ಅಂದು ಸಂಜೆ ನಿರ್ಮಲಾ ತನ್ನ ಗೆಳತಿಗೆ ತನ್ನ ಹೊಸ ಸೀರೆ, 2 ಬೆಡ್ ಶೀಟ್, ಕೆಲವು ಹ್ಯಾಂಗರ್‌ಗಳು ಮತ್ತು ಪುಸ್ತಕಗಳನ್ನು ಕೊಟ್ಟು ಇವನ್ನು ತೆಗೆದುಕೊಂಡು ಎಲ್ಲಿಗೆ ಹೋಗ್ಲಿ, ನೀನೇ ಇಟ್ಕೊ. ಪುಸ್ತಕಗಳನ್ನು ಅಡ ಇಡುತ್ತೇನೆ. ಉಳಿದವುಗಳನ್ನು ನೀನು ಉಪಯೋಗಿಸಿಕೋ ಎಂದಳು. ಹೋಟೆಲ್‌ನ ಉಸಿರುಗಟ್ಟುವ ವಾತಾವರಣದಿಂದ ದೂರವಾಗಿದ್ದಕ್ಕೆ ಖುಷಿಯಾಗಿದ್ದಳು. ಅವಳ 8 ವರ್ಷದ ಮಗಳು ನಂದಿನಿಗಂತೂ ರೆಕ್ಕೆ ಬಂದಂತಿತ್ತು. ಅವಳು ಕುಣಿಯುತ್ತಾ, ``ಚೆನ್ನೈನಲ್ಲಿ ನನಗೆ ಕಸಿನ್ಸ್ ಇದ್ದಾರೆ. ನಾನು ಅವರ ಜೊತೆ ಆಟ ಆಡ್ತೀನಿ. ನನಗೆ ಇಲ್ಲಿರೋದು ಇಷ್ಟವಿಲ್ಲ. ಜೈಲು ತರಹ ಇದೆ ಇಲ್ಲಿ,'' ಎಂದಳು.
ನಿರ್ಮಲಾಗೆ ಇದು ತನ್ನ ಬದುಕಿನ ಹೊಸ ಪಾಳಿ ಆಗಿದ್ದರಿಂದ ಖುಷಿಯಾಗಿತ್ತು. ಕುಡುಕ ಗಂಡ ಸುಧೀರನೊಂದಿಗೆ 10 ವರ್ಷಗಳು ಬಾಳಿದ ನಂತರ ಮತ್ತೆ ಅತ್ತೆಮನೆಗೆ ಬರುವುದಿಲ್ಲವೆಂದು ಶಪಥ ತೊಟ್ಟು ತವರುಮನೆಗೆ ಬಂದಿದ್ದಳು. ಸುಧೀರನಾಗಲಿ ಅಥವಾ ಮಾವನಾಗಲಿ ಎಷ್ಟೇ ಕರೆದರೂ ಮತ್ತೆ ತಿರುಗಿ ನೋಡುವುದಿಲ್ಲವೆಂದು ನಿರ್ಧರಿಸಿದ್ದಳು.
ತವರುಮನೆ ಹಳ್ಳಿಯಲ್ಲಿತ್ತು. ಹೀಗಾಗಿ ಅವಳು ಮೊದಲು ಅಣ್ಣನ ಮನೆಗೆ ಹೋದಳು. ಅಲ್ಲಿ ಹಲವಾರು ದಿನಗಳು ಯೋಚಿಸಿ ಆ ಊರಿನಲ್ಲಿಯೇ ಕೆಲಸಕ್ಕೆ ಸೇರಲು ನಿರ್ಧರಿಸಿದಳು. ಆದರೆ ಅವಳಪ್ಪ ಅವಳನ್ನು ಹಳ್ಳಿಗೆ ಕರೆದೊಯ್ಯಲು ಬಯಸುತ್ತಿದ್ದರು. ಹಳ್ಳಿಯ ಒಂದು ಮಿಶನರಿ ಸ್ಕೂಲ್‌ನಲ್ಲಿ ಅವರು ಮಾತನಾಡಿಯೂ ಇದ್ದರು. ಆದರೆ ನಿರ್ಮಲಾಗೆ ಹಳ್ಳಿಗೆ ಹೋಗಲು ಇಷ್ಟವಿರಲಿಲ್ಲ. ಹಳ್ಳಿಗೆ ಯಾವ ಮುಖ ಹೊತ್ತು ಹೋಗುವುದು? ಹಳ್ಳಿಯಲ್ಲಿ ಅವಳ ಅಣ್ಣಂದಿರ ಮನೆಗಳಿದ್ದವು. ಅವರು ಬಾಯಿಗೆ ಬಂದಂತೆ ಮಾತಾಡಿಕೊಳ್ಳುತ್ತಾರೆ. ಗಂಡಸರು ಮಾತಾಡದಿರಬಹುದು. ಆದರೆ ಮಹಿಳೆಯರನ್ನು ತೆಪ್ಪಗಿರಿಸಲು ಸಾಧ್ಯವಿಲ್ಲ. ಅತ್ತೆಮನೆಯನ್ನು ಏಕೆ ಬಿಟ್ಟೆ ಎಂದು ಕೇಳುತ್ತಾರೆ. ಗುಸುಗುಸು ಕೇಳಿಸುತ್ತದೆ. ಸಂದೇಹಾಸ್ಪದ ದೃಷ್ಟಿಗಳಿಂದ ನೋಡುತ್ತಿರುತ್ತಾರೆ. ಇವೆಲ್ಲವನ್ನೂ ಸಹಿಸಿಕೊಳ್ಳುವುದು ಬಹಳ ಕಷ್ಟ.
ನಿರ್ಮಲಾ ದ್ವಂದ್ವದಲ್ಲಿದ್ದಳು. ಅತ್ತೆಮನೆಯನ್ನು ಬಿಟ್ಟು ಬಂದಿದ್ದು ಅವಳಿಗೆ ಇಷ್ಟವಿರಲಿಲ್ಲ. ಆದರೆ ಸುಧೀರ್ ಆಗಾಗ್ಗೆ ನಶೆಯಲ್ಲಿ ಕೈ ಬಿಡುತ್ತಿದ್ದ. ಅದರಿಂದ ಕಂಗೆಟ್ಟು ಅವಳು ತನ್ನ ಶಾಲೆಯ ನೌಕರಿ ಬಿಟ್ಟಿದ್ದಳು.
ಅಣ್ಣ ರಾಜೇಶ್‌ಗೆ ಅವಳು ತನ್ನ ಮನೆಗೆ ಬಂದದ್ದು ತೊಂದರೆಯೇನಿರಲಿಲ್ಲ. ಆದರೂ ಅಲ್ಲಿ ಅವಳಿಗೆ ಸ್ವಾತಂತ್ರ್ಯವಿರಲಿಲ್ಲ. ಎಲ್ಲರಿಗೂ ತಮ್ಮದೇ ಆದ ಸಂಸಾರವಿರುತ್ತದೆ. ತಾನು ಇಬ್ಬಂದಿಯಲ್ಲಿ ಇದ್ದೇನೆ ಎಂದುಕೊಂಡಳು. ಅವಳು ಆಗಾಗ್ಗೆ ಏಕಾಂತದಲ್ಲಿ ಅಳುತ್ತಿದ್ದಳು. ಅವಳಿಗೆ ತನ್ನ ಮದುವೆಯ ನಿರ್ಧಾರದ ಬಗ್ಗೆ ದುಃಖವಾಗುತ್ತಿತ್ತು. ತಾನೇಕೆ ಸುಧೀರನನ್ನು ಪ್ರೇಮಿಸಿ ಮದುವೆಯಾದೆ? ಸುಧೀರ್ ಮದುವೆಗೆ ಮೊದಲೂ ಕುಡಿಯುತ್ತಿದ್ದ. ಅದು ನಿರ್ಮಲಾಗೆ ಗೊತ್ತಿತ್ತು. ಆದರೆ ಅವಳು ತಲೆ ಕೆಡೆಸಿಕೊಳ್ಳಲಿಲ್ಲ. ಸುಧೀರನ ಶೇರ್ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಹಣಕ್ಕೇನೂ ಕಡಿಮೆ ಇರಲಿಲ್ಲ. ಅದು ಮಧ್ಯಮ ವರ್ಗದ ನಿರ್ಮಲಾಳ ಕಣ್ಣು ಕುಕ್ಕಿತು. ಹೀಗಾಗಿ ಅವಳಿಗೆ ಹೆಚ್ಚು ಯೋಚಿಸಲು ಅವಕಾಶವೇ ಸಿಗಲಿಲ್ಲ.
ಮದುವೆಯಾಗಿ ಕೆಲವೇ ತಿಂಗಳಲ್ಲಿ ಸುಧೀರನಿಗೆ ಶೇರ್‌ಗಳಲ್ಲಿ ಲಾಸ್ ಆಯಿತು. ಹಣವೆಲ್ಲಾ ಖಾಲಿಯಾಯಿತು. ನಿರ್ಮಲಾ ಅಸಹಾಯಕತೆಯಿಂದ ಅತ್ತೆ ಮಾವನ ಬಳಿ ಬರಬೇಕಾಯಿತು. ಮಾವನಿಗೆ ನಿರ್ಮಲಾಳನ್ನು ಕಂಡರೆ ಇಷ್ಟವಿರಲಿಲ್ಲ. ಅವರು ಆಗಾಗ್ಗೆ ಅವಳಲ್ಲಿ ದೋಷ ಹುಡುಕುತ್ತಿದ್ದರು. ಅವರು ನಿರ್ಮಲಾಳ ತಂದೆಗೆ ಮದುವೆಯ ಜವಾಬ್ದಾರಿ ನಿಮ್ಮದೇ. ಸುಧೀರ ಏನು ಮಾಡುತ್ತಾನೋ, ಏನು ಮಾಡುವುದಿಲ್ಲವೋ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದರು. ಆದರೂ ನಿರ್ಮಲಾಳ ಹಟದಿಂದಾಗಿ ಸುಧೀರನೊಂದಿಗೆ ಮದುವೆಯಾಯಿತು.