ಮಾತೃತ್ವ ಹಲವು ತಪ್ಪು ಕಲ್ಪನೆಗಳನ್ನು ಥಳಕು ಹಾಕಿಕೊಂಡಿದೆ. ತಾಯಿಯಾದ ಬಳಿಕ ಆಹಾರ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂಬುದು ಇದರಲ್ಲಿ ಪ್ರಮುಖವಾದುದು. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಶೃತಿಗೆ ಹೆರಿಗೆಯ ಬಳಿಕ ತನ್ನ ತೂಕ ಹೆಚ್ಚಬಾರದು ಎಂಬ ಅಪೇಕ್ಷೆ ಇತ್ತು. ವೈದ್ಯರ ಸಲಹೆಯ ಮೇರೆಗೆ ಆಕೆ ಹೆರಿಗೆಯಾದ 8 ವಾರಗಳ ಬಳಿಕ ದಿನ 2 ಕಿಮೀನಷ್ಟು ನಡೆಯತೊಡಗಿದಳು. ಕೆಲವು ಪ್ರಕಾರದ ವ್ಯಾಯಾಮಗಳನ್ನು ಕೂಡ ಮಾಡತೊಡಗಿದಳು.

ಅಜ್ಜಿ ಕಾಲದ ಡಯೆಟ್‌ ಬದಲು ವೈದ್ಯರ ಸಲಹೆಯ ಮೇರೆಗೆ ಆರೋಗ್ಯಕರ ಆಹಾರ ಸೇವನೆ ಮಾಡತೊಡಗಿದಳು. ಅದರಲ್ಲಿ ಪೋಷಕಾಂಶದ ಪ್ರಮಾಣ ಜಾಸ್ತಿ ಹಾಗೂ ಕೊಬ್ಬಿನಂಶ ಕಡಿಮೆ ಇತ್ತು. ಹೆರಿಗೆ ಕೋಣೆಗೆ ಹೋಗುವ ತನಕ ಆಕೆ ಆಸ್ಪತ್ರೆಯ ಕೊಠಡಿಯಲ್ಲಿ ಸುತ್ತಾಡುತ್ತಿದ್ದಳು.

ಶೃತಿಯ ಪ್ರಯತ್ನಕ್ಕೆ ಫಲ ಸಿಕ್ಕಿತು. ಆಕೆಗೆ ಸಹಜ ಹೆರಿಗೆಯಾಯಿತು. ಆ ಸಂದರ್ಭದಲ್ಲಿ ಆಕೆಯ ದೇಹ ತೂಕ 78 ಕಿಲೋ ಗ್ರಾಂ ಆಗಿತ್ತು. ಹೆರಿಗೆಯ ಬಳಿಕ ಆಕೆ ಪುನಃ  ವೈದ್ಯರ ಸಲಹೆಯಂತೆ ಆರೋಗ್ಯಕರ ಆಹಾರ ಸೇವಿಸತೊಡಗಿದಳು. ಅದರಿಂದಾಗಿ ಆಕೆ ತೂಕ 78 ರಿಂದ 56ರ ತನಕ ಬಂತು.ಈ ಬಗ್ಗೆ ಶೃತಿ ಹೇಳುತ್ತಾರೆ, “ಹೆರಿಗೆಯ ಸಮಯದಲ್ಲಿ ತೂಕ ಹೆಚ್ಚಾಗುತ್ತದೆ. ಆದರೆ ಅದನ್ನು ಮೊದಲಿನಿಂದಲೇ ನಿರ್ವಹಿಸಿಕೊಳ್ಳುತ್ತಾ ಹೋದರೆ, ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ. ಮೆಟ್ರೊ ಸಿಟಿಗಳಲ್ಲಿ ಮಹಿಳೆಯರಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಇಲ್ಲಿ ಮಹಿಳೆಯರಿಗೆ ಹೆಚ್ಚು ಎಕ್ಸ್ ಪೋಶರ್‌ ದೊರೆಯುತ್ತಿದೆ. ಇಂತಹದರಲ್ಲಿ ಅವಳು ಅನ್‌ಫಿಟ್‌ ಆಗಿರಲು ಇಷ್ಟಪಡುವುದಿಲ್ಲ. ಆದಷ್ಟು ಬೇಗ ಫಿಟ್‌ ಆಗಿ ಕೆಲಸಕ್ಕೆ ಮರಳಲು ಇಚ್ಛಿಸುತ್ತಾಳೆ. ಈಗ ಅವರಲ್ಲಿ ಗರ್ಭಾವಸ್ಥೆಯ ಭಯ ಕಡಿಮೆಯಾಗುತ್ತಿದೆ. ಅವರು ಮೊದಲಿನಿಂದಲೇ ತಮ್ಮನ್ನು ಚೆನ್ನಾಗಿ ಮ್ಯಾನೇಜ್‌ಮಾಡಿಕೊಳ್ಳುತ್ತಿದ್ದಾರೆ.”

ಮೊದಲು ಹಾಗೂ ನಂತರದ ಡಯೆಟ್

ಸ್ತ್ರೀ ರೋಗ ತಜ್ಞೆ ಡಾ. ರೇಣುಕಾ ಹೀಗೆ ಹೇಳುತ್ತಾರೆ, “ಮಹಿಳೆಯೊಬ್ಬಳಲ್ಲಿ ಗರ್ಭಾವಸ್ಥೆ 5ನೇ ವಾರದಿಂದ ಶುರುವಾಗುತ್ತದೆ. ಕೆಲವು ಮಹಿಳೆಯರಲ್ಲಿ ಮೊದಲ ತಿಂಗಳಲ್ಲಿಯೇ ಅದು ಗೋಚರಿಸುತ್ತದೆ. ಎರಡನೇ ತಿಂಗಳಲ್ಲಿ ಕೆಲವು ಮಹಿಳೆಯರಲ್ಲಿ ಮುಂಜಾನೆ ಹೊತ್ತು ನಿಶ್ಶಕ್ತಿ ಎನಿಸುತ್ತದೆ. ಆಗ ಏನೂ ತಿನ್ನಬೇಕೆಂದು ಅನಿಸುವುದಿಲ್ಲ. ಆದರೆ ಅದೇ ಅವಧಿಯಲ್ಲಿ ತಿನ್ನುವುದು ಅವಶ್ಯಕ. ಗರ್ಭಿಣಿಗೆ ಪ್ರತಿ ದಿನ 2500 ದಿಂದ 3000 ಕ್ಯಾಲೋರಿಯ ಅವಶ್ಯಕತೆ ಉಂಟಾಗುತ್ತದೆ. ಅದರಲ್ಲಿ ಶೇ.10 ಪ್ರೋಟೀನ್‌ನಿಂದ, ಶೇ.35 ಕೊಬ್ಬು ಅಂದರೆ ಎಣ್ಣೆ, ತುಪ್ಪ ಹಾಗೂ ಬೆಣ್ಣೆಯಿಂದ ಹಾಗೂ ಶೇ.55 ಕಾರ್ಬೋಹೈಡ್ರೇಟ್‌ನಿಂದ ದೊರೆಯಬೇಕು.”

ಗರ್ಭಾವಸ್ಥೆಯ 2ನೇ ಹಾಗೂ 3ನೇ ತಿಂಗಳಲ್ಲಿ ಕೇವಲ 300 ಕ್ಯಾಲೋರಿ ಹಾಗೂ 15 ರಿಂದ 20 ಗ್ರಾಂ ಪ್ರೋಟೀನ್‌ನ ಅವಶ್ಯಕತೆ ಉಂಟಾಗುತ್ತದೆ. ಕ್ಯಾಲೋರಿಯ ಅವಶ್ಯಕತೆ ಗರ್ಭಿಣಿಯ ದೇಹ ತೂಕ ಹಾಗೂ ದೈಹಿಕ ಶ್ರಮಕ್ಕನುಗುಣವಾಗಿ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಊಟದಲ್ಲಿ ತರಕಾರಿ, ಹಣ್ಣು, ಕಾಳುಗಳು ಮತ್ತು ಪ್ರೋಟೀನ್‌ ಇರಬೇಕು.

ಪ್ರತಿದಿನ 4 ಚಮಚಕ್ಕಿಂತ ಹೆಚ್ಚು ಎಣ್ಣೆ ಬಳಸಬೇಡಿ. ಮೂರೂ ಹೊತ್ತಿನ ಆಹಾರದಲ್ಲಿ ಯಾವುದಾದರೊಂದು ಹಾಲಿನ ಉತ್ಪನ್ನ ಇರುವಂತೆ ನೋಡಿಕೊಳ್ಳಿ. ದೇಹದಲ್ಲಿ ತೇವಾಂಶ ಕಾಪಾಡಿಕೊಂಡು ಹೋಗಲು ದಿನಕ್ಕೆ 8-10 ಗ್ಲಾಸ್‌ ನೀರು ಸೇವನೆ ಅತ್ಯವಶ್ಯ. ಗರ್ಭಾವಸ್ಥೆಯಲ್ಲಿ 3-4 ಗಂಟೆಗಳಿಗೊಮ್ಮೆ ಸಮತೋಲಿತ ಆಹಾರ ಸೇವಿಸಿ. ನಡುನಡುವೆ ಲಘು ಆಹಾರ ಸೇವಿಸಿ. ಈ ಅವಧಿಯಲ್ಲಿ ಯಾವುದೇ ಉಪವಾಸದ ವ್ರತ ಮಾಡಬೇಡಿ.

ಹೆಲ್ದಿ ಡಯೆಟ್ಅತ್ಯವಶ್ಯ

ಗರ್ಭಾವಸ್ಥೆಯಲ್ಲಿ ದಿನದ ಆರಂಭವನ್ನು ಪೌಷ್ಟಿಕ ಆಹಾರ ಸೇವನೆ ಮೂಲಕ ಮಾಡಿ. ಆಹಾರದಲ್ಲಿ ಪನೀರ್‌, ಚಪಾತಿ, ಬಿಸ್ಕತ್ತು, ಉಪ್ಪಿನ ಪದಾರ್ಥಗಳ ಬದಲು ಬೆಲ್ಲ ಹಾಗೂ ಕಡಲೆಕಾಳನ್ನು ಸೇವಿಸಿ. ಮುಂಜಾನೆ ಉಪಾಹಾರ ಹಾಗೂ ಮಧ್ಯಾಹ್ನ ಉಪಾಹಾರದ ನಡುವೆ ಹಸಿವಾದರೆ ಈ ಪೌಷ್ಟಿಕ ಆಹಾರ ನೈಸರ್ಗಿಕ ಶರ್ಕರ, ಪ್ರೋಟೀನ್‌ ಮತ್ತು ಕಬ್ಬಿಣಾಂಶವನ್ನು ಒದಗಿಸುತ್ತದೆ. ಮಧ್ಯಾಹ್ನದಲ್ಲಿ ಮಿಶ್ರ ತರಕಾರಿಗಳ ರಾಯ್ತಾ ಸೇವಿಸಿ. ಇದರಲ್ಲಿ ಪ್ರೋಟೀನ್‌, ಕ್ಯಾಲ್ಶಿಯಂ, ಮಿಟಮಿನ್‌ ಹಾಗೂ ಕಬ್ಬಿಣಾಂಶ ಇರುತ್ತದೆ. ಇದು ತಾಯಿ ಹಾಗೂ ಮಗು ಇಬ್ಬರಿಗೂ ಒಳ್ಳೆಯದು. ಹಣ್ಣು ಹಾಗೂ ಮೊಳಕೆಕಾಳಿನ ಸಲಾಡ್‌ ಮತ್ತು ಕೆಲವು ಬಾದಾಮಿ ಬೀಜಗಳು ಉಪಯುಕ್ತ ಉಪಾಹಾರವಾಗಿದೆ. ಇದರಲ್ಲಿ ಪ್ರೋಟೀನ್‌, ವಿಟಮಿನ್‌, ಮಿನರಲ್ ಹಾಗೂ ಸ್ಯಾಚ್ಯುರೇಟೆಡ್‌ ಫ್ಯಾಟ್‌ ಇರುತ್ತದೆ. ಸಮತೋಲಿತ ಉಪಾಹಾರದ ರೂಪದಲ್ಲಿ ಸಕ್ಕರೆ ಬೆರೆಸದ ಹಣ್ಣಿನ ಚೂರು ತುಂಬಿದ ಲಸ್ಸಿ ಸೇವನೆ ಒಳ್ಳೆಯದು. ಇದೂ ಸಹ ಗರ್ಭಸ್ಥ ಭ್ರೂಣಕ್ಕೆ ಪ್ರೋಟೀನ್‌, ಕ್ಯಾಲ್ಶಿಯಂ, ವಿಟಮಿನ್‌, ಮಿನರಲ್ಸ್ ನ ಪೂರೈಕೆಗೆ ಮೂಲವಾಗುತ್ತದೆ.

ಗರ್ಭವತಿ ಬಸುರಿನ ಮೊದಲ 3 ತಿಂಗಳಲ್ಲಿ ಸಮರ್ಪಕ ಪೌಷ್ಟಿಕ ಆಹಾರ ಸೇವಿಸಿದರೆ, ಗರ್ಭಾವಸ್ಥೆಯ ಜಟಿಲತೆಗಳೆಲ್ಲವೂ ಕಡಿಮೆ ಆಗುತ್ತವೆ. ಆಗ ಗರ್ಭಪಾತ ಆಗುವ ಸಂಭವನೀಯತೆಯೂ ಕಡಿಮೆ. ಅಸಲಿಗೆ ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ತಾಯಿ ಮಗು ಇಬ್ಬರಿಗೂ ಇದು ಬಲು ಸೂಕ್ಷ್ಮ ಕಾಲ. ಈ ಕಾರಣ ಗರ್ಭವತಿ ತನ್ನ ಆಹಾರದಲ್ಲಿ ಅಗತ್ಯವಾಗಿ ಪ್ರೋಟೀನ್‌, ವಿಟಮಿನ್ಸ್, ಮಿನರಲ್ಸ್ ಬೆರೆಸಿಕೊಳ್ಳಬೇಕು. ಮುಖ್ಯವಾಗಿ ಕಬ್ಬಿಣಾಂಶ ಮತ್ತು ಫಾಲಿಕ್‌ ಆ್ಯಸಿಡ್ಸ್ ಯುಕ್ತ ಆಹಾರವನ್ನು ಕಡೆಗಣಿಸದೆ ಸೇವಿಸಬೇಕು.

ಹಣ್ಣು ತರಕಾರಿ ಸೇವನೆ

ಗರ್ಭಿಣಿ ಮುಖ್ಯವಾಗಿ ತಾಜಾ ಹಸಿ ತರಕಾರಿ, ಹಣ್ಣು ಹಂಪಲು ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ಎಲ್ಲಾ ಬಗೆಯ ಹಸಿರು ಸೊಪ್ಪುಗಳೂ ಅಗತ್ಯ ಬೇಕು. ಮುಖ್ಯ ಪಾಲಕ್‌, ನುಗ್ಗೆಸೊಪ್ಪಿನಲ್ಲಿ ಐರನ್‌ ಅಂಶ ಹೆಚ್ಚಿದ್ದು ರಕ್ತದಲ್ಲಿ ಹಿಮೋಗ್ಲೋಬಿನ್‌ ವರ್ಧಿಸಲು ಪೂರಕ. ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜೊತೆಗೆ ಇದು ಹೃದ್ರೋಗಗಳನ್ನು ನಿಯಂತ್ರಿಸುವಲ್ಲಿಯೂ ಪೂರಕ. ಕಂಗಳಿಗೆ ಕಾಂತಿ ಒದಗಿಸಿ, ದೃಷ್ಟಿ ಚುರುಕಾಗಿಸುತ್ತದೆ. ಚರ್ಮದ ಡ್ರೈನೆಸ್‌ ಹೋಗಲಾಡಿಸುತ್ತದೆ.

ಪ್ರೆಗ್ನೆನ್ಸಿಯಲ್ಲಿ ಬಗೆಬಗೆಯ ಬೇಳೆ, ಕಾಳುಗಳನ್ನೂ ಸೇವಿಸಬೇಕು. ಇವುಗಳಲ್ಲಿನ ಫೈಬರ್‌, ವಿಟಮಿನ್ಸ್, ಐರನ್‌, ಮಿನರಲ್ಸ್ ಇತ್ಯಾದಿ ಅಂಶಗಳು ಗರ್ಭವತಿ ಮತ್ತು ಭ್ರೂಣಕ್ಕೆ ಹೆಚ್ಚು ಪೂರಕ. ಹುಳಿ ಹಣ್ಣುಗಳಲ್ಲಿ ಫಾಲಿಕ್‌ ಆ್ಯಸಿಡ್‌ ಧಾರಾಳ ಅಡಗಿರುತ್ತದೆ. ಇದು ಗರ್ಭಾವಸ್ಥೆಯ ಜಟಿಲತೆಗಳನ್ನು ತಗ್ಗಿಸುತ್ತದೆ.

ಕಿತ್ತಳೆ, ಮೂಸಂಬಿ, ನೆಲ್ಲಿ, ಕಿವೀ ಫ್ರೂಟ್‌ ಮುಂತಾದುವನ್ನು ಹೆಚ್ಚಾಗಿ ಸೇವಿಸಬೇಕು. ಇದರಲ್ಲಿ ವಿಟಮಿನ್ಸ್ ಸಿ , ಕೊಲೋಜೆನ್‌, ಫೈಬರ್‌ ತುಂಬಿರುತ್ತವೆ. ಹುಳಿ ಹಣ್ಣುಗಳ ಸೇವನೆಯಿಂದ ಅಜೀರ್ಣದ ಬಾಧೆಯಿಂದ ಹೊರಬರಬಹುದು. ಪ್ರೆಗ್ನೆನ್ಸಿಯಲ್ಲಿ ಆಕೆಗೆ 60 ಗ್ರಾಂ ಎಕ್ಸ್ ಟ್ರಾ ಪ್ರೋಟೀನ್‌ ಬೇಕಾಗುತ್ತದೆ. ಇದರ ಪೂರೈಕೆಗಾಗಿ ನಿಯಮಿತವಾಗಿ ಒಂದು ಹಿಡಿ ಡ್ರೈ ಫ್ರೂಟ್ಸ್ ಸೇವಿಸಬೇಕು. ಡೇರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ, ಪ್ರೋಟೀನ್‌ ಧಾರಾಳ ಇರುತ್ತದೆ. ಇದು ಮೂಳೆ, ಮಾಂಸಖಂಡಗಳ ವಿಕಾಸಕ್ಕೆ ಸಹಾಯಕ.

ಈ ಸಂದರ್ಭದಲ್ಲಿ ಕಿವೀ ಫ್ರೂಟ್‌ನ್ನು ನಿರ್ಲಕ್ಷಿಸಬಾರದು. ಈ ಸಮಯದಲ್ಲಿ ನ್ಯೂರಲ್ ಟ್ಯೂಬ್‌ ವಿಕಾಸಗೊಳ್ಳಲು ತೊಡಗುವುದರಿಂದ ನಂತರ ಮಗುವಿನ ಬುದ್ಧಿ, ಬೆನ್ನೆಲುಬು, ನರಮಂಡಲದ ವಿಕಾಸಕ್ಕೆ ಸಹ ಪೂರಕ.

ಬಸುರಾದ ಹೊಸತರಲ್ಲಿ ಫಾಲಿಕ್‌ ಆ್ಯಸಿಡ್‌ ಸೇವನೆ ಬಲು ಲಾಭಕರ. ಇದು ನ್ಯೂರಲ್ ಟ್ಯೂಬನ್ನು ಸಾಮಾನ್ಯ ರೂಪದಲ್ಲಿ ವಿಕಾಸಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗರ್ಭಿಣಿ ಇದನ್ನು ಸೇವಿಸದಿದ್ದರೆ ನ್ಯೂರಲ್ ಟ್ಯೂಬ್‌ ಸರಿಯಾಗಿ ವಿಕಾಸಗೊಳ್ಳದೆ, ಸಮಯ ಪೂರ್ವ ಪ್ರಸಕ್ಕೆ ದಾರಿಯಾಗುತ್ತದೆ.

ಇದರ ಕೊರತೆ ಬೇಡ

ಐರನ್‌ : ಗರ್ಭಿಣಿ ಕಬ್ಬಿಣಾಂಶದ ಆಹಾರ ಸರಿಯಾಗಿ ಸೇವಿಸದಿದ್ದರೆ ಅವಳಿಗೆ ಬೇಗ ಸುಸ್ತು ಸಂಕಟ ಕಾಡುತ್ತದೆ. ಅನೀಮಿಯಾ ಸಹ ಆಗಬಹುದು. ಹೀಗಾಗಿ ಕಬ್ಬಿಣಾಂಶ ಪ್ರಧಾನವಾಗಿರುವ ಸೊಪ್ಪು, ತರಕಾರಿ ಮುಂತಾದವನ್ನು ಸೇವಿಸಿ.

ಕ್ಯಾಲ್ಶಿಯಂ : ಇದು ದೇಹದಲ್ಲಿನ ಮೂಳೆಗಳನ್ನು ಸಶಕ್ತಗೊಳಿಸುತ್ತದೆ. ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆದರೆ, ಮೂಳೆ ಸಂಬಂಧಿತ ರೋಗ ಶುರುವಾಗುತ್ತದೆ. ಗರ್ಭಾವಸ್ಥೆಯ 2ನೇ ತಿಂಗಳಿನಿಂದಲೇ ಮಗುವಿಗೆ ಮೂಳೆ ಬೆಳೆಯಲು ಆರಂಭವಾಗುತ್ತದೆ. ಹೀಗಾಗಿ ಗರ್ಭಿಣಿಯ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆಗಲೇಬಾರದು. ಅದನ್ನು ಸಮತೋಲನದಲ್ಲಿ ಇರಿಸಿಕೊಳ್ಳಬೇಕಾದುದು ಅತ್ಯಗತ್ಯ. ಹೀಗಾಗಿ ಹಾಲು, ಹಾಲಿನ ಉತ್ಪನ್ನಗಳನ್ನು ಹೆಚ್ಚು ಸೇವಿಸಿ.

ಪ್ರೋಟೀನ್‌ : ಇದು ದೇಹಕ್ಕೆ ಅತ್ಯಗತ್ಯ ಶಕ್ತಿಯನ್ನು ಪೂರೈಸುತ್ತದೆ. ಆದ್ದರಿಂದ ಗರ್ಭಿಣಿ ತನ್ನ ಆಹಾರದಲ್ಲಿ ಹೆಚ್ಚಿನಂಶ ಪ್ರೋಟೀನ್ ಇರುವಂತೆ ಗಮನಿಸತಕ್ಕದ್ದು. ಪ್ರೋಟೀನ್‌ಯುಕ್ತ ಮೊಳಕೆಕಾಳು, ಸೋಯಾ, ಹಾಲು, ಹಣ್ಣು ಸೇವಿಸಬೇಕು. ಇದು ಗರ್ಭಸ್ಥ ಶಿಶುವಿನ ರಕ್ತ ಸಂಚಾರ ಸುಗಮಗೊಳ್ಳಲು ಅಧಿಕ ಪೂರಕ. ಇದರಿಂದ ಮಗುವಿನ ತೂಕದ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಮೇಲಿನ ಆಹಾರದಂಶಗಳ ಜೊತೆ ಕಡಿಮೆ ಫ್ಯಾಟ್‌ನ ಪನೀರ್‌, ಫಿಶ್‌ ಸೇವಿಸಬೇಕು.

ಇವು ಬೇಡ

ಗರ್ಭಾವಸ್ಥೆಯಲ್ಲಿ ಪ್ರೊಸೆಸ್ಡ್ ಮೀಟ್‌ ಖಂಡಿತಾ ಸೇವಿಸಬಾರದು. ಏಕೆಂದರೆ ಇದರಿಂದ ಗರ್ಭಸ್ಥ ಶಿಶುವಿಗೆ ಹಾನಿ ತಪ್ಪದು. ಇಂಥ ಮೀಟ್‌ನಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಮೊಟ್ಟೆ ಸೇವನೆ ಒಳ್ಳೆಯದು. ಹಸಿ ಮೊಟ್ಟೆ, ಅರೆ ಬೆಂದದ್ದು ಬೇಡ. ಅನಗತ್ಯ ಫಾಸ್ಟ್ ಫುಡ್‌, ಜಂಕ್‌ ಫುಡ್‌ ಬೇಡ.

– ಶೈಲಜಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ