ಚಳಿಗಾಲ ಬರುತ್ತಲೇ ಎಲ್ಲರಿಗೂ ಬೆಚ್ಚನೆಯ ಉಡುಪುಗಳು ನೆನಪಾಗುತ್ತವೆ. ಉಣ್ಣೆಯ ಬಟ್ಟೆಗಳು ನಾಜೂಕಾಗಿರುತ್ತವೆ. ಹೀಗಾಗಿ ಇವಕ್ಕೆ ಕೊಂಚ ವಿಶೇಷ ಗಮನ ಕೊಡುವುದು ಅಗತ್ಯ. ಅವುಗಳ ಸ್ಪೆಷಲ್ ಕೇರ್ ಅವುಗಳ ಬೆಚ್ಚನೆಯ ಗುಣವನ್ನು ಖಾಯಮ್ಮಾಗಿಡುತ್ತದೆ.
ಧರಿಸುವ ಮೊದಲು ಗಮನದಲ್ಲಿಡಿ
ಒಂದು ವೇಳೆ ಕಳೆದ ವರ್ಷ ಉಣ್ಣೆಯ ಬಟ್ಟೆಗಳನ್ನು ಎತ್ತಿಡುವಾಗ ಒಗೆದಿಲ್ಲವೆಂದಾದರೆ, ಈಗಲೇ ಒಗೆಯಬೇಕು. ಏಕೆಂದರೆ ಉಣ್ಣೆಯ ಬಟ್ಟೆಗಳಿಗೆ ಮುಗ್ಗಲು ವಾಸನೆ ಹಿಡಿಯುತ್ತದೆ. ಉಣ್ಣೆಯ ಬಟ್ಟೆಗಳಲ್ಲಿ ದುರ್ವಾಸನೆ ಬೀರುತ್ತಿದ್ದರೆ ಅವನ್ನು ಒಗೆಯುವ ಬದಲು ಕಾಗದದ ಮೇಲೆ ಹರಡಿ ಬಿಸಿಲಿನಲ್ಲಿಡಿ. ನಂತರ ತಣ್ಣೀರಿನಲ್ಲಿ ವುಲನ್‌ಲಿಕ್ವಿಡ್ ಡಿಟರ್ಜೆಂಟ್ ಹಾಕಿ ಉಣ್ಣೆಯ ಬಟ್ಟೆಗಳನ್ನು 10 ನಿಮಿಷ ಅದರಲ್ಲಿಟ್ಟು ನೆನೆಸಿ ನಂತರ ಅವನ್ನು ಕುರ್ಚಿಯ ಮೇಲೆ ಹರಡಿ ಬಿಸಿಲಿನಲ್ಲೇ ಒಣಗಿಸಿ. ಉಣ್ಣೆಯ ಬಟ್ಟೆಗಳನ್ನು ಎಂದೂ ಬಿಸಿ ನೀರಿನಲ್ಲಿ ಒಗೆಯಬೇಡಿ.
ಕಲೆಯನ್ನು ಹೀಗೆ ಮಾಯ ಮಾಡಿ
ಒಂದು ವೇಳೆ ಉಣ್ಣೆಯ ಬಟ್ಟೆಯ ಮೇಲೆ ಟೀ ಚೆಲ್ಲಿದ್ದರೆ ಕೂಡಲೇ ಅದರ ಮೇಲೆ ಸಕ್ಕರೆ ಸಿಂಪಡಿಸಿ. ಆಗ ಕಲೆ ಗಾಢವಾಗುವುದಿಲ್ಲ. ಸ್ವಲ್ಪ ಹೊತ್ತಿನ ನಂತರ ಆ ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಒಗೆಯಿರಿ. ಕಲೆ ಮಾಯವಾಗುವುದು.
ಒಂದು ವೇಳೆ ಉಣ್ಣೆಯ ಬಟ್ಟೆ ಅಥವಾ ಕಂಬಳಿಯ ಮೇಲೆ ಎಣ್ಣೆಯ ಕಲೆ ಇದ್ದರೆ ಮೊದಲು ಆ ಭಾಗಕ್ಕೆ ಮೊಸರನ್ನು ಹಗುರವಾಗಿ ಹಚ್ಚಿ. ನಂತರ ನೀರಿನಿಂದ ತೊಳೆಯಿರಿ. ಕಲೆಯ ಮೇಲೆ ಪೌಡರ್ ಉದುರಿಸಿದರೆ ಕಲೆ ತೆಳುವಾಗುತ್ತದೆ.
ಹಣ್ಣಿನ ಕಲೆಗಳನ್ನು ದೂರ ಮಾಡಲು ಕಲೆಗಳ ಮೇಲೆ ಗ್ಲಿಸರಿನ್ ಹಚ್ಚಿ ಒಗೆಯಿರಿ. ಕಲೆ ಮಾಯವಾಗುವುದು.
ಉಣ್ಣೆಯ ಬಟ್ಟೆ ಒಗೆಯುವ ವಿಧಾನ
ಉಣ್ಣೆಯ ಕೊಳೆ ಬಟ್ಟೆಗಳನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ನೆನೆಸಿಡಿ. ಬಟ್ಟೆ ನೆನೆಸಲು ಒಳ್ಳೆಯ ಲಿಕ್ವಿಡ್ ಡಿಟರ್ಜೆಂಟ್ ಬಳಸಿ. ಒಂದು ವೇಳೆ ಬಟ್ಟೆ ಹೆಚ್ಚು ಕೊಳೆಯಾಗಿದ್ದರೆ 5 ನಿಮಿಷಗಳವರೆಗೆ ತಣ್ಣೀರಿನಲ್ಲಿ ನೆನೆಸಿಡಿ. ಅದರಿಂದ ಕೊಳೆ ಬಟ್ಟೆ ಸಡಿಲವಾಗುತ್ತದೆ. ನಂತರ ಡಿಟರ್ಜೆಂಟ್ ಬೆರೆತ ನೀರಿನಲ್ಲಿ ಒಗೆಯಿರಿ.
ವುಲನ್ ಬ್ಲೇಝರ್‌ನ್ನು ಡ್ರೈಕ್ಲೀನ್ ಮಾಡಿಸುವ ಬದಲು ಮನೆಯಲ್ಲಿಯೇ ಸ್ವಚ್ಛ ಟವೆಲ್‌ನ್ನು ಬೇಬಿ ಶ್ಯಾಂಪೂನಲ್ಲಿ ನೆನೆಸಿ ಅದರಿಂದ ಒರೆಸಿ. ಒಣಗಿದ ನಂತರ ಕಾಗದದಿಂದ ಹಗುರವಾಗಿ ಒತ್ತಿ. ಬ್ಲೇಝರ್ ಹೊಸದರಂತೆ ಕಾಣುತ್ತದೆ.
ಉಣ್ಣೆಯ ಬಟ್ಟೆಗಳನ್ನು ಒಗೆಯಲು ನೀರಿನಲ್ಲಿ ವುಲನ್ ಡಿಟರ್ಜೆಂಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದರಲ್ಲಿ ಬಟ್ಟೆಗಳನ್ನು ನೆನೆಸಿ. ಕೈಗಳಿಂದ ಉಜ್ಜಿ ಕೊಳೆ ತೆಗೆಯಿರಿ. ನಂತರ ಸ್ವಚ್ಛ ನೀರಿನಲ್ಲಿ ಒಗೆಯಿರಿ. ಒಗೆದ ನಂತರ ಅದನ್ನು ಹಿಂಡದೆ ದಪ್ಪ ಟವೆಲ್ ಮೇಲೆ ಹರಡಿ ಎಳೆಬಿಸಿಲಿನಲ್ಲಿ ಒಣಗಿಸಿ.
ಮಾಹಿತಿ
ಒಂದು ವೇಳೆ ಉಣ್ಣೆಯ ಬಟ್ಟೆಗಳಲ್ಲಿ ಗುಂಜು ಎಳೆ ಬಂದಿದ್ದರೆ ರೇಜರ್‌ನಲ್ಲಿ ಹೊಸ ಬ್ಲೇಡ್ ಹಾಕಿ ಅದನ್ನು ಸ್ವೆಟರ್ ಮೇಲೆ ಒಂದೇ ದಿಕ್ಕಿನಲ್ಲಿ ಚಾಯಿಸಿ. ಎಲ್ಲಾ ಗುಂಜು ಎಳೆಗಳೂ ದೂರವಾಗಿ ಸ್ವೆಟರ್ ಹೊಸದಾಗಿ ಕಂಡುಬರುತ್ತದೆ.
ಒಂದು ವೇಳೆ ಉಣ್ಣೆಯ ಬಟ್ಟೆ ಮುದುರಿದ್ದರೆ ಅದಕ್ಕೆ ಸ್ವಲ್ಪ ಹೊತ್ತು ಹಬೆ ಹಾಯಿಸಿ ಕಂಬಳಿಯ ಮೇಲೆ ಹರಡಿ ಒಣಗಿಸಿ. ಅವು ಮೊದಲಿನಂತೆ ಆಗುತ್ತವೆ.