬಹುದಿತ್ತು. ಜೂನಿಯರ್‌ ಡಾಕ್ಟರ್‌ಗೆ ಅಷ್ಟು ಅನುಭವ ಇರಲಿಲ್ಲ.

ಅಂದು ರಾತ್ರಿಯೇ ಗಾಯತ್ರಿಯ ಅತ್ತೆಗೆ ಎಮರ್ಜೆನ್ಸಿ ಆಪರೇಷನ್‌ ಆಯ್ತು. ಸೀನಿಯರ್‌ ಡಾಕ್ಟರ್‌ ಬಹಳ ಸಹಾಯ ಮಾಡಿದರು. ಅವರು ಗಾಯತ್ರಿಯ ಆಕರ್ಷಕ ವ್ಯಕ್ತಿತ್ವದಿಂದ ಬಹಳ ಪ್ರಭಾವಿತರಾಗಿದ್ದರು. ಅದರಿಂದಾಗಿ ಇತರ ಸ್ಟಾಫ್‌ ಕೂಡ ಇವರೆಲ್ಲರನ್ನೂ ವಿಐಪಿ ಎಂದು ತಿಳಿದುಕೊಂಡಿದ್ದರು.

ಗಾಯತ್ರಿಯ ಅತ್ತೆ 1 ವಾರ ಆಸ್ಪತ್ರೆಯಲ್ಲೇ ಇದ್ದರು. ಸೀನಿಯರ್‌ ಡಾಕ್ಟರ್‌ರೊಂದಿಗೆ ಗಾಯತ್ರಿ ಬಹಳ ಆತ್ಮೀಯವಾಗಿ ವರ್ತಿಸುತ್ತಿದ್ದರಿಂದ ಮುಂದೆ ಅವಳಿಗೆ ಆಸ್ಪತ್ರೆಯಲ್ಲಿ ಯಾವುದೇ ಅಡ್ಡಿ ಆತಂಕ ಉಂಟಾಗಲಿಲ್ಲ.

“ನನ್ನ ಸೊಸೆ ಬಹಳ ಬುದ್ಧಿವಂತೆ ಹಾಗೂ ಧೈರ್ಯವಂತೆ. ನನಗೆ ಹೊಸ ಜೀವನ ತಂದುಕೊಟ್ಟಳು,” ಅತ್ತೆ ಸೊಸೆಯನ್ನು ಬಾಯ್ತುಂಬಾ ಹೊಗಳುತ್ತಿದ್ದರು.

ಒಂದು ಸಂಜೆ ಗಾಯತ್ರಿ ಹಾಗೂ ವಸಂತ್‌ ಒಂದು ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿ ಸಂಜೆ ಫ್ಯಾಕ್ಟರಿಗೆ ಬಂದರು. ಗಾಯತ್ರಿ ವಸಂತ್‌ನ ಕ್ಯಾಬಿನ್‌ನಲ್ಲಿ ಕುಳಿತಳು. ವಸಂತ್‌ ಕಾರ್ಮಿಕರ ಕೆಲಸ ಗಮನಿಸಲು ಹೊರಗೆ ಹೋದ.ಕಿಚನ್‌ನಲ್ಲಿದ್ದ ಗ್ಯಾಸ್‌ ಸಿಲಿಂಡರ್‌ನಿಂದ ಗ್ಯಾಸ್‌ ಲೀಕ್‌ ಆಗುತ್ತಿತ್ತು. ಒಬ್ಬ ಕಾರ್ಮಿಕ ಟೀ ಮಾಡಲು ಗ್ಯಾಸ್‌ ಅಂಟಿಸಿದಾಗ ಸಿಲಿಂಡರ್‌ ಸ್ಛೋಟಗೊಂಡು ಆ ಕಾರ್ಮಿಕನ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತು. ಇತರ ಕಾರ್ಮಿಕರು ಅವನನ್ನು ಕಾಪಾಡಲು ಓಡಿಬಂದರು. ವಸಂತ್‌ನ ಕಡೆ ಯಾರ ಗಮನ ಹೋಗಲಿಲ್ಲ. ಅವನು ಅವಸರದಲ್ಲಿ ಒಂದು ಮಿಶಿನ್‌ಗೆ ಡಿಕ್ಕಿ ಹೊಡೆದು ತಲೆಗೆ ಏಟು ಮಾಡಿಕೊಂಡು ನೆಲದ ಮೇಲೆ ಪ್ರಜ್ಞಾಹೀನನಾಗಿ ಬಿದ್ದಿದ್ದ.

ಬೆಂಕಿ ರಟ್ಟಿನ ಬಾಕ್ಸ್ ಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಹಾಲಿನಲ್ಲೆಲ್ಲಾ ಹೊಗೆ ತುಂಬಿಕೊಂಡಿತ್ತು. ಆ ಕಾರ್ಮಿಕನ ಬಟ್ಟೆಗೆ ಅಂಟಿಕೊಂಡಿದ್ದ ಬೆಂಕಿಯನ್ನು ಆರಿಸಿದ ನಂತರ ಇತರ ಕಾರ್ಮಿಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿದರು.

ಗಾಯತ್ರಿ ಕ್ಯಾಬಿನ್‌ನಿಂದ ಹೊರಗೆ ಬಂದು ಉತ್ಪಾದನಾ ಸ್ಥಳದಲ್ಲಿ ವ್ಯಾಕುಲತೆಯಿಂದ ನಿಂತಿದ್ದಳು.

“ಸಾಹೇಬರು ಎಲ್ಲಿ?” ಗಾಯತ್ರಿಯ ಪ್ರಶ್ನೆಗೆ ಯಾವ ಕಾರ್ಮಿಕರೂ ಉತ್ತರ ಕೊಡದಿದ್ದಾಗ ಅವಳು ಮೂಗಿಗೆ ಕರ್ಚಿಫ್‌ ಅಡ್ಡ ಇಟ್ಟುಕೊಂಡು ಹೊಗೆಯಿಂದ ಕೂಡಿದ್ದ ಹಾಲ್‌ಗೆ ನುಗ್ಗಿದಳು. ಅಲ್ಲಿದ್ದ ಸೂಪರ್‌ವೈಸರ್‌ ಅವಳನ್ನು ತಡೆಯುವ ಪ್ರಯತ್ನ ಮಾಡಿದ. ಆದರೆ ಅವಳು ಅವನನ್ನು ತಳ್ಳಿ ಒಳಗೆ ಹೋದಾಗ ಅವನೂ ಅವಳನ್ನು ಹಿಂಬಾಲಿಸಿದ. ಅವನು ವಸಂತ್‌ ಮೊದಲು ನಿಂತಿದ್ದ ಜಾಗದತ್ತ ಕರೆದುಕೊಂಡು ಹೋದ. ವಸಂತ್‌ ಪ್ರಜ್ಞೆ ತಪ್ಪಿ ಬಿದ್ದಿದ್ದು ಕಾಣಿಸಿತು.

ಗಾಯತ್ರಿಗೆ ಆ ಸಮಯದಲ್ಲಿ ಅದೆಲ್ಲಿಂದ ಶಕ್ತಿ ಬಂದಿತೋ ಗೊತ್ತಿಲ್ಲ. ಪ್ರಜ್ಞೆ ತಪ್ಪಿ ಬಿದ್ದಿದ್ದ ವಸಂತ್‌ನನ್ನು ಹೊರತರುವಲ್ಲಿ ಸೂಪರ್‌ವೈಸರ್‌ಗೆ ಸಂಪೂರ್ಣವಾಗಿ ಸಹಕರಿಸಿದಳು. ಅವರಿಗೆ ಉಸಿರು ತೆಗೆದುಕೊಳ್ಳುವುದೂ ಕಷ್ಟವಾಗಿತ್ತು. ಆದರೂ ಧೈರ್ಯ ಕಳೆದುಕೊಳ್ಳದೆ ವಸಂತ್‌ನನ್ನು ಆಚೆ ತಂದರು. ಗಾಯತ್ರಿ ಧೈರ್ಯತಾಳಿ ಗಂಡನಿಗೆ ಬಾಯಿಂದ ಕೃತಕ ಉಸಿರಾಟ ಮಾಡಿಸುವ ಪ್ರಕ್ರಿಯೆ ಆರಂಭಿಸಿದಳು. ಕೆಲವೇ ನಿಮಿಷಗಳಲ್ಲಿ ವಸಂತ್‌ ಸಹಜವಾಗಿ ಉಸಿರಾಡತೊಡಗಿದ. ಅವನಿಗೆ ನಿಧಾನವಾಗಿ ಜ್ಞಾನ ಬರತೊಡಗಿದಾಗಲೇ ಗಾಯತ್ರಿ ನಿಲ್ಲಿಸಿದಳು. ಫ್ಯಾಕ್ಟರಿಯ ಕಾರ್ಮಿಕರು ಗಾಯತ್ರಿಯ ಸಾಹಸದ ಬಗ್ಗೆ ಎಲ್ಲ ಕಡೆ ಮಾತನಾಡಿ ಕೊಳ್ಳುತ್ತಿದ್ದರು. ಆ ದಿನದ ನಂತರ ಅವಳ ಬಗ್ಗೆ ಎಲ್ಲರಿಗೂ ಗೌರವ ಹೆಚ್ಚಾಯಿತು. ವಸಂತ್‌ ಅಂತೂ ಅವಳ ಅಭಿಮಾನಿಯಾಗಿಬಿಟ್ಟಿದ್ದ.

ಮದುವೆಯಾಗಿ 2 ತಿಂಗಳ ನಂತರ ಒಂದು ಸಂಜೆ ಗಾಯತ್ರಿ ಒಬ್ಬಳೇ ಮಾರ್ಕೆಟ್‌ಗೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಶೇಖರ್ ಎದುರಾದ. ಅಲ್ಲಿ ಅವನನ್ನು ಕಂಡು ಅವಳಿಗೆ ಬೇಸರವಾಯಿತು.

“ಮದುವೆ ಮಾಡಿಕೊಂಡ್ಯಾ? ನನ್ನನ್ನು ಕರಿಯೇ ಇಲ್ಲ. ಈಗಲೂ ನನ್ಮೇಲೆ ಕೋಪ ಇದ್ಯಾ?” ಎಂದು ಅವಳನ್ನು ಕೆಟ್ಟದಾಗಿ ದುರುಗುಟ್ಟಿ ನೋಡುತ್ತಾ ಹೇಳಿದ ಶೇಖರ್‌.

“ನಾನು ನಿನ್ನನ್ನು ಮರೆತುಬಿಟ್ಟಿದ್ದೀನಿ,” ಗಾಯತ್ರಿ ಹೇಳಿದಳು.

“ಆದರೆ ನಾನು ನಿನ್ನನ್ನು ಜ್ಞಾಪಿಸಿಕೊಳ್ತಾ ಇರ್ತೀನಿ. ಇಷ್ಟ ಬಂದಾಗ ಈ ಮೊಬೈಲ್‌ನಲ್ಲಿರೋ ಫೋಟೋಗಳನ್ನು ನೋಡ್ತಿರ್ತೀನಿ.”

“ಅವನ್ನು ತೆಗೆದು ಹಾಕು ಪ್ಲೀಸ್‌,” ಗಾಯತ್ರಿ ಹೇಳಿದಳು.

“ಆಯ್ತು ತೆಗೆದುಹಾಕ್ತೀನಿ. ಆದ್ರೆ ಒಂದು ಷರತ್ತು.”

“ಏನದು?”“ಒಂದು ದಿನ ಪೂರ್ತಿ ನನ್ನ ಜೊತೆ ಕಳೀಬೇಕು…”

“ಯಾಕೆ?”

ಉತ್ತರವೆಬಂತೆ ಶೇಖರ್‌ ಅಶ್ಲೀಲವಾಗಿ ನಕ್ಕ. ಆಗ ಗಾಯತ್ರಿ ಕೋಪದಿಂದ, “ಯೂ ಗೋ ಟು ಹೆಲ್‌! ಇನ್ನೊಂದು ಸಾರಿ ನನ್ನನ್ನು ಭೇಟಿಯಾಗೋಕೆ ಪ್ರಯತ್ನಪಟ್ಟರೆ ನಿನಗೆ ಸರಿಯಾಗಿ ಪಾಠ ಕಲಿಸ್ತೀನಿ,” ಎಂದಳು.

“ನೀನೇನು ಪಾಠ ಕಲಿಸೋದು? ನಾನು ನಿನಗೆ ಪಾಠ ಕಲಿಸ್ತೀನಿ. ನಿನ್ನ ಗಂಡನ ಜೊತೆ ಮಾತಾಡ್ತೀನಿ,” ಶೇಖರ್‌ಬೆದರಿಸಿದ.

ಗಾಯತ್ರಿ ಸ್ವಲ್ಪ ಹೊತ್ತು ಅವನನ್ನು ದುರುಗುಟ್ಟಿ ನೋಡಿ, ತಟ್ಟನೆ ಮುಖ ತಿರುಗಿಸಿ ಮನೆಯತ್ತ ಹೊರಟಳು.

ಶೇಖರ್‌ ಕೋಪ ಹಾಗೂ ಅಪಮಾನದಿಂದ ಕುದಿಯುತ್ತಾ ಒಂದು ದಿನ ಮಧ್ಯಾಹ್ನ ವಸಂತ್‌ನನ್ನು ಭೇಟಿಯಾಗಲು ಅವನ ಆಫೀಸಿಗೆ ಹೋದ. ಗಂಡ ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡಿಸಿ ಗಾಯತ್ರಿಗೆ ದುಃಖ ತರುವುದು ಅವನ ಉದ್ದೇಶವಾಗಿತ್ತು.

“ನೀನು ಮದುವೆ ಆಗಿರೋ ಹುಡುಗಿ ನಡತೆ ಸರಿಯಿಲ್ಲ. ಎಷ್ಟೋ ಹುಡುಗರ ಎಂಜಲು ಅವಳು…..”

“ಹುಚ್ಚು ಹುಚ್ಚಾಗಿ ಮಾತಾಡಬೇಡ. ನನ್ನ ಹೆಂಡತಿ ವಿರುದ್ಧವಾಗಿ ಒಂದು ಮಾತಾಡಿದ್ರೂ ನಿನ್ನ ಮೈಮೂಳೆಗಳನ್ನು ಮುರಿಸ್ತೀನಿ,” ವಸಂತ್‌ ರೇಗಿದ.

“ಗಾಯತ್ರಿ ಕೆಟ್ಟ ನಡತೆ ಬಗ್ಗೆ ನನ್ನ ಹತ್ರ ಸಾಕ್ಷಿ ಇದೆ.”

“ಏನು ಸಾಕ್ಷಿ?”

“ಇಲ್ಲಿ ನೋಡು,” ಶೇಖರ್‌ ಜೇಬಿನಿಂದ ಪೋಸ್ಟ್ ಕಾರ್ಡ್‌ ಸೈಜ್‌ನ 1 ಫೋಟೋ ತೆಗೆದು ವಸಂತ್‌ನ ಕೈಗಿತ್ತ. ವಸಂತ್‌ ಗಾಯತ್ರಿಯ ನಗ್ನ ಚಿತ್ರದ ಮೇಲೆ ಒಮ್ಮೆ ಕಣ್ಣು ಹಾಯಿಸಿ ನಂತರ ಶೇಖರ್‌ನನ್ನು ದುರುಗುಟ್ಟಿ ನೋಡುತ್ತಾ ಹೇಳಿದ, “ಇದನ್ನು ನನಗ್ಯಾಕೆ ತೋರಿಸ್ತಿದ್ದೀಯಾ?”

“ಇಳನ್ನು ಗುರುತಿಸಲಿಲ್ವಾ ನೀನು?”

“ಚೆನ್ನಾಗಿ ಗುರುತಿಸಿದೆ. ಇದು ನನ್ನ ಹೆಂಡತಿ ಫೋಟೊ.”

“ಅವಳನ್ನು ಈ ಪೋಸ್‌ನಲ್ಲಿ ನೋಡಿ ನಿನ್ನ ರಕ್ತ ಕುದೀತಿಲ್ವಾ?”

“ನನ್ನ ಹೆಡಂತಿ ನಗ್ನ ಚಿತ್ರ ನೋಡಿ ನನ್ನ ರಕ್ತ ಯಾಕೆ ಕುದೀಬೇಕು? ಇದು ಬರೀ ಫೋಟೋ. ನಾನು ದಿನಾ ನನ್ನ ಹೆಂಡ್ತೀನ ಈ ಪೋಸ್‌ನಲ್ಲಿ ನೋಡ್ತೀನಿ. ನಮಗೆ ಬಟ್ಟೆ ಹಾಕ್ಕೊಂಡು ಮಲಗೋ ಅಭ್ಯಾಸ ಇಲ್ಲ,” ವಸಂತ್‌ ಅವನನ್ನು ಗೇಲಿ ಮಾಡುತ್ತಾ ಹೇಳಿದ.

“ನೀನೊಬ್ಬ ವಿಚಿತ್ರ ಮನುಷ್ಯ. ಈ ಫೋಟೋ ತೆಗೆದನಿಗೆ ಗಾಯತ್ರಿ ಜೊತೆ ಎಂಥ ಸಂಬಂಧ ಇರಬಹುದು?”

“ಫೋಟೋ ತೆಗೆದವನು ನೀನೇ. ಗಾಯತ್ರಿ ನಿನ್ನ ಬಗ್ಗೆ….. ತನ್ನ ಇತರ ಪ್ರೇಮಿಗಳ ಬಗ್ಗೆ ಎಲ್ಲವನ್ನೂ ಹೇಳಿದ್ದಾಳೆ,” ವಸಂತ್‌ಹೇಳಿದ.

“ಅವಳ ಅಫೇರ್ಸ್ ಬಗ್ಗೆ ಎಲ್ಲವನ್ನೂ ತಿಳಿದ ಮೇಲೂ ನಿನಗೆ ಅವಳ ಬಗ್ಗೆ ದ್ವೇಷ ಇಲ್ವಾ?”

“ದ್ವೇಷ ಯಾಕೆ? ಗಾಯತ್ರಿ ಅಂತೂ ಯಾವಾಗಲೂ ಉತ್ಸಾಹ, ಉಲ್ಲಾಸದಿಂದ ಬದುಕ್ತಾಳೆ. ಅವಳು ಹುಟ್ಟಿದ್ದು ಬಡ ಕುಟುಂಬದಲ್ಲಿ. ತನ್ನ ಇಚ್ಛೆಗಳನ್ನು ಪೂರೈಸಿಕೊಳ್ಳೋಕೆ ಹಣ ಇರಲಿಲ್ಲ. ಹೀಗಾಗಿ ಅವಳು ನಿಮ್ಮಂಥಾ ಶ್ರೀಮಂತರನ್ನು ತನ್ನ ಗೆಳೆಯರನ್ನಾಗಿ ಮಾಡಿಕೊಂಡಳು. ಅದಕ್ಕೆ ಬದಲಾಗಿ ಕೊಡಲು ಅವಳ ಬಳಿ ರೂಪ, ಯೌವನ ಮಾತ್ರ ಇತ್ತು…..

“ಗಾಯತ್ರಿಯ ಹಳೆ ಕಥೇನ ತಪ್ಪು ಅಥವಾ ಸರಿ ಅನ್ನೋಕೆ ನನಗೆ ಇಷ್ಟ ಇಲ್ಲ. ವಾಸ್ತವ ಏನೆಂದರೆ ಅವಳಂಥ ಸುಂದರಿ, ಜಾಣೆ, ನಿಷ್ಠಾವಂತೆ ಹಾಗೂ ಸಮರ್ಪಣಾ ಮನೋಭಾವದ ಹೆಂಡತಿಯನ್ನು ಪಡೆದು ನನ್ನನ್ನು ನಾನು ಧನ್ಯ ಅಂದ್ಕೋಳ್ತೀನಿ. ನಾನು ಇಂದು ಅವಳ ಎಲ್ಲ ಅಗತ್ಯಗಳನ್ನು, ಇಚ್ಛೆಗಳನ್ನು ಸುಲಭವಾಗಿ ಪೂರೈಸ್ತೀನಿ. ಮದುವೆ ಆದ್ಮೇಲೆ ನಾವಿಬ್ರೂ ಸಂಪೂರ್ಣವಾಗಿ ಸಂತೋಷವಾಗಿದ್ದೀವಿ, ಸುಖವಾಗಿದ್ದೀವಿ. ಗಾಯತ್ರಿ ಹಾಗೂ ನಾನು ಇನ್ನೆಂದೂ ನಿನ್ನ ಮುಖ ನೋಡೋಕೆ ಇಷ್ಟಪಡಲ್ಲ. ಇಂಥ ಫೋಟೋಗಳನ್ನು ನಗರದಲ್ಲಿ ಎಲ್ಲಿ ಬೇಕಾದರೂ ಹಾಕು. ಆದರೆ ನನ್ನ ಎಚ್ಚರಿಕೆ ಎಂದೂ ಮರೀಬೇಡ. ನೀನು ಮುಂದೆ ಎಂದಾದರೂ ನಮ್ಮ ಜೀವನದಲ್ಲಿ ಹಸ್ತಕ್ಷೇಪ ಮಾಡೋಕೆ ಪ್ರಯತ್ನಪಟ್ಟರೆ ಬಹಳ ಪಶ್ಚಾತ್ತಾಪಪಡಬೇಕಾಗುತ್ತೆ. ಈಗ ಇಲ್ಲಿಂದ ಜಾಗ ಖಾಲಿ ಮಾಡು,” ಎನ್ನುತ್ತಾ ವಸಂತ್‌ ಹಲ್ಲು ಮಸೆಯುತ್ತಾ ಎದ್ದು ನಿಂತಾಗ ಶೇಖರ್‌ಗೆ ಭಯವಾಯಿತು. ಅವನು ಕೂಡಲೇ ಎದ್ದು ಬಾಗಿಲಿನತ್ತ ಹೋದ.

ವಸಂತ್‌ ಅವನ ಹಿಂದೆ ಹಿಂದೆ ನಡೆಯುತ್ತಾ ಫ್ಯಾಕ್ಟರಿ ಗೇಟ್‌ವರೆಗೂ ಬಂದ. ಶೇಖರ್‌ ತನ್ನ ಕಾರಿನಲ್ಲಿ ಕುಳಿತಾಗ ವಸಂತ್‌ವ್ಯಂಗ್ಯವಾಗಿ ನಗುತ್ತಾ ಹೇಳಿದ, “ಸುಂದರವಾಗಿರೋ ನನ್ನ ಹೆಂಡತಿಯ ನಗ್ನ ಫೋಟೋಗಳನ್ನು ತೆಗೆಯೋ ಅಭ್ಯಾಸ ನನಗೂ ಇದೆ. ನಿನಗೆ ಬೇಕಾಗಿದ್ರೆ ಫೋನ್‌ ಮಾಡು. ನಾನೇ ಖುದ್ದಾಗಿ ಬಂದು ಕೊಡ್ತೀನಿ.”

“ನೀನೊಬ್ಬ ಹುಚ್ಚ,” ಶೇಖರ್‌ ಕೋಪದಿಂದ ಕಿರುಚಿ ಕೂಡಲೇ ಕಾರನ್ನು ಮುಂದಕ್ಕೆ ಓಡಿಸಿದ.

ಅವನಿಗೆ ತಮಾಷೆ ಮಾಡಲು ವಸಂತ್‌ ಜೋರಾಗಿ ನಗತೊಡಗಿದ. ಆ ನಗು ಶೇಖರ್‌ಗೆ ಬದುಕಿಡೀ ತನಗಾದ ಅವಮಾನವನ್ನು ನೆನಪಿಸುವಂತೆ ಇತ್ತು .

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ