ಸಮಕಾಲೀನ ನೃತ್ಯ ಪ್ರಕಾರಗಳಲ್ಲೊಂದಾದ `ಇಂಡಿಯನ್ ಕಂಟೆಂಪರರಿ ಸ್ಟೈಲ್' ನೃತ್ಯವನ್ನು ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಪ್ರಚುರಪಡಿಸಿದ ಕೀರ್ತಿಗೆ ಭಾಜನರಾಗಿರುವ ಮಯೂರಿ ಉಪಾಧ್ಯ, ನೃತ್ಯವನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಅಪ್ಪಟ ಕಲಾವಿದೆ. 6 ವರ್ಷ ವಯಸ್ಸಿನಲ್ಲಿದ್ದಾಗೀ ನೃತ್ಯ ಗುರುಗಳಾದ ಇಂದಿರಾ ಕಾದಂಬಿಯವರಿಂದ ಭರತನಾಟ್ಯವನ್ನು ಕಲಿತ ಇವರು ತದನಂತರ ಕಥಕ್, ಒಡಿಸ್ಸಿ, ಕಲರಿಪಟ್ಟು ಹಾಗೂ ಜಾನಪದ ನೃತ್ಯವನ್ನು ಕಲಿತು ಕರಗತ ಮಾಡಿಕೊಂಡರು. ಜೊತೆಗೆ ಶೋಭನಾ ಜಯಸಿಂಗ್ ಡ್ಯಾನ್ಸ್ ಕಂಪನಿ ಲಂಡನ್‌ನಲ್ಲಿ ಕೆಲವು ಕಾಲ ನೃತ್ಯಾಭ್ಯಾಸ ಮಾಡಿ `ಗ್ರಹಮ್' ಹಾಗೂ ಇತರೇ ಹಲವಾರು ನೃತ್ಯ ಪಟ್ಟುಗಳನ್ನು ಕಲಿತುಕೊಂಡರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನ ನೀಡಿರುವ ಮಯೂರಿ ಹಾಗೂ ಸಂಗಡಿಗರು ಈಗಾಗಲೇ `ದಿ ಅದರ್ ಫೆಸ್ಟಿವಲ್,' `ಮೈಸೂರು ದಸರಾ,' `ಬೆಂಗಳೂರು ಹಬ್ಬ,' `ಇಂಟರ್ ನ್ಯಾಷನಲ್ ಫೆಸ್ಟಿವಲ್ ಆಫ್ ಮೂಮೆಂಟ್ ಆರ್ಟ್ಸ್' ಹೀಗೆ ಹತ್ತು ಹಲವಾರು ಪ್ರದರ್ಶನ ನೀಡಿರುವ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಅಲ್ಲದೆ, ಮಿಸ್ ಇಂಡಿಯಾ 2003-04ನೇ ಫೈನ್ ಪ್ರದರ್ಶನ, ಲ್ಯಾಕ್ಮೆ ಇಂಡಿಯಾ ಫ್ಯಾಷನ್ ಶೋನಲ್ಲಿ ನೃತ್ಯ ಪ್ರದಶಿಸಿದ್ದು, ಎಲ್ಲರೂ ಹೆಮ್ಮೆ ಪಡುವಂತಹ ವಿಚಾರ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ `ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮದಲ್ಲಿ `ಜಡ್ಜ್' ಆಗಿ ಕಾರ್ಯ ನಿರ್ವಹಿಸುತ್ತಿರುವ ಮಯೂರಿ ಉಪಾಧ್ಯ, ರಾಜ್ಯದ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದಾರೆ. ಭಾರತೀಯ ಸಮಕಾಲೀನ ನೃತ್ಯ ಪ್ರಕಾರವನ್ನು ವಿಶ್ವದಾದ್ಯಂತ ಪರಿಚಯಿಸುವ ಇವರ ಕನಸಿಗೆ ಬೆಂಬಲ ನೀಡಿದ ಪತಿ ಹಿನ್ನೆಲೆ ಗಾಯಕ ರಘು ದೀಕ್ಷಿತ್ ಹಾಗೂ ಸಹೋದರಿ ಮಾಧುರಿ ಪ್ರಶಂಸಾರ್ಹರು. ನೃತ್ಯ ಸಂಯೋಜನೆ `ನೃತರುತ್ಯ' ಸಂಸ್ಥೆಯ ಜವಾಬ್ದಾರಿ, ವರ್ಕ್‌ಶಾಪ್, ರಿಯಾಲಿಟಿ ಶೋ... ಹೀಗೆ ಹಲವಾರು ವೈವಿಧ್ಯಮಯ ಚಟುವಟಿಕೆಗಳ ಕುರಿತು `ಗೃಹಶೋಭಾ'ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ನಿಮ್ಮ ಕನಸಿನ ಕೂಸು `ನೃತರುತ್ಯ'ದ ಬಗ್ಗೆ ಹೇಳಿ?
`ನೃತರುತ್ಯ' ಇದು ಪ್ರಾರಂಭವಾದದ್ದು 2000ನೇ ವರ್ಷದಲ್ಲಿ. ಇದೊಂದು ಪ್ರೀಮಿಯರ್ ಸಂಸ್ಥೆಯಾಗಿದೆ. ನಾವು ಮಾಡುವುದು ಸಮಕಾಲೀನ ನೃತ್ಯ. ಇದರಲ್ಲಿ ನಾವು ಭಾರತೀಯ ನೃತ್ಯ ಪ್ರಕಾರದ ಕುರಿತಾಗಿ ಹೆಚ್ಚಿನ ಮಹತ್ವ ನೀಡುತ್ತೇವೆ. ಇದರ ಮೂಲಕವೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಪ್ರದರ್ಶನಗಳನ್ನು ನೀಡಿದ್ದೇವೆ. ನಮ್ಮ ನೃತ್ಯ ಪ್ರದರ್ಶನವನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಒಟ್ಟಾರೆ `ನೃತರುತ್ಯ' ಎನ್ನುವುದು ನನ್ನ ಫ್ಯಾಮಿಲಿ ಇದ್ದಂತೆ. ಇತ್ತೀಚೆಗೆ ಇದರ ಮೂಲಕವೇ ಅನೇಕ ದೊಡ್ಡ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆ. ಇಂಗ್ಲೆಂಡಿನ ರಾಣಿಯ ಸಮ್ಮುಖದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿಯವರ ಎದುರಿನಲ್ಲಿಯೂ ಪ್ರದರ್ಶನ ನೀಡಿದ್ದೇವೆ. ಕೊರಿಯಾಗ್ರಫಿಗಾಗಿ ಅಂತಾರಾಷ್ಟ್ರೀಯ ಪುರಸ್ಕಾರವನ್ನೂ ಪಡೆದುಕೊಂಡಿದ್ದೇನೆ. ನಮ್ಮಲ್ಲಿನ ಕೊರಿಯಾಗ್ರಫಿಗಾಗಿ ದಕ್ಷಿಣ ಕೊರಿಯಾ ಕೊರಿಯಾಗ್ರಫಿ ಪ್ರಶಸ್ತಿ ಸಿಕ್ಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ `ಪಾಟಾ' ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮೇಳದಲ್ಲಿಯೂ ಪ್ರದರ್ಶನ ನೀಡಿದ್ದೇವೆ.
ನಿಮ್ಮ ಬಾಲ್ಯ, ನೃತ್ಯದ ಕುರಿತಾಗಿ ನಿಮ್ಮ ಆಸಕ್ತಿ ಬೆಳೆಯಲು ಕಾರಣವಾದ ಸನ್ನಿವೇಶದ ಕುರಿತು ತಿಳಿಸಿ.