``ನಮ್ಮ ಸಮಾಜ ಇಂದು ಅದೆಷ್ಟು ಮುಂದುವರಿದಿದ್ದರೂ ಸಹ ಇಂದಿಗೂ ಬಡ ಮಧ್ಯಮ ವರ್ಗದ ಮಹಿಳೆಯರ ಶೋಷಣೆ ನಿಂತಿಲ್ಲ. ಮಹಿಳಾ ಸ್ವಾವಲಂಬನೆಯನ್ನು ಸಾಧಿಸಬೇಕೆಂದು ನಮ್ಮ ನಾಯಕರು ಹೇಳುತ್ತಲೇ ಬಂದಿದ್ದಾರೆ. ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳು ತಾವು ಸ್ವಾವಲಂಬನೆಯ ಬದುಕು ನಡೆಸಬೇಕೆಂದು ಕನಸನ್ನು ಕಟ್ಟಿಕೊಂಡಿದ್ದರೂ ಸಹ ಅದಕ್ಕೆ ತಕ್ಕ ಮಾರ್ಗದರ್ಶನ ಸಿಗುತ್ತಿಲ್ಲ. ಈ ಎಲ್ಲಾ ಕೊರತೆಗಳನ್ನು ನೀಗಿಸುವ ಸುಲವಾಗಿಯೇ ಹುಟ್ಟಿಕೊಂಡದ್ದು ಮಹಿಳಾ ಕಲಾ ಮತ್ತು ಕರಕುಶಲ ಧರ್ಮಾರ್ಥ ಸಂಸ್ಥೆ,'' ಇವು ಸಂಸ್ಥೆಯ ಪ್ರಧಾನ ನಿರ್ದೇಶಕಿಯಾದ ಸುಮಾರ ಮಾತುಗಳು.
ಬೆಂಗಳೂರಿನ ಜಿಂದಾಲ್ ನಗರದಲ್ಲಿರುವ `ಮಹಿಳಾ ಕಲಾ ಮತ್ತು ಕರಕುಶಲ ಧರ್ಮಾರ್ಥ ಸಂಸ್ಥೆ'ಯ ಗ್ರಾಮೀಣ ಮಹಿಳೆಯರಿಗಾಗಿ ವಿವಿಧ ಭಾಗಗಳಲ್ಲಿ ಉಚಿತ ತರಬೇತಿಗಳನ್ನು ನೀಡುತ್ತಲಿದೆ. ಜಿಂದಾಲ್ ಸಮೂಹದ ಸೀತಾರಾಮ್ ಜಿಂದಾಲ್ ರವರು ಗ್ರಾಮೀಣ ಮಹಿಳೆಯರ ಅನುಕೂಲಕ್ಕಾಗಿ `ಸೀತಾರಾಮ್ ಜಿಂದಾಲ್ ಫೌಂಡೇಶನ್' ಸಂಸ್ಥೆಯ ಮುಖೇನ 1990ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಮಹಿಳೆಯರಿಗೆ, ಗ್ರಾಮೀಣ ಯುವತಿಯರಿಗೆ ನಾನಾ ರೀತಿಯ ಉದ್ಯೋಗಾಧಾರಿತ ತರಬೇತಿಗಳನ್ನು ನೀಡಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿ ಜೀವನವನ್ನು ಎದುರಿಸಲು ಸನ್ನದ್ಧಗೊಳಿಸುತ್ತಿದ್ದಾರೆ.
ಪ್ರಾರಂಭದಲ್ಲಿ ಹೊಲಿಗೆ ತರಬೇತಿ ಹಾಗೂ ಬೆರಳಚ್ಚು (ಟೈಪಿಂಗ್) ತರಬೇತಿಯೊಂದಿಗೆ ಪ್ರಾರಂಭವಾದ ಈ ಸಂಸ್ಥೆಯಲ್ಲಿ ಇಂದು ಹೊಲಿಗೆ ತರಬೇತಿ, ಎಂಬ್ರಾಯಿಡರಿ, ಸುಲಭ ಇಂಗ್ಲಿಷ್ ಕಲಿಕೆ (ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್), ಬ್ಯೂಟೀಷಿಯನ್ ತರಬೇತಿ, ಬೆರಳಚ್ಚು, ಕಂಪ್ಯೂಟರ್ ಬೇಸಿಕ್, ಟ್ಯಾಲಿ, ಡಿಟಿಪಿ, ನರ್ಸಿಂಗ್ ಸಹಾಯಕ ತರಬೇತಿ ಸೇರಿದಂತೆ ಹಲವಾರು ಕೋರ್ಸುಗಳನ್ನು ಕಲಿಸಲಾಗುತ್ತದೆ. ಪದವಿ ಗಳಿಸಿರುವವರು ಮಾತ್ರವಲ್ಲದೆ, ಸರಿಯಾದ ವಿದ್ಯಾರ್ಹತೆ ಹಾಗೂ ಉದ್ಯೋಗವಿಲ್ಲದವರು ಸಹ ಇಲ್ಲಿ ತರಬೇತಿ ಹೊಂದಿದ ನಂತರ ಉತ್ತಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಮಹಿಳೆಯರು ಬೆಂಗಳೂರು ಮೆಟ್ರೋ, ಹೈಕೋರ್ಟ್ ಸೇರಿದಂತೆ ನಾನಾ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇನ್ನೂ ಹಲವರು ಸ್ವಂತ ಉದ್ಯಮ ನಡೆಸುತ್ತಿದ್ದಾರೆ.
ಇನ್ನು ಈ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಬಡ ಹೆಣ್ಣುಮಕ್ಕಳಿಗೆ (ಹೊಲಿಗೆ, ಕಸೂತಿ ಮತ್ತು ಬ್ಯೂಟೀಷಿಯನ್ ತರಗತಿಗಳಿಗೆ ಪ್ರತಿದಿನ ತಪ್ಪದೇ ಹಾಜರಾಗುವ ಶಿಕ್ಷಣಾರ್ಥಿಗಳಿಗೆ) ಮಾಸಿಕ ವಿದ್ಯಾರ್ಥಿ ವೇತನವನ್ನು ಸಹಾ ನೀಡಲಾಗುತ್ತದೆ. ಟೈಲರಿಂಗ್ ತರಬೇತಿ ಪಡೆದ ಗ್ರಾಮೀಣ ಬಡ ಹೆಣ್ಣುಮಕ್ಕಳಿಗೆ ಅತ್ಯಂತ ಕನಿಷ್ಠ ದರದಲ್ಲಿ (ಹೊಲಿಗೆ ಯಂತ್ರದ ಶೇ.50ರಷ್ಟು ಹಣವನ್ನು ಬ್ಯಾಂಕ್‌ಸಾಲದ ರೂಪದಲ್ಲಿ ನೀಡಲಾಗುತ್ತದೆ ಅಥವಾ ಫಲಾನುಭವಿಗಳೇ ಹಣವನ್ನು ನೀಡಿ ಪಡೆದುಕೊಳ್ಳಬಹುದು) ಹೊಲಿಗೆ ಯಂತ್ರವನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ. ಪ್ರತಿದಿನ ಮುಂಜಾನೆ 9.30 ರಿಂದ ಸಂಜೆ 4ರವರೆಗೆ ನಡೆಯುವ ವಿವಿಧ ತರಗತಿಗಳಲ್ಲಿ ಸದ್ಯ ಅಂದಾಜು ನೂರಕ್ಕೂ ಹೆಚ್ಚಿನ ವನಿತೆಯರು ತರಬೇತಿ ಪಡೆಯುತ್ತಿದ್ದಾರೆ.
``ನಮ್ಮ ಸುತ್ತಮುತ್ತಲಿನ ಗ್ರಾಮೀಣ ಹೆಣ್ಣುಮಕ್ಕಳು ಧೈರ್ಯವಾಗಿ ಬದುಕನ್ನು ಎದುರಿಸುವಂತಾಗಬೇಕು. ಪ್ರತಿಯೊಬ್ಬರೂ ಆರ್ಥಿಕ, ಸಾಮಾಜಿಕವಾಗಿ ಉನ್ನತಿ ಹೊಂದಬೇಕೆನ್ನುವುದೇ ಸೀತಾರಾಮ್ ಜಿಂದಾಲ್‌ರ ಉದ್ದೇಶವಾಗಿದ್ದು, ಅದಕ್ಕಾಗಿಯೇ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಸಂಪೂರ್ಣವಾಗಿ `ಜಿಂದಾಲ್ ಫೌಂಡೇಶನ್' ಪೋಷಣೆಯಲ್ಲೇ ನಡೆಯುತ್ತಿದೆಯೇ ಹೊರತು ಸರ್ಕಾರದಿಂದಾಗಲಿ, ಇತರೆ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಂದ ಯಾವ ಬಗೆಯ ಧನ ಸಹಾಯ ಅಥವಾ ಇನ್ನಾವುದೇ ಸಹಾಯವನ್ನೂ ಪಡೆಯುತ್ತಿಲ್ಲ.