ನೀರಜಾ ಪರೀಕ್ಷೆ ಬರೆಯಲೆಂದು ಹಾಲ್‌ಗೆ ಬಂದಳು. ಕೈಗೆ ಪೇಪರ್‌ ಬಂದಾಗ ಹೆದರಿಕೆಯಿಂದ ಬೆವರತೊಡಗಿದಳು. ಪೇಪರ್ ಬಹಳ ಕಠಿಣಕರ ಎನಿಸಿತು. ಅವಳು ಬೇರೆ ವಿದ್ಯಾರ್ಥಿಗಳ ಕಡೆ ನೋಡಿದಳು. ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯೂ ಹಾಗೇ ಇತ್ತು. ಆಗ ಅವಳು ಆಳವಾದ ನಿಟ್ಟುಸಿರಿಟ್ಟು ತಕ್ಷಣ ಜೋರಾಗಿ ಕಿರುಚಿದಳು, “ಫೇಲ್ ‌ಮಾಡಲೇಬೇಕು ಅಂತ ನಿರ್ಧರಿಸಿರುವಾಗ ಈ ಪರೀಕ್ಷೆಯ ನಾಟಕವೇಕೆ?”

 

ನಗರದ ಒಬ್ಬ ಹುಡುಗಿ, ಹಳ್ಳಿಯ ಹುಡುಗನನ್ನು ಮದುವೆಯಾಗಿ ಬಂದಳು. ಅತ್ತೆಮನೆಗೆ ಬಂದ ಮಾರನೇ ಬೆಳಗ್ಗೆ ಅವಳು ಬ್ರಶ್ಶಿಗೆ ಪೇಸ್ಟ್ ಹಾಕಿ ಹಲ್ಲು ಉಜ್ಜತೊಡಗಿದಳು. ಆಗ ಅವಳಿಗಿಂತ ಕಿರಿ ವಯಸ್ಸಿನ ಮೈದುನ ಅವಳ ಮುಂದೆ ಬಂದು ನಿಂತು, “ಅತ್ತಿಗೆ, ಏನು ತಿನ್ನುತ್ತಿದ್ದೀರಿ? ನನಗೂ ಕೊಡಿ,” ಎಂದು ಕೇಳಿದ. ಆಗ ಅವಳು ಅವನ ಬೆರಳ ಮೇಲೆ ಪೇಸ್ಟ್ ಹಾಕಿದಳು. ಆ ಹುಡುಗ ಅದನ್ನು ಗಬ್ಬಕ್ಕನೇ ಹಾಗೇ ತಿಂದುಬಿಟ್ಟ. ಅವಳಿಗೆ ಸಿಟ್ಟು ಬಂದು, ಅವನ ತಲೆ ಮೇಲೆ ಮೊಟಕಿದಳು. ಆ ಹುಡುಗ ಅಳುತ್ತಾ ತನ್ನ ಅಣ್ಣನ ಬಳಿ ಹೋಗಿ ದೂರು ನೀಡಿದ. ಅಣ್ಣ ಬಂದು ನೇರವಾಗಿ ಹೆಂಡತಿಯನ್ನು ವಿಚಾರಿಸಿದ, “ಯಾಕೆ, ಅವನನ್ನು ಹೊಡೆದೆ?” ಅದಕ್ಕೆ ಅವಳು, “ಅವನು ಪೇಸ್ಟ್ ಕೇಳಿದ. ಕೊಟ್ಟರೆ ಅದನ್ನು ಹಾಗೇ ತಿಂದುಬಿಡುವುದೇ?” ಎಂದಳು.

ತಕ್ಷಣ ಅವನು ತಮ್ಮನ ತಲೆಯ ಮೇಲೆ ಗುದ್ದಿ, “ಏ ಪೆದ್ದೇ…. ಈ ಕ್ರೀಂ ಬ್ರೆಡ್‌ ಮೇಲೆ ಹಾಕಿ ತಿನ್ನುವಂಥದು. ಹಾಗೇ ತಿನ್ನಬಾರದು,” ಎನ್ನುವುದೇ?

 

ರವಿ ಅಜ್ಜಿಯ ಕೈಗೆ ಹುರಿದ ಬಟಾಣಿ ಕೊಡುತ್ತಾ ಹೇಳಿದ, “ಅಜ್ಜಿ, ನೀನೂ ಇದನ್ನು ತಿನ್ನಜ್ಜಿ. ರುಚಿ ಬಹಳ ಚೆನ್ನಾಗಿದೆ,” ಎಂದ.

ಅಜ್ಜಿ : ಎಲ್ಲಪ್ಪ ಮಗು… ಅದನ್ನು ತಿನ್ನಲು ನನಗೆ ಹಲ್ಲೇ ಇಲ್ಲವಲ್ಲ?

ರವಿ : ಹಾಗಾದರೆ ಇದು ನಿನ್ನ ಹತ್ತಿರ ಇರುವುದೇ ಒಳ್ಳೆಯದಜ್ಜಿ. ಸಂಜೆ ಸ್ಕೂಲಿನಿಂದ ಬಂದ ಮೇಲೆ ಈಸ್ಕೊಂತೀನಿ.

 

ಯುವ ಪ್ರೇಮಿಗಳಾದ ರಾಜು ಗೀತಾ ಬಹಳ ದಿನಗಳ ನಂತರ ಹೋಟೆಲ್‌ಗೆ ಹೋದರು. ಗೀತಾಳ ಆಸೆಯಂತೆ ಸವೋಸಾ ಆರ್ಡರ್‌ ಮಾಡಲಾಯಿತು. ರಾಜು ಗಮನಿಸುತ್ತಾನೆ, ಗೀತಾ ಕೇವಲ ಸವೋಸಾದ ಒಳಭಾಗದ ತಿರುಳಾದ ಆಲೂ ಪಲ್ಯ ಮಾತ್ರ ಸವಿಯುತ್ತಿದ್ದಳು. ಎರಡನೇ ಸವೋಸಾ ತಿನ್ನುವಾಗಲೂ ಹಾಗೇ ಮಾಡಿದಳು ರಾಜುವಿಗಿನ್ನು ತಡೆಯಲು ಆಗಲಿಲ್ಲ.

ರಾಜು : ಇದೇನು ಗೀತಾ, ನೀನು ಕೇವಲ ಆಲೂ ಪಲ್ಯ ಮಾತ್ರ ತಿನ್ನುತ್ತಿರುವೆ. ಇಡೀ ಸವೋಸಾ ತಿನ್ನಬೇಕಲ್ಲವೇ?

ಗೀತಾ : ಇಲ್ಲಪ್ಪ ಇಲ್ಲ…. ನನಗೆ 2 ವಾರದಿಂದ ವೈರಲ್ ಫೀವರ್‌. ಡಾಕ್ಟರ್‌ ಹೊರಗಿನ ಯಾವ ಪದಾರ್ಥವನ್ನೂ ತಿನ್ನಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ.

 

ರೇಖಾ ರವಿ ಹಳೆಯ ಪ್ರೇಮಿಗಳು. ಒಂದು ದಿನ ಯಾವುದೋ ಕಾರಣಕ್ಕೆ ಇಬ್ಬರಲ್ಲೂ ಜಗಳ ತಾರಕಕ್ಕೆ ಹೋಯಿತು.

ರೇಖಾ : ಸಾಕಾಯ್ತು ನಿನ್ನ ಸಹವಾಸ! ನಿನ್ನನ್ನು ಬಿಟ್ಟು ನಾನು ಶಾಶ್ವತವಾಗಿ ದೂರ ಹೋಗ್ತಿದ್ದೀನಿ, ಇನ್ನೆಂದೂ ನಾನು ನಿನ್ನನ್ನು ನೋಡಲು ಬರೋದಿಲ್ಲ. ಎಂದೂ ನನ್ನನ್ನು ಭೇಟಿಯಾಗಲು ಪ್ರಯತ್ನಿಸಬೇಡ.

ರವಿ : ಥ್ಯಾಂಕ್ಸ್ ಡಿಯರ್‌…. ಈಗಲಾದ್ರೂ ಕೃಪೆ ತೋರಿದೆಯಲ್ಲ…

ರೇಖಾ : ಏ…. ನೀನು ಈ ರೀತಿ ಡಿಯರ್‌ ಅಂದಮೇಲೆ, ನಿನ್ನನ್ನು ಬಿಟ್ಟು ನಾನು ಅಗಲುವುದಾದರೂ ಹೇಗೆ?

 

ರಾಮಣ್ಣ : ಅಲ್ಲಯ್ಯ…. ನಿನ್ನನ್ನು ನೋಡಿದರೆ ಒಳ್ಳೆ ಕಟ್ಟುಮಸ್ತು ಪೈಲ್ವಾನ್‌ ತರಹ ಇದ್ದೀಯ. ಕಡಿದರೆ 4 ಆಳಾಗ್ತೀಯ! ಹೀಗಿರುವಾಗ ಭಿಕ್ಷೆ ಬೇಡಿ ತಿನ್ನಲು ನಿನಗೇನು ಬಂದಿರೋದು ಕೇಡು? ನಡಿ ನನ್ನ ಜೊತೆ, ಕೂಲಿ ಮಾಡಿದ್ರೆ ದಿನಕ್ಕೆ ನಿನಗೆ 100/ ರೂ. ಸಿಗುವ ಏರ್ಪಾಡು ಮಾಡಿಸ್ತೀನಿ.

ಭಿಕ್ಷುಕ : ಏ…. ಉಗೀರಿ ಮೊಕಕ್ಕೆ! ನನ್ನ ಜೊತೆ ಬಂದು ಬೀದಿ ಬೀದೀಲಿ ಭಿಕ್ಷೆ ಬೇಡಿ, ದಿನಕ್ಕೆ 200/ ರೂ. ಸಿಗುವ ಏರ್ಪಾಡು ಮಾಡಿಸ್ತೀನಿ!

ವೀಣಾ ವರುಣ್‌ ತಮ್ಮ ಪ್ರೇಮದ ಮಧ್ಯೆ ಆಗಾಗ ಮುನಿಸಿಕೊಳ್ಳುತ್ತಿದ್ದರು. ವರುಣನ ಕುಡಿಯುವ ಅಭ್ಯಾಸ ಅವಳಿಗೆ ಸಿಟ್ಟು ಕೆರಳಿಸುತ್ತಿತ್ತು. ಇಲ್ಲ ಇಲ್ಲ ಅನ್ನುತ್ತಲೇ ಆ ದಿನ ವರುಣ್‌ ಕುಡಿದ ಬಂದಿದ್ದ. ಅವನನ್ನು ಭೇಟಿಯಾಗುತ್ತಲೇ ಅದನ್ನು ಗಮನಿಸಿದ ವೀಣಾ ತಕ್ಷಣ ಸಿಡುಕಿದಳು, “ಛೀ… ಎಷ್ಟು ಸಲ ಹೇಳೋದು? ಬಲವಾದ ಕಾರಣ ಇಲ್ಲದಿದ್ದರೆ ಕುಡಿಯುವುದೇ ಇಲ್ಲ ಅಂತ ನೀನು ಸಾವಿರ ಸಲ ಪ್ರಾಮಿಸ್‌ ಮಾಡಿದ್ದೀ!”

ವರುಣ್‌ ನಸುನಗುತ್ತಾ ಹೇಳಿದ, “ಏನು ಮಾಡಲಿ ಡಿಯರ್‌, ದೀಪಾವಳಿ ಸೀಸನ್‌ ಅಲ್ವಾ? ರಾಕೆಟ್‌ ಹಚ್ಚಲು ಮನೆಯಲ್ಲಿ ಒಂದಾದರೂ ಖಾಲಿ ಬಾಟಲ್ ಇರಲೇ ಇಲ್ಲ.”

 

ಹೈಸ್ಕೂಲ್ ‌ತರಗತಿಗೆ ಹೊಸದಾಗಿ ಬಂದಿದ್ದ ಟೀಚರ್‌ ವಿದ್ಯಾರ್ಥಿಗಳ ಪರಿಚಯ ಪಡೆಯುತ್ತಾ ಕೊನೆ ಬೆಂಚಿನ ಎತ್ತರದ ಹುಡುಗನನ್ನು, “ನಿನ್ನ ಹೆಸರೇನು?” ಎಂದು ವಿಚಾರಿಸಿದರು.

ಹುಡುಗ : ನನ್ನ ಹೆಸರು ಹೋಲಾ!

ಟೀಚರ್‌ : ಇದೆಂಥ ಹೆಸರು… ಬಲೇ ವಿಚಿತ್ರವಾಗಿದೆಯಲ್ಲ.

ಹುಡುಗ : ಹೂಂ ಮತ್ತೆ… ನಾನು ಹೋಳಿಹಬ್ಬದ ದಿನ ಹುಟ್ಟಿದ್ದಂತೆ, ಅದಕ್ಕೆ ನನಗೆ ಈ ಹೆಸರು.

ಟೀಚರ್‌ : ಸಧ್ಯ! ನೀನು ದೀಪಾವಳಿ ದಿನ ಹುಟ್ಟಲಿಲ್ಲವಲ್ಲ….?

ಹುಡುಗ : ಅಂದ್ರೆ….?

ಟೀಚರ್‌ : ಆಗ ನಿನ್ನ ಹೆಸರು ದಿವಾಳಿ ಆಗ್ತಿತ್ತೇನೋ….

 

ಒಂದು ದಿನ ಗೆಳೆಯರೆಲ್ಲ ಕೂಡಿ ಕಾಲೇಜಿನ ಕ್ಯಾಂಟೀನ್‌ನಲ್ಲಿ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಿ ಗಿರೀಶ್‌ ಕೈಯಲ್ಲಿ 4 ಪುಸ್ತಕ ಹಿಡಿದು ಆ ಕಡೆ ಬಂದಾಗ ಎಲ್ಲರ ನಗುವಿಗೆ ಬ್ರೇಕ್‌ ಬಿತ್ತು. ಅಸಲಿಗೆ, ಅವನು ಕಾಲೇಜಿಗೆ ಬಂದಾಗೆಲ್ಲ ಯಾವುದಾದರೂ ಒಂದು ವಿಧದಲ್ಲಿ ನಂದಿನಿಗೆ ಪ್ರಪೋಸ್‌ ಮಾಡಲೇಬೇಕೆಂದು ಪ್ರಯತ್ನಿಸಿ ವಿಫಲನಾಗುತ್ತಿದ್ದ.

ಹರಿಣಿ ಪಕ್ಕ ನಿಂತಿದ್ದ ನಂದಿನಿ ಬಳಿ ಬಂದವನೇ ಅವಳ ಕೈ ಕುಲುಕುವ ನೆಪದಲ್ಲಿ ಹೊಸ ಐಡಿಯಾ ಬಳಸಿದ, “ನಂದಿನಿ, ನೀನು ನನ್ನ ಮಕ್ಕಳ ತಾಯಿ ಆಗಲು ಬಯಸುವೆಯಾ?”

ಅದಕ್ಕೆ ತಟಕ್‌ ಅಂತ ನಂದಿನಿ ಉತ್ತರ ಕೊಟ್ಟೇಬಿಟ್ಟಳು, “ಹಾಗಾ…. ಎಷ್ಟು ಮಕ್ಕಳು  ನಿನಗೆ?”

ನಂದಿನಿಯ ಉತ್ತರ ಕೇಳಿ ಅಲ್ಲಿದ್ದ ಸಹಪಾಠಿಗಳೆಲ್ಲ ಹೋ ಎಂದು ಗುಲ್ಲೆಬ್ಬಿಸಿ ನಕ್ಕರು. ಅವಳು ಅಂಥ ಉತ್ತರ ನೀಡಬಹುದೆಂದು ಸ್ವಲ್ಪ ನಿರೀಕ್ಷಿಸಿರದ ಗಿರೀಶ್‌, ಅವಳ ಮಾತಿನ ಅರ್ಥ ತಿಳಿಯುತ್ತಲೇ ಅಲ್ಲಿಂದ ಒಂದೇ ಓಟಕಿತ್ತ.

ಅಜಯ್‌ ಕಾಲೇಜಿನಲ್ಲಿ ಮಹಾ ಶೋಕಿವಾಲನೆಂದೇ ಪ್ರಸಿದ್ಧಿ ಕಾಲೇಜಿಗೆ ಹೊಸದಾಗಿ ಸೇರಿದ ಪ್ರತಿಯೊಬ್ಬ ಹುಡುಗಿಯನ್ನೂ ಚುಡಾಯಿಸದೇ ಬಿಡುತ್ತಿರಲಿಲ್ಲ. ಕಾಲೇಜ್‌ ತೆರೆದ 2 ತಿಂಗಳ ನಂತರ ಸ್ವಾತಿ ಅಲ್ಲಿಗೆ ಹೊಸದಾಗಿ ಸೇರಿದಳು.

ಕೇಳಬೇಕೇ? ಅಜಯ್‌ ತನ್ನ ಕೆಲಸ ಶುರು ಹಚ್ಚಿಕೊಂಡ. ಸ್ವಾತಿ ಎಲ್ಲಿಗೆ ಹೋಗಲಿ ಬೆಂಬಿಡದೆ ಅವಳನ್ನು ಹಿಂಬಾಲಿಸಿ ಗೋಳು ಹೊಯ್ದುಕೊಳ್ಳುತ್ತಿದ್ದ. ಒಮ್ಮೆ ಹುಡುಗಿಯರೆಲ್ಲ ಎಂ.ಜಿ. ರಸ್ತೆಯ ಮೆಟ್ರೋ ಕಡೆಗೆ ಹೊರಟಿದ್ದರು. ಅವರ ಹಿಂದೆಯೇ ಓಡಿಬಂದ ಅಜಯ್‌ ಸ್ವಾತಿಯ ಬೆನ್ನಟ್ಟುತ್ತಾ, “ಮುಂದೆ ನೀ ಹೋದಾಗ ಹಿಂದೆ ನಾ ಬರುವೆ ಚಿನ್ನ…” ಎಂದು ಹಾಡುತ್ತಾ ಸಿಳ್ಳೆ ಹೊಡೆಯತೊಡಗಿದ.

“ಬರ್ತೀಯಂತೆ ಇರು…. ಇಲ್ಲಿನ ಬೀಟ್‌ ಪೊಲೀಸ್‌ ನನ್ನ ಸೋದರಮಾವ. ಅವರಿಗೆ ಈಗಲೇ ಹೋಗಿ ಹೇಳ್ತೀನಿ,” ಎಂದು ಬೇರೆ ಹುಡುಗಿಯರು ಕೂಗುತ್ತಿದ್ದರೂ ಸ್ವಾತಿ ಸರಸರ ಅಲ್ಲೇ ಬದಿಯಲ್ಲಿದ್ದ ಪೊಲೀಸ್‌ ಪೇದೆಯನ್ನು ಹುಡುಕಿಕೊಂಡು ಹೊರಟಾಗ ಅಜಯ್ ಕಕ್ಕಾಬಿಕ್ಕಿ!

ಪೊಲೀಸ್‌ ಜೊತೆ ಮಾತನಾಡುತ್ತಾ, ಆಗಾಗ ಅಜಯ್‌ ಕಡೆಗೆ ತಿರುಗಿ ಕೈ ಸನ್ನೆಯಲ್ಲೇ ಅವನ ಕುರಿತು ಎಂಬಂತೆ ಹೇಳತೊಡಗಿದಾಗ, ಯಾವುದೋ ಮಾಯದಲ್ಲಿ ಅಜಯ್‌ ಅಲ್ಲಿಂದ ಓಡಿಹೋಗಿದ್ದ. ಸ್ವಾತಿ ವಾಪಸ್ಸು ಸಹಪಾಠಿಗಳ ಬಳಿ ಬಂದಾಗ, ಏನು ಹೇಳಿದೆ ಎಂದು ಅವರು ಕೇಳಿದರು, “ಏನಿಲ್ಲ, ಕೊನೆ ಸ್ಟಾಪ್‌ನಿಂದ ಮೆಜೆಸ್ಟಿಕ್‌ಗೆ ಹೋಗಲು ರೂಟ್‌ ವಿಚಾರಿಸುತ್ತಿದ್ದೆ,” ಎಂದು ಸ್ವಾತಿ ಹೇಳಿದಾಗ, ಅವರೆಲ್ಲ ಜೋರಾಗಿ ನಕ್ಕರು. ಮರುದಿನದಿಂದ ಅಜಯ್‌ ಅವಳ ತಂಟೆಗೆ ಬಂದಿದ್ದರೆ ಕೇಳಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ