ಅಂದು ಭಾನುವಾರ ಬೆಳಗ್ಗೆ ಕಾಫಿ ಕುಡಿದು ಅರುಣ್ ಆರಾಮವಾಗಿ ಕುಳಿತು ಪೇಪರ್ ಓದುತ್ತಿದ್ದ. ಆಗಲೇ ಅವನ ಅತ್ತೆ ಗಿರಿಜಾ ಇದ್ದಕ್ಕಿದ್ದಂತೆ ಅವನನ್ನು ದೂರುವಂತೆ ಹೇಳಿದರು, ``ಅರುಣ್, ಈಗ ನೀವು ನನ್ನ ಮಗಳನ್ನು ಮೊದಲಿನಷ್ಟು ಪ್ರೀತಿಸ್ತಿಲ್ಲ ಅಲ್ವಾ?''
``ಏನು ಹೇಳ್ತಿದ್ದೀರಿ ಅತ್ತೆ? ನಾನು ಈಗಲೂ ಬೇಕಾದ್ರೆ ಸಿಂಧೂಗೆ ಆಕಾಶದಿಂದ ಚಂದ್ರ ಹಾಗೂ ನಕ್ಷತ್ರಗಳನ್ನು ಕಿತ್ತು ತರ್ತೀನಿ,'' ಪೇಪರ್‌ನಿಂದ ದೃಷ್ಟಿ ತೆಗೆಯದೆ ಅರುಣ್ ಹೇಳಿದ. ತನ್ನ 3 ವರ್ಷದ ಮಗ ರಾಹುಲ್‌ಗೆ ಬಟ್ಟೆ ತೊಡಿಸುತ್ತಿದ್ದ ಸಿಂಧು, ``ಯಾಕಮ್ಮ ಹಾಗೆ ಹೇಳ್ತಿದ್ದೀಯಾ?'' ಎಂದು ಅಮ್ಮನನ್ನು ಕೇಳಿದಳು.
ಗಿರಿಜಾ ದೀರ್ಘವಾಗಿ ಉಸಿರೆಳೆದುಕೊಂಡು ಹೇಳಿದರು, ``ತುಂಬಾ ಸಿಂಪಲ್ ವಿಷಯ ಸಿಂಧು. ಗಂಡನಾದವನು ಇನ್ನೊಂದು ಹೆಣ್ಣಿಗೆ ಪ್ರೀತಿ ತೋರಿಸಿದಾಗ ತನ್ನ ಹೆಂಡತಿಯನ್ನು ಮೊದಲಿನ ಹಾಗೆ ಹೃದಯಾಳದಿಂದ ಪ್ರೀತಿಸ್ತಿಲ್ಲ ಅಂತ ಅರ್ಥ.''
ರಾಹುಲ್‌ಗೆ ಬಟ್ಟೆ ಹಾಕಿದ ನಂತರ ಸಿಂಧು ಅಮ್ಮನ ಮಗ್ಗುಲಲ್ಲಿ ಬಂದು ಕುಳಿತಳು. ಅರುಣ್ ಕೂಡ ನಿಟ್ಟುಸಿರು ಬಿಟ್ಟು ಪೇಪರ್‌ನ್ನು ಬದಿಯಲ್ಲಿಟ್ಟ. ನಂತರ ಅಮ್ಮ ಮಗಳನ್ನು ನೋಡತೊಡಗಿದ.
``ಹೀಗೆ ಮೌನವಾಗಿದ್ರೆ ಹೇಗೆ ಅರುಣ್? ನಾನು ನಿಮ್ಮ ಮೇಲೆ ಆರೋಪ ಹೊರಿಸಿದ್ದೀನಿ. ನೀವು ಏನಾದರೂ ಹೇಳೋದಿದ್ರೆ ಹೇಳಿ,'' ಗಿರಿಜಾರ ಕಣ್ಣುಗಳಲ್ಲಿ ತುಂಟತನದಿಂದ ಕೂಡಿದ್ದ ಕೋಪ ಇತ್ತು.
``ಅತ್ತೆ, ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟು ಮಾಡುವ ಇಂತಹ ತಮಾಷೆ ಸರಿಯಲ್ಲ. ನನ್ನ ಬದುಕಿನಲ್ಲಿ ಇನ್ನೊಬ್ಬ ಹೆಂಗಸು ಇದ್ದಾಳೇಂತ ಕೇಳಿ ನಿಮ್ಮ ಮುದ್ದಿನ ಮಗಳಿಗೆ ಹಾರ್ಟ್ ಫೇಲ್ ಆಗಿಬಿಟ್ರೆ ನಾವು ಅಪ್ಪ ಮಗನ ಗತಿಯೇನು?'' ಅರುಣ್‌ನಗುತ್ತಲೇ ದೂರಿದ.
``ರೀ, ತಮಾಷೆ ಮಾಡಬೇಡಿ. ನೀವು ನಿಜವಾಗಿಯೂ ಬೇರೊಂದು ಹೆಣ್ಣನ್ನು ಪ್ರೀತಿಸ್ತಿದ್ದೀರಾ? ಅದು ಹೇಳಿ ಮೊದಲು,'' ಸಿಂಧು ಆತಂಕದ ಸ್ವರದಲ್ಲಿ ಹೇಳಿದಳು.
``ಹ್ಞೂಂ. ನನ್ನ ಪ್ರೀತಿ ಮೇಲೆ ಇಷ್ಟೇನಾ ನಂಬಿಕೆ ಇರೋದು?'' ಹೃದಯಕ್ಕೆ ಗಾಢವಾದ ಪೆಟ್ಟು ಬಿದ್ದವನಂತೆ ಅರುಣ್ ಹೇಳಿದ,
``ನಿಮ್ಮ ಅಮ್ಮನ ಸ್ವಭಾವ ಗೊತ್ತಿಲ್ವಾ? ಅವರು ತಮಾಷೆ ಮಾಡ್ತಿದ್ದಾರೆ.''
``ನಾನು ತಮಾಷೆ ಮಾಡ್ತಿಲ್ಲ ಅರುಣ್,'' ಗಿರಿಜಾ ಪ್ರತಿ ಶಬ್ದಕ್ಕೂ ಒತ್ತು ಕೊಟ್ಟು ಹೇಳಿದರು.
``ಅತ್ತೆ. ಇನ್ನಾದರೂ ತಮಾಷೆ ನಿಲ್ಲಿಸಿ. ಇಲ್ಲದಿದ್ರೆ ಸಿಂಧು ಪ್ರಶ್ನೆ ಕೇಳಿ ಕೇಳಿ ನನ್ನ ಪ್ರಾಣ ತಿಂತಾಳೆ,'' ಅರುಣ್ ನಗುತ್ತಾ ಅತ್ತೆಗೆ ಕೈ ಜೋಡಿಸಿದ.
ಗಿರಿಜಾ ಎದ್ದು ಅತ್ತಿತ್ತ ತಿರುಗುತ್ತಾ ಗಂಭೀರವಾಗಿ ಹೇಳಿದರು, ``ನಾನು ಇಲ್ಲಿಗೆ ಬಂದು ಇನ್ನೂ 2-3 ಗಂಟೆ ಆಗಿಲ್ಲ. ಆದರೆ ಇಷ್ಟು ಕಡಿಮೆ ಸಮಯದಲ್ಲಿ ನಿಮ್ಮಲ್ಲಿ ಉಂಟಾದ ಬದಲಾವಣೆ ಗಮನಿಸಿದ್ದೀನಿ ಅರುಣ್. ಇಂದು ನಿಮ್ಮ ಕಣ್ಣುಗಳಲ್ಲಿ ಸಿಂಧೂಳ ಬಗ್ಗೆ ಪ್ರೀತಿಯ ಭಾವನೆ ಕಾಣಿಸಲಿಲ್ಲ. ನೀವು ಬರೀ ಕೆಲಸದ ಬಗ್ಗೆ ಮಾತ್ರ ಮಾತಾಡ್ತೀರಿ ಅವಳ ಜೊತೆ. ಹೀಗಾಗಿ ನಿಮ್ಮಿಬ್ಬರ ಮಧ್ಯೆ ಯಾವಾಗಲೂ ಕಾಣ್ತಿದ್ದ ರೊಮ್ಯಾಂಟಿಕ್ ವರ್ತನೆ, ಪರಸ್ಪರ ಛೇಡಿಸುವಿಕೆ ಈಗ ಎಲ್ಲಿ ಹೋಯ್ತೂಂತ ನನಗೆ ಕಳವಳ ಆಗ್ತಿದೆ ಅರುಣ್.''
ಅರುಣ್ ನಗುತ್ತಾ ಉತ್ತರಿಸಿದ, ``ಅತ್ತೆ, ನಮ್ಮಿಬ್ಬರ ಮದುವೆ ಆಗಿ 5 ವರ್ಷ ಆಯ್ತು. ರೊಮ್ಯಾಂಟಿಕ್ ಆಗಿ ರೇಗಿಸುವ ದಿನಗಳು ಕಳೆದುಹೋದ.ವು''