ಪತಿ ಪತ್ನಿಯರ ನಡುವೆ ಮನಸ್ತಾಪ ಉಂಟಾಗುವುದು ಸರ್ವೇಸಾಮಾನ್ಯ. ಏಕೆಂದರೆ ಇಬ್ಬರೂ ಎರಡು ಬೇರೆ ಬೇರೆ ಆಲೋಚನೆ, ನಡವಳಿಕೆ ಹೊಂದಿದ ಬೇರೆ ಬೇರೆ ಕುಟುಂಬಗಳಿಂದ ಬಂದರವಾಗಿರುತ್ತಾರೆ. ಒಬ್ಬರಲ್ಲಿ ಶಾಂತ ಮನೋಭಾವ ಇದ್ದರೆ ಇನ್ನೊಬ್ಬರು ಶೀಘ್ರ ಕೋಪಿಯಾಗಿರುತ್ತಾರೆ. ಒಬ್ಬರದು ಬಹಳ ಹೊಂದಿಕೊಳ್ಳುವ ಸ್ವಭಾವವಾಗಿದ್ದರೆ, ಇನ್ನೊಬ್ಬರು ಬಹಳ ರಿಸರ್ವ್ ಆಗಿರುತ್ತಾರೆ. ಹೀಗಿರುವಾಗ ಕಬ್ಬಿಣ ಹಾಗೂ ನೀರಿನಂತೆ ಅವರ ಭಿನ್ನ ಅಭಿಪ್ರಾಯಗಳು ಆಕ್ಸಿಡೈಸ್ಡ್ ಆಗುವುದು ಸಾಮಾನ್ಯ. ಕಬ್ಬಿಣ ಹಾಗೂ ನೀರು ಸೇರುವುದೆಂದರೆ ತುಕ್ಕು ಹಿಡಿದಂತೆಯೇ. ಪರಿಣಾಮ ಸಂಬಂಧಗಳಲ್ಲಿ ಬಹಳ ಬೇಗ ಕಹಿಯ ತುಕ್ಕು ಹಿಡಿಯುತ್ತದೆ. ಹಾಗೆ ಆಗದಿರಲು ಇಲ್ಲಿ ಕೆಲವು ಟಿಪ್ಸ್ ಕೊಡಲಾಗಿದೆ.
ಚಿನ್ನದಂತೆ ಸದೃಢರಾಗಿ
ಒಂದು ವೇಳೆ ನಿಮ್ಮ ಸಂಬಂಧವನ್ನು ಚಿನ್ನದಂತೆ ಮಾಡಿಕೊಂಡು ಅದರ ಗುಣ ವಿಶೇಷತೆಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಭಿನ್ನಾಭಿಪ್ರಾಯವೆಂಬ ತುಕ್ಕು ವೈವಾಹಿಕ ಜೀವನದಲ್ಲಿ ಎಂದಿಗೂ ಹಿಡಿಯುವುದಿಲ್ಲ. ಚಿನ್ನದ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅದು ಗಟ್ಟಿಯಾಗಿ ದೃಢವಾಗಿದೆ. ಅದಕ್ಕೆಂದೂ ತುಕ್ಕು ಹಿಡಿಯುವುದಿಲ್ಲ ಮತ್ತು ಅದು ಮುರಿಯುವ ಭಯ ಇರುವುದಿಲ್ಲ. ನಿಮ್ಮ ವೈವಾಹಿಕ ಸಂಬಂಧವನ್ನೂ ಪರಸ್ಪರ ತಿಳಿವಳಿಕೆ, ಪ್ರೀತಿ ಮತ್ತು ವಿಶ್ವಾಸದ ಅಡಿಪಾಯದ ಮೇಲೆ ನಿಲ್ಲಿಸಿ ಚಿನ್ನದಂತೆ ಸದೃಢಗೊಳಿಸಿ. ಪರಸ್ಪರ ನಂಬಿಕೆ, ಗೌರವ ಮತ್ತು ಸಂಗಾತಿಯೊಂದಿಗೆ ಸಂವಾದ ಮಾಡುತ್ತಾ ಸುಲಭವಾಗಿ ಸಂಬಂಧಗಳಲ್ಲಿನ ಪೊಳ್ಳುತನವನ್ನು ದೂರ ಮಾಡಬಹುದು. ಚಿನ್ನ ಒಳಗೆ ಪೊಳ್ಳಲ್ಲ. ಕೈಗೆತ್ತಿಕೊಂಡರೆ ಮುರಿದುಹೋಗುವಷ್ಟು ಅಥವಾ ಬಿರುಕು ಮೂಡುವಷ್ಟು ದುರ್ಬಲ ಅಲ್ಲ. ನಿಮ್ಮ ಸಂಗಾತಿ ಹೇಳುವುದನ್ನು ಗಮನವಿಟ್ಟು ಕೇಳಿ, ನೀವು ಅವರನ್ನು ಅಲಕ್ಷಿಸುವುದಿಲ್ಲ ಎಂದು ಮನವರಿಕೆ ಮಾಡಿಕೊಡಿ. ನಿಮಗೆ ಕೆಲವರ ಮಾತು ಇಷ್ಟವಾಗದಿದ್ದರೂ ಅವರ ಮಾತನ್ನು ಕತ್ತರಿಸದೆ ಪೂರ್ತಿ ಕೇಳಿ. ನಂತರ ನಿಮ್ಮ ಮಾತುಗಳನ್ನು ಹೇಳಿ. ಆಗ ಯಾವುದೇ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ. ನಿಮ್ಮ ಸಂಬಂಧದ ಅಡಿಪಾಯ ಗಟ್ಟಿಯಾಗಿರುತ್ತದೆ. ಚಿನ್ನದಂತೆ ಗಟ್ಟಿಯಾದ ಅಡಿಪಾಯವಿದ್ದಾಗ ಜೀವನದಲ್ಲಿ ಎಂತಹ ಬಿರುಗಾಳಿ ಬಂದರೂ ನಿಮ್ಮ ಸಂಬಂಧ ಅಲುಗಾಡುವುದಿಲ್ಲ ಮತ್ತು ಮುರಿಯುವುದಿಲ್ಲ. ವಾಸ್ತವವೇನೆಂದರೆ ನಿಮ್ಮ ಸಂಬಂಧ ಚಿನ್ನದಂತೆ ದಿನದಿನ ಗಟ್ಟಿಯಾಗುತ್ತಾ ಹೋಗುತ್ತದೆ.
ಪ್ರೀತಿಯ ಹೊಳಪು
ಚಿನ್ನ ಗಟ್ಟಿಯಾಗಿರುವುದಷ್ಟೇ ಅಲ್ಲ ಅದರ ಹೊಳಪೂ ಸಹ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಹತ್ತಿರದಿಂದಷ್ಟೇ ಅಲ್ಲ, ದೂರದಿಂದ ನೋಡಿದರೂ ಚಿನ್ನದ ಹೊಳಪು ಹಾಗೆಯೇ ಇರುತ್ತದೆ. ಅದನ್ನು ಪಡೆಯುವ ಇಚ್ಛೆ ಮಹಿಳೆ ಹಾಗೂ ಪುರುಷರಲ್ಲಿ ಸಮಾನವಾಗಿ ಇರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಬರೀ ಶಾರೀರಿಕ ರೂಪದಲ್ಲಿ ಅಲ್ಲದೆ, ವೈಚಾರಿಕ ಮತ್ತು ಸಂವೇದನಾಶೀಲ ರೂಪದಲ್ಲೂ ಈ ಹೊಳಪು ಸದೃಢವಾಗಿರಬೇಕು. ಚಿನ್ನದಂತಹ ಹೊಳಪು ಪಡೆಯಲು ಪತಿಪತ್ನಿಯರಲ್ಲಿ ಪ್ರೀತಿ ಮತ್ತು ಸಮರ್ಪಣಾ ಭಾವನೆ ಸಮಾನರೂಪದಲ್ಲಿ ಇರಬೇಕು. ಚಿನ್ನದ ಹೊಳಪು ಪ್ರೀತಿಯಿಂದ ಮಾತ್ರ ಪಡೆಯಬಹುದು. ಕೇವಲ ಪ್ರೀತಿಯುಂಟಾದರೆ ಸಾಲದು. ಅದನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ನೀವು ಚಿನ್ನದ ಒಡವೆಗಳನ್ನು ಧರಿಸಿದಾಗ ಅವನ್ನು ಪದೇ ಪದೇ ತೋರಿಸಲು ಪ್ರಯತ್ನಿಸುತ್ತೀರಿ. ಜನರಿಗೆ ಅದರ ಬಗ್ಗೆ ಅತಿಶಯವಾಗಿ ವರ್ಣಿಸುತ್ತೀರಿ. ಆದರೆ ನಿಮ್ಮ ಸಂಗಾತಿಯನ್ನು ಪ್ರೀತಿಸುವಾಗ ಅವರ ಬಗ್ಗೆ ಅತಿಶಯಿಸಿ ಹೇಳಲು ಹಿಂಜರಿಕೆ ಏಕೆ? ಹಾಗೆ ಹೇಳಿದಾಗಲೇ ನಿಮ್ಮ ಸಂಬಂಧ ಚಿನ್ನದಂತೆ ಹೊಳೆಯುತ್ತದೆ.
ಹೇಗೆ ಬೇಕಾದರೂ ಎರಕ ಹೊಯ್ಯಿರಿ
ಚಿನ್ನ ಮಹಿಳೆಯರ ಸೌಂದರ್ಯಕ್ಕೆ ಇನ್ನಷ್ಟು ಗರಿ ಮೂಡಿಸುಂತಹುದು. ಅದರ ಇನ್ನೊಂದು ದೊಡ್ಡ ವಿಶೇಷತೆಯೆಂದರೆ ಅದನ್ನು ಕರಗಿಸಿ ಯಾವುದೇ ರೂಪದಲ್ಲಿ ಎರಕ ಹೊಯ್ಯಬಹುದು. ಚಿನ್ನ ಗಟ್ಟಿಯಾಗಿದ್ದರೂ ಸಹ ಕರಗುತ್ತದೆ ಮತ್ತು ನಮಗೆ ಇಷ್ಟವಾದ ಆಕಾರ ಅದಕ್ಕೆ ಕೊಡಬಹುದು. ಮದುವೆಯ ನಂತರ ಚಿನ್ನದಂತೆಯೇ ನಿಮ್ಮನ್ನು ನೀವು ಗಂಡನ ಮನೆಯವರು ಅಥವಾ ಗಂಡನಿಗೆ ಅನುರೂಪವಾಗಿ ಎರಕ ಹೊಯ್ದುಕೊಂಡರೆ ಸಂಬಂಧ ಯಾವಾಗಲೂ ಆನಂದಮಯವಾಗಿರುತ್ತದೆ. ಅದಕ್ಕೆ ತುಕ್ಕು ಹಿಡಿಯುವುದೇ ಇಲ್ಲ. ನಿಮ್ಮನ್ನು ಎರಕ ಹೊಯ್ದುಕೊಳ್ಳುವ ಅರ್ಥವೇನೆಂದರೆ ನಿಮ್ಮ ಖುಷಿ ಅಥವಾ ಇಚ್ಛೆಗಳನ್ನು ತ್ಯಾಗ ಮಾಡುವುದಲ್ಲ ಅಥವಾ ನಿಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದಲ್ಲ. ಅದರ ಅರ್ಥ ಸಂಗಾತಿಯ ಸಂತಸಗಳು ಮತ್ತು ಇಚ್ಛೆಗಳನ್ನು ಒಪ್ಪಿಕೊಳ್ಳುವುದಾಗಿದೆ. ನೀವು ಒಂದು ಹೆಜ್ಜೆ ಮುಂದೆ ಇಟ್ಟರೆ ಅವರೂ ಹಿಂದುಳಿಯುವುದಿಲ್ಲ. ಮದುವೆಯ ನಂತರ ನೀವು ಬರೀ ಹೆಂಡತಿ ಮಾತ್ರವಲ್ಲ, ಬಹಳಷ್ಟು ಸಂಬಂಧಗಳಲ್ಲೂ ನಿಮ್ಮನ್ನು ಎರಕ ಹೊಯ್ದುಕೊಳ್ಳಬೇಕು. ನಿಮ್ಮ ಸಂಗಾತಿಯ ಮಾತನ್ನು ಕೇಳುವುದೆಂದರೆ ಅವರಿಗೆ ಬಗ್ಗಿದಂತೆ ಎಂದುಕೊಳ್ಳದೆ ಅವರ ಮಾತನ್ನು ಕೇಳಿ. ನಂತರ ಅವರು ನಿಮ್ಮನ್ನು ಹೇಗೆ ಪ್ರೀತಿಸುವರೆಂದು ನೋಡಿ.
ಉಡುಗೊರೆ ನೀಡಿ
ಚಿನ್ನವನ್ನು ಉಡುಗೊರೆಯಾಗಿ ಪಡೆಯಲು ಎಲ್ಲರೂ ಇಚ್ಛಿಸುತ್ತಾರೆ. ಅದರ ಮುಂದೆ ಬೇರೆ ಪದಾರ್ಥಗಳು ಸಪ್ಪಗೆ ಕಾಣುತ್ತವೆ. ಇಂದು ಚಿನ್ನದ ದರ ನಿರಂತರವಾಗಿ ಏರುತ್ತಿರುವುದನ್ನು ಕಾಣಬಹುದು. ಆದರೂ ವಿವಿಧ ಸಂದರ್ಭಗಳಲ್ಲಿ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದಕ್ಕೆ ಕಾರಣವೇನೆಂದರೆ ಚಿನ್ನ ಶೃಂಗಾರ ಮತ್ತು ಆಡಂಬರದ ಪ್ರತೀಕವಾಗಿದೆ. ವ್ಯಕ್ತಿಯ ಯೋಗ್ಯತೆ, ಅವನ ರೀತಿ ನೀತಿಯನ್ನು ಸಮಾಜದಲ್ಲಿ ಹೊಳೆಯುವಂತೆ ಮಾಡುತ್ತದೆ. ನೀವು ಎಷ್ಟು ಚಿನ್ನವನ್ನು ಧರಿಸಿ ಹೋಗುತ್ತೀರೋ ಅದರಿಂದ ನಿಮ್ಮ ಯೋಗ್ಯತೆಯ ಬಗ್ಗೆ ಅಂದಾಜಿಸಲಾಗುತ್ತದೆ.
ಚಿನ್ನದಂತೆಯೇ ನಿಮ್ಮ ಸಂಬಂಧಗಳಲ್ಲೂ ಒಂದು ರೀತಿಯ ವೈಭವ ಮತ್ತು ಸಿಂಗಾರಗಳನ್ನು ಸದೃಢವಾಗಿಡಿ. ನಿಮ್ಮ ವೈವಾಹಿಕ ಜೀವನದ ಸಣ್ಣಪುಟ್ಟ ವಿಷಯಗಳಲ್ಲೂ ಆನಂದ ಪಡೆಯಿರಿ. ನಿಮ್ಮ ಸಂಗಾತಿಗೆ ಉಡುಗೊರೆ ಕೊಡಲು ಮರೆಯಬೇಡಿ. ನಿಮ್ಮ ಮನೆಯ ಅಲಂಕಾರ ಹಾಗೂ ನಿಮ್ಮ ಜೀವನಶೈಲಿಯ ಬಗ್ಗೆ ಗಮನಕೊಡಿ ಮತ್ತು ಸಂಪೂರ್ಣವಾಗಿ ಪರಿಶ್ರಮದಲ್ಲಿ ತೊಡಗಿಕೊಳ್ಳಿ. ನಿಮ್ಮ ಜೀವನದಲ್ಲೂ ಶೃಂಗಾರ, ವೈಭವ ತಾಂಡವವಾಡುತ್ತದೆ.
ಪ್ರಶಂಸಿಸಿ
ಚಿನ್ನದ ಒಡವೆಗಳಾಗಲೀ, ಕೆತ್ತನೆಗಳಾಗಲೀ ಅಥವಾ ಅದರಿಂದ ಬಟ್ಟೆಗಳ ಮೇಲೆ ಮಾಡಿದ ಕಸೂತಿಗಳಾಗಲೀ ನೋಡಿದಾಗ ಹೊಗಳದೇ ಇರಲಾರಿರಿ. ಅದೇ ರೀತಿ ನಿಮ್ಮ ಸಂಗಾತಿಯನ್ನು ಹೊಗಳುವಲ್ಲಿ ಚೌಕಾಶಿ ಮಾಡಬೇಡಿ. ಆಗ ನೀವು ಅವರನ್ನು ಪ್ರೀತಿಸುತ್ತೀರಿ, ಇಷ್ಟಪಡುತ್ತೀರಿ ಎಂದು ಅವರಿಗೆ ಅರಿವಾಗುತ್ತದೆ. ಪ್ರಶಂಸೆ ಮಾಡಲು ದೊಡ್ಡ ದೊಡ್ಡ ಮಾತುಗಳಿಗೆ ಕಾಯಬೇಡಿ. ಅವರ ಸಣ್ಣ ಪುಟ್ಟ ಮಾತುಗಳಿಗೂ ಕೂಡಲೇ ಹೊಗಳಿ. ಇದರಿಂದ ಅವರ ಮುಖದಲ್ಲಿ ಸಂತಸ ಕಂಡುಬರುತ್ತದೆ. ಒಂದುವೇಳೆ ಪತಿ ತನ್ನ ಪತ್ನಿಯ ತೂಗಾಡುವ ಜಡೆಯನ್ನು ಹೊಗಳಿದರೆ ಅವಳು ಖುಷಿಯಾಗಿ ತನ್ನ ಸಂಪೂರ್ಣ ಪ್ರೀತಿ ವ್ಯಕ್ತಪಡಿಸುತ್ತಾಳೆ.
ಸುರಕ್ಷತೆಯ ಅನುಭವ
ಚಿನ್ನ ದುಬಾರಿಯಾಗಿದ್ದರೂ ಜನ ಅದನ್ನು ಖರೀದಿಸಲು ಕಾರಣವೇನೆಂದರೆ ಸಂಕಷ್ಟದ ಸಮಯದಲ್ಲಿ ಅದು ಕೆಲಸಕ್ಕೆ ಬರುತ್ತದೆ. ಚಿನ್ನ ಸೌಂದರ್ಯದ ಪ್ರತೀಕವಾಗಿರುವಂತೆ ಮಾನಸಿಕ ಸಂತೋಷವನ್ನೂ ನೀಡುತ್ತದೆ. ಆಪತ್ಕಾಲದಲ್ಲಿ ಅದನ್ನು ಮಾರಿ ಜೀವನ ನಿರ್ವಹಿಸಬಹುದು. ಚಿನ್ನ ಸುರಕ್ಷತೆಯ ಅನುಭವ ನೀಡುತ್ತದೆ. ಅದು ನಮ್ಮ ಬಳಿ ಇದ್ದರೆ ನಾವು ನಿಶ್ಚಿಂತರಾಗಿರಬಹುದು. ಚಿನ್ನದಂತೆಯೇ ಬಾಳಿಕೆ ಬರುವ, ಮಾನಸಿಕ ಸಂತುಷ್ಟಿ ಕೊಡುವ, ನೆಮ್ಮದಿಯ ಅನುಭವವನ್ನು ವೈವಾಹಿಕ ಜೀವನದಲ್ಲೂ ಪಡೆಯಬಹುದು. ದಂಪತಿಗಳಿಗೆ ಬರೀ ಆರ್ಥಿಕ ವಿಷಯಗಳಷ್ಟೇ ಅಲ್ಲ ಎಲ್ಲ ಕಷ್ಟಗಳ ಸಂದರ್ಭಗಳಲ್ಲೂ, ಸಂಗಾತಿಯ ಜೊತೆಗೆ ಇರುತ್ತೇನೆ. ಅವರನ್ನು ನಡುನೀರಿನಲ್ಲಿ ಕೈಬಿಡುವುದಿಲ್ಲ ಎಂದು ಆಶ್ವಾಸನೆ ನೀಡಬೇಕು. ಸಂಗಾತಿಗೆ ಸುರಕ್ಷತೆಯ ಅನುಭವ ಉಂಟು ಮಾಡಬೇಕು. ಅವರ ಸುಖದುಃಖಗಳಲ್ಲಿ ಪಾಲ್ಗೊಂಡು, ಅವರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವರಿಗೆ ಭರವಸೆ ನೀಡಬಹುದು. ಜೀವನದಲ್ಲಿ ಒಂದುವೇಳೆ ಮಾನಸಿಕ ಸಂತೃಪ್ತಿ ಇದ್ದು ಸದೃಢತೆಯ ಭಾವನೆ ಇದ್ದರೆ ಅವರು ಬಹಳ ಸುಗಮ ಹಾಗೂ ಮಾಧುರ್ಯದಿಂದ ಎಲ್ಲ ಹಿಂಜರಿಕೆಗಳ ನಡುವೆಯೂ ಮುಂದೆ ಸಾಗಬಹುದು.
– ಕೆ. ವಸುಂಧರಾ