`ಮದುವೆ ಮಂಟಪದಿಂದ ವರ ಹಠಾತ್ತನೇ ಎದ್ದು ಹೋದ,’ ಅಥವಾ `ವಧುವಿನ ಮನೆ ಬಾಗಿಲಿಗೆ ಬಂದ ದಿಬ್ಬಣ ವಾಪಸ್‌ಹೊರಟುಹೋಯಿತು,’ ಎಂಬಂತಹ ಸುದ್ದಿಗಳು ಯಾವಾಗಲಾದರೊಮ್ಮೆ ನಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಸಂಬಂಧ ಕೂಡಿ ಬಂದು ಮದುವೆಯೂ ಆಗುತ್ತದೆ. ಆದರೆ ಕೆಲವೇ ದಿನಗಳಲ್ಲಿ ಅದು ಮುರಿದು ಬೀಳುತ್ತದೆ. ಇಲ್ಲಿ ಸಂಬಂಧದ ಮಾಧುರ್ಯವೇ ಹೊರಟುಹೋಗುತ್ತದೆ. ಇದರ ಹಿಂದಿನ ಕಾರಣ ಮಾತ್ರ ಅತ್ಯಂತ ಕ್ಷುಲ್ಲಕವಾಗಿರುತ್ತದೆ. ಒಂದು ಸಣ್ಣ ಮಾತು ಸಂಬಂಧದಲ್ಲಿ ಹುಳಿ ಹಿಂಡುತ್ತದೆ. ಆ ಮಾತಿನಿಂದ ಎರಡೂ ಕಡೆಯವರು ಅದೆಷ್ಟು ರೊಚ್ಚಿಗೇಳುತ್ತಾರೆಂದರೆ, ಸಿಟ್ಟಿನ ಆವೇಶದಲ್ಲಿ ಮದುವೆ ಮುರಿಯುವ ನಿರ್ಣಯ ಕೈಗೊಳ್ಳುತ್ತಾರೆ. ಅದು ಇಬ್ಬರಿಗೂ ಹಾನಿಕರ.
ಇದರಲ್ಲಿ ಪ್ರಮುಖ ಪಾತ್ರ ವಹಿಸುವವರೆಂದರೆ, ವಧುವರರ ತಂದೆ ತಾಯಿ. ಕೆಲವು ಸಲ ಇದರಲ್ಲಿ ಮನೆಯ ಹಿರಿಯರ ಪಾತ್ರ ಇರಬಹುದು.
ಅಂದಹಾಗೆ, ಯುವಕ ಯುವತಿ ಮದುವೆಯ ಬಂಧನದ ಬಳಿಕ ಗಂಡ ಹೆಂಡತಿಯರಾಗುತ್ತಿದ್ದಂತೆ, ಎರಡೂ ಕುಟುಂಬಗಳಲ್ಲಿ ಹಲವು ಸಂಬಂಧಗಳು ಏರ್ಪಡುತ್ತವೆ. ಇಬ್ಬರು ತಾಯಂದಿರು ಕ್ಷಣಾರ್ಧದಲ್ಲಿ ಅತ್ತೆಯರಾಗುತ್ತಾರೆ. ಅದೇ ರೀತಿ ಇಬ್ಬರು ಪುರುಷರಿಗೆ ತಂದೆಯ ಜೊತೆಗೆ ಮಾವನ ಪಟ್ಟ ದೊರೆಯುತ್ತದೆ. ಹೆಂಡತಿಗೆ ಗಂಡನ ತಂಗಿ ನಾದಿನಿಯಾಗಿಯೂ, ಹಾಗೂ ಗಂಡನಿಗೆ ಹೆಂಡತಿಯ ತಂಗಿ ನಾದಿನಿಯಾಗಿಯೂ ದೊರೆಯುತ್ತಾಳೆ. ನವ ವಧು ಹೆಂಡತಿಯಾಗಿ ಕುಟುಂಬದಲ್ಲಿ ಸೊಸೆ, ಅತ್ತಿಗೆ, ಅತ್ತೆ, ಚಿಕ್ಕಮ್ಮ, ಹಿರಿಯ ಸೊಸೆ, ಕಿರಿಯ ಸೊಸೆ ಹೀಗೆ ಹಲವು ಸಂಬಂಧಗಳಿಗೆ ಕಾರಣವಾಗುತ್ತಾಳೆ. ಅಂದಹಾಗೆ, ಇವು ರಕ್ತಸಂಬಂಧಗಳಾಗಿರುವುದಿಲ್ಲ, ಆದರೆ ಅದಕ್ಕೂ ಮುಖ್ಯವಾಗಿ ಅಮೂಲ್ಯ ಹಾಗೂ ಅತ್ಯಂತ ಪ್ರಮುಖ ಸಂಬಂಧಗಳಾಗಿರುತ್ತವೆ. ಈ ಸಂಬಂಧಗಳ ಹೊರತಾಗಿ ಮತ್ತೊಂದು ಸಂಬಂಧವಿದೆ, ಅದು ಎರಡೂ ಕುಟುಂಬಗಳ ದೊಡ್ಡವರ ನಡುವೆ ಬೆಸೆಯಲ್ಪಡುತ್ತದೆ. ಅದು ವಿಶಿಷ್ಟ ಹಾಗೂ ಗೌರವಾರ್ಹವಾಗಿರುತ್ತದೆ. ಅದು ಇಬ್ಬರು ಬೀಗರ ನಡುವಿನ ಸಂಬಂಧ. ಅವರಿಂದಾಗಿಯೇ ಈ ಎಲ್ಲ ಹೊಸ ಸಂಬಂಧಗಳು ಜನ್ಮ ತಳೆಯುತ್ತವೆ.
ಈ ಸಂಬಂಧಗಳಲ್ಲಿ ಒಂದೆಡೆ ಅನೇಕ ತಕರಾರುಗಳು ಕೇಳಿ ಬರುತ್ತಾದರೆ, ಮತ್ತೊಂದೆಡೆ ಈ ಸಂಬಂಧ ಅತ್ಯಂತ ಆತ್ಮೀಯ ಭಾವನೆಯನ್ನು, ಗೌರವವನ್ನು ಪಡೆದುಕೊಳ್ಳುತ್ತದೆ. ಹೆಂಡತಿಯ ತಂದೆ ತಾಯಿ ಅಳಿಯನ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪ ಮಾಡಿದಾಗ ಅಥವಾ ವರನ ತಂದೆ ತಾಯಿಗಳು ವಧುವಿನ ಮನೆಯವರನ್ನು ಕೆಳಮಟ್ಟದವರೆಂದು ಭಾವಿಸಲು ಆರಂಭಿಸಿದಾಗ ಇಂತಹ ತಕರಾರುಗಳು ಕೇಳಿಬರುತ್ತವೆ. ಈ ಸಂಬಂಧಗಳು ಮತ್ತಷ್ಟು ಹಸಿರಾಗಿರಲು ಪರಸ್ಪರ ತಿಳಿವಳಿಕೆ, ಹೊಂದಾಣಿಕೆ ಮತ್ತು ಸಹನಶೀಲ ಗುಣ ಅತ್ಯವಶ್ಯ.
ವಕೀಲಿ ವೃತ್ತಿ ಮಾಡುವ ನಯನಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ನಾನು ಹೇಳಿದ್ದನ್ನು ಕೇಳಿ ಅನೇಕರು ನಂಬುವುದೇ ಇಲ್ಲ, ಆದರೂ ಅದು ಸತ್ಯ. ನನ್ನ ಮದುವೆಯಾಗಿ 1-2 ರ್ಷಗಳೇ ಕಳೆದುಹೋಗಿವೆ. ಆದರೂ ನನ್ನ ಅಮ್ಮ ಹಾಗೂ ಅತ್ತೆ ನಡುವೆ ಒಂದೇ ಒಂದು ಸಲ ಮನಸ್ತಾಪ ಉಂಟಾಗಿಲ್ಲ.
“ಅವರಿಬ್ಬರೂ ಗೆಳತಿಯರಂತಿರುತ್ತಾರೆ. ನಮ್ಮ ಅತ್ತೆಗೆ ಇಲ್ಲಿ ಬೇಸರವೆನಿಸಿದರೆ ನನ್ನ ತಾಯಿಯ ಮನೆಗೆ ಹೋಗಿ ಒಂದೆರಡು ದಿನ ಕಳೆದು ಬರುತ್ತಾರೆ. ಅಮ್ಮ ಕೂಡ ಆಗಾಗ ಇಲ್ಲಿಗೆ ಬರುತ್ತಿರುತ್ತಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಅವರು ಪರಸ್ಪರರಿಗೆ ಕೊಡು ಗೌರವ. ಒಬ್ಬರು ಇನ್ನೊಬ್ಬರ ಮನಸ್ಸನ್ನು ನೋಯಿಸುವುದಿಲ್ಲ. ಈ ಕಾರಣದಿಂದ ಅವರ ನಡುವೆ ಉತ್ತಮ ಸಂಬಂಧ ಕಾಯ್ದುಕೊಂಡು ಹೋಗಲು ಸಾಧ್ಯವಾಗಿದೆ.”
ಸಮಾನತೆಯ ಗೌರವ
ಈಗ ಹುಡುಗ ಹುಡುಗಿಯರನ್ನು ಸಮಾನವಾಗಿ ಕಾಣಲಾಗುತ್ತದೆ. ಇಂತಹದರಲ್ಲಿ ಹುಡುಗಿಯ ಮನೆಯವರು ಹುಡುಗನ ಮನೆಯವರ ಮುಂದೆ ಸದಾ ತಲೆ ತಗ್ಗಿಸಿಯೇ ಇರುವಂತಹ ಕಾಲ ಇದಲ್ಲ. ಈಗ ಎರಡೂ ಕುಟುಂಬದ ಜನರು ಸಮಾನ ಗೌರವ ಬಯಸುತ್ತಾರೆ. ಯಾರು ಯಾರಿಂದಲೂ ತುಳಿಯಲ್ಪಡಲು ಇಚ್ಛಿಸುವುದಿಲ್ಲ. ಈಗ ಮಗಳ ಅತ್ತೆಮನೆಗೆ ಹುಡುಗಿಯ ತಾಯಿ ಬೇಕಾದಾಗ ಬಂದು ಮಗಳನ್ನು ಕರೆದುಕೊಂಡು ಹೋಗಬಹುದಾಗಿದೆ.
ಆದರೆ ಇದರರ್ಥ ಮಗಳ ಅತ್ತೆಮನೆಯಲ್ಲಿ ನೀವು ಬೇಕಾಬಿಟ್ಟಿಯಾಗಿ ವರ್ತಿಸಲು ಪ್ರಯತ್ನಿಸಬಹುದು ಎಂದಲ್ಲ. ಹೀಗೆ ಮಾಡಿದರೆ ನಿಮ್ಮ ಬೀಗರ ಮನಸ್ಸಿಗೂ ನೋವಾಗಬಹುದು.
ಕಾಲದ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯವಶ್ಯ. ನಿಮ್ಮ ಹೊಂದಾಣಿಕೆ ಸಂಬಂಧಗಳನ್ನು ಬೆಸೆಯುವಲ್ಲಿ ನೆರವಾಗುತ್ತದಲ್ಲದೆ, ಮನಸ್ತಾಪ ಉಂಟಾಗದಂತೆ ನಿಮ್ಮನ್ನು ಕಾಪಾಡುತ್ತದೆ.
ವಿವಾದಕ್ಕೆ ಅವಕಾಶ ಕೊಡಬೇಡಿ
ಮದುವೆಯ ಗಡಿಬಿಡಿಯಲ್ಲಿ ಕೆಲವು ತಪ್ಪುಗಳು, ಅಚಾತುರ್ಯಗಳು ಘಟಿಸುತ್ತವೆ. ದಿಬ್ಬಣ ಹುಡುಗಿಯ ಮನೆಯ ಮುಂದೆ ಬಂದು ನಿಂತಾಗ ವರನ ಮನೆಯವರಿಗೆ ತಾವು ಹುಡುಗನ ಕಡೆಯವರು ಎಂಬ ಅಹಂ ಬಂದು ಬಿಡುತ್ತದೆ. ಅವರು ಪ್ರತಿಯೊಂದೂ `ಪರ್ಫೆಕ್ಟ್’ ಆಗಿರಲು ಬಯಸುತ್ತಾರೆ. ಹುಡುಗಿಯ ಕಡೆಯವರು ದಿಬ್ಬಣದ ಸ್ವಾಗತಕ್ಕೆ ಏನೆಲ್ಲ ಸಿದ್ಧತೆ ಮಾಡಿಕೊಂಡಿರುತ್ತಾರೆ.
ಇಷ್ಟೆಲ್ಲ ಸಿದ್ಧತೆಗಳ ನಡುವೆಯೂ ಒಂದಿಲ್ಲೊಂದು ಕೊರತೆ ಅಥವಾ ತಪ್ಪು ಆಗಿಬಿಡುತ್ತದೆ. ಅದು ಸ್ವಾಭಾವಿಕ ಕೂಡ. ಇಂತಹ ಸ್ಥಿತಿಯಲ್ಲಿ ಕಡ್ಡಿಯನ್ನು ಗುಡ್ಡ ಮಾಡುವ ಕೆಲವು ವ್ಯಕ್ತಿಗಳು ಇರುತ್ತಾರೆ. ಅವರು ವಿವಾದ ಹುಟ್ಟಿಸುತ್ತಾರೆ. ನಂತರ ಅದೇ ದೊಡ್ಡದಾಗಿಬಿಡುತ್ತದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸುವವರು ವಧುವರರ ತಾಯಂದಿರು. ಅವರು ತಮ್ಮ ಅಹಂನ್ನು ಕಡಿಮೆ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ಸಿದ್ಧರಿರುವುದಿಲ್ಲ.
ಇಂತಹ ಸ್ಥಿತಿಯಲ್ಲಿ ಅಗತ್ಯವಾಗಿರುವುದು ತಿಳಿವಳಿಕೆಯ ಹೆಜ್ಜೆ. ತಪ್ಪುಗಳನ್ನೇ ಎತ್ತಿ ಹಿಡಿಯುವುದಕ್ಕಿಂತ ಅವುಗಳನ್ನು ಬಚ್ಚಿಡುವುದರಲ್ಲಿ ಜಾಣತನವಿದೆ. ಏಕೆಂದರೆ ಚಿಕ್ಕ ಕಿಡಿಯಿಂದಲೇ ಬೆಂಕಿ ಹೊತ್ತಿಕೊಳ್ಳುತ್ತದೆ. ಹೀಗಾಗಿ ಯಾವುದೇ ವಿವಾದಗಳಿಗೆ ಕುಮ್ಮಕ್ಕು ಕೊಡಬೇಡಿ.
ಸಂಬಂಧಗಳಿಗೆ ಗೌರವ ಕೊಡಿ
ಇಂದಿನ ಧಾವಂತದ ಜೀವನದಲ್ಲಿ ಸಂಬಂಧಗಳ ಬಗ್ಗೆ ಹೆಚ್ಚು ಗಮನ ಕೊಡುವಷ್ಟು ಸಮಯ ಯಾರ ಬಳಿಯೂ ಇಲ್ಲ. ನೀವು ಸಮಯ ಕೊಡಲಾಗದಿದ್ದರೂ, ಅವಕ್ಕೆ ಗೌರವನ್ನಾದರೂ ಕೊಡಿ. ಇದರಿಂದ ಸಂಬಂಧಗಳಲ್ಲಿ ಮಾಧುರ್ಯ ಉಳಿಯುತ್ತದೆ, ಆತ್ಮೀಯತೆ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಅದರಲ್ಲೂ ವಧುವರರ ಕುಟುಂಬಗಳಲ್ಲಿ ಈ ರೀತಿಯ ಸಂಬಂಧ ಅತ್ಯಗತ್ಯ. ಇದಕ್ಕಾಗಿ ನೀವು ಅಷ್ಟಿಷ್ಟು ಸಮಯ ಕೊಡಬೇಕಾಗುತ್ತದೆ.
ಹುಡುಗಿಯ ಮನೆಯವರು ನಿಮ್ಮ ಮನೆಗೆ ಬಂದಾಗ ಅಥವಾ ನೀವು ಅವರ ಮನೆಗೆ ಹೋದಾಗ ಗೌರವದಿಂದ ಅವರನ್ನು ವಿಚಾರಿಸಿಕೊಳ್ಳುವುದು ಅತ್ಯಗತ್ಯ. ಈಗ ಪರಿಸ್ಥಿತಿ ಹೇಗಾಗಿ ಬಿಟ್ಟಿದೆಯೆಂದರೆ, ಮದುವೆಯಾಗಿಬಿಟ್ಟರೆ ಸಾಕು, ಯಾರೂ ಪರಸ್ಪರರೊಂದಿಗೆ ಅಷ್ಟೊಂದು ಆತ್ಮೀಯತೆಯಿಂದ ಮಾತನಾಡುವುದಿಲ್ಲ. ಹೋಗಿ ಬರುವುದು ಕೂಡ ಕಡಿಮೆಯೇ. ಇದಕ್ಕೆಲ್ಲ ಮುಖ್ಯ ಕಾರಣ ಸಮಯದ ಕೊರತೆ.
ಇದೇ ಕಾರಣದಿಂದ ಎರಡೂ ಕಡೆಯವರಿಗೆ ಗೌರವ, ಮಾನಸಮ್ಮಾನ ಸ್ವಲ್ಪ ದಿನಗಳಿಗೆ ಮಾತ್ರ ಎಂಬುದು ಗೊತ್ತಾಗಿಬಿಡುತ್ತದೆ. ಹಾಗಾಗಿ ಆಗಾಗ ಸಂಪರ್ಕದಲ್ಲಿರುವುದು ಅತ್ಯಗತ್ಯ.
ಮಗಳ ಜೀವನದಲ್ಲಿ ಹಸ್ತಕ್ಷೇಪ ಬೇಡ
ಮಗಳ ಕುಟುಂಬದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಸ್ತಕ್ಷೇಪ ಮಾಡಿದರೆ ಏನೇನು ಅನಾಹುತ ಸಂಭವಿಸುತ್ತದೆ ಎಂಬುದನ್ನು ಅನೇಕ ಚಲನಚಿತ್ರಗಳು ನಮ್ಮ ಕಣ್ಣುಂದೆ ಇಟ್ಟಿವೆ.
ಎಲ್ಲ ತಂದೆ ತಾಯಿಯರು ಮದುವೆಯ ಬಳಿಕ ತಮ್ಮ ಪುತ್ರಿಯ ಜೊತೆ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಹುಡುಗನ ತಾಯಿ ತಂದೆಗೆ ಇದು ಹಿಡಿಸದೇ ಇದ್ದಾಗ ವಿವಾದ ಸೃಷ್ಟಿಯಾಗುತ್ತದೆ. ಇದಕ್ಕೆ ಉಪಾಯವೆಂದರೆ, ನಿಮ್ಮ ಮಗಳು ಈಗ ಬೇರೆ ಮನೆಯವಳು ಎಂಬುದನ್ನು ಒಪ್ಪಿಕೊಳ್ಳಬೇಕು. ಅವಳಿಗೆ ತೊಂದರೆಯಾಗುವಷ್ಟರ ಮಟ್ಟಿಗೆ ನೀವು ಅವಳ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡಬಾರದು.
ನೀವು ನಿಮ್ಮ ಮಗಳು ಹಾಗೂ ಅಳಿಯನ ಸಂಪರ್ಕದಲ್ಲಿರಿ. ಆದರೆ ಯಾವುದೇ ಸಂಗತಿ ಅತಿಯಾದರೆ ಅದು ಹಾನಿಯನ್ನುಂಟು ಮಾಡುತ್ತದೆ ಎಂಬುದು ನೆನಪಿರಲಿ.
ಸೊಸೆಯ ಕುಟುಂಬದವರನ್ನು ಅಮಾನಿಸಬೇಡಿ
ಹುಡುಗನ ಮನೆಯವರ ಪ್ರಮುಖ ಕರ್ತವ್ಯವೆಂದರೆ, ಯಾವ ಮನೆಯಿಂದ ನಿಮ್ಮ ಮನೆಗೆ ಸೊಸೆಯನ್ನಾಗಿ ತಂದುಕೊಂಡಿದ್ದೀರೋ, ಆ ಮನೆಯವರನ್ನೂ ಗೌರವಿಸಬೇಕು. ಆದರೆ ಹೀಗಾಗುವುದು ಕಡಿಮೆ. ಒಂದು ಸಲ ಮದುವೆಯಾಗಿಬಿಟ್ಟರೆ ಇನ್ನು ಹುಡುಗಿ ಮನೆಯವರಿಂದ ಏನು ಪ್ರಯೋಜನ ಎಂದು ಯೋಚಿಸುವುದು ತಪ್ಪು. ನಿಮ್ಮ ಮನೆಯವರಿಗೆ ಅವರು ಹೇಗೆ ಗೌರವ ಕೊಡುತ್ತಾರೊ, ಅದೇ ರೀತಿ ನೀವು ಅವರಿಗೆ ಗೌರವ ಕೊಡುವುದು ಅತ್ಯಗತ್ಯ. ನಾವು ವರನ ಕಡೆಯವರು ಹಾಗಾಗಿ ನಾವು ಮಾಡುವ ತಪ್ಪು ಕ್ಷಮಾರ್ಹ ಎಂದು ನೀವು ಯೋಚಿಸುವುದು ತಪ್ಪು. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಪ್ಪಾಗಿದೆ ಎಂದು ಗೊತ್ತಾದ ತಕ್ಷಣ ಆ ಬಗ್ಗೆ ನೀವು ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಮರ್ಯಾದೆ ಉಲ್ಲಂಘಿಸಬೇಡಿ
ಸಂಬಂಧಗಳ ಕೊಂಡಿ ಕಳಚುವುದು ಇಬ್ಬರು ವ್ಯಕ್ತಿಗಳು ಮರ್ಯಾದೆಯ ಮೇರೆಯನ್ನು ದಾಟಿದಾಗ. ಇದರಿಂದಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಸಂಬಂಧದ ಕೊಂಡಿ ಕಳಚದ ಹೊರತು ಅವರಿಗೆ ಬೇರೆ ದಾರಿಯೇ ಉಳಿದಿರುವುದಿಲ್ಲ. ಸಂಬಂಧಗಳು ಯಾವಾಗಲೂ ಮರ್ಯಾದೆ ಹಾಗೂ ಗೌರವವನ್ನು ಅಲವಂಬಿಸಿರುತ್ತವೆ. ಯಾವ ಸಂಬಂಧದಲ್ಲಿ ಗೌರವೇ ಇರುದಿಲ್ಲವೋ, ಮರ್ಯಾದೆಯನ್ನು ಉಲ್ಲಂಘನೆ ಮಾಡಲಾಗುತ್ತದೋ, ಅಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಸ್ವಲ್ಪ ಕಲ್ಪನೆ ಮಾಡಿಕೊಂಡು ನೋಡಿ.
ಎರಡೂ ಕಡೆಯ ಬೀಗರ ನಡುವೆಯೂ ಗೌರವ ಅತ್ಯಗತ್ಯ. ಅದು ಎರಡೂ ಕುಟುಂಬಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ಒಂದು ವೇಳೆ ಯಾವುದಾದರೂ ತಪ್ಪುಕಲ್ಪನೆ ಅಥವಾ ಮನಸ್ತಾಪ ಉಂಟಾಗಿದ್ದರೆ ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಬಹುದು.
`ಹಮ್ ಆಪ್ ಕೆ ಹೈ ಕೌನ್’ ಚಿತ್ರದಿಂದ ನಾವೊಂದು ಒಳ್ಳೆಯ ಪಾಠ ಕಲಿತುಕೊಳ್ಳಬಹುದು. ಅದರಲ್ಲಿ ವಧುವರರ ತಂದೆ ತಾಯಿಯರ ನಡುವಿನ ಆರೋಗ್ಯಕರ, ಗೌರವಾನ್ವಿತ ಸಂಬಂಧವನ್ನು ಬಿಂಬಿಸಲಾಗಿದೆ.
ಎರಡೂ ಕಡೆಯವರಲ್ಲಿ ದ್ವೇಷದ ಕಿಚ್ಚು ಹಚ್ಚುವುದು ಹಲವು ಜನರ ಪ್ರವೃತ್ತಿಯಾಗಿರುತ್ತದೆ. ಅವರೇನೋ ತಮ್ಮ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿ ಹೋಗುತ್ತಾರೆ. ಆ ಬಳಿಕ ಇದೇನಾಗಿ ಹೋಯ್ತು ಎಂದು ಹೆಣ್ಣಿನ ಕಡೆಯವರಾಗಲಿ, ಗಂಡನ ಕಡೆಯವರಾಗಲಿ ಕೈ ಕೈ ಹಿಸುಕಿಕೊಳ್ಳುವಂತಾಗುತ್ತದೆ. ಇಂತಹ ದ್ವಂದ್ವ ಪ್ರವೃತ್ತಿಯ, ಜಗಳ ಹಚ್ಚುವ ಜನರಿಂದ ಸಾಕಷ್ಟು ದೂರವಿರಿ.
ಇಂತಹವರ ಮಾತುಗಳನ್ನು ಅನುಷ್ಠಾನಕ್ಕೆ ತರುವ ಮುಂಚೆ ಸಾಕಷ್ಟು ವಿಚಾರ ವಿಮರ್ಶೆ ಮಾಡಬೇಕು. ಹೀಗೆ ಮಾಡುವುದರಿಂದ ಬೀಗರ ಮಧ್ಯದ ಸಂಬಂಧ ಬೀಗುವಂತೆ ಅಂದರೆ ಹೆಮ್ಮೆಪಡುವಂತೆ ಇರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
– ಸುಮತಿ ಭೂಷಣ್